ಬುರ್ಕಾ, ಸ್ಕಾರ್ಫ್ ವಿವಾದದ ಹಿಂದಿರುವ ಹುನ್ನಾರ ಮತ್ತು ಪರಿಹಾರಗಳು!

ನವೀನ್   ಸೂರಿಂಜೆ

(ಶಾಲಾ ಕಾಲೇಜುಗಳಲ್ಲಿ ಸ್ಕಾರ್ಫ್‌ ಹಾಕಿಕೊಂಡು  ಬರಬಾರದೆಂದು ಕೆಲ ದಿನಗಳ ಹಿಂದೆ ಶಿಕ್ಷಣ ಸಚಿವರು ಹೇಳಿಕೆ ನೀಡಿದ್ದರು. ಸ್ಕಾರ್ಫ್ ಬಗ್ಗೆ ಮತ್ತೆ ಚರ್ಚೆ ಎದ್ದಿರುವ ಹಿನ್ನೆಲೆಯಲ್ಲಿ ಹಿರಿಯ ಪತ್ರಕರ್ತ ನವೀನ್ ಸೂರಿಂಜೆ ಅವರು ಮೂರ್ನಾಲ್ಕು ವರ್ಷಗಳ ಹಿಂದೆ ಬರೆದ ವಿಶೇಷ ಲೇಖನ ಇದಾಗಿದೆ.)

ಬುರ್ಕಾ, ಸ್ಕಾರ್ಫ್ ಚರ್ಚೆಯ ಪರ-ವಿರೋಧದ ಮಧ್ಯೆ ಕೆಲ ಸೂಕ್ಷ್ಮತೆಗಳನ್ನು ನಾವು ಮರೆಯಬಾರದು. ಬುರ್ಕಾವನ್ನು ಯಾರು ಯಾಕಾಗಿ ಯಾವಾಗ ವಿರೋಧಿಸುತ್ತಾರೆ ಎಂಬುದನ್ನು ಗಮನಿಸಿ ನಮ್ಮ ಪರ ವಿರೋಧ ನಿಲುವನ್ನು ಹೇಳಬೇಕಾಗುತ್ತದೆ.

ದೇಶದಲ್ಲಿ ಬುರ್ಕಾ ಪರ ವಿರೋಧ ಚರ್ಚೆ ಇದ್ದರೂ, ದೇಶದಲ್ಲೇ ಮೊದಲು ಬುರ್ಕಾ ಬ್ಯಾನ್ ಎಂಬ ವಿವಾದ ಎದ್ದಿದ್ದು 2009ರಲ್ಲಿ ಮಂಗಳೂರಿನಲ್ಲಿ. ಅದು 2009 ಆಗಸ್ಟ್ 17ನೇ ತಾರೀಕು. ಆಯಿಷಾ ಆಸ್ಮೀನ್ ಎಂಬ 19 ವರ್ಷದ ವಿದ್ಯಾರ್ಥಿನಿ ನಮ್ಮನ್ನು ಭೇಟಿಯಾದಳು. ನಾನು, ಸುದೀಪ್ತೋ ಮೊಂಡಲ್, ಸತ್ಯ, ಕೆ ಟಿ ವಿನೋಭ, ಶ್ರೀನಿಧಿ ಆಕೆಯ ಜೊತೆ ಮಾತನಾಡಿದ್ವಿ. ಆಕೆ ಬಂಟ್ವಾಳದ ವಿದ್ಯಾಗಿರಿಯಲ್ಲಿರುವ ಎಸ್ ವಿ ಎಸ್ ವಿದ್ಯಾವರ್ಧಕ ಸಂಘ ನಡೆಸುತ್ತಿರುವ ಶ್ರೀ ವೆಂಕಟ್ರಮಣ ಸ್ವಾಮಿ (ಎಸ್ವಿಎಸ್) ಕಾಲೇಜಿನ ಪ್ರಥಮ ವರ್ಷದ ಬಿ.ಕಾಂ. ವಿದ್ಯಾರ್ಥಿನಿ. ಯಾವುದೇ ರೀತಿಯ ಬುರ್ಕಾ ಮತ್ತು ಸ್ಕಾರ್ಫ್ ಹಾಕಿಕೊಂಡು ಕಾಲೇಜೊಳಗೆ ಕುಳಿತುಕೊಳ್ಳಕೂಡದು ಎಂದು ಪ್ರಾಂಶುಪಾಲರು ಆದೇಶ ನೀಡಿದ್ದರಂತೆ. ಈ ಕಾರಣದಿಂದ ಕಳೆದ 10 ದಿನಗಳಿಂದ ಆಕೆ ಕಾಲೇಜಿಗೆ ಹೋಗಿಲ್ಲ ಮತ್ತು ಪರೀಕ್ಷೆಗೂ ಹಾಜರಾಗಿಲ್ಲ.

“ನಾನು ಕಾಲೇಜು ಸೇರಿದಾಗ, ಸಂದರ್ಶನ ಎದುರಿಸಿದಾಗ ಇಂತಹ ಯಾವ ನಿಯಮವನ್ನೂ ಹೇಳಲಾಗಿಲ್ಲ. ಕಾಲೇಜಿಗೆ ಡ್ರೆಸ್ ಕೋಡ್ ಕೂಡಾ ಇಲ್ಲ. ಯೂನಿಫಾರಂ ಇಲ್ಲದ ಕಾಲೇಜಲ್ಲಿ ಬುರ್ಕಾವೂ ಒಂದು ಉಡುಪಲ್ಲವೇ? ನೀವು ಬುರ್ಕಾ ಹಾಕಿಕೊಂಡು ಬಂದರೆ ಹುಡುಗರು ನಾಳೆಯಿಂದ ಕೇಸರಿ ಶಾಲು ಹಾಕಿಕೊಂಡು ಬರುತ್ತಾರೆ. ಹಾಗಾಗಿ ಬುರ್ಕಾ ಹಾಕುವಂತಿಲ್ಲ” ಎಂದು ಕಾಲೇಜು ಪ್ರಾಂಶುಪಾಲರು ಹೇಳಿದ್ದರಂತೆ.

