ಬಜೆಟ್ 2024-25: ದಿಗಿಲುಗೊಳಿಸುವ ಮೊಂಡುತನ

– ಪ್ರೊ.ಪ್ರಭಾತ್‍ ಪಟ್ನಾಯಕ್

ಅನು: ಕೆ.ವಿ.

ಈ ಬಜೆಟ್‌ಗೆ ಆಧಾರವಾಗಿರುವ ಕಾರ್ಯತಂತ್ರ ಹಿಂದಿನ ವರ್ಷಗಳ ಬಜೆಟ್‌ನಂತೆಯೇ ಇದೆ- ಅಂದರೆ: ಹೆಚ್ಚುವರಿ ಹಣಕಾಸು ಸಂಪನ್ಮೂಲಗಳನ್ನು ಸಜ್ಜುಗೊಳಿಸುವ ಪ್ರಯತ್ನವಿಲ್ಲ; ತೆರಿಗೇತರ ಆದಾಯದಲ್ಲಿನ ಏರಿಕೆಯನ್ನು ಬಳಸುವ, ಬಂಡವಾಳ ವೆಚ್ಚವನ್ನು ಹೆಚ್ಚಿಸುವ ಪ್ರಯತ್ನವಿಲ್ಲ; ಕಲ್ಯಾಣ ವೆಚ್ಚ ಕೆಲವು ಬಾಬ್ತುಗಳಲ್ಲಿ ಹೆಚ್ಚಿದರೆ, ಇನ್ನು ಕೆಲವು ಬಾಬ್ತುಗಳಲ್ಲಿ ಕಡಿತ ಮಾಡುವುದು; ಮತ್ತು ಏನೇ ದೊಡ್ಡ ಸಮಸ್ಯೆಗಳಿದ್ದರೂ ದೊಡ್ಡ ಬಂಡವಳಿಗರಿಗೆ ಬಜೆಟ್ ವರ್ಗಾವಣೆ ಒದಗಿಸುವುದು !

ನೂರು ವರ್ಷಗಳ ಹಿಂದೆಯೇ ಟೊಳ್ಳೆಂದು ಸಾಬೀತಾದ ವಾದ ಈ ವರ್ಗಾವಣೆ ಸ್ಕೀಮಿನ ಹಿಂದಿರುವ ಸೈದ್ಧಾಂತಿಕ ಚಿಂತನೆ. ಮೋದಿ ಸರ್ಕಾರದ ಸಮಸ್ತ ಆರ್ಥಿಕ ಚಿಂತನೆ ಐಎಂಎಫ್‍ ಮತ್ತು ವಿಶ್ವ ಬ್ಯಾಂಕ್‍ ಪಸರಿಸುವ ಬೂರ್ಜ್ವಾ ಅರ್ಥಶಾಸ್ತ್ರದ ಇಂತಹ ಟೊಳ್ಳು ವಾದಗಳನ್ನು ಆಧರಿಸಿದೆ. ನಮ್ಮ ದೇಶದ ಜನರು ಎದುರಿಸುತ್ತಿರುವ ಅಗಾಧ ಸಮಸ್ಯೆಗಳ ಬಗ್ಗೆ ಅರಿವಿನ ಸಂಪೂರ್ಣ ಕೊರತೆ ಈ ಬಜೆಟ್‌ನಲ್ಲಿ ಎದ್ದು ಕಾಣುವ ಸಂಗತಿ. ಫ್ರಾನ್ಸಿನಲ್ಲಿ 1789ರ ಕ್ರಾಂತಿಯಲ್ಲಿ ಕಿತ್ತೆಸೆಯಲ್ಪಟ್ಟ ಬೊರ್ಬೊನ್‍ ದೊರೆಗಳ ಬಗ್ಗೆ “ಅವರು ಏನನ್ನೂ ಕಲಿಯುವುದಿಲ್ಲ ಮತ್ತು ಅವರು ಏನನ್ನೂ ಮರೆಯುವುದಿಲ್ಲ” ಎಂದು ಹೇಳಲಾಗುತ್ತದೆ. ಇದು ಎನ್‍ಡಿಎ ಸರಕಾರದ ವಿಷಯದಲ್ಲೂ ಸತ್ಯ. ಅದು ಪ್ರಸ್ತುತಪಡಿಸಿರುವ ಬಜೆಟ್ ಅರ್ಥವ್ಯವಸ್ಥೆಯಲ್ಲಿ ತುರ್ತಾಗಿ ಗಮನ ಹರಿಸಬೇಕಾದುದೇನೂ ಸಂಭವಿಸಿಯೇ ಇಲ್ಲ ಎಂಬಂತೆ ನಟಿಸುತ್ತದೆ; ಇದು ಮೊಂಡುತನದ ಅಮೋಘ ಪ್ರದರ್ಶನ.

ದೇಶದಲ್ಲಿ ಬೃಹತ್‍ ಪ್ರಮಾಣದ ನಿರುದ್ಯೋಗವಿದೆ, ಅದು ವಿಶೇಷವಾಗಿ ಯುವಕರನ್ನು ಬಾಧಿಸುತ್ತಿದೆ ಮತ್ತು ಆಹಾರ ಬೆಲೆಗಳಲ್ಲಿ ಒಂದು ದೊಡ್ಡ ಮತ್ತು ನಿರಂತರ ಹಣದುಬ್ಬರ ಇದೆ; ತೀವ್ರ, ಅಭೂತಪೂರ್ವ ಗ್ರಾಮೀಣ ಯಾತನೆಯಿದೆ; ಕಿರು ಉತ್ಪಾದನಾ ವಲಯದಲ್ಲಿ ಬಿಕ್ಕಟ್ಟು ಇದೆ; ಆದಾಯ ಮತ್ತು ಸಂಪತ್ತಿನ ಅಸಮಾನತೆಯು ಎಂತಹ ಮಟ್ಟವನ್ನು ತಲುಪಿದೆಯೆಂದರೆ ಇಡೀ ಜಗತ್ತು ಅದರ ಬಗ್ಗೆ ಮಾತನಾಡುತ್ತಿದೆ. ಈ ಎಲ್ಲದರ ಮಧ್ಯೆ ಮಂಡಿಸಿದ ಬಜೆಟ್ ಇವುಗಳನ್ನು ನಿಭಾಯಿಸಲು ಸ್ವಲ್ಪ ತುರ್ತು ತೋರಿಸುತ್ತಿತ್ತು, ಸ್ವಲ್ಪ ಧೈರ್ಯ ತೋರಿಸುತ್ತಿತ್ತು ಎಂದು ಯಾರಾದರೂ ಯೋಚಿಸಬಹುದು. ಆದರೆ ಇಲ್ಲ, ಎನ್ ಡಿ ಎ ಸರ್ಕಾರ ಜುಲೈ 23 ರಂದು ಸಂಸತ್ತಿನಲ್ಲಿ ಮಂಡಿಸಿದ 2024-25 ಬಜೆಟ್ ಹಾಗೆ ಯೋಚಿಸಿದಂತಿಲ್ಲ. ಒಟ್ಟಾರೆ ಬೇಡಿಕೆಯನ್ನು ಮತ್ತು ಅದರಿಂದಾಗಿ ಉದ್ಯೋಗವನ್ನು ಉತ್ತೇಜಿಸುವ ಪ್ರಭುತ್ವ ವೆಚ್ಚದಲ್ಲಾಗಲೀ ಅಥವಾ ನಿರ್ದಿಷ್ಟ ಉದ್ಯೋಗ ಸೃಷ್ಟಿಯ ಯೋಜನೆಗಳಿಗೆ ಮಾಡುವ ವೆಚ್ಚದಲ್ಲಾಗಲೀ, ಅಥವಾ ಕಲ್ಯಾಣ ಕಾರ್ಯಕ್ರಮಗಳ ವೆಚ್ಚದಲ್ಲಾಗಲೀ, ಅಥವಾ ಶಿಕ್ಷಣ ಮತ್ತು ಆರೋಗ್ಯಪಾಲನೆಯ ವೆಚ್ಚದಲ್ಲಾಗಲೀ ಜಿಡಿಪಿಯ ಅನುಪಾತದಲ್ಲಿ ಯಾವುದೇ ಹೆಚ್ಚಳ ತೋರಿಸಿಲ್ಲ, ಬದಲಾಗಿ ಒಟ್ಟಾರೆಯಾಗಿ ಕಡಿತವನ್ನೇ ಮಾಡಲಾಗಿದೆ. ಹಣಕಾಸಿನ ಸಂಪನ್ಮೂಲಗಳ ಕೊರತೆಯಿಂದಾಗಿ ಹೀಗಾಗಿದೆ ಎಂದು ದೂರುವಂತೆಯೂ ಇಲ್ಲ; ಏಕೆಂದರೆ ಯಾವುದೇ ವಿತ್ತೀಯ ಪ್ರಯತ್ನವೇ ಇದರಲ್ಲಿ ಮಾಯವಾಗಿದೆ.

ಈ ಬಜೆಟ್‌ಗೆ ಆಧಾರವಾಗಿರುವ ಕಾರ್ಯತಂತ್ರ ಹಿಂದಿನ ವರ್ಷಗಳ ಬಜೆಟ್‌ನಂತೆಯೇ ಇದೆ- ಅಂದರೆ: ಹೆಚ್ಚುವರಿ ಹಣಕಾಸು ಸಂಪನ್ಮೂಲಗಳನ್ನು ಸಜ್ಜುಗೊಳಿಸುವ ಪ್ರಯತ್ನವಿಲ್ಲ; ತೆರಿಗೇತರ ಆದಾಯದಲ್ಲಿನ ಬೆಳವಣಿಗೆಯನ್ನು ಬಳಸುವ (ಅದರಲ್ಲಿ ಹೆಚ್ಚಿನ ಪಾಲು ರಿಝರ್ವ್ ಬ್ಯಾಂಕ್ ಆಫ್ ಇಂಡಿಯಾದ ಲಾಭವನ್ನು ಒಳಗೊಂಡಿದೆ), ಸ್ವಲ್ಪ ಮಟ್ಟಿಗೆ, ಮೂಲಸೌಕರ್ಯಕ್ಕೂ ಸೇರಿದಂತೆ ಬಂಡವಾಳ ವೆಚ್ಚವನ್ನು ಹೆಚ್ಚಿಸುವ ಪ್ರಯತ್ನವಿಲ್ಲ; ಕಲ್ಯಾಣ ವೆಚ್ಚ ಕೆಲವು ಬಾಬ್ತುಗಳಲ್ಲಿ ಹೆಚ್ಚಿದರೆ, ಇನ್ನು ಕೆಲವು ಬಾಬ್ತುಗಳಲ್ಲಿ ಕಡಿತ ಮಾಡುವುದು; ಮತ್ತು ಏನೇ ದೊಡ್ಡ ಸಮಸ್ಯೆಗಳಿದ್ದರೂ ದೊಡ್ಡ ಬಂಡವಳಿಗರಿಗೆ ಬಜೆಟ್ ವರ್ಗಾವಣೆಗಳನ್ನು ಒದಗಿಸುವುದು !

ವಿತ್ತೀಯ ಪ್ರಯತ್ನ ಸಂಪೂರ್ಣವಾಗಿ ಸೊನ್ನೆ

ಇವನ್ನ್ನೆಲ್ಲ ಒಂದೊಂದಾಗಿ ನೋಡೋಣ. ರಾಜ್ಯಗಳಿಗೆ ವರ್ಗಾವಣೆ ಸೇರಿದಂತೆ ಕೇಂದ್ರ ಸರ್ಕಾರದ ಒಟ್ಟು ವೆಚ್ಚವನ್ನು 2023-24 (ಪರಿಷ್ಕೃತ ಬಜೆಟ್‍) ಮತ್ತು 2024-25( ಬಜೆಟ್‍ ಅಂದಾಜು) ನಡುವೆ 7.35% ದಷ್ಟು ಹೆಚ್ಚಿಸಲು ಯೋಜಿಸಲಾಗಿದೆ. ಇದರರ್ಥ, ಜಿಡಿಪಿ ಯಲ್ಲಿ ಕೇಂದ್ರ ಸರ್ಕಾರದ ವೆಚ್ಚದ ಅನುಪಾತ ಇಳಿಯುತ್ತದೆ ಇದು ಅರ್ಥವ್ಯವಸ್ಥೆಯಲ್ಲಿ ಉದ್ಯೋಗವನ್ನು ಉತ್ತೇಜಿಸಲು ಮಾಡಬೇಕಾದುದಕ್ಕೆ ತದ್ವಿರುದ್ಧವಾಗಿದೆ. ಈ ಮಾರ್ಗಭ್ರಷ್ಟತೆ ಯಾವುದೇ ಹಣಕಾಸಿನ ಬಿಗಿತದಿಂದಾಗಿ ಅಲ್ಲ; ವಾಸ್ತವವಾಗಿ ಜಿಡಿಪಿಯಲ್ಲಿ ತೆರಿಗೆ ಆದಾಯಗಳ ಅನುಪಾತ ಹೆಚ್ಚಿದೆ. 2021-22ರಲ್ಲಿ ಇದು 11.5% ಇತ್ತು, 2023-24ರಲ್ಲಿ 11.7%ಕ್ಕೆ ಏರಿದೆ, 2024-25ರಲ್ಲಿ 11.8%ಕ್ಕೆ ಏರುವುದಾಗಿ ನಿರೀಕ್ಷಿಸಲಾಗಿದೆ(ಈ ಆದಾಯಗಳು ಈಗ ಬಹುಪಾಲು ಕೇಂದ್ರ ಸರಕಾರದ ವಿವೇಚನೆಗೇ ಒಳಪಟ್ಟಿವೆ). ಅಂದರೆ ಸರಕಾರದ ಕಡೆಯಿಂದ ವಿತ್ತೀಯ ಪ್ರಯತ್ನ ಸಂಪೂರ್ಣವಾಗಿ ಸೊನ್ನೆ . ಇದು ಹಿಂದಿನ ಅನುಭವಗಳ ಮುಂದುವರಿಕೆಯೇ. ಒಟ್ಟು ತೆರಿಗೆಯೇತರ ಆದಾಯ 2023-24 ಮತ್ತು 2024-25 ನಡುವೆ ಶೇ. 36 ರಷ್ಟು ಇರುತ್ತದೆ ಎಂದು ಹೇಳಲಾಗಿದೆ. ಇದರಲ್ಲಿ ಅತಿ ದೊಡ್ಡ ಬಾಬತ್ತಾದ “ಲಾಭಾಂಶಗಳು ಮತ್ತು ಲಾಭಗಳು’” 70%ದಷ್ಟು ಹೆಚ್ಚುವುದಾಗಿ ಬಜೆಟ್‍ ಅಂದಾಜು ಮಾಡಿದೆ. ಇದರಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ರಿಝರ್ವ್ ಬ್ಯಾಂಕಿನ ಲಾಭಗಳು ಸೇರಿರುತ್ತವೆ.

