ಮೈಸೂರು: ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳ ಬಗ್ಗೆ ಎಚ್ಚು ಅಸ್ಥೆವಹಿಸಿಕೊಂಡಿರುವ ವಿವಿಧ ಮಠಾಧೀಶರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪರವಾಗಿ ನಿಂತಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಬಿಜೆಪಿ ಪಕ್ಷದ ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ʻʻಮಠದ ಉತ್ತರಾಧಿಕಾರಿ ನೇಮಿಸಲು ರಾಜಕಾರಣಿಗಳು ಹೋಗಲ್ಲ. ರಾಜಕೀಯಕ್ಕೆ ಮಠಾಧೀಶರು ಬರಬೇಡಿʼʼ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ವಿಶ್ವನಾಥ್ ಅವರು ‘ಭ್ರಷ್ಟಾಚಾರದ ಕಾರಣದಿಂದಾಗಿಯೇ ಯಡಿಯೂರಪ್ಪ ಬದಲಾವಣೆ ಪ್ರಮುಖವಾಗಿದೆ. ಹೀಗಿರುವಾಗ ಮಠಾಧಿಪತಿಗಳು ಜನರಿಗೆ ಯಾವ ಸಂದೇಶ ರವಾನೆ ಮಾಡುತ್ತಿದ್ದಾರೆ? ಭ್ರಷ್ಟಾಚಾರದ ಪರವಾಗಿ ಸಂದೇಶ ಕೊಡುತ್ತಿದ್ದಾರಾ? ಸ್ವಾಮೀಜಿಗಳನ್ನು ಬೀದಿಗೆ ತಂದು ತಮ್ಮ ಪರ ಮಾತಾಡಿ ಎನ್ನುವುದೂ ತಪ್ಪು. ಇದು ಯಾವ ರಾಜಕಾರಣಿಗೂ ಶೋಭೆ ತರುವುದಿಲ್ಲ. ಸಮುದಾಯದವರು ಮುಖ್ಯಮಂತ್ರಿ ಆಗಬೇಕು. ಆದರೆ, ಅವರು ಜಾತಿವಂತನಾಗಬಾರದು ನೀತಿವಂತನಾಗಬೇಕು’ ಎಂದು ಹೇಳಿದರು.
ಇದನ್ನು ಓದಿ: ರಾಜ್ಯ ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆ : ಶಾಸಕಾಂಗ ಸಭೆ ರದ್ದು
ಸ್ವಾಮೀಜಿ, ಸಾಧು ಸಂತರು ಕೂಡ ಸಂವಿಧಾನದಡಿ ಬರುತ್ತಾರೆ. ಸಂವಿಧಾನಕ್ಕಿಂತ ದೊಡ್ಡವರಿಲ್ಲ, ಸಂವಿಧಾನವೇ ಸಾರ್ವಭೌಮ. ಸ್ವಾಮೀಜಿಗಳು ಶಿವೈಕ್ಯರಾದಾಗ ರಾಜಕಾರಣಿಗಳು ಮಾತಾಡ್ತಾರಾ? ಉತ್ತರಾಧಿಕಾರಿ ಬಗ್ಗೆ ರಾಜಕಾರಣಿಗಳು ಮಾತನಾಡುತ್ತಾರಾ? ಯಡಿಯೂರಪ್ಪ ಅವರ ಗೌರವಯುತ ನಿರ್ಗಮನಕ್ಕೆ ಹೈಕಮಾಂಡ್ ಸೂಚಿಸಿದೆ. ಆದರೆ ಸ್ವಾಮೀಜಿಗಳು ಇದನ್ನು ಕ್ಲಿಷ್ಟ ಮಾಡ್ತಿದ್ದಾರೆ. ಬಿಎಸ್‌ವೈರನ್ನು ಅವಮಾನ, ಅಪಮಾನಕ್ಕೆ ಸಿಲುಕಿಸುತ್ತಿದ್ದಾರೆ ಎಂದು ವಿವರಿಸಿದರು.