ಎಲ್ಲಾ ವಿಷಯ ತಿಳಿದುಕೊಂಡ ನಾವುಗಳು ಆಗಸ್ಟ್ 18ರಂದು ಬೆಳಿಗ್ಗೆ ಆಯಿಷಾಳನ್ನೂ ಜೊತೆ ಸೇರಿಸಿಕೊಂಡು ಎಸ್ ವಿ ಎಸ್ ಕಾಲೇಜಿಗೆ ಹೊರಟೆವು. ಆಕೆ ಈ ಹಿಂದೆ ತೊಕ್ಕೊಟ್ಟುವಿನ ಮಹಿಳಾ ಇಸ್ಲಾಮಿಕ್ ಪಿಯು ಕಾಲೇಜಿನಲ್ಲಿ ಓದುತ್ತಿದ್ದರು. ಅದು ಕೇವಲ ಮುಸ್ಲಿಂ ವಿದ್ಯಾರ್ಥಿನಿಯರ ಕಾಲೇಜ್ ಆಗಿತ್ತು. ಎಲ್ಲಾ ಸಮುದಾಯದ ವಿದ್ಯಾರ್ಥಿಗಳ ಜೊತೆ ಬೆರೆತು ಶಿಕ್ಷಣ ಪಡೆಯುವುದು ಆಕೆಯ ಬಹುದಿನಗಳ ಆಸೆಯಾಗಿತ್ತು. ಅದು ಈಡೇರಿತು ಅಂತ ಹಲವು ತಿಂಗಳ ಕಾಲ ಸಂಭ್ರಮಪಟ್ಟಿದ್ದಳಂತೆ. ಅಷ್ಟರಲ್ಲಿ ಆಕೆಯ ಸಂಭ್ರಮವನ್ನು ಬುರ್ಕಾ ಕಸಿದಿತ್ತು. ನಾವು ಪತ್ರಕರ್ತರು ಪ್ರಾಂಶುಪಾಲರನ್ನು ಮತ್ತು ಕಾಲೇಜು ಆಡಳಿತ ಮಂಡಳಿಯನ್ನು ವರದಿಗಾಗಿ ಪ್ರಶ್ನಿಸುವ ಮೂಲಕವೇ ಪರೋಕ್ಷವಾಗಿ ತರಗತಿಗೆ ತೆಗೆದುಕೊಳ್ಳುವಂತೆ ಒತ್ತಡ ಹೇರಿದರೂ ಪ್ರಯೋಜನವಾಗಲಿಲ್ಲ.

ಮರುದಿನ ಅಂದರೆ 2009 ಅಗಸ್ಟ್ 19ರಂದು ನಾವು ಪ್ರತಿನಿಧಿಸುವ ಪತ್ರಿಕೆ, ವಾಹಿನಿಯಲ್ಲಿ ಪ್ರಮುಖ ಸುದ್ದಿಯಾಗಿ ಪ್ರಸಾರವಾಯಿತು.  ಡೆಕ್ಕನ್ ಹೆರಾಲ್ಡ್ ಪತ್ರಿಕೆ “College bans Muslim headscarf” ಎಂದು ಹೆಡ್ಲೈನ್ ನೀಡಿ ಮೊದಲ ಪುಟದಲ್ಲಿ ಪ್ರಕಟಿಸಿತು. ಬಹುಶಃ ಇದು ದೇಶದ ಮೊದಲ ಬುರ್ಕಾ ನಿಷೇಧದ ಸುದ್ದಿಯಾಗಿತ್ತು. ಸಂಜೆಯಾಗುತ್ತಿದ್ದಂತೆ ಬೆಂಗಳೂರಿನಿಂದ ರಾಷ್ಟ್ರೀಯ ಮಾಧ್ಯಮಗಳ ವರದಿಗಾರರು ತಮ್ಮ ಓಬಿಗಳೊಂದಿಗೆ ಮಂಗಳೂರಿಗೆ ಬಂದಿದ್ದರು.

