ಬ್ರೆಜಿಲಿನಾದ್ಯಂತ ಕೂಗು: “ಬೊಲ್ಸನಾರೊ ತೊಲಗು”

ಸೆಪ್ಟೆಂಬರ್ 7 ಬ್ರೆಜಿಲ್ ನ ಸ್ವಾತಂತ್ರ್ಯ ದಿನ. ಈ ವರ್ಷದ ಸ್ವಾತಂತ್ರ್ಯ ದಿನದಂದು, ಬ್ರೆಜಿಲಿನಾದ್ಯಂತ ಬಹು ವಿವಾದಿತ ಅಧ‍್ಯಕ್ಷ ಜೈರ್ ಬೊಲ್ಸನಾರೊ ಪರ ಮತ್ತು ವಿರೋಧಿ ಪ್ರದರ್ಶನಗಳು ನಡೆದವು. ದೇಶದಾದ್ಯಂತ 160ಕ್ಕೂ ಹೆಚ್ಚು ನಗರಗಳಲ್ಲಿ ಬೊಲ್ಸನಾರೊ-ವಿರೋಧಿ ಪ್ರದರ್ಶನಗಳು ನಡೆದವು. 3 ಲಕ್ಷಕ್ಕೂ ಹೆಚ್ಚು ಜನ ಈ ಪ್ರದರ್ಶನಗಳಲ್ಲಿ ಭಾಗವಹಿಸಿದ್ದರು ಎನ್ನಲಾಗಿದೆ.  “ಬೊಲ್ಸನಾರೊ ತೊಲಗು” (ಸ್ಪಾನಿಷ್ ನಲ್ಲಿ “ಫೋರಾ ಬೊಲ್ಸನಾರಾ”) ಎಂಬುದು ಈ ಪ್ರದರ್ಶನಗಳಲ್ಲಿ ಪ್ರಮುಖ ಘೋಷಣೆಯಾಗಿತ್ತು. ಸೆಪ್ಟೆಂಬರ್ 7ರಂದು ಹಿಂದಿನಿಂದಲೂ “ಹೊರದಬ್ಬಲ್ಪಟ್ಟವರ ಕೂಗು” (ಕ್ರೈ ಆಫ್ ದಿ ಎಕ್ಸ್ ಕ್ಲೂಡೆಡ್) ಎಂಬ ಸಾಮಾಜಿಕ ಚಳುವಳಿಗಳ ಕೂಟ ಸಾಮಾಜಿಕ ದಬ್ಬಾಳಿಕೆಗೊಳಗಾದವರ ಹಕ್ಕುಗಳ ಪರವಾಗಿ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಖಂಡಿಸುವ ಸಭೆ ನಡೆಸುತ್ತದೆ. ಈ ವರ್ಷ ಆ ಸಭೆಯನ್ನು “ಮೊದಲು ಜೀವನ” (ಲೈಫ್ ಇನ್ ದಿ ಫಸ್ಟ್ ಪ್ಲೇಸ್) ಎಂಬ ಘೋಷಣೆಯೊಂದಿಗೆ ನಡೆಸಿದ್ದು, ಅದು “ಬೊಲ್ಸನಾರೊ ತೊಲಗು” ಚಳುವಳಿಗೆ ತನ್ನ ಬೆಂಬಲ ಘೋಷಿಸಿತು.

ಅಧ್ಯಕ್ಷ ಬೊಲ್ಸನಾರೊ ಸಹ ಅಂದು ತನ್ನ ಪರ ದೇಶದಾದ್ಯಂತ ಪ್ರದರ್ಶನ ಮತ್ತು ಸಭೆಗಳನ್ನು ಏರ್ಪಡಿಸಿ ತನಗೆ ಬೆಂಬಲ ಸೂಚಿಸುವಂತೆ ಕರೆ ನೀಡಿದ್ದರು. ‘ಬ್ರೆಜಿಲ್ ನ ಟ್ರಂಪ್” ಎಂದು ಕರೆಯಲಾಗುವ ಬೊಲ್ಸನಾರೊ ಟ್ರಂಪ್ ಮಾದರಿಯಲ್ಲಿ ತಮಗೆ ತೊಡಕಾಗುವ ಸಾಂವಿಧಾನಿಕ ಪ್ರಜಾಪ್ರಭುತ್ವದ ನೀತಿ-ನಿಯಮಗಳನ್ನು ಬಹಿರಂಗವಾಗಿ ಉದ್ಧಟತನದಿಂದ ಉಲ್ಲಂಘಿಸುವ, ತನ್ನ ಅಧಿಕಾರ ದುರ್ಬಳಕೆ ಮಾಡಿ ಸಾಂವಿಧಾನಿಕ ಪ್ರಜಾಪ್ರಭುತ್ವದ ಸಂಸ್ಥೆ ಅಥವಾ ವ್ಯಕ್ತಿಗಳ ಮೇಲೆ ದಾಳಿ ಮಾಡುವ ಉಗ್ರ ಬಲಪಂಥೀಯ ಅಧ‍್ಯಕ್ಷ. ಇತ್ತೀಚೆಗೆ  ಸುಪ್ರೀಂ ಮತ್ತು ಇತರ ಕೋರ್ಟುಗಳು ಹಾಗೂ ಪಾರ್ಲಿಮೆಂಟ್ ಅವರ ವಿರುದ್ಧದ ಹಲವಾರು ಗುರುತರ ಆಪಾದನೆಗಳ ವಿಚಾರಣೆ ನಡೆಸುತ್ತಿದ್ದು ಅವು ನಿರ್ಣಾಯಕ ಹಂತ ತಲುಪಿವೆ.  ಬೊಲ್ಸನಾರೊ ಈ ಯಾವುದೇ ಪ್ರಕರಣಗಳಲ್ಲಿ ತಪ್ಪಿತಸ್ಥ ಅಂತ ತೀರ್ಪು ಬಂದರೆ ಅವರು ಅಧಿಕಾರಾವಧಿ ಮುಗಿಯುವ ಮೊದಲೇ ತಮ್ಮ ಪದವಿಯನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಅವರ ಹಲವಾರು ನೀತಿ-ನಿಯಮಗಳ ಉಲ್ಲಂಘನೆ ಮತ್ತು ಭಾರೀ ಕೊವಿದ್ ಸಾವು-ನೋವುಗಳು ಸೇರಿದಂತೆ ಹಲವು ವೈಫಲ್ಯಗಳ ಆಧಾರದ ಮೇಲೆ ಪಾರ್ಲಿಮೆಂಟು ಅವರ ವಿರುದ್ಧ ದೋಷಾರೋಪಣೆ ಮೂಲಕ ಅವರನ್ನು ಅಧಿಕಾರದಿಂದ ಇಳಿಸುವ ಸಾಧ್ಯತೆಯಿದೆ.

ಇವೆಲ್ಲದರಿಂದ ತಪ್ಪಿಸಿಕೊಂಡರೂ 2022ಕ್ಕೆ ಅವರ ಅಧಿಕಾರಾವಧಿ ಮುಗಿಯುತ್ತಿದ್ದು, ಮುಂದಿನ ಚುನಾವಣೆಯಲ್ಲಿ ಅವರಿಗೆ ಸೋಲು ಗ್ಯಾರಂಟಿ ಎಂದು ಹಲವು ಸಮೀಕ್ಷೆಗಳು ತಿಳಿಸಿವೆ. ಸಮೀಕ್ಷೆಗಳಲ್ಲಿ ಶೇ.60 ಜನ ಯಾವುದೇ ಸಂದರ್ಭದಲ್ಲಿಯೂ ಬೊಲ್ಸನಾರೊ ಗೆ ಮತ ನೀಡುವುದಿಲ್ಲ ಎಂದಿದ್ದಾರೆ. ಪ್ರಮುಖ ವಿರೋಧ ಪಕ್ಷವಾದ ವರ್ಕರ್ಸ್ ಪಾರ್ಟಿಯ ಜನಪ್ರಿಯ ನಾಯಕರಾದ ಲುಲಾ ದ ಸಿಲ್ವಾ ಮತ್ತು ದಿಲ್ಮಾ ರೌಸೆಫ್ ಅವರನ್ನು ಹುಸಿ ಆಪಾದನೆಗಳನ್ನು ಬಳಸಿ ಕಾನೂನುಬಾಹಿರವಾಗಿ ಚುನಾವಣೆಗೆ ಸ್ಪರ್ಧಿಸದಂತೆ ಮಾಡಿದ್ದು, ಈಗ ಅದು ವಿಫಲವಾಗಿದೆ. ಬಂಧನಕ್ಕೂ ಒಳಗಾಗಿದ್ದ ಲುಲಾ ಅವರನ್ನು ಕೋರ್ಟುಗಳು ಆಪಾದನೆ ಮುಕ್ತಗೊಳಿಸಿ ಬಿಡುಗಡೆ ಮಾಡಿವೆ. ಲುಲಾ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿದರೆ ಗೆಲ್ಲುವುದು ಖಚಿತ ಎನ್ನಲಾಗಿದೆ.

ಇವೆಲ್ಲದರಿಂದ ಬೊಲ್ಸನಾರೊ ಹತಾಶೆಗೊಂಡಿದ್ದಾರೆ. ಅವರು “ಟ್ರಂಪ್‍ ಶೈಲಿ”ಯಲ್ಲಿ ತಮ್ಮ ಬೆಂಬಲಿಗರನ್ನು ಸುಪ್ರೀಂ ಮತ್ತಿತರ ಕೋರ್ಟಗಳಿಗೆ ಮತ್ತು ಪಾರ್ಲಿಮೆಂಟಿಗೆ “ಮುತ್ತಿಗೆ ಹಾಕಿ ವಶಫಡಿಸಿಕೊಳ್ಳಲು” ಕರೆ ಕೊಟ್ಟಿದ್ದಾರೆ. ಕಾರ್ಯಾಂಗಕ್ಕೆ ಪರಮಾಧಿಕಾರವಿದೆ ಎಂದು ಹೇಳುತ್ತಾ, ಇತರ ಅಂಗಗಳಾದ ಶಾಸಕಾಂಗ ಮತ್ತು ನ್ಯಾಯಾಂಗ ಗಳು ತಮ್ಮ “ಮಿತಿಗಳನ್ನು ಮೀರಿದರೆ” ವ್ಯವಸ್ಥೆ “ಕುಸಿದು ಬೀಳಬಹುದು” ಎಂದು ಎಚ್ಚರಿಸುತ್ತಿದ್ದಾರೆ.  ಅವರ ಬೆಂಬಲಿಗರು ಸಂಘಟಿಸುತ್ತಿರುವ ಬಹಿರಂಗ ಸಭೆಗಳಲ್ಲಿ ಹೀಗೆ ರಾಜಾರೋಷವಾಗಿ ಸಾರುತ್ತಿದ್ದಾರೆ. ಅವರ ಸಭೆಗಳಲ್ಲಿ ಪೋಲಿಸರು ಮತ್ತು ಮಿಲಿಟರಿ ಪೋಲಿಸರು ಭಾಗವಹಿಸುತ್ತಿದ್ದಾರೆ. ಇವರಿಗೆ ಬ್ರೆಜಿಲ್ ಕಾನೂನು ಪ್ರಕಾರ ರಾಜಕೀಯ ಸಭೆಗಳಲ್ಲಿ (ತಮ್ಮ ರಜಾದಿನಗಳಲ್ಲೂ) ಭಾಗವಹಿಸಲು ಅನುಮತಿಯಿಲ್ಲ. ಅವರ ವಿರುದ್ಧ ಕಾನೂನು ಪ್ರಕಾರ ಕ್ರಮಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸಿದ ಗವರ್ನರುಗಳು ಮತ್ತು ಅಧಿಕಾರಿಗಳಿಗೆ, ಬೊಲ್ಸನಾರೊ ಅವರ ಮೇಲೆ ಕ್ರಮಕೈಗೊಳ್ಳುವ ಬೆದರಿಕೆ ಹಾಕಿದ್ದಾರೆ.  ಅವರ ಬೆಂಬಲಿಗರು ಅಗಸ್ಟ್ ನಲ್ಲಿ ಯೇ ಚುನಾವಣಾ ವ್ಯವಸ್ಥೆ ಬದಲಾಯಿಸುವ ಮಸೂದೆ ಮಂಡಿಸಿದ್ದಾರೆ. ಅಗಸ್ಟ್ 10ರಂದು ರಾಜಧಾನಿಯಲ್ಲಿ ಒಂದು ಮಿಲಿಟರಿ ಪರೇಢ್ ಸಂಘಟಿಸಿದ್ದರು. ಅಧ್ಯಕ್ಷ ಬೊಲ್ಸನಾರೊ ಒಂದು ಹೇಳಿಕೆ ನೀಡಿ “ಪಾರ್ಲಿಮೆಂಟು ಮತ್ತು ಸುಪ್ರೀಂ ಕೋರ್ಟು ನಡೆಸಲಿರುವ ಕ್ಷಿಪ್ರಕ್ರಾಂತಿಯ ವಿರುದ್ಧ ಪ್ರತಿರೋಧ”ಕ್ಕೆ (!) ಇದು ತಯಾರಿ ಎಂದು ಹೇಳಿದ್ದಾರೆ.

ಈ ಎಲ್ಲ ಹೇಳಿಕೆಗಳು ಚುನಾವಣೆಯ ಮೊದಲು ಮಿಲಿಟರಿ ಕ್ಷಿಪ್ರಕ್ರಾಂತಿ ನಡೆಸಿ ಪ್ರಜಾಪ್ರಭುತ್ವವನ್ನು ಕೊನೆಗೊಳಿಸಲು ಅವರು ಪ್ರಯತ್ನಿಸುತ್ತಿದ್ದಾರೆ, ಎಂಬ ಸೂಚನೆ ನೀಡುತ್ತಿತ್ತು. ಇದಕ್ಕೆ ಪ್ರತಿಯಾಗಿಯೇ ವಿರೋಧ ಪಕ್ಷಗಳು “ಬೊಲ್ಸನಾರೊ ತೊಲಗು” ಚಳುವಳಿಗೆ ಕರೆ ನೀಡಿದ್ದವು. ಬೊಲ್ಸನಾರೊ-ವಿರೋಧಿ ಪ್ರದರ್ಶನಗಳಲ್ಲಿ ಮತ್ತು ಸಭೆಗಳಲ್ಲಿ “ಬೊಲ್ಸನಾರೊ ತೊಲಗು”, “ಬೊಲ್ಸನಾರೊ ವಿರುದ್ಧ ದೋಷಾರೋಪಣೆ ಮಾಡಿ”, “2022ರ ವರೆಗೆ ಕಾಯಲು ಸಾಧ್ಯವಿಲ್ಲ, ಬೊಲ್ಸನಾರೋ ಪದಚ್ಯುತಿ ಈಗಲೇ ಆಗಬೇಕು” ಎಂಬ ಘೋಷಣೆಗಳು ಕೇಳಿಬಂದವು.  ಸ್ವಾತಂತ್ರ‍್ಯ ದಿನದಂದು ನಡೆಸಿದ ಬೊಲ್ಸನಾರೊ-ಪರ ಮತಪ್ರದರ್ಶನಗಳು ಮತ್ತು ಬಹಿರಂಗ ಸಭೆಗಳಲ್ಲಿ ಸಹ ಸುಪ್ರೀಂ ಮತ್ತಿತರ ಕೋರ್ಟಗಳಿಗೆ ಮತ್ತು ಪಾರ್ಲಿಮೆಂಟಿಗೆ ಮುತ್ತಿಗೆ ಹಾಕಲು ಕರೆ ನೀಡಿದರು. ಈ ಸಭೆಗಳು ಮತ್ತು ಪ್ರದರ್ಶನಗಳು ಶಾಸಕಾಂಗ ಮತ್ತು ನ್ಯಾಯಾಂಗಗಳೀಗೆ “ಅಂತಿಮ ಎಚ್ಚರಿಕೆ” ಯೆಂದು ಬೆದರಿಸಿದರು. ಅವರ ಮತಪ್ರದರ್ಶನ ಮತ್ತು ಸಭೆಗಳಲ್ಲಿ ಪೋಲಿಸರು ಮತ್ತು ಮಿಲಿಟರಿ ಪೋಲಿಸರು ದೊಡ್ಡ ಸಂಖ‍್ಯೆಯಲ್ಲಿ ಭಾಗವಹಿಸಿದ್ದರು.  ಪ್ರದರ್ಶನಕಾರರು ಸುಪ್ರೀಂ ಮತ್ತು ಪಾರ್ಲಿಮೆಂಟ್ ಕಟ್ಟಡಗಳ ಹತ್ತಿರ ಹೋಗದಂತೆ ತಡೆಗೋಡೆಗಳನ್ನು ನಿರ್ಮಿಸಲಾಗಿತ್ತು. ಅವುಗಳನ್ನು ಲಾರಿ ಜೆಸಿಬಿ ಯಂತಹ ವಾಹನಗಳನ್ನು ಬಳಸಿ ಒಡೆದು, ಹತ್ತಿ ಹಾರಿ ಉಲ್ಲಂಘಿಸಿ ಈ ಕಟ್ಟಡಗಳ ಹತ್ತಿರ ಹೋಗಲು ಪೋಲಿಸರು ಅನುವು ಮಾಡಿಕೊಟ್ಟರು ಎನ್ನಲಾಗಿದೆ. ಮುಂದೆ ವಾಶಿಂಗ್ಟನ್ ನಲ್ಲಿ ಟ್ರಂಪ್ ಬೆಂಬಲಿಗರು ಪಾರ್ಲಿಮೆಂಟ್ ಕಟ್ಟಡಕ್ಕೆ ಲಗ್ಗೆ ಹಾಕಿದಂತೆ ಬ್ರೆಜಿಲ್ ನಲ್ಲೂ ಆಗಬಹುದು ಎಂದು ಹೇಳಲಾಗಿದೆ.

ಈ ನಡುವೆ ಬೊಲ್ಸನಾರೊ ಮತ್ತೆ ‘ಟ್ರಂಪ್ ಶೈಲಿ”ಯಲ್ಲಿ (ತಾನು ಸೋಲುವುದು ಖಚಿತವಾಗಿರುವ) ಮುಂದಿನ ಚುನಾವಣೆಯ ಕುರಿತು ಸಂಶಯವನ್ನು ಬಿತ್ತುವ ಕೆಲಸದಲ್ಲಿ ತೊಡಗಿರುವುದು, ಈಗಲೇ ಸುಪ್ರೀಂ ಕೋರ್ಟು ಮತ್ತು ಪಾರ್ಲಿಮೆಂಟಿನ ಮೇಲೆ ದಾಳಿ ಯೋಜಿಸಿರುವುದು, ಮಿಲಿಟರಿ ಕ್ಷಿಪ್ರಕ್ರಾಂತಿಗೆ ತಯಾರಿ ನಡೆಸುತ್ತಿರುವುದು ಬ್ರೆಜಿಲಿನಲ್ಲಿ ಮಾತ್ರವಲ್ಲ ಇಡೀ ಲ್ಯಾಟಿನ್ ಅಮೆರಿಕದಲ್ಲೂ ಜಗತ್ತಿನಲ್ಲಿಯೂ ಆತಂಕ ಮೂಡಿಸಿದೆ. ಇದರ ವಿರುದ್ಧ ಸ್ಪೈನಿನ ಮಾಜಿ ಪ್ರಧಾನಿ ಝಪಟೆರೊ, ಮಾಜಿ ಗ್ರೀಕ್ ಅರ್ಥಮಂತ್ರಿ ಯಾನಿಸ್, ಯುಕೆ ಲೇಬರ್ ಪಾರ್ಟಿಯ ಮಾಜಿ ನಾಯಕ ಕೊರ್ಬಿನ್, ಮಾಜಿ ಪರಾಗುವೇ ಅಧ್ಯಕ್ಷ  ಲುಗೊ, ಅರ್ಜೆಂಟಿನಾದ ನೊಬೆಲ್ ಪ್ರಶಸ್ತಿ ವಿಜೇತ ಹಾಗೂ ಮಾನವ ಹಕ್ಕು ಹೋರಾಟಗಾರ ಅಡೊಲ್ಫೊ ಪೆರೆಸ್, ಯುಕೆ ಗ್ರೀನ್ ಪಕ್ಷದ ಸಂಸದೆ ರೊಲಿನ್ ಲುಕಾಸ್ ಮುಂತಾದ 150 ಪ್ರತಿಷ್ಟಿತ ವ್ಯಕ್ತಿಗಳು ಬಹಿರಂಗ ಪತ್ರ ಬರೆದು “ಜಗತ್ತಿನ ಮೂರನೆಯ ಅತಿ ದೊಡ್ಡ ಪ್ರಜಾಪ್ರಭುತ್ವದಲ್ಲಿ ಕ್ಷಿಪ್ರಕ್ರಾಂತಿಯ ಆತಂಕವೆಬ್ಬಿಸುತ್ತಿದೆ…ಬ್ರೆಜಿಲ್ ನ ಪ್ರಜಾಸತ್ತಾತ್ಮಕ ಸಂಸ್ಥೇಗಳಿಗೆ ಅಪಾಯವೊದಗಿದ್ದು ಅವುಗಳ ರಕ್ಷಣೆಗೆ ಎಲ್ಲರೂ ಧಾವಿಸಬೇಕಾಗಿದೆ” ಎಂದಿದ್ದಾರೆ.

ಅಧ‍್ಯಕ್ಷ ಬೊಲ್ಸನಾರೊ ಎಲ್ಲ ಜನವಿಭಾಗಗಳಿಂದ ತಮ್ಮ ಕ್ರಮಗಳಿಗೆ ವಿರೋಧ ಎದುರಿಸುತ್ತಿದ್ದಾರೆ. ಬುಡಕಟ್ಟು ಸಮುದಾಯಗಳ ಜನ ತಲೆತಲಾಂತರಗಳಿಂದ ವಾಸಿಸುತ್ತಾ ಚಟುವಟಿಕೆ ನಡೆಸುತ್ತಿರುವ ಭೂಮಿಯ ಮೇಲಿನ ಹಕ್ಕನ್ನು ಕಿತ್ತುಕೊಳ್ಳುವ ಕೆಳಗಿನ ಕೋರ್ಟಿನ ತೀರ್ಪೊಂದರ ವಿರುದ್ಧ ಅಪೀಲನ್ನು ಸುಪ್ರೀಂ ಕೋರ್ಟು ಕೈಗೆತ್ತಿಕೊಂಡಿತ್ತು. ಸಾಂತಾ ಕಟರಿನಾ ಪ್ರಾಂತದಲ್ಲಿ ಬುಡಕಟ್ಟು ಸಮುದಾಯವೊಂದರ ಜನ ಅಕ್ಟೋಬರ್ 1988ರಲ್ಲಿ ಅವರು ಹಕ್ಕು ಸಾಧಿಸುತ್ತಿರುವ ಭೂಮಿಯ ಮೇಲೆ ವಾಸವಿರಲಿಲ್ಲ. ಆದ್ದರಿಂದ ಅವರು ಅದರ ಮೇಲೆ ಹಕ್ಕು ಸಾಧಿಸುವಂತಿಲ್ಲವೆಂದು ತೀರ್ಪು ನೀಡಿತ್ತು.

1988ರ ಹಿಂದಿನ 20 ವರ್ಷಗಳಲ್ಲಿ ಬ್ರೆಜಿಲಿನಲ್ಲಿ ಮಿಲಿಟರಿ ಸರ್ವಾಧಿಕಾರವಿದ್ದು, ಬುಡಕಟ್ಟು ಸಮುದಾಯಗಳನ್ನು ಓಡಿಸಲಾಗಿತ್ತು. ಆದ್ದರಿಂದ ಈ ತಾಂತ್ರಿಕ  ಕಾರಣ ಕೊಟ್ಟು ತಲೆತಲಾಂತರಗಳಿಂದ ಬಂದಿರುವ ಭೂಮಿಯ ಮೇಲಿನ ಹಕ್ಕನ್ನು ಕಿತ್ತುಕೊಳ್ಳಬಾರದು. ಈ ತೀರ್ಪು ಒಂದು ಪ್ರಾಂತದ ಒಂದು ಬುಡಕಟ್ಟು ಸಮುದಾಯದ ಹಕ್ಕಿನ ಕುರಿತಾಗಿದ್ದರೂ ಅದನ್ನು ಎಲ್ಲ ಕಡೆ ಅನ್ವಯಗೊಳಿಸುವ ಅಪಾಯವಿದೆ. ಅಲ್ಲದೆ  ಪಾರ್ಲಿಮೆಂಟಿನಲ್ಲಿ ಮಂಡಿಸಲಾದ ಮಸೂದೆಯೊಂದು ಅಕ್ಟೋಬರ್ 1988 ಭೂಒಡೆತನ ನಿರ್ಧರಿಸಲು ಕಟ್-ಆಫ್ ದಿನಾಂಕ ಎಂದು ನಮೂದಿಸಿದೆ. ಇದನ್ನು ಸಹ ಸಂವಿಧಾನ-ಬಾಹಿರವೆಂದು ಪರಿಗಣಿಸಬೇಕು, ಎಂಬುದು ಸುಪ್ರೀಂ ಕೋರ್ಟಿಗೆ ಬುಡಕಟ್ಟು ಸಮುದಾಯಗಳ ಜನರ ಅಹವಾಲು.

ಇದನ್ನು ಅಪೀಲ್ ಮೂಲಕ ಮಾತ್ರವಲ್ಲದೆ, ನೇರವಾಗಿ ಕೋರ್ಟಿಗೆ ಮನವರಿಕೆ ಮಾಡಲು 173 ವಿವಿಧ ಬುಡಕಟ್ಟುಗಳಿಗೆ ಸೇರಿದ 6 ಸಾವಿರಕ್ಕೂ ಹೆಚ್ಚು ಜನ ತಮ್ಮ ಸಾಂಪ್ರದಾಯಿಕ ವೇಷಭೂಷಣಗಳಲ್ಲಿ ಸುಪ್ರಿಂ ಕೋರ್ಟು ಮತ್ತು ಪಾರ್ಲಿಮೆಂಟಿನ ಮುಂದೆ ಅಗಸ್ಟ್ 25ರಂದು ಮತಪ್ರದರ್ಶನ ನಡೆಸಿದರು. ಬೊಲ್ಸನಾರೊ ಇದಕ್ಕೆ ಒಪ್ಪಿಕೊಂಡರೆ “ಅರಾಜಕತೆ” ಆದೀತು ಎಂದು ಹೇಳುತ್ತಾ, ಬ್ರೆಜಿಲಿನ ಭಾರೀ ಎಸ್ಟೇಟ್ ಮಾಲೀಕರ ಅಭಿಪ್ರಾಯವನ್ನು ಮಾರ್ದನಿಸಿದ್ದಾರೆ. ಆದ್ದರಿಂದ ಎಲ್ಲ ಬುಡಕಟ್ಟು ಸಮುದಾಯಗಳ ಜನ ಬೊಲ್ಸನಾರೊ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಬ್ರೆಜಿಲ್ ಬೊಲ್ಸನಾರೊ ಪರ ಮತ್ತು ವಿರೋಧಿ ರಾಜಕೀಯ ಶಕ್ತಿಗಳ ನಡುವೆ ಸಂಘರ್ಷ ಬ್ರೆಜಿಲಿನ ಮಾತ್ರವಲ್ಲ, ಇಡೀ ಲ್ಯಾಟಿನ್ ಅಮೆರಿಕದ ಮಾತ್ರವಲ್ಲ, ಇಡೀ ಜಗತ್ತಿನ ಉಗ್ರ ಬಲಪಂಥೀಯ ಮತ್ತು ಪ್ರಜಾಪ್ರಭುತ್ವ ಶಕ್ತಿಗಳ ನಡುವಿನ ಸಂಘರ್ಷದ ಮೇಲೆ ಗಮನಾರ್ಹ ಪರಿಣಾಮ ಬೀರಲಿದೆ.

Donate Janashakthi Media

Leave a Reply

Your email address will not be published. Required fields are marked *