– ವಸಂತರಾಜ ಎನ್.ಕೆ
ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಬ್ರಿಕ್ಸ್‌ನ 15 ನೇ ಶೃಂಗಸಭೆಯು ಜಗತ್ತಿನ ಅಭೂತಪೂರ್ವ ಗಮನ ಸೆಳೆದಿದೆ. ಆರು ಹೊಸ ದೇಶಗಳನ್ನು ಸೇರಿಸಿಕೊಂಡು ಅದರ ವಿಸ್ತರಣೆಯಾಗಿದೆ. ಆದರೆ 22 ದೇಶಗಳು ಕ್ಯೂನಲ್ಲಿದ್ದವು ಮತ್ತು ಉಳಿದವು ಇನ್ನೂ ಕ್ಯೂನಲ್ಲಿವೆ. ಬ್ರಿಕ್ಸ್ ಯಾಕೆ ಇದ್ದಕ್ಕಿದ್ದ ಹಾಗೆ ಇಷ್ಟು ದೇಶಗಳಿಗೆ ಆಕರ್ಷಕವಾಗಿದೆ? ಕೆಲವರು ಹೇಳುವಂತೆ ಬ್ರಿಕ್ಸ್ ಸಾಮ್ರಾಜ್ಯಶಾಹಿ ನೇತೃತ್ವದ ವಿಶ್ವ ವ್ಯವಸ್ಥೆಗೆ ಪ್ರಗತಿಪರ ಪರ್ಯಾಯವೇ? ಅಲ್ಲ. ಆದರೆ ವಿಸ್ತೃತ BRICS ಬಹುಪಕ್ಷೀಯತೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಮತ್ತು ಸಾಮ್ರಾಜ್ಯಶಾಹಿ ವಿರುದ್ಧದ ಹೋರಾಟದಲ್ಲಿ ಬಹುಪಕ್ಷೀಯತೆಯನ್ನು ಖಂಡಿತವಾಗಿಯೂ ಬಳಸಬಹುದು.
*************
ಆಗಸ್ಟ್ 22-24, 2023 ರಿಂದ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಬ್ರಿಕ್ಸ್‌ನ 15 ನೇ ಶೃಂಗಸಭೆಯು ಅದರ ವಿಸ್ತರಣೆಯೊಂದಿಗೆ ಮುಕ್ತಾಯವಾಯಿತು. ಜನವರಿ 1, 2024 ರಿಂದ ಗುಂಪಿಗೆ ಸೇರಲು ಆರು ಹೊಸ ದೇಶಗಳನ್ನು ಆಹ್ವಾನಿಸಲಾಗಿದೆ. ಸೌದಿ ಅರೇಬಿಯಾ, ಇರಾನ್, ಈಜಿಪ್ಟ್, ಯುಎಇ, ಇಥಿಯೋಪಿಯಾ ಮತ್ತು ಅರ್ಜೆಂಟೀನಾ ಈಗ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ಗಳನ್ನು ಬ್ರಿಕ್ಸ್‌ನಲ್ಲಿ ಸೇರಿಕೊಂಡಿವೆ. ಬ್ರಿಕ್ಸ್ ರಚನೆಯ ನಂತರ (ದಕ್ಷಿಣ ಆಫ್ರಿಕಾ ಸೇರಿದಾಗ BRIC ನಿಂದ BRICS ಗೆ ಆದ ವಿಸ್ತರಣೆಯನ್ನು ಬಿಟ್ಟರೆ) ವೇದಿಕೆಯನ್ನು ವಿಸ್ತರಿಸಿರುವುದು ಇದೇ ಮೊದಲು. ವರದಿಗಳ ಪ್ರಕಾರ, 40 ದೇಶಗಳು ಈ ಗುಂಪಿಗೆ ಸೇರಲು ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸಿವೆ, ಆದರೆ 22 ದೇಶಗಳು ತಮ್ಮ ಔಪಚಾರಿಕ ಅರ್ಜಿಗಳನ್ನು ಕಳುಹಿಸಿವೆ. ಇವುಗಳಲ್ಲಿ, ಆರು ದೇಶಗಳನ್ನು ಈಗ ಔಪಚಾರಿಕವಾಗಿ ಗುಂಪಿಗೆ ಸೇರಲು ಆಹ್ವಾನಿಸಲಾಗಿದೆ.
ನಮ್ಮ ದೇಶದೊಳಗಿನ ‘ರಾಜಕೀಯ ವೀಕ್ಷಕರ’ ಒಂದು ವಿಭಾಗವು ಬ್ರಿಕ್ಸ್‌ನ ವಿಸ್ತರಣೆಯ ಬಗ್ಗೆ ತಮ್ಮ ಆತಂಕಗಳನ್ನು ವ್ಯಕ್ತಪಡಿಸಿತು ಮತ್ತು ಭಾರತ ಸರ್ಕಾರವು ಅದನ್ನು ಒಪ್ಪಿಕೊಳ್ಳಬಾರದು ಎಂದು ಬಯಸಿತು. ತಮ್ಮ US ಪರವಾದ ನಿಲುವಿನಿಂದ ಪ್ರೇರೇಪಿಸಲ್ಪಟ್ಟ ಅವರು ಭಾರತವು BRICS ನಂತಹ ಬಹುಪಕ್ಷೀಯ ಗುಂಪುಗಳಲ್ಲಿ ಸಕ್ರಿಯವಾಗಿರಬಾರದು ಎಂದು ಬಯಸಿದ್ದರು. ಆದರೂ, ಭಾರತ ಸರಕಾರಕ್ಕೆ ಬ್ರಿಕ್ಸ್‌ನ ಪ್ರಯೋಜನಗಳನ್ನು ಮತ್ತು ಅದರ ವಿಸ್ತರಣೆಯ ಅಗತ್ಯವನ್ನು ಗುರುತಿಸಲು ಸಾಧ್ಯವಾಯಿತು ಎಂಬುದು ಗಮನಾರ್ಹ.
