ಅಮೆರಿಕದೊಂದಿಗೆ ಹೆಚ್ಚುತ್ತಿರುವ ಕಾರ್ಯತಂತ್ರ ಬಾಂಧವ್ಯ

ಪ್ರಕಾಶ್ ಕಾರಟ್‌

ಪ್ರಕಾಶ್ ಕಾರಟ್‌

ಅಧ್ಯಕ್ಷ ಬೈಡೆನ್ ಪಶ್ಚಿಮ ಏಷ್ಯಾಕ್ಕೆ ಭೇಟಿ ನೀಡಿದ್ದ ಸಂದರ್ಭ 2022 ಜುಲೈ 14ರಂದು ಐ2ಯು2 ವರ್ಚುವಲ್ ಶೃಂಗ ಸಭೆ ನಡೆದಿತ್ತು. ಇರಾನ್-ವಿರೋಧಿಯಾದ ಈ ಮೈತ್ರಿಕೂಟಕ್ಕೆ ಭಾರತ ಸೇರುವ ಅಗತ್ಯವಾದರೂ ಏನು ಹಾಗೂ ಪ್ಯಾಲೆಸ್ತೀನಿ ಉದ್ದೇಶವನ್ನು ಮಣ್ಣುಪಾಲು ಮಾಡುವ ಇಸ್ರೇಲ್-ಅರಬ್ ರಾಷ್ಟ್ರಗಳ ರಾಜಿಯನ್ನು ಭಾರತ ಅನುಮೋದಿಸುವುದಾದರೂ ಯಾಕೆ ಎಂಬ ಪ್ರಶ್ನೆಗಳಿಗೆ ಸರ್ಕಾರದ ಬಳಿ ಖಂಡಿತವಾಗಿಯೂ ಸಮಾಧಾನಕರ ಉತ್ತರವಿರಲಾರದು.

ನರೇಂದ್ರ ಮೋದಿ ಸರಕಾರ ಅಮೆರಿಕದೊಂದಿಗೆ ಎಲ್ಲ ರಂಗಗಳಲ್ಲಿ ಕಾರ್ಯತಂತ್ರ ಬಾಂಧವ್ಯವನ್ನು ಆಳಗೊಳಿಸುತ್ತಿದೆ. ಕಳೆದ ಕೆಲವು ತಿಂಗಳಲ್ಲಿ ನಡೆದ ಮೂರು ಘಟನೆಗಳು ಅಮೆರಿಕದ ಭೌಗೋಳಿಕ ರಾಜಕೀಯ ಹುನ್ನಾರಗಳಿಗೆ ಭಾರತ ಇನ್ನಷ್ಟು ಹತ್ತಿರ ಸರಿಯುತ್ತಿರುವುದನ್ನು ಎತ್ತಿತೋರಿಸುತ್ತದೆ.

ಪಶ್ಚಿಮ ಏಷ್ಯಾದ ‘ಐ2ಯು2’ ಎಂಬ ಹೊಸ ಗುಂಪಿಗೆ ಭಾರತ ಸೇರ್ಪಡೆಯಾಗಿದೆ. ಇಂಡಿಯಾ ಮತ್ತು ಇಸ್ರೇಲ್ (ಐ2) ಹಾಗೂ ಯುನೈಟೆಡ್ ಸ್ಟೇಟ್ಸ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯು2) ಈ ಕೂಟದಲ್ಲಿವೆ.

ಈ ವಲಯದಲ್ಲಿ ಅಮೆರಿಕದ ಪ್ರಭಾವವನ್ನು ಹೆಚ್ಚಿಸುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ರ ಹತಾಶ ಪ್ರಯತ್ನಗಳಿಗೆ ಇಂಬು ಕೊಡುವುದು ಬಿಟ್ಟರೆ ಬೇರೆ ಯಾವ ಕಾರಣಕ್ಕೆ ಭಾರತ ಹೀಗೆ ಮಾಡಿದೆ ಎಂದು ಯೋಚಿಸಲೂ ಆಗುವುದಿಲ್ಲ.