‘ಜೆಡಿಎಸ್, ಕಾಂಗ್ರೆಸ್ ತ್ಯಜಿಸಿ ಬಂದ ನಾವು 17 ಶಾಸಕರು ಲಿಂಗಾಯತರಲ್ಲ. ಬರೀ ಇಬ್ಬರು ಮಾತ್ರ ಲಿಂಗಾಯತರು ಇದ್ದಾರೆ. ಉಳಿದವರು ಬೇರೆ ಜಾತಿಯವರು. ಅಂದು ನಾವು ಯಾರೂ ಜಾತಿ ನೋಡಲಿಲ್ಲ. ಯಡಿಯೂರಪ್ಪ ಹೋರಾಟಗಾರ ಎಂದು ಅಧಿಕಾರ ನೀಡಿದೆವು. ನಾಲಿಗೆಯ ಮೇಲೆ ನಿಂತ ನಾಯಕ ಎಂದು ಮೆಚ್ಚುಗೆ ವ್ಯಕ್ತಪಡಿಸಿದೆವು. ಆದರೆ, ಮುಂದೆ ತಾವು ನಾಲಿಗೆ, ಕೈ ಎರಡನ್ನೂ ಮಗನಿಗೆ ನೀಡಿದಿರಿ’ ಎಂದು ಬೇಸರ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಕಾಗಿನೆಲೆ ಪೀಠದ ಸ್ವಾಮೀಜಿ ಈ ರೀತಿ ಬಾಲಿಶವಾಗಿ ಮಾತನಾಡಿದ್ದರು. ಅವತ್ತು ಕೂಡ ನಾನು ಅದನ್ನು ಖಂಡಿಸಿದ್ದೆ. ಈಗಲೂ ಮಠಾಧೀಶರನ್ನು ಕೈ ಮುಗಿದು ಕೇಳುವೆ. ಧರ್ಮದಲ್ಲಿ ರಾಜಕಾರಣ ತರಬೇಡಿ’ ಎಂದರು.
ಇದನ್ನು ಓದಿ: ಯಡಿಯೂರಪ್ಪ ದೆಹಲಿಗೆ ಬರಿಗೈಯಲ್ಲಿ ಹೋಗಿಲ್ಲ-ಆರು ಬ್ಯಾಗ್ ತೆಗೆದುಕೊಂಡು ಹೋಗಿದ್ದಾರೆ: ಹೆಚ್‌ಡಿಕೆ
‘ಬಹಳ ನೋವಿನ ವಿಚಾರವೆಂದರೆ ಬಸವಶ್ರೀ ಪ್ರಶಸ್ತಿ ಕೊಡಮಾಡುವ ಮುರುಘಾಶ್ರೀಗಳು ಬೀದಿಗೆ ಬಂದು ರಾಜಕಾರದ ಬಗ್ಗೆ ಮಾತನಾಡುತ್ತಿರುವುದು. ಹಾಗಾದರೆ ಈ ಪ್ರಶಸ್ತಿಗೆ ಏನು ಬೆಲೆ? ಬಸವಣ್ಣ ಯಾವತ್ತು ಜಾತಿ ರಾಜಕಾರಣ ಮಾಡಿದರು? ಸರ್ಕಾರದ ಕೆಲಸ ದೇವರ ಕೆಲಸ ಎಂಬುದು ಈಗ ಸರ್ಕಾರಿ ಕೆಲಸ ಸ್ವಾಮೀಜಿಗಳ ಕೆಲಸ ಎಂಬಂತಾಗಿದೆ’ ಎಂದು ಟೀಕಿಸಿದರು.
ವೀರಶೈವ ಧರ್ಮ ಸರ್ವಧರ್ಮ ಬಸವೇಶ್ವರ ಧರ್ಮವಾಗಿದೆ. ಎಲ್ಲಾ ಸಮುದಾಯಕ್ಕೂ ಮಠ ಮಾನ್ಯಗಳಿವೆ. ಮಠ ಮಾನ್ಯಗಳು ರಾಜಕೀಯ ಕೇಂದ್ರವಲ್ಲ. ಮಠ, ಧರ್ಮಾಧಿಕಾರಿಗಳು ಸಮಾಜದ ಭಾಗವಾಗಬೇಕು. ರಾಜಕಾರಣ ಅಧಿಕಾರದ ಭಾಗವಾಗಬಾರದು. ಏಕ ವ್ಯಕ್ತಿ, ಪಕ್ಷದ ಪರ ಧರ್ಮಾಧಿಕಾರಿಗಳು ನಿಲ್ಲಬಾರದು. ಧರ್ಮಾಧಿಕಾರಿಗಳನ್ನ ತಮಗಾಗಿ ಬೀದಿಗೆ ತಂದದ್ದು ಸರಿಯಲ್ಲ ಬೀದಿಗೆ ಬಂದದ್ದು ಧರ್ಮಾಧಿಕಾರಿಗಳಿಗೂ ಒಳ್ಳೆಯದಲ್ಲ.
ಸರ್ಕಾರ ಹಾದಿ ತಪ್ಪಿದ ಸಮಯದಲ್ಲಿ ಎಲ್ಲರೂ ಎಚ್ಚರಿಸುತ್ತಾರೆ. ವಿರೋಧ ಪಕ್ಷ, ಸಮಾಜ, ಸಂಘ ಸಂಸ್ಥೆಗಳು, ಮಠಾಧೀಶರು ಬುದ್ಧಿ ಹೇಳುತ್ತಾರೆ. ಆದರೆ, ಎಚ್ಚರಿಸಬೇಕಾದವರೆ. ರಾಜಕಾರಣಿಗಳಿಗಿಂತ ಮೀರಿದ ಪಾತ್ರ ವಹಿಸುತ್ತಿರುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.