ನಾಗರಿಕ ಹಕ್ಕುಗಳಿಗೆ ನ್ಯಾಯಾಂಗದ ಶ್ರೀರಕ್ಷೆ ಪ್ರಜಾತಂತ್ರ ಮೌಲ್ಯಗಳು ಶಿಥಿಲವಾಗುತ್ತಿರುವ ಹೊತ್ತಿನಲ್ಲಿ ಬುಲ್ಡೋಜರ್‌ ನ್ಯಾಯದ ತೀರ್ಪು ಸ್ವಾಗತಾರ್ಹ

-ನಾ ದಿವಾಕರ

ಪ್ರಜಾಪ್ರಭುತ್ವ ಎನ್ನುವುದು ಒಂದು ಉದಾತ್ತ ಮೌಲ್ಯಗಳ ಆಡಳಿತ ವ್ಯವಸ್ಥೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಘನತೆಯಿಂದ ಬದುಕುವ ಹಕ್ಕು ನೀಡುವ ಔದಾತ್ಯದ ನೆಲೆಯಲ್ಲಿ ವಿಶ್ವದ ಪ್ರಜಾಪ್ರಭುತ್ವೀಯ ಸಮಾಜಗಳು ವೈಜ್ಞಾನಿಕವಾಗಿ, ಬೌದ್ಧಿಕವಾಗಿ, ಆಡಳಿತಾತ್ಮಕವಾಗಿ ಉನ್ನತಿ ಸಾಧಿಸಿವೆ. ಸಾಂಪ್ರದಾಯಿಕತೆ ಮತ್ತು ಇದನ್ನು ಕಾಪಿಟ್ಟುಕೊಳ್ಳುವ ಪ್ರಾಚೀನ ಧಾರ್ಮಿಕ ಚಿಂತನೆಗಳನ್ನು ದಾಟಿ ಸಮಾಜದ ಪ್ರತಿ ಸ್ತರದಲ್ಲೂ ವಿಚಾರ ಜಾಗೃತಿ ಮೂಡಿಸುವ ಒಂದು ಅವಕಾಶವನ್ನು ಪ್ರಜಾಪ್ರಭುತ್ವ ಕಲ್ಪಿಸುತ್ತದೆ. ಏಕೆಂದರೆ ಇಲ್ಲಿ ಆಳುವವರು ಮತ್ತು ಆಳಲ್ಪಡುವವರ ನಡುವಿನ ಅಂತರ ಕಡಿಮೆ ಇರುತ್ತದೆ. ಭಾರತ ಆಯ್ಕೆ ಮಾಡಿಕೊಂಡಿರುವ ಸಂಸದೀಯ ಪ್ರಜಾತಂತ್ರ ವ್ಯವಸ್ಥೆ ಈ ಅವಕಾಶಗಳನ್ನು ಮತ್ತಷ್ಟು ವಿಸ್ತರಿಸುತ್ತದೆ. ಭಾರತದ ಸಂವಿಧಾನದ ಶ್ರೇಷ್ಠತೆಯನ್ನು ಇಲ್ಲಿ ಕಾಣಬಹುದು. ನಾಗರಿಕ 

ಆದರೆ ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡು ಇನ್ನೇನು 75 ವರ್ಷಗಳು ಪೂರೈಸುತ್ತಿರುವ ಸಂದರ್ಭದಲ್ಲೂ, ಭಾರತದ ಸಾಮಾಜಿಕ ಪರಿಸರವನ್ನು ಆರೋಗ್ಯಕರವಾಗಿ ಕಾಪಾಡಬೇಕಾದ ಶಾಸಕಾಂಗ ಮತು ಕಾರ್ಯಾಂಗಗಳು ತಮ್ಮ ಸಾಂವಿಧಾನಿಕ ಜವಾಬ್ದಾರಿಯನ್ನು ಅರಿಯದಿರುವುದು ವಿಪರ್ಯಾಸ. ಬಹುಶಃ ಭಾರತದ ನ್ಯಾಯಾಂಗವು, ತನ್ನೆಲ್ಲಾ ಒತ್ತಡಗಳ ಹೊರತಾಗಿಯೂ, ಸರ್ಕಾರಗಳನ್ನು ನಡೆಸುವ ಎರಡು ಪ್ರಮುಖ ಅಂಗಗಳಿಗೆ ಆಗಾಗ್ಗೆ ಸಂವಿಧಾನದ ಮೂಲ ಪಾಠವನ್ನು ಬೋಧಿಸದೆ ಹೋಗಿದ್ದರೆ, ಭಾರತ ಈ ವೇಳೆಗೆ ಇನ್ನೂ ಹಿಂದಕ್ಕೆ ಜಾರಿಬಿಡುತ್ತಿತ್ತು ಎನಿಸುತ್ತದೆ. ಪ್ರಾತಿನಿಧಿಕ ಪ್ರಜಾಪ್ರಭುತ್ವದಲ್ಲಿ ಸಾರ್ವಭೌಮ ಜನತೆಯನ್ನು ಪ್ರತಿನಿಧಿಸುವವರಲ್ಲಿ ಇರಬೇಕಾದ ಸಾಂವಿಧಾನಿಕ- ಪ್ರಜಾಸತ್ತಾತ್ಮಕ ಮೌಲ್ಯಗಳು ಇಲ್ಲದೆ ಹೋದರೆ ಏನಾಗಬಹುದು ಎನ್ನುವುದಕ್ಕೆ ಸಾಕಷ್ಟು ನಿದರ್ಶನಗಳು ನಮ್ಮ ಮುಂದಿವೆ. ಇಂತಹ ಪ್ರಸಂಗಗಳು ಎದುರಾದಾಗಲೆಲ್ಲಾ ನ್ಯಾಯಾಂಗ ಶ್ರೀಸಾಮಾನ್ಯರ ರಕ್ಷಣೆಗೆ ಧಾವಿಸಿದೆ. ನಾಗರಿಕ 

ಸರ್ಕಾರಗಳ ಆಯ್ಕೆ ಆದ್ಯತೆಗಳು

ಪ್ರಜಾಪ್ರಭುತ್ವದಲ್ಲಿ ಪ್ರಪ್ರಥಮ ಆದ್ಯತೆ ಪಡೆಯಬೇಕಿರುವುದು ಸಮಾಜದ ಕಟ್ಟಕಡೆಯ ವ್ಯಕ್ತಿಯವರೆಗೂ ವ್ಯಾಪಿಸುವ ನಾಗರಿಕ ಹಕ್ಕುಗಳು. ಆಹಾರ, ಆರೋಗ್ಯ, ಶಿಕ್ಷಣ, ವಸತಿ ಮತ್ತು ಉದ್ಯೋಗ ಈ ಹಕ್ಕುಗಳ ಅಡಿಪಾಯದ ಮೇಲೆ ನಿರ್ಮಿಸಲಾಗುವ ಘನತೆಯ ಬದುಕು ಪ್ರತಿಯೊಬ್ಬ ವ್ಯಕ್ತಿಯ ಸಾಂವಿಧಾನಿಕ-ಮಾನವೀಯ ಹಕ್ಕು ಎಂಬ ಔದಾತ್ಯವನ್ನು ನಮ್ಮ ಸಂವಿಧಾನ ಹಲವು ಆಯಾಮಗಳಲ್ಲಿ ಧ್ವನಿಸಿದೆ. ಇದನ್ನು ಅಕ್ಷರಶಃ ಶಾಸನಬದ್ಧವಾಗಿ ಕಾಪಾಡುವುದು ಹಾಗೂ ವಿಸ್ತರಿಸುವುದು ಶಾಸಕಾಂಗದ ಆದ್ಯ ಕರ್ತವ್ಯ. ಶಾಸಕಾಂಗ ರೂಪಿಸುವ ಶಾಸನ- ಕಾಯ್ದೆ-ಕಾನೂನುಗಳನ್ನು ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸಿ ಜನಸಾಮಾನ್ಯರಿಗೆ ತಲುಪಿಸುವ ಮೂಲಕ, ಅವಕಾಶವಂಚಿತ ಸಮಾಜವನ್ನು ಉನ್ನತಿಗೇರಿಸುವುದು ಕಾರ್ಯಾಂಗದ ಕರ್ತವ್ಯ. ಈ ಎರಡೂ ಅಂಗಗಳು ವಿಫಲವಾದಾಗೆಲ್ಲಾ ನ್ಯಾಯಾಂಗ ಮಧ್ಯಪ್ರವೇಶಿಸಿ ಎಚ್ಚರಿಸುತ್ತಲೇ ಇರುವುದು ಭಾರತದ ವೈಶಿಷ್ಟ್ಯ. ನಾಗರಿಕ 

ಇದನ್ನೂ ಓದಿ:  ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಶಾಲಾ ಮಾಲೀಕ ಬಂಧನ

ಉತ್ತರಪ್ರದೇಶ, ಉತ್ತರಖಂಡ, ಮಧ್ಯಪ್ರದೇಶ ಮತ್ತಿತರ ಬಿಜೆಪಿ ಆಳ್ವಿಕೆಯ ರಾಜ್ಯಗಳಲ್ಲಿ ಚುನಾಯಿತ ಸರ್ಕಾರಗಳಿಗೆ ಅತ್ಯಂತ ಅಪ್ಯಾಯಮಾನವಾಗಿದ್ದ ʼ ಬುಲ್ಡೋಜರ್‌ ನ್ಯಾಯ ʼ ವನ್ನು “ ಕಾನೂನಿನ ಅಸ್ತಿತ್ವಕ್ಕೆ ಬೆಲೆಯನ್ನೇ ನೀಡದ ಅರಣ್ಯ ನ್ಯಾಯ ” ಎಂದು ವ್ಯಾಖ್ಯಾನಿಸುವ ಮೂಲಕ ಭಾರತದ ಸುಪ್ರೀಂಕೋರ್ಟ್‌ ಮತ್ತೊಮ್ಮೆ ಸಮಾಜವನ್ನು ಜಾಗೃತಗೊಳಿಸಿದೆ. ಯಾವುದೇ ರೀತಿಯ ಅಪರಾಧಗಳನ್ನೆಸಗುವ ನಾಗರಿಕರ ವಸತಿಗಳನ್ನು ಧ್ವಂಸಗೊಳಿಸುವ ಮೂಲಕ ತ್ವರಿತ ಶಿಕ್ಷೆಯನ್ನು ಸಾರ್ವತ್ರೀಕರಿಸುವ ಚುನಾಯಿತ ಸರ್ಕಾರಗಳ ಕ್ರಮವನ್ನು ಖಂಡಿಸಿರುವ ನ್ಯಾಯಮೂರ್ತಿ ಬಿ.ಆರ್.‌ ಗವಾಯಿ ಮತ್ತು ಕೆ.ವಿ. ವಿಶ್ವನಾಥನ್‌ ಅವರನ್ನೊಳಗೊಂಡ ಸುಪ್ರೀಂಕೋರ್ಟ್‌ ವಿಭಾಗೀಯ ಪೀಠವು ದೇಶದ ನಾಗರಿಕರ ವಸತಿಯ ಹಕ್ಕನ್ನು ಎತ್ತಿಹಿಡಿದಿದೆ. ಕರ್ನಾಟಕವನ್ನೂ ಸೇರಿದಂತೆ ದೇಶಾದ್ಯಂತ ಬಿಜೆಪಿ ನಾಯಕರಿಗೆ ಅತ್ಯಂತ ಪ್ರಿಯವಾಗಿದ್ದ ʼ ಬುಲ್ಡೋಜರ್‌ ನ್ಯಾಯ ʼ ಒಂದು ನೆಲೆಯಲ್ಲಿ ವಿರೋಧಿಗಳನ್ನು ಮಣಿಸುವ ರಾಜಕೀಯ ತಂತ್ರವಾಗಿ ಬಳಕೆಯಾಗಿದ್ದೇ
ಹೆಚ್ಚು. ನಾಗರಿಕ 

ಅತಿ ಹೆಚ್ಚಿನ ಬುಲ್ಸೋಜರ್‌ ಕಾರ್ಯಾಚರಣೆಗಳು ಅಲ್ಪಸಂಖ್ಯಾತರ ವಿರುದ್ಧ ನಡೆದಿರುವುದು ಇದರ ಒಂದು ಸೂಚನೆ. ಆದರೆ ಕೆಲವು ದಿನಗಳ ಹಿಂದೆ ನ್ಯಾ. ಜೆ.ಬಿ ಪರ್ದಿವಾಲಾ ಮತ್ತು ನ್ಯಾ ಮನೋಜ್‌ ಅವರನ್ನೊಳಗೊಂಡ ಮುಖ್ಯ ನ್ಯಾಯಾಧೀಶ ಡಿ.ವೈ. ಚಂದ್ರಚೂಡ್‌ ನೇತೃತ್ವದ ಸುಪ್ರೀಂಕೋರ್ಟ್‌ ನ್ಯಾಯಪೀಠ ಬುಲ್ಡೋಜರ್‌ ನ್ಯಾಯದ ಪರಿಕಲ್ಪನೆಯು ಕಾನೂನು ನಿಯಮಗಳ ಮೂಲಕ ನಿರ್ವಹಿಸಲ್ಪಡುವ ಸಮಾಜದಲ್ಲಿ ಸ್ವೀಕಾರಾರ್ಹವಾಗುವುದಿಲ್ಲ ಎಂದು ಹೇಳುವ ಮೂಲಕ, ಹಲವು ರಾಜ್ಯ ಸರ್ಕಾರಗಳು ಜಾರಿಗೊಳಿಸಿದ್ದ ಈ ಕಾಯ್ದೆಗಳನ್ನು ಅಸಾಂವಿಧಾನಿಕ ಎಂದು ತಿರಸ್ಕರಿಸಿತ್ತು. “ಬುಲ್ಡೋಜರ್‌ಗಳ ಮೂಲಕ ನ್ಯಾಯ ಪಾಲನೆ ಮಾಡುವುದು ಯಾವುದೇ ಸುಸಂಸ್ಕೃತ ನ್ಯಾಯಶಾಸ್ತ್ರದ ವ್ಯವಸ್ಥೆಗೆ ಅಪರಿಚಿತವಾದದ್ದು. ಪ್ರಭುತ್ವದ ಯಾವುದೇ ಅಂಗ ಅಥವಾ ಅಧಿಕಾರಿಯ ಮಿತಿಮೀರಿದ
ಕಾನೂನುಬಾಹಿರ ನಡವಳಿಕೆಯನ್ನು ಅನುಮತಿಸಿದರೆ, ನಾಗರಿಕರ ಆಸ್ತಿಗಳನ್ನು ಧ್ವಂಸ ಮಾಡುವುದು ಅನ್ಯ ಕಾರಣಕ್ಕಾಗಿ ಆಯ್ದ ಪ್ರತೀಕಾರವಾಗಿ ನಡೆಯುವ ಗಂಭೀರ ಅಪಾಯವಿದೆ ” ಎಂದು ನ್ಯಾಯಪೀಠ ವ್ಯಾಖ್ಯಾನಿಸಿತ್ತು. ನಾಗರಿಕ 

ಅಂತ್ಯವಾದ ಬುಲ್ಡೋಜರ್‌ ಶಕೆ

ಈ ತೀರ್ಪಿನ ಆಧಾರದಲ್ಲೇ ಸುಪ್ರೀಂಕೋರ್ಟ್‌ ನ್ಯಾಯಪೀಠವು ಬುಲ್ಡೋಜರ್‌ ನ್ಯಾಯಕ್ಕೆ ಅಂತಿಮ ಅಂಕುಶ ಹಾಕಿದ್ದು, ಸರ್ಕಾರಗಳು ಹಾಗೂ ಕಾರ್ಯಾಂಗವು ಪಾಲಿಸಬೇಕಾದ ಕೆಲವು ನಿರ್ದಿಷ್ಟ ನಿಯಮಗಳನ್ನು ರೂಪಿಸಿದೆ. ಈ ತೀರ್ಪು ನೀಡುವ ಸಂದರ್ಭದಲ್ಲಿ ನ್ಯಾಯಪೀಠವು ವ್ಯಕ್ತಪಡಿಸಿರುವ ಕೆಲವು ಅಭಿಪ್ರಾಯಗಳು ಭಾರತದ ಇಡೀ ಆಡಳಿತ ವ್ಯವಸ್ಥೆಯನ್ನೇ ಎಚ್ಚರಿಸುವಂತಿದೆ. ನಿರ್ದಿಷ್ಟವಾಗಿ ಕಾರ್ಯಾಂಗದ ಕಾರ್ಯವೈಖರಿಯನ್ನು ಉದ್ದೇಶಿಸಿ ನೀಡಲಾಗಿದ್ದರೂ, ಈ ಸೂಚನೆಗಳು ವರ್ತಮಾನ ಭಾರತದ ಆಡಳಿತಾತ್ಮಕ ಸಂರಚನೆಗಳಲ್ಲಿರುವ ಲೋಪಗಳನ್ನೂ ಎತ್ತಿ ತೋರಿಸಿದಂತಿದೆ. “ ಕಾರ್ಯಾಂಗವು ನ್ಯಾಯಾಧೀಶನಂತೆ ವರ್ತಿಸಿ
ಆರೋಪಿ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬರ ಮನೆ ಉರುಳಿಸಿದರೆ ಅದು ಅಧಿಕಾರವನ್ನು ಪ್ರತ್ಯೇಕಿಸಬೇಕಾದ ತತ್ವದ ಉಲ್ಲಂಘನೆಯಾಗುತ್ತದೆ ” ಎಂದು ಹೇಳಿರುವ ಸುಪ್ರೀಂಕೋರ್ಟ್‌ ಪೀಠ ಕಾರ್ಯಾಂಗದ ಇಂತಹ ಕ್ರಮಗಳು ಕಾನೂನಿಗೆ ಬೆಲೆಯೇ ಇಲ್ಲದ ಬಲಿಷ್ಠರು ಮಾಡಿದ್ದೆಲ್ಲವೂ ಸರಿ ಎನ್ನುವ ಸ್ಥಿತಿಯನ್ನು ನೆನಪಿಸುತ್ತದೆ ಎಂದು ಹೇಳಿದೆ. ನಾಗರಿಕ 

ಅತ್ಯಂತ ಹೇಯವಾದ ಅಪರಾಧವನ್ನು ಎಸಗಿದ್ದರೂ ಅಂತಹ ವ್ಯಕ್ತಿಯನ್ನು ಅಪರಾಧಿ ಎಂದು ಸಾಬೀತುಪಡಿಸಿದ್ದರೂ ಸಹ ಕಾನೂನು ಪ್ರಕ್ರಿಯೆಗಳನ್ನು ಪಾಲಿಸದೆ ಶಿಕ್ಷೆ ವಿಧಿಸುವುದಕ್ಕೆ ಸಂವಿಧಾನದಲ್ಲಿ ಅವಕಾಶ ಇರುವುದಿಲ್ಲ, ಹೀಗಿರುವಾಗ ಆರೋಪಿಯ ಅಥವಾ ಅಪರಾಧಿಯ ಆಸ್ತಿಯನ್ನು ಧ್ವಂಸಗೊಳಿಸುವ ಶಿಕ್ಷೆಯನ್ನು ವಿಧಿಸುವುದು ನ್ಯಾಯಯುತವೇ ಎಂದು ಸುಪ್ರೀಂಕೋರ್ಟ್‌ ಪ್ರಶ್ನಿಸಿದೆ. ಸರ್ಕಾರವೇ ನ್ಯಾಯಪೀಠದ ಸ್ಥಾನದಲ್ಲಿ ನಿಂತು ಯಾವುದೇ ವಿಚಾರಣೆ ನಡೆಸದೆ ವ್ಯಕ್ತಿಯನ್ನು ಸಾಮೂಹಿಕ ಶಿಕ್ಷೆಗೊಳಪಡಿಸುವುದು, ಆತನ ಅಥವಾ ಆಕೆಯ ಮನೆಯನ್ನು ಧ್ವಂಸಗೊಳಿಸುವುದು ಕಾನೂನು ನಿಯಮದ ಸ್ಪಷ್ಟ ಉಲ್ಲಂಘನೆಯಾಗುತ್ತದೆ ಎಂದು ಸುಪ್ರೀಂಕೋರ್ಟ್‌ ಪೀಠ ಮತ್ತೊಮ್ಮೆ ನೆನಪಿಸಿದೆ.

ಇದನ್ನೂ ಓದಿ: ರಾಹುಲ್‌ ಗಾಂಧಿ ಪ್ರಯಾಣಿಸಬೇಕಾಗಿದ್ದ ಹೆಲಿಕಾಪ್ಟರ್‌ ಅನುಮತಿ ತಡೆ; ಬಿಜೆಪಿ ಕುತಂತ್ರ ಎಂದ ಕಾಂಗ್ರೆಸ್

ವ್ಯಕ್ತಿಯೊಬ್ಬ ಎಸಗಿದ ಅಪರಾಧಕ್ಕೆ ಶಿಕ್ಷೆ ವಿಧಿಸುವಾಗ ಯಾವುದೇ ಅಪರಾಧ ಮಾಡದ ಕುಟುಂಬದ ಸದಸ್ಯರನ್ನೂ ಶಿಕ್ಷೆಗೊಳಪಡಿಸುವ ವಿಧಾನವನ್ನೇ ಪ್ರಶ್ನಿಸಿರುವ ನ್ಯಾಯಪೀಠ ಇದು ಅಮಾಯಕ ವ್ಯಕ್ತಿಗಳ ಹಕ್ಕುಗಳನ್ನು ಕಸಿದುಕೊಂಡಂತಾಗುತ್ತದೆ ಎಂದು ವ್ಯಾಖ್ಯಾನಿಸಿದೆ. ಮನೆ ಎನ್ನುವುದು ಕೇವಲ ಒಂದು ಆಸ್ತಿಯಲ್ಲ. ಅದು ಇಡೀ ಕುಟುಂಬದ ಭರವಸೆಯನ್ನು ಬಿಂಬಿಸುವ ಒಂದು ನೆಲೆ, ವ್ಯಕ್ತಿಗಳ ಮತ್ತು ಕುಟುಂಬದ ಸುಭದ್ರತೆ, ಭವಿಷ್ಯ ಮತ್ತು ಸುಸ್ಥಿರತೆಯನ್ನು ವ್ಯಕ್ತಪಡಿಸುವ ಸೂರು, ಅದು ಕುಟುಂಬದವರಿಗೆ ಘನತೆಯ ಭಾವನೆಯನ್ನು ನೀಡುವುದೇ ಅಲ್ಲದೆ ಸ್ವಂತಿಕೆಯ ಭಾವವನ್ನು ಸೃಷ್ಟಿಸುತ್ತದೆ, ಇದನ್ನು ಕಸಿದುಕೊಳ್ಳಬೇಕಾದರೆ ಈ ಕ್ರಮವೇ ಕಾನೂನು ಪಾಲಕರ ಏಕೈಕ ಆಯ್ಕೆಯಾಗಿರಬೇಕು ಎಂದು ಎಚ್ಚರಿಸಿರುವ ನ್ಯಾಯಪೀಠ, ಯಾವುದೇ ಮುನ್ಸೂಚನೆ, ನೋಟಿಸ್‌ ನೀಡದೆ ಏಕಾಏಕಿ ರಾತ್ರೋರಾತ್ರಿ ಮನೆಗಳನ್ನು ನೆಲಸಮ ಮಾಡುವ ಬುಲ್ಡೋಜರ್‌ ಸಂಸ್ಕೃತಿಯನ್ನು ಸಹಜವಾಗಿಯೇ ಅರಣ್ಯ ನ್ಯಾಯ ಎಂದು ಬಣ್ಣಿಸಿದೆ. ವ್ಯಕ್ತಿಯನ್ನು ಅಪರಾಧಿ ಎಂದು
ಪರಿಗಣಿಸಲಾಗಿದ್ದರೂ, ಅಂತಹ ವ್ಯಕ್ತಿಗಳ ಮನೆ ಅಥವಾ ಆಸ್ತಿಯನ್ನು ಧ್ವಂಸ ಮಾಡುವ ಮುನ್ನ ಅನುಸರಿಸಬೇಕಾದ 13 ಅಂಶಗಳ ಮಾರ್ಗಸೂಚಿಯನ್ನು ನ್ಯಾಯಪೀಠವು ರೂಪಿಸಿದೆ.

