ಗುರುರಾಜ ದೇಸಾಯಿ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ, ಉದ್ಯಾನನಗರಿ ಅಕ್ಷರಶಃ ನಲುಗಿ ಹೋಗಿದೆ. ಬಹುತೇಕ ಪ್ರದೇಶಗಳು ಜಲಾವೃತವಾಗಿವೆ. ಮನೆಗಳು, ಐಟಿ-ಬಿಟಿ ಕಂಪನಿಗಳು, ಶಾಪಿಂಗ್ ಮಾಲ್ಗಳು, ಅಪಾರ್ಟ್ವೆುಂಟ್ಗಳಿಗೆ ಮಳೆ ನೀರು ನುಗ್ಗಿದೆ. ರಸ್ತೆಗಳಲ್ಲಿ 4 ಅಡಿವರೆಗೆ ನೀರು ಹರಿಯುತ್ತಿದೆ. ವಾಹನ ಸಂಚಾರ ಅಸ್ತವ್ಯಸ್ತವಾಗಿದ್ದು, ಜಲಪ್ರಳಯದಲ್ಲಿ ಸಿಕ್ಕಿಕೊಂಡಿದ್ದ ಜನರನ್ನು ಬೋಟ್ಗಳಲ್ಲಿ ಕರೆತರುವ ಪರಿಸ್ಥಿತಿ ನಿರ್ವಣವಾಗಿದೆ.
ತುತ್ತು ಅನ್ನ ಅರಸಿ ಬೆಂಗಳೂರಿಗೆ ಬಂದಿರುವ ವಲಸೆ ಕಾರ್ಮಿಕರ ಬದುಕು ರಾಜಕಾಲುವೆ ನೀರಿನಲ್ಲಿ ಕೊಚ್ಚಿಹೋಗಿದೆ. ಹೊರ ವಲಯದಲ್ಲಿ ಅಲ್ಲಲ್ಲಿ ಬೀಡು ಬಿಟ್ಟಿರುವ ಕಾರ್ಮಿಕರ ಜೋಪಡಿಗಳು ನೀರಿನಲ್ಲಿ ತೇಲುತ್ತಿದ್ದರೆ, ಅವರ ಬದುಕು ಸಂಪೂರ್ಣ ಮುಳುಗಿಹೋಗಿದೆ.
ಬಿಬಿಎಂಪಿಯಲ್ಲಿ ಕಸ ನಿರ್ವಹಣೆ ಕೆಲಸ ಮಾಡುವ ವಲಸೆ ಕಾರ್ಮಿಕರು ನಗರದ ಸುತ್ತ ಅಲ್ಲಲ್ಲಿ ಜೋಪಡಿಗಳಲ್ಲಿ ಜೀವನ ನಡೆಸುತ್ತಿದ್ದಾರೆ. ಪ್ರಮುಖವಾಗಿ ತೂಬರಹಳ್ಳಿ, ಮುನ್ನೇಕೊಳಲು, ಬೆಳ್ಳಂದೂರು ಬಳಿ ರಾಜಕಾಲುವೆ ಪಕ್ಕದಲ್ಲೇ ಎರಡು ಸಾವಿರಕ್ಕೂ ಹೆಚ್ಚು ಕುಟುಂಬಗಳು ಜೋಪಡಿಗಳಲ್ಲಿ ವಾಸ ಇವೆ. ರಾಜಕಾಲುವೆಗೆ ಸ್ವಲ್ಪ ದೂರದಲ್ಲಿರುವ ಜೋಪಡಿಗಳಲ್ಲಿ ಸೋಮವಾರ ಮೊಣಕಾಲೆತ್ತರದ ನೀರಿದ್ದರೆ, ಕಾಲುವೆ ಪಕ್ಕದಲ್ಲೇ ಇರುವ ಜೋಪಡಿಗಳಲ್ಲಿ ಎದೆಮಟ್ಟಕ್ಕೆ ನೀರು ತುಂಬಿಕೊಂಡಿದೆ. ಜೀವ ಉಳಿಸಿಕೊಳ್ಳಲು ಮಕ್ಕಳೊಂದಿಗೆ ಕಾರ್ಮಿಕರು ರಸ್ತೆಗೆ ಬಂದು ನಿಲ್ಲಬೇಕಾಯಿತು.