ಬುರ್ಕಾ ಪರ ವಿರೋಧ ಚರ್ಚೆಯಲ್ಲಿ ತೆಳ್ಳನೆಯ ಅತೀ ಸೂಕ್ಷ್ಮ ಗೆರೆ ಇದೆ. ಧಾರ್ಮಿಕ ಮೂಲಭೂತವಾದಿಗಳು ಬುರ್ಕಾ ಹಾಕಲೇಬೇಕು ಎಂದು ಪಥ್ವಾ ಹೊರಡಿಸಿದರೆ ನಾವು ಅಂತಹ ಪಥ್ವಾಕ್ಕೆ ಒಳಗಾದ ಮಹಿಳೆಯ ಪರ ನಿಲ್ಲಬೇಕು. ಸಾ ರಾ ಅಬೂಬಕ್ಕರ್ ಅಂತಹ ಪಥ್ವಾಗಳನ್ನು ದಿಟ್ಟವಾಗಿ ಎದುರಿಸಿ ಬದುಕಿದವರು. ಸಾ ರಾ ಅಬೂಬಕ್ಕರ್ ಅವರಿಗೆ ಲಂಕೇಶ್ ಸೇರಿದಂತೆ ಪ್ರಗತಿಪರರ ದೊಡ್ಡ ಗುಂಪು ಬೆಂಬಲಿಸಿದ್ದರಿಂದಲೇ ಅದು ಸಾಧ್ಯವಾಯಿತು. ವಿಪರ್ಯಾಸವೆಂದರೆ ಇಂತಹ ಪ್ರಗತಿಪರ ಸಾಹಿತಿ ಸಾ ರ ಅಬೂಬಕ್ಕರ್ ರವರನ್ನು ಹಿಂದೂ ಕೋಮುವಾದಿ ಪತ್ರಕರ್ತರು ಬಹಳ ವ್ಯವಸ್ಥಿತವಾಗಿ ಆಯಿಷಾ ಆಸ್ಮಿನ್ ಪ್ರಕರಣದಲ್ಲಿ ಬಳಸಿಕೊಂಡರು.

ಆಯಿಷಾ ಆಸ್ಮಿನ್ ಪ್ರಕರಣ ದೊಡ್ಡದಾಗುತ್ತಿದ್ದಂತೆ ಕೋಮುವಾದಿ ಪತ್ರಕರ್ತರು ತಂಡ ಕಟ್ಟಿಕೊಂಡು ಸಾ ರಾ ಅಬೂಬಕ್ಕರ್ ಮನೆಗೆ ಹೋದರು. ಕಾಲೇಜಲ್ಲಿ ಹುಡುಗಿಯರು ಬುರ್ಕಾ ಹಾಕುವ ಬಗ್ಗೆ ತಮ್ಮ ಅಭಿಪ್ರಾಯ ಏನು ಎಂದು ಕೇಳಿದರು. “ಬುರ್ಕಾ ಸಮಾನತೆಯ ವಿರೋಧಿ, ಯಾವತ್ತೂ ನಾನು ಅದನ್ನು ಬೆಂಬಲಿಸಲ್ಲ” ಎಂದರು. ಶಿಕ್ಷಣದ ಹಕ್ಕು, ಬದುಕುವ ಹಕ್ಕುಗಳ ಬಗ್ಗೆ ವಿಮರ್ಶೆಯನ್ನೇ ಮಾಡದೇ ಸಾ ರ ಅಬೂಬಕ್ಕರ್ ರಂತಹ ಮುಗ್ದ ಪ್ರಗತಿಪರ ಸಾಹಿತಿ ನೀಡಿದ ಹೇಳಿಕೆ ಕೋಮುವಾದಿ ಪತ್ರಕರ್ತರಿಗೆ ಭೂರಿಬೋಜನವಾಗಿತ್ತು.

ಇದೊಂದು ರಾಷ್ಟ್ರೀಯ ಸುದ್ದಿ ಆದ ಬಳಿಕವೂ, ಜಿಲ್ಲಾಧಿಕಾರಿಗಳು, ವಿವಿ ಉಪಕುಲಪತಿಗಳು ಆದೇಶ ನೀಡಿದ ಬಳಿಕವೂ ಎಸ್ ವಿ ಎಸ್ ಕಾಲೇಜು ಆಯಿಷಾ ಆಸ್ಮೀನ್ ಗೆ ಪ್ರವೇಶ ನೀಡಲೇ ಇಲ್ಲ. ಬೇರೆ ದಾರಿ ಕಾಣದೆ ಆಯಿಷಾ ಆಸ್ಮಿನ್ ಮುಸ್ಲಿಂ ಮಹಿಳಾ ಕಾಲೇಜು ಸೇರಿಕೊಂಡಳು.

ಆಯಿಷಾ ಆಸ್ಮಿನ್ ಬುರ್ಕಾ ಹಾಕಿಕೊಂಡು ಬಂದರೆ ನಾವು ಕೇಸರಿ ಶಾಲು ಹಾಕಿಕೊಂಡು ಬರುತ್ತೇವೆ ಎಂದು ಹೇಳಿದ ಎಬಿವಿಪಿ ವಿದ್ಯಾರ್ಥಿಗಳಲ್ಲಿ ಇದ್ದಿದ್ದು ದ್ವೇಷಭಾವನೆಯಷ್ಟೆ. ಶಬರಿಮಲೆ ಯಾತ್ರೆ ಹೋಗುವ ಒಂದು ತಿಂಗಳ ಕಾಲ ಕರಾವಳಿಯ ಬಹುತೇಕ ಕಾಲೇಜುಗಳಲ್ಲಿ ಯೂನಿಫಾರಂ ಇದ್ದರೂ ಉಲ್ಲಂಘಿಸಿ ಕಪ್ಪು ಧಾರ್ಮಿಕ ಬಟ್ಟೆಯನ್ನು ವಿದ್ಯಾರ್ಥಿಗಳು ಧರಿಸುತ್ತಾರೆ. ಅವರು ಕಪ್ಪು ಧಾರ್ಮಿಕ ಬಟ್ಟೆ ಧರಿಸಿದರೆ ನಾವು ಹಸಿರು ಶಾಲು ಹಾಕಿಕೊಂಡು ಬರುತ್ತೇವೆ ಎಂದು ಯಾವ ಮುಸ್ಲಿಂ ಸಂಘಟನೆಯು ಈವರೆಗೆ ಹೇಳಿದ್ದು ಕೇಳಿಲ್ಲ.

ಆಯಿಷಾ ಆಸ್ಮಿನ್ ಗೆ ಬುರ್ಕಾ ಹಾಕಿ ಕಾಲೇಜಿಗೆ ಪ್ರವೇಶ ನಿರಾಕರಿಸಿದ್ದರಿಂದ ಆಗಿರೋ ಸಾಧನೆ ಏನೆಂದರೆ ಮುಸ್ಲಿಮರು ಮತ್ತು ಹಿಂದೂಗಳು ಕೋ ಎಜುಕೇಷನ್ ಪಡೆಯದಂತೆ ನೋಡಿಕೊಂಡಿದ್ದು ಮಾತ್ರ. ಇದು ಬಲಪಂಥೀಯರ ಸಾಧನೆ. ಬಲಪಂಥೀಯರ ಮತ್ತು ಮುಗ್ದ ಪ್ರಗತಿಪರರ ಬುರ್ಕಾ ವಿರೋಧಿ ನಿಲುವು ಲಾಭ ಆಗಿದ್ದು ಯಾರಿಗೆ?

ಅಲ್ಲಿಯವರೆಗೂ ಹಿಂದೂ ಮುಸ್ಲಿಂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಒಟ್ಟಾಗಿ ಶಾಲೆ ಕಾಲೇಜು ಕಲಿಯುತ್ತಿದ್ದರು. ಈಗ ಧರ್ಮ ಆಧಾರಿತ ಶಾಲಾ ಕಾಲೇಜುಗಳಿಂದ ಈಗಾಗಲೇ ಇರುವ ಹಿಂದೂ ಮುಸ್ಲಿಮರ ನಡುವಿನ ಅಪನಂಬಿಕೆಗಳು ಇನ್ನಷ್ಟೂ ಗಟ್ಟಿಯಾಗುವ ಆತಂಕವಿದೆ.

ಮೂಡಬಿದ್ರೆಯ ಕಾಲೇಜಿನಲ್ಲೂ ಇಂತಹುದೇ ಪ್ರಸಂಗ ಎದುರಾಗಿತ್ತು. ವಿದ್ಯಾರ್ಥಿನಿಯರು ಬುರ್ಕಾ ಧರಿಸಿಕೊಂಡು ಕಾಲೇಜಿಗೆ ಬರಬಾರದು ಎಂದು ದಿಢೀರನೆ ಕಾಲೇಜು ಆಡಳಿತ ಮಂಡಳಿ ಆದೇಶ ಹೊರಡಿಸಿತ್ತು. ಬುರ್ಕಾ ಧರಿಸಿ ಕಾಲೇಜಿಗೆ ಪ್ರವೇಶವಿಲ್ಲ ಎಂದು ಕಾಲೇಜಿಗೆ ವಿದ್ಯಾರ್ಥಿನಿ ಸೇರುವ ದಿನವೇ ಖಾತ್ರಿಪಡಿಸಿದ್ದರೆ ಅಥವಾ ಕಾಲೇಜಿನ ನಿಯಮಾವಳಿ ಪುಸ್ತಕದಲ್ಲೇ ಅದನ್ನು ಸ್ಪಷ್ಟಪಡಿಸಿ, ನಂತರ ವಿದ್ಯಾರ್ಥಿನಿ ಕಾಲೇಜಿಗೆ ಪ್ರವೇಶಾತಿಯನ್ನು ಪಡೆದಿದ್ದರೆ ಆಡಳಿತ ಮಂಡಳಿಯ ತಾಕೀತಿಗೊಂದು ಅರ್ಥ ಇರುತ್ತಿತ್ತು. ಆದರೆ ಈವರೆಗೂ ಇಲ್ಲದ ಒಂದು ಆಕ್ಷೇಪ ಒಮ್ಮಿಂದೊಮ್ಮೆಲೆ ಬಂದಾಗ ಅದರ ಹಿಂದೆ ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜು ಪ್ರವೇಶಿಸಬಾರದು ಎಂದು ಬಯಸುವ ಮನಸ್ಥಿತಿಗಳ ಕೈವಾಡ ಇರುವುದು ಖಚಿತವಾಗುತ್ತದೆ. ಹಾಗಾಗಿಯೇ ಮೂಡಬಿದ್ರೆ ಕಾಲೇಜಿನ ಬುರ್ಕಾ ನಿಷೇಧವನ್ನು ನಾವು ಒಂದು ತಂಡವಾಗಿ ಸುದ್ದಿ ಮಾಡಿದ್ದೆವು. ಆಗಲೂ ಸುದ್ದಿ ಬಂದ ನಂತರ ಕಾಲೇಜಿನ ಪರ ಅಥವಾ ಬಲಪಂಥೀಯರ ಪರ ಇದ್ದ ಕೆಲ ಪತ್ರಕರ್ತರು ಸಾಹಿತಿ ಸಾ ರಾ ಅಬುಬಕ್ಕರ್ ಹೇಳಿಕೆಯನ್ನು ಪಡೆದುಕೊಂಡರು. ಅವರು ಘಟನೆಯ ಹಿನ್ನಲೆಯನ್ನು ಅಭ್ಯಸಿಸದೇ “ಬುರ್ಕಾ ನಿಷೇದ ಮಾಡಿದ್ದು ಕಾಲೇಜು ಆಡಳಿತ ಮಂಡಳಿಯ ಉತ್ತಮ ನಿಲುವು” ಎಂದು ಬಿಟ್ಟರು. ಇದನ್ನೇ ಕಾಯುತ್ತಿದ್ದ ಮುಸ್ಲಿಂ ವಿರೋಧಿ ಕೋಮುವಾದಿಗಳು ಸಾರಾ ಅಬೂಬಕ್ಕರ್ ಹೆಸರಿನಲ್ಲಿ ತಮ್ಮ ಬೇಳೆ ಬೇಯಿಸಿಕೊಂಡರು.

