“ಆಶಯ ಪ್ರಶ್ನಾರ್ಹವಾಗಿದೆ ಮತ್ತು ಪರಿಕಲ್ಪನೆ ಅಧಿಕಾರಶಾಹಿಯಾಗಿದೆ”
ಮಾರ್ಚ್ 2ರಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತು ರಾಜ್ಯ ಮಂತ್ರಾಲಯದಿಂದ ರಾಜ್ಯ ಸರಕಾರಗಳಿಗೆ ಒಂದು ಸಲಹಾ ಪತ್ರದ ಸ್ವರೂಪದಲ್ಲಿ ಒಂದು ಆದೇಶವನ್ನು ಕಳಿಸಲಾಗಿದೆ. ಇದು ಮನರೇಗದ ಅಡಿಯಲ್ಲಿ ಉದ್ಯೋಗ ಕೇಳುವವರಿಗೆ ಪರಿಶಿಷ್ಟ ಜಾತಿ/ ಪಂಗಡ ಮತ್ತು ಇತರರು ಎಂದು ಪ್ರವರ್ಗವಾರು ಕೂಲಿ ಪಾವತಿಯನ್ನು ಕುರಿತಾದ್ದು.
ಮನರೇಗ ಕಾಯ್ದೆಯ ಅನುಷ್ಠಾನದ ಪ್ರತಿಯೊಂದು ವಿಷಯದಲ್ಲೂ ಸಾಮಾಜಿಕ ವರ್ಗೀಕರಣವನ್ನು ಖಾತ್ರಿಪಡಿಸಬೇಕೆಂದು ಈ ಸಲಹಾಪತ್ರ ರಾಜ್ಯಗಳಿಗೆ ಆದೇಶ ನೀಡಿದೆ. ಕಾರ್ಮಿಕ ಬಜೆಟಿನಲ್ಲಿ ಪರಿಶಿಷ್ಟ ಜಾತಿ/ ಪಂಗಡಗಳ ಕುಟುಂಬಗಳ ನಡುವೆ ಕೆಲಸಕ್ಕೆ ಬರಬಹುದಾದ ಬೇಡಿಕೆ ಮತ್ತು ಅದಕ್ಕೆ ಮಾಡಬೇಕಾದ ವೆಚ್ಚ, ಈ ಪ್ರವರ್ಗಗಳಿಗೆ ಕೂಲಿ ಪಾವತಿಗಳ ರಾಜ್ಯ ಮಟ್ಟದ ಲೆಕ್ಕಪತ್ರ , ಬಳಕೆ ಪ್ರಮಾಣ ಪತ್ರ ಮುಂತಾದ ಎಲ್ಲ ಅಂಶಗಳಲ್ಲಿ ಈ ವರ್ಗೀಕರಣ ಇರಬೇಕು ಎಂದು ಈ ಆದೇಶ ಹೇಳುತ್ತದೆ.
ಇದೊಂದು ವಿಪರೀತ ಅಧಿಕಾರಶಾಹೀಕರಣದ ಕ್ರಮವಾಗಿದ್ದು, ಇದರ ಅಗತ್ಯವಾದರೂ ಏನು ಎಂಬ ಬಗ್ಗೆ ಯಾವುದೇ ಕಾರಣವನ್ನು ಕೊಡಲಾಗಿಲ್ಲ ಎಂದು ಈ ಬಗ್ಗೆ ಸ್ಪಷ್ಟೀಕರಣ ಕೇಳಿ ಹಿರಿಯ ಸಿಪಿಐ(ಎಂ) ಮುಖಂಡರಾದ ಬೃಂದಾ ಕಾರಟ್ ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಿಗಳಿಗೆ ಇಂದು ಪತ್ರ ಬರೆದಿದ್ದಾರೆ.
ಹಿಂದಿನ ಅನುಭವಗಳ ಆಧಾರದಲ್ಲಿ ಹೇಳುವುದಾದರೆ ಈ ಆದೇಶದಿಂದ ಕೂಲಿ ಪಾವತಿಯಲ್ಲಿ ವಿಳಂಬವಾಗುತ್ತದೆ, ಮುಖ್ಯವಾಗಿ ಇದು ಪರಿಶಿಷ್ಟ ಜಾತಿ/ ಪಂಗಡಗಳ ಜನಗಳಿಗೆ ಕೂಲಿ ಪಾವತಿಯನ್ನೆ ಹೆಚ್ಚಾಗಿ ಬಾಧಿಸುತ್ತದೆ, ಅವರು ಈ ಪ್ರತ್ಯೇಕ ಲೆಕ್ಕಪತ್ರ ಮತ್ತು ಬ್ಯಾಂಕಿಂಗ್ ವಿಧಾನಗಳಿಗೆ ಬಲಿಯಾಗಬೇಕಾಗುತ್ತದೆ ಎಂದು ಬೃಂದಾ ಅವರು ತಮ್ಮ ಪತ್ರದಲ್ಲಿ ಹೇಳಿದ್ದಾರೆ.
ಇಂತಹ ವರ್ಗೀಕರಣದ ಅಗತ್ಯವೇನು ಎಂಬುದಕ್ಕೆ ಈ ಸಲಹಾಪತ್ರ ಸುಸಂಗತ ಕಾರಣವನ್ನೇನೂ ಕೊಡುವುದಿಲ್ಲ. ಆದರೆ ಒಂದೆಡೆಯಲ್ಲಿ “ಸಂಬಂಧಪಟ್ಟ ಎಲ್ಲರೂ ಕಾಲಬದ್ಧ ರೀತಿಯಲ್ಲಿ ಕ್ರಮಗಳನ್ನು ಖಾತ್ರಿಪಡಿಸಬೇಕು, ಅದಕ್ಕನುಗುಣವಾಗಿ ಹಣ ಬಿಡುಗಡೆಯಾಗುವಂತೆ ಈ ಮೂಲಕ ಮಾಡಬಹುದು” ಎಂಬ ಉಲ್ಲೇಖವಿದೆ. ಇದು ಸರಕಾರದ ಆಶಯಗಳ ಬಗ್ಗೆ ಗಂಭೀರ ಸಂದೇಹಗಳನ್ನು ಎಬ್ಬಿಸುತ್ತದೆ ಎಂದು ಬೃಂದಾ ಕಾರಟ್ ಅವರು ತಮ್ಮ ಪತ್ರದಲ್ಲಿ ಹೇಳಿದ್ದಾರೆ.
ಮನರೇಗ ಒಂದು ಸಾರ್ವತ್ರಿಕ ಕಾರ್ಯಕ್ರಮ, ಇದಕ್ಕೆ ಬಜೆಟ್ ಅನುದಾನವನ್ನು ಒಟ್ಟಾಗಿ ಕೊಡಲಾಗುತ್ತದೆ. ಇದನ್ನು ಪ್ರವರ್ಗವಾರು ವಿಭಜಿಸುವ ಒಂದು ಧೋರಣೆಯನ್ನು ಸೇರಿಸುವುದು ಈ ಕಾಯ್ದೆಯ ಹೊಸದೊಂದು ವ್ಯಾಖ್ಯಾನವಾಗುತ್ತದೆ. ಇದು ಈ ಸಾರ್ವತ್ರಿಕ ಬೇಡಿಕೆ-ಆಧಾರಿತ ಕಾರ್ಯಕ್ರಮದ ಕಾಯ್ದೆಯ ಆಧಾರವನ್ನೇ ಶಿಥಿಲಗೊಳಿಸುತ್ತದೆ. ಆದ್ದರಿಂದ ಇಂತಹ ವರ್ಗಿಕರಣ ಏಕೆ ಬೇಕಾಗಿದೆ ಎಂಬ ಬಗ್ಗೆ ಸ್ಪಷ್ಟೀಕರಣ ಬೇಕಾಗುತ್ತದೆ.
ಅಲ್ಲದೆ ಈ ಬಗ್ಗೆ ಸಾರ್ವಜನಿಕ ಚರ್ಚೆಯೇನೂ ನಡೆದಿಲ್ಲ. ಸಂಸತ್ತಿನಲ್ಲಾಗಲೀ, ಗ್ರಾಮೀಣಾಭಿವೃದ್ಧಿ ಸ್ಥಾಯೀ ಸಮಿತಿಯಲ್ಲಾಗಲೀ ಈ ಬಗ್ಗೆ ಚರ್ಚೆ ನಡೆದಿಲ್ಲ. ಸಚಿವಾಲಯದ ವೆಬ್ ಸೈಟಿನಲ್ಲೂ ಈ ಸಲಹಾಪತ್ರದ ಬಗ್ಗೆ ಏನೂ ಮಾಹಿತಿಯಿಲ್ಲ. ಆದ್ದರಿಂದ ಈ ಬಗ್ಗೆ ಚರ್ಚೆ ನಡೆಸದೆ ಇದನ್ನು ಜಾರಿಗೆ ತರಲಾಗದು ಎಂಬುದನ್ನು ಬೃಂದಾ ಕಾರಟ್ ತಮ್ಮ ಪತ್ರದಲ್ಲಿ ಮಂತ್ರಿಗಳ ಗಮನಕ್ಕೆ ತಂದಿದ್ದಾರೆ.
ಈ ಸಾರ್ವತ್ರಿಕ ಕಾರ್ಯಕ್ರಮದ ಅಡಿಯಲ್ಲಿ ಪರಿಶಿಷ್ಟ ಜಾತಿ/ಪಂಗಡಗಳು ಮತ್ತು ಮಹಿಳೆಯರ ಹಕ್ಕುಗಳ ರಕ್ಷಣೆಯ ಪ್ರಶ್ನೆಯನ್ನು ಸಿಪಿಐ(ಎಂ) ಸದಾ ಎತ್ತಿದೆ. ಈ ಪ್ರವರ್ಗಗಳ ಫಲಾನುಭವಿಗಳಿಗೆ ತಲುಪುವ ಕನ್ವರ್ಜೆನ್ಸ್ ಕಾರ್ಯಕ್ರಮಗಳ ಉಸ್ತುವಾರಿಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಕೇಳಿದ್ದರೂ ಅದನ್ನಿನ್ನೂ ಮಾಡಿಲ್ಲ. ಕಾಯ್ದೆಯಲ್ಲಿ ಹೇಳಿರುವ “ಬರಿಗಾಲು ಟೆಕ್ನಿಷಿಯನ್” ಹುದ್ದೆಗೆ ಪರಿಶಿಷ್ಟ ಜಾತಿ/ಪಂಗಡಗಳ ವ್ಯಕ್ತಿಗಳ ನೇಮಕಾತಿ ಮತ್ತು ತರಬೇತಿಯ ಬಗ್ಗೆ ಯಾವ ಪ್ರಯತ್ನವನ್ನೂ ನಡೆಸಿಲ್ಲ.
ಅಲ್ಲದೆ ಪರಿಶಿಷ್ಟ ಬುಡಕಟ್ಟುಗಳ ಕುಟುಂಬಗಳಿಗೆ ಅರಣ್ಯ ಹಕ್ಕುಗಳ ಕಾಯ್ದೆಯ ಅಡಿಯಲ್ಲಿ ಕೊಟ್ಟಿರುವ ಜಮೀನು ಬಿಟ್ಟು ಬೇರೇನೂ ಆಸ್ತಿಯಿಲ್ಲದಿದ್ದರೆ ಅವರಿಗೆ ಹೆಚ್ಚುವರಿ 50 ದಿನಗಳ ಕೆಲಸ ಕೊಡಬೇಕು ಎಂದೂ ಇದೆ. ಆದರೆ ಎಷ್ಟು ಕುಟುಂಬಗಳಿಗೆ ಹೀಗೆ ವರ್ಷಕ್ಕೆ 150 ದಿನಗಳ ಕೆಲಸ ಕೊಡಲಾಗಿದೆ ಎಂಬ ಯಾವುದೇ ದಾಖಲೆ ಈ ಮಂತ್ರಾಲಯದ ಬಳಿ ಇಲ್ಲ, ಇಂತಹ ಮಾಹಿತಿ ಸಾರ್ವಜನಿಕವಾಗಿ ಲಭ್ಯವಿಲ್ಲ.
ಪರಿಶಿಷ್ಟ ಜಾತಿಗಳು ಮತ್ತು ಪಂಗಡಗಳ ಜನರ ಒಳಿತಿನ ಇಂತಹ ಮೂರ್ತ ಕ್ರಮಗಳನ್ನು ಕೈಗೊಳ್ಳುವ ಬದಲು ಇಂತಹ ಸಲಹಾ ಆದೇಶಗಳನ್ನು ಹೊರಡಿಸಿರುವುದು, ಅದರ ಆಶಯದ ದೃಷ್ಟಿಯಿಂದಲೂ ಪ್ರಶ್ನಾರ್ಹ ಮತ್ತು ಅದರ ಪರಿಕಲ್ಪನೆಯ ದೃಷ್ಟಿಯಿಂದಲೂ ಅತ್ಯಂತ ಅಧಿಕಾರಶಾಹಿ ಸ್ವರೂಪದ್ದಾಗಿದೆ ಎಂದು ಬೃಂದಾ ಕಾರಟ್ ಹೇಳಿದ್ದಾರೆ.
ನರೇಗದ ಅಡಿಯಲ್ಲಿ ಕೆಲಸಗಳ ಕೊರತೆಯೇ ಈಗಿರುವ ಪ್ರಧಾನ ಪ್ರಶ್ನೆ. ಎಪ್ರಿಲ್-ಮೇ ತಿಂಗಳಲ್ಲಿ ಪ್ರತಿ ಕುಟಂಬಕ್ಕೆ ಸರಾಸರಿ ಕೇವಲ 20 ದಿನಗಳ ಕೆಲಸ ಸಿಕ್ಕಿದೆ. ಇದು ಕಳೆದ ವರ್ಷ ಈ ಅವಧಿಯಲ್ಲಿ ಸಿಕ್ಕಿದ ಕೆಲಸಕ್ಕಿಂತಲೂ ಕಡಿಮೆ. ವಾಸ್ತವವಾಗಿ ಈ ವರ್ಷ ಕೋವಿಡ್‌ನ ಎರಡನೇ ಅಲೆ ಉದ್ಯೋಗಾವಕಾಶಗಳನ್ನು ನಿರ್ಮೂಲ ಮಾಡಿರುವಾಗ ವ್ಯಾಪಕ ಹಸಿವು ಮತ್ತು ಕೊರತೆಗಳನ್ನು ತಡೆಯಲು ನರೇಗಾದ ಅಡಿಯಲ್ಲಿ ಹೆಚ್ಚಿನ ಕೆಲಸ ಕೊಡಿಸಬೇಕಾಗಿತ್ತು. ಈ ಪ್ರಶ್ನೆಗಳನ್ನು ಪರಿಶೀಲಿಸಬೇಕು ಎಂದು ಬೃಂದಾ ಕಾರಟ್ ಗ್ರಾಮೀಣಾಭಿವೃದ್ಧಿ ಮಂತ್ರಿಗಳನ್ನು ತಮ್ಮ ಪತ್ರದಲ್ಲಿ ಕೋರಿದ್ದಾರೆ.