ನವದೆಹಲಿ: ಬ್ರಿಜ್ ಭೂಷಣ್ ಅವರ ಆಪ್ತ ಸಹಾಯಕ ಸಂಜಯ್ ಸಿಂಗ್ ಅವರನ್ನು ಭಾರತದ ಕುಸ್ತಿ ಒಕ್ಕೂಟದ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಿರುವುದನ್ನು ವಿರೋಧಿಸಿ ಕುಸ್ತಿಪಟು ಸಾಕ್ಷಿ ಮಲಿಕ್ ಅವರು ಬೂಟುಗಳನ್ನು ಕಳಚಿಟ್ಟು ಕುಸ್ತಿಗೆ ವಿದಾಯ ಹೇಳಿದ ಒಂದೇ ದಿನದಲ್ಲಿ ಮತ್ತೊಬ್ಬ ಕ್ರೀಡಾಪಟು ಭಜರಂಗ್ ಪುನಿಯಾ ಅವರು ತಮ್ಮ ಪದ್ಮಶ್ರೀ ಪ್ರಶಸ್ತಿಯನ್ನು ಹಿಂದಿರುಗಿಸುವ ಬಗ್ಗೆ ಪ್ರಧಾನಿ ಮೋದಿಗೆ ಶುಕ್ರವಾರ ಪತ್ರ ಬರೆದಿದ್ದಾರೆ.
“ನಾನು ನನ್ನ ಪದ್ಮಶ್ರೀ ಪ್ರಶಸ್ತಿಯನ್ನು ಪ್ರಧಾನಿಯವರಿಗೆ ಹಿಂದಿರುಗಿಸುತ್ತಿದ್ದೇನೆ. ಇದನ್ನು ಘೋಷಿಸಲು ಇದು ನನ್ನ ಪತ್ರವಾಗಿದೆ. ಇದು ನನ್ನ ಹೇಳಿಕೆ” ಎಂದು ಬಜರಂಗ್ ಪುನಿಯಾ ತಮ್ಮ ತೀರ್ಮಾನವನ್ನು ಟ್ವೀಟ್ ಮಾಡಿದ್ದಾರೆ. ಟ್ವಿಟರ್ ಪೋಸ್ಟ್ ನಂತರ, ಬಜರಂಗ್ ಪುನಿಯಾ ಅವರು ತಮ್ಮ ಪದ್ಮಶ್ರೀ ಪ್ರಶಸ್ತಿಯನ್ನು ಪ್ರಧಾನಿ ನಿವಾಸದ ಹೊರಗಿನ ಫುಟ್‌ಪಾತ್‌ನಲ್ಲಿ ಇರಿಸಲು ಹೋಗಿದ್ದು, ದೆಹಲಿಯ ಕರ್ತವ್ಯ ಪಥದಲ್ಲಿ ಅವರನ್ನು ಪೊಲೀಸ್ ಅಧಿಕಾರಿಗಳು ತಡೆದಿದ್ದಾರೆ.
ಇದನ್ನೂ ಓದಿ: 4 ವರ್ಷಗಳಲ್ಲಿ 274 ಪತ್ರಕರ್ತರಿಗೆ 12.7 ಕೋಟಿ ರೂ. ನೆರವು ನೀಡಿದ ಮೋದಿ ಸರ್ಕಾರ
ಗುರುವಾರ, ಲೈಂಗಿಕ ಕಿರುಕುಳ ಆರೋಪಿ ಬ್ರಿಜ್ ಭೂಷಣ್ ಸಿಂಗ್ ಆಪ್ತ ಸಂಜಯ್ ಸಿಂಗ್ ಅವರು ಕುಸ್ತಿ ಫೆಡರೇಶನ್‌ನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಸಂಜಯ್ ಸಿಂಗ್ ಅವರ ಆಯ್ಕೆಯ ನಂತರ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್, ಬಜರಂಗ್ ಪುನಿಯಾ ಮತ್ತು ವಿನೇಶ್ ಫೋಗಟ್ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದರು.