ಸುಪ್ರೀಂಕೋರ್ಟ್‌ ಮಾರ್ಗಸೂಚಿ

  • ಸ್ಥಳೀಯ ಆಡಳಿತಾತ್ಮಕ ಸಂಸ್ಥೆಗಳ ಅಧಿಕೃತ ನಿಯಮಗಳಂತೆ ಅಥವಾ ಕನಿಷ್ಠ 15 ದಿನಗಳಷ್ಟು ಸಮಯಾವಕಾಶವನ್ನು ನೀಡಿ ಸೂಕ್ತ ನೋಟಿಸ್‌ ಜಾರಿಗೊಳಿಸಿದ ನಂತರ ಕಾರ್ಯಾಚರಣೆ ನಡೆಸಬೇಕು.
  •  ತನ್ನ ವಿರುದ್ಧದ ಸರ್ಕಾರಿ ಆದೇಶವನ್ನು ಪ್ರಶ್ನಿಸಲು ಆರೋಪಿಗೆ ಅವಕಾಶವನ್ನು ನೀಡಬೇಕು. ಒಂದು ವೇಳೆ ಆರೋಪಿಯು ಪ್ರಶ್ನಿಸದೆ ಹೋದರೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ವ್ಯಕ್ತಿಗೆ 15 ದಿನಗಳ ಕಾಲಾವಕಾಶ ನೀಡಬೇಕು.
  • ಕಟ್ಟಡದ ಮಾಲೀಕರಿಗೆ ರಿಜಿಸ್ಟರ್ಡ್‌ ಅಂಚೆಯ ಮೂಲಕ ನೋಟಿಸ್‌ ಜಾರಿಗೊಳಿಸಬೇಕು. ಕಟ್ಟಡದ ಹೊರಭಾಗದಲ್ಲಿ ನೋಟಿಸ್‌ ಅಂಟಿಸಬೇಕು.
  • ನೋಟಿಸ್‌ ನೀಡಿದ ಮಾಹಿತಿಯನ್ನು ಸಂಬಂಧಪಟ್ಟ ಜಿಲ್ಲಾಡಳಿತ ಅಥವಾ ಮ್ಯಾಜಿಸ್ಟ್ರೇಟ್‌ಗೆ ಒದಗಿಸಬೇಕು.
  • ನಿರ್ಮಾಣದಲ್ಲಿ ಆಗಿರುವ ಲೋಪಗಳನ್ನು, ಉಲ್ಲಂಘನೆಗಳನ್ನು ಸ್ಪಷ್ಟವಾಗಿ ತಿಳಿಸಿರಬೇಕು. ಆರೋಪಿತ ವ್ಯಕ್ತಿ ತನ್ನ ಸ್ವರಕ್ಷಣೆಗಾಗಿ ಒದಗಿಸಬೇಕಾದ ದಾಖಲೆಗಳನ್ನು ಸ್ಪಷ್ಟವಾಗಿ ತಿಳಿಸಬೇಕು.
  • ಆದೇಶಕ್ಕೆ ಆಕ್ಷೇಪಿಸುವ ವ್ಯಕ್ತಿಯ ವಾದವನ್ನು ಆಲಿಸಿದ ನಂತರವೇ ಯಾವುದೇ ಪ್ರಾಧಿಕಾರವು ಅಂತಿಮ ಆದೇಶವನ್ನು ಹೊರಡಿಸಬೇಕು.
  • ಕಟ್ಟಡವನ್ನು ಧ್ವಂಸಗೊಳಿಸುವಂತಹ ತೀವ್ರವಾದ ಕ್ರಮ ಏಕೆ ಏಕೈಕ ಆಯ್ಕೆಯಾಗಿದೆ ಎನ್ನುವುದನ್ನು ಆದೇಶದಲ್ಲಿ
    ಸ್ಪಷ್ಟವಾಗಿ ಹೇಳಬೇಕು.

ಸುಪ್ರೀಂಕೋರ್ಟ್‌ ನ್ಯಾಯಪೀಠವು ನೀಡಿರುವ ಈ ಮಾರ್ಗಸೂಚಿಯೇ ಬುಲ್ಡೋಜರ್‌ ನ್ಯಾಯದ ಕಾರ್ಯಾಚರಣೆಯಲ್ಲಿ ನಡೆಯುತ್ತಿದ್ದ ಅತಿರೇಕಗಳನ್ನು ಪರೋಕ್ಷವಾಗಿ ಸೂಚಿಸುತ್ತವೆ. ಈ ಸೂಚನೆಗಳನ್ನು ಮೂಲತಃ ಕಾರ್ಯಾಂಗವನ್ನು ಉದ್ದೇಶಿಸಿ ನೀಡಲಾಗಿದೆಯಾದರೂ ಮತ್ತೊಂದು ನೆಲೆಯಲ್ಲಿ ಇದು ಶಾಸಕಾಂಗಕ್ಕೂ ನೀಡಿರುವ ಮಾರ್ಗಸೂಚಿಯಾಗಿದೆ.

