ನವದೆಹಲಿ : 2022-23 ರ ಬಜೆಟ್ ಸಾಮಾನ್ಯ ಜನರಿಗೆ ಪರಿಹಾರವನ್ನು ಒದಗಿಸುವ ಆದ್ಯತೆಗಳನ್ನು ಗುರುತಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಇದೊಂದು ವಿಶ್ವಾಸದ್ರೋಹ ಎಂದಿರುವ ಸಿಪಿಐ(ಎಂ) ಪೊಲಿಟ್ ಬ್ಯುರೊ ಈ ಜನವಿರೋಧಿ ಕಾರ್ಪೊರೇಟ್-ಪರ ಬಜೆಟ್ ವಿರುದ್ಧ ಪ್ರತಿಭಟಿಸುವಂತೆ ಮತ್ತು ಆದಾಯ ತೆರಿಗೆ ವ್ಯಾಪ್ತಿಯ ಹೊರಗಿನ ಎಲ್ಲಾ ಕುಟುಂಬಗಳಿಗೆ ಮಾಸಿಕ 7,500 ನೇರ ನಗದು ವರ್ಗಾವಣೆ ಗೆ ಹಾಗೂ ಉಚಿತ ಆಹಾರ ಕಿಟ್‌ಗಳ ವಿತರಣೆಗೆ ಆಗ್ರಹಿಸಬೇಕು ಎಂದು ಕರೆ ನೀಡಿದೆ.
ಉದ್ಯೋಗ ಸೃಷ್ಟಿ ಮತ್ತು ಆಂತರಿಕ ಬೇಡಿಕೆಯನ್ನು ಹೆಚ್ಚಿಸುವತ್ತ ಒಂದು ದೊಡ್ಡ ಒತ್ತುನೀಡುವ ಬದಲು ಮನರೇಗ ಸ್ಕೀಮಿಗೆ 25,000 ಕೋಟಿ ರೂ.ಗಳ ಕಡಿತ ಮಾಡಲಾಗಿದೆ ಮತ್ತು ಆಹಾರ, ಇಂಧನ ಮತ್ತು ರಸಗೊಬ್ಬರ ಸಬ್ಸಿಡಿಗಳನ್ನು ಕಡಿತಗೊಳಿಸಲಾಗಿದೆ , ಆರೋಗ್ಯ ಮತ್ತು ಗ್ರಾಮೀಣ ಅಭಿವೃದ್ಧಿಗೆ ಹಂಚಿಕೆಗಳಲ್ಲಿಯೂ ಕಡಿತವಾಗಿದೆ.
ನೇರ, ಪರೋಕ್ಷ ತೆರಿಗೆಗಳಿಂದ ಆದಾಯಗಳನ್ನು ಹೆಚ್ಚಿಸಿಕೊಂಡರೂ, ಜಿಡಿಪಿ ಯ ಶೇಕಡಾವಾರಾಗಿ ಒಟ್ಟು ಬಜೆಟ್ ವೆಚ್ಚವು 2020-21 ರಲ್ಲಿ 17.8 ಶೇಕಡಾ ಇದ್ದದ್ದು 2022-23 ರ ಬಜೆಟ್ ಅಂದಾಜಿನಲ್ಲಿ ಶೇಕಡಾ 15.3 ಕ್ಕೆ ಇಳಿದಿದೆ.
ರಾಜ್ಯ ಸರಕಾರಗಳಿಗೆ ವರ್ಗಾವಣೆಗಳು 2021-22 ರ ಪರಿಷ್ಕೃತ ಅಂದಾಜಿನಲ್ಲಿ ಜಿಡಿಪಿಯ 6.91% ಇದ್ದರೆ, 2022-23 ರ ಬಜೆಟಿನಲ್ಲಿ 6.25%ಕ್ಕೆ ಇಳಿಯುತ್ತವೆ.
ರೈತರಿಗಾಗಿ ಇರುವ ಎಲ್ಲಾ ಪ್ರಮುಖ ಯೋಜನೆಗಳಿಗೆ ಬಜೆಟ್ ಹಂಚಿಕೆಗಳಲ್ಲಿ ಕಡಿತ ಕಂಡುಬಂದಿದೆ. ಎಲ್‌ಪಿಜಿ ಸಬ್ಸಿಡಿಯಲ್ಲಿ ಕಳೆದ ವರ್ಷದ 60% ಕಡಿತದ ನಂತರ 2022-23 ರ ಬಜೆಟ್‌ನಲ್ಲಿ ಮತ್ತೆ ಶೇಕಡಾ 60 ರಷ್ಟು ಕಡಿತವನ್ನು ವಿಧಿಸಲಾಗಿದೆ. ಸೂಪರ್ ಶ್ರೀಮಂತರ ಮೇಲೆ ತೆರಿಗೆ ವಿಧಿಸುವ ಮತ್ತು ಈ ಸಂಪನ್ಮೂಲಗಳನ್ನು ಬಹುಪಾಲು ಬಳಲುತ್ತಿರುವ ಜನರಿಗೆ ಪರಿಹಾರವನ್ನು ಒದಗಿಸಲು ಬಳಸುವ ಯಾವುದೇ ಪ್ರಸ್ತಾಪವಿಲ್ಲ.
ಬಹುಪಾಲು ಜನರು ಉದ್ಯೋಗ ನಷ್ಟ ಮತ್ತು ನಿಜ ಆದಾಯದಲ್ಲಿ ಭಾರಿ ಕಡಿತವನ್ನು ಎದುರಿಸುತ್ತಿರುವ ಆರ್ಥಿಕ ಸನ್ನಿವೇಶದ ಹಿನ್ನೆಲೆಯಲ್ಲಿ ಹಣಕಾಸು ಸಚಿವರು 2022 ರ ಬಜೆಟ್ ಅನ್ನು ಮಂಡಿಸಿದರು. ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಡಿಪಿಯು ಮಹಾಸೋಕಿನ ಪೂರ್ವದ ಮಟ್ಟವನ್ನು ತುಸುಮಟ್ಟಿಗೆ ದಾಟುತ್ತದೆ ಎಂದು ಅಂದಾಜಿಸಲಾಗಿದೆ. ಖಾಸಗಿ ಬಳಕೆಯ ವೆಚ್ಚವು ಈಗಲೂ ಮಹಾಸೋಂಕಿನ ಪೂರ್ವದ ಮಟ್ಟಕ್ಕಿಂತ ಇನ್ನೂ ಕಡಿಮೆಯೇ ಇದೆ. ಮತ್ತು ಕೈಗಾರಿಕೆಗಳು ತಮ್ಮ ಉತ್ಪಾದನಾ ಸಾಮರ್ಥ್ಯದ ಪೂರ್ಣಬಳಕೆ ಮಾಡಲಾಗದಿರುವ , ದಾಸ್ತಾನುಗಳೇ ಹೆಚ್ಚುತ್ತಿರುವ ಪರಿಸ್ತಿತಿಯನ್ನು ಎದುರಿಸುತ್ತಿವೆ, ಮುಖ್ಯವಾಗಿ ಅರ್ಥವ್ಯವಸ್ಥೆಯಲ್ಲಿ ಸಾಕಷ್ಟು ಬೇಡಿಕೆಯಿಲ್ಲ. ಇಂತಹ ಸನ್ನಿವೇಶದಲ್ಲಿ ಬಜೆಟ್‌ನಲ್ಲಿ ಅಗತ್ಯವಿದ್ದದ್ದು ಉದ್ಯೋಗ ಸೃಷ್ಟಿ ಮತ್ತು ಆಂತರಿಕ ಬೇಡಿಕೆಯನ್ನು ಹೆಚ್ಚಿಸುವತ್ತ ಒಂದು ದೊಡ್ಡ ಒತ್ತು. ಈ ಪ್ರಶ್ನೆಗಳನ್ನು ಪರಿಹರಿಸುವಲ್ಲಿ ಬಜೆಟ್ ಸಂಪೂರ್ಣ ವಿಫಲವಾಗಿದೆ. ನಗರ ಉದ್ಯೋಗ ಖಾತ್ರಿ ಯೋಜನೆಯೊಂದನ್ನು ತರಬೇಕಾಗಿತ್ತು. ಇದಕ್ಕೆ ವ್ಯತಿರಿಕ್ತವಾಗಿ, ವೆಚ್ಚವನ್ನು ಮನರೇಗ ಸ್ಕೀಮಿಗೆ 25,000 ಕೋಟಿ ರೂ.ಗಳ ಕಡಿತ ಮಾಡಲಾಗಿದೆ ಮತ್ತು ಆಹಾರ, ಇಂಧನ ಮತ್ತು ರಸಗೊಬ್ಬರ ಸಬ್ಸಿಡಿಗಳನ್ನು ಕಡಿತಗೊಳಿಸಲಾಗಿದೆ , ಆರೋಗ್ಯ ಮತ್ತು ಗ್ರಾಮೀಣ ಅಭಿವೃದ್ಧಿಗೆ ಹಂಚಿಕೆಗಳಲ್ಲಿಯೂ ಕಡಿತವಾಗಿದೆ.
ಒಟ್ಟು ಬಜೆಟ್ ವೆಚ್ಚದಲ್ಲಿ ರೂ. 2021-22 ರ ಪರಿಷ್ಕೃತ ಅಂದಾಜಿಗಿಂತ 1,74,909 ಕೋಟಿ ರೂ.ಗಳಷ್ಟು ಹೆಚ್ಚಳದ ಪ್ರಸ್ತಾಪವಿದೆ. ಆದರೆ ಜಿಡಿಪಿ ಯ ಶೇಕಡಾವಾರಾಗಿ ಒಟ್ಟು ವೆಚ್ಚವು 2020-21 ರಲ್ಲಿ 17.8 ಶೇಕಡಾ ಇದ್ದದ್ದು 2022-23 ರ ಬಜೆಟ್ ಅಂದಾಜಿನಲ್ಲಿ ಶೇಕಡಾ 15.3 ಕ್ಕೆ ಇಳಿದಿದೆ. ಮಹಾಸೋಂಕಿನ ಸಮಯದಲ್ಲಿ ಮುಖ್ಯವಾಗಿ ಕಾರ್ಪೊರೇಟ್‌ಗಳು ಲಾಭಗಳನ್ನು ಕಲೆಹಾಕಲು ಸಾಧ್ಯವಾಗಿರುವುದರಿಂದಾಗಿ ರೆವಿನ್ನೂ ಆದಾಯ ಬೆಳೆದಿದೆ, ಹೆಚ್ಚಿನ ಕಾರ್ಪೊರೇಟ್ ತೆರಿಗೆ ಸಂಗ್ರಹ ಮತ್ತು ಜಿಎಸ್‌ಟಿ , ಪೆಟ್ರೋಲಿಯಂ ಬೆಲೆಗಳ ಹೆಚ್ಚಳ ಮತ್ತು ಸಾಮಾನ್ಯ ಜನರ ಮೇಲೆ ವಿಧಿಸಲಾದ ಪರೋಕ್ಷ ತೆರಿಗೆಗಳ ಮೂಲಕ ಗಳಿಕೆ ಹೆಚ್ಚಿದೆ. ಆದಾಗ್ಯೂ ವೆಚ್ಚದ ಬೆಳವಣಿಗೆಯು ಆದಾಯದ ಸ್ವೀಕೃತಿಗಳ ಬೆಳವಣಿಗೆಗಿಂತ ತೀರಾ ಕಡಿಮೆಯಾಗಿದೆ ಮತ್ತು ನಿಜಮೌಲ್ಯದಲ್ಲಿ ಕಳೆದ ವರ್ಷದ ಪರಿಷ್ಕೃತ ಅಂದಾಜಿಗಿಂತಲೂ ಕಡಿಮೆಯಾಗಿದೆ.
ಹಿಂಡಿರುವುದು ಕೇವಲ ಕೇಂದ್ರ ಸರ್ಕಾರದ ವೆಚ್ಚಗಳನ್ನಷ್ಟೇ ಅಲ್ಲ. ರಾಜ್ಯಗಳಿಗೆ ಸಂಪನ್ಮೂಲಗಳ ವರ್ಗಾವಣೆಯನ್ನು ಕೂಡ ಹಿಸುಕುವ ಮೂಲಕ, ರಾಜ್ಯ ಸರ್ಕಾರಗಳನ್ನು ಸಹ ಅದೇ ರೀತಿ ಮಾಡಲು ಒತ್ತಾಯಿಸಲಾಗುತ್ತಿದೆ. ಈ ವರ್ಗಾವಣೆಗಳು 2021-22 ರ ಪರಿಷ್ಕೃತ ಅಂದಾಜಿನಲ್ಲಿ ಜಿಡಿಪಿಯ 6.91% ಇದ್ದರೆ, 2022-23 ರ ಬಜೆಟಿನಲ್ಲಿ 6.25%ಕ್ಕೆ ಇಳಿಯುತ್ತವೆ.
ರೈತರಿಗಾಗಿ ಎಲ್ಲಾ ಪ್ರಮುಖ ಯೋಜನೆಗಳಿಗೆ ಬಜೆಟ್ ಹಂಚಿಕೆಗಳಲ್ಲಿ ಕಡಿತ ಕಂಡುಬಂದಿದೆ. ರೈತರು ಕಾನೂನುಬದ್ಧವಾಗಿ ಖಾತರಿಪಡಿಸಿದ ಕನಿಷ್ಟ ಬೆಂಬಲ ಬೆಲೆ(ಎಂಎಸ್‌ಪಿ)ಗಾಗಿ ಹೆಣಗಾಡುತ್ತಿರುವ ಸಮಯದಲ್ಲಿ ಎಫ್‌ಸಿಐಗೆ ಮತ್ತು ವಿಕೇಂದ್ರೀಕರಣದ ಖರೀದಿ ಯೋಜನೆಯಡಿಯಲ್ಲಿ ಸಂಗ್ರಹಣೆಗಾಗಿ ಹಣಹಂಚಿಕೆಯನ್ನು ಸುಮಾರು 28 %ದಷ್ಟು ಕಡಿಮೆ ಮಾಡಲಾಗಿದೆ. ರಸಗೊಬ್ಬರ ಸಬ್ಸಿಡಿಗೆ ಹಣ ಹಂಚಿಕೆಯಲ್ಲಿ ಶೇ.25ರಷ್ಟು ಕಡಿತ ಮಾಡಲಾಗಿದೆ. ಪಿಎಂ-ಕಿಸಾನ್ ಅಡಿಯಲ್ಲಿ, 12.5 ಕೋಟಿ ರೈತ ಕುಟುಂಬಗಳಿಗೆ ರೂ. ತಲಾ 6000 ರೂ.ಗಳನ್ನು ಕೊಡಲು 75000 ಕೋಟ ಬೇಕು. ಆದರೆ ಕೊಟ್ಟಿರುವುದು ಕೇವಲ ರೂ. 68000 ಕೋಟಿ. ಫಸಲ್ ಭೀಮಾ ಯೋಜನೆಗೆ ಹಂಚಿಕೆಯೂ ಸುಮಾರು 500 ಕೋಟಿಗಳಷ್ಟು ಇಳಿದಿದೆ.
ಇತ್ತೀಚಿನ ವರ್ಷಗಳಲ್ಲಿ ಸರ್ಕಾರ ಮಕ್ಕಳ ಕಲ್ಯಾಣಕ್ಕೆ ಮೀಸಲಿಟ್ಟ ಅಲ್ಪಸ್ವಲ್ಪ ಹಣವನ್ನೂ ಖರ್ಚು ಮಾಡಿಲ್ಲ. ಮಕ್ಕಳ ಕಲ್ಯಾಣ ವೆಚ್ಚದ ಪರಿಷ್ಕೃತ ಅಂದಾಜು ರೂ. ಬಜೆಟ್ ಅಂದಾಜಿಗಿಂತ 5700 ಕೋಟಿ ಕಡಿಮೆಯಾಗಿದೆ. ಶಾಲೆಗಳು ಮತ್ತು ಅಂಗನವಾಡಿಗಳ ಮುಚ್ಚುವಿಕೆಯ ವಿನಾಶಕಾರಿ ಪರಿಣಾಮವನ್ನು ನಿಭಾಯಿಸಲು ಮಕ್ಕಳಿಗೆ ಸಹಾಯ ಮಾಡಲು ಏನನ್ನೂ ಮಾಡಲಾಗಿಲ್ಲ.
ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಬುಡಕಟ್ಟುಗಳ ಕಲ್ಯಾಣಕ್ಕಾಗಿ ನಿಧಿಗಳ ಹಂಚಿಕೆಯು ಅಂಕಿಅಂಶಗಳಲ್ಲಿ ಮೇಲ್ನೋಟಕ್ಕೆ ತುಸು ಹೆಚ್ಚಳವನ್ನು ತೋರಿಸುತ್ತದೆ ಆದರೆ ಹಣದುಬ್ಬರವನ್ನು ಪರಿಗಣನೆಗೆ ತಗೊಂಡರೆ ನಿಜ ಮೌಲ್ಯದಲ್ಲಿ ಕಡಿಮೆಯಾಗಿದೆ. ಅದೇ ರೀತಿ, ಮಧ್ಯಾಹ್ನದ ಊಟದ ಯೋಜನೆಯನ್ನು ಪಿಎಂ ಪೋಶನ್ ಎಂದು ಮರುನಾಮಕರಣ ಮಾಡುವುದರಿಂದ ಬಜೆಟ್ ಹಂಚಿಕೆ ರೂ.10,234 ಕೋಟಿಗಿಂತ ಹೆಚ್ಚೇನೂ ಆಗಿಲ್ಲ. ಕಳೆದ ವರ್ಷದಲ್ಲಿ ಶೇಕಡಾ 35 ರಷ್ಟು ಮಕ್ಕಳು ಮಧ್ಯಾಹ್ನದ ಊಟವನ್ನು ಪಡೆಯಲಿಲ್ಲ. ನಾರಿಶಕ್ತಿ 2 ಲಕ್ಷ ಅಂಗನವಾಡಿಗಳನ್ನು ಮೇಲ್ದರ್ಜೆಗೇರಿಸುವುದಾಗಿ ಹೇಳಿದ ಹಣಕಾಸು ಸಚಿವರು, ಅದಕ್ಕೆ ಹಂಚಿಕೆಯನ್ನು ಮಾತ್ರ ಕಳೆದ ಪರಿಷ್ಕೃತ ಅಂದಾಜಿನ 20,000 ಕೋಟಿ ರೂ.ಗಳಲ್ಲೇ ಸ್ಥಗಿತಗೊಳಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ಎಲ್‌ಪಿಜಿ ಸಬ್ಸಿಡಿಯಲ್ಲಿ ಭಾರಿ ಕಡಿತ ಮಾಡಲಾಗಿದೆ. ಕಳೆದ ವರ್ಷ, ಹಂಚಿಕೆಯನ್ನು 60 ಪ್ರತಿಶತದಷ್ಟು ಕಡಿತಗೊಳಿಸಲಾಯಿತು ಮತ್ತು 2022-23 ರ ಬಜೆಟ್‌ನಲ್ಲಿ ಮತ್ತೆ ಶೇಕಡಾ 60 ರಷ್ಟು ಕಡಿತವನ್ನು ವಿಧಿಸಲಾಗಿದೆ. ಇ-ಶ್ರಮ್ ಪೋರ್ಟಲ್‌ಗಳ ಮೂಲಕ ನೋಂದಾಯಿಸಲ್ಪಟ್ಟ ಅಸಂಘಟಿತ ಕಾರ್ಮಿಕರಿಗೆ ಯಾವುದೇ ಹೊಸ ಬಜೆಟ್ ಹಂಚಿಕೆಯನ್ನು ಮಾಡಲಾಗಿಲ್ಲ.
ಕಳೆದ ಎರಡು ವರ್ಷಗಳ ಮಹಾಸೋಂಕಿನ ಸಮಯದಲ್ಲಿ, ಶ್ರೀಮಂತರು ಮತ್ತಷ್ಟು ಶ್ರೀಮಂತರಾಗಿದ್ದಾರೆ. ಆಕ್ಸ್‌ಫ್ಯಾಮ್ ಪ್ರಕಾರ, ಭಾರತದ ಶ್ರೀಮಂತ ಕುಟುಂಬಗಳ ಸಂಪತ್ತು 2021 ರಲ್ಲಿ ದಾಖಲೆಯ ಎತ್ತರವನ್ನು ತಲುಪಿದೆ. ಭಾರತದಲ್ಲಿ ಅಗ್ರ ಹತ್ತು ಮಂದಿ ಸಂಪತ್ತಿನ ಶೇಕಡಾ 57 ರಷ್ಟು ಹೊಂದಿದ್ದಾರೆ. ಆದರೂ, ಈ ಸೂಪರ್ ಲಾಭಗಳ ಮೇಲೆ ತೆರಿಗೆ ವಿಧಿಸುವ ಮತ್ತು ಈ ಸಂಪನ್ಮೂಲಗಳನ್ನು ಬಹುಪಾಲು ಬಳಲುತ್ತಿರುವ ಜನರಿಗೆ ಪರಿಹಾರವನ್ನು ಒದಗಿಸಲು ಬಳಸುವ ಯಾವುದೇ ಪ್ರಸ್ತಾಪವಿಲ್ಲ.
ಆದ್ದರಿಂದ, 2022-23 ರ ಬಜೆಟ್ ಸಾಮಾನ್ಯ ಜನರಿಗೆ ಪರಿಹಾರವನ್ನು ಒದಗಿಸುವ ಆದ್ಯತೆಗಳನ್ನು ಗುರುತಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಇದೊಂದು ವಿಶ್ವಾಸದ್ರೋಹ ಎಂದಿರುವ ಸಿಪಿಐ(ಎಂ) ಪೊಲಿಟ್‍ಬ್ಯುರೊ ಈ ಜನವಿರೋಧಿ ಕಾರ್ಪೊರೇಟ್-ಪರ ಬಜೆಟ್ ವಿರುದ್ಧ ಪ್ರತಿಭಟಿಸುವಂತೆ ಮತ್ತು ಆದಾಯ ತೆರಿಗೆ ವ್ಯಾಪ್ತಿಯ ಹೊರಗಿನ ಎಲ್ಲಾ ಕುಟುಂಬಗಳಿಗೆ ಮಾಸಿಕ 7,500 ನೇರ ನಗದು ವರ್ಗಾವಣೆ ಗೆ ಹಾಗೂ ಉಚಿತ ಆಹಾರ ಕಿಟ್‌ಗಳ ವಿತರಣೆಗೆ ಆಗ್ರಹಿಸಬೇಕು ಎಂದು ಕರೆ ನೀಡಿದೆ.