ಕಲಬುರಗಿ| ಮೊದಲು ಗೋಮಾಂಸ ತಿಂದವರು ಬ್ರಾಹ್ಮಣರು: ಎಚ್‌. ಟಿ. ಪೋತೆ

ಕಲಬುರಗಿ: ‘ದೇಶದಲ್ಲಿ ಮೊದಲು ಗೋಮಾಂಸ ತಿಂದವರು ಬ್ರಾಹ್ಮಣರು. ಗೋಹತ್ಯೆ ತಡೆದಿದ್ದು ಬುದ್ಧ. ಅದೇ ಬ್ರಾಹ್ಮಣರು ಈಗ ಗೋರಕ್ಷಣೆಯನ್ನು ಜೀವನವನ್ನಾಗಿಸಿಕೊಂಡಿದ್ದಾರೆ’ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ. ಎಚ್‌. ಟಿ. ಪೋತೆ ಭಾನುವಾರದಂದು ಹೇಳಿದರು. ಕಲಬುರಗಿ

ನವ ಕರ್ನಾಟಕ ಪ್ರಕಾಶನ, ಶ್ರೀನಿವಾಸ ಗುಡಿ ಮೆಮೊರಿಯಲ್‌ ಟ್ರಸ್ಟ್‌ನ ಸಹಯೋಗದಲ್ಲಿ ನಗರದ ಕನ್ನಡ ಭವನದಲ್ಲಿ ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ ಸಂಘಟನೆ ಆಯೋಜಿಸಿದ್ದ ಭಗತ್‌ಸಿಂಗ್‌, ರಾಜಗುರು ಮತ್ತು ಸುಖದೇವರ ‘ಹುತಾತ್ಮ ದಿನಾಚರಣೆ’, ಎಂ.ವೆಂಕಟಸ್ವಾಮಿ ಅವರ ‘ಜೈ ಭೀಮ್’ ಪುಸ್ತಕ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದರು. ಕಲಬುರಗಿ

‘ಪಕ್ಕದ ಮನೆಯ ಪರಿಶಿಷ್ಟರ ಮೇಲೆ ದೌರ್ಜನ್ಯ ನಡೆದರೆ ಯಾರೂ ಮಾತನಾಡುವುದಿಲ್ಲ. ಆದರೆ, ಬೇರೆ ದೇಶಗಳಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಬೊಬ್ಬೆ ಹೊಡೆಯುತ್ತಾರೆ’ ಎಂದು ಹೇಳಿದರು. ಕಲಬುರಗಿ

ಇದನ್ನೂ ಓದಿ: ಬಿಜೆಪಿ ನೇತೃತ್ವದ ಭಾರತದಲ್ಲಿ ಯುವಜನರ ಆಶೋತ್ತರ ಕಡೆಗಣಿಸಲಾಗಿದೆ – ಸುನೀಲ್ ಕುಮಾರ್ ಬಜಾಲ್

‘ಪರಿಶಿಷ್ಟರಿಗೆ ಮಾತ್ರ ಮೀಸಲಾತಿ ಇದೆ ಎಂದು ಬಿಂಬಿಸಲಾಗುತ್ತಿದೆ. ಪರಿಶಿಷ್ಟರಿಗೆ ಕೇವಲ ಶೇ 18ರಷ್ಟು ಮೀಸಲಾತಿ ಇದೆ. ಆದರೆ, ಹಿಂದುಳಿದವರಿಗೆ ಶೇ 32ರಷ್ಟು ಮೀಸಲಾತಿ ಇದೆ. ಆದರೂ ಹಿಂದುಳಿದ ವರ್ಗದವರು ಡಾ.ಬಿ.ಆರ್‌.ಅಂಬೇಡ್ಕರ್ ಅವರ ಕುರಿತು ಮಾತನಾಡುವುದಿಲ್ಲ. ಮಹಿಳೆಯರ ಹಕ್ಕುಗಳಿಗಾಗಿ ಬಾಬಾಸಾಹೇಬರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ, ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನದ ಅಧ್ಯಕ್ಷೆಯೇ ಬಾಬಾಸಾಹೇಬರ ಕುರಿತು ಪ್ರಸ್ತಾಪ ಮಾಡುವುದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಈ ಕೃತಿ ಇದುವರೆಗೂ ಬಂದ ಡಾ.ಬಿ.ಆರ್‌.ಅಂಬೇಡ್ಕರ್ ಅವರ ಕುರಿತ ಜೀವನಚರಿತ್ರೆಗಳಿಗಿಂತ ಭಿನ್ನವಾಗಿದೆ. ಸಂಶೋಧನಾ ನೆಲೆಗಟ್ಟಿನಲ್ಲಿ ಇದನ್ನು ರಚಿಸಲಾಗಿದೆ. ಎಲ್ಲರೂ ಅಂಬೇಡ್ಕರ್ ಅವರ ರೀತಿ ಪುಸ್ತಕ ಪ್ರೀತಿ ಬೆಳೆಸಿಕೊಳ್ಳಬೇಕು’ ಎಂದರು.

ಲೇಖಕಿ ಜಯದೇವಿ ಗಾಯಕವಾಡ ಮಾತನಾಡಿ, ‘ಶರಣ ಚಳವಳಿಗೆ ಸಾಕ್ಷಿಯಾಗಿದ್ದ ಬಸವಕಲ್ಯಾಣ ತಾಲ್ಲೂಕಿನಲ್ಲಿ ಅಸ್ಪೃಶ್ಯತೆಯು ಇನ್ನೂ ಜೀವಂತವಾಗಿದೆ. ಅಲ್ಲಿನ ಗ್ರಾಮವೊಂದರ ಹೋಟೆಲ್‌ಗಳಲ್ಲಿ ಎರಡು ಲೋಟಗಳ ವ್ಯವಸ್ಥೆ ಇದೆ’ ಎಂದು ಬೇಸರ ವ್ಯಕ್ತಪಡಿಸಿದರು.‌

‘ದಲಿತ ಮಹಿಳೆಯರು ಹೆಚ್ಚು ಶೋಷಣೆಗೆ ಒಳಗಾಗಿದ್ದಾರೆ. ಶೋಷಣೆಗೆ ಒಳಗಾದ ಪುರುಷರೂ ಮಹಿಳೆಯರನ್ನು ಶೋಷಣೆ ಮಾಡುತ್ತಾರೆ. ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಅಂಬೇಡ್ಕರ್ ಅವರ ರೀತಿ ತಾಯ್ತನದ ಗುಣ ಬೆಳೆಸಿಕೊಳ್ಳಬೇಕು’ ಎಂದರು.

ನವ ಕರ್ನಾಟಕ ಪ್ರಕಾಶನದ ಕಾರ್ಯನಿರ್ವಾಹಕ ನಿರ್ದೇಶಕ ಯು.ಪ್ರೇಮಚಂದ್ರ ಮತ್ತು ಕೃತಿಯ ಲೇಖಕ ಎಂ.ವೆಂಕಟಸ್ವಾಮಿ ಮಾತನಾಡಿದರು.

ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶಕುಮಾರ ರಾಠೋಡ ಅಧ್ಯಕ್ಷತೆ ವಹಿಸಿದ್ದರು.

ಚಿಂತಕ ಆರ್‌.ಕೆ.ಹುಡಗಿ, ವಕೀಲ ಮಕ್ಸೂದ್ ಜಾಗೀರದಾರ್, ರೈತ ಮುಖಂಡ ಮೌಲಾ ಮುಲ್ಲಾ, ವೈದ್ಯ ಡಾ.ಪಿ.ಸಂಪತ್‌ರಾವ್, ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ ಬಣ) ರಾಜ್ಯ ಸಂಚಾಲಕ ಅರ್ಜುನ ಭದ್ರೆ ಹಾಜರಿದ್ದರು.

‘ಎಲ್ಲರೂ ಒಂದಾಗಿ ಮನುವಾದ ಕಿತ್ತೊಗೆಯೋಣ’ ‘ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಎಲ್ಲ ವಾದಗಳವರೂ ಒಂದಾಗಿ ಮನುವಾದವನ್ನು ಈ ನೆಲದಿಂದ ಹಾಗೂ ಜನರ ಮನದಿಂದ ಕಿತ್ತೆಸೆಯುವ ಕೆಲಸ ಮಾಡೋಣ’ ಎಂದು ಚಿಂತಕ ಸಿದ್ದನಗೌಡ ಪಾಟೀಲ ಹೇಳಿದರು. ‘ಅಂದು ಎಲ್ಲರ ಗುರಿ ಒಂದೇ ಆಗಿತ್ತು. ಆದರೆ ದಾರಿ ಬೇರೆ ಇತ್ತು. ಈಗ ಗುರಿ ದಾರಿ ಒಂದೇ ಆಗಬೇಕು. ಅಂಬೇಡ್ಕರ್ ವರ್ಸಸ್‌ ಕಮ್ಯುನಿಸ್ಟರು ಎನ್ನುವುದು ಮನುವಾದಿಗಳ ಪಿತೂರಿ. ಕಮ್ಯುನಿಸಂ ಕುರಿತು ಅಂಬೇಡ್ಕರ್ ಅವರಿಗೆ ಭಿನ್ನಾಭಿಪ್ರಾಯ ಇದ್ದಿದ್ದು ನಿಜ. ಆದರೆ ವರ್ಗ ಹಾಗೂ ಸಂಪತ