ಕೇಂದ್ರ ಸರ್ಕಾರದ ಒಟ್ಟು ವೆಚ್ಚ 7.35% ಮಾತ್ರ ಹೆಚ್ಚಾಗುತ್ತದೆ, ಮತ್ತು ಅದರ ಬಂಡವಾಳ ವೆಚ್ಚ, ಬಂಡವಾಳ ಯೋಜನೆಗಳಿಗಾಗಿ ರಾಜ್ಯಗಳಿಗೆ ವರ್ಗಾಯಿಸುವವುದನ್ನು ಹೊರತುಪಡಿಸಿ, ಶೇ 17ರಷ್ಟು ಹೆಚ್ಚಲಿದೆ.ಇದು ಕಳೆದ ಕೆಲವು ವರ್ಷಗಳಲ್ಲಿ ಕಂಡು ಬಂದಿರುವ ಪ್ರವೃತ್ತಿಯ ಮುಂದುವರಿಕೆಯಾಗಿದೆ. ಇದೊಂದು ಸಕಾರಾತ್ಮಕ ಬೆಳವಣಿಗೆ ಎಂದು ಭಾವಿಸಲಾಗಿದೆ. ಆದರೆ ಈ ಹೂಡಿಕೆಯ ಬಹುಪಾಲು ದುಡಿಯುವ ಜನರ ಜೀವನದ ಮೇಲೆ ಅಷ್ಟೇನೂ ಪರಿಣಾಮ ಬೀರದ ಯೋಜನೆಗಳಲ್ಲಿ ಇದೆ; ಅಷ್ಟೇ ಅಲ್ಲ, ಅವುಗಳ ಗುಣಕ ಪರಿಣಾಮಗಳು ದೊಡ್ಡ ಪ್ರಮಾಣದಲ್ಲಿ ವಿದೇಶಗಳಿಗೆ ಸೋರಿಕೆಯಾಗುತ್ತವೆ, ಆದ್ದರಿಂದ ಅವು ದೇಶದೊಳಗೆ ಅಷ್ಟೇನೂ ಹೆಚ್ಚು ಉದ್ಯೋಗ ಸೃಷ್ಟಿಸುವುದಿಲ್ಲ. ಮತ್ತೊಂದೆಡೆ ಇತರ ಬಾಬ್ತುಗಳ ಮೇಲೆ ವೆಚ್ಚಗಳನ್ನು ಕಡಿತಮಾಡುವುದರಿಂದಾಗಿ, ದೇಶದೊಳಗೆ ಇದರ ಗುಣಕ ಪರಿಣಾಮವೆಂದರೆ, ಉದ್ಯೋಗದ ಮೇಲೆ ನಕಾರಾತ್ಮಕ ಪ್ರಭಾವ.

ಹಣಕಾಸು ಮಂತ್ರಿಗಳು ತಮ್ಮ ಬಜೆಟ್ ಭಾಷಣದಲ್ಲಿ ನಿರುದ್ಯೋಗ ಸಮಸ್ಯೆಯನ್ನು ಉಲ್ಲೇಖಿಸಿದರಾದರೂ, ಅದಕ್ಕೆ ಆಕೆಯ ಪರಿಹಾರ ತಿಳುವಳಿಕೆಯ ಸಂಪೂರ್ಣ ಕೊರತೆಯನ್ನು ತೋರಿಸುತ್ತದೆ. ಅವರು ಮೂರು ಸ್ಕೀಮುಗಳನ್ನು ಪ್ರಕಟಿಸಿದರು. ಇವುಗಳು ಹೊಸ ಉದ್ಯೋಗದ ಸೃಷ್ಟಿಯನ್ನು ಉತ್ತೇಜಿಸಲೆಂದು ಉದ್ಯೋಗಿಗಳಿಗೆ ಮತ್ತು ಉದ್ಯೋಗದಾತರಿಗೆ ವರ್ಗಾವಣೆಗಳನ್ನು ಒಳಗೊಂಡಿರುತ್ತವೆ. ಈ ಯೋಜನೆಗಳು ಔಪಚಾರಿಕ ವಲಯಕ್ಕಾಗಿ; , ಮತ್ತು ಉದ್ಯೋಗಿಗಳಿಗೆ ವರ್ಗಾವಣೆಯನ್ನು ಮಾಡಿದಾಗಲೂ, ಅದರ ಪ್ರಯೋಜನವು ಸಂಪೂರ್ಣವಾಗಿ ಉದ್ಯೋಗದಾತರಿಗೆ ಸೋರಿಕೆಯಾಗುವ ಸಾಧ್ಯತೆಯಿದೆ; ಏಕೆಂದರೆ, ನೌಕರರಿಗೆ ಸಿಕ್ಕಿದ ವರ್ಗಾವಣೆಗಳನ್ನು ಸರಿದೂಗಿಸಲು ಅವರ ಸಂಬಳ ಪಾವತಿಗಳಲ್ಲಿ ಕಡಿತ ಮಾಡುತ್ತಾರೆ. ಇದರ ಜೊತೆಗೆ ಹಣಕಾಸು ಮಂತ್ರಿಗಳು ಕೌಶಲವನ್ನು ಒದಗಿಸುವ ಒಂದು ಕಾರ್ಯಕ್ರಮವನ್ನು ಪ್ರಕಟಿಸಿದರು, ಇದು ಉದ್ಯೋಗಕ್ಕೆ ನೆರವಾಗುತ್ತದೆ ಎಂದು ಅವರು ಹೇಳಿಕೊಂಡರು.

