ಬ್ರೆಜಿಲ್ ನಲ್ಲಿ ಉಗ್ರ ಬಲಪಂಥೀಯ ದಂಗೆಗಳ ಹಿಂದೆ ಯಾರಿದ್ದಾರೆ?

ವಸಂತರಾಜ ಎನ್.ಕೆ

ಜನವರಿ 8ರಂದು ಬ್ರೆಜಿಲ್ ರಾಧಾನಿಯಲ್ಲಿ ಭಾರೀ ದಂಗೆ ಮತ್ತು ಮಿಲಿಟರಿ ಕ್ಷಿಪ್ರಕ್ರಾಂತಿಗೆ ಪ್ರಯತ್ನ ನಡೆಯಿತು. ಅದನ್ನು ಹತ್ತಿಕ್ಕಲಾಗಿದೆ.  ಜಾಗತಿಕವಾಗಿ ಈ ಪ್ರಜಾಪ್ರಭುತ್ವ-ವಿರೋಧಿ ದಂಗೆ ತೀವ್ರ ಖಂಡನೆಗೆ ಒಳಗಾಗಿದೆ.  ಈ ದಂಗೆಯ ವಿಲಕ್ಷಣತೆಯೆಂದರೆ, ಇದು 2 ವರ್ಷಗಳ ಹಿಂದೆ ಯು.ಎಸ್ ನ ರಾಜಧಾನಿ ವಾಶಿಂಗಟನ್ ನಲ್ಲಿ ನಡೆದ ಇಂತಹುದೇ ದಂಗೆಯ ‘ಆಕ್ಶನ್ ರಿಪ್ಲೇ’ ಇದ್ದಂತಿತ್ತು. ‘ಲುಲಾ-ವಿರೋಧಿ ಆಂತರಿಕ ಮತ್ತು ವಿಧೇಶೀ ಶಕ್ತಿಗಳು ಈ ದಂಗೆಗಳ ಹಿಂದೆಯಿವೆ.  ಬೊಲ್ಸನಾರೋ ಸೋತಿದ್ದರೂ ಬೊಲ್ಸನಾರೋ ವಾದ ಸೋತಿಲ್ಲ’ ಎಂಬುದನ್ನು ಈ ಘಟನೆ ನೆನಪಿಸಿದೆ. ಲುಲಾ ಆಡಳಿತ ಮತ್ತು ಬ್ರೆಜಿಲ್ ಜನತೆ ಈ ಸವಾಲನ್ನು ಹೇಗೆ ಎದುರಿಸುತ್ತಾರೆ ಎನ್ನುವುದರ ಮೇಲೆ ಬ್ರೆಜಿಲ್ ಪ್ರಜಾಪ್ರಭುತ್ವ ಮತ್ತು ಲ್ಯಾಟಿನ್ ಪ್ರಗತಿಪರರ ಮುನ್ನಡೆ ಆಧರಿಸಿರುತ್ತದೆ.

ಬ್ರೆಜಿಲ್ ನ ರಾಜಧಾನಿ ಬ್ರೆಸಿಲಿಯಾ ದಲ್ಲಿ ಜನವರಿ 8 ಭಾನುವಾರದಂದು ಸಾವಿರಾರು ಮಾಜಿ ಅಧ್ಯಕ್ಷ ಬೊಲ್ಸನಾರೊ ಬೆಂಬಲಿಗರು ಅಧ್ಯಕ್ಷೀಯ ಸದನ, ಪಾರ್ಲಿಮೆಂಟ್ ಮತ್ತು ಸುಪ್ರೀಂ ಕೋರ್ಟ ಇರುವ ಕಟ್ಟಡಗಳಿಗೆ ನುಗ್ಗಿ ಕೆಲವು ಗಂಟೆಗಳ ಕಾಲ ದಾಂದಲೆ ಮಾಡಿದರು, ಪೀಠೋಪಕರಣಗಳನ್ನು ಧ್ವಂಸ ಮಾಡಿದರು. ಗಾಜುಗಳನ್ನು ಒಡೆದರು. ಭಾನುವಾರವಾದ್ದರಿಂದ ಈ ಕಚೇರಿಗಳಲ್ಲಿ ಸಿಬ್ಬಂದಿ ಇಲ್ಲವಾದ್ದರಿಂದ ಯಾರೂ ಗಾಯಗೊಂಡಿಲ್ಲ. ಆದರೆ ಕಟ್ಟಡದಲ್ಲಿದ್ದ ಕಚೇರಿಗಳಲ್ಲಿ ವ್ಯಾಪಕ ಹಾನಿ ಮಾಡಲಾಯಿತು. ಬ್ರೆಜಿಲ್ ನ ಹಲವು ಪ್ರದೇಶಗಳಿಂದ ನೂರಾರು ಬಸ್ ಗಳಲ್ಲಿ ಬಂದ ಸಾವಿರಾರು ಜನ ರಾಜಧಾನಿಯಲ್ಲಿದ್ದ ದೊಡ್ಡ ಗುಂಪಿನೊಂದಿಗೆ ಸೇರಿಕೊಂಡರು. ಈ ಕಟ್ಟಡಗಳನ್ನು ಕಾವಲು ಕಾಯುತ್ತಿದ್ದ ಮಿಲಿಟರಿ ಪೋಲಿಸ್ ದಂಗೆಕೋರರು ಅದನ್ನು ಪ್ರವೇಶಿಸಲು ತೀವ್ರ ಅಡೆತಡೆ ಒಡ್ಡಲಿಲ್ಲ. ದಂಗೆಕೋರರ ದಾಂಧಲೆ ತಡೆಯುವುದರಲ್ಲೂ ವಿಫಲರಾದರು. ಕೆಲವು ಕಡೆ ಪೋಲಿಸರು ದಂಗೆಕೋರರರಿಗೆ ದಾರಿ ಮಾಡಿಕೊಡುವ, ಮತ್ತು ದಾರಿ  ತೋರಿಸುವ, ಅವರ ಜತೆ ಪರಿಚಿತ ಸ್ನೇಹಿತರಂತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ವಿಡಿಯೊಗಳೂ ಹೊರಬಂದಿದ್ದು, ಪೋಲೀಸರ ಕನಿಷ್ಠ ಒಂದು ವಿಭಾಗ ದಂಗೆಕೋರರ ಜತೆ ಶಾಮೀಲಾಗಿದ್ದರು ಎಂಬ ಸಂಶಯಕ್ಕಡೆ ಮಾಡಿದೆ.

ಪ್ರಜಾಪ್ರಭುತ್ವದ ಮೇಲೆ ದಾಳಿ

ಕಳೆದ ತಿಂಗಳು ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯ ಗಳಿಸಿದ್ದ ಎಡಪಂಥೀಯ ನಾಯಕ ಲುಲಾ ಡಿ ಸಿಲ್ವಾ ಜನವರಿ 1 ರಂದು ಅಧಿಕಾರ ವಹಿಸಿಕೊಂಡಿದ್ದರು. ಚುನಾವಣೆಯಲ್ಲಿ ಸೋತಿದ್ದ ನಿಕಟಪೂರ್ವ ಅಧ್ಯಕ್ಷ ಬೊಲ್ಸನಾರೊ ಲುಲಾ ಗೆಲುವನ್ನು ಸ್ವೀಕರಿಸಿ ಔಪಚಾರಿಕವಾಗಿಯೂ ಅಭಿನಂದಿಸಿರಲಿಲ್ಲ. ಲುಲಾ ಅವರ ಪದಗ್ರಹಣದ 2 ದಿನ ಮೊದಲು ಯು.ಎಸ್ ಗೆ ತೆರಳಿದ್ದರು. ರಾಜಧಾನಿಯಲ್ಲಿ ದಂಗೆಯೆಬ್ಬಿಸಿದ ಜನ ರಾಷ್ಟ್ರಧ್ವಜದ ಬಣ್ಣಗಳ ಉಡುಪು ತೊಟ್ಟಿದ್ದು ಬೊಲ್ಸನಾರೊ ಚುನಾವಣಾ ಚಿಹ್ನಗಳನ್ನು ತಂದಿದ್ದರು. ಬೊಲ್ಸನಾರೊ ಅವರು ದಂಗೆಯಲ್ಲಿ ನೇರವಾಗಿ ಪಾಲುಗೊಳ್ಳದಿದ್ದರೂ, ದೇಶದಲ್ಲೇ ಇಲ್ಲದಿದ್ದರೂ ಅವರ ಬೆಂಬಲಿಗರು ಅವರ ಹೆಸರಿನಲ್ಲೇ ಈ ದಂಗೆ ನಡೆಸಿದ್ದರು. ಕೆಲವು ಗಂಟೆಗಳ ಕಾಲ ದಂಗೆ ಅವ್ಯಾಕತವಾಗಿ ನಡೆದಿದ್ದು ಮತ್ತು ಅದನ್ನು ತಡೆಯುವಲ್ಲಿ ಪೋಲಿಸರ ವೈಫಲ್ಯ ಕಂಡು, ಅಧ್ಯಕ್ಷ ಲುಲಾ ಅವರ ಫೆಡೆರಲ್ ಸರಕಾರ ತನ್ನ ಪಡೆಗಳನ್ನು ಕಳಿಸಿತು. ಆ ನಂತರ ಕೆಲವೇ ಹೊತ್ತಲ್ಲಿ ದಂಗೆ ಅಡಗಿಸಲು ಸಾಧ‍್ಯವಾಯಿತು. ಈ ಕಟ್ಟಡಗಳಲ್ಲಿ ಇನ್ನೂ ಇದ್ದ 600ಕ್ಕೂ ಹೆಚ್ಚು ದಂಗೆಕೋರರನ್ನು ಬಂಧಿಸಲಾಗಿದೆ. ಮಿಲಿಟರಿ ಕಚೇರಿಯ ಮುಂದೆ ಟೆಂಟ್ ಹಾಕಿಕೊಂಡು ಲುಲಾ ಚುನಾಯಿತರಾದಂದಿನಿಂದ ಪ್ರತಿಭಟನೆ ನಡೆಸುತ್ತಿದ್ದ ಬೊಲ್ಸನಾರೊ ಬೆಂಬಲಿಗರನ್ನೂ ಬಂಧಿಸುವ ಮಿಂಚಿನ ಕ್ರಮವನ್ನು ಫೆಡೆರಲ್ ಪಡೆಗಳು ಕೈಗೊಂಡಿವೆ. ದಂಗೆಕೋರರಿಗೆ ಬಸ್ ಮತ್ತಿತರ ಮೂಲಸೌಕರ್ಯ ಒದಗಿಸಿದವರು, ದಂಗೆಕೋರರಿಗೆ ಧನಸಹಾಯ ಮತ್ತಿತರ ಬೆಂಬಲ ನೀಡಿದವರ ಕುರಿತು, ತನಿಖೆ ನಡೆಸಿ ಕಟು ಕ್ರಮಕೈಗೊಳ್ಳುವುದಾಗಿ ಲುಲಾ ಹೇಳಿದ್ದಾರೆ.

ಇದನ್ನು ಓದಿ: ಬ್ರೆಜಿಲ್​: ದಶಕದ ಬಳಿಕ ಅಧಿಕಾರಕ್ಕೆ ಮರಳಿದ ಎಡಪಂಥೀಯ ಅಧ್ಯಕ್ಷ ಲುಲಾ ಡಾ ಸಿಲ್ವಾ

ಬ್ರೆಸಿಲಿಯಾದ ಫೆಡೆರಲ್ ಜಿಲ್ಲೆಯ ಗವರ್ನರ್ ಮತ್ತು ಸಾರ್ವಜನಿಕ ಭದ್ರತೆಯ ಸಚಿವ ಇಬ್ಬರೂ ಬೊಲ್ಸನಾರೊ ಬೆಂಬಲಿಗರಾಗಿದ್ದು ದಂಗೆ ಅಡಗಿಸುವಲ್ಲಿ ಮುತುವರ್ಜಿ ತೋರಿಸಲಿಲ್ಲ. ಗವರ್ನರ್ ಯು.ಎಸ್ ಪ್ರವಾಸದಲ್ಲಿದ್ದರೆ, ಭದ್ರತಾ ಸಚಿವ ರಜೆಯಲ್ಲಿದ್ದ!. ಅಧ‍್ಯಕ್ಷ ಲುಲಾ ಸಚಿವರನ್ನು ವಜಾ ಮಾಡಿದ್ದು, ಗವರ್ನರನ್ನು ಅಮಾನತಿನಲ್ಲಿ ಇಟ್ಟಿದ್ದಾರೆ. ಈ ದಂಗೆಯನ್ನು ಸಂಘಟಿಸುವಲ್ಲಿ ನೆರವು ನೀಡಿದವರನ್ನು ಪತ್ತೆ ಹಚ್ಚಿ ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲೆ ಮಾಡಲು ಆಜ್ಞೆ ಮಾಡಿದ್ದಾರೆ. ದಂಗೆಕೋರರ ಮೇಲೆ ಕಟು ಕ್ರಮಕ್ಕೆ ಆಜ್ಞೆ ಮಾಡಿದ್ದು ಅವರ ರಾಜಕೀಯ ಅಭಿವ್ಯಕ್ತಿ ಹತ್ತಿಕ್ಕಲು ಅಲ್ಲ. ಬದಲಾಗಿ ಅವರು ಬ್ರೆಜಿಲ್ ನ ಸಾಂವಿಧಾನಿಕ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ದಾಳಿ ಮಾಡಿದ್ದಕ್ಕಾಗಿ ಎಂದು ಅಧ್ಯಕ್ಷ ಲುಲಾ ಸ್ಪಷ್ಟ ಪಡಿಸಿದ್ದಾರೆ.  ಬೊಲ್ಸನಾರೊ ಅವರ ಪಕ್ಷ ಬಿಟ್ಟು ಬ್ರೆಜಿಲ್ ನ ಹೆಚ್ಚಿನ ಪಕ್ಷಗಳು ಈ ದಾಳಿಯನ್ನು ಖಂಡಿಸಿವೆ. ನ್ಯಾಯಾಂಗದ ಪ್ರಮುಖ ವ್ಯಕ್ತಿಗಳೂ ಈ ದಂಗೆಯನ್ನು ಖಂಡಿಸಿದ್ದಾರೆ. ಅದೇ ರೀತಿ ಲ್ಯಾಟಿನ್ ಅಮೆರಿನ್ ದೇಶಗಳ ಮತ್ತು ಹೆಚ್ಚಿನ ಅಂತರ್ರಾಷ್ಟ್ರೀಯ ನಾಯಕರು ಈ ದಂಗೆಯನ್ನು ಬ್ರೆಜಿಲ್ ನ ಸಾಂವಿಧಾನಿಕ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ದಾಳಿ ಎಂದು ಬಣ್ಣಿಸಿ ಖಂಡಿಸಿದ್ದಾರೆ. ಹಲವು ನಾಯಕರು ಪ್ರಜಾಪ್ರಭುತ್ವವನ್ನು ಮನ್ನಿಸದ ಫ‍್ಯಾಸಿಸ್ಟ್ ಮನೋಭಾವವೆಂದೂ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಯು.ಎಸ್ ಅಧ‍್ಯಕ್ಷ ಬಿಡೆನ್ ಮತ್ತು ಸ್ಪಾನಿಷ್ ಪ್ರಧಾನಿ ಸಹ ಈ ದಂಗೆಯನ್ನು ಖಂಡಿಸಿದ್ದಾರೆ. ಯು.ಎಸ್ ನ 43 ಡೆಮೊಕ್ರಾಟಿಕ್ ಸಂಸದರು ಬೊಲ್ಸನಾರೋ ವೀಸಾ ರದ್ದು ಮಾಡಿ ಬ್ರೆಜಿಲ್ ಗೆ ವಾಪಸು ಕಳಿಸಬೇಕೆಂದು ಒತ್ತಾಯಿಸಿದ್ದಾರೆ. ವಿಶ್ವಸಂಸ್ಥೆ ಮಹಾಕಾರ್ಯದರ್ಶಿ ಅಂಟೋನಿಯೋ ಗುಟೆರಸ್ ಈ ದಾಳಿಯನ್ನು ಖಂಡಿಸುತ್ತಾ  ‘ಬ್ರೆಜಿಲ್ ನ ಪ್ರಜಾಪ್ರಭುತ್ವ ಮತ್ತು ಅದರ ಸಂಸ್ಥೆಗಳನ್ನು ಗೌರವಿಸಬೇಕು’ ಎಂದು ಹೇಳಿದ್ದಾರೆ. ಬ್ರೆಜಿಲ್ ನಲ್ಲಿ ಒಂದು ಕಡೆ ಬೊಲ್ಸನಾರೊ ಬೆಂಬಲಿಗರ ಪ್ರದರ್ಶನಗಳು ಮುಂದುವರೆದಿವೆ. ಆದರೆ ಅಧ್ಯಕ್ಷ ಲುಲಾ ಬೆಂಬಲಿಸಿ ಈ ದಂಗೆಯನ್ನು ಖಂಡಿಸಿ ಭಾರೀ ಪ್ರದರ್ಶನಗಳು ದೇಶದಾದ್ಯಂತ ವ್ಯಾಪಕವಾಗಿ ನಡೆಯುತ್ತಿವೆ.

