ಬೆಂಗಳೂರು : ದಲಿತರ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‌ನಲ್ಲಿ ಹಣ ಮೀಸಲಿಡಬೇಕೆಂದು, ಎಸ್‌ಸಿಎಸ್‌ಪಿ/ಟಿಎಸ್‌ಪಿ ಉಪಯೋಜನೆಗಳ ಜಾರಿಗಾಗಿ ಏಕಗವಾಕ್ಷಿ ಪದ್ಧತಿ ಮೂಲಕ ಜಾರಿ ಮಾಡಬೇಕೆಂದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ಬೃಹತ್ ಪ್ರತಿಭಟನಾ ಧರಣಿಯನ್ನು ನಡೆಸಿದರು.
ಧರಣಿ ಆರಂಭಕ್ಕೂ ಮೊದಲು ಬೆಂಗಳೂರು ನಗರ ರೈಲ್ವೇ ನಿಲ್ದಾಣದಿಂದ ಆರಂಭವಾದ ಮೆರವಣಿಗೆ ಆನಂದರಾವ್ ವೃತ್ತದ ಮೂಲಕ ಸ್ವಾತಂತ್ರ್ಯ ಉದ್ಯಾನವನಕ್ಕೆ ತಲುಪಿತು.
ಪ್ರಮುಖ ಬೇಡಿಕೆಗಳಾದ ನಿವೇಶನ ರಹಿತರಿಗೆ ಹಿತ್ತಲು ಸಹಿತ ನಿವೇಶನ, ಭೂರಹಿತರಿಗೆ ಭೂಒಡೆತನ ಯೋಜನೆಯಡಿ ಭೂಮಿ, ವಸತಿ ರಹಿತರಿಗೆ ಮನೆ ಮತ್ತು ಸ್ಮಶಾನಕ್ಕಾಗಿ, ಅರ್ಜಿ ಸಲ್ಲಿಸಿದ ಎಲ್ಲರಿಗೂ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿಗಾಗಿ ಹಾಗೂ ಖಾಲಿ ಇರುವ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕು, ಖಾಸಗಿ ವಲಯದಲ್ಲಿ ಮೀಸಲಾತಿ ನಿಗದಿಪಡಿಸಲು ಹಾಗೂ ದಲಿತರ ಅಭಿವೃದ್ದಿಗೆ ಮೀಸಲಿಟ್ಟ ಹಣವನ್ನು ಬೇರೆ ಇಲಾಖೆಯ ಕೆಲಸಗಳಿಗೆ ವರ್ಗಾವಣೆ ಮಾಡಿ ದುರ್ಬಳಕೆ ಮಾಡಬಾರದೆಂದು, ದೇವದಾಸಿ ಪದ್ಧತಿ ನಿರ್ಮೂಲನೆ ಮಾಡಿ, ಅವರ ಕುಟುಂಬದ ಮಕ್ಕಳಿಗೆ ಶಿಕ್ಷಣ, ಉದ್ಯೋಗ ಭದ್ರತೆ ಒದಗಿಸಬೇಕೆಂದು ಮತ್ತ ಮಸಣ ಕಾರ್ಮಿಕರಿಗೆ ಮಾಸಿಕ ರೂ.3000 ಪಿಂಚಣಿಗಾಗಿ, ಎಸ್.ಸಿ/ಎಸ್.ಟಿ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಮಾಸಿಕ ಆಹಾರ ಭತ್ಯೆ ರೂ.3500 ನೀಡಿ, ವಿದ್ಯಾರ್ಥಿವೇತನದ ಪ್ರಮಾಣವನ್ನು ಹೆಚ್ಚಿಸಬೇಕೆಂದು ವಿವಿಧ ಬೇಡಿಕೆಗಳ ಮೂಲಕ ಸರ್ಕಾರವನ್ನು ಆಗ್ರಹಿಸಿದರು.
ಸರ್ಕಾರದ ಪರವಾಗಿ ಹಿರಿಯ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಭಾಗವಹಿಸಿ ಮನವಿ ಪತ್ರವನ್ನು ಸ್ವೀಕರಿಸಿ ಸರ್ಕಾರದೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಆರ್ಥಿಕ ತಜ್ಞರಾದ ಟಿ.ಆರ್.ಚಂದ್ರಶೇಖರ್, ಡಿಹೆಚ್‌ಎಸ್ ರಾಜ್ಯ ಸಂಚಾಲಕರಾದ ಗೋಪಾಲಕೃಷ್ಣ ಅರಳಹಳ್ಳಿ, ಅಖಿಲ ಭಾರತ ಕೃಷಿಕೂಲಿಕಾರರ ಸಂಘದ ರಾಜ್ಯ ಅಧ್ಯಕ್ಷರಾದ ನಿತ್ಯಾನಂದಸ್ವಾಮಿ, ಮಸಣ ಕಾರ್ಮಿಕರ ರಾಜ್ಯ ಮುಖಂಡರಾದ ಯು.ಬಸವರಾಜು, ರಾಜ್ಯ ಮುಖಂಡರಾದ ಬಿ.ರಾಜಶೇಖರಮೂರ್ತಿ, ಕೃಷ್ಣ, ಬಿ.ಮಾಳಮ್ಮ, ರಾಜಣ್ಣ ಮತ್ತಿತರ ಮುಖಂಡರು ಮಾತನಾಡಿದರು.