ಇದನ್ನು ಓದಿ : ಅತಿ ಹೆಚ್ಚು ಬೆಂಬಲದ ಅಗತ್ಯವಿರುವವರಿಗೆ ಬೆಂಬಲವನ್ನು ಸದ್ದಿಲ್ಲದೆ ಕುಗ್ಗಿಸುವ ಕಡಿತಗಳು

ವರ್ಗಾವಣೆ ಸ್ಕೀಮಿನ ಹಿಂದಿರುವ ಸೈದ್ಧಾಂತಿಕ ಚಿಂತನೆಯೆಂದರೆ, ಉದ್ಯೋಗದಾತರು ನೀಡುವ ಸಂಬಳ ಕಡಿಮೆಯಾದರೆ, ಆಗ ಹೆಚ್ಚಿನ ಉದ್ಯೋಗಾವಕಾಶಗಳು ಬರುತ್ತವೆ ಎಂಬುದು. ಇದು ಬೂರ್ಜ್ವಾ ಅರ್ಥಶಾಸ್ತ್ರದ ಅಚ್ಚುಮೆಚ್ಚಿನ ವಿಷಯ, ಆದರೆ ಅದನ್ನು ನಂಬಲು ಯಾವುದೇ ಕಾರಣಗಳಿಲ್ಲ. ಉದ್ಯೋಗದಾತರು ವರ್ಗಾವಣೆಗಳನ್ನು ನೇರವಾಗಿ ತಮ್ಮ ಜೇಬಿಗೆ ಇಳಿಸುತ್ತಾರೆ, ಉದ್ಯೋಗಾವಕಾಶ ಮೊದಲಿನಂತೆಯೇ ಇರುತ್ತದೆ. ಕೌಶಲ ಯೋಜನೆಯೂ ಕೂಡ ಅದೇ ರೀತಿಯಲ್ಲಿ ಬೂರ್ಜ್ವಾ ಅರ್ಥಶಾಸ್ತ್ರದ ಒಂದು ಟೊಂಗೆ. ಇದರ ಪ್ರಕಾರ ಉದ್ಯೋಗ ಮತ್ತು ಕೌಶಲದ ನಡುವೆ ಹೊಂದಾಣಿಕೆಯಿಲ್ಲದಿರುವುದರ ಪರಿಣಾಮವೇ ನಿರುದ್ಯೋಗ; ಒಟ್ಟು ಬೇಡಿಕೆಯಲ್ಲಿ ಎಂದೂ ಕೊರತೆಯಾಗುವುದಿಲ್ಲ ಎಂದು ಅದು ಪ್ರತಿಪಾದಿಸುತ್ತದೆ. ನಿರುದ್ಯೋಗಳಿಗೆ ಸಾಲುವಷ್ಟು ಉದ್ಯೋಗಗಳಿವೆ, ಒಂದೇ ಸಮಸ್ಯೆಯೆಂದರೆ ಆ ಉದ್ಯೋಗಳಿಗೆ ಬೇಕಾಗುವ ಕೌಶಲವನ್ನು ಆ ನಿರುದ್ಯೋಗಿಗಳು ಹೊಂದಿರುವುದಿಲ್ಲ!

100 ವರ್ಷಗಳ ಹಿಂದಿನ ಹಳಸಲು ಪ್ರತಿಪಾದನೆ

ಈ ಎರಡೂ ತೆರನ ಸ್ಕೀಮುಗಳ ಹಿಂದಿರುವ ಮೂಲ ಯೋಚನೆಗಳೇ ತಪ್ಪು; ”ಪೂರೈಕೆ ತನ್ನದೇ ಬೇಡಿಕೆಯನ್ನು ನಿರ್ಮಿಸುತ್ತದೆ”,ಅಂದರೆ ಬೇಡಿಕೆಯ ಕೊರತೆಯೆಂಬುದೇನೂ ಇಲ್ಲ ಎನ್ನುವ ‘ಸೇ ನಿಯಮ’ದ ಮೇಲೆ ಅವು ನಿಂತಿವೆ.

ಮಾರ್ಕ್ಸ್ ಈ ನಿಲುವಿನ ಮೇಲೆ ದಾಳಿ ಮಾಡಿದ್ದರು. ಎಪ್ಪತ್ತೈದು ವರ್ಷಗಳ ನಂತರ ಕೀನ್ಸ್ ಅದರ ಪುನರಾವರ್ತನೆ ಮಾಡಿದರು. ಕೀನ್ಸ್‌ಗಿಂತ ಮೊದಲು ಈ ನಿಲುವು ಎಷ್ಟು ಬಲವಾಗಿತ್ತೆಂದರೆ, ಎಫ್‍ ಡಿ ರೂಸ್‍ವೆಲ್ಟ್ ರವರ ಮೊದಲು ಅಮೆರಿಕಾದ ಅಧ್ಯಕ್ಷರಾಗಿದ್ದ ಹರ್ಬರ್ಟ್ ಹೂವರ್ ‘ಮಹಾಕುಸಿತ’ದ ನಡುವೆ ಉದ್ಯೋಗಗಳನ್ನು ಹೆಚ್ಚಿಸಲು ಸಂಬಳಗಳನ್ನು ಕಡಿತ ಮಾಡಲು ಪ್ರಯತ್ನಿಸಿದರು. ಆದರೆ ಸಹಜವಾಗಿಯೇ ಅದರಿಂದೇನೂ ಪ್ರಯೋಜನವಾಗಲಿಲ್ಲ. ಮೋದಿ ಸರ್ಕಾರದ ಬೌದ್ಧಿಕ ದಾಸ್ತಾನಿನಲ್ಲಿ ಒಂದು ಶತಮಾನದ ಹಿಂದಿನ ಇಂತಹ ವಿಚಾರಗಳ ಆಚೆಗೆ ಬೇರೇನೂ ಇ್ಲಲ್ಲ; ಅದು ನಿರುದ್ಯೋಗವನ್ನು ನಿವಾರಿಸಲು ಏನನ್ನೂ ಮಾಡಿಲ್ಲ.

ಬಜೆಟ್

 

ಮುಂದಿನ ಐದು ವರ್ಷ
ಬದುಕುಳಿಯುವ
“ಕೌಶಲ”ಗಳನ್ನು ಬೆಳೆಸಿಕೊಳ್ಳಿ

ವ್ಯಂಗ್ಯಚಿತ್ರ ಕೃಪೆ:
ಸಜಿತ್‍ಕುಮಾರ್, ಡೆಕ್ಕನ್‍ ಹೆರಾಲ್ಡ್

 

 

ಅರ್ಥವ್ಯವಸ್ಥೆಗೆ ಉತ್ತೇಜನೆ ನೀಡಲು ಬಂಡವಳಿಗರಿಗೆ ಹಣ ವರ್ಗಾವಣೆ ಮಾಡುವುದು ನಿರರ್ಥಕ ಎಂಬುದು ‘ಆರ್ಥಿಕ ಸರ್ವೇಕ್ಷಣೆ’ಯಂತಹ ಅಧಿಕೃತ ಹೇಳಿಕೆಗಳಲ್ಲಿ ಬಹಳ ಅಪರೂಪವಾಗಿ ಕಾಣಿಸಿಕೊಳ್ಳುತ್ತದೆ. ಆದರೆ ಎಂದಿಗೂ ಅದು ಇಂತಹ ವರ್ಗಾವಣೆಗಳನ್ನು ನೀಡಿದರೂ ಬಂಡವಾಳಶಾಹಿಗಳು ಏಕೆ ಹೂಡಿಕೆ ಮಾಡುವುದಿಲ್ಲ ಎಂದು ಕೇಳುವುದಿಲ್ಲ. ಅದಕ್ಕೊಂದು ಆರ್ಥಿಕ ಕಾರಣವಿದ್ದರೂ, ಅದೊಂದು “ನೈತಿಕ ವೈಫಲ್ಯ” ಎಂದೇ ಭಾವಿಸಲಾಗಿದೆ. ಬಂಡವಾಳಶಾಹಿಗಳು ತಮ್ಮ ಬಳಿ ಹೆಚ್ಚು ಲಾಭದ ಹಣವಿದೆ ಎಂಬ ಕಾರಣಕ್ಕೇನೂ ಹೂಡಿಕೆ ಮಾಡುವುದಿಲ್ಲ. ಮಾರುಕಟ್ಟೆ ವಿಸ್ತಾರಗೊಳ್ಳುತ್ತದೆ ಎಂಬ ನಿರೀಕ್ಷೆ ಅವರಿಗೆ ಇದ್ದಾಗ ಮಾತ್ರವೇ ಹೂಡಿಕೆ ಮಾಡುತ್ತಾರೆ. ಮಾರುಕಟ್ಟೆ ಸ್ಥಗಿತಗೊಂಡಿದೆ ಎಂದಿರುವಾಗ, ಉತ್ಪಾದನಾ ಸಾಮರ್ಥ್ಯದ ಯಾವುದೇ ಹೆಚ್ಚಳದ ಉಪಯೋಗವಾಗದೆಯೇ ಉಳಿಯುತ್ತದೆ. ಅಂದರೆ ಆ ಹೆಚ್ಚುವರಿ ಸಾಮರ್ಥ್ಯವನ್ನು ಸೃಷ್ಟಿಸಲು ಮಾಡಿದ ಹೂಡಿಕೆಯ ಮೇಲೆ ಸೊನ್ನೆ ಲಾಭ! ಇಂತಹ ಪರಿಸ್ಥಿತಿಯಲ್ಲಿ ಬಂಡವಾಳಶಾಹಿಗಳು ತಮ್ಮ ಲಾಭಗಳನ್ನು ರಿಯಲ್ ಎಸ್ಟೇಟ್ ಅಥವಾ ಹಣಕಾಸಿನ ಸ್ವತ್ತುಗಳನ್ನು ಖರೀದಿಸಲು ಬಳಸುತ್ತಾರೆ. ಏಕೆಂದರೆ, ಈ ಸ್ವತ್ತುಗಳು ಸಾಮಾನ್ಯವಾಗಿ ಗಳಿಸಿಕೊಡುವ ಪ್ರತಿಫಲ ದರಗಳಲ್ಲದೆ, ಗಮನಾರ್ಹ ಬಂಡವಾಳ ಗಳಿಕೆಯನ್ನೂ ಕೊಡುತ್ತವೆ ಎಂದು ಅವರು ನಿರೀಕ್ಷಿಸುತ್ತಾರೆ. ಆದ್ದರಿಂದ ಮೋದಿ ಸರ್ಕಾರದ ಸಮಸ್ತ ಆರ್ಥಿಕ ಚಿಂತನೆಯೇ ತಪ್ಪು. ಅದು ಐಎಂಎಫ್‍ ಮತ್ತು ವಿಶ್ವ ಬ್ಯಾಂಕ್‍ ಪಸರಿಸುವ ಬೂರ್ಜ್ವಾ ಅರ್ಥಶಾಸ್ತ್ರದ ಟೊಳ್ಳು ಪ್ರತಿಪಾದನೆಗಳನ್ನು ಆಧರಿಸಿದೆ.

ಅಕ್ಷಮ್ಯ ಕ್ರಮಗಳು

ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಬಜೆಟಿನಲ್ಲಿ ನೀಡಿರುವ ಮೊತ್ತ ಸರಕಾರದ ನಿಜ ಆಶಯವನ್ನು ಸ್ಪಷ್ಟವಾಗಿ ತೋರಿಸುತ್ತದೆ. ಅದನ್ನು 2023-24ರಲ್ಲಿ ಖರ್ಚಾಧ ರೂ.86,000 ಕೋಟಿಯ ಮಟ್ಟದಲ್ಲೇ ಇಡಲಾಗಿದೆ. ನಿಜ, ಬೇಡಿಕೆ ಹೆಚ್ಚಿದರೆ ಈ ಮೊತ್ತವನ್ನು ಹೆಚ್ಚಿಸಬಹುದು ಎಂದು ಹೇಳಿಕೊಳ್ಳಬಹುದು. ಆದರೆ ಕೂಲಿಹಣವನ್ನು ಸರಿಯಾದ ಸಮಯದಲ್ಲಿ ಕೊಡದಿದ್ದರೆ ಇಂತಹ ಬೇಡಿಕೆಯೇ ಇಳಿಯಬಹುದು. ಬಜೆಟ್‍ ನೀಡಿಕೆ ಕಡಿಮೆಯಿದ್ದಾಗ ಸಾಮಾನ್ಯವಾಗಿ ಹೀಗೇ ಆಗಿದೆ. ಅಲ್ಲದೆ ಕಳೆದ ವರ್ಷ ಹಲವರನ್ನು, ಉದಾ: ಪಶ್ಚಿಮ ಬಂಗಾಲದಲ್ಲಾದಂತೆ ಈ ಸ್ಕೀಮಿನಿಂದ ಉದ್ದೇಶಪೂರ್ವಕವಾಗಿ ಹೊರಗಿಡಲಾಯಿತು. ಇದರಿಂದಾಗಿ ಕಳೆದ ವರ್ಷದ ವೆಚ್ಚ ಬೇಡಿಕೆಗಿಂತ ಕೆಳಗಿತ್ತು. ಇದನ್ನು 2024-25ರಲ್ಲಿ ಪುನರಾವರ್ತಿಸುವ ಪ್ರಯತ್ನ ನಡೆದಿದೆ. ಇದು ಅಕ್ಷಮ್ಯ.

ಪಿಂಚಣಿ ಮತ್ತು ಅಂಗವೈಕಲ್ಯ ಪ್ರಯೋಜನಗಳನ್ನು ಒದಗಿಸುವ ಎನ್‍ಎಸ್‍ಎಪಿ ಗೆ ಕೂಡ ಬಜೆಟಿನಲ್ಲಿ ನೀಡಿರುವ ಮೊತ್ತದ ವಿಷಯದಲ್ಲೂ ಇದು ನಿಜ. ಪ್ರತಿ ಫಲಾನುಭವಿಗೆ ಕೊಡುವ ಮೊತ್ತವೇ ಹಾಸ್ಯಾಸ್ಪದವೆನಿಸುವಷ್ಟು ಕಡಿಮೆ; ಆದರೂ ಇದಕ್ಕೂ ಬಜೆಟಿನಲ್ಲಿ ನೀಡಿರುವ ಮೊತ್ತ 2023-24ರಲ್ಲಿ ಮಾಡಿದ ವೆಚ್ಚದ ಮಟ್ಟದಲ್ಲೇ ಇಡಲಾಗಿದೆ. ಅದರ ನೈಜಬೆಲೆಯನ್ನು ಪರಿಗಣಿಸಿದರೆ ವಾಸ್ತವವಾಗಿ ಇದು ಕಡಿತವೇ. 2023-24ರ ಬಜೆಟ್ ಅಂದಾಜುಗಳಿಗೆ ಹೋಲಿಸಿದರೆ ಶಿಕ್ಷಣಕ್ಕೆ ನೀಡಿರುವ ಮೊತ್ತ 7.5%ದಷ್ಟು ಹೆಚ್ಚುತ್ತದೆ, ಆರೋಗ್ಯದ ಬಾಬ್ತಿನಲ್ಲಿ ಯಾವುದೇ ಹೆಚ್ಚಳವಿಲ್ಲ. ಅಂದರೆ ಜಿಡಿಪಿಗೆ ಹೋಲಿಸಿದರೆ ಈ ಎರಡೂ ಬಾಬ್ತುಗಳಲ್ಲಿ ಕಡಿತವಾಗುತ್ತದೆ. ಆದರೆ ಕಳೆದ ವರ್ಷ ಈ ಎರಡೂ ವಲಯಗಳಲ್ಲಿ ನಿಜವಾಗಿ ಮಾಡಿದ ವೆಚ್ಚಗಳು ಬಜೆಟ್‍ ಅಂದಾಜಿಗಿಂತಲೂ ಕಡಿಮೆ. ಇದೊಂದು ಗಂಭೀರವಾದ ವಿಷಯ. ಆದರೆ ಪ್ರಸಕ್ತ ಬಜೆಟಿನಲ್ಲಿ ಕಡಿತಮಾಡಲು ಇದನ್ನೇ ನೆಪ ಮಾಡಿಕೊಳ್ಳುವುದು ಕೂಡ ಅಕ್ಷಮ್ಯ.

