ಮಂಗಳೂರು (ದಕ್ಷಿಣ ಕನ್ನಡ) : ಕೊರಗರ ದೈವ ಕೊರಗಜ್ಜನನ್ನು ಆರಾಧಿಸುವ ಶ್ರೀಮಂತರು ಆತನ ಸಮುದಾಯದವರನ್ನು ಹಸುಗಳ ರೀತಿ ನಡೆಸಿಕೊಳ್ಳುತ್ತಿದ್ದಾರೆ. ದೇವರ ಮಕ್ಕಳೆನಿಸಿರುವ ಕೊರಗರನ್ನು ಹಸಿವಿನಿಂದ ನರಳುವಂತೆ ಮಾಡುತ್ತಿದ್ದಾರೆ. ಇಂತಹ ಅನ್ಯಾಯದ ವಿರುದ್ಧ ಹೋರಾಟ ನಡೆಸುವುದಕ್ಕಾಗಿ ನಾವು ಬಂದಿದ್ದೇವೆ ಎಂದು ಆದಿವಾಸಿ ಅಧಿಕಾರ್ ರಾಷ್ಟ್ರೀಯ ಮಂಚ್‌ನ ಅಖಿಲ ಭಾರತ ಉಪಾಧ್ಯಕ್ಷೆ ಬೃಂದಾ ಕಾರಟ್ ಹೇಳಿದರು.
ಕರಾವಳಿ ಕರ್ನಾಟಕದ ಮೂಲ ನಿವಾಸಿಗಳಾದ ಕೊರಗ ಸಮುದಾಯ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ನಗರದ ಕ್ಲಾಕ್‌ಟವರ್ ಮುಂಭಾಗ ನಡೆದ ಆದಿವಾಸಿ ಆಕ್ರೋಶ ರ‍್ಯಾಲಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೈವವೆಂದು ಹೇಳಿ ಆ ಸಮುದಾಯವನ್ನೇ ಲೂಟಿ ಹೊಡೆದಿದ್ದಾರೆ: ನಾಚಿಕೆಗೆಟ್ಟ ಶ್ರೀಮಂತರು ಕೊರಗಜ್ಜನನ್ನು ದೈವವೆಂದು ಹೇಳಿ ಕೊರಗ ಸಮುದಾಯದಿಂದ ಆತನನ್ನು ಲೂಟಿಗೈದಿದ್ದಾರೆ. ಕೊರಗ ಸಮುದಾಯದ ದೈವದ ಚಿತ್ರವನ್ನು ಶ್ರೀಮಂತರು ತಮ್ಮ ಗೋಡೆಗಳ ಮೇಲೆ ಬರೆದುಕೊಳ್ಳುತ್ತಾರೆ. ಆದರೆ ಕೊರಗ ಸಮುದಾಯದವರಿಗೆ ಕೊರಗಜ್ಜನ ಚಿತ್ರ ಬಿಡಿಸಲು ಗೋಡೆಗಳೇ ಇಲ್ಲ. ಏಕೆಂದರೆ ಅವರು ಗುಡಿಸಲು, ಶೆಡ್‌ಗಳಲ್ಲಿ ವಾಸಿಸುತ್ತಿದ್ದಾರೆ. ಆದ್ದರಿಂದ ಕೊರಗರನ್ನು ತುಚ್ಛವಾಗಿ ಕಂಡು ತುಳಿಯುವುದಕ್ಕೆ ನಾವು ಬಿಡುವುದಿಲ್ಲ ಎಂದು ಹೇಳಿದರು.
ಇದನ್ನೂ ನೋಡಿ : ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ | ಕೊರಗ ಸಮುದಾಯದ | ಬಹಿರಂಗ ಸಭೆ
ಹೋರಾಡುವ ಮಾತುಕೊಟ್ಟು ಅಧಿಕಾರಕ್ಕೆ ಬಂದವರು ಏನು ಮಾಡಿದರು ?: ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಬಿಜೆಪಿ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಕೊರಗರ ಮತ ಪಡೆದು ಅಧಿಕಾರಕ್ಕೆ ಬಂದಿದೆ. ಆದರೆ ಅಧಿಕಾರಕ್ಕೆ ಬಂದ ಬಳಿಕ ಅವರು ಬಿಜೆಪಿ ವಿರುದ್ಧ ಹೋರಾಟ ಮಾಡುತ್ತಿಲ್ಲ. ಕೊರಗರನ್ನು ರಕ್ಷಿಸುತ್ತಿಲ್ಲ. ಕಾಂಗ್ರೆಸ್ ಎಲ್ಲಾ ಶಕ್ತಿಯನ್ನು ತನ್ನ ಆಂತರಿಕ ಜಗಳದಲ್ಲಿ ಕಳೆದುಕೊಳ್ಳುತ್ತಿದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ. ಕೆ ಶಿವಕುಮಾರ್ ಅವರು ತಮ್ಮ ಕುಸ್ತಿಯಲ್ಲಿ ತಮ್ಮ ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದಾರೆ. ನೀವು ಕುರ್ಚಿಗಾಗಿ ಆಡುತ್ತಿರುವ ನಿಮ್ಮ ಕುಸ್ತಿಯನ್ನು ನಿಲ್ಲಿಸಿ ಎಂದರು.
ನಾವು ಶೋಷಣೆ, ದಬ್ಬಾಳಿಕೆಯ ವಿರುದ್ಧ ಕುಸ್ತಿ ಆಡುತ್ತಿದ್ದೇವೆ. ನಾವು ನಮ್ಮ ಹಕ್ಕಗಳನ್ನು, ಮಾನವ ಹಕ್ಕುಗಳನ್ನು ಕೇಳಲು ಇಲ್ಲಿ ಸೇರಿದ್ದೇವೆ. ಇದು ನ್ಯಾಯಕ್ಕಾಗಿ ನಡೆಯುತ್ತಿರುವ ಬಲಿಷ್ಠ ಹೋರಾಟ. ಆದ್ದರಿಂದ ನಾವು ನಮ್ಮ ಬೇಡಿಕೆಗಳು ಈಡೇರುವವರೆಗೆ ಹೋರಾಟದಿಂದ ವಿರಮಿಸುವುದಿಲ್ಲ. ನಾವು ಮುಂದಿನ ಬಜೆಟ್ ಮೇಲೆ ಕಣ್ಣಿಟ್ಟಿದ್ದೇವೆ. ನಾವು ಕೊರಗ ಸಮುದಾಯಕ್ಕೆ ಏನು ಸವಲತ್ತುಗಳನ್ನು ನೀಡುತ್ತಾರೆ ಎಂಬುದನ್ನು ನೋಡುತ್ತಿದ್ದೇವೆ. ಸಂಸದರು ಪಾರ್ಲಿಮೆಂಟ್‌ನಲ್ಲಿ ಆದಿವಾಸಿಗಳ, ವಿಶೇಷ ಆದಿವಾಸಿ ಸಮುದಾಯಗಳ ಅದರಲ್ಲೂ ಕೊರಗ ಸಮುದಾಯದ ಬೇಡಿಕೆಗಳನ್ನು ಎತ್ತುತ್ತಾರೆ ಎಂದು ಅಂದುಕೊಡಿದ್ದೇವೆ ಎಂದು ಹೇಳಿದರು.
ಈ ಸಂದರ್ಭ, ಪತ್ರಕರ್ತ, ಬರಹಗಾರ ನವೀನ್ ಸೂರಿಂಜೆ ಬರೆದಿರುವ “ಕೊರಗರು – ತುಳುನಾಡಿನ ಮಾತೃ ಸಮುದಾಯ” ಪುಸ್ತಕ ಬಿಡುಗಡೆಯಾಯಿತು. ವೇದಿಕೆಯಲ್ಲಿ ಕೊರಗ ಸಮುದಾಯದವರೇ ಹೆಣೆದ ಬಿಳಲಿನ ಬುಟ್ಟಿ, ಗಂಜಿ ಬಸಿಯುವ ಪರಿಕರದಿಂದಲೇ ಅಲಂಕರಿಸಲಾಗಿತ್ತು.