ದೆಹಲಿ: ‘ಬುಲ್ಲಿ ಬಾಯಿ’ ಆ್ಯಪ್ ಪ್ರಕರಣದ ಆರೋಪಿ ನೀರಜ್ ಬಿಷ್ಣೋಯಿ ಮತ್ತು ‘ಸುಲ್ಲಿ ಡೀಲ್ಸ್’ ಆ್ಯಪ್ ಸೃಷ್ಟಿಕರ್ತ ಓಂಕಾರೇಶ್ವರ್ ಠಾಕುರ್ ಇಬ್ಬರಿಗೂ ದೆಹಲಿ ನ್ಯಾಯಾಲಯ ಮಾನವೀಯ ನೆಲೆಯಲ್ಲಿ ಜಾಮೀನು ನೀಡಿದೆ.
ನ್ಯಾಯಾಲಯವು ಆರೋಪಿಗಳಿಬ್ಬರೂ ಯಾವುದೇ ಸಾಕ್ಷಿಗೆ ಬೆದರಿಕೆಯೊಡ್ಡದಂತೆ ಹಾಗೂ ಸಾಕ್ಷ್ಯ ನಾಶಗೈಯ್ಯದಂತೆ ಅವರಿಗೆ ಷರತ್ತುಗಳನ್ನು ವಿಧಿಸಿದೆ.
ಸುಲ್ಲಿ ಡೀಲ್ಸ್ ಆ್ಯಪ್ ಸೃಷ್ಟಿಸುವ ಮುಖೇನ ವಿವಿಧ ಸಮುದಾಯಗಳ ನಡುವೆ ದ್ವೇಷಕ್ಕೆ ಕಾರಣನಾದ ಆರೋಪ ಹೊತ್ತಿದ್ದ ಆರೋಪ ಓಂಕಾರೇಶ್ವರ್ ಠಾಕೂರ್ ಮೇಲಿದೆ.
ಇದನ್ನು ಓದಿ: ದ್ವೇಷ ಹರಡಲು ‘ಬಿಜೆಪಿ ಐಟಿ ಸೆಲ್’ ನಿಂದ ‘ಬುಲ್ಲಿ ಬಾಯಿ’ ಆ್ಯಪ ಬಳಕೆ
ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಡಾ. ಪಂಕಜ್ ಶರ್ಮಾ ಅವರು, ಠಾಕೂರ್ ಮೊದಲ ಬಾರಿಗೆ ಅಪರಾಧ ಎಸಗಿದ್ದು ಇನ್ನೂ ಯುವಕನಿದ್ದಾನೆ. ದೀರ್ಘಾವಧಿ ಸೆರೆಯಲ್ಲಿಟ್ಟರೆ ಆತನ ಭವಿಷ್ಯಕ್ಕೆ ತೊಂದರೆಯಾಗಲಿದೆ. ಆತ ದೇಶ ತೊರೆಯುವ ಅಪಾಯವಿಲ್ಲ. ವಿಚಾರಣೆ ಮುಗಿಯಲು ಸಾಕಷ್ಟು ಸಮಯ ಹಿಡಿಯುವುದರಿಂದ ಆತನನ್ನು ಬಂಧನದಲ್ಲಿಡುವುದರಿಂದ ಯಾವುದೇ ಉದ್ದೇಶ ಸಾಕಾರಗೊಳ್ಳದು ಎಂದು ತಿಳಿಸಿದ್ದಾರೆ.
ಯಾವುದೇ ಸಂತ್ರಸ್ತರನ್ನು ಆರೋಪಿಗಳು ಸಂಪರ್ಕಿಸಬಾರದು ಅಥವಾ ಒತ್ತಡ ಹೇರಬಾರದು ಎಂಬ ಷರತ್ತನ್ನು ವಿಧಿಸಲಾಗಿದೆ. ಆರೋಪಿಯು ತನಿಖಾಧಿಕಾರಿಗೆ ತನ್ನ ಸಂಪರ್ಕ ಮಾಹಿತಿ ನೀಡಬೇಕು, ಫೋನ್ ಅನ್ನು ಸದಾ ಆನ್ ಇಡಬೇಕು ಹಾಗೂ ಇರುವ ಸ್ಥಳದ ಕುರಿತು ತನಿಖಾಧಿಕಾರಿಗೆ ಮಾಹಿತಿ ನೀಡಬೇಕು ಎಂದು ಜಾಮೀನಿನ ಆದೇಶದಲ್ಲಿ ಹೇಳಲಾಗಿದೆ.
ಇತ್ತ ಪ್ರಾಸಿಕ್ಯೂಷನ್ ಆರೋಪಿಗೆ ಜಾಮೀನು ನೀಡುವುದನ್ನು ವಿರೋಧಿಸಿತು. ವಿಧಿ ವಿಜ್ಞಾನ ಪರೀಕ್ಷೆಯ ವರದಿಗಳು ಇನ್ನಷ್ಟೇ ಬರಬೇಕಿದೆ. ಆತ ಸಾಕ್ಷಿಗಳಿಗೆ ಬೆದರಿಕೆ ಹಾಕುವ ಮತ್ತು ಸಾಕ್ಷ್ಯ ನಾಶ ಮಾಡುವ ಅಪಾಯವಿದೆ ಎಂದಿತು.
ಆದರೆ ನ್ಯಾಯಾಲಯ “ವಿಧಿ ವಿಜ್ಞಾನ ಪರೀಕ್ಷೆಯ ವರದಿಗಳು ಇನ್ನೂ ಬಂದಿಲ್ಲ ಎಂಬುದು ಜನವರಿಯಿಂದಲೂ ಬಂಧನದಲ್ಲಿರುವ ಠಾಕೂರ್‌ಗೆ ಜಾಮೀನು ನಿರಾಕರಿಸಲು ಆಧಾರವಾಗದು” ಎಂದು ಹೇಳಿ ಜಾಮೀನು ನೀಡಿತು.