ಬುರ್ಕಾವನ್ನು ಪ್ರಗತಿಪರರು ಸ್ತ್ರೀವಾದದ ನೆಲೆಯಲ್ಲಿ ವಿರೋಧಿಸುತ್ತಾರೆ. ಈ ಎಬಿವಿಪಿ/ಬಜರಂಗದಳ/ಬಲಪಂಥೀಯ ಹುಡುಗರು ಯಾಕೆ ವಿರೋಧಿಸುತ್ತಾರೆ ಎಂಬ ಸ್ಪಷ್ಟನೆಯನ್ನು ಕೊಡಬೇಕು. ವಿದ್ಯಾರ್ಥಿನಿಯರು ಚಿಕ್ಕಚಿಕ್ಕ ಡ್ರೆಸ್ಸುಗಳನ್ನು ಹಾಕಿಕೊಂಡು ಬಂದರೆ ಅದನ್ನು ನೈತಿಕತೆಯ ಹೆಸರಲ್ಲಿ ಇದೇ ಬಲಪಂಥೀಯರು ವಿರೋಧಿಸುತ್ತಾರೆ. ಪೂರ್ತಿ ಮೈಮುಚ್ಚಿಕೊಂಡು ಬಂದರೆ ಬುರ್ಕಾದ ಹೆಸರಿನಲ್ಲಿ ವಿರೋಧಿಸುತ್ತಾರೆ. ಇದು ಎಂತಹ ದ್ವಂದ್ವತೆ? ಬುರ್ಕಾ ಎನ್ನುವುದು ಪುರುಷರು ಮಹಿಳೆಯರ ಮೇಲೆ ಹೇರಿರುವ ವಸ್ತ್ರ ಸಂಹಿತೆ ಅನ್ನೋ ಕಾರಣಕ್ಕಾಗಿ ಬಲಪಂಥೀಯರು ವಿರೋಧಿಸುತ್ತಾರೆ ಎಂದಾದರೆ, ವಸ್ತ್ರದ ವಿಷಯದಲ್ಲಿ ಆರ್ ಎಸ್ ಎಸ್ ನಿಲುವುಗಳೆಲ್ಲವನ್ನೂ ಬಲಪಂಥೀಯರು ವಿರೋಧ ಮಾಡಬೇಕಾಗುತ್ತದೆ. ಆದರೆ ಕಾರಣವೇ ಇಲ್ಲದೆ ಬುರ್ಕಾವನ್ನು ವಿರೋಧಿಸುವುದು, ಬುರ್ಕಾ ಧರಿಸಿಕೊಂಡು ವಿದ್ಯಾರ್ಥಿನಿಯರು ಕಾಲೇಜಿಗೆ ಬರಬಾರದೆಂದು ತಡೆಯುವುದು ಮುಸ್ಲಿಂ ವಿದ್ಯಾರ್ಥಿನಿಯರನ್ನು ಶಿಕ್ಷಣದಿಂದ ವಂಚಿಸುವ ಸಂಚಲ್ಲದೆ ಬೇರೇನೂ ಅಲ್ಲ ಎಂಬುದಂತೂ ಸ್ಪಷ್ಟ.

ಬಂಟ್ವಾಳದ ಎಸ್ ವಿ ಎಸ್ ಕಾಲೇಜಿನ ಬಳಿಕ ಸ್ಕಾರ್ಫ್ ವಿವಾದ ಆಗಿದ್ದು ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ. ಇದೊಂದು ಕ್ರಿಶ್ಚಿಯನ್ ಧರ್ಮಪ್ರಾಂತ್ಯದ ಅಡಿಯಲ್ಲಿ ಬರೋ ಶಿಕ್ಷಣ ಸಂಸ್ಥೆ. ಶಿಕ್ಷಣದಲ್ಲಿ ಧಾರ್ಮಿಕ ಸಂಕೇತಗಳು ಇರಬಾರದು ಎಂದು ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹೇಳುವ ಈ ಸಂಸ್ಥೆಯ ಪ್ರತೀ ಕೊಠಡಿ ಮಾತ್ರವಲ್ಲ ಕಟ್ಟಡದ ಎಲ್ಲೆಲ್ಲಿ ಜಾಗ ಇದೆಯೋ ಅಲ್ಲೆಲ್ಲಾ ಶಿಲುಬೆಗಳನ್ನು ನೇತಾಡಿಸಿದ್ದಾರೆ. ಎಲ್ಲೆಲ್ಲಿ ಗೋಡೆ ಖಾಲಿ ಇದೆಯೋ ಅಲ್ಲಲ್ಲಿ ಏ ಪರಲೋಕದಲ್ಲಿರುವ ಪ್ರಭುವೇ ಎಂಬ ಉದ್ಘಾರಗಳನ್ನು ಹಾಕಿದ್ದಾರೆ. ಅದಕ್ಕಿಂತಲೂ ಮುಖ್ಯವಾಗಿ ಸ್ಕಾರ್ಫ್ ಹಾಕಿಕೊಂಡು ತರಗತಿಗೆ ಬರಬಾರದು ಎಂದು ಹೇಳುವ ಇಲ್ಲಿನ ಪ್ರಾಂಶುಪಾಲರು ಒರ್ವ ಪಾದ್ರಿ. ಅವರು ಪಾದ್ರಿಗಳು ತೊಡುವ ಬಿಳಿ ನಿಲುವಂಗಿ ತೊಟ್ಟೇ ಬರುತ್ತಾರೆ. ಇಲ್ಲಿನ ಶಿಕ್ಷಕಿಯರಲ್ಲಿ ಅನೇಕರು ನನ್ ಗಳಾಗಿದ್ದು ಅವರ ಧಾರ್ಮಿಕ ತೊಡುಗೆ ಹಾಕಿಕೊಂಡೇ ಪಾಠ ಮಾಡುತ್ತಾರೆ. ಆದರೆ ಮುಸ್ಲಿಂ ವಿದ್ಯಾರ್ಥಿನಿಯರು ಮಾತ್ರ ತಲೆಗೆ ಸ್ಕಾರ್ಫ್ ಹಾಕಿಕೊಂಡು ಬರಬಾರದು. ಇದು ಮುಸ್ಲಿಂ ವಿರೋಧಿ ನಿಲುವು ಅಥವಾ ಮುಸ್ಲಿಂ ವಿರೋಧಿ ಸಂಘಟನೆಗಳನ್ನು ಖುಷಿಪಡಿಸುವ ಪ್ರಯತ್ನವಲ್ಲದೆ ಇನ್ನೇನು? ಪ್ರಾಂಶುಪಾಲರು, ಶಿಕ್ಷಕರು ಬುರ್ಕಾ ಮಾದರಿಯ ಬಿಳಿ ಧಾರ್ಮಿಕ ಗೌನ್ ಹಾಕಿಕೊಂಡು ಬರಬಹುದಾದರೆ ಮುಸ್ಲಿಂ ವಿದ್ಯಾರ್ಥಿನಿಯರು ಯಾಕೆ ಸ್ಕಾರ್ಫ್ ಹಾಕಿಕೊಂಡು ಬರಬಾರದು? ಅಲೋಶಿಯಸ್ ಕಾಲೇಜಿನಲ್ಲಿ ಬುರ್ಕಾ ಸ್ಕಾರ್ಫ್ ನಿಷೇದಿಸಿದ್ದರ ಹಿಂದೆ ಮುಸ್ಲಿಂ ವಿದ್ಯಾರ್ಥಿನಿಯರ ಹಕ್ಕುಗಳ ರಕ್ಷಣೆ ಆಶಯವಂತೂ ಇರಲಿಲ್ಲ ಎಂಬುದು ಸ್ಪಷ್ಟ.

ಇದಾದ ಬಳಿಕ ಮತ್ತೆ ಬುರ್ಕಾವನ್ನು ನಿಷೇದಿಸಿದ್ದು ಪುತ್ತೂರಿನ ರಾಮಕುಂಜೇಶ್ವರ ಕಾಲೇಜು. ಸ್ಕಾರ್ಫ್ ಹಾಕಿರೋ ವಿದ್ಯಾರ್ಥಿಗಳನ್ನು ತರಗತಿಯಿಂದ ಹೊರ ಹಾಕಿದ್ದರಿಂದ ೪೫ ವಿದ್ಯಾರ್ಥಿನಿಯರು ಶಿಕ್ಷಣದಿಂದ ವಂಚಿತರಾಗಿದ್ದರು. ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿಗಳು ಮಾರ್ಗದರ್ಶಕರಾಗಿದ್ದ ಪುತ್ತೂರು ರಾಮ ಕುಂಜೇಶ್ವರ ಕಾಲೇಜಿನ ಹೋರ್ಡಿಂಗ್ನಿಂದ ಹಿಡಿದು ಎಲ್ಲಾ ತರಗತಿ ಕೊಠಡಿಗಳಲ್ಲಿ ಪೇಜಾವರ ಶ್ರೀಗಳ ಫೋಟೋ ಅಳವಡಿಸಲಾಗಿದೆ. ಪ್ರತಿಯೊಬ್ಬ ಶಿಕ್ಷಕರ ಕೈಯ್ಯಲ್ಲಿ ಕೇಸರಿ ದಾರ ಇದೆ. ಇಲ್ಲಿನ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ಹಿಂದೂ ಸಂಘಟನೆಗಳಿಗೆ ಸೇರಿದವರು. ಈ ಎಲ್ಲಾ ಕಾಲೇಜು ಆಡಳಿತ ಮಂಡಳಿಯವರು ಯಾವ ರೀತಿ ಸಮಾನತೆಯ ಹರಿಕಾರರು ಎಂಬು ದನ್ನು ಊಹಿಸಬಹುದು. ಮುಸ್ಲಿಂ ವಿದ್ಯಾರ್ಥಿನಿಯರಿಗೆ ಮಾತ್ರ ಸಮಾನತೆ ಮತ್ತು ಹಕ್ಕುಗಳನ್ನು ಭೋದಿಸುವ ಇವರ ಅಜೆಂಡಾ ಏನು ಎಂಬುದನ್ನು ಪ್ರತ್ಯೇಕವಾಗಿ ವಿವರಿಸಬೇಕಿಲ್ಲ.

ಈ ಮೇಲಿನ ಯಾವ ಕಾಲೇಜುಗಳು ಸ್ಕಾರ್ಫ್ ನಿಷೇಧಿಸುವ ಯಾವುದೇ ನೈತಿಕತೆಯನ್ನು ಹೊಂದಿಲ್ಲ. ಕಾಲೇಜನ್ನು ಒಂದು ಕೋಮು ಅಥವಾ ಧರ್ಮದ ಪ್ರಚಾರಕ ಸಂಸ್ಥೆಯಂತೆ ಬಳಸುವುದೇ ಅಲ್ಲದೆ ಮತ್ತೊಂದು ಧರ್ಮದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಡ್ಡಿಯಾಗುವುದು ಅಸಂವಿಧಾನಿಕವಾಗುತ್ತದೆ.

ತರಗತಿಯಲ್ಲಿ ಸ್ಕಾರ್ಫ್ ಏಕಾಏಕಿ ನಿಷೇಧಿಸಿದರೆ ಮುಸ್ಲಿಂ ಧಾರ್ಮಿಕವಾದಿಗಳಿಗೆ ಪೆಟ್ಟು ನೀಡಿದಂತಾಗುತ್ತದೆ ಎಂದು ಭಾವಿಸಿದರೆ ಅದು ಮೂರ್ಖತನದ ಪರಮಾವಧಿಯಾಗುತ್ತದೆ. ಸ್ಕಾರ್ಫ್ ನಿಷೇಧ ಮುಸ್ಲಿಂ ಧಾರ್ಮಿಕವಾದಿಗಳಿಗೆ ಲಾಭವೇ ಹೊರತು ನಷ್ಟವಲ್ಲ. ಹರೆಯಕ್ಕೆ ಬಂದ ಮುಸ್ಲಿಂ ಹುಡುಗಿ ಮನೆ ಹೊಸ್ತಿಲು ದಾಟುವುದೇ ಧಾರ್ಮಿಕವಾದಿಗಳ ಕಣ್ಣು ಕೆಂಪಾಗಿಸೋ ವಿಷಯ. ಅಂತದ್ದರಲ್ಲಿ ಸ್ಕಾರ್ಫ್ ಹಾಕದೆ ದೂರದ ಕಾಲೇಜಿಗೆ ಹುಡುಗಿ ಬೆಳಿಗ್ಗೆ ಹೋಗಿ ಸಂಜೆ ಬರುತ್ತಾಳೆ ಎಂದರೆ ಧಾರ್ಮಿಕವಾದಿ ಮನಸ್ಥಿತಿಗಳು ಒಪ್ಪಲು ಸಾಧ್ಯವೇ ಇಲ್ಲ. ಇದರ ಪರಿಣಾಮ ಮುಸ್ಲಿಂ ಹುಡುಗಿಯರ ಕಾಲೇಜು ಶಿಕ್ಷಣ ಮೊಟಕುಗೊಳ್ಳುತ್ತದೆ.

ಧಾರ್ಮಿಕವಾದಿಗಳ ಅಜೆಂಡಾ ಪೂರೈಸಿದಂತಾಗುತ್ತದೆ. ಶಿಕ್ಷಣವೇ ಸ್ಕಾರ್ಫ್  /ಬುರ್ಕಾ ನಿಷೇದಕ್ಕೆ ಉತ್ತಮ ಔಷದಿ. ಮೊದಲು ಮುಸ್ಲಿಂ ಹುಡುಗಿಯರು ಶಿಕ್ಷಣ ಪಡೆಯುವಂತಾಗಬೇಕು. ಅದರಲ್ಲೂ ಹಿಂದೂ ಮುಸ್ಲೀಂ ಹುಡುಗ ಹುಡುಗಿಯರು ಸಹಶಿಕ್ಷಣ(ಕೋಎಜುಕೇಶನ್ ) ಪಡೆಯುವಂತಾಗಬೇಕು.

ಹಿಂದೂ ಮುಸ್ಲೀಮರು ಸಹಶಿಕ್ಷಣ ಪಡೆಯುವ ಕಾಲೇಜುಗಳಲ್ಲಿ ಸ್ಕಾರ್ಫ್  /ಬುರ್ಕಾ ನಿಷೇದ ಮಾಡುವುದು ಬುರ್ಕಾ ಸಂಸ್ಕೃತಿಯನ್ನು ಇನ್ನಷ್ಟೂ ಬಲಗೊಳಿಸುತ್ತದೆ. ಸ್ಕಾರ್ಫ್ ನಿಷೇಧಕ್ಕೊಳಗಾಗಿರುವ ಕಾಲೇಜು ಹೊರತು ಪಡಿಸಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಪರ್ಯಾಯ ಆಯ್ಕೆ ಇರುವುದು ಮುಸ್ಲಿಂ ಕಾಲೇಜುಗಳು. ಇದು ಸಮಾಜದಲ್ಲಿ ಇನ್ನಷ್ಟು ಅಸಮಾನತೆಯ ಮನಸ್ಥಿತಿಯನ್ನು ಮತ್ತು ಅಂತರವನ್ನು ಹೆಚ್ಚಿಸುತ್ತದೆಯೇ ಹೊರತು ಇನ್ನೇನಲ್ಲ. ಹಲವಾರು ಜಾತಿ, ಧರ್ಮ, ಸಮುದಾಯದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಒಟ್ಟಾಗಿ ವಿದ್ಯಾಭ್ಯಾಸ ಮಾಡುವುದೇ ಪರಸ್ಪರರನ್ನು ಅರಿತು ಸಮಾನತೆ ಸಾಧಿಸಲು ಇರುವ ಅತೀ ದೊಡ್ಡ ಮಾರ್ಗ. ಅದೇ ಕಾರಣಕ್ಕಾಗಿ ಕಾಲೇಜು ಜೀವನದಲ್ಲಿ ವಸ್ತ್ರ ಸಂಹಿತೆ (ಯೂನಿಫಾರಂ) ಇರಬಾರದು ಎನ್ನುವುದು.