ಹೊಸ ಸದಸ್ಯರ ಆಯ್ಕೆಯ ಮಾನದಂಡ
ಹೊಸ ಸದಸ್ಯರ ಆಯ್ಕೆಗೆ ಅಳವಡಿಸಲಾಗಿರುವ ಮಾನದಂಡವಾಗಿ. – ಅಭ್ಯರ್ಥಿ ದೇಶಗಳ ‘ತೂಕ’, ಪ್ರಾಮುಖ್ಯತೆ ಮತ್ತು ಅಂತರರಾಷ್ಟ್ರೀಯ ಸ್ಥಾನಮಾನ – ಇವು ಪ್ರಾಥಮಿಕ ಅಂಶಗಳಾಗಿದ್ದವು.. ಬಹುಧ್ರುವೀಯ ವಿಶ್ವ ವ್ಯವಸ್ಥೆಯಲ್ಲಿ ನಂಬಿಕೆ ಮತ್ತು ಅಂತರಾಷ್ಟ್ರೀಯ ಸಂಬಂಧಗಳಲ್ಲಿ ಹೆಚ್ಚಿನ ಪ್ರಜಾಪ್ರಭುತ್ವ ಮತ್ತು ನ್ಯಾಯದ ಅಗತ್ಯವನ್ನು ನಂಬುವ ಸಮಾನ ಮನಸ್ಕ ದೇಶಗಳನ್ನು ಸೇರಿಸಿಕೊಳ್ಳಬೇಕು ಜಾಗತಿಕ ಆಡಳಿತದಲ್ಲಿ ಜಾಗತಿಕ ದಕ್ಷಿಣವು (ಅಭಿವೃದ್ಧಿಶೀಲ ಮತ್ತು ಬಡ ದೇಶಗಳ ಗುಂಪು) ದೊಡ್ಡ ಪಾತ್ರವನ್ನು ವಹಿಸುವುದರ ಕುರಿತು ಸ್ಪಷ್ಟತೆ ಇರುವ ಮತ್ತು ಆಧ್ಯತೆ ಕೊಡುವವರ ಅಗತ್ಯವಿದೆ, ಎಂಬುದು ಬ್ರಿಕ್ಸ್ ನ ಸರ್ವಸಮ್ಮತ ಆಶಯವಾಗಿತ್ತು. ಈ ಆರು ದೇಶಗಳು ಈ ಮಾನದಂಡಗಳನ್ನು ಸಂಪೂರ್ಣವಾಗಿ ಪೂರೈಸುತ್ತವೆ.
ಈ ಆರು ದೇಶಗಳಲ್ಲಿ ಕೆಲವು ಒಂದು ಕಾಲದಲ್ಲಿ US ನ ನಿಕಟ ಮಿತ್ರರಾಷ್ಟ್ರಗಳಾಗಿದ್ದವು. ಅವರು ಬ್ರಿಕ್ಸ್‌ಗೆ ಸೇರುವುದು ಯುಎಸ್ ಕಡೆಗೆ ಅವರ ವರ್ತನೆಯಲ್ಲಿ ಬದಲಾವಣೆಯನ್ನು ಸೂಚಿಸುವುದಿಲ್ಲವಾದರೂ, ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ಹೆಚ್ಚಿನ ಆಯ್ಕೆಗಳನ್ನು ಪಡೆಯಲು ಅವರ ಆಸಕ್ತಿಯನ್ನು ಇದು ಖಂಡಿತವಾಗಿಯೂ ತೋರಿಸುತ್ತದೆ. ಬ್ರಿಕ್ಸ್‌ನಲ್ಲಿ ಪಶ್ಚಿಮ ಏಷ್ಯಾ-ಉತ್ತರ ಆಫ್ರಿಕಾ ಪ್ರದೇಶದಿಂದ ನಾಲ್ಕು ದೇಶಗಳ ಉಪಸ್ಥಿತಿಯು ಈ ಪ್ರದೇಶದಲ್ಲಿ ಬದಲಾಗುತ್ತಿರುವ ಸಮೀಕರಣಗಳನ್ನು ಸೂಚಿಸುತ್ತದೆ.
ಈ ಆರು ದೇಶಗಳ ಸೇರ್ಪಡೆಯೊಂದಿಗೆ, BRICS ಒಂದು ಗುಂಪಾಗಿ ಈಗ ವಿಶ್ವದ ಶೇ. 47 ರಷ್ಟು ಜನಸಂಖ್ಯೆಯನ್ನು ಮತ್ತು ಒಟ್ಟು ವಿಶ್ವದ GDP ಯ ಶೇ. 36ನ್ನು ಹೊಂದಿದೆ. ಈ ಸಂಖ್ಯೆಗಳು ನಿಸ್ಸಂಶಯವಾಗಿ ಗುಂಪಿನ ‘ತೂಕ’ವನ್ನು ಹೆಚ್ಚಿಸುತ್ತಾ ಗಮನವನ್ನು ಸೆಳೆಯುತ್ತವೆ. ಹಾಗಾಗಿಯೇ ಈ ಮಹತ್ವದ ಫಲಿತಾಂಶ ಇಡೀ ಜಗತ್ತಿನ ಗಮನ ಸೆಳೆದಿದೆ.
ಬ್ರಿಕ್ಸ್‌ನ ಹಿಂದಿನ ಸಭೆಗಳನ್ನು ಯುಎಸ್ ನೇತೃತ್ವದ ಅಭಿವೃದ್ಧಿ ಹೊಂದಿದ ದೇಶಗಳು ಕೆಲಸಕ್ಕೆ ಬಾರದ್ದು ಎಂದು ಸಾರುತ್ತಾ ನಿರ್ಲಕ್ಷಿಸಿದ್ದವು. ಆದರೆ ಈ ಶೃಂಗಸಭೆಯು ಸಂಪೂರ್ಣವಾಗಿ ಬದಲಾದ ಸಂದರ್ಭಗಳಲ್ಲಿ ನಡೆದದ್ದರಿಂದ ವಿಶೇಷ ಗಮನ ಸೆಳೆಯಿತು. ಅಭಿವೃದ್ಧಿ ಹೊಂದಿದ ದೇಶಗಳನ್ನು ಗಮನ ಸೆಳೆಯಲು ಕಾರಣವಾದ್ದು ಉಕ್ರೇನ್‌ನಲ್ಲಿನ ಯುದ್ಧ ಮಾತ್ರವಲ್ಲ. ಹಲವಾರು ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ಹೆಚ್ಚುತ್ತಿರುವ ಆರ್ಥಿಕ ಪ್ರಭಾವ ಮತ್ತು ಯು.ಎಸ್ ಮತ್ತು ಅದರ ಮಿತ್ರರಾಷ್ಟ್ರಗಳು ಹಾಗೂ ರಷ್ಯಾ ಮತ್ತು ಚೀನಾಗಳ ನಡುವೆ ಹೆಚ್ಚುತ್ತಿರುವ ಸಂಘರ್ಷವೂ ಈ ಹೆಚ್ಚಿದ ಆಸಕ್ತಿಗೆ ಪ್ರಮುಖ ಕಾರಣಗಳಾಗಿವೆ. ನಂತರ ಆರ್ಥಿಕ ಅಂಶವಿದೆ – ವಿಶ್ವದ ಜನಸಂಖ್ಯೆಯ ಸುಮಾರು ಶೇ, 41 ಜನರು ವಾಸಿಸುವ BRICS, ಕಳೆದ ವರ್ಷ ಜಾಗತಿಕ GDP ಬೆಳವಣಿಗೆಗೆ ತಮ್ಮ ಕೊಡುಗೆಯಲ್ಲಿ (PPP ವಿಧಾನದಲ್ಲಿ ಅಂದರೆ ಅಂತರರಾಷ್ಟ್ರೀಯ ವಿನಿಮಯ ದರದ ಬದಲು ಜೀವನಾಧಾರ ಮತ್ತಿತರ ವಸ್ತುಗಳನ್ನು ಕೊಳ್ಳುವ ಶಕ್ತಿಯ ಆಧಾರದ ಹೋಲಿಕೆ) G-7 ದೇಶಗಳನ್ನು ಹಿಂದಿಕ್ಕಿದೆ.
ಇದನ್ನೂ ಓದಿ : ಬ್ರಿಕ್ಸ್ ವಿಸ್ತರಣೆ ಮತ್ತು ಡಾಲರ್ ಪ್ರಾಬಲ್ಯಕ್ಕೆ ಸವಾಲು
ಬ್ರಿಕ್ಸ್ ನ ನಿಜವಾದ ಬಹುಪಕ್ಷೀಯತೆ ಆಕರ್ಷಕ
2009 ರಲ್ಲಿ ಪ್ರಾರಂಭವಾದಾಗಿನಿಂದ, BRICS ದಕ್ಷಿಣ-ದಕ್ಷಿಣ ಸಹಕಾರ, ಬಹುಪಕ್ಷೀಯತೆ, ಹೆಚ್ಚು ಪ್ರಾತಿನಿಧಿಕ ಮತ್ತು ನ್ಯಾಯಯುತವಾದ ಅಂತರರಾಷ್ಟ್ರೀಯ ವಿಶ್ವ ವ್ಯವಸ್ಥೆಗೆ ಬದ್ಧವಾಗಿರುವ ಗುಂಪು ಎಂದು ಘೋಷಿಸಿತು. ಉಕ್ರೇನ್‌ನಲ್ಲಿ ಯುದ್ಧವನ್ನು ನಡೆಸುವಲ್ಲಿ US ಮತ್ತು ಅದರ NATO ಮಿತ್ರರಾಷ್ಟ್ರಗಳ ಪಾತ್ರವು ಅನೇಕ ದೇಶಗಳನ್ನು ತಮ್ಮ ವಿದೇಶಾಂಗ ನೀತಿಯ ಆದ್ಯತೆಗಳನ್ನು ಪುನರ್ವಿಮರ್ಶಿಸಲು ಒತ್ತಾಯಿಸಿದೆ. ಯುಎಸ್ ತನ್ನ ರಾಜಕೀಯ, ಆರ್ಥಿಕ ಮತ್ತು ಮಿಲಿಟರಿ ಶಕ್ತಿಯನ್ನು ಬಳಸಿಕೊಂಡು ಅನೇಕ ದೇಶಗಳನ್ನು ರಷ್ಯಾ ವಿರೋಧಿ ನಿಲುವನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಲು ಪ್ರಯತ್ನಿಸಿತು. ಇದು ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳೊಂದಿಗೆ ವಿಫಲವಾಗಿದೆ, ವಿಶೇಷವಾಗಿ ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕಾದ ದೇಶಗಳು, US ಆಣತಿಯಂತೆ ನಡೆಯಲು ನಿರಾಕರಿಸಿದವು. ಅವು ಬಹುಮಟ್ಟಿಗೆ ತಟಸ್ಥವಾಗಿದ್ದವು ಮತ್ತು ಈ ಸಂಘರ್ಷವನ್ನು ಇನ್ನಷ್ಟು ತೀವ್ರಗೊಳಿಸಿದ ಮತ್ತು ವಿಸ್ತರಿಸಿದ ಉಕ್ರೇನ್‌ಗೆ US/NATO ನಿಂದ ನೀಡಿದ ಮಿಲಿಟರಿ ಬೆಂಬಲದ ವಿರುದ್ಧ ತಮ್ಮ ಕಳವಳವನ್ನು ವ್ಯಕ್ತಪಡಿಸಿದರು,
ಬ್ರಿಕ್ಸ್ ಅಂತಹ ದೇಶಗಳನ್ನು ಆಕರ್ಷಿಸಿತು, ಏಕೆಂದರೆ ರಷ್ಯಾ ನೇರವಾಗಿ ಸಂಘರ್ಷದಲ್ಲಿ ಭಾಗಿಯಾಗಿದ್ದರೂ, ರಷ್ಯಾವನ್ನು ಬೆಂಬಲಿಸಲು ಅಥವಾ ರಷ್ಯಾದ ಪರ ನಿಲುವು ತೆಗೆದುಕೊಳ್ಳಲು ಯಾವುದೇ ಒತ್ತಡ ಇರಲಿಲ್ಲ. ಶೃಂಗಸಭೆಯ ಮುಕ್ತಾಯದ ನಂತರ ಅಂಗೀಕರಿಸಲಾದ ಜಂಟಿ ಘೋಷಣೆ – ಜೋಹಾನ್ಸ್‌ಬರ್ಗ್ II ಘೋಷಣೆ – ಹೀಗೆ ಹೇಳುತ್ತದೆ: “ವಿಶ್ವಸಂಸ್ಥೆಯ ಭದ್ರತಾ ಸಮಿತಿ ಮತ್ತು ಸಾಮಾನ್ಯ ಸಭೆ ಸೇರಿದಂತೆ ಸೂಕ್ತ ವೇದಿಕೆಗಳಲ್ಲಿ ವ್ಯಕ್ತಪಡಿಸಿದಂತೆ ಉಕ್ರೇನ್ ಮತ್ತು ಅದರ ಸುತ್ತಮುತ್ತಲಿನ ಸಂಘರ್ಷಕ್ಕೆ ಸಂಬಂಧಿಸಿದಂತೆ ನಮ್ಮ ರಾಷ್ಟ್ರೀಯ ನಿಲುವುಗಳನ್ನು ನಾವು ನೆನಪಿಸಿಕೊಳ್ಳುತ್ತೇವೆ. ಆಫ್ರಿಕನ್ ನಾಯಕರ ಶಾಂತಿ ಅಭಿಯಾನ ಮತ್ತು ಶಾಂತಿಗಾಗಿ ಉದ್ದೇಶಿತ ಮಾರ್ಗವನ್ನು ಒಳಗೊಂಡಂತೆ, ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಸಂಘರ್ಷವನ್ನು ಶಾಂತಿಯುತವಾಗಿ ಪರಿಹರಿಸುವ ಗುರಿಯನ್ನು ಹೊಂದಿರುವ ಮಧ್ಯಸ್ಥಿಕೆ ಮತ್ತು ಈ ಸಂಬಂಧಿತ ಪ್ರಸ್ತಾಪಗಳನ್ನು ನಾವು ಮೆಚ್ಚುಗೆಯೊಂದಿಗೆ ಗಮನಿಸುತ್ತೇವೆ” ಗುಂಪಿನಲ್ಲಿ ಉಕ್ರೇನ್ ಯುದ್ಧದ ಕುರಿತು ವಿಭಿನ್ನ ‘ರಾಷ್ಟ್ರೀಯ ನಿಲುವುಗಳು’ ಇವೆ, ಆದರೆ ಮುಖ್ಯ ಅಂಶವೆಂದರೆ, ಅವರೆಲ್ಲರೂ ಸಂಘರ್ಷವನ್ನು ತಕ್ಷಣವೇ ನಿಲ್ಲಿಸಲು ಮತ್ತು ಶಾಂತಿಯ ಮರುಸ್ಥಾಪನೆಯನ್ನು ಬಯಸುತ್ತಾರೆ.
ಅನೇಕ ದೇಶಗಳಿಗೆ ಯುಎಸ್ ಬಗ್ಗೆ ಕಿರಿಕಿರಿ ಉಂಟು ಮಾಡಿದ ಎರಡನೆಯ ಅಂಶವೆಂದರೆ, ಅದರ ಪ್ರಾಬಲ್ಯವನ್ನು ಪ್ರಶ್ನಿಸುವ ಯಾವುದೇ ದೇಶದ ವಿರುದ್ಧ ನಿರ್ಬಂಧಗಳನ್ನು ಅಸ್ತ್ರವಾಗಿ ಬಳಸುವುದು. ಸುಮಾರು 36 ದೇಶಗಳು ಯುಎಸ್ ನಿರ್ಬಂಧಗಳನ್ನು ಎದುರಿಸುತ್ತಿವೆ ಮತ್ತು ಈ ನಿರ್ಬಂಧಗಳಲ್ಲಿ ಹಲವು ವಿಶ್ವಸಂಸ್ಥೆಯ ನಿಯಮಗಳನ್ನು ನಿರ್ಲಕ್ಷಿಸಿ ವಿಧಿಸಲಾಗಿದೆ. ಕ್ಯೂಬಾ, ವೆನೆಜುವೆಲಾ, ಇರಾನ್, ಇರಾಕ್ ಮುಂತಾದ ದೇಶಗಳ ಮೇಲೆ ಯುಎಸ್ ವಿಧಿಸಿರುವ ನಿರ್ಬಂಧಗಳನ್ನು ಅವರ ಆರ್ಥಿಕತೆಯನ್ನು ದುರ್ಬಲಗೊಳಿಸಲು, ಅಶಾಂತಿಯನ್ನು ಸೃಷ್ಟಿಸಲು ಮತ್ತು ಆಡಳಿತ ಬದಲಾವಣೆಗೆ ಒತ್ತಾಯಿಸಲು ಬಳಸಲಾಗುತ್ತದೆ ಎಂಬುದು ಮತ್ತೆ ಮತ್ತೆ ಸಾಬೀತಾಗಿದೆ.
ನಿರ್ಬಂಧಗಳ ದುರ್ಬಳಕೆಯ ವಿರುದ್ಧ ಆಕ್ರೋಶ
ಜನರ ಸಾರ್ವಭೌಮ, ಪ್ರಜಾಸತ್ತಾತ್ಮಕ ಇಚ್ಛೆಯನ್ನು ಉಲ್ಲಂಘಿಸಲು ನಿರ್ಬಂಧಗಳ ಬಳಕೆಯನ್ನು ಎಲ್ಲೆಡೆ ದ್ವೇಷಿಸಲಾಗುತ್ತಿದೆ. BRICS ಅಂಗೀಕರಿಸಿದ ಘೋಷಣೆಯು ಈ ಭಾವನೆಯನ್ನು ಪ್ರತಿಬಿಂಬಿಸುತ್ತದೆ: “ಯುಎನ್‌ನ ಚಾರ್ಟರ್‌ನ ತತ್ವಗಳಿಗೆ ಹೊಂದಿಕೆಯಾಗದ ಏಕಪಕ್ಷೀಯ ಬಲವಂತದ ಕ್ರಮಗಳ ಬಳಕೆಯ ಬಗ್ಗೆ ನಾವು ಕಳವಳ ವ್ಯಕ್ತಪಡಿಸುತ್ತೇವೆ ಮತ್ತು ಪ್ರಮುಖವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಇದು ನಕಾರಾತ್ಮಕ ಪರಿಣಾಮಗಳನ್ನು ಉಂಟುಮಾಡುತ್ತವೆ”. ಮತ್ತು “ಬ್ರಿಕ್ಸ್ ಸದಸ್ಯರು ಕೃಷಿ ವ್ಯಾಪಾರದ ಮೇಲೆ ಪರಿಣಾಮ ಬೀರುವ ನಿರ್ಬಂಧಗಳಂತಹ ಏಕಪಕ್ಷೀಯ ಕಾನೂನುಬಾಹಿರ ಕ್ರಮಗಳು ಸೇರಿದಂತೆ WTO ನಿಯಮಗಳಿಗೆ ಹೊಂದಿಕೆಯಾಗದ ವ್ಯಾಪಾರವನ್ನು ನಿರ್ಬಂಧಿಸುವ ಕ್ರಮಗಳ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸುತ್ತಾರೆ.”
ದೇಶಗಳನ್ನು ತನ್ನ ಆದೇಶಗಳನ್ನು ಅನುಸರಿಸುವಂತೆ ಒತ್ತಾಯಿಸಲು ಆಯುಧವಾಗಿ ಡಾಲರ್‌ನ ಹೆಚ್ಚುತ್ತಿರುವ ಬಳಕೆಯು ಸಹ, ಅವುಗಳನ್ನು ವ್ಯಾಪಾರಕ್ಕೆ ಇತರ ಆಯ್ಕೆಗಳನ್ನು ಹುಡುಕುವಂತೆ ಮಾಡಿತು. ತನ್ನ ಆರ್ಥಿಕತೆಯನ್ನು ಎದುರಿಸುತ್ತಿರುವ ಸವಾಲುಗಳನ್ನು ಎದುರಿಸಲು ತನ್ನ ಬಡ್ಡಿದರಗಳನ್ನು ಬದಲಾಯಿಸುವ ಸಾರ್ವಭೌಮ ಹಕ್ಕನ್ನು US ಹೊಂದಿದೆ. ಆದರೆ ಸಮಸ್ಯೆಯೆಂದರೆ, ಡಾಲರ್ ವಾಸ್ತವಿಕ ವಿಶ್ವ ಕರೆನ್ಸಿಯಾಗಿರುವುದರಿಂದ, US ನಲ್ಲಿನ ಬಡ್ಡಿದರಗಳಲ್ಲಿನ ಬದಲಾವಣೆಯು ಅದರ ಸಮಸ್ಯೆಗಳನ್ನು ವಿಶ್ವ ಆರ್ಥಿಕತೆಯ ಮೇಲೆ ಹೆಚ್ಚಾಗಿ ಪ್ರತಿಕೂಲ ಪರಿಣಾಮ ಬೀರುವಂತೆ ವರ್ಗಾಯಿಸುತ್ತದೆ. ಅಂತಹ ಪ್ರತಿಕೂಲ ಪರಿಣಾಮಗಳಿಂದ ತಮ್ಮ ಆರ್ಥಿಕತೆಯನ್ನು ರಕ್ಷಿಸಲು, ಸಾಮ್ರಾಜ್ಯಶಾಹಿ ವಿಶ್ವ ವ್ಯವಸ್ಥೆಯನ್ನು ಉಲ್ಲಂಘಿಸದೆ, ಒಂದೇ ಕರೆನ್ಸಿಯ ಪ್ರಾಬಲ್ಯಕ್ಕೆ ಸವಾಲು ಹಾಕುವ ಪ್ರಯತ್ನಗಳು ನಡೆಯುತ್ತಿವೆ. ರಾಷ್ಟ್ರೀಯ ಕರೆನ್ಸಿಗಳಲ್ಲಿನ ವ್ಯಾಪಾರ, ಡಾಲರ್ ಬದಲಿಗೆ ಕರೆನ್ಸಿಗಳ ಗುಚ್ಛದ ಬಳಕೆ ಎಲ್ಲವೂ ಡಾಲರ್ ಪ್ರಾಬಲ್ಯದಿಂದ ಪಾರಾಗಲು ಪರ್ಯಾಯವಾಗಿ ಪ್ರಯೋಗದಲ್ಲಿದೆ.
ಈ ವಿಡಿಯೋ ನೋಡಿ : ಸತ್ತವರಿಗೆ ಚಿಕಿತ್ಸೆ, ಶಸ್ತ್ರಚಿಕಿತ್ಸೆಗೆ ಮುನ್ನ ಡಿಸ್ಚಾರ್ಜ್ ಇದು ಆಯುಷ್ಮಾನ್ ಭಾರತ್ ಕಥೆ ವ್ಯಥೆ
ಡಾಲರ್ ಶಸ್ತ್ರೀಕರಣದ ವಿರುದ್ಧ ಕ್ರಮಗಳು
ರಾಷ್ಟ್ರೀಯ ಕರೆನ್ಸಿಗಳಲ್ಲಿ ವ್ಯಾಪಾರ ಮಾಡುವ ಬ್ರಿಕ್ಸ್‌ನ ಪ್ರಯತ್ನಗಳಿಂದ ಅದರ ಆಕರ್ಷಣೆಯು ಹೆಚ್ಚಿದೆ. ಬ್ರಿಕ್ಸ್ ಶೃಂಗಸಭೆಯು ತನ್ನ ಹಣಕಾಸು ಮಂತ್ರಿಗಳು/ಕೇಂದ್ರೀಯ ಬ್ಯಾಂಕ್‌ಗಳ ಗವರ್ನರ್‌ಗಳಿಗೆ ಈ ಸಮಸ್ಯೆಯನ್ನು ಪರಿಶೀಲಿಸುವ ಜವಾಬ್ದಾರಿ ವಹಿಸಿತ್ತು. “ಬ್ರಿಕ್ಸ್ ಮತ್ತು ಅವರ ವ್ಯಾಪಾರ ಪಾಲುದಾರರ ನಡುವಿನ ಅಂತರರಾಷ್ಟ್ರೀಯ ವ್ಯಾಪಾರ ಮತ್ತು ಹಣಕಾಸಿನ ವಹಿವಾಟುಗಳಲ್ಲಿ ಸ್ಥಳೀಯ ಕರೆನ್ಸಿಗಳ ಬಳಕೆಯನ್ನು ಪ್ರೋತ್ಸಾಹಿಸುವ ಪ್ರಾಮುಖ್ಯತೆಯನ್ನು ನಾವು ಒತ್ತಿ ಹೇಳುತ್ತೇವೆ. ಬ್ರಿಕ್ಸ್ ದೇಶಗಳ ನಡುವೆ ಬ್ಯಾಂಕಿಂಗ್ ನೆಟ್‌ವರ್ಕ್‌ಗಳನ್ನು ಬಲಪಡಿಸಲು ಮತ್ತು ಸ್ಥಳೀಯ ಕರೆನ್ಸಿಗಳಲ್ಲಿ ವ್ಯಾಪಾರ ಪೂರೈಸುವುದನ್ನು ಸಾಧ‍್ಯಗೊಳಿಸಲು ನಾವು ಪ್ರೋತ್ಸಾಹಿಸುತ್ತೇವೆ.” ಇದು ಅ-ಡಾಲರೀಕರಣ ಕಡೆಗೆ ಮತ್ತೊಂದು ಹೆಜ್ಜೆಯಾಗಲಿದೆ.
2014 ರಲ್ಲಿ ಬ್ರಿಕ್ಸ್ ಸ್ಥಾಪಿಸಿದ ಹೊಸ ಅಭಿವೃದ್ಧಿ ಬ್ಯಾಂಕ್ (NDB) ಮತ್ತೊಂದು ಆಕರ್ಷಣೆಯ ಅಂಶವಾಗಿದೆ. IMF ಮತ್ತು ವಿಶ್ವ ಬ್ಯಾಂಕ್ ವಿತರಿಸಿದ ಷರತ್ತು-ಹೊತ್ತ ಸಾಲಗಳಿಗಿಂತ NDB ಸಾಲಗಳನ್ನು ಹೆಚ್ಚು ಆಕರ್ಷಕವೆಂದು ಪರಿಗಣಿಸಲಾಗಿದೆ. IMF ಕೊಟ್ಟ ಭರವಸೆಯ ಸುಧಾರಣೆಯನ್ನು ಮತ್ತು ಅದರ ಕಾರ್ಯನಿರ್ವಹಣೆಯ ಪ್ರಜಾಪ್ರಭುತ್ವೀಕರಣವನ್ನು ಕಾರ್ಯಗತಗೊಳಿಸದಿರುವುದು, NDB ಅನ್ನು ಆಕರ್ಷಕ ಪರ್ಯಾಯವಾಗಿ ಮಾಡುತ್ತದೆ. ಇದಲ್ಲದೆ, ಸಾಲಗಾರ ದೇಶಗಳ ಆಂತರಿಕ ವ್ಯವಹಾರಗಳಲ್ಲಿ ಮಧ್ಯಪ್ರವೇಶಿಸಲು ಐಎಂಎಫ್-ವಿಶ್ವಬ್ಯಾಂಕ್ ಅನ್ನು ಹಣಕಾಸಿನ-ಅಸ್ತ್ರವಾಗಿ ಬಳಸಲಾಗುತ್ತದೆ. ಬ್ರಿಕ್ಸ್‌ನ ವಿಸ್ತರಣೆಗೆ ಮುಂಚೆಯೇ, ಬಾಂಗ್ಲಾದೇಶ, ಯುಎಇ, ಈಜಿಪ್ಟ್, ಉರುಗ್ವೆ ಇತ್ಯಾದಿಗಳನ್ನು ಎನ್‌ಡಿಬಿಯ ಸದಸ್ಯರನ್ನಾಗಿ ಸ್ವೀಕರಿಸಲಾಯಿತು.
ಘೋಷಣೆಯು BRICS ನ ಕೆಲವು ಪ್ರಮುಖ ನಿಲುವುಗಳ ಪುನರುಚ್ಛರಣೆಯನ್ನು ಒಳಗೊಂಡಿದೆ. ಪ್ಯಾಲೆಸ್ಟೈನ್‌ನಲ್ಲಿ, ಮುಂದುವರಿದ ಇಸ್ರೇಲಿ ಆಕ್ರಮಣದ ಅಡಿಯಲ್ಲಿ ಹೆಚ್ಚುತ್ತಿರುವ ಹಿಂಸಾಚಾರ ಮತ್ತು ಅಕ್ರಮ ವಸಾಹತುಗಳ ವಿಸ್ತರಣೆಯನ್ನು ಅದು ಗಮನಿಸಿದೆ. ಸಾರ್ವಭೌಮ, ಸ್ವತಂತ್ರ ಮತ್ತು ಕಾರ್ಯಸಾಧ್ಯವಾದ ಪ್ಯಾಲೆಸ್ಟೈನ್ ರಾಜ್ಯದ ಸ್ಥಾಪನೆಗೆ ಕಾರಣವಾಗುವ ಎರಡು-ದೇಶ ಪರಿಹಾರಕ್ಕೆ ತನ್ನ ಅಚಲ ಬೆಂಬಲವನ್ನು ಘೋಷಿಸಿದೆ. ನೈಜರ್ ಬೆಳವಣಿಗೆಗಳ ಕುರಿತು ತನ್ನ ಕಳವಳವನ್ನು ವ್ಯಕ್ತಪಡಿಸಿದೆ. ‘ಲಿಬಿಯಾದ ಸಾರ್ವಭೌಮತ್ವ, ಸ್ವಾತಂತ್ರ್ಯ, ಪ್ರಾದೇಶಿಕ ಸಮಗ್ರತೆ ಮತ್ತು ರಾಷ್ಟ್ರೀಯ ಏಕತೆ’ ಮತ್ತು “ಲಿಬಿಯಾ ನೇತೃತ್ವದ ಮತ್ತು ಲಿಬಿಯನ್ ಒಡೆತನದ” ರಾಜಕೀಯ ಪ್ರಕ್ರಿಯೆಗೆ ತನ್ನ ಬೆಂಬಲವನ್ನು ವಿಸ್ತರಿಸಿತು. ‘ಆಫ್ರಿಕನ್ ಸಮಸ್ಯೆಗಳಿಗೆ ಆಫ್ರಿಕನ್ ಪರಿಹಾರಗಳು’ ಎಂಬ ಮಾರ್ಗದರ್ಶಿ ತತ್ವವನ್ನು ಪುನರುಚ್ಚರಿಸಿದೆ.
ಬ್ರಿಕ್ಸ್ ವಿಶ್ವ ಸಾಮ್ರಾಜ್ಯಶಾಹಿ ವ್ಯವಸ್ಥೆಗೆ ಪರ್ಯಾಯ ಅಲ್ಲ!
ಐಎಂಎಫ್-ವಿಶ್ವಬ್ಯಾಂಕ್-ಡಬ್ಲ್ಯೂ.ಟಿ.ಒ ಈ ಸಂಸ್ಥೆಗಳ ಬಗೆಗಿನ ಆಳವಾದ ಸಂದೇಹ,/ಆತಂಕ ಮತ್ತು ಬ್ರಿಕ್ಸ್ ಅಳವಡಿಸಿಕೊಂಡ ನಿಲವುಗಳು ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಅದನ್ನು ಆಕರ್ಷಕ ಆಯ್ಕೆಯಾಗಿಸಿದೆ. US ದೈನಿಕ, ದಿ ನೇಷನ್’ ಬ್ರಿಕ್ಸ್‌ನ ವಿಸ್ತರಣೆಯ ಕಾರ್ಯಸೂಚಿಯನ್ನು US ನೇತೃತ್ವದ ವಿಶ್ವ ವ್ಯವಸ್ಥೆಯ ವೈಫಲ್ಯದೊಂದಿಗೆ ಜೋಡಿಸಿದೆ. “ಇದು US ನೇತೃತ್ವದ ಜಾಗತಿಕ ವ್ಯವಸ್ಥೆಯ ಗಂಭೀರ ನ್ಯೂನತೆಗಳನ್ನು ಎದುರಿಸುವ ತುರ್ತಿನ ಸೂಚನೆಯಾಗಿದೆ”. “ಜಾಗತಿಕ ದಕ್ಷಿಣ ರಾಜ್ಯಗಳ ಎರಡು ಪ್ರಮುಖ ಅವಶ್ಯಕತೆಗಳಾದ – ಆರ್ಥಿಕ ಅಭಿವೃದ್ಧಿ ಮತ್ತು ಸಾರ್ವಭೌಮತ್ವ – ಗಳನ್ನು ರಕ್ಷಿಸಲು ಗಣನೀಯವಾಗಿ ಬೆಂಬಲಿಸಲು ಯುಎಸ್ ನೇತೃತ್ವದ ವಿಶ್ವ ವ್ಯವಸ್ಥೆಯ ವೈಫಲ್ಯವು ಪರ್ಯಾಯ ವ್ಯವಸ್ಥೆ ಕಟ್ಟಲು ಬೇಡಿಕೆಯನ್ನು ಸೃಷ್ಟಿಸುತ್ತಿದೆ “ಎಂದು ಅದು ಸೂಚಿಸಿದೆ.
ಯುರೋಪಿಯನ್ ಮಾಧ್ಯಮವೂ ಇದೇ ರೀತಿಯ ವಿಶ್ಲೇಷಣೆಗಳನ್ನು ಮಾಡಿದೆ – ‘ವಿಶ್ವ ವ್ಯವಸ್ಥೆಯನ್ನು ಮರುಕಟ್ಟುವ ಪ್ರಯತ್ನಕ್ಕೆ ಜಾಗತಿಕ ದಕ್ಷಿಣದಿಂದ ವಿಶಾಲ ಬೆಂಬಲದ ಸಂಕೇತ’ (ಗಾರ್ಡಿಯನ್, ಯುಕೆ); ‘ಬ್ರಿಕ್ಸ್ ಸದಸ್ಯತ್ವಕ್ಕಾಗಿ ಸುಮಾರು 40 ದೇಶಗಳ ಉತ್ಸಾಹವು ವಿಶ್ವ ವೇದಿಕೆಯಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳ ಹೆಚ್ಚುತ್ತಿರುವ ಪ್ರಭಾವಕ್ಕೆ ಸಾಕ್ಷಿಯಾಗಿದೆ’ (ಲೆ ಫಿಗರೊ, ಫ್ರಾನ್ಸ್) ಮತ್ತು ‘ಬ್ರಿಕ್ಸ್ ಗಮನಾರ್ಹವಾದ ಭೌಗೋಳಿಕ ರಾಜಕೀಯ ಮತ್ತು ಆರ್ಥಿಕ ತೂಕವನ್ನು ಗಳಿಸಿದೆ’ (ಸುಡ್ಡೆಚ್ ಝೈತುಂಗ್, ಜರ್ಮನಿ).
ಬ್ರಿಕ್ಸ್‌ನ ವಿಸ್ತರಣೆಯ ಎಲ್ಲಾ ಸಕಾರಾತ್ಮಕ ಅಂಶಗಳನ್ನು ಗಮನಿಸುತ್ತಲೇ, ಅದು ಸಾಮ್ರಾಜ್ಯಶಾಹಿ ನೇತೃತ್ವದ ವಿಶ್ವ ವ್ಯವಸ್ಥೆಗೆ ಪ್ರಗತಿಪರ ಪರ್ಯಾಯವಾಗಿ ಹೊರಹೊಮ್ಮುತ್ತಿದೆ ಎಂಬ ತೀರ್ಮಾನಕ್ಕೆ ಬರದಂತೆ ಎಚ್ಚರಿಕೆ ವಹಿಸಬೇಕು. BRICS ನಿಸ್ಸಂಶಯವಾಗಿ ಸಾಮ್ರಾಜ್ಯಶಾಹಿ ವಿರೋಧಿ ಅಥವಾ ಪಶ್ಚಿಮ ವಿರೋಧಿ ಗುಂಪು ಅಲ್ಲ. ಬ್ರಿಕ್ಸ್‌ನಲ್ಲಿರುವ ದೇಶಗಳು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ತಮ್ಮ ದನಿ ಕೇಳಿಸಲು ಮತ್ತು ವಿಶ್ವಸಂಸ್ಥೆಯಂತಹ ಸಂಸ್ಥೆಗಳಲ್ಲಿ ತಮ್ಮ ಕಾಳಜಿಗಳು, ಧ್ವನಿಗಳು ಮತ್ತು ಬೇಡಿಕೆಗಳನ್ನು ಕೇಳುವಂತೆ ಮಾಡುವ ಒತ್ತಡದಿಂದ ಒಗ್ಗೂಡಿವೆ.
ವಿಸ್ತೃತ BRICS ಬಹುಪಕ್ಷೀಯತೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಮತ್ತು ಸಾಮ್ರಾಜ್ಯಶಾಹಿ ವಿರುದ್ಧದ ಹೋರಾಟದಲ್ಲಿ ಬಹುಪಕ್ಷೀಯತೆಯನ್ನು ಖಂಡಿತವಾಗಿಯೂ ಬಳಸಬಹುದು.