ಏಕೆಂದರೆ ಭಾರತದ ಆಡಳಿತ ವ್ಯವಸ್ಥೆಯಲ್ಲಿ ಕಾರ್ಯಾಂಗವು ಯಾವುದೇ ಸಂದರ್ಭಲ್ಲೂ ಸ್ವಾಯತ್ತವಾಗಿ, ಸ್ವತಂತ್ರ ವಿವೇಚನೆಯಿಂದ ಕಾರ್ಯನಿರ್ವಹಿಸಲಾಗುವುದಿಲ್ಲ. ಶಾಸಕಾಂಗವನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಅಥವಾ ತಾವು ಪ್ರತಿನಿಧಿಸುವ ಸರ್ಕಾರದ ಆದ್ಯತೆಗಳಿಗೆ ಅನುಸಾರವಾಗಿ ಕಾರ್ಯಾಂಗದ ಕಾರ್ಯನಿರ್ವಹಣೆಯನ್ನು ನಿಯಂತ್ರಿಸಿ, ನಿರ್ದೇಶಿಸುವುದು ಭಾರತದ ಆಡಳಿತ ವ್ಯವಸ್ಥೆಯ ಲಕ್ಷಣ. ಈ ನಿಟ್ಟಿನಲ್ಲಿ ಯಾವುದೇ ರಾಜಕೀಯ ಪಕ್ಷವೂ ಸಹ ಭಿನ್ನವಾಗಿ ವರ್ತಿಸುವುದನ್ನು ಕಾಣಲಾಗುವುದಿಲ್ಲ.

ಪ್ರಜಾಪ್ರಭುತ್ವದ ರಕ್ಷಣೆಗಾಗಿ

ಈ ದೃಷ್ಟಿಯಿಂದ ನೋಡಿದಾಗ ಸುಪ್ರೀಂಕೋರ್ಟ್‌ ನ್ಯಾಯಪೀಠದ ʼ ಬುಲ್ಡೋಜರ್‌ ನ್ಯಾಯ ʼ ಕುರಿತ ಚಾರಿತ್ರಿಕ ತೀರ್ಪು ಭಾರತದ ಸಂಸದೀಯ ಪ್ರಜಾತಂತ್ರದ ನಿರ್ವಹಣೆ ಮತ್ತು ಆಡಳಿತಾಧಿಕಾರದ ನಿಯಂತ್ರಣವನ್ನು ಸಂವಿಧಾನದ ಚೌಕಟ್ಟಿನಲ್ಲಿ ಎಚ್ಚರಿಸಿರುವ ಒಂದು ನಿರ್ಣಾಯಕ ಆದೇಶ ಎಂದು ಹೇಳಬಹುದು. ಕಾರ್ಯಾಂಗವನ್ನು ನಿರ್ವಹಿಸುವ ಅಧಿಕಾರಿಗಳನ್ನು ತಮ್ಮ ಅಧೀನರನ್ನಾಗಿಯೇ ನೋಡುವ ವಸಾಹತು ಪರಂಪರೆಯಿಂದ ಭಾರತದ ರಾಜಕೀಯ ಪಕ್ಷಗಳು ಇನ್ನೂ ಹೊರಬಂದಿಲ್ಲ ಎನ್ನುವುದು ಗಮನಿಸಬೇಕಾದ ಅಂಶ. ಪಂಚಾಯತ್‌ ಸದಸ್ಯರಿಂದ ಹಿಡಿದು ಸಂಸತ್‌ ಸದಸ್ಯರವರೆಗೂ, ಚುನಾಯಿತ ಜನಪ್ರತಿನಿಧಿಗಳು ಅಧಿಕಾರಶಾಹಿಯನ್ನು ತಮ್ಮ ಆಜ್ಞಾನುಸಾರ ನಡೆದುಕೊಳ್ಳಬೇಕಾದ ಸಂಸ್ಥೆ ಎಂದೇ ಭಾವಿಸುವುದು ಪ್ರತ್ಯಕ್ಷವಾಗಿ ಕಾಣಬಹುದಾದ ವಾಸ್ತವ. ಪಕ್ಷಾತೀತವಾಗಿ ಅನುಸರಿಸಲ್ಪಡುವ ಒಂದು ಮಾದರಿ ಇದಾಗಿದ್ದು, ಭಾರತದ ಪ್ರಜಾಪ್ರಭುತ್ವ ಬಲಗೊಳ್ಳಬೇಕಾದರೆ, ಇದು ಬದಲಾಗುವುದು ಅತ್ಯವಶ್ಯ.

ಕಾರ್ಯಾಂಗವನ್ನು ಸಂವಿಧಾನದ ಒಂದು ಪ್ರಧಾನ ಅಂಗ ಎಂದು ಪರಿಗಣಿಸುವ ಬದಲು, ಆಡಳಿತಾರೂಢ ಪಕ್ಷದ ಅಣತಿಯಂತೆ ನಡೆಯುವ ಒಂದು ಇಲಾಖೆಯಂತೆ ಪರಿಗಣಿಸುವ ಸಂಸದೀಯ ರಾಜಕೀಯ ಪಕ್ಷಗಳ ಧೋರಣೆಯನ್ನು ಸರಿಪಡಿಸಬೇಕಿದೆ. ಪ್ರಜಾಪ್ರಭುತ್ವದ ನಡಿಗೆಯಲ್ಲಿ, ಗಣತಂತ್ರವಾಗಿ ಭಾರತ 75 ವರ್ಷಗಳನ್ನು ಪೂರೈಸಿದೆ. ಆದರೂ ದೇಶದ ನಾಗರಿಕರ ಮೂಲಭೂತ ಹಕ್ಕುಗಳನ್ನು ರಕ್ಷಿಸುವ ಬಗ್ಗೆ ನ್ಯಾಯಾಂಗವು ಆಗಿಂದಾಗ್ಗೆ ನಿರ್ದೇಶನ ನೀಡಬೇಕಿದೆ.