ಮಳೆ ಆರ್ಭಟ ಹೆಚ್ಚಾದ ಕಾರಣ, ಕೆಂಪೆಗೌಡ ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿಗಳ ಸಂಖ್ಯೆ ಕಡಿಮೆಯಾಗಿದೆ. ಹಾಗಾಗಿ ವಿಮಾನದಲ್ಲಿ ಬಂದ ಪ್ರಯಾಣಿಕರು ಟ್ರ್ಯಾಕ್ಟರ್ ಮೂಲಕ ಮನೆಗಳಿಗೆ ಪ್ರಯಾಣ ಮಾಡಿದ ದೃಶ್ಯಗಳು ಕಂಡು ಬಂದಿದ್ದು ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ.
ಸರ್ಜಾಪುರದ ರೈನ್‌ಬೋ ಡ್ರೈವ್ ಲೇಔಟ್, ಸನ್ನಿಬ್ರೂಕ್ಸ್ ಅಪಾರ್ಟ್‌ಮೆಂಟ್, ಕೈಕೊಂಡ್ರಹಳ್ಳಿಯ ಅಸ್ಟ್ರೋ ರೋಸ್‌ವುಡ್ ರೀಜೆನ್ಸಿ ಅಪಾರ್ಟ್‌ಮೆಂಟ್, ಯಮಲೂರು, ಬೆಳ್ಳಂದೂರು, ಮುನ್ನೇಕೊಳಾಲ, ಮಾರತ್‌ಹಳ್ಳಿ, ಎಚ್‌ಎಎಲ್ 2ನೇ ಹಂತ, ಕೆ.ಆರ್.ಪುರ ಬಳಿಯ ಸಾಯಿ ಬಡಾವಣೆ, ಲಾಲ್‌ಬಹದ್ದೂರ್ ಶಾಸ್ತ್ರಿ ನಗರ, ರಾಮಮೂರ್ತಿನಗರದ ಅಂಬೇಡ್ಕರ್ ನಗರ, ಇಂದಿರಾನಗರ 100 ಅಡಿ ರಸ್ತೆ, ದೊಮ್ಮಲೂರು, ಕೋರಮಂಗಲ, ಈಜಿಪುರ, ಮಹದೇವಪುರ ಸೇರಿದಂತೆ ಹಲವೆಡೆ ಮನೆಗಳು ನೀರಿನಲ್ಲಿ ಜಲಾವೃತವಾಗಿವೆ.
ಬಿಲ್ಡಪ್ “ಬಿಬಿಎಂಪಿ”: ಮಳೆ ನಿರ್ವಹಣೆ ಬಗ್ಗೆ ಬಿಬಿಎಂಪಿ ಕೊಟ್ಟದ್ದು ಬಿಲ್ಡಪ್ ಮಾತ್ರವಾ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಬೆಂಗಳೂರಿನಲ್ಲಿ ಮಳೆ ಬಂದ್ರೆ 209 ಪ್ರದೇಶಗಳು ಜಲಾವೃತವಾಗುತ್ತವೆ. ಮಳೆ ಸಂದರ್ಭದಲ್ಲಿ ಚರಂಡಿ, ಮನೆ, ರಸ್ತೆಗಳಲ್ಲಿ ನುಗ್ಗುವ ನೀರನ್ನು ತಡೆಯುವುದಕ್ಕಾಗಿ ರೈನ್ ಮ್ಯಾನ್,ಅಲರ್ಟ್ ಆಪ್‌ಗಳ ನಿರ್ಮಾಣವನ್ನು ಮಾಡಿತ್ತು. ಇದು ಕೇವಲ ಬಿಲ್ಡಪ್ ಮಾತ್ರ ಎಂಬಂತಾಗಿದೆ. ಪ್ರತಿ ಭಾರಿ ಮಳೆ ಬಂದಾಗಿ ಬಿಬಿಎಂಪಿ ನಡೆಸುವ ಸರ್ವೆ ಕಾರ್ಯ ಮೂಲೆಗೂಂಪಾಗುತ್ತಿದೆ.
