ಬೆಂಗಳೂರು: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಪೋಕ್ಸೊ ಪ್ರಕರಣದ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಜುಲೈ 26ಕ್ಕೆ ನಡೆಸಲು ದಿನಾಂಕ ನಿಗದಿಪಡಿಸಿದೆ. ಅಲ್ಲಿಯವರೆಗೆ ಪ್ರಕರಣದಲ್ಲಿ ಖುದ್ದು ಹಾಜರಿಗೆ ಮಾಜಿ ಸಿಎಂಗೆ ಕೋರ್ಟ್ ವಿನಾಯಿತಿ ನೀಡಿದೆ.
ಹೈಕೋರ್ಟ್ ಏಕಸದಸ್ಯ ಪೀಠದಿಂದ ಮಧ್ಯಂತರ ಆದೇಶ ನೀಡಿದ್ದು, ಇತರೆ ಆರೋಪಿಗಳಿಗೂ ಖುದ್ದು ಹಾಜರಿಯಿಂದ ವಿನಾಯಿತಿ ನೀಡಲಾಗಿದೆ. ಆರೋಪಿಗಳ ಬದಲಿಗೆ ವಕೀಲರು ಹಾಜರಾಗಿ ವಿನಾಯಿತಿ ಕೋರಲು ಅವಕಾಶ ನೀಡಲಾಗಿದೆ. ಜುಲೈ 15 ರಂದು ಖುದ್ದಾಗಿ ಹಾಜರಾಗುವಂತೆ ಬಿಎಸ್ವೈಗೆ ಬೆಂಗಳೂರಿನ 1ನೇ ತ್ವರಿತಗತಿ ನ್ಯಾಯಾಲಯ ಸಮನ್ಸ್ ಜಾರಿ ಮಾಡಿತ್ತು. ಆದರೆ, ಖುದ್ದು ಹಾಜರಿಗೆ ಹೈಕೋರ್ಟ್ ವಿನಾಯಿತಿ ನೀಡಿದೆ.
ಇದನ್ನು ಓದಿ : ತಮಿಳುನಾಡಿಗೆ 1 ಟಿಎಂಸಿ ನೀರು ಬಿಡಲು ಕಾವೇರಿ ನೀರು ನಿರ್ವಹಣಾ ಸಮಿತಿ ಶಿಫಾರಸು! ತುರ್ತು ಸಭೆ ಕರೆದ ಸಿಎಂ
ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 27ರಂದು ಸಿಐಡಿ ಅಧಿಕಾರಿಗಳು ಚಾರ್ಜ್ಶೀಟ್ ಸಲ್ಲಿಸಿದ್ದರು. 75 ಸಾಕ್ಷಿಗಳ ಹೇಳಿಕೆ ಸೇರಿದಂತೆ 750 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಲಾಗಿದ್ದು. ಬಿ.ಎಸ್.ಯಡಿಯೂರಪ್ಪ ವಿರುದ್ಧ ಪೋಕ್ಸೊ ಕಾಯ್ದೆ ಸೆಕ್ಷನ್ 8, ಐಪಿಸಿ ಸೆಕ್ಷನ್ಗಳಾದ 354(ಎ), 204, 214 ಅಡಿ, 2ನೇ ಆರೋಪಿ ಅರುಣ್ ಎಂ.ವೈ, 3ನೇ ಆರೋಪಿ ಎಂ.ರುದ್ರೇಶ್ ಮತ್ತು 4ನೇ ಆರೋಪಿ ಜಿ.ಮರಿಸ್ವಾಮಿ ಅವರ ವಿರುದ್ಧ ಐಪಿಸಿ ಸೆಕ್ಷನ್ಗಳಾದ 204, 214ರ ಅಡಿ ಆರೋಪ ಪಟ್ಟಿ ಸಲ್ಲಿಕೆ ಮಾಡಲಾಗಿತ್ತು.
2024ರ ಫೆಬ್ರವರಿ 2ರಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಾರ್ಚ್ 14ರಂದು ಪೋಕ್ಸೊ ಕಾಯ್ದೆ ಅಡಿಯಲ್ಲಿ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು. ಇದಾದ ಬಳಿಕ ಬಿ.ಎಸ್.ಯಡಿಯೂರಪ್ಪ ಅವರು ಸಿಐಡಿ ಅಧಿಕಾರಿಗಳ ವಿಚಾರಣೆಗೂ ಹಾಜರಾಗಿದ್ದರು. ಆದರೆ, ಎಫ್ಐಆರ್ ದಾಖಲಾದ ಮೂರು ತಿಂಗಳ ಬಳಿಕ ಪ್ರಕರಣವೀಗ ಮತ್ತೆ ಮುನ್ನೆಲೆಗೆ ಬಂದಿದೆ. ಜೂನ್ 12ರಂದೇ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಬೇಕು ಎಂಬುದಾಗಿ ಜೂನ್ 11ರಂದೇ ಸಿಐಡಿ ಅಧಿಕಾರಿಗಳು ನೋಟಿಸ್ ನೀಡಿದ್ದರು.
ಇದನ್ನು ನೋಡಿ : ಹಟ್ಟಿ ಚಿನ್ನದ ಗಣಿಯಲ್ಲಿ ಭೂಕುಸಿತ – ಕಾರ್ಮಿಕ ಸಾವು, ನಾಲ್ವರಿಗೆ ಗಂಭೀರಗಾಯ Janashakthi Media