ಆಹಾರ ಸಬ್ಸಿಡಿಯನ್ನು 2023-24ರಲ್ಲಿ ಪರಿಷ್ಕೃತ ಅಂದಾಜಿನ ರೂ.2.12ಲಕ್ಷ ಕೋಟಿಯಿಂದ 2024-25ರ ಬಜೆಟಿನಲ್ಲಿ 2.05 ಲಕ್ಷ ಕೋಟಿಗೆ ಇಳಿಸಲಾಗಿದೆ. ಇದರ ಪರಿಣಾಮವೆಂದರೆ, ಸಬ್ಸಿಡಿಯನ್ನು ಭಾಗಶಃ, ರೈತರ ಹೆಗಲಿಗೆ ದಾಟಿಸಲಾಗಿದೆ. ಈಗಾಗಲೇ ಇವರಿಗೆ ಕೊಡುವ ಬೆಂಬಲ ಬೆಲೆಯನ್ನು ವಿಪರೀತ ಕೆಳಮಟ್ಟದಲ್ಲಿ ಇಡಲಾಗಿದೆ. ಇಂತಹ ಜಿಪುಣತನದ ಅರ್ಥವೆಂದರೆ, ಒಂದೆಡೆಯಲ್ಲಿ ಬಿಹಾರ ಮತ್ತು ಆಂಧ್ರಪ್ರದೇಶಕ್ಕೆ ದೊಡ್ಡ ವರ್ಗಾವಣೆಗಳಿಂದ ಪ್ರಯೋಜನವಾಗಬಹುದಾದರೂ, ಅದಕ್ಕಾಗಿ ಉಳಿದ ರಾಜ್ಯಗಳನ್ನು ಅನ್ಯಾಯವಾಗಿ ಹಿಂಡಲಾಗುವುದು.

ನಮ್ಮ ದೇಶದ ಜನರು ಎದುರಿಸುತ್ತಿರುವ ಅಗಾಧ ಸಮಸ್ಯೆಗಳ ಬಗ್ಗೆ ಅರಿವಿನ ಸಂಪೂರ್ಣ ಕೊರತೆ ಈ ಬಜೆಟ್‌ನಲ್ಲಿ ಎದ್ದು ಕಾಣುವ ಸಂಗತಿ. ಪ್ರಾನ್ಸಿನಲ್ಲಿ 1789ರ ಕ್ರಾಂತಿಯಲ್ಲಿ ಕಿತ್ತೆಸೆಯಲ್ಪಟ್ಟ ಬೊರ್ಬೊನ್‍ ದೊರೆಗಳ ಬಗ್ಗೆ “ಅವರು ಏನನ್ನೂ ಕಲಿಯುವುದಿಲ್ಲ ಮತ್ತು ಅವರು ಏನನ್ನೂ ಮರೆಯುವುದಿಲ್ಲ” ಎಂದು ಹೇಳಲಾಗುತ್ತದೆ. ಇದು ಎನ್‍ಡಿಎ ಸರಕಾರದ ವಿಷಯದಲ್ಲೂ ಸತ್ಯ. ಅದು ಪ್ರಸ್ತುತಪಡಿಸಿರುವ ಬಜೆಟ್ ಅರ್ಥವ್ಯವಸ್ಥೆಯಲ್ಲಿ ತುರ್ತಾಗಿ ಗಮನ ಹರಿಸಬೇಕಾದುದೇನೂ ಸಂಭವಿಸಿಯೇ ಇಲ್ಲ ಎಂಬಂತೆ ನಟಿಸುತ್ತದೆ; ಇದೊಂದು ಮೊಂಡುತನದ ಅಮೋಘ ಪ್ರದರ್ಶನ.

ಬಜೆಟ್

 

 

ನಿರುದ್ಯೋಗವೆಂಬ ಆನೆ ಮತ್ತು ಬಜೆಟ್

“ನಾನು ಈ ಬಜೆಟಿನಲ್ಲಿ ‘ಉದ್ಯೋಗ’
ಎಂಬುದನ್ನು 23 ಬಾರಿ ಉಲ್ಲೇಖಿಸಿದ್ದೇನೆ.
ಹಿಂದಿನ ಬಜೆಟಿನಲ್ಲಿ 3 ಸಾರಿ ಉಲ್ಲೇಖಿಸಿದ್ದೆ”

ವ್ಯಂಗ್ಯಚಿತ್ರ ಕೃಪೆ: ಸಂದೀಪ ಅಧ್ವರ್ಯು
ಟೈಂಸ್‍ ಆಫ್‍ ಇಂಡಿಯ

 

 

 

ಇದನ್ನು ನೋಡಿ : ಮೋದಿ 3.O ಸರ್ಕಾರದ ಬಜೆಟ್ ನ ಆಳ ಅಗಲ.. Janashakthi Media

Donate Janashakthi Media

Leave a Reply

Your email address will not be published. Required fields are marked *