ಚೀನಾ ಮತ್ತು ರಷ್ಯಾದ ಹೆಚ್ಚುತ್ತಿರುವ ಆರ್ಥಿಕ ಮತ್ತು ರಾಜಕೀಯ ಸವಾಲುಗಳ ಪರಿಣಾಮವಾಗಿ ಪಶ್ಚಿಮ ಏಷ್ಯಾ ವಲಯದಲ್ಲಿ ಕ್ಷೀಣಿಸುತ್ತಿರುವ ತನ್ನ ಏಕಚಕ್ರಾಧಿಪತ್ಯವನ್ನು ಮರಳಿ ಸ್ಥಾಪಿಸಲು ಈ ವಲಯದಲ್ಲಿ ಇರಾನ್-ವಿರೋಧಿ ಮೈತ್ರಿಕೂಟ ರಚಿಸಲು ಬೈಡೆನ್ ಪ್ರಯತ್ನಿಸುತ್ತಿದ್ದಾರೆ. ಇದಕ್ಕೂ ಮುನ್ನ, ಅರಬ್ ರಾಷ್ಟ್ರಗಳಾದ ಯುಎಇ, ಬಹರೈನ್ ಮತ್ತು ಮೊರಾಕ್ಕೊ ದೇಶಗಳಿಂದ ಇಸ್ರೇಲ್‌ಗೆ ಮಾನ್ಯತೆ ಒದಗಿಸುವ ಉದ್ದೇಶದಿಂದ ‘ಅಬ್ರಹಾಂ ಒಡಂಬಡಿಕೆ’ ರೂಪಿಸಲು ಅಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉಪಕ್ರಮ ಆರಂಭಿಸಿದ್ದರು.

ಅಧ್ಯಕ್ಷ ಬೈಡೆನ್ ಪಶ್ಚಿಮ ಏಷ್ಯಾಕ್ಕೆ ಭೇಟಿ ನೀಡಿದ್ದ ಸಂದರ್ಭ 2022 ಜುಲೈ 14ರಂದು ಐ2ಯು2 ವರ್ಚುವಲ್ ಶೃಂಗ ಸಭೆ ನಡೆದಿತ್ತು. ಇರಾನ್-ವಿರೋಧಿಯಾದ ಈ ಮೈತ್ರಿಕೂಟಕ್ಕೆ ಭಾರತ ಸೇರುವ ಅಗತ್ಯವಾದರೂ ಏನು ಹಾಗೂ ಪ್ಯಾಲೆಸ್ತೀನಿ ಉದ್ದೇಶವನ್ನು ಮಣ್ಣುಪಾಲು ಮಾಡುವ ಇಸ್ರೇಲ್-ಅರಬ್ ರಾಷ್ಟ್ರಗಳ ರಾಜಿಯನ್ನು ಭಾರತ ಅನುಮೋದಿಸುವುದಾದರೂ ಯಾಕೆ ಎಂಬ ಪ್ರಶ್ನೆಗಳಿಗೆ ಸರ್ಕಾರದ ಬಳಿ ಖಂಡಿತವಾಗಿಯೂ ಸಮಾಧಾನಕರ ಉತ್ತರವಿರಲಾರದು.

ಅರಬ್ ಸಂಯುಕ್ತ ಸಂಸ್ಥಾನ (ಯುಎಇ) ಜೊತೆ ಭಾರತ ತನ್ನ ಸಂಬಂಧವನ್ನು ಬಲಪಡಿಸಬೇಕೆಂದಿದ್ದರೆ ಅದನ್ನು ದ್ವಿಪಕ್ಷೀಯ ಮಾರ್ಗದಲ್ಲಿ ಮಾಡಬಹುದು ಹಾಗೂ ಐ2ಯು2 ವೇದಿಕೆ ಮುಖಾಂತರ ಯುಎಇ ಆಶ್ವಾಸನೆ ನೀಡಿರುವ ಸಮಗ್ರ ಫುಡ್ ಪಾರ್ಕ್‌ಗಳಿಗೆ ಹೂಡಿಕೆಯನ್ನು ಪಡೆಯಬಹುದಿತ್ತು. ಅಮೆರಿಕದೊಂದಿಗಿನ ಕಾರ್ಯತಂತ್ರಾತ್ಮಕ ಮೈತ್ರಿಯನ್ನು ಬಲಪಡಿಸುವುದೊಂದೇ ಈ ಸಂಭಾವ್ಯ ಪಶ್ಚಿಮ ಏಷ್ಯಾ ಕ್ವಾಡ್‌ಗೆ ಸೇರಲು ಭಾರತ ಹೊಂದಿರುವ ಏಕೈಕ ಕಾರಣವಾಗಿದೆ.

ಐ2ಯು2 ಶೃಂಗಸಭೆಯ ಬೆನ್ನಲ್ಲೇ, ಕೂಟದ ಸಹ-ಸದಸ್ಯವಾಗಿರುವ ಬಹರೈನ್‌ನಲ್ಲಿರುವ ಅಮೆರಿಕ ನೇತೃತ್ವದ ಕಂಬೈನ್ಡ್ ಮಾರಿಟೈಮ್ ಫೋರ್ಸ್ (ಸಿಎಂಎಫ್) ಅನ್ನು ಭಾರತ ಸೇರಿತು. ಅಂತಾರಾಷ್ಟ್ರೀಯ ಜಲ ಪ್ರದೇಶಗಳನ್ನು ರಕ್ಷಿಸುವ ಉದ್ದೇಶದ ಭಯೋತ್ಪಾದನಾ ವಿರೋಧಿ ಕೂಟವಾದ ಸಿಎಂಎಫ್ ಅನ್ನು ಅಮೆರಿಕದ ನೌಕಾ ಪಡೆಯ ಸೆಂಟ್ರಲ್ ಕಮಾಂಡ್ ನಾಯಕತ್ವದಲ್ಲಿ ರಚಿಸಲಾಗಿದೆ. ಅದರಲ್ಲಿ 35 ದೇಶಗಳಿದ್ದು ಪ್ರಮುಖವಾಗಿ ಫ್ರಾನ್ಸ್, ಜರ್ಮನಿ ಮತ್ತು ನೆದರ್‌ಲ್ಯಾಂಡ್ಸ್‌ನಂಥ ಕೆಲವು ನ್ಯಾಟೊ ಪಾಲುದಾರರ ಸಹಿತ ಅಮೆರಿಕದ ಮಿತ್ರ ದೇಶಗಳೇ ಕೂಟದಲ್ಲಿ ಹೆಚ್ಚಾಗಿವೆ.

ಅಮೆರಿಕ, ಜಪಾನ್, ಆಸ್ಟ್ರೇಲಿಯಾ ಮತ್ತು ಭಾರತ ಒಳಗೊಂಡ ನಾಲ್ಕು ದೇಶಗಳ ಕ್ವಾಡ್ ಕೂಟವನ್ನು ಹಿಂದೂ ಮಹಾಸಾಗರ-ಶಾಂತಸಾಗರ (ಇಂಡೊ-ಪೆಸಿಫಿಕ್) ವಲಯಕ್ಕಾಗಿ ರಚಿಸಿದ್ದರೆ ಪಶ್ಚಿಮ ಏಷ್ಯಾದಲ್ಲಿ ತನ್ನ ಮಿತ್ರ ದೇಶಗಳನ್ನು ಒಂದೇ ವೇದಿಕೆಗೆ ತರಲು ಅಮೆರಿಕ ಪ್ರಯತ್ನಿಸುತ್ತಿದ್ದು ಭಾರತ ಅದರ ಭಾಗವಾಗಲು ಒಪ್ಪಿಕೊಂಡಿದೆ.

ಅಮೆರಿಕ ನೌಕೆ ಆಗಮನ

ಅಮೆರಿಕ ನೌಕಾ ಪಡೆಯ ಹಡಗೊಂದು ರಿಪೇರಿಗಾಗಿ ಚೆನ್ನೈ ಸಮೀಪದ ಕಟ್ಟುಪಲ್ಲಿಯಲ್ಲಿನ ಲಾರ್ಸನ್ ಅಂಡ್ ಟೂಬ್ರೊ ಶಿಪ್‌ಯಾರ್ಡ್‌ಗೆ ಬಂದಿದ್ದು ಇತ್ತೀಚಿನ ಮೂರನೇ ಘಟನೆಯಾಗಿದೆ. ಅಮೆರಿಕ ನೇವಿಯ ಹಡಗುಗಳ ಪ್ರಯಾಣ ನಡುವಿನ ರಿಪೇರಿ ಮತ್ತು ನಿರ್ವಹಣೆಗಾಗಿ ಅಮೆರಿಕ ಮಾರಿಟೈಮ್ ಸೀಲಿಫ್ಟ್ ಕಮಾಂಡ್ ಭಾರತೀಯ ಶಿಪ್‌ಯಾರ್ಡ್‌ಗಳನ್ನು ಬಳಸಬಹುದು ಎಂದು ಅಮೆರಿಕ-ಭಾರತ ನಡುವಿನ ಸಚಿವರ 2+2 ಸಭೆಯಲ್ಲಿ ನಿರ್ಧರಿಸಿದ್ದ ಹಿನ್ನೆಲೆಯಲ್ಲಿ ಈ ವಿದ್ಯಮಾನ ಘಟಿಸಿದೆ. ಅಮೆರಿಕ ನೇವಿಯ ‘ಚಾರ್ಲ್ಸ್ ಡ್ರ್ಯೂ’ ಭಾರತೀಯ ಹಡಗುಕಟ್ಟೆಯಲ್ಲಿ ರಿಪೇರಿಯಾದ ಅಮೆರಿಕದ ಮೊದಲ ನೌಕೆಯಾಗಿದೆ. ಇದು ಲಾಜಿಸ್ಟಿಕ್ಸ್ ಎಕ್ಸ್‌ಚೇಂಜ್ ಮೆಮೊರಾಂಡಂ ಆಫ್ ಅಗ್ರಿಮೆಂಟ್ (ಎಲ್‌ಇಎಂಒಎ) ಎಂದು ಕರೆಯಲಾಗುವ ಅಮೆರಿಕ ಮತ್ತು ಭಾರತ ನಡುವಿನ ಸಾಗಾಟ ಸರಬರಾಜು ಕುರಿತ ಒಪ್ಪಂದದ ಫಲಶೃತಿಯಾಗಿದೆ. ಈ ಒಪ್ಪಂದದ ಪ್ರಕಾರ ಅಮೆರಿಕದ ವಾಯು ಪಡೆ ವಿಮಾನಗಳು ಮತ್ತು ನೌಕಾ ಪಡೆಯ ಹಡಗುಗಳು ಭಾರತೀಯ ವಾಯು ನೆಲೆಗಳು ಹಾಗೂ ಬಂದರುಗಳನ್ನು ಇಂಧನ ತುಂಬಿಸಿಕೊಳ್ಳಲು, ರಿಪೇರಿ ಹಾಗೂ ನಿರ್ವಹಣೆಗಾಗಿ ಬಳಸಿಕೊಳ್ಳಬಹುದು.

ಭಾರತದಲ್ಲಿ ಅಮೆರಿಕ ನೌಕೆಯ ರಿಪೇರಿ ಆಗಿರುವುದನ್ನು ಉಲ್ಲೇಖಿಸಿರುವ ನೌಕಾ ಪಡೆಯ ಉಪ ಮುಖ್ಯಸ್ಥ ಎಸ್.ಎನ್.ಘೋರ್ಮಡೆ, ‘ಇದು ಪರಸ್ಪರ ವಿಶ್ವಾಸವನ್ನು ಪ್ರದರ್ಶಿಸುತ್ತದೆ. ಅಮೆರಿಕದ ಪ್ರಮುಖ ರಕ್ಷಣಾ ಪಾಲುದಾರನಾಗಿ ನಮ್ಮ ಪಾತ್ರವನ್ನು ಇನ್ನಷ್ಟು ಬಲಪಡಿಸುತ್ತದೆ’ ಎಂದಿದ್ದಾರೆ.

ಕಾರ್ಯತಂತ್ರಾತ್ಮಕ ಮೈತ್ರಿಯ ಕೇಂದ್ರದಲ್ಲಿರುವ, ಬೆಳೆಯುತ್ತಿರುವ ಮಿಲಿಟರಿ ಮೈತ್ರಿಯನ್ನು ಮನಮೋಹನ್ ಸಿಂಗ್ ಸರ್ಕಾರ ಅಧಿಕೃತಗೊಳಿಸಿತ್ತು. 2005 ಜೂನ್‌ನಲ್ಲಿ ಅಮೆರಿಕದೊಂದಿಗೆ ಡಿಫೆನ್ಸ್ ಫ್ರೇಮ್‌ವರ್ಕ್ ಅಗ್ರಿಮೆಂಟ್‌ಗೆ (ರಕ್ಷಣಾ ಚೌಕಟ್ಟು ಒಡಂಬಡಿಕೆ) ಸಹಿ ಹಾಕುವ ಮೂಲಕ ಅದಕ್ಕೆ ನಾಂದಿ ಹಾಡಲಾಗಿತ್ತು.

ಸಾರಿಗೆ ಸರಬರಜು ಒಪ್ಪಂದ ಮುಂತಾದ ಒಡಂಬಡಿಕೆಗಳಿಗೆ ಸಹಿ ಹಾಕಲು ಆ ಚೌಕಟ್ಟು ಅವಕಾಶ ಕಲ್ಪಿಸಿತ್ತು. ಮೋದಿ ಸರ್ಕಾರ ಇನ್ನೂ ಮುಂದೆ ಹೋಗಿ ತಥಾಕಥಿತ ಮೂರು ಅಸ್ತಿಭಾರ ಒಪ್ಪಂದಗಳಿಗೆ ಸಹಿ ಹಾಕಿದೆ. ಅದು ಉಭಯ ದೇಶಗಳ ಸಶಸ್ತ್ರ ಪಡೆಗಳ ಜೋಡಣೆ ಮತ್ತು ಅಂತರ್‌ಕಾರ್ಯಾಚರಣೆಗೆ ಅನುಕೂಲ ಕಲ್ಪಿಸುತ್ತದೆ.

ಕ್ವಾಡ್ ಆಗಿರಬಹುದು, ಅಮೆರಿಕದ ಸೆಂಟ್ರಲ್ ಮತ್ತು ಇಂಡೊ-ಪೆಸಿಫಿಕ್ ಕಮಾಂಡ್‌ಗಳಿಗೆ ಸಂಪರ್ಕ ಅಧಿಕಾರಿಗಳ ನೇಮಕವಿರಬಹುದು ಅಥವಾ ಅಮೆರಿಕದಿಂದ ರಕ್ಷಣಾ ಖರೀದಿಗಳೇ ಇರಬಹುದು; ಭಾರತವು ಅಮೆರಿಕದ ಮಿಲಿಟರಿ ಭಾಗಿದಾರ ಆಗುವತ್ತ ಸಾಗಿದೆ. ಬಿಜೆಪಿ ಸರಕಾರದಿಂದ ನಡೆಯುತ್ತಿರುವ ಈ ಎಲ್ಲ ಚಟುವಟಿಕೆಗಳು ಹಿಂದುತ್ವ ಬಲಪಂಥೀಯ ಶಕ್ತಿಗಳು ಅಮೆರಿಕ ಸಾಮ್ರಾಜ್ಯಶಾಹಿ ಜೊತೆ ನಿಕಟ ಸೈದ್ಧಾಂತಿಕ ಬಾಂಧವ್ಯ ಹಾಗೂ ರಾಜಕೀಯ ಸಾಮೀಪ್ಯ ಹೊಂದುತ್ತಿರುವುದರ ಸೂಚನೆಯಾಗಿದೆ.

ಅನು: ವಿಶ್ವ

Donate Janashakthi Media

Leave a Reply

Your email address will not be published. Required fields are marked *