ಬೆಂಗಳೂರು ನಗರದಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಲು ಪ್ರಮುಖ ಕಾರಣಗಳಲ್ಲಿ ಒಂದು ರಾಜಕಾಲುವೆ ಒತ್ತುವರಿಯಾಗಿರುವುದು. 2016 ರಲ್ಲಿ ಕಂದಾಯ ಇಲಾಖೆ ನಡೆಸಿದ ಸಮೀಕ್ಷೆಯಲ್ಲಿ 2,626 ಕಡೆ ರಾಜಕಾಲುವೆ ಒತ್ತುವರಿಯಾಗಿರುವುದು ಪತ್ತೆಯಾಗಿತ್ತು. ಸಮೀಕ್ಷೆ ನಡೆದು 6 ವರ್ಷ ಕಳೆದರೂ ತೆರವು ಕಾರ್ಯಾಚರಣೆಯನ್ನು ಬಿಬಿಎಂಪಿ ಇನ್ನೂ ಪೂರ್ಣಗೊಳಿಸಿಲ್ಲ. ಪ್ರಭಾವಿ ರಾಜಕಾರಣಿಗಳು, ಬಿಲ್ಡರ್‌ಗಳು, ಶ್ರೀಮಂತರು ರಾಜಕಾಲುವೆಗಳನ್ನು ಒತ್ತುವರಿ ಮಾಡುವ ಮೂಲಕ ಸದ್ಯ ಬಿಗಡಾಯಿಸುತ್ತಿರುವ ಸಮಸ್ಯೆಗಳಿಗೆ ಹೊಣೆಗಾರರಾಗಿದ್ದಾರೆ. ಆದರೆ ಪ್ರಭಾವಿಗಳ ಒತ್ತುವರಿಯನ್ನು ತೆರವುಗೊಳಿಸುವವರು ಯಾರು? ಎಂಬುವುದು ಕೂಡಾ ಯಕ್ಷಪ್ರಶ್ನೆಯಾಗಿ ಉಳಿದಿದೆ.
10 ಸಾವಿರ ರಸ್ತೆ ಗುಂಡಿಗಳು! : ಬೆಂಗಳೂರು ರಸ್ತೆಗುಂಡಿಗಳ ಬಗ್ಗೆ ಸಮೀಕ್ಷೆ ನಡೆಸಲಾಗಿದೆ. ನಗರದಲ್ಲಿ 10,282 ಗುಂಡಿಗಳಿವೆ. ಸ್ವತಃ ಬಿಬಿಎಂಪಿಯ ಯೋಜನಾ ವಿಭಾಗದ ಅಧಿಕಾರಿಗಳೇ ಇದನ್ನು ಒಪ್ಪಿಕೊಂಡಿದ್ದಾರೆ. ಕಳೆದ ಮೂರು ವರ್ಷಗಳಿಂದ ಹೈಕೋರ್ಟ್ ಬೆಂಗಳೂರಿನ ರಸ್ತೆಗುಂಡಿಗಳನ್ನು ಮುಚ್ಚುವಂತೆ ಪಾಲಿಕೆಗೆ ಸತತ ಚಾಟಿ ಬೀಸುತ್ತಿದೆ. ಆದರೆ, ಪಾಲಿಕೆ ಮಾತ್ರ ರಸ್ತೆಗುಂಡಿ ಮುಚ್ಚುವ ಕೆಲಸಕ್ಕೆ ಈವರೆಗೆ ಮನಸ್ಸು ಮಾಡಿಲ್ಲ. ಪರಿಣಾಮ ಕಳೆದ ಎರಡು ತಿಂಗಳ ಅವಧಿಯಲ್ಲಿ ಆರು ಜನ ರಸ್ತೆಗುಂಡಿಗೆ ಸಿಲುಕಿ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಆದರೂ ಕೂಡ ಬಿಬಿಎಂಪಿ ಇನ್ನೂ ಎಚ್ಚೆತ್ತುಕೊಂಡಿಲ್ಲ. ಇವತ್ತು ರಸ್ತೆಗಳು ಜಲದ ಬುಗ್ಗೆಯಾಗುವುದಕ್ಕೆ ಬಿಬಿಎಂಪಿಯ ನಿರ್ಲಕ್ಷ್ಯವೇ ಕಾರಣವಾಗಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ರಾಜ್ಯದಲ್ಲಿ 40%, 50% ಕಮೀಷನ್ ಭ್ರಷ್ಟಾಚಾರ ನಡೆದಿದೆ ಎಂಬುದನ್ನು ಮಳೆ ತೋರಿಸಿಕೊಟ್ಟಿದೆ ಎಂದು ನೆಟ್ಟಿಗರು ಸರಕಾರವನ್ನು ಟ್ರೋಲ್ ಮಾಡುತ್ತಿದ್ದಾರೆ. ಮಳೆಯ ಅವಾಂತರದ ಬಗ್ಗೆ ಮಾತನಾಡೋದಕ್ಕೆ ಸರಕಾರಕ್ಕೆ ಎಷ್ಟು ಕಮೀಷನ್ ನೀಡಬೇಕು ಎಂದು ಪ್ರಶ್ನಿಸುತ್ತಿದ್ದಾರೆ. ಇನ್ನಾದರೂ ಸರಕಾರ, ಬಿಬಿಎಂಪಿ ಅಧಿಕಾರಿಗಳು ಎಚ್ಚೆತ್ತುಕೊಂಡು ಶಾಶ್ವತ ಪರಿಹಾರಕ್ಕೆ ಮುಂದಾಗಬೇಕಿದೆ.