ಆ ವೇಳೆ ಮಾತನಾಡಿದ್ದ ಸಾಕ್ಷಿ ಮಲಿಕ್ ಅವರು, ತಮ್ಮ ಪ್ರತಿಭಟನೆಯ ಸಂಕೇತವಾಗಿ ಕುಸ್ತಿಯನ್ನು ತ್ಯಜಿಸುವುದಾಗಿ ಘೋಷಿಸಿದ್ದರು. “ನಾವು ನಮ್ಮ ಹೃದಯದಿಂದ ಹೋರಾಡಿದ್ದೇವೆ. ಅದಾಗಿಯೂ ಬ್ರಿಜ್ ಭೂಷಣ್ ಅವರಂತಹ ವ್ಯಕ್ತಿ, ಅವರ ವ್ಯಾಪಾರ ಪಾಲುದಾರ ಮತ್ತು ನಿಕಟ ಸಹಾಯಕರು ಡಬ್ಲ್ಯುಎಫ್‌ಐ ಅಧ್ಯಕ್ಷರಾಗಿ ಆಯ್ಕೆಯಾದರೆ, ನಾನು ಕುಸ್ತಿಯನ್ನು ತ್ಯಜಿಸುತ್ತೇನೆ. ಇಂದಿನಿಂದ ನೀವು ನನ್ನನ್ನು ರಿಂಗ್‌ನಲ್ಲಿ ನೋಡುವುದಿಲ್ಲ” ಎಂದು ಸಾಕ್ಷಿ ಹೇಳಿದ್ದು, ಕಣ್ಣೀರಿಡುತ್ತಲೆ ತನ್ನ ಬೂಟುಗಳನ್ನು ಕಳಚಿ ಟೇಬಲ್ ಮುಂದೆ ಇಟ್ಟು ತೆರಳಿದ್ದರು.
VIDEO | Wrestler @BajrangPunia stopped at Delhi's Kartavya Path by Delhi Police officials. Earlier today, Punia announced on X that he is returning his Padma Shri award to the PM. pic.twitter.com/cQUg3gpzDK
— Press Trust of India (@PTI_News) December 22, 2023
ಇದನ್ನೂ ಓದಿ: 146 ಸಂಸದರ ಅಮಾನತು ವಿರುದ್ಧ ಜಂತರ್ ಮಂತರ್‌ನಲ್ಲಿ ಇಂಡಿಯಾ ಒಕ್ಕೂಟ ಪ್ರತಿಭಟನೆ
ಬಜರಂಗ್ ಪುನಿಯಾ ಅವರು ತಮ್ಮ ಪತ್ರದಲ್ಲಿ, “ಪ್ರೀತಿಯ ಪ್ರಧಾನಿ ಅವರೆ, ನಿಮ್ಮ ಆರೋಗ್ಯ ಚೆನ್ನಾಗಿರಲಿ ಎಂದು ಹಾರೈಸುತ್ತೇನೆ. ನೀವು ಅನೇಕ ಕೆಲಸಗಳಲ್ಲಿ ನಿರತರಾಗಿದ್ದೀರಿ ಆದರೆ ದೇಶದ ಕುಸ್ತಿಪಟುಗಳತ್ತ ನಿಮ್ಮ ಗಮನವನ್ನು ಸೆಳೆಯಲು ನಾನು ಇದನ್ನು ಬರೆಯುತ್ತಿದ್ದೇನೆ. ಜನವರಿಯಲ್ಲಿ ದೇಶದ ಮಹಿಳಾ ಕುಸ್ತಿಪಟುಗಳು ಪ್ರತಿಭಟನೆಯನ್ನು ಪ್ರಾರಂಭಿಸಿದರು ಎಂಬುದನ್ನು ನೀವು ತಿಳಿದಿರಬೇಕು. ಅವರು ಈ ವರ್ಷ ಬ್ರಿಶ್ ಭೂಷಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿದರು. ನಾನು ಕೂಡ ಅವರ ಪ್ರತಿಭಟನೆಗೆ ಸೇರಿಕೊಂಡೆ. ಸರ್ಕಾರವು ಕಠಿಣ ಕ್ರಮದ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ನಿಲ್ಲಿಸಲಾಯಿತು” ಎಂದು ಹೇಳಿದ್ದಾರೆ.
“ಆದರೆ ಮೂರು ತಿಂಗಳ ನಂತರವೂ ಬ್ರಿಜ್ ಭೂಷಣ್ ವಿರುದ್ಧ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ. ನಾವು ಮತ್ತೆ ಏಪ್ರಿಲ್‌ನಲ್ಲಿ ಬೀದಿಗಿಳಿದ ಕಾರಣಕ್ಕೆ ಪೊಲೀಸರು ಅವರ ವಿರುದ್ಧ ಕನಿಷ್ಠ ಎಫ್‌ಐಆರ್ ದಾಖಲಿಸಿದ್ದಾರೆ. ಜನವರಿಯಲ್ಲಿ 19 ದೂರುದಾರರಿದ್ದರು ಆದರೆ ಏಪ್ರಿಲ್ ವೇಳೆಗೆ ಈ ಸಂಖ್ಯೆ 7 ಕ್ಕೆ ಇಳಿದಿದೆ. ಇದರರ್ಥ ಬ್ರಿಜ್ ಭೂಷಣ್ ಅವರು 12 ಮಹಿಳಾ ಕುಸ್ತಿಪಟುಗಳ ಮೇಲೆ ತಮ್ಮ ಪ್ರಭಾವವನ್ನು ಬೀರಿದ್ದಾರೆ” ಎಂದು ಬಜರಂಗ್ ಪುನಿಯಾ ಬರೆದಿದ್ದಾರೆ.
मैं अपना पद्मश्री पुरस्कार प्रधानमंत्री जी को वापस लौटा रहा हूँ. कहने के लिए बस मेरा यह पत्र है. यही मेरी स्टेटमेंट है। 🙏🏽 pic.twitter.com/PYfA9KhUg9
— Bajrang Punia 🇮🇳 (@BajrangPunia) December 22, 2023
“ನಮ್ಮ ಪ್ರತಿಭಟನೆ 40 ದಿನಗಳ ಕಾಲ ನಡೆಯಿತು. ಆ ದಿನಗಳಲ್ಲಿ ನಮ್ಮ ಮೇಲೆ ಹೆಚ್ಚಿನ ಒತ್ತಡವಿತ್ತು.. ನಾವು ಗಂಗಾ ನದಿಗೆ ನಮ್ಮ ಪದಕಗಳನ್ನು ಎಸೆಯಲು ಹೋದೆವು. ಆಗ ನಮ್ಮನ್ನು ರೈತ ಮುಖಂಡರು ತಡೆದರು. ಆ ಸಮಯದಲ್ಲಿ ನಿಮ್ಮ ಸಂಪುಟದ ಜವಾಬ್ದಾರಿಯುತ ಮಂತ್ರಿಯೊಬ್ಬರು ಕರೆ ಮಾಡಿದರು. ನಮಗೆ ನ್ಯಾಯದ ಭರವಸೆ ನೀಡಿದರು. ಈ ಮಧ್ಯೆ, ನಾವು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದೇವೆ, ಅವರು ನಮಗೆ ನ್ಯಾಯದ ಭರವಸೆ ನೀಡಿದ್ದರು. ಹಾಗಾಗಿ ನಾವು ನಮ್ಮ ಪ್ರತಿಭಟನೆಯನ್ನು ನಿಲ್ಲಿಸಿದ್ದೆವು” ಎಂದು ಪತ್ರದಲ್ಲಿ ಬರೆಯಲಾಗಿದೆ.
ಇದನ್ನೂ ಓದಿ: ಬೆಂಗಳೂರು | ಸಂಸದರ ಅಮಾನತು ವಿರೋಧಿಸಿ ಸಿಪಿಐ(ಎಂ) ಪ್ರತಿಭಟನೆ
“ಆದರೆ ಡಿಸೆಂಬರ್ 21 ರಂದು ನಡೆದ ಡಬ್ಲ್ಯುಎಫ್‌ಐ ಚುನಾವಣೆಯಲ್ಲಿ ಫೆಡರೇಶನ್ ಮತ್ತೊಮ್ಮೆ ಬ್ರಿಜ್ ಭೂಷಣ್ ಅಧೀನಕ್ಕೆ ಬಂದಿತು. ಅವರು ಎಂದಿನಂತೆ ಫೆಡರೇಶನ್ ಮೇಲೆ ಮೇಲುಗೈ ಸಾಧಿಸುತ್ತಾರೆ ಎಂದು ಅವರು ಹೇಳಿದರು. ತೀವ್ರ ಒತ್ತಡಕ್ಕೆ ಒಳಗಾದ ಸಾಕ್ಷಿ ಮಲಿಕ್ ಕುಸ್ತಿಯಿಂದ ನಿವೃತ್ತಿ ಘೋಷಿಸಿದರು” ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.
“ನಾವೆಲ್ಲರೂ ರಾತ್ರಿಯಿಡೀ ಕಣ್ಣೀರಿನಲ್ಲಿ ಕಳೆದಿದ್ದೇವೆ. ನಮಗೆ ಏನು ಮಾಡಬೇಕು, ಎಲ್ಲಿಗೆ ಹೋಗಬೇಕು ಎಂದು ನಮಗೆ ಅರ್ಥವಾಗಲಿಲ್ಲ. ಸರ್ಕಾರ ನಮಗೆ ಸಾಕಷ್ಟು ನೀಡಿದೆ. 2019 ರಲ್ಲಿ ನನಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಯಿತು. ನಾನು ಅರ್ಜುನ, ಖೇಲ್ ರತ್ನ ಪ್ರಶಸ್ತಿಯನ್ನು ಸಹ ಸ್ವೀಕರಿಸಿದ್ದೇನೆ. ನಾನು ಈ ಪ್ರಶಸ್ತಿಗಳನ್ನು ಪಡೆದಾಗ, ನಾನು ತುಂಬಾ ಸಂತೋಷ ಪಟ್ಟಿದ್ದೆ. ಆದರೆ ಇಂದು ಹೆಚ್ಚು ದುಃಖವಾಗುತ್ತಿದೆ. ಇದಕ್ಕೆ ಕಾರಣ ಮಹಿಳಾ ಕುಸ್ತಿಪಟು ತನ್ನ ಅಭದ್ರತೆಯ ಕಾರಣಕ್ಕೆ ಕ್ರೀಡೆಯನ್ನು ತೊರೆದಿರುವುದಾಗಿದೆ”
“ಕ್ರೀಡೆಗಳು ನಮ್ಮ ಮಹಿಳಾ ಕ್ರೀಡಾಪಟುಗಳನ್ನು ಸಶಕ್ತಗೊಳಿಸಿವೆ, ಅವರ ಜೀವನವನ್ನು ಬದಲಾಯಿಸಿವೆ. ಇದರ ಎಲ್ಲಾ ಶ್ರೇಯಸ್ಸು ಮೊದಲ ತಲೆಮಾರಿನ ಮಹಿಳಾ ಕ್ರೀಡಾಪಟುಗಳಿಗೆ ಸೇರಬೇಕು. ಬೇಟಿ ಬಚಾವೋ, ಬೇಟಿ ಪಢಾವೋದ ಬ್ರಾಂಡ್ ಅಂಬಾಸಿಡರ್ ಆಗಬಹುದಾದ ಮಹಿಳೆಯರು ಈಗ ತಮ್ಮ ಹೆಜ್ಜೆಗಳನ್ನು ಹಿಂತಿರುಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ವೇಳೆ ಕ್ರೀಡೆ ಮತ್ತು ನಾವು ‘ಪ್ರಶಸ್ತಿ ಪಡೆದ’ ಕುಸ್ತಿಪಟುಗಳು ಏನನ್ನೂ ಮಾಡಲಾಗಲಿಲ್ಲ. ನಮ್ಮ ಮಹಿಳಾ ಕುಸ್ತಿಪಟುಗಳನ್ನು ಅವಮಾನಿಸುವಾಗ ನಾನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತನಾಗಿ ನನ್ನ ಜೀವನವನ್ನು ನಡೆಸಲು ಸಾಧ್ಯವಿಲ್ಲ. ಆದ್ದರಿಂದ ನಾನು ನನ್ನ ಪ್ರಶಸ್ತಿಯನ್ನು ನಿಮಗೆ ಹಿಂದಿರುಗಿಸುತ್ತೇನೆ” ಎಂದು ಬಜ್‌ರಂಗ್ ಪುನಿಯಾ ಅವರು ಬರೆದಿದ್ದಾರೆ.
ವಿಡಿಯೊ ನೋಡಿ: ಅಂಗನವಾಡಿ ನೌಕರರಿಗೆ ಇಡಿಗಂಟು : ಹೈಕೋರ್ಟ್ ನಿರ್ದೇಶನ ಸರಿ ಇಲ್ಲ – ಎಸ್ ವರಲಕ್ಷ್ಮೀ ಆಕ್ರೋಶ