ಲಖನೌ: ಉತ್ತರ ಪ್ರದೇಶ ರಾಜ್ಯದಲ್ಲಿ ಇತ್ತೀಚಿಗೆ ಚುನಾವಣೆ ಪ್ರಕ್ರಿಯೆಗಳು ಮುಗಿದು, ಫಲಿತಾಂಶ ಹೊರಬಂದು, ಬಿಜೆಪಿ ಪಕ್ಷ ಮತ್ತೆ ಅಧಿಕಾರವನ್ನು ಮರಳಿ ಪಡೆದುಕೊಂಡಿದೆ. ಚುನಾವಣಾ ನಂತರದ ಹಲವು ಕೋನಗಳಲ್ಲಿ ವಿಶ್ಲೇಷಣೆಗಳು ವರದಿಯಾಗುತ್ತಿವೆ.
ಅಸಾದುದ್ದೀನ್ ಒವೈಸಿ ನೇತೃತ್ವದ ಎಐಎಂಐಎಂ ಪಕ್ಷವು ಬಿಜೆಪಿಯ ‘ಬಿ’ ಟೀಂ ಎಂಬ ಮಾತುಗಳು ಉತ್ತರ ಪ್ರದೇಶ ಚುನಾವಣೆ ಪ್ರಚಾರದ ವೇಳೆ ಕೇಳಿಬಂದಿದ್ದವು. ಚುನಾವಣಾ ಫಲಿತಾಂಶದ ಬಳಿಕ ಅಂಕಿಅಂಶಗಳನ್ನು ಗಮನಿಸಿದರೆ, ಕೆಲವು ಕ್ಷೇತ್ರಗಳಲ್ಲಿ ಪ್ರತಿಪಕ್ಷಗಳ ಮತಗಳ ಧ್ರುವೀಕರಣಕ್ಕೆ ಎಐಎಂಐಎಂ ಅಭ್ಯರ್ಥಿಗಳು ಕಾರಣರಾಗಿರುವುದು ತಿಳಿದುಬಂದಿದೆ ಎಂದು ‘ಐಎಎನ್‌ಎಸ್’ ಸುದ್ದಿಸಂಸ್ಥೆ ವರದಿ ಮಾಡಿದೆ.
ಉತ್ತರ ಪ್ರದೇಶದ ಏಳು ಕ್ಷೇತ್ರಗಳಲ್ಲಿ ಬಿಜೆಪಿ 200 ಮತಗಳ ಅಂತರದಿಂದ ಗೆಲುವು ಸಾಧಿಸಿದೆ. 23 ಕ್ಷೇತ್ರಗಳಲ್ಲಿ 500 ಮತಗಳಿಂದ ಜಯಗಳಿಸಿದೆ. 49 ಕ್ಷೇತ್ರಗಳಲ್ಲಿ 1000 ಮತಗಳ ಅಂತರದಿಂದ ಗೆದ್ದಿದೆ. 86 ಕ್ಷೇತ್ರಗಳಲ್ಲಿ 2000 ಮತಗಳಿಂದ ವಿಜಯ ಸಾಧಿಸಿದೆ. ಈ ಎಲ್ಲ ಕ್ಷೇತ್ರಗಳಲ್ಲಿ ಒವೈಸಿ ಪಕ್ಷವು ಗಣನೀಯವಾಗಿ ಮತಗಳನ್ನು ಪಡೆದಿದೆ. ಪ್ರತಿಪಕ್ಷಗಳ ಮತಗಳ ಧ್ರುವೀಕರಣಕ್ಕೆ ಕಾರಣವಾಗಿದೆ ಎಂದು ವರದಿ ಉಲ್ಲೇಖಿಸಿದೆ.
ಒಟ್ಟು ಮತ ವಿಭಜನೆಯಲ್ಲಿ ಬಿಎಸ್ಪಿ ಶೇ 12.88, ಬಿಜೆಪಿ ಶೇ 41.29, ಎಸ್ಪಿ 32.06 ಮತಗಳನ್ನು ಪಡೆದಿವೆ. ಎಎಪಿ ಶೇ 0.38, ಎಐಎಫ್ಬಿ ಶೇ 0.00, ಸಿಪಿಐ ಶೇ 0.07, ಸಿಪಿಐ(ಎಂ) ಶೇ 0.01, ಸಿಪಿಐ(ಎಂಎಲ್) ಶೇ 0.01, ಕಾಂಗ್ರೆಸ್ ಶೇ 2.33, ಐಯುಎಂಎಲ್ ಶೇ 0.00, ಜೆಡಿಯು ಶೇ 0.11, ಎಲ್ಜೆಪಿ ಶೇ 0.00, ಎಲ್ಜೆಪಿಆರ್ವಿ ಶೇ 0.01, ಎನ್ಸಿಪಿ ಶೇ 0.05, ನೋಟಾ ಶೇ 0.69%, ಆರ್‌ಎಲ್ಡಿ ಶೇ 2.85, ಎಸ್ಎಚ್ಎಸ್ ಶೇ 0.02, ಪಕ್ಷೇತರರು ಶೇ 6.74 ಮತಗಳನ್ನು ಪಡೆದಿದ್ದಾರೆ.
ಎಐಎಂಐಎಂ ಪಕ್ಷವು ಉತ್ತರ ಪ್ರದೇಶದ 100 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಶೇ 0.49 ಮತಗಳನ್ನು ಎಐಎಂಐಎಂ ಪಡೆದಿರುವುದಾಗಿ ಚುನಾವಣಾ ಆಯೋಗ ಪ್ರಕಟಿಸಿದೆ. ಶೇ 0.49ರಷ್ಟು ಮತ ಗಳಿಸಿದರೂ ಮತ ವಿಭಜನೆಯಾಗುವಲ್ಲಿ ಎಐಎಂಐಎಂ ಪ್ರಮುಖ ಪಾತ್ರ ವಹಿಸಿರುವುದು ಕಂಡು ಬರುತ್ತಿದೆ. ಈ ನಿಟ್ಟಿನಲ್ಲಿ ಕೆಲವು ಕ್ಷೇತ್ರಗಳ ಫಲಿತಾಂಶ ಚರ್ಚೆಯಾಗುತ್ತಿದೆ.
ಚುನಾವಣೆಯಲ್ಲಿ ಏಕಾಂಗಿಯಾಗಿ ಕಣಕ್ಕಿಳಿದಿದ್ದ ಬಿಎಸ್‌ಪಿ 91 ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು, ಅವರಲ್ಲಿ ಹಲವರು ಮುಸ್ಲಿಂ ಮತಗಳನ್ನು ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ವಿಭಜಿಸಿ ಬಿಜೆಪಿ ಗೆಲುವಿಗೆ ಸಹಾಯ ಮಾಡಿದೆ ಎನ್ನಲಾಗಿದೆ.
ಅಲ್ಲದೆ, ಬಿಎಸ್‌ಪಿಯ 16 ಮುಸ್ಲಿಮೇತರ ಅಭ್ಯರ್ಥಿಗಳು ಎಸ್‌ಪಿ ಪಕ್ಷದಿಂದ ಸ್ಪರ್ಧಿಸಿದ ಅಭ್ಯರ್ಥಿಗಳ ಜಾತಿ ಸಮುದಾಯದವರನ್ನೇ ಕಣಕ್ಕೆ ಇಳಿಸಿದೆ. ಇದರ ಪರಿಣಾಮವಾಗಿ ಅವರು ಆ ವಿಧಾನಸಭಾ ಸ್ಥಾನಗಳಲ್ಲಿ ಎಸ್‌ಪಿಯ ಅಭ್ಯರ್ಥಿಯ ಮತ ವಿಭಜನೆಯಾಗಿದೆ ಎನ್ನಲಾಗಿದೆ. ಎಸ್‌ಪಿ ಮತ್ತು ಬಿಎಸ್‌ಪಿ ಪಕ್ಷದಿಂದ ಚುನಾವಣಾ ಅಭ್ಯರ್ಥಿಗಳಾಗಿ ಸ್ಪರ್ಧಿಸಿದವರ ಜಾತಿ ಹಿನ್ನೆಲೆ ಒಂದೇ ಆಗಿದ್ದು, ಒಟ್ಟಾರೆ 122 ಕ್ಷೇತ್ರಗಳಲ್ಲಿ ಎದುರಾಳಿಗಿದ್ದರು. ಇದರ ಪೈಕಿ ಬಿಜೆಪಿ 68 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಬಿಜನೋರ್‌ನಲ್ಲಿ ಎಸ್‌ಪಿ–ಆರ್‌ಎಲ್‌ಡಿ ಮೈತ್ರಿಕೂಟದ ಅಭ್ಯರ್ಥಿಗೆ 95,720 ಮತಗಳು ದೊರೆತಿದ್ದರೆ, ಎಐಎಂಐಎಂ ಅಭ್ಯರ್ಥಿಗೆ 2,290 ಮತಗಳು ದೊರೆತಿವೆ. ಇಲ್ಲಿ ಬಿಜೆಪಿ 97,165 ಮತಗಳನ್ನು ಗಳಿಸಿ 1,445 ಮತಗಳ ಅಂತರದಿಂದ ಗೆದ್ದಿದೆ.
ನಾಕೂರ್‌ನಲ್ಲಿ ಬಿಜೆಪಿಗೆ 1,03,771 ಮತಗಳು ದೊರೆತಿದ್ದರೆ ಎಸ್‌ಪಿಗೆ 1,03,616 ಮತಗಳು ದೊರೆತಿವೆ. ಇಲ್ಲಿ ಎಐಎಂಐಎಂಗೆ 3,591 ಮತಗಳು ದೊರೆತಿವೆ. ಬಾರಾಬಂಕಿಯ ಕುರ್ಸೀ ಕ್ಷೇತ್ರದಲ್ಲಿ ಬಿಜೆಪಿ 1,18,614 ಮತ ಗಳಿಸಿದ್ದರೆ ಎಸ್‌ಪಿ 1,18,094 ಮತ ಗಳಿಸಿದೆ. ಇಲ್ಲಿ ಎಐಎಂಐಎಂಗೆ 8,541 ಮತಗಳು ದೊರೆತಿವೆ.
ಕುರ್ಸಿಯಲ್ಲಿ ಬಿಜೆಪಿಗೆ 118,720 ಮತಗಳು ದೊರೆತರೆ, ಗೆಲುವಿನ ಅಂತ 217 ಮತಗಳು ಎಸ್ಪಿ 118,503 ಮತಗಳನ್ನು ಗಳಿಸಿದೆ. ಮೂರನೇ ಸ್ಥಾನಕ್ಕೆ ಬಿಎಸ್ಪಿ 35,561 ಮತಗಳನ್ನು ಪಡೆದರೆ, ನಾಲ್ಕನೇ ಸ್ಥಾನದಲ್ಲಿರುವ ಎಐಎಂಐಎಂ 8,541 ಮತಗಳನ್ನು ಪಡೆದುಕೊಂಡಿದೆ.
ಸುಲ್ತಾನ್ಪುರ್ ದಲ್ಲಿ ಬಿಜೆಪಿಗೆ 92,715, ಎಸ್ಪಿ 91,706 ಮತ ಗಳಿಸಿದೆ. 1,009 ಮತಗಳ ಅಂತರದಲ್ಲಿ ಬಿಜೆಪಿ ಗೆದ್ದಿದೆ. ಇಲ್ಲಿ ಎಐಎಂಐಎಂ 5,251 ಹಾಗೂ ಬಿಎಸ್ಪಿ 22,521 ಮತಗಳನ್ನು ಪಡೆದುಕೊಂಡಿದೆ. ಕಾಂಗ್ರೆಸ್ 2,655 ಮತಗಳನ್ನು ಗಳಿಸಿದೆ.
ಹಲವು ಕ್ಷೇತ್ರಗಳಲ್ಲಿ ಎಸ್ಪಿ ಮತಗಳು ವಿಭಜನೆಯಾಗಿರುವ ಸಾಧ್ಯತೆಯನ್ನು ಚುನಾವಣಾ ಫಲಿತಾಂಶ ತೆರೆದಿಟ್ಟಿದೆ. ಉತ್ತರ ಪ್ರದೇಶದ ಚುಣಾವಣೆಯಲ್ಲಿ ಓವೈಸಿಯವರ ಉಪಸ್ಥಿತಿ, ಮುಸ್ಲಿಂ ಮತಬ್ಯಾಂಕ್ ಮೂಲಕ ಗುರುತಿಸಿಕೊಂಡಿರುವ ಎಸ್ಪಿಗೆ ಹೊಡೆತ ನೀಡಿದೆ ಎಂದೇ ಚರ್ಚೆಗಳಾಗುತ್ತಿವೆ.