ಸಮಾನತೆ ಎಂದರೆ ಯೂನಿಫಾರಂ ಹಾಕುವುದಲ್ಲ. ಒಟ್ಟಿಗೆ ಕುಳಿತು ಊಟ ಮಾಡುವುದೂ ಅಲ್ಲ. ಅದೊಂದು ಮನಃಸ್ಥಿತಿ. ವಿದ್ಯಾರ್ಥಿಗಳಲ್ಲಿ ಅಂತಹ ಸಮಾನತೆಯ ಮನಸ್ಥಿತಿಯನ್ನು ಬೆಳೆಸಲು ಸ್ಕಾರ್ಫ್ ನಿಷೇಧಿಸಿರುವ ಈ ಕಾಲೇಜುಗಳು ಏನು ಕೆಲಸ ಮಾಡಿವೆ?

ಕಾಲೇಜುಗಳಿಗೆ ವಿದ್ಯಾರ್ಥಿಗಳಲ್ಲಿ ಸಮಾನತೆಯನ್ನು ಕಾಯ್ದುಕೊಳ್ಳಬೇಕು ಎಂಬ ಪ್ರಾಮಾಣಿಕ ಇಚ್ಚಾಶಕ್ತಿ ಇದ್ದರೆ ಕಾಲೇಜು ತರಗತಿ ಕೊಠಡಿಯಲ್ಲಿರುವ ಸ್ವಾಮೀಜಿಗಳ, ಧರ್ಮಾಧಿಕಾರಿಗಳ ಫೋಟೋ, ಶಿಲುಬೆಗಳನ್ನು ಕಿತ್ತು ತೆಗೆಯಲಿ. ಶಿಕ್ಷಕರು ಶಿಕ್ಷಕರಂತೆಯೇ ತರಗತಿಗೆ ಬಂದು ಪಾಠ ಮಾಡಲಿ. ವೈಚಾರಿಕವಾದ, ಸಂವಿಧಾನದ ಆಶಯಗಳನ್ನು ಸಾರುವ ವಿಚಾರಗಳನ್ನು ವಿದ್ಯಾರ್ಥಿಗಳ ತಲೆಗೆ ನಾಜೂಕಾಗಿ ತುಂಬುವಂತಹ ಬೋಧನೆಗಳನ್ನು ಮಾಡಲಿ. ಇಂತಹ ಪ್ರಗತಿಪರ ಮನಸ್ಸುಗಳುಳ್ಳ ವಿದ್ಯಾರ್ಥಿಗಳನ್ನು ಬೆಳೆಸಿದ ನಂತರ ಸ್ಕಾರ್ಫ್ ಹಾಕಿಕೊಂಡು ತರಗತಿಗೆ ಬರಬೇಡಿ ಎಂದು ಹೇಳುವುದರ ಹಿಂದೆ ಒಂದು ಅರ್ಥ ಇರುತ್ತದೆ.

ಏಕಾಏಕಿ ಬುರ್ಕಾ ನಿಷೇದಿಸುವುದರ ಹಿಂದೆ ಮುಸ್ಲಿಂ ಮಹಿಳೆಯರನ್ನು ಶೈಕ್ಷಣಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಬದಿಗೆ ದೂಡುವ ಹುನ್ನಾರ ಇದೆ. ಈ ಹುನ್ನಾರವನ್ನು ಹಿಂದುತ್ವದ ಕೋಮುವಾದಿಗಳು ಬಹಳ ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ. ಈ ಅರಿವು ಮಾನವ ಹಕ್ಕು,ಮಹಿಳಾ ಹಕ್ಕಿನ ಬಗ್ಗೆ ಚಿಂತಿಸುವ ಪ್ರಗತಿಪರರಿಗೆ ಇರಬೇಕು.

ಆದ್ದರಿಂದ ಮುಸ್ಲಿಂ ಸಮುದಾಯದ ಮದ್ಯೆ ಉಡುಪಿನ ಹಕ್ಕು, ಮಹಿಳಾ ಹಕ್ಕುಗಳ ಬಗ್ಗೆ ಯಾವುದೇ ಪೂರ್ವಾಗ್ರಹಗಳು ಇಲ್ಲದ, ಭಯ ಆತಂಕಗಳನ್ನು ಸೃಷ್ಟಿಸದ ಪ್ರಗತಿಪರ ಚಳುವಳಿಯೊಂದು ಬಹಳ ಪ್ರೀತಿ ವಿಶ್ವಾಸದಿಂದ ನಡೆಯಬೇಕಿದೆ. ಭಯಮುಕ್ತ ಶಿಕ್ಷಣದಿಂದ ಮತ್ತು ದ್ವೇಷರಹಿತ ಚಳುವಳಿಯಿಂದಷ್ಟೆ ಸೌಹಾರ್ಧ ಸಮಾಜ ನಿರ್ಮಾಣ ಸಾಧ್ಯ.

Donate Janashakthi Media

Leave a Reply

Your email address will not be published. Required fields are marked *