ಮಾ.13ರಿಂದ‌ ಕೇಂದ್ರ ಬಜೆಟ್ ಅಧಿವೇಶನದ 2ನೇ ಅವಧಿ ಆರಂಭ

ನವದೆಹಲಿ: ಕೇಂದ್ರದ 2023-24ನೇ ಸಾಲಿನ ಬಜೆಟ್‌ ಸಂಸತ್ ಅಧಿವೇಶನದ 2ನೇ ಅವಧಿ ಮಾರ್ಚ್‌ 13ರಿಂದ ಪುನರಾರಾಂಭಗೊಳ್ಳಲಿದೆ.

ಇಲಾಖೆಗೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿಗಳು ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳ ಅನುದಾನದ ಬೇಡಿಕೆಗಳನ್ನು ಪರಿಶೀಲಿಸಿದ ಒಂದು ತಿಂಗಳ ಅವಧಿಯ ನಂತರ ಬಜೆಟ್ ಅಧಿವೇಶನವು ಪುನರಾರಂಭಗೊಳ್ಳುತ್ತಿದೆ. ಅಧಿವೇಶನದ ಎರಡನೇ ಭಾಗವು ಕೇಂದ್ರ ಬಜೆಟ್‌ನ ಅನುದಾನ ಮತ್ತು ಅಂಗೀಕಾರದ ಬೇಡಿಕೆಯ ಮೇಲೆ ಕೇಂದ್ರೀಕರಿಸುತ್ತದೆ.

ಇದನ್ನು ಓದಿ: ಬಜೆಟ್‌ ಸಂಸತ್‌ ಅಧಿವೇಶನ: ಲೋಕಸಭೆಯಲ್ಲಿ ಅದಾನಿ ಸಂಸ್ಥೆ ವಿರುದ್ಧದ ಆರೋಪಗಳ ಚರ್ಚೆಗೆ ವಿರೋಧ ಪಕ್ಷಗಳ ಪಟ್ಟು

ಜನವರಿ 31ರಂದು ಆರಂಭವಾದ ಸಂಸತ್ತಿನ ಬಜೆಟ್‌ ಅಧಿವೇಶದ ವೇಳೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂಸತ್ತಿನ ಎರಡೂ ಸದನಗಳನ್ನು ಉದ್ದೇಶಿಸಿ ಮಾತನಾಡಿದರು. ಈ ಅವಧಿಯಲ್ಲಿ ಒಟ್ಟು 10 ಸಭೆಗಳು ನಡೆದಿವೆ. ಮೊದಲ ಹಂತದಲ್ಲಿ, ರಾಷ್ಟ್ರಪತಿಗಳ ಭಾಷಣ ಮತ್ತು 2023-24ರ ಕೇಂದ್ರ ಬಜೆಟ್‌ ಮೇಲೆ ವಂದನಾ ನಿರ್ಣಯದ ಮೇಲೆ ಚರ್ಚೆಗಳನ್ನು ನಡೆಸಲಾಯಿತು.

ಸಂಸತ್ತಿನ ಮೊದಲ ಹಂತ ಫೆಬ್ರವರಿ 13ರಂದು ಮುಕ್ತಾಯವಾಯಿತು. ಬಜೆಟ್ ಅಧಿವೇಶನದ ಎರಡನೇ ಹಂತ ಏಪ್ರಿಲ್ 6 ರವರೆಗೆ ಮುಂದುವರಿಯುತ್ತದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹಣಕಾಸು ಮಸೂದೆ ಮಂಡಿಸಲಿದ್ದಾರೆ. ಮುಂದಿನ ಆರ್ಥಿಕ ವರ್ಷದಿಂದ ಬಜೆಟ್ ಪ್ರಸ್ತಾವನೆಗಳನ್ನು ಜಾರಿಗೆ ತರಲು ಸಂಸದರ ಅನುಮೋದನೆ ನೀಡಬೇಕಿದೆ. ಇದೇ ಸಂದರ್ಭದಲ್ಲಿ ರಾಜ್ಯಸಭೆಯಲ್ಲಿ ಸುಮಾರು 26 ಮತ್ತು ಲೋಕಸಭೆಯಲ್ಲಿ ಸುಮಾರು 9 ಮಸೂದೆಗಳು ಅಂಗೀಕಾರಗೊಳ್ಳುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.

ಇದನ್ನು ಓದಿ: ಸಂಸತ್‌ ಬಜೆಟ್ ಅಧಿವೇಶನ: 2022–23ನೇ ಸಾಲಿನ ಆರ್ಥಿಕ ಸಮೀಕ್ಷೆ ಮಂಡಿಸಿದ ನಿರ್ಮಲಾ ಸೀತಾರಾಮನ್

ಪ್ರತಿಪಕ್ಷಗಳ ಜಂಟಿ ಸಭೆ

ಸರ್ಕಾರವನ್ನು ಎದುರಿಸಲು ಪ್ರತಿಪಕ್ಷಗಳ ಜಂಟಿ ಸಭೆಯೂ ನಾಳೆ ಬೆಳಿಗ್ಗೆ ಸಂಸತ್‌ ಸಂಕೀರ್ಣದಲ್ಲಿ ಸಭೆಯನ್ನು ಹಮ್ಮಿಕೊಂಡಿದೆ. ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಕೊಠಡಿಯಲ್ಲಿ, ಪ್ರತಿಪಕ್ಷಗಳ ನಾಯಕರು ಸಭೆ ಸೇರಲಿದ್ದಾರೆ ಎಂದು ವರದಿಯಾಗಿದೆ. ಸಂಸತ್ತಿನ ಉಭಯ ಸದನಗಳಲ್ಲಿ ಪ್ರತಿಪಕ್ಷಗಳ ಜಂಟಿ ಕಾರ್ಯತಂತ್ರಗಳಿಗೆ ಸಂಬಂಧಿಸಿದಂತೆ ಸಭೆ ಏರ್ಪಡಿಸಲಾಗಿದೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *