ಭೂಹಳ್ಳಿಯ ಬುದ್ಧೇಶ್ವರ – ಚನ್ನಪಟ್ಟಣದ ಜೀವೇಶ್ವರ!

-ಡಾ. ವಡ್ಡಗೆರೆ ನಾಗರಾಜಯ್ಯ

“ನಾನು ಸತ್ತ ನಂತರವೂ ನಮ್ಮೂರಿನ ಕವಿವನದ ಗಿಡಗಳ ಬೇರುಗಳಿಗೆ ಗೊಬ್ಬರವಾಗಿ ಮತ್ತೆ ನಾನು ಆ ಮರಗಿಡಗಳ ಚಿಗುರಿನಲ್ಲಿ ನಗಬೇಕೆಂಬ ಆಸೆ ನನಗಿದೆ ಕವಿಗಳೇ” ಎಂದು ಅತ್ತ ಕಡೆಯ ಫೋನ್ ತುದಿಯಿಂದ ಆ ಕವಿಹೃದಯದ ಒಡಲ ದನಿಯನ್ನು ಕೇಳಿಸಿಕೊಂಡ ತಕ್ಷಣವೇ ಇತ್ತ ಕಡೆಯ ಫೋನ್ ತುದಿಯಲ್ಲಿದ್ದ ನನಗೆ ನನ್ನ ಅರಿವಿಗಿಲ್ಲದಂತೆ ಕೆನ್ನೆಗಳ ಮೇಲೆ ಕಣ್ಣೀರು ಹರಿಯತೊಡಗಿದವು. ನಾನು ಬಿಕ್ಕಿ ಬಿಕ್ಕಿ ಅಳಲಾಂಂಭಿಸಿದೆ. ದುಃಖ ತಡೆಯಲಾರದೆ ಫೋನ್ ಸಂಭಾಷಣೆಯನ್ನು ಮೊಟುಕುಗೊಳಿಸಿ ಗೋಡೆಗೊರಗಿ ಗೋಡೆಯ ಮೇಲೆ ಮುಖವಿಟ್ಟು ಅಳುತ್ತಿದ್ದೆ. ನನ್ನನ್ನು ಸಮಾಧಾನಪಡಿಸಲು ಆ ಕವಿ ಹೃದಯ ಮತ್ತೆ ನನ್ನೊಂದಿಗೆ ಮಾತಾಡತೊಡಗಿತು. ನನ್ನನ್ನು ಇಷ್ಟೊಂದು ಕಲಕಿ ಆರ್ಧ್ರಗೊಳಿಸಿದವರು ಕವಿ ಭೂಹಳ್ಳಿ ಪುಟ್ಟಸ್ವಾಮಿ. ಈ ಘಟನೆ ನಡೆದದ್ದು 2007ನೇ ಇಸವಿಯ ಒಂದು ರಾತ್ರಿ.

ಕವಿ, ಪರಿಸರವಾದಿ, ಚಿಂತಕ, ಭೂಹಳ್ಳಿ ಪುಟ್ಟಸ್ವಾಮಿ ಕಳೆದ ಇಪ್ಪತ್ತು ವರ್ಷಗಳಿಂದ ನನಗೆ ಆತ್ಮೀಯ ಗೆಳೆಯರಾಗಿದ್ದಾರೆ. ಇಪ್ಪತ್ತು ವರ್ಷಗಳ ಹಿಂದೆ, ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಭೂಹಳ್ಳಿ ಗ್ರಾಮದ ಪುಟ್ಟಸ್ವಾಮಿಯವರು, “ಸ್ವಾತಂತ್ರ್ಯಕ್ಕೆ ಜೀವವಿದೆ” ಎಂಬ ತಮ್ಮ ಕವನ ಸಂಕಲನವನ್ನು ನನಗೆ ಬರೆದುಕೊಟ್ಟು ತಮ್ಮನ್ನು ಕವಿ- ಇತಿಹಾಸ ಉಪನ್ಯಾಸಕ ಎಂದು ಪರಿಚಯ ಮಾಡಿಕೊಂಡರು. ಅವರು ಪರಿಚಯವಾದ ಆ ದಿನ ಮಧ್ಯಾಹ್ನ ಬೆಂಗಳೂರು ಕೆ.ಆರ್.ಸರ್ಕಲ್ ಬಳಿಯಿದ್ದ ಪದವಿ ಪೂರ್ವ ಶಿಕ್ಷಣ ಮಂಡಲಿ ಕಚೇರಿಯ ಎದುರಿಗಿದ್ದ ಮರದ ನೆರಳಿನಲ್ಲಿ ನಿಂತಿದ್ದ ನನ್ನನ್ನು ಗೆಳೆಯ ಡಾ. ಬಾಲಗುರುಮೂರ್ತಿ, ಹತ್ತಿರದ ಕಾಫಿ ಕ್ಯಾಂಟೀನಿಗೆ ಬರುವಂತೆ ಕ್ಯಾಂಟೀನ್ ಬಾಗಿಲಲ್ಲಿ ನಿಂತು ಕೂಗಿ ಕರೆಯುತ್ತಿದ್ದ. ಹತ್ತಿರ ಹೋದ ಕೂಡಲೇ ಈ ಕವಿ ಭೂಹಳ್ಳಿ ಪುಟ್ಟಸ್ವಾಮಿ “ಸ್ವಾತಂತ್ರ್ಯಕ್ಕೆ ಜೀವವಿದೆ” ಸಂಕಲನವನ್ನು ನನ್ನ ಕೈಗಿರಿಸಿದ್ದರು. ಅಂದಿನಿಂದಲೂ ನಾನು ಮತ್ತು ಪುಟ್ಟಸ್ವಾಮಿ ಆತ್ಮೀಯರಾದೆವು.

“ಸ್ವಾತಂತ್ರ್ಯಕ್ಕೆ ಜೀವವಿದೆ” ಕವನ ಸಂಕಲನದ ಪುಟಗಳನ್ನು ತೆರೆದು ಓದುತ್ತಾ ಹೋದಂತೆ ಅವರೊಳಗಿದ್ದ ಒಬ್ಬ ಅಪ್ಪಟ ಹಳ್ಳಿಗಾಡಿನ ರೈತಾಪಿಯ ಮಣ್ಣಿನ ಭಾಷೆಯ ಪಿಸುಮಾತುಗಳು ನನ್ನ ಹೃದಯದ ಕವಾಟಗಳನ್ನು ತಟ್ಟಿದವು. 2007 ರ ಯಾವುದೋ ಒಂದು ದಿನ ರಾತ್ರಿ ಹತ್ತು ಗಂಟೆಯ ಸುಮಾರಿನಲ್ಲಿ ನನಗೆ ಫೋನ್ ಮಾಡಿ, ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಭೂಹಳ್ಳಿ ಗ್ರಾಮದ ಪಾಳುಬಿದ್ದ ಸರ್ಕಾರಿ ಗೋಮಾಳದ ಗುಂಡುತೋಪಿನಲ್ಲಿ ಅವರು ನಿರ್ಮಿಸುತ್ತಿದ್ದ ಕವಿವನದ ಬಗ್ಗೆ ತಮಗಿದ್ದ ಕನಸುಗಳನ್ನು ಬಿಚ್ಚಿಟ್ಟರು. ನಮ್ಮ ಮಾತುಗಳು ಮುಗಿದಾಗ ರಾತ್ರಿ ಹನ್ನೆರಡು ಸಮೀಪಿಸಿತ್ತು. ಕನ್ನಡ ಕಾವ್ಯ, ರಾಜಕಾರಣ, ಧರ್ಮ, ಭಾಷೆ ಮುಂತಾದ ಸಂಗತಿಗಳನ್ನು ವ್ಯಾಪಿಸಿಕೊಂಡು ನಮ್ಮ ಮಾತಿನ ಝರಿ ಹರಿದಾಡಿತ್ತು.

ಇದನ್ನೂ ಓದಿ: ಚೇಳೂರು : ಹಾಸ್ಟೆಲ್‌ಗಳ ಸಂಖ್ಯೆ ಹೆಚ್ಚಿಸಲು ವಿದ್ಯಾರ್ಥಿಗಳಿಂದ ಪತ್ರ ಚಳುವಳಿ

“ನಾನು ನಿರ್ಮಿಸುತ್ತಿರುವ ಈ ಕವಿವನ ಬೇಡವೆಂದು ನಮ್ಮೂರಿನ ಕೆಲವು ಜನ ನನ್ನ ವಿರುದ್ಧ ತಿರುಗಿಬಿದ್ದಿದ್ದಾರೆ. ನಾನು ನೆಟ್ಟು ಬೆಳೆಸುತ್ತಿರುವ ಸಸಿಗಳನ್ನು ಕುರಿಮೇಕೆ ಬಿಟ್ಟು ಮೇಯಿಸುತ್ತಿದ್ದಾರೆ. ಗಿಡಮರಗಳಿಗೂ ಜೀವವಿದೆ ಎಂಬುದನ್ನು ನಮ್ಮ ಜನರಿಗೆ ಗೊತ್ತು ಮಾಡುವುದಾದರೂ ಹೇಗೆ? ಆಡುಕುರಿ ದನಗಳು ಮೇಯುವ ಜಾಗದಲ್ಲಿ ನೀವು ಕವಿವನವನ್ನೋ ಕಪಿವನವನ್ನೋ ಬೆಳೆಸಲು ಹೋಗಿ ನಮ್ಮ ಜಾನುವಾರು ಮೇಯಲು ಜಾಗವಿಲ್ಲದಂತೆ ಮಾಡುತ್ತಿದ್ದೀರಿ. ಇಂತಹ ವನವನ್ನು ನಿರ್ಮಿಸಬೇಕೆಂಬ ಆಸೆ ನಿಮಗಿದ್ದರೆ ನಿಮ್ಮ ಸ್ವಂತ ಜಮೀನಿನಲ್ಲಿ ನಿರ್ಮಿಸಿಕೊಳ್ಳಿರಿ. ನಿಮ್ಮ ಆಸೆಗೆ ಸರ್ಕಾರಿ ಜಾಗವನ್ನೇಕೆ ಬಳಸಿಕೊಳ್ಳುವಿರಿ? ಹೀಗೆಲ್ಲಾ ಪ್ರಶ್ನಿಸುತ್ತಿದ್ದಾರೆ… ನಾನೇನು ಮಾಡಲಿ ಹೇಳಿ ಕವಿಗಳೇ?” ಎಂದು ಅವರ ಸಂಕಟವನ್ನು ನನ್ನೆದೆಗೆ ಹಾಕಿದ್ದರು.

“ನಿಮ್ಮೂರಿನ ಪಾಳುಬಿದ್ದ ಗುಂಡುತೋಪಿನಲ್ಲಿ ವನ ಬೆಳೆಯಿತೆಂದರೆ ಇಡೀ ಊರಿಗೇ ಅದರ ಪ್ರಯೋಜನವಿದೆ. ಜನ ಜಾನುವಾರುಗಳಿಗಷ್ಟೇ ಏಕೆ ಪ್ರಾಣಿಪಕ್ಷಿಗಳಿಗೂ ಪ್ರಯೋಜನಗಳಿವೆ. ಮುಂದಿನ ತಲೆಮಾರು ನಿಮ್ಮನ್ನು ಕೃತಜ್ಙತೆಯಿಂದ ನೆನೆಯುತ್ತದೆ. ನೀವು ಯಾರದೇ ಪ್ರಶ್ನೆಗಳಿಗೆ ಅಂಜದಿರಿ, ಅಳುಕದಿರಿ. ಇಷ್ಟಕ್ಕೂ ನೀವು ಯಾರ ಮುಂದೆಯೂ ಕೈಯೊಡ್ಡಿ ಸಹಾಯ ಯಾಚಿಸುತ್ತಿಲ್ಲ. ನಿಮ್ಮದೇ ಸರ್ಕಾರಿ ನೌಕರಿಯ ವೇತನವನ್ನು ಭರಿಸುತ್ತಾ ನೀವು ಈ ಕೆಲಸಕ್ಕೆ ಕೈಹಾಕಿದ್ದೀರಿ. ನಿಮ್ಮ ಈ ಪ್ರಯತ್ನವನ್ನು ಮಾತ್ರ ಯಾವುದೇ ಕಾರಣಕ್ಕೂ ನಿಲ್ಲಿಸದಿರಿ” ಎಂದು ನಾನು ಹೇಳತೊಡಗಿದೆ. “ನಾನು ಸತ್ತ ನಂತರವೂ ನಮ್ಮೂರಿನ ಕವಿವನದ ಗಿಡಗಳ ಬೇರುಗಳಿಗೆ ಗೊಬ್ಬರವಾಗಿ ಮತ್ತೆ ನಾನು ಆ ಮರಗಿಡಗಳ ಚಿಗುರಿನಲ್ಲಿ ನಗಬೇಕೆಂಬ ಆಸೆ ನನಗಿದೆ ಕವಿಗಳೇ. ಆ ಮೂಲಕ ನಾನು ಯಾವತ್ತಿಗೂ ಸಾಯದೆ ಬದುಕಿರುತ್ತೇನೆ” ಎಂದು ತಮಗಿರುವ ಜೀವಪ್ರೀತಿಯ ಮಹದಾಸೆಯನ್ನು ಹೇಳಿಕೊಂಡರು ಪುಟ್ಟಸ್ವಾಮಿ.

ಇದಾದ ಎರಡು ವರ್ಷಗಳ ನಂತರ 2009 ರ ಆಗಸ್ಟ್ ತಿಂಗಳಿನಲ್ಲಿ ಕವಿ ಎಲ್.ಎನ್.ಮುಕುಂದರಾಜ್ ಅವರ ಮನೆಯಲ್ಲಿ ಭೂಹಳ್ಳಿ ಪುಟ್ಟಸ್ವಾಮಿಯವರು ಸಿಕ್ಕಿದಾಗ,ಅವರ “ಸ್ವಾತಂತ್ರ್ಯಕ್ಕೆ ಜೀವವಿದೆ” ಕವನ ಸಂಕಲನದ ಬಗ್ಗೆ, ಕವಿವನದ ಗಿಡಗಳು ಮಳೆಯಿಲ್ಲದೇ ಒಣಗಿಹೋಗುತ್ತಿರುವುದರ ಬಗ್ಗೆ , ಅವುಗಳನ್ನು ರಕ್ಷಿಸಿಕೊಳ್ಳಲು ಪಕ್ಕದ ಜಮೀನ್ದಾರರ ಹೊಲಗದ್ದೆಗಳ ಪಂಪ್ ಸೆಟ್ಟುಗಳಿಂದ ನೀರನ್ನು ಖರೀದಿಸಿ ಸಸಿಗಳ ಬೇರುಗಳಿಗೆ ನೀರುಣಿಸುತ್ತಿರುವ ಅವರ ಬಿಕ್ಕಟ್ಟಿನ ಬಗ್ಗೆ ಹಾಗೂ ಆಡುಕುರಿಗಳು ದನಕರುಗಳು ಕವಿವನದ ಸಸಿಗಳನ್ನು ತಿಂದು ನಾಶಪಡಿಸದಿರಲೆಂದು ಹಸಿರು ಬೇಲಿ ನಿರ್ಮಿಸುತ್ತಿರುವುದರ ಬಗ್ಗೆ ಸಾಕಷ್ಟು ಮಾತನಾಡಿದೆವು.

ಊರಿನ ಜನರಿಗೆ ಕವಿವನದ ಪ್ರಾಮುಖ್ಯತೆಯನ್ನು ಮತ್ತಷ್ಟು ಅರ್ಥಮಾಡಿಸಲು ಪರಿಸರ ಚಿಂತನೆ ಹಂಚುವ ಕವಿಗೋಷ್ಠಿಯನ್ನೋ ಸಾಹಿತ್ಯದ ಕಮ್ಮಟವನ್ನೋ ಕವಿವನದಲ್ಲಿ ಏರ್ಪಡಿಸಬೇಕೆಂದು ಆಲೋಚಿಸಿದೆವು. ಆ ನಮ್ಮ ಆಲೋಚನೆ ಫಲ ಕೊಟ್ಟಿದ್ದು ಅಕ್ಟೋಬರ್ 2009 ರಲ್ಲಿ. ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋನೆಯ ಸ್ವಯಂ ಸೇವಕ ವಿದ್ಯಾರ್ಥಿಗಳು ಹಾಗೂ ಅನೇಕ ಕವಿಗಳು ನಮ್ಮಪ್ರಯತ್ನಕ್ಕೆ ಕೈಜೋಡಿಸಿ 2009 ರ ಅಕ್ಟೋಬರ್ ತಿಂಗಳಿನಲ್ಲಿ ಕವಿವನದಲ್ಲಿ ಕವಿಗೋಷ್ಠಿ ಏರ್ಪಡಿಸಿದೆವು. ಗುಬ್ಬಿ ರಾವಣಾರಾಧ್ಯ, ಸುಜಾತಾ ಕುಮಟಾ, ಟಿ.ಎಚ್.ಲವಕುಮಾರ್, ರಾಮನಗರದ ಪರಿಸರವಾದಿ ಶಿವನಂಜಯ್ಯ ಮುಂತಾದ ಸುಮಾರು ಐವತ್ತು ಜನ ಸೇರಿದೆವು. ಎಲ್ಲರೂ ಬೆಲ್ಲದೊಂದಿಗೆ ಹುರಿದ ಕಡಲೆಕಾಯಿ ತಿಂದುಕೊಂಡು, ಪರಿಸರ ಗೀತೆಗಳನ್ನು ಹಾಡಿಕೊಂಡು, ಪರಿಸರ ಕುರಿತ ಕವಿತೆಗಳನ್ನು ವಾಚಿಸಿಕೊಂಡು, ಪರಿಸರ ಚಿಂತನೆಗಳನ್ನು ಹಂಚಿಕೊಂಡು ಕವಿವನದ ಮಹತ್ವವನ್ನು ಭೂಹಳ್ಳಿ ಗ್ರಾಮದ ಜನರಿಗೆ ಸಾರಿ ಹೇಳಿದೆವು.

ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಭೂಹಳ್ಳಿ ಗ್ರಾಮದ ಕವಿವನದ ಚಿತ್ರಣವೇ ಈಗ ಬದಲಾಗಿಹೋಗಿದೆ. ಹನ್ನೊಂದು ವರ್ಷಗಳ ಹಿಂದೆ ಪಾಳುಬಿದ್ದಿದ್ದ ಮೂರು ಎಕರೆ ಸರ್ಕಾರಿ ಗೋಮಾಳದಲ್ಲೊಂದು ದಟ್ಟ ಕಾಡು ಬೆಳೆದು ನಿಂತಿದೆ. ಆ ಕವಿವನದಲ್ಲಿ ಈಗ ಅರ್ಧನಾರೀಶ್ವರನ ಕಲ್ಪನೆಯಲ್ಲಿ ಕಪ್ಪುಶಿಲೆಯಲ್ಲಿ ಹನ್ನೊಂದು ಅಡಿ ಎತ್ತರದ ಬುದ್ಧೇಶ್ವರನ ಮೂರ್ತಿಯನ್ನು ಕೆತ್ತಿ ನಿಲ್ಲಿಸಲಾಗಿದೆ.ಇದೇ ಮೂರ್ತಿಯಿಂದಾಗಿ ಕವಿವನವು “ಬುದ್ಧೇಶ್ವರ ಧಾಮ” ಎಂಬ ಹೆಸರು ಪಡೆದುಕೊಂಡಿದೆ.

ಬುಧ್ಧ ಸಂಸ್ಕೃತಿ ಮತ್ತು ಶಿವ ಸಂಸ್ಕೃತಿಯ ಸಂಗಮ ಮೂರ್ತಿಯೇ ಈ ಬುದ್ಧೇಶ್ವರ. ಬುದ್ಧೇಶ್ವರ ಧಾಮದ ಮೂಲಕ ಬೋಧಿಯ ನೆರಳು ಮತ್ತು ಶಿವನ ನೆರಳನ್ನು ನಾಡಿಗೆ ನೀಡಿರುವ ವಿಶ್ವಾತ್ಮಕ ಚೇತನ ಭೂಹಳ್ಳಿ.

ಮೂರನೇ ತರಗತಿಯಲ್ಲಿ ಓದುತ್ತಿದ್ದಾಗ ತಮ್ಮದೇ ಹೊಲದ ಅಂಚಿನಲ್ಲಿ ಆಲದ ಕೊನೆಗಳನ್ನು ನೆಟ್ಟು ನೀರು ಹಾಕುವ ಕೆಲಸಕ್ಕೆ ತನ್ನ ಅಣ್ಣನಿಂದ ನೇಮಕವಾದಾಗಲೇ ತನ್ನ ಎದೆಯೊಳಗೆ ಹಸಿರು ಪ್ರೀತಿ ಚಿಗುರಿತೆಂದೂ ಹಾಗೂ ಮುಂದಿನ ಕೆಲವು ವರ್ಷಗಳಲ್ಲಿ ಮರಗಳಾಗಿ ಬೆಳೆದ ಆ ಆಲದ ನೆರಳಿನಲ್ಲಿ ನಿಂತು ತನ್ನ ಊರಿನ ಜನರಿಗಾಗಿ ಹಸಿರು ವನ ನಿರ್ಮಿಸುವ ಕನಸು ಕಂಡರೆಂದೂ…, ಅಂದಿನ ಕನಸು ನನಸಾಯಿತೆಂದೂ ಸಾರ್ಥಕ ಭಾವನೆಯಿಂದ ಹೇಳಿಕೊಳ್ಳುತ್ತಾರೆ ಭೂಹಳ್ಳಿ ಪುಟ್ಟಸ್ವಾಮಿ.

ಅವರು ಕಂಡ ಕನಸನ್ನು ಸಾಕಾರಗೊಳಿಸಲು ಯೋಚಿಸುವಾಗ ಭೂಹಳ್ಳಿ ಎಂಬ ತಮ್ಮದೇ ಪುಟ್ಟ ಗ್ರಾಮದಲ್ಲಿ ಸರ್ಕಾರಿ ಗೋಮಾಳವಾಗಿ ಬರಡು ಬಿದ್ದಿದ್ದ ಮೂರು ಎಕರೆ ಜಾಗ ಅವರ ಅವರ ಕಣ್ಣಿಗೆ ಬಿತ್ತು. ಬರಡು ನೆಲದವ್ವನಿಗೆ ಹಸಿರು ಪತ್ತಲ ಉಡಿಸುವ ಆಸೆ ಚಿಗುರಿದ ಕವಿ ಪುಟ್ಟಸ್ವಾಮಿ ಅಲ್ಲಿ ಗಿಡಗಳನ್ನು ನೆಟ್ಟರು. ಮುಂಗಾರಿನ ಮಳೆಗೆ ಗೋಮಾಳದ ಗಿಡಗಳು ಬಲಿಷ್ಠವಾಗಿ ಬೇರಿಳಿಸಿ ವನರಾಜಿ ದಟ್ಟ ಹಸಿರು ನಗೆ ಬೀರಿದಳು. ಹಕ್ಕಿ ಪಕ್ಷಿಗಳ ಹಿಕ್ಕೆಗಳಿಂದ ನೆಲಕೆ ಬೀಜಗಳೂ ಬಿದ್ದು ಮೊಳಕೆಯೊಡೆದು ಬೇರಿಳಿಸಿ ನಿಂತ ಪರಿಣಾಮದಿಂದಾಗಿ ನೂರೈವತ್ತಕ್ಕೂ ಹೆಚ್ಚು ಪ್ರಭೇದಗಳ ಗಿಡಮರಗಳು ಬೆಳೆದು ಈಗ ಬುದ್ಧೇಶ್ವರ ಧಾಮ ಎಂಬ ಹನ್ನೆರಡು ವರ್ಷ ಪ್ರಾಯದ ಕವಿವನ ಬೆಳೆದು ನಿಂತಿದೆ.

ಭಾರತೀಯ ಶಿಲ್ಪಶಾಸ್ತ್ರದ ಇತಿಹಾಸದಲ್ಲಿ ಅರ್ಧನಾರೀಶ್ವರ ಮೂರ್ತಿ ಮತ್ತು ಕಲಾಚಿತ್ರ ಒಂದು ಪರಂಪರೆಯೇ ಆಗಿ ವಿಕಸಿತಗೊಂಡು ಜನಪ್ರಿಯವಾಗಿದೆ. ಭೂಹಳ್ಳಿಯ ಕವಿವನ ಅಥವಾ ಬುದ್ಧೇಶ್ವರ ಧಾಮದಲ್ಲಿ ಕೆತ್ತಿ ನಿಲ್ಲಿಸಿರುವ ಧ್ಯಾನಸ್ಥ ಬುಧ್ಧೇಶ್ವರನ ಪ್ರತಿಮೆ ಈ ವನದ ಆಕರ್ಷಣೀಯ ಕೇಂದ್ರವಾಗಿದೆ. ಅರ್ಧ ಭಾಗ ಧ್ಯಾನಸ್ಥ ಬುದ್ಧಗುರು ಮತ್ತು ಉಳಿದರ್ಧ ಭಾಗ ಧ್ಯಾನಸ್ಥ ಶಿವನನ್ನು ಕೃಷ್ಣಶಿಲೆಯಲ್ಲಿ ಕೆತ್ತಲಾಗಿದೆ. ಬುದ್ಧಗುರು ಮತ್ತು ಶಿವ ಭಾರತೀಯ ಅಧ್ಯಾತ್ಮದ ಪ್ರಜ್ಞಾ ಪ್ರತೀಕಗಳು. ಇಬ್ಬರೂ ಸಿರಿಮುಡಿ ಜಟಾಜೂಟ ಧ್ಯಾನಸ್ಥ ಮಂದಸ್ಮಿತ ಮೂರ್ತಿಗಳು.

ಬುದ್ಧ ಸಂಸ್ಕೃತಿ ಮತ್ತು ಶಿವ ಸಂಸ್ಕೃತಿಯ ಸಂಗಮ ಪ್ರಜ್ಞೆಯ ಸಂಕೇತವಾಗಿ ಬುದ್ಧೇಶ್ವರ ಮೂರ್ತಿ ನಿರ್ಮಾಣವಾಗಿದೆ. ಮೂರ್ತಿ ನಿರ್ಮಾಣಕ್ಕಾಗಿ ತಮ್ಮದೇ ₹.15 ಲಕ್ಷ ಸ್ವಂತ ದುಡ್ಡನ್ನು ತಮ್ಮ ನಿವೃತ್ತ ಪಿಂಚಣಿ ವೇತನ ಮತ್ತು ಉಳಿತಾಯ ಖಾತೆಯಲ್ಲಿದ್ದ ಹಣದಿಂದ ಪುಟ್ಟಸ್ವಾಮಿ ಖರ್ಚುಮಾಡಿದ್ದಾರೆ ಇಂಥವರು ಈ ಸಮಾಜಕ್ಕೆ ಅನಿವಾರ್ಯ ಅನಿಸುತ್ತದೆ. ಸಮಾಜೋಪಯೋಗಿ ಕೆಲಸಗಳನ್ನು ನಾಗರಿಕ ಮನುಷ್ಯ ತನ್ನ ಯಾವುದೇ ವಯೋಮಾನದಲ್ಲಿ ಪ್ರಾರಂಭಿಸಬಹುದು. ಇಂತಹ ಕಾರ್ಯವೊಂದು ಭೂಹಳ್ಳಿ ಪುಟ್ಟಸ್ವಾಮಿ ಅವರಿಗೆ ನಿವೃತ್ತಿಯ ನಂತರವೂ ಸಾಧ್ಯವಾಗುವುದಾದರೆ ಎಲ್ಲರಿಗೂ ಸಾಧ್ಯವಿದೆ.

ಪುಟ್ಟಸ್ವಾಮಿಯವರ ಹಸಿರು ಪ್ರೀತಿ ಕೇವಲ ತನ್ನ ಊರಿಗಷ್ಟೇ ಸೀಮಿತವಾಗದೆ ತಮ್ಮ ತಾಲ್ಲೂಕು ಕೇಂದ್ರವಾದ ಚನ್ನಪಟ್ಟಣಕ್ಕೂ ವಿಸ್ತರಿಸಿತು. ಚನ್ನಪಟ್ಟಣದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ವರ್ಗಾವಣೆಯಾಗಿ ಬಂದಾಗ ಕವಿಯಾಗಿ ಲೇಖಕನಾಗಿ ತನ್ನ ವಿದ್ಯಾರ್ಥಿಗಳನ್ನು ತನ್ನ ಚಿಂತನೆಗಳಿಂದ ಸೆಳೆದು ಅವರಲ್ಲಿ ಹಸಿರು ಪ್ರೀತಿ ಮೂಡಿಸತೊಡಗಿದರು. ತಮ್ಮದೇ ಕಾಲೇಜು ಮೈದಾನದಲ್ಲಿ ಗಿಡಗಳನ್ನು ನೆಡಿಸಿದ ಬಳಿಕ ಚನ್ನಪಟ್ಟಣದ ನಾಲ್ಕಾರು ಕಡೆಗಳಲ್ಲಿ ಪಾಳುಬಿದ್ದ ಗೋಮಾಳಗಳನ್ನು ಗುರುತಿಸಿ ಸ್ಥಳೀಯ ಸರ್ಕಾರದ ಯಂತ್ರಾಂಗಗಳ ಅನುಮತಿ ಪಡೆದು, ವಿದ್ಯಾರ್ಥಿಗಳ ಸಹಾಯದಿಂದ ಸಸಿಗಳನ್ನು ನೆಟ್ಟು ಉದ್ಯಾನವನಗಳನ್ನು ಬೆಳೆಸತೊಡಗಿದರು.

ಅವುಗಳಿಗೆ ಪುಲಿಕೇಶಿ ವನ, ನೃಪತುಂಗ ವನ, ಕದಂಬ ವನ, ಹೊಯ್ಸಳ ವನ, ಕನ್ನಡ ವನ, ಪಂಪ ವನ ಮುಂತಾದ ಹೆಸರಿನಲ್ಲಿ ಕರೆದು ಕನ್ನಡ ನಾಡು ನುಡಿ ಮತ್ತು ಸಂಸ್ಕೃತಿಯ ಪ್ರತೀಕಗಳೆಂದು ಹೇಳಿಕೊಟ್ಟರು. ಈಗ ಅವರು ಬೆಳೆಸಿದ ಇಂತಹ ಹತ್ತು ವನಗಳು ಪರಿಸರ ಪ್ರೇಮಿಗಳನ್ನು ಸಾಹಿತ್ಯ ಪ್ರೇಮಿಗಳನ್ನು ಕವಿಕಲಾವಿದರನ್ನು ಕೈಬೀಸಿ ಕರೆಯುತ್ತಿವೆ. ತನಗೆ ಕಂಡ ಖಾಲಿ ಜಾಗವನ್ನೆಲ್ಲಾ ಹಸಿರೀಕರಣ ಮಾಡಬೇಕೆಂಬ ಅದಮ್ಯ ಉತ್ಸಾಹದಿಂದ ಅವಿರತವಾಗಿ ದುಡಿಯುತ್ತಿರುವ ಪುಟ್ಟಸ್ವಾಮಿ, ಚನ್ನಪಟ್ಟಣ–ಸಾತನೂರು ರಸ್ತೆಯಲ್ಲಿ ನಿರ್ಮಿಸಿರುವ ವನಕ್ಕೆ ‘ಜಿವೇಶ್ವರ ವನ’ ಎಂದು ಹೆಸರು ಕೊಟ್ಟಿದ್ದಾರೆ. ಕೇವಲ ಮೂರು ವರ್ಷದ ಹಿಂದೆ 4 ಎಕರೆ ಜಾಗದಲ್ಲಿ ನೆಟ್ಟಿರುವ 350 ಕ್ಕೂ ಹೆಚ್ಚು ಸಸಿಗಳು ಇಂದು ಮರಗಳಾಗಬೇಕೆಂಬ ಛಲದಿಂದ ಎಗರಿ ಎಗರಿ ಮುಗಿಲು ಮುಟ್ಟಿಸಿಕೊಳ್ಳುತ್ತಿವೆ.

ಇವೆಲ್ಲಾ ಉದ್ಯಾನವನಗಳು ಸುತ್ತಲಿನ ಜನರ ಆಕರ್ಷಣೆಯ ಕೇಂದ್ರಗಳಾಗಿವೆ. ಇಲ್ಲಿಗೆ ದಣಿವಾರಿಸಿಕೊಳ್ಳಲೆಂದು ಬರುವ ಜನ, ಆಗಾಗ್ಗೆ ಇಲ್ಲಿ ನಡೆಯುವ ಉಪನ್ಯಾಸ ಕಾರ್ಯಕ್ರಮ, ಸಾಹಿತ್ಯ ಸಂವಾದ, ಯುವ ತರಬೇತಿ ಶಿಬಿರ, ಬೆಳದಿಂಗಳ ಕಾರ್ಯಕ್ರಮಗಳು, ಕವಿ ಕಾವ್ಯ ಗಾಯನ ಗೋಷ್ಠಿಗಳಿಗೆ ಆಕರ್ಷಿತರಾಗುತ್ತಿದ್ದಾರೆ. ತಮ್ಮೂರಿನ ಕವಿಮೇಷ್ಟ್ರು ತಮ್ಮೂರಿನಲ್ಲಿ ಮಾತ್ರವಲ್ಲದೆ ಪರ ಊರುಗಳಲ್ಲಿಯೂ ಉದ್ಯಾನ ವನಗಳನ್ನು ಬೆಳೆಸಿದ ಬಗ್ಗೆ ಭೂಹಳ್ಳಿಯ ಜನ ಈಗ ಅಭಿಮಾನದಿಂದ ಮಾತಾಡುತ್ತಿದ್ದಾರೆ.

ಒಂದು ಕಾಲಕ್ಕೆ ಜರಿದು ದೂರವಿಡಲು ಪ್ರಯತ್ನಿಸಿದವರೇ ಈಗ ಈ ಮರಗಳ ನೆರಳಿನಾಶ್ರಯ ಬಯಸಿ ಬರುತ್ತಿದ್ದಾರೆ. ಈ ವನಗಳು ಅನೇಕ ಪ್ರಭೇದಗಳ ಪ್ರಾಣಿಗಳಿಗೆ ಹಕ್ಕಿಪಕ್ಷಿಗಳಿಗೆ ಕ್ರಿಮಿಕೀಟಗಳಿಗೆ ನೆಲೆ ನೀಡಿವೆ. ಇವುಗಳ ಆಹಾರದ ಸಲುವಾಗಿ ಸೀಬೆ, ಸಪೋಟ, ಸೀತಾಫಲ, ನೇರಳೆ, ಮಾವು, ಬೇವು, ಅರಳಿ, ಆಲ, ಬೇಲ ಮುಂತಾದ ಹಲವಾರು ಬಗೆಯ ಫಲಕೊಡುವ ಗಿಡಗಳನ್ನು ನೆಡಲಾಗಿದೆ. ದಾಹ ನೀಗಿಸಲು ಅಲ್ಲಲ್ಲಿ ನೀರಿನ ದೊಡ್ಡ ತೊಟ್ಟಿಗಳನ್ನು ಮತ್ತು ಎತ್ತರದ ಸಿಮೆಂಟ್ ಪಿಲ್ಲರ್ ಗಳ ಮೇಲೆ ನೀರಿನ ಸಣ್ಣ ತೊಟ್ಟಿಗಳನ್ನು ನಿರ್ಮಿಸಲಾಗಿದೆ.

ಪುಟ್ಟಸ್ವಾಮಿ ಹೇಳುತ್ತಾರೆ. “ಹಸಿರೇ ಉಸಿರು. ಅಲ್ಲಿ ಬೆಳೆದು ಓಲಾಡುತ್ತಿರುವ ಒಂದೊಂದು ಬಗೆಯ ಗಿಡಗಳೂ ಈಗ ನನ್ನ ಪಾಲಿನ ಜೀವಂತ ದೇವರುಗಳೇ ಆಗಿವೆ .ಅವನ್ನು ನೋಡುವುದೇ ದೇವರ ದರ್ಶನ. ಅವುಗಳೊಡನೆ ಸಂವಾದಿಸುವುದು ದೇವರ ಜೊತೆಗಿನ ಸಂವಾದ. ಅವುಗಳ ಮೈಸವರಿದರೆ ನನ್ನ ಮೈಮನದಲ್ಲಿ ರೋಮಾಂಚನ – ಹೊಸ ಚೈತನ್ಯದ ಸಂಚಾರ, ಅವ್ಯಕ್ತ ಆನಂದ ದೊರೆಯುತ್ತದೆ.

ಈ ವನಗಳ ಮರಗಿಡಗಳಲ್ಲಿ ಗೂಡುಕಟ್ಟಿ ಕೊಂಬೆಗಳ ಮೇಲೆ ಕುಳಿತು ಹಾಡುವ ವೈವಿಧ್ಯಮಯವಾದ ಹಕ್ಕಿಪಕ್ಷಿಗಳು, ಕ್ರಿಮಿಕೀಟಗಳು, ಇಲ್ಲಿ ಆಶ್ರಯ ಪಡೆಯುವ ಪ್ರಾಣಿಗಳನ್ನು ಕಂಡರೆ ಸುಂದರ ಕಾವ್ಯದ ಓದಿನ ರಸಾನುಭೂತಿ ಅನುಭವಕ್ಕೆ ಬರುತ್ತದೆ. ಇಂತಹ ವನಗಳಿಗೆ ಜನ ನೆರಳಿಗಾಗಿಯೂ ವಿಹಾರಕ್ಕಾಗಿಯೂ ಬರುತ್ತಾರೆ. ಇಲ್ಲಿಗೆ ಬರುವ ಜನ ಮರಗಿಡಗಳ ಮೇಲೆ ಕಾಲೂರಿ ಒಸಕದಿರಲಿ. ಅಲ್ಲೆಲ್ಲಾ ನನ್ನ ಹೃದಯವನ್ನು ಚಾಚಿದ್ದೇನೆ. ಅವರಿಗೆ ನನ್ನ ಹೃದಯ ಕಾಣಿಸಲಿ. ಭೂಮಿನ್ನು ಹಿಸಿರುಡುಗೆಯಿಂದ ಸಿಂಗರಿಸಿದಷ್ಟೂ ನಮಗೆ ಬೇಕಾದ ಪರಿಶುದ್ಧ ಗಾಳಿ ಸಿಕ್ಕುತ್ತದೆ. ಅಂತರ್ಜಲದ ಮಟ್ಟವು ವೃದ್ಧಿಸುತ್ತದೆ. ಮಣ್ಣ ಕೊಚ್ಚಾಣಿಕೆ ಅಥವಾ ಭೂಸವಕಳಿ ತಪ್ಪುತ್ತದೆ. ಭೂಸಾರ ಸಂರಕ್ಷಣೆಯಾಗಿ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ. ಮನುಷ್ಯರಾದ ನಾವು ನಮ್ಮ ಸಹಮಾನವರೊಂದಿಗೆ ಮಾತ್ರವಲ್ಲದೆ ನಮ್ಮ ಸುತ್ತಲಿನ ಜೀವಿಗಳೊಂದಿಗೂ ಸಹಜೀವನ ನಡೆಸಬೇಕಾಗಿದೆ. ಇದನ್ನು ಮರೆಯಬಾರದು”.

ಮೊನ್ನೆ 25.10.2018 ರ ಗುರುವಾರ, ಚನ್ನಪಟ್ಟಣದಿಂದ 2 ಕಿ.ಮೀ.ದೂರದಲ್ಲಿ ಸಾತನೂರು ರಸ್ತೆಯ ಬದಿಯಲ್ಲಿರುವ ಮಹದೇಶ್ವರ ದೇವಾಲಯದ ಎದುರಿನಲ್ಲಿ “ಜೀವೇಶ್ವರ ವನ“ದ ನಾಲ್ಕನೇ ವರ್ಷದ ಹುಟ್ಟು ಹಬ್ಬ ಆಚರಿಸಿದೆವು. ಪ್ರಕೃತಿ – ಸಂಸ್ಕೃತಿ ಚಾರಿಟಬಲ್ ಟ್ರಸ್ಟ್ (ರಿ) ವತಿಯಿಂದ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಡಾ.ಸಿ.ಪಿ.ಸಿದ್ಧಾಶ್ರಮ, ಡಾ.ನಲ್ಲೂರು ಪ್ರಸಾದ್, ಪ್ರೊ.ಚಂದ್ರಶೇಖರ ನಂಗಲಿ, ಡಾ.ವಡ್ಡಗೆರೆ ನಾಗರಾಜಯ್ಯ, ಆರ್.ಜಿ.ಹಳ್ಳಿ ನಾಗರಾಜ್, ಡಾ.ಡಿ.ಆರ್.ಭಗತ್ ರಾಮ್, ಡಾ.ಕಾವೆಂಶ್ರೀ, ಚಂದ್ರ ಮೊಗೇರ, ರಾಮಲಿಂಗೇಶ್ವರ ಸಿಸಿರಾ, ಕೆ.ಆರ್. ಸೌಮ್ಯ ಬಾಗೇಪಲ್ಲಿ ಕೃಷ್ಣಮೂರ್ತಿ ಮುಂತಾದ ಸುಮಾರು ಒಂದು ನೂರರಷ್ಟು ಜನ ಪಾಲ್ಗೊಂಡಿದ್ದೆವು.

ಹಸಿರು ಪರಿಸರದ ನಡುವೆ ಪರಿಸರ ಚಿಂತನೆ – ಕಾವ್ಯ ವಾಚನ – ಗಾಯನ ನಮಗೆ ಮುದನೀಡಿದವು. ಪ್ರೊ.ಚಂದ್ರಶೇಖರ ನಂಗಲಿ ಹೇಳುವಂತೆ “ಭೂಹಳ್ಳಿ ಪುಟ್ಟಸ್ವಾಮಿ ಹಸಿರು ವನಗಳನ್ನು ನಿರ್ಮಾಣ ಮಾಡಿ, ಭೂಮಿತಾಯಿಗೆ ಹಸಿರು ರಕ್ಷಾಬಂಧವನ್ನು ಕಟ್ಟಿದ್ದಾರೆ”. ಹಸಿರು ಉಸಿರಾಗಿ ಹಸಿರೇ ಹೆಸರಾಗಿ ಭೂಹಳ್ಳಿ ಪುಟ್ಟಸ್ವಾಮಿ ಅವರಂತಹ ಚೇತನಗಳ ಸಂಖ್ಯೆ ಸಾವಿರವಾಗಲಿ!

ಇದನ್ನೂ ನೋಡಿ: ಚೇಳೂರು : ಹಾಸ್ಟೆಲ್ ಸಂಖ್ಯೆ ಹೆಚ್ಚಿಸಿ – ವಿದ್ಯಾರ್ಥಿಗಳಿಂದ ಪತ್ರ ಚಳುವಳಿJanashakthi Media

Donate Janashakthi Media

Leave a Reply

Your email address will not be published. Required fields are marked *