ಸಮಾಜದ ಕಟ್ಟಕಡೆಯ ವ್ಯಕ್ತಿಗೆ ನ್ಯಾಯಾಂಗದ ಬಾಗಿಲು ಸದಾ ತೆರೆದಿರುತ್ತದೆ ಆದರೆ ಆ ಕದ ತಟ್ಟುವ ಅವಶ್ಯಕತೆ ಉದ್ಭವಿಸದ ರೀತಿಯಲ್ಲಿ ಜನತೆಯ ಸಾಂವಿಧಾನಿಕ ಹಕ್ಕುಗಳನ್ನು ಒದಗಿಸಿ, ಕಾಪಾಡಬೇಕಿರುವುದು ಜನಪ್ರತಿನಿಧಿಗಳನ್ನೊಳಗೊಂಡ ಶಾಸನಸಭೆಗಳ ಆದ್ಯತೆಯಾಗಬೇಕು. ಈ ಜವಾಬ್ದಾರಿಯನ್ನು ಜನಪ್ರತಿನಿಧಿಗಳು ಮರೆತಿರುವುದರಿಂದಲೇ ಅಥವಾ ಉದ್ದೇಶಪೂರ್ವಕವಾಗಿ ತಮ್ಮದೇ ಸ್ವಾರ್ಥ ಕಾರಣಗಳಿಗಾಗಿ ನಿರ್ಲಕ್ಷಿಸಿರುವುದರಿಂದಲೇ, ಜನತೆ ಪದೇಪದೇ ನ್ಯಾಯಾಂಗದ ಕದ ತಟ್ಟಬೇಕಾಗಿ ಬಂದಿದೆ.

ಭಾರತ ಈ ಪರಿಸ್ಥಿತಿಯಿಂದ ಹೊರಬಂದು ಉನ್ನತಿಯೆಡೆಗೆ ಸಾಗಬೇಕಿದೆ. ಅಸಾಂವಿಧಾನಿಕ ಬುಲ್ಡೋಜರ್‌ ನ್ಯಾಯಕ್ಕೆ ಅಂತ್ಯ ಹಾಡುವ ನಿಟ್ಟಿನಲ್ಲಿ ದೇಶದ ನ್ಯಾಯಾಂಗವು ನೀಡಿರುವ ಅಂತಿಮ ತೀರ್ಪು ಕಾರ್ಯಾಂಗದ ಮಿತಿಯನ್ನು ನೆನಪಿಸಿರುವುದೇ ಅಲ್ಲದೆ, ಅಧಿಕಾರಿಗಳ ಉತ್ತರದಾಯಿತ್ವವನ್ನೂ ಮನದಟ್ಟುಮಾಡಿದೆ. ಪರೋಕ್ಷವಾಗಿ ಈ ತೀರ್ಪು ಜನಪ್ರತಿನಿಧಿಗಳನ್ನೂ ಎಚ್ಚರಿಸಬೇಕಿದೆ. ಎಲ್ಲಕ್ಕಿಂತಲೂ ಮಿಗಿಲಾಗಿ ಈ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಪ್ರಜ್ಞಾವಂತ ಮತದಾರರನ್ನು ಜಾಗೃತಗೊಳಿಸಬೇಕಿದೆ. ಜನರ ಕೈಗೇ ಅಧಿಕಾರ ಎಂಬ ಉದಾತ್ತ ಚಿಂತನೆಯೊಡನೆ ಮುನ್ನಡೆಸಬೇಕಾದ ಪ್ರಜಾಸತ್ತಾತ್ಮಕ ಆಡಳಿತದಲ್ಲಿ ಜನರ ಸಾಂವಿಧಾನಿಕ ಹಕ್ಕುಗಳ ರಕ್ಷಣೆ ಮೂಲತಃ ಮಾನವ ಹಕ್ಕುಗಳೂ ಹೌದು ಎಂಬ ಪ್ರಜ್ಞೆ ಜನಸಾಮಾನ್ಯರಲ್ಲಿ ಮೂಡಬೇಕಿದೆ. ಈ ನಿಟ್ಟಿನಲ್ಲಿ ಸಾಂಘಿಕ ಪ್ರಯತ್ನಗಳತ್ತ ಯೋಚಿಸೋಣ.

ಇದನ್ನೂ ನೋಡಿ: ಟ್ರಂಪ್ ಮತ್ತೆ ಅಧ್ಯಕ್ಷ : ಅಮೆರಿಕನ್ನರು ‘ಮಗ’ನಿಗೆ ಮಣೆ ಹಾಕಿ, ಮಗಳನ್ನು ಮನೆಗೆ ಕಳಿಸಿದ್ದು ಯಾಕೆ?Janashakthi Media

Donate Janashakthi Media

Leave a Reply

Your email address will not be published. Required fields are marked *