ವಾಶಿಂಗ್ಟನ್ ದಂಗೆಗಳ ‘ಆಕ್ಶನ್ ರಿಪ್ಲೇ’ ?!

ಈ ದಂಗೆಯ ಇನ್ನೊಂದು ವಿಲಕ್ಷಣೆತೆಯೆಂದರೆ, ಇದು 2 ವರ್ಷಗಳ ಹಿಂದೆ ಯು.ಎಸ್ ನ ರಾಜಧಾನಿ ವಾಶಿಂಗಟ್ನ್ ನಲ್ಲಿ ನಡೆದ ಇಂತಹುದೇ ದಂಗೆಯ ‘ಆಕ್ಶನ್ ರಿಪ್ಲೇ’ ಇದ್ದಂತಿತ್ತು. ಟ್ರಂಪ್ ಚುನಾವಣೆ ಸೋತು 2021 ರ ಜನವರಿ 6ರಂದು ಪಾರ್ಲಿಮೆಂಟ್ ನ ಔಪಚಾರಿಕ ಅನುಮೋದನೆಯ ನಂತರ ಬಿಡೆನ್ ಗೆ ಅಧಿಕಾರವನ್ನು ವಹಿಸುವ ದಿನ, ಟ್ರಂಪ್ ಬೆಂಬಲಿಗರು ಪಾರ್ಲಿಮೆಂಟ್ ಕಟ್ಟಡಕ್ಕೆ ನುಗ್ಗಿ ಹಿಂಸಾತ್ಮಕ ದಾಂಧಲೆ ನಡೆಸಿದ್ದರು. ಔಪಚಾರಿಕ ಅನುಮೋದನೆಯನ್ನು ನಿಲ್ಲಿಸಲು ಪ್ರಯತ್ನಿಸಿದ್ದರು. ವಾಶಿಂಗ್ ಟನ್ ದಂಗೆಗಳಲ್ಲಿ ಹಿಂಸಾಚಾರ ಇನ್ನೂ ತೀವ್ರವಾಗಿತ್ತು.  ತಮಗೆ ಪ್ರತಿಕೂಲ ಫಲಿತಾಂಶ ಬಂದಾಗ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಪ್ರಶ್ನಿಸುವುದು, ಹಿಂಸಾತ್ಮಕವಾಗಿ ಸಾಂವಿಧಾನಿಕ ಪ್ರಕ್ರಿಯೆಯನ್ನು ನಿಲ್ಲಿಸಲು ಪ್ರಯತ್ನಿಸುವುದು, ಹಿಂದಿನ ಅಧ್ಯಕ್ಷರ ಪರೋಕ್ಷ ಕುಮ್ಮಕ್ಕು ಬೆಂಬಲ – ಎರಡೂ ಕಡೆ ಸಾಮಾನ್ಯ ಅಂಶಗಳಾಗಿದ್ದವು.  ಎರಡೂ ಯೋಜಿತ ಸಂಘಟಿತ ಹಿಂಸಾತ್ಮಕ ದಂಗೆಗಳಾಗಿದ್ದವು. ಎರಡರಲ್ಲೂ ದಂಗೆಯ ಮುನ್ಸೂಚನೆಯಿದ್ದರೂ ಅದನ್ನು ತಡೆಯಲು ಪೋಲಿಸ್ ವೈಫಲ್ಯ ಮತ್ತು ಭಾಗಶಃ ಶಾಮೀಲು ಇತ್ತು. ಚುನಾವಣೆಯ ಮೊದಲು ಸಹ ಸೋಲಿನ ಸಾಧ್ಯತೆಯನ್ನು ಮುಂಗಂಡು, ‘ಚುನಾವಣಾ ಅಕ್ರಮ ನಡೆಯಲಿದೆ’,  ‘ವಿರೋಧಿ ಅಭ್ಯರ್ಥಿ ಅಕ್ರಮಗಳನ್ನು ಮಾಡಿ ಚುನಾವಣೆಯಲ್ಲಿ ಗೆಲುವು ಸಾಧ್ಯತೆಯಿದೆ’,’ ಹಾಗೆ ಆದರೆ ಚುನಾವಣಾ ಫಲಿತಾಂಶವನ್ನು ಒಪ್ಪುವುದಿಲ್ಲ’ ಎಂದು  ಟ್ರಂಪ್, ಬೊಲ್ಸನಾರೊ ಇಬ್ಬರೂ ಹೇಳಿದ್ದರು. ತಾವು ಅಧಿಕಾರದಲ್ಲಿದ್ದುಕೊಂಡು, ವಿರೋಧ ಪಕ್ಷ ಅಕ್ರಮ ಮಾಡಲಿದೆ ಎಂಬ ಹಾಸ್ಯಾಸ್ಪದ ಹುಯಿಲೆಬ್ಬಿಸುವ ವಿಲಕ್ಷಣತೆ, ಚುನಾವಣಾ ಫಲಿತಾಂಶ ವನ್ನು ಪ್ರಶ್ನಿಸಿದಾಗ ಅದನ್ನು ತನಿಖೆ ಮಾಡಿ ‘ಅಕ್ರಮ ನಡೆದಿಲ್ಲ’ ವೆಂದು ಸಂಬಂಧಿತ ಸಾಂವಿಧಾನಿಕ ಸಂಸ್ಥೆ ತೀರ್ಪು ಕೊಟ್ಟ ಮೇಲೂ ಈ ವಿವಾದವನ್ನು ಮುಂದುವರೆಸುವುದು ಸಹ ಇಬ್ಬರಿಗೂ ಸಾಮಾನ್ಯವಾಗಿತ್ತು.

ಇದನ್ನು ಓದಿ: ಬ್ರೆಜಿಲ್‌ ರಾಜಧಾನಿ ಗಲಭೆ ಪ್ರಕರಣ: ಮಾಜಿ ಅಧ್ಯಕ್ಷ ಬೋಲ್ಸನಾರೊ ಪಾತ್ರದ ತನಿಖೆಗೆ ಸುಪ್ರೀಂ ಅನುಮತಿ

ಬೊಲ್ಸನಾರೊ ರನ್ನು ‘ಲ್ಯಾಟಿನ್ ಅಮೆರಿಕದ ಟ್ರಂಪ್’ ಎಂದು ಕರೆಯುವಷ್ಟು ಅವರ ನಡುವೆ ಸಾಮ್ಯವಿತ್ತು. ವೈಯಕ್ತಿಕ ಹಿತಾಸಕ್ತಿಗಾಗಿ ಭ್ರಷ್ಟಾಚಾರ, ಎಲ್ಲದಕ್ಕೂ ಹಿಂದಿನ ಸರಕಾರಗಳನ್ನು ಹಳಿಯುವುದು, ಶ್ರೀಮಂತರ ತೆರಿಗೆ ಕಡಿತ ಮುಂತಾದ ಶ್ರೀಮಂತ-ಪರ ನೀತಿಗಳನ್ನು ಎಗ್ಗಿಲ್ಲದೆ ಪಾಲಿಸುತ್ತಲೇ ಬಡವರ ಪರವೆಂದು ಬಡವರನ್ನು ನಂಬಿಸುವುದು, ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಅಪನಂಬಿಕೆ ಹುಟ್ಟಿಸುವುದು, ಸಾಮಾಜಿಕ ಸಂಪ್ರದಾಯ-ಶರಣತೆಗೆ ಮತ್ತು (ಕೊವಿದ್ ಮಹಾಸೋಂಕು ಇಲ್ಲವೇ ಇಲ್ಲ, ವ್ಯಾಕ್ಸೀನ್ ಅಗತ್ಯವೇ ಇಲ್ಲ ಮುಂತಾದ) ಅವೈಜ್ಞಾನಿಕ ಧೋರಣೆಗಳಿಗೆ ಬೆಂಬಲ, ಗನ್ ನಿಯಂತ್ರಣಕ್ಕೆ ವಿರೋಧ, ಪರಿಸರ ಸಮಸ್ಯೆಗಳ ಪೂರ್ಣ ನಿರಾಕರಣೆ – ಮುಂತಾದ ಉಗ್ರ ಬಲಪಂಥೀಯ ನೀತಿಗಳೂ ಇಬ್ಬರಿಗೂ ಸಾಮಾನ್ಯವಾಗಿದ್ದವು.

ಈ ಎರಡು ದಂಗೆಗಳ ನಡುವೆ ಪ್ರಮುಖ ವ್ಯತ್ಯಾಸಗಳು ಸಹ ಇದ್ದವು. ಟ್ರಂಪ್ ದಂಗೆಯ ಮೊದಲು ದಂಗೆಕೋರರನ್ನು ಉದ್ದೇಶಿಸಿ ಮಾತನಾಡಿ ನೇರವಾಗಿಯೇ ದಂಗೆಗೆ ಹುರಿದುಂಬಿಸಿದ್ದರು. ಆದರೆ ಬೊಲ್ಸನಾರೋ ಕೆಲವು ದಿನಗಳ ಮೊದಲೇ ದೇಶ ಬಿಟ್ಟು ಯು.ಎಸ್ ತೆರಳಿದ್ದರು. ಇದಕ್ಕೆ ಕಾರಣ, ಹಿಂಸಾಚಾರಕ್ಕೆ ನಾಯಕತ್ವ ಕೊಡುವುದಕ್ಕೆ ಹಿಂಜರಿಕೆಯಲ್ಲ, ಅವರ ವಿರುದ್ಧ ಇದ್ದ ಹಲವು ಭ್ರಷ್ಟಾಚಾರ ಮತ್ತು ಅಪರಾಧದ ಪ್ರಕರಣಗಳಲ್ಲಿ ಬಂಧಿಸಿ ಜೈಲಿಗೆ ಹಾಕಬಹುದು ಎಂಬ ಭಯ. ಬ್ರೆಜಿಲ್ ನಲ್ಲಿ ಮಿಲಿಟರಿ ಯನ್ನು ಕ್ಷಿಪ್ರಕ್ರಾಂತಿಯನ್ನು ನಡೆಸುವಂತೆ ದಂಗೆಕೋರರು ಕರೆದ ವ್ಯತ್ಯಾಸವಿತ್ತು. ದಂಗೆಕೋರರು ದಂಗೆಯ ಮೊದಲೇ ಹಲವು ದಿನಗಳ ಕಾಲ ರಾಜಧಾನಿ ಬ್ರೆಸಿಲಿಯ ಸೇರಿದಂತೆ ಮಿಲಿಟರಿ ನೆಲೆಗಳ ಎದುರು ಕ್ಯಾಂಪ್ ಮಾಡಿ ಪ್ರದರ್ಶನ ನಡೆಸಿದ್ದರು. ದಂಗೆಯ ದಿನ ಸಹ ‘ಕೂಡಲೆ ಮಿಲಿಟರಿ ಮಧ್ಯಪ್ರವೇಶ ಮಾಡಬೇಕು’ ಎಂದು ಬರೆದ ಭಿತ್ತಿಫಲಕಗಳನ್ನು ದಂಗೆ ಕೋರರು ಹಿಡಿದಿದ್ದರು. ಬ್ರೆಜಿಲ್ ನ ಮಿಲಿಟರಿಯಲ್ಲೂ ರಾಜಕೀಯ ಆಕಾಂಕ್ಷೆಯಿರುವ ಹಲವು ಉನ್ನತ ಅಧಿಕಾರಿಗಳು ಇದ್ದರು. ಬೊಲ್ಸನಾರೋ ರ ಆಡಳಿತದಲ್ಲಿ ಹಲವಾರು ಮಾಜಿ ಮಿಲಿಟರಿ ಅಧಿಕಾರಿಗಳನ್ನು ಸಚಿವರಾಗಿ ಸೇರಿಸಿಕೊಂಡಿದ್ದರು. 1960-70ರ ದಶಕದ ಮಿಲಿಟರಿ ಸರ್ವಾಧಿಕಾರವನ್ನು ಬಹಿರಂಗವಾಗಿಯೇ ಸಮರ್ಥಿಸಿದ್ದರು. ಆದ್ದರಿಂದ ಬ್ರೆಜಿಲ್ ನಲ್ಲಿ ಮಿಲಿಟರಿ ಕ್ಷಿಪ್ರಕ್ರಾಂತಿಯ ಸಾಧ್ಯತೆ ಖಂಡಿತ ಇತ್ತು. ಆದರೆ ಯು.ಎಸ್ ನಲ್ಲಿ ಮಿಲಿಟರಿ ಅಧಿಕಾರಿಗಳು ದಂಗೆಯನ್ನು ಸ್ಪಷ್ಟ ಮಾತುಗಳಲ್ಲಿ ಖಂಡಿಸಿದ್ದರು.

‘ಬೊಲ್ಸನಾರೋ ಸೋತಿದ್ದರೂ ಬೊಲ್ಸನಾರೋ ವಾದ ಸೋತಿಲ್ಲ’

ಯು.ಎಸ್ ನಲ್ಲಿ ‘ಟ್ರಂಪ್ ಸೋತಿದ್ದರೂ ಟ್ರಂಪ್ ವಾದ ಸೋತಿಲ್ಲ’ ಎಂದ ಹಾಗೆ ಬ್ರೆಜಿಲ್ ನಲ್ಲೂ ‘ಬೊಲ್ಸನಾರೋ ಸೋತಿದ್ದರೂ ಬೊಲ್ಸನಾರೋ ವಾದ ಸೋತಿಲ್ಲ’ ಎಂಬುದು ನಿಜವಾಗಿದೆ. ಎಡ-ಪ್ರಜಾಪ್ರಭುತ್ವ ಮತ್ತು ಸಾಮ್ರಾಜ್ಯಶಾಹಿ-ವಿರೋಧಿ ಶಕ್ತಿಗಳು ಮತ್ತು ಬಲಪಂಥೀಯ ಶಕ್ತಿಗಳ ರಾಜಕೀಯ ಬೆಂಬಲ ಹೆಚ್ಚು ಕಡಿಮೆ (ಅಧ್ಯಕ್ಷೀಯ ಮತದಾನವನ್ನು ಪರಿಗಣಿಸಿದರೆ) ಸಮನಾಗಿದ್ದು, ಈ ಮುಖಾಮುಖಿ ಮುಂದುವರೆಯುತ್ತದೆ. ಲುಲಾ ರನ್ನು ಬಲವಾಗಿ ವಿರೋಧಿಸುತ್ತಿರುವುದು ಭಾರೀ ಭೂಮಾಲಕರು ಮತ್ತು ಅಮೆಝಾನ್ ಸಂಪತ್ತನ್ನು ಕೊಳ್ಳೆ ಹೊಡೆಯಬಯಸುವ ಕೃಷಿ-ಉದ್ಯಮ ಕಾರ್ಪೊರೆಟ್ ಕಂಪನಿಗಳು. ಅವರೇ ಉಗ್ರ ಬಲಪಂಥೀಯ ಶಕ್ತಿಗಳಿಗೆ ಪ್ರೋತ್ಸಾಹ ಕೊಡುತ್ತಿರುವುದು. ಮಿಲಿಟರಿಯ ಒಂದು ವಿಭಾಗ ಮತ್ತು ಕಾರ್ಪೊರೆಟ್ ಮಾಧ್ಯಮ ಸಹ ಇವರಿಗೆ ಕುಮ್ಮಕ್ಕು ಕೊಡುತ್ತಿದೆ. ಬ್ರೆಜಿಲಿನ ಈ ಬಲಪಂಥೀಯ ಶಕ್ತಿಗಳಿಗೆ ಯು.ಎಸ್ ಸರಕಾರ ಮತ್ತು ಆಳುವ ವರ್ಗಗಳ ಪರೋಕ್ಷ ಬೆಂಬಲವಿದೆ. ಇಂದಿನ ಪರಿಸ್ಥಿತಿಯಲ್ಲಿ ಬ್ರೆಜಿಲ್ ನಲ್ಲಿ ಲುಲಾ ಅಧ್ಯಕ್ಷತೆ ಇವರಿಗೆ ಆತಂಕ ತಂದಿದೆ. ತೈಲದ ಬಿಕ್ಕಟ್ಟು ಮತ್ತು ಅದರ ಭೂ-ರಾಜಕೀಯ ಪರಿಣಾಮಗಳು, ಡಾಲರ್ ಪ್ರಧಾನ್ಯಕ್ಕೆ ಬ್ರಿಕ್ಸ್ (ಬ್ರೆಜಿಲ್ ಬ್ರಿಕ್ಸ್ ಸದಸ್ಯ) ಸವಾಲು – ಇವುಗಳ ಹಿನ್ನೆಲೆಯಲ್ಲಿ ಲುಲಾ ಅವರು ವಹಿಸಬಹುದಾದ ಅಂತರ್ರಾಷ್ಟ್ರೀಯ ಪಾತ್ರ ಯು.ಎಸ್ ಗೆ ಆತಂಕ ತಂದಿದೆ. ಇಡೀ ಲ್ಯಾಟಿನ್ ಅಮೆರಿಕವನ್ನು ಒಗ್ಗೂಡಿಸುವ ಅವುಗಳ ನಡುವೆ ಸಹಕಾರ ಸೌಹಾರ್ದತೆ ಹೆಚ್ಚಿಸುತ್ತಾ ಯು.ಎಸ್ ಯಜಮಾನಿಕೆಯನ್ನು ಪ್ರಶ್ನಿಸುವ ಲುಲಾ ಸಾಮರ್ಥ್ಯ ಸಹ ಯು.ಎಸ್ ಗೆ ಆತಂಕಕಾರಿ. ಹೀಗಾಗಿ ಲುಲಾ ಅವರನ್ನು ಬ್ರೆಜಿಲ್ ಒಳಗೆ ರಾಜಕೀಯವಾಗಿ ಕಟ್ಟಿ ಹಾಕಲು ಯು.ಎಸ್ ಹುನ್ನಾರ ನಡೆಸಿ ಈ ಶಕ್ತಿಗಳಿಗೆ ದಂಗೆಗೆ ಯೋಜಿಸುವಂತೆ ಪ್ರೇರೇಪಿಸಿರಬಹುದು.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

ಆದರೆ ಈ ದಂಗೆಯೇ ಲುಲಾ ಅವರನ್ನು ಬಹಳ ಮಟ್ಟಿಗೆ ಬಲಪಡಿಸಲಿದೆಯೆನ್ನಬಹುದು. ಈ ಉಗ್ರ ಬಲಪಂಥೀಯ ಶಕ್ತಿಗಳು ಪ್ರಜಾಪ್ರಭುತ್ವ ವ್ಯವಸ್ಥೆಯ ಕುರಿತು ತೋರಿದ ಅವಿಶ್ವಾಸ ನಡು, ಬಲ-ನಡು ಮತ್ತು ಬಲಪಂಥೀಯ ಶಕ್ತಿಗಳನ್ನು ಅವರಿಂದ ದೂರ ಮಾಡುವ ಸಾಧ್ಯತೆಯಿದೆ. ಈ ಶಕ್ತಿಗಳು ಅಧ್ಯಕ್ಷೀಯ ಚುನಾವಣೆಯಲ್ಲಿ ತೋರಿದ ಐಕ್ಯತೆ ಮುರಿದು ಬೀಳಬಹುದು. ಲುಲಾ ಆಡಳಿತ ಜನಪರ ನೀತಿಗಳನ್ನು ಜಾರಿ ಮಾಡಿದಂತೆ, ಖಂಡ ಮತ್ತು ಅಂತರ್ರಾಷ್ಟ್ರೀಯ ವ್ಯವಹಾರಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಹೋದಂತೆ ಲುಲಾ-ವಿರೋಧ ರಾಜಕೀಯ ಪಕ್ಷಗಳಲ್ಲೂ, ಜನತೆಯಲ್ಲೂ ಕಡಿಮೆಯಾಗಬಹುದು. ದಂಗೆಕೋರರಿಗೆ ಅದರ ಬೆಂಬಲಿಗರಿಗೆ ಶೀಘ‍್ರ,ಕಟುಶಿಕ್ಷೆ ಸಹ ಈ ಶಕ್ತಿಗಳ ಬಲ ಮುರಿಯಬಹುದು. ಆದರೆ ಉಗ್ರಬಲಪಂಥೀಯ ಶಕ್ತಿಗಳು ತಮ್ಮ ದುಸ್ಸಾಹಸವನ್ನು ಮರುಕಳಿಸಲಿಕ್ಕಿಲ್ಲ ಎಂದು ಹೇಳುವಂತಿಲ್ಲ. ಲುಲಾ ಆಡಳಿತ ಮತ್ತು ಬ್ರೆಜಿಲ್ ಜನತೆ ಈ ಸವಾಲನ್ನು ಹೇಗೆ ಎದುರಿಸುತ್ತಾರೆ ಎನ್ನುವುದರ ಮೇಲೆ ಬ್ರೆಜಿಲ್ ಪ್ರಜಾಪ್ರಭುತ್ವ ಮತ್ತು ಲ್ಯಾಟಿನ್ ಪ್ರಗತಿಪರರ ಮುನ್ನಡೆ ಆಧರಿಸಿರುತ್ತದೆ.

Donate Janashakthi Media

Leave a Reply

Your email address will not be published. Required fields are marked *