ಬೆಂಗಳೂರು: ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಸಿಲಿಂಡರ್‌ಗಳ ದರ ಏರಿಕೆಯಿಂದಾಗಿ ಸುಸ್ತಾಗಿರುವ ಸಿಲಿಕಾನ್ ಸಿಟಿ ಬೆಂಗಳೂರು ಜನತೆಗೆ ಮತ್ತೆ ಮೂರು ಶಾಕ್ ಗಳು ಕಾದಿದ್ದು, ಶೀಘ್ರದಲ್ಲೇ ಮಹಾನಗರಿಯಲ್ಲಿ ಹಾಲು, ಆಟೋ ಮತ್ತು ಬಸ್ ದರ ಏರಿಕೆಯಾಗುವ ಸಾಧ್ಯತೆ ಇದೆ.
ಈಗಾಗಲೇ ಆಟೋ ಮತ್ತು ಬಿಎಂಟಿಸಿ ಬಸ್ ಟಿಕೆಟ್ ದರ ಏರಿಕೆ ಮಾಡುವ ಕುರಿತು ಚರ್ಚೆಗಳು ನಡೆಯುತ್ತಿದ್ದು, ಇದರ ನಡುವೆಯೇ ಹಾಲಿನ ದರ ಏರಿಕೆಗೂ ಕೆಎಂಎಫ್ ನಿರ್ಧರಿಸಿದೆ. ಈ ಹಿಂದೆ ರಾಜ್ಯ ಸರ್ಕಾರ ಟ್ಯಾಕ್ಸಿ ದರವನ್ನು ಪರಿಷ್ಕರಿಸಿತ್ತು. ಮೊದಲ 4 ಕಿ.ಮೀ. ಗೆ ಹವಾನಿಯಂತ್ರಿತವಲ್ಲದ ಕಾರುಗಳಗಳ ದರ 75 ರೂ. ಮತ್ತು ಹವಾನಿಯಂತ್ರಿತ ಕ್ಯಾಬ್‌ಗಳ ದರ 100 ರೂ. ಎಂದು ದರ ಪರಿಷ್ಕರಣೆ ಮಾಡಿತ್ತು. ಅಂತೆಯೇ ಎಸಿ ಕ್ಯಾಬ್‌ಗಳಿಗೆ ಪ್ರತೀ ಕಿಲೋಮೀಟರಿಗೆ 24 ರೂ. ಮತ್ತು ಎಸಿ ಅಲ್ಲದ ಟ್ಯಾಕ್ಸಿಗಳಿಗೆ 18 ರೂ. ದರ ನಿಗದಿ ಮಾಡಿತ್ತು. ಇದೀಗ ಅದೇ ರೀತಿಯಲ್ಲೇ ಆಟೋ ಮತ್ತು ಬಸ್ ಟಿಕೆಟ್ ದರ ಹೆಚ್ಚಳಕ್ಕೂ ಸರ್ಕಾರ ಮುಂದಾಗುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಬಲ್ಲ ಮೂಲಗಳ ಪ್ರಕಾರ ಎಸಿ ಮತ್ತು ಎಸಿ ರಹಿತ ಬಸ್‌ಗಳ ಟಿಕೆಟ್ ದರವನ್ನುಶೇ.18-20ರಷ್ಟು ಹೆಚ್ಚಿಸಲು ಸಾರಿಗೆ ನಿಗಮವು ಸರಕಾರಕ್ಕೆ ಪ್ರಸ್ತಾಪವನ್ನು ಸಲ್ಲಿಸಿವೆ. ‘ಡೀಸೆಲ್ ಬೆಲೆ ಏರಿಕೆಯಾಗಿರುವುದರಿಂದ ಮತ್ತು ಕೋವಿಡ್ ಕಾರಣದಿಂದಾಗಿ ಬಿಎಂಟಿಸಿಯು ಆದಾಯ ನಷ್ಟವನ್ನು ಅನುಭವಿಸುತ್ತಿದೆ. ಹೀಗಾಗಿ ಬಸ್ ದರ ಹೆಚ್ಚಳಕ್ಕೆ ಮುಂದಾಗಿದೆ. ಮಾರ್ಚ್ 08 ರಾಜ್ಯ ಬಜೆಟ್ ಘೋಷಣೆಯಾಗಲಿದ್ದು, ಬಜೆಟ್ ಘೋಷಣೆ ಬಳಿಕ ಸರ್ಕಾರ ಈ ದರ ಏರಿಕೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ
ಎಲ್‌ಪಿಜಿ ಬೆಲೆ ಏರಿಕೆಯಾಗಿರುವುದರಿಂದ ಚಾಲಕರ ಸಂಘಗಳು ಮೊದಲ 2 ಕಿ.ಮೀ.ಗೆ ಪ್ರಸ್ತುತ ಶುಲ್ಕವನ್ನು 25 ರೂ.ನಿಂದ 36 ರೂ.ಗೆ ಹೆಚ್ಚಿಸಲು ಬಯಸುತ್ತಿವೆ. ಈ ಕುರಿತು ಶೀಘ್ರದಲ್ಲೇ ಸಾರಿಗೆ ಇಲಾಖೆ ತೀರ್ಮಾನವನ್ನು ಪ್ರಕಟಿಸಲಿದೆ ಎಂದು ಅಟೋ ಡ್ರೈವರ್ ಗಳು ಮಾತನಾಡಿಕೊಳ್ಳುತ್ತಿದ್ದಾರೆ.
ಆಟೋ ಬಸ್ ಮಾತ್ರವಲ್ಲದೇ ಹಾಲಿನ ದರ ಕೂಡ ಏರಿಕೆಯಾಗಲಿದ್ದು, ಈ ಬಗ್ಗೆ ಕೆಎಂಎಫ್ ಕೂಡ ಮಾಹಿತಿ ನೀಡಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಹಾಲಿನ ದರ ಏರಿಕೆ ಅನಿವಾರ್ಯ ಎಂದು ಹೇಳಿರುವ ಕೆಎಂಎಫ್, ಶೀಘ್ರದಲ್ಲೇ ಈ ಕುರಿತು ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತೇವೆ. ಆ ಬಳಿಕ ದರ ಏರಿಕೆಯ ನಿಖರ ಪ್ರಮಾಣ ತಿಳಿಸುತ್ತೇವೆ ಎಂದು ಹೇಳಿದ್ದಾರೆ. ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) 14 ಹಾಲು ಒಕ್ಕೂಟಗಳನ್ನು ಹೊಂದಿದೆ ಮತ್ತು ಪ್ರತಿಯೊಂದೂ ರೈತರಿಗೆ ವಿಭಿನ್ನ ಖರೀದಿ ದರವನ್ನು ನೀಡುತ್ತದೆ. ಡೈರಿ ರೈತರಿಗೆ ಪ್ರಸ್ತುತ ಪ್ರತೀ ಲೀಟರ್ ಹಾಲಿಗೆ 31 ರೂ.ಯಿಂದ 34 ರೂ.ಗಳವರೆಗೂ ದರ ನೀಡಲಾಗುತ್ತಿದೆ. ಈ ದರವನ್ನು ಲೀಟರ್‌ಗೆ 40 ರೂ.ಗೆ ಏರಿಕೆ ಮಾಡಬೇಕು ಎಂದು ಅವರು ಒತ್ತಾಯಿಸುತ್ತಿದ್ದಾರೆ ಎನ್ನಲಾಗಿದೆ. ಅಂದರೆ ಪ್ರತಿ ಲೀಟರ್ ಗೆ ಎರಡ ರಿಂದ ಮೂರು ರೂ ಹೆಚ್ಚಳವಾಗಲಿದೆ.
ಇದನ್ನೂ ಓದಿ : ಗ್ಯಾಸ್ ಸಿಲಿಂಡರ್ ಮತ್ತೆ 25 ರೂ ಹೆಚ್ಚಳ
ಒಕ್ಕೂಟಗಳು ನಷ್ಟದಲ್ಲಿದೆ ಮತ್ತು ಕೋವಿಡ್‌ನಿಂದಾಗಿ ರೈತರು ಕೂಡ ಸಂಕಷ್ಟದಲ್ಲಿದ್ದಾರೆ. 2020 ರಲ್ಲಿ ನಾವು ಹಾಲಿನ ಬೆಲೆಯನ್ನು ಲೀಟರ್ ಹಾಲಿಗೆ 35 ರೂ.ನಿಂದ 37 ರೂ.ಗೆ ಮತ್ತು ಮೊಸರಿಗೆ 39 ರೂ.ಗೆ 41 ರೂ.ಗೆ ಹೆಚ್ಚಿಸಿದ್ದೇವೆ. ಸಂಘಗಳು ನಿಗದಿತ ಖರೀದಿ ಬೆಲೆಯನ್ನು ನೀಡಿದರೆ, ಸರ್ಕಾರವು ಹೆಚ್ಚುವರಿ ಪ್ರೋತ್ಸಾಹವನ್ನು ನೀಡುತ್ತದೆ. ಉದಾಹರಣೆಗೆ, ಬೆಂಗಳೂರು ನಗರ ಹಾಲು ಒಕ್ಕೂಟವು ಪ್ರತಿ ಲೀಟರ್‌ಗೆ 26 ರೂ., ಸರ್ಕಾರ 5 ರೂ. ನೀಡುತ್ತದೆ. ಸರ್ಕಾರಕ್ಕೆ ಪ್ರೋತ್ಸಾಹಧನ ನೀಡಲು ಪ್ರತೀ ತಿಂಗಳು 100 ಕೋಟಿ ರೂಗಳು ಬೇಕಾಗುತ್ತದೆ. ಹೀಗಾಗಿ ದರ ಏರಿಕೆ ಅನಿವಾರ್ಯವಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.