ಪ್ರೀತಿಗೆ ಯುವತಿಯ ಪೋಷಕರ ವಿರೋಧ : ಯುವಕನ ಕಣ್ಣು ಕಿತ್ತ ದುರುಳರು

ಬೆಂಗಳೂರು : ಯುವತಿಯನ್ನು ಪ್ರೀತಿಸುತ್ತಿದ್ದ ಎಂಬ ಕಾರಣಕ್ಕೆ ಯುವತಿಯ ಪೋಷಕರು ಯುವಕನ ಕಣ್ಣಿಗೆ ಚಾಕುವಿನಿಂದ ತಿವಿದು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಪರಿಣಾಮ ಯುವಕ ಶಾಶ್ವತವಾಗಿ ಕಣ್ಣು ಕಳೆದುಕೊಂಡಿದ್ದಾನೆ.

ಈ ಘಟನೆ ನಗರದ ಹುಲಿಮಾವು ಎಂಬಲ್ಲಿ ನಡೆದಿದೆ. ಕಾಟನಾಯಕನ ಪುರದ ನಿವಾಸಿಯಾದ ಚರಣ್ ಎನ್ನುವ ವ್ಯಕ್ತಿಯ ಮೇಲೆ ಯುವತಿಯ ಪೋಷಕರು ಮಾರಣಾಂತಿಕ ಹಲ್ಲೆ ನಡೆಸಿ, ಎರಡು ಕಣ್ಣಿಗೂ ಡ್ರ್ಯಾಗರ್​​ನಿಂದ ಇರಿದಿದ್ದಾರೆ. ಯುವತಿಯ ಪೋಷಕರ ಕಡೆಯವರಾದ ಗಣೇಶ, ಸೋಮು, ಚಿಂಟು, ಮನು ಎಂಬುವವರು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆದರೆ ಪೊಲೀಸರು ಕೊಲೆ ಪ್ರಯತ್ನದ ಕೇಸ್ ದಾಖಲಿಸುವ ಬದಲು ಸಾಮಾನ್ಯ ಕೇಸ್ ದಾಖಲಿಸಿಕೊಂಡು ಆರೋಪಿಗಳ ರಕ್ಷಣೆಗೆ ನಿಂತಿದ್ದಾರೆ ಎಂದು ಚರಣ್ ಅಜ್ಜಿ ಸರೋಜಮ್ಮ ಆರೋಪಿಸಿದ್ದಾರೆ.

ಘಟನೆಯ ವಿವರ : ಕಾಟನಾಯಕನ ಪುರದ ನಿವಾಸಿಯಾದ ಚರಣ್, ಕ್ಯಾಬ್​​ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ಅದೇ ಏರಿಯಾದ ಯುವತಿಯನ್ನ ಪ್ರೀತಿಸುತ್ತಿದ್ದ. ಆ ಯುವತಿಯೂ ಚರಣ್ ನನ್ನು ಪ್ರೀತಿಸುತ್ತಿದ್ದಳು. ಆದ್ರೆ, ಯಾವಾಗ ಇವರಿಬ್ಬರ ಪ್ರೀತಿ ವಿಷಯ ಪೋಷಕರಿಗೆ ತಿಳಿಯಿತೋ, ಅಗ ತನ್ನ ಮಗಳ ತಂಟೆಗೆ ಬರಬೇಡ ಅಂತ ಚರಣ್​​ಗೆ ವಾರ್ನ್​ ಮಾಡಿ ಜಗಳವಾಡಿದ್ರಂತೆ. ಆದ್ರೆ, ಚರಣ್ ಮಾತ್ರ ತನ್ನ ಪ್ರೀತಿಯನ್ನ ಬಿಟ್ಟು ಕೊಡಲು ಸುತಾರಮ್ ಒಪ್ಪಿರಲಿಲ್ಲ. ನಾನು ಅವಳನ್ನು ಮದ್ವೆಯಾಗೋದು. ಒಬ್ಬರನ್ನೊಬ್ಬರು ಬಿಟ್ಟಿರಲು ಸಾಧ್ಯವಿಲ್ಲ ನಮಗೆ ಮದುವೆ ಮಾಡಿಸಿ ಎಂದು ಕೇಳಿಕೊಂಡಿದ್ದರಂತೆ.

ನಮ್ಮ ಮಾತು ಚರಣ್ ಕೇಳುತ್ತಿಲ್ಲ ಎನ್ನುವುದನ್ನು ಅರಿತ ಪೋಷಕರು ಆಗ ಆಯ್ಕೆ ಮಾಡಿಕೊಂಡಿದ್ದು ಇದೇ ದಾರಿಯನ್ನು. ಚರಣ್ ಜನವರಿ 11, 2022 ರಂದು ರಾತ್ರಿ 10.30 ರ ಸುಮಾರಿನಲ್ಲಿ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅವರಜ್ಜಿ ಮನೆಗೆ ಹೋಗುವಾಗ ನಾಲ್ವರು ಮಾರಣಾಂತಿಕ ಹಲ್ಲೆ ಮಾಡಿದ್ದರು. ಚರಣ್ ಗೆ ಪರಿಚಿತ ಗಣೇಶ್ ಮತ್ತು ಆತನ ಸ್ನೇಹಿತ ಸೋಮು, ಚಿಂಟು, ಮನು ಎಂಬುವರು ಹಲ್ಲೆ ಮಾಡಿದ್ದರು. ಬಟನ್ ಚಾಕುವಿನಿಂದ ತಿವಿದ ಕಾರಣ ಚರಣ್ ಎರಡು ಕಣ್ಣಿಗೆ ಗಂಭೀರ ಗಾಯವಾದ ಪರಿಣಾಮ ಶಾಶ್ವತವಾಗಿ ಕಣ್ಣು ಕಳೆದುಕೊಳ್ಳುವಂತಾಗಿದೆ.

ಹುಡುಗನ ಮೇಲೆ ಕೇಸ್ ದಾಖಲು : ಯುವತಿಯ ಪೋಷಕರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಲ್ಲದೆ ಸಿದ್ದಾಪುರ ಠಾಣಾ ವ್ಯಾಪ್ತಿಯಲ್ಲಿ ದೂರು ನೀಡಿದ್ದಾರೆ. ಹಾಗಾಗಿ ಸಿದ್ದಾಪುರ ಪೋಲಿಸರು ಕಳೆದ ಮೂರು ದಿನದಿಂದ ಅಕ್ರಮ ಬಂಧನದಲ್ಲಿಟ್ಟಿಕೊಂಡಿದ್ದಾರೆ ಎಂಬ ಆರೋಪವು ಕೇಳಿ ಬಂದಿದೆ. ಮಾರಣಾಂತಿಕ ಹಲ್ಲೆಗೆ ಒಳಗಾಗಿ ಇನ್ನೂ ಕಣ್ಣಿನ ಗಾಯಗಳೇ ವಾಸಿಯಾಗಿಲ್ಲ. ಒಂದು ಕಣ್ಣು ಶಾಶ್ವತವಾಗಿ ಕಳೆದುಕೊಂಡಿದ್ದಾನೆ. ಇನ್ನೊಂದು ಕಣ್ಣಲ್ಲಿ ನೀರು ಸೋರುತ್ತಿದೆ. ನಾರಾಯಣ ನೇತ್ರಾಲಯದಲ್ಲಿ ತೋರಿಸಬೇಕಿತ್ತು. ಮೂರು ದಿನದಿಂದ ಸಿದ್ದಾಪುರ ಪೊಲೀಸರು ಅಕ್ರಮವಾಗಿ ಕೂರಿಸಿಕೊಂಡಿದ್ದಾರೆ. ಅವನ ಮೇಲೆ ಅದ್ಯಾವುದೋ ಕೇಸು ಹಾಕ್ತೀನಿ ಎಂದು ಹೆದರಿಸುತ್ತಿದ್ದಾರೆ. ಸ್ವಾಮಿ ನ್ಯಾಯ ಎಲ್ಲಿದೆ ಬಡವರಿಗೆ ? ಕಣ್ಣು ಕಿತ್ತವರ ಪರ ಪೊಲೀಸರು ನಿಂತಿರೋದು ಯಾಕೆ ? ಎಂದು ಚರಣ್ ಕುಟುಂಬಸ್ತರು ಆರೋಪಿಸಿದ್ದಾರೆ.

ಮಾನವ ಹಕ್ಕು ಆಯೋಗಕ್ಕೆ ದೂರು: ಚರಣ್ ಅಜ್ಜಿ ಸರೋಜಮ್ಮ ಮಾನವ ಹಕ್ಕುಗಳ ಆಯೋಗಕ್ಕೆ ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.

ನನ್ನ ಮೊಮ್ಮಗನ ಹತ್ಯೆಗೆ ಯತ್ನಿಸಿದವರಿಗೆ ಪೊಲೀಸರೇ ನೆರವು ನೀಡುತ್ತಿದ್ದಾರೆ. ಈ ಕುರಿತು ತನಿಖೆ ನಡೆಸಿ ಕಣ್ಣು ಕಿತ್ತವರನ್ನು ಬಂಧಿಸಬೇಕು. ಸುಪಾರಿ ಕೊಟ್ಟ ಯುವತಿ ಪೋಷಕರ ಮೇಲೆ ಕೇಸು ದಾಖಲಿಸಬೇಕು.ಅಕ್ರಮ ಬಂಧನದಲ್ಲಿಟ್ಟಿರುವ ನನ್ನ ಮೊಮ್ಮಗನನ್ನು ಬಿಟ್ಟು ಶಸ್ತ್ರ ಚಿಕಿತ್ಸೆಗೆ ಒಳಪಡಲು ಅವಕಾಶ ಮಾಡಿಕೊಡಬೇಕು. ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಕೋರಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್ ಮತ್ತು ರಾಜ್ಯ ಮಾನವ ಹಕ್ಕು ಆಯೋಗಕ್ಕೆ ಯುವಕನ ಅಜ್ಜಿ ಸರೋಜಮ್ಮ ದೂರು ನೀಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *