ಮತ್ತೆ ದೆಹಲಿಯ ಗಡಿಗಳಲ್ಲಿ ಗುಡುಗುತ್ತಿರುವ ಅನ್ನದಾತ

ಎಚ್. ಆರ್. ನವೀನ್ ಕುಮಾರ್
ರಾಷ್ಟ್ರ ರಾಜಧಾನಿ ದೆಹಲಿ ಈಗ ಮತ್ತೊಮ್ಮೆ ಸುದ್ದಿಯಲ್ಲಿದೆ. ದೆಹಲಿ ಹಲವು ಕಾರಣಗಳಿಗಾಗಿ ಯಾವಾಗಲೂ ಸುದ್ದಿಯಲ್ಲಿರುತ್ತದೆ ಅದು ಪ್ರಜಾಪ್ರಭುತ್ವದ ಶಕ್ತಿ ಕೇಂದ್ರವಲ್ಲವೇ. ಈಗ ಮತ್ತೆ ಅನ್ನದಾತ ರೈತರ ಕಾರಣಕ್ಕಾಗಿ ಸುದ್ದಿಯಾಗಿದೆ. ನಿಮಗೆಲ್ಲರಿಗೂ ನೆನಪಿರಬಹುದು 2020 ನವೆಂಬರ್ 26 ರಂದು ದೆಹಲಿಯ 5 ಗಡಿಗಳಲ್ಲಿ ಲಕ್ಷಾಂತರ ರೈತರು ತಮ್ಮ ಮಿತ್ರ ಟ್ರ್ಯಾಕ್ಟರ್ ಗಳ ಜೊತೆ ಬೀಡುಬಿಟ್ಟರು. ಪಂಜಾಬ್, ಹರಿಯಾಣ, ರಾಜಸ್ಥಾನ, ಉತ್ತರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ ರೈತರು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲು ದೆಹಲಿಯತ್ತ ಹೆಜ್ಜೆ ಹಾಕಿದರು. ಇವರುಗಳನ್ನು ರಾಷ್ಟ್ರೀಯ ಹೆದ್ದಾರಿಗಳಲ್ಲೇ ಕೇಂದ್ರ ಗೃಹ ಇಲಾಖೆಯ ಅಧೀನದಲ್ಲಿರುವ ದೆಹಲಿ ಪೊಲೀಸರು ತಡೆದರು. ತಡೆದದ್ದು ಮಾತ್ರವಲ್ಲ ಇನ್ನಿಲ್ಲದ ರೀತಿಯಲ್ಲಿ ರೈತರ ಮೇಲೆ ಲಾಠಿ ಬೀಸಿ, ಅಶೃವಾಯು ಸಿಡಿಸಿ, ಜಲಫಿರಂಗಿಗಳನ್ನು ಬಳಸಿ ರೈತರ ಮೇಲೆ ದಾಳಿ ಮಾಡಿ, ರೈತರು ದೆಹಲಿ ಕಡೆ ಬರದಂತೆ ತಡೆಗೋಡೆಗಳನ್ನು ನಿರ್ಮಿಸಿದರು. ಇದನ್ನು ಪ್ರತಿಭಟಿಸಿ ರೈತರೂ ಅಲ್ಲಿಯೇ ಕುಳಿತು ಆಳವಾಗಿ ಬೇರೂರುವ ಆಲದ ಮರದಂತೆ ಹೆಮ್ಮರವಾಗಿ ಬೆಳೆದು ಒಂದು ವರ್ಷಗಳ ಕಾಲ ಈ ಚಳುವಳಿಯನ್ನು ಮುನ್ನಡೆಸಿ, ಕರಾಳ ಕೃಷಿ ಕಾಯ್ದೆಗಳನ್ನು ವಾಪಸ್ ಮಾಡಿಸಿದ್ದು ಈಗ ಇತಿಹಾಸ.

ಆದರೆ ನಾಲ್ಕು ವರ್ಷಗಳ ನಂತರ ಮತ್ತದೇ ರೀತಿಯ, ಅದಕ್ಕಿಂತಲೂ ಭಯಾನಕವಾದ ದೃಶ್ಯಗಳನ್ನು ನಾವು ಈಗ ದೆಹಲಿಯ ಗಡಿಗಳಲ್ಲಿ ನೋಡುತ್ತಿದ್ದೇವೆ. 2024 ರ ಫೆಬ್ರವರಿ 13 ರಂದು ಪಂಜಾಬ್, ಹರಿಯಾಣದ ರೈತರು ತಮ್ಮ ಬೇಡಿಕೆಗಳಾದ ರೈತರು ಬೆಳೆದ ಬೆಳೆಗಳಿಗೆ ಕೃಷಿ ತಜ್ಞ ಡಾ.ಎಂ.ಎಸ್ ಸ್ವಾಮಿನಾಥನ್ ರವರ ಶಿಫಾರಸ್ಸಿನಂತೆ ಉತ್ಪಾದನಾ ವೆಚ್ಚದ ಮೇಲೆ ಶೇಕಡಾ 50 ರಷ್ಟು ಲಾಭಾಂಶವನ್ನು ಸೇರಿಸಿ ಬೆಲೆಯನ್ನು ನಿಗದಿಪಡಿಸುವ ಕಾನೂನನ್ನು ಜಾರಿಗೆ ತರಬೇಕೆಂದು ಒತ್ತಾಯಿಸುತ್ತಿದ್ದಾರೆ. ಅದರ ಜೊತೆಗೆ ಈಗ ಅಧಿಕಾರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರೈತರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸುವಂತೆ ಒತ್ತಾಯಿಸುತ್ತಿದ್ದಾರೆ.

ಇದನ್ನೂ ಓದಿ: ಬಿಗ್ ರಿಲೀಫ್ | ಸಿದ್ದರಾಮಯ್ಯ ವಿರುದ್ಧದ ಕ್ರಿಮಿನಲ್ ಪ್ರಕರಣಕ್ಕೆ ತಡೆ ನೀಡಿದ ಸುಪ್ರೀಂಕೋರ್ಟ್

ರೈತರ ಈ ಬೇಡಿಕೆಗಳಲ್ಲಿ ದೇಶದ್ರೋಹದ ಅಂಶಗಳೇನಾದರೂ ಯಾರಿಗಾದರೂ ಗೋಚರಿಸುತ್ತಿದೆಯಾ? ಆದರೆ ರೈತರು ಬೀದಿಗಿಳಿದ ಕೂಡಲೇ ಸರ್ಕಾರಕ್ಕೆ ಅದನ್ನು ಸಹಿಸಿಕೊಳ್ಳಲಾಗಲಿಲ್ಲ. ದೆಹಲಿಯ ಗಡಿಗಳಲ್ಲಿ ತಮ್ಮ ಪೊಲೀಸ್ ಮತ್ತು ಅರೆ ಮಿಲಿಟರಿ ಪಡೆಗಳನ್ನು ಬಳಸಿ ರಣರಂಗವನ್ನ ನಿರ್ಮಾಣ ಮಾಡಿದರು.
ಸಾಮಾಜಿಕ ಮಾಧ್ಯಮಗಳಲ್ಲಿ ಬರುತ್ತಿರುವ ವೀಡಿಯೋ ಮತ್ತು ಫೋಟೋಗಳನ್ನು ನೋಡುತ್ತಿದ್ದರೆ ಯಾವುದೋ ಎರಡು ಶತ್ರು ದೇಶಗಳ ನಡುವಿನ ಗಡಿ ಸಮಸ್ಯೆ ಬುಗಿಲೆದ್ದಾಗ ಶತ್ರುಗಳ ಆ ಕಡೆಯಿಂದ ಈ ಕಡೆಗೆ ನುಸುಳಬಾರದೆಂದು ಕಂದಕಗಳನ್ನು ನಿರ್ಮಿಸುವುದು, ದೊಡ್ಡ ದೊಡ್ಡ ತಂತಿಯ ಮುಳ್ಳು ಬೇಲಿಗಳನ್ನು ನಿರ್ಮಿಸುವುದನ್ನು ನೋಡಿದ್ದೇವೆ. ಆದರೆ ಇವೆಲ್ಲವನ್ನು ಈಗ ದೆಹಲಿಯ ಗಡಿಗಳಲ್ಲಿ ರೈತರು ಬರಬಾರದೆಂದು ನಿರ್ಮಿಸಲಾಗಿದೆ. ಇಷ್ಟು ಮಾತ್ರವಲ್ಲ ಇನ್ನೂ ಮುಂದುವರೆದು ರಸ್ತೆಗೆ ಅಡ್ಡಲಾಗಿ ಆಳೆತ್ತರದ ಸಿಮೆಂಟ್ ಬ್ಲಾಕ್ಸ್ ಗಳನ್ನು ನಿರ್ಮಿಸಿ ಅದರ ಮಧ್ಯೆ ಕಾಂಕ್ರೀಟ್ ಗೋಡೆ ನಿರ್ಮಿಸಿದ್ದಾರೆ, ರಸ್ತೆಗೆ ಅಡ್ಡಲಾಗಿ ಚೂಪಾದ ಕಬ್ಬಿಣದ ಸಲಾಖೆಗಳನ್ನು ಹೂಡೆಯಲಾಗಿದೆ. ಹಳೆಯ ಸಿನಿಮಾಗಳಲ್ಲಿ ಡಕಾಯಿತಿ ಮಾಡುವವರು ವಾಹನಗಳ ಟೈಯಸ್ ಪಂಚರ್ ಮಾಡಲು ಚೂಪಾದ ಸರಣಿ ಮೊಳೆಗಳಿರುವ ಹಲಗೆಗಳನ್ನು ರಸ್ತೆಗೆ ಅಡ್ಡಲಾಗಿ ಇಡುತ್ತಿದ್ದರಲ್ಲ ಹಾಗೆ ಇಲ್ಲಿಯೂ ರೈತರ ಟ್ರ್ಯಾಕ್ಟರ್‌ಗಳು ಮುಂದೆ ಬರದಂತೆ ತಡೆಯಲು ರಸ್ತೆಗೆ ಚೂಪಾದ ಬೃಹತ್ ಗಾತ್ರದ ಮೊಳೆ ಹೊಡೆಯಲಾಗಿದೆ. ಅಡ್ಡಲಾಗಿ ಬೃಹತ್ ಗಾತ್ರದ ಕಂಟೈನರ್ ಗಳನ್ನು ನಿಲ್ಲಿಸಲಾಗಿದೆ. ಒಂದು ಅರ್ಥದಲ್ಲಿ ಏಳು ಸುತ್ತಿನ ಕೋಟೆಯೇ ನಿರ್ಮಾಣವಾದಂತಿದೆ.

ಇವೆಲ್ಲವುಗಳನ್ನು ನೋಡಿದರೆ ದೇಶದ ಅನ್ನದಾತ ರೈತನ ಮೇಲೆ ಆಳುವ ಸರ್ಕಾರ ಎಂತಹ ಭಾವನೆಯನ್ನು ಹೊಂದಿದೆ ಮತ್ತು ಅವರ ಮೇಲೆ ಎಷ್ಟು ಕ್ರೂರವಾಗಿ ನಡೆದುಕೊಳ್ಳುತ್ತಿದೆ ಎಂಬುದು ಅರ್ಥವಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟಿಸಲು ಅವಕಾಶವಿಲ್ಲದಿದ್ದರೆ ಅದನ್ನು ಸರ್ವಾಧಿಕಾರಿ ವ್ಯವಸ್ಥೆ ಎಂದು ಸುಲಭವಾಗಿ ಹೇಳಬಹುದು. ದೆಹಲಿಯಲ್ಲಿ ನಡೆಯುತ್ತಿರುವುದು ಸರ್ವಾಧಿಕಾರಿ ಪ್ರವೃತ್ತಿಯ ರೈತ ವಿರೋಧಿ ಸರ್ಕಾರದ ನಡೆಯಾಗಿದೆ. ಇವರುಗಳ ಮೇಲೆ ಅಶ್ರುವಾಯುಗಳನ್ನು ಸಿಡಿಸಿ, ಲಾಠಿ ಚಾರ್ಜ್ ಮಾಡಲಾಗಿದೆ. ಇವೆಲ್ಲವುಗಳನ್ನು ಎದುರಿಸಿದ ಹಲವು ರೈತರು ಗಾಯಾಳುಗಳಾದರು. ಇಷ್ಟೆಲ್ಲಾ ಆದರೂ ನಾವು ಮಾತ್ರ ಪ್ರತಿಭಟನೆಯನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ನಾವು ಇಲ್ಲಿಯೇ ಇರುತ್ತೇವೆ ಎಂದು ಪೊಲೀಸರು ತಡೆದ ಜಾಗಗಳಲ್ಲೇ ರೈತರು ವಿಶ್ರಾಂತಿ ಪಡೆಯಲು ಪ್ರಾರಂಭಿಸಿದರು.

ಇದನ್ನೂ ಓದಿ: ಕೇಂದ್ರ ಸರ್ಕಾರದ ಪ್ರಸ್ತಾವನೆ ಕುರಿತು ಚರ್ಚೆ ನಡೆಸಿ ತೀರ್ಮಾನ | ರೈತ ಮುಖಂಡ ಸರ್ವಾನ್ ಸಿಂಗ್

ಇತಿಹಾಸದಲ್ಲಿ ನಾವು ಓದಿರುವುದೇನೆಂದರೆ ಹಿಂದೆ ರಾಜ ರಾಜರುಗಳ ನಡುವೆ ಯುದ್ಧ ನಡೆಯುತ್ತಿದ್ದಾಗಲೂ ಸೂರ್ಯ ಮುಳುಗಿದ ಮೇಲೆ ಕದನ ವಿರಾಮ ಘೋಷಣೆಯಾಗುತ್ತಿತ್ತು. ರಾತ್ರಿ ಸಮಯದಲ್ಲಿ ಯುದ್ಧ ನಡೆಯುತ್ತಿರಲಿಲ್ಲ. ಮತ್ತು ಯಾರೂ ಶಸ್ತ್ರಾಸ್ತ್ರಗಳನ್ನು ಬಳಸುತ್ತಿರಲಿಲ್ಲ. ಇದರ ನಡುವೆ ಕುಂತಂತ್ರದಿಂದ ಕೆಲವರು ಇದೇ ಸಮಯವನ್ನು ಬಳಸಿ ದಾಳಿ ಮಾಡಿರುವ ಉದಾಹರಣೆಗಳೂ ಇವೆ. ಅದೇ ರೀತಿ ಇತಿಹಾಸವನ್ನು ಬದಲಿಸಲೆಂದೇ ಬಂದಿರುವ ಕೇಂದ್ರದ ಈಗಿನ ಸರ್ಕಾರ ರಾತ್ರಿ ವಿಶ್ರಾಂತಿ ಪಡೆಯುತ್ತಿದ್ದ ರೈತರ ಮೇಲೆ ಡ್ರೋನ್‌ಗಳನ್ನು ಬಳಸಿ ಅಶ್ರುವಾಯುಗಳನ್ನು ಸಿಡಿಸಿದ್ದಾರೆ. ಇದರಿಂದ ಹಲವರು ಗಾಯಗೊಂಡಿದ್ದಾರೆ.

ದೆಹಲಿಯ ಗಡಿಗಳಿಂದ ಬರುತ್ತಿರುವ ಸುದ್ಧಿಗಳನ್ನು ನೋಡಿದರೆ ಈ ಪ್ರತಿಭಟನೆ ಮುಂದಿನ ದಿನಗಳಲ್ಲಿ ಬೃಹತ್ ಸ್ವರೂಪ ಪಡೆಯುವ ಸಾಧ್ಯತೆಗಳು ಕಾಣುತ್ತಿವೆ. ಮಾತ್ರವಲ್ಲದೆ ರೈತರ ಮೇಲಿನ ಕೇಂದ್ರ ಸರ್ಕಾರದ ಈ ದೌರ್ಜನ್ಯವನ್ನು ಖಂಡಿಸಿ 500 ಕ್ಕೂ ಹೆಚ್ಚು ಸಂಘಟನೆಗಳನ್ನು ಒಳಗೊಂಡಿರುವ ಸಂಯುಕ್ತ ಕಿಸಾನ್ ಮೋರ್ಚಾ (SKM) ಮತ್ತು ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ವೇದಿಕೆ (JCTU) ಒಟ್ಟಿಗೆ ಫೆಬ್ರವರಿ 16 ರಂದು ದೇಶಾದ್ಯಂತ ಪ್ರತಿಭಟನೆ ನಡೆಸಿದೆ.

ಕೇಂದ್ರ ಸರ್ಕಾರ ರೈತರನ್ನು ಶತ್ರುಗಳಂತೆ ನಡೆಸಿಕೊಳ್ಳುವುದು ದೇಶದ್ರೋಹಕ್ಕೆ ಸಮಾನ

ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದ ಸುಮಾರು 25 ಸಾವಿರ ರೈತರು, ಸುಮಾರು 5 ಸಾವಿರದಷ್ಟು ಟ್ರ್ಯಾಕ್ಟರ್ ಗಳಲ್ಲಿ ತಮ್ಮ ಬೇಡಿಕೆಗಳನ್ನು ಆಳುವ ವರ್ಗಕ್ಕೆ ಅರ್ಥಮಾಡಿಸುವ ಸಲುವಾಗಿ ದೆಹಲಿಯತ್ತ ಹೊರಟಾಗ ಇವರನ್ನು ಹರಿಯಾಣ, ಪಂಜಾಬ್ ನ ಗಡಿಗಳಲ್ಲೇ ಅಂದರೆ ದೆಹಲಿಯಿಂದ 200 ಕಿಲೋ ಮೀಟರ್ ದೂರದಲ್ಲೇ ತಡೆಯಲಾಗಿದೆ.

ಈ ರೈತರು, ರೈತ ಸಂಘಟನೆಗಳು ಎತ್ತಿರುವ ಬೇಡಿಕೆಗಳಾದರೂ ಏನು ? ಈಗಾಗಲೇ ನಮಗೆ ಗೊತ್ತಿರುವಂತೆ 2021 ಡಿಸೆಂಬರ್ ನಲ್ಲಿ ಒಂದು ವರ್ಷಗಳ ಐತಿಹಾಸಿಕ ರೈತ ಚಳುವಳಿ ಮುಕ್ತಾಯವಾಗಲು ಕೇಂದ್ರ ಸರ್ಕಾರ ಮೂರು ಕರಳಾ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದಿದ್ದು ಒಂದು. ಇದೇ ಸಂದರ್ಭದಲ್ಲಿ ಮೋದಿ ಸರ್ಕಾರ ರೈತ ಸಮುದಾಯಕ್ಕೆ ಲಿಖಿತವಾಗಿ ಕೆಲವು ಭರವಸೆಗಳನ್ನು ಕೊಟ್ಟಿತ್ತು. ಅವುಗಳನ್ನು ಈಡೇರಿಸಬೇಕು ಎಂದು ರೈತರು ದನಿ ಎತ್ತಿದ್ದಾರೆ.

ಇದನ್ನೂ ಓದಿ: ಮಧ್ಯಪ್ರದೇಶ | ಬಿಜೆಪಿ ಸೇರುವ ಬಗ್ಗೆ ಸಂದಿಗ್ಧ ಸ್ಥಿತಿಯಲ್ಲಿರುವ ಕಾಂಗ್ರೆಸ್ ನಾಯಕ ಕಮಲ್ ನಾಥ್

ಡಾ.ಎಂ.ಎಸ್. ಸ್ವಾಮಿನಾಥನ್ ಶಿಫಾರಸ್ಸು ಜಾರಿಗೆ ತಂದು ರೈತರು ಬೆಳೆದ ಬೆಳೆಗಳಿಗೆ ಉತ್ಪಾದನಾ ವೆಚ್ಚದ ಜೊತೆ ಶೇಖಡಾ 50 ರಷ್ಟು ಲಾಭಾಂಶ ಸೇರಿಸಿ ಬೆಲೆ ನಿಗದಿ ಮಾಡಬೇಕು. ಉತ್ತರ ಪ್ರದೇಶದ ಲಕೀಂಪುರ್ ಕೇರಿಯಲ್ಲಿ ಕೇಂದ್ರ ಸಚಿವರ ಬೆಂಗಾವಲು ವಾಹನ ಪ್ರತಿಭಟನಾ ನಿರತ ರೈತರ ಮೇಲೆ ದಾಳಿ ಮಾಡಿ 5 ಜನ ರೈತರು ಮತ್ತು ಒಬ್ಬ ಪತ್ರಕರ್ತರು ನಿಧನರಾದರು. ಇವರಿಗೆ ಪರಿಹಾರ ಕೊಡಬೇಕು ಮತ್ತು ಈ ಘಟನೆಗೆ ಕಾರಣರಾದ ಕೇಂದ್ರ ಮಂತ್ರಿ ಥೋಮರ್‌ನನ್ನು ಶಿಕ್ಷಿಸಬೇಕು. ರೈತರು ಕೃಷಿ ಉದ್ದೇಶಕ್ಕಾಗಿ ಮಾಡಿರುವ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. 60 ವರ್ಷದ ನಂತರದ ರೈತರಿಗೆ ಪಿಂಚಣಿ ನೀಡಬೇಕು, ದೇಶದ ವಿವಿಧ ಭಾಗಗಳಲ್ಲಿ ತಮ್ಮ ಪ್ರಜಾಸತ್ತಾತ್ಮಕ ಹಕ್ಕುಗಳಿಗಾಗಿ ಪ್ರತಿಭಟನೆ ನಡೆಸಿದವರ ಮೇಲೆ ಪೊಲೀಸರು ಹೂಡಿರುವ ಕ್ರಿಮಿನಲ್ ಪ್ರಕರಣಗಳನ್ನು ವಾಪಸ್ ಪಡೆಯಬೇಕು.

2024 ಫೆಬ್ರವರಿ 12 ರಂದು ಕೇಂದ್ರ ಕೃಷಿ ಮಂತ್ರಿಗಳೊಂದಿಗೆ ರೈತ ಮುಖಂಡರ ಮಾತುಕತೆ ನಡೆದರೂ ಇದರಿಂದ ಯಾವ ನಿರ್ಧಿಷ್ಟ ತೀರ್ಮಾನಕ್ಕೆ ಸರ್ಕಾರ ಬರದಿರುವ ಕಾರಣ ಫೆಬ್ರವರಿ 13 ಕ್ಕೆ ದೆಹಲಿಯತ್ತ ಹೆಜ್ಜೆಯಾಕಲು ರೈತರು ತೀರ್ಮಾನಿಸಿದರು.

ರೈತರು ಎತ್ತಿರುವ ಬೇಡಿಕೆಗಳನ್ನು ಈಡೇರಿಸಲಾಗದ ಮೋದಿ ಸರ್ಕಾರ ತನ್ನ ಶಕ್ತಿ ಸಾಮರ್ಥ್ಯವನ್ನು ದಾಳಿ ಮಾಡಲು ಬಳಸುತ್ತಿದೆ. ದಾಳಿ ಎಂದರೆ ಅಂತಿಂತ ದಾಳಿಯಲ್ಲ. ಕಳೆದ ಹೋರಾಟದ ಸಂದರ್ಭದಲ್ಲಿ ರೈತರನ್ನು ಇಲ್ಲಿಯವರೆಗು ಬಿಟ್ಟಿದ್ದೇ ನಾವು ಮಾಡಿದ ತಪ್ಪು ಎನ್ನುವಂತೆ ಈಗ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ರಾಜ್ಯಗಳ ಗಡಿಗಳನ್ನು ರೈತರು ದಾಟಿ ದೆಹಲಿ ರಾಜ್ಯದ ಗಡಿಗೆ ಪ್ರವೇಶಿಸದಂತೆ ವ್ಯಾಪಕ ಬಂದೂಬಸ್ತ್ ಮಾಡಲಾಗಿದೆ. ಎಷ್ಟರ ಮಟ್ಟಿಗೆ ಎಂದರೆ ಹರಿಯಾಣದ ಶಂಬು ಗಡಿಯನ್ನು ಯಾವ ಕಚ್ಚಾ ರಸ್ತೆಗಳಿಂದಲೂ ದಾಟಲು ಸಾಧ್ಯವಿಲ್ಲ. ಹೆದ್ದಾರಿಗೆ ಸಂಪರ್ಕಕಲ್ಪಿಸುವ ಎಲ್ಲಾ ರಸ್ತೆಗಳನ್ನು ಕಾಂಕ್ರೀಟ್ ಬ್ಲಾಕ್ ಗಳಿಂದ ಮುಚ್ಚಲಾಗಿದೆ‌. ಎಲ್ಲಾ ಗಡಿಗಳಲ್ಲೂ ಅತ್ಯಾಧುನಿಕ ಯಂತ್ರಗಳು ಶಸ್ತ್ರಗಳನ್ನು ಹಿಡಿದು ದೆಹಲಿ ಪೊಲೀಸ್ ಮತ್ತು ಸೈನ್ಯ ಸಜ್ಜಾಗಿ ನಿಂತಿದೆ.

ಶಂಬು ಗಡಿಯಲ್ಲಿ ರೈತರನ್ನು ಪೊಲೀಸರು ತಡೆದ ಮೇಲೆ ರೈತರು ತಮ್ಮ ಟ್ರ್ಯಾಕ್ಟರ್ ಗಳನ್ನು ಅಲ್ಲಿಯೇ ನಿಲ್ಲಿಸಿ ಎಲ್ಲರೂ ಒಟ್ಟಿಗೆ ಸೇರಿ ಅಡುಗೆ ಮಾಡಿ ಊಟ ಮಾಡಲು ಶುರುಮಾಡಿದಾಗ ಊಟ ಮಾಡುತ್ತಿದ್ದ ರೈತ ಸಮುದಾಯದ ಮೇಲೆ ಏಕಾ ಏಕಿ ಅಶೃವಾಯುಗಳನ್ನು ಸಿಡಿಸಿ, ರಬ್ಬರ್ ಬುಲೆಟ್ ಗಳನ್ನು ಬಳಸಿ ಮನಸೋಯಿಚ್ವೆ ಶೂಟ್ ಮಾಡಲಾಯಿತು. ಇದರಿಂದ ನೂರಾರು ರೈತರು ಗಾಯಗೊಂಡಿದ್ದಾರೆ. ಈ ರೀತಿಯ ನಿರಂತರ ದಾಳಿಯನ್ನು ಎದುರಿಸಲು ರೈತ ಸಮುದಾಯವೂ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ.

ಇದನ್ನೂ ಓದಿ: ಶಾಸಕರು ಪಕ್ಷ ತೊರೆಯಲು ಮುಂದಾಗಿದ್ದಕ್ಕೆ ಬಿಜೆಪಿ ಜತೆ ಮೈತ್ರಿ ಮಾಡಿದ ದೇವೇಗೌಡ – ಸಿದ್ದರಾಮಯ್ಯ ಆರೋಪ

ಟಿಯರ್ ಗ್ಯಾಸ್ ಎಂದರೆ ಅದೊಂದು ರೀತಿಯ ಕಣ್ಣು ಮೂಗುಗಳಲ್ಲಿ ಅತ್ಯಂತ ಘಾಟಿನ, ಉರಿ ಉಂಟುಮಾಡುವ ವಿಷಕಾರಕ ಅನಿಲ. ಇದನ್ನು ಸಿಡಿಸಿದಾಗ ಅದು ಯತೇಚ್ಚವಾದ ಹೊಗೆಯನ್ನು ಉತ್ಪತ್ತಿ ಮಾಡಿ ಅಲ್ಲಿರುವವರನ್ನೆಲ್ಲ ಚದುರುವಂತೆ ಮಾಡುತ್ತದೆ. ಒಂದು ವರದಿಯ ಪ್ರಕಾರ ಕಳೆದ ಮೂರು ದಿನಗಳಲ್ಲಿ ಸುಮಾರು 2000 ಟಿಯರ್ ಗ್ಯಾಸ್ ಶೆಲ್ ಗಳನ್ನು ಬಳಸಲಾಗಿದೆ. ಮತ್ತು 30 ಸಾವಿರ ಟಿಯರ್ ಗ್ಯಾಸ್ ಶೆಲ್‌ಗಳ ಖರೀದಿಗೆ ದೆಹಲಿ ಪೊಲೀಸರು ಆದೇಶಿಸಿದ್ದಾರೆ. ಹೀಗೆ ಸಿಡಿಯುವ ಟಿಯರ್ ಗ್ಯಾಸ್‌ಗಳಿಂದ ಬರುವ ಹೊಗೆಯನ್ನು ನಿಯಂತ್ರಿಸಲು ರೈತರು ತಮ್ಮ ಟ್ರ್ಯಾಕ್ಟರ್ ಗಳಿಗೆ ಗಾಳಿ ಹಾಯಿಸುವ ದೊಡ್ಡ ದೊಡ್ಡ ಫ್ಯಾನ್ ಗಳನ್ನು ಅಳವಳಿಸಿಕೊಂಡು ಆಕಡೆಯಿಂದ ಶೆಲ್ ಗಳು ಸಿಡಿದು ಬಂದರೆ ಈ ಕಡೆಯಿಂದ ದೊಡ್ಡದಾದ ಫ್ಯಾನ್ ಚಲಾಯಿಸಿ ಆ ವಿಷಕಾರಕ ಹೊಗೆ ಸಿಡಿಸಿದವರ ಕಡೆಗೆ ವಾಪಸ್ ಹೋಗುವಂತೆ ಮಾಡುತ್ತಿದ್ದಾರೆ. ಮಾತ್ರವಲ್ಲ ರಾಕೇಟ್ ಬಾಂಬರ್ ರೀತಿಯಲ್ಲಿ ಸಿಡಿದು ಬರುವ ಟಿಯರ್ ಶೆಲ್‌ಗಳನ್ನು ಶಮನಗೊಳಿಸಲು ಅವು ಬಿದ್ದ ಕೂಡಲೆ ನೀರಿನಿಂದ ನೆನೆಸಿರುವ ಗೋಣಿಚೀಲಗಳನ್ನು ಒಂದರ ಮೇಲೊಂದರಂತೆ ಅದರ ಮೇಲೆ ಹಾಕಿದರೆ ಕೆಲವೇ ಕ್ಷಣಗಳಲ್ಲಿ ಅದು ಹೊಗೆ ಸೂಸುವುದನ್ನು ನಿಲ್ಲಿಸುತ್ತದೆ.

ಗುರಿಯಿಟ್ಟು ರಬ್ಬರ್ ಬುಲೆಟ್ ಬಳಸಿ ಗನ್ ಗಳ ಮೂಲಕ ರೈತರ ಮೇಲೆ ಗುಂಡು ಹಾರಿಸಲಾಗುತ್ತಿದೆ. ಇದರಿಂದ ಹಲವರಿಗೆ ತೀವ್ರಪೆಟ್ಟುಗಳಾಗಿವೆ. ಗ್ರನೈಡ್ ರೂಪದ ಲೋಹದ ಚೂರುಗಳನ್ನು ಸಿಡಿಸುವ ಬಾಂಬುಗಳನ್ನು ಕೆಲವೆಡೆ ರೈತರ ಮೇಲೆ ಬಳಸಲಾಗುತ್ತಿದೆ ಎಂಬ ವರದಿಗಳು ಕೇಳಿಬರುತ್ತಿವೆ. ಹೆದ್ದಾರಿಗಳಲ್ಲಿ ನಿರ್ಮಾಣವಾಗಿರುವ ಬೃಹತ್ ಗಾತ್ರದ ಕಾಂಕ್ರೀಟ್ ಗೋಡೆಗಳನ್ನು ಕೆಡವಿ ಮುಂದೆ ಹೋಗಲು ರೈತರು ನಿರ್ಧರಿಸಿದ್ದಾರೆ. ಈಗಾಗಲೇ ರಾಷ್ಟ್ರೀಯ ಹೆದ್ದಾರಿಗೆ ಹೊಡೆಯಲಾಗಿದ್ದ ಚೂಪಾದ ಕಬ್ಬಿಣದ ಸಲಾಕೆಲಗಳನ್ನು ರೈತರು ತಮ್ಮ ಕೈಯಾರೆ ಕಿತ್ತುಹಾಕಿದ್ದಾರೆ‌. ತಮ್ಮ ಟ್ರ್ಯಾಕ್ಟರ್ ಗಳ ಸಹಾಯದಿಂದ ಸಿಮೆಂಟ್ ಬ್ಲಾಕ್‌ಗಳನ್ನು ಎಳೆದು ರಸ್ತೆಯಿಂದ ಪಕ್ಕಕ್ಕೆ ಸರಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಮೋದಿ ಸರ್ಕಾರದ ಈ ಕ್ರಮವನ್ನು ಖಂಡಿಸಿ ದೇಶಾದ್ಯಂತ ರೈತರು, ಕಾರ್ಮಿಕರು ವ್ಯಾಪಕ ಪ್ರತಿಭಟನೆಗಳನ್ನು ನಡೆಸಿದ್ದಾರೆ.

ದೆಹಲಿಯಿಂದ 200 ಕಿಲೋಮೀಟರ್ ದೂರದಲ್ಲೇ ಇಂತಹ ಪರಿಸ್ಥಿತಿ‌ ನಿರ್ಮಾಣವಾದರೆ ಇನ್ನು ಈ ರೈತರು ದೆಹಲಿಗೆ ಪ್ರವೇಶ ಪಡೆಯುವವರೆಗೆ ಇನ್ನೆಂತಹ ಕಠಿಣ ಸವಾಲುಗಳನ್ನು, ದೌರ್ಜನ್ಯಗಳನ್ನು ಎದುರಿಸಬಹುದು. ಕಾದು ನೋಡಬೇಕಿದೆ. ಒಂದು ವರದಿಯ ಪ್ರಕಾರ ಸಿಂಘು ಗಡಿ ಭಾಗದಲ್ಲಿ ಜನರನ್ನು ಚದುರಿಸಲು ಇದುವರೆಗು ಬಳಸಿರದ ಅತ್ಯಾಧುನಿಕ ಯಂತ್ರೊಪಕರಣಗಳು ಮತ್ತು ಆಯುಧಗಳನ್ನು ದೆಹಲಿ ಪೊಲೀಸರು ಸಿದ್ದಪಡಿಸಿಕೊಂಡಿದ್ದಾರಂತೆ. ದೇಶಕ್ಕೆ ಅನ್ನ ನೀಡುವ ರೈತರ ಮೇಲೆ ಯಾಕೆ ನಿಮ್ಮ ದೌರ್ಜನ್ಯ ಎಂಬ ಪ್ರಶ್ನೆ ಎಲ್ಲೆಡೆ ಕೇಳಲಾರಂಬಿಸಿದೆ. ಇದಕ್ಕೆ ಉತ್ತರಿಸಬೇಕಾದವರು ಮೌನವಾಗಿದ್ದುಕೊಂಡೇ ಎಲ್ಲಾ ಪಿತೂರಿಗಳ ನೇತೃತ್ವ ವಹಿಸಿದ್ದಾರೆ.

ವಿಡಿಯೊ ನೋಡಿ: ಕೇರಳಕ್ಕೆ ಅನ್ಯಾಯ :ಕೇಂದ್ರ ಸರ್ಕಾರದ ವಿರುದ್ಧ ಕೇರಳ ಸರ್ಕಾರದ ಪ್ರತಿಭಟನೆ

Donate Janashakthi Media

Leave a Reply

Your email address will not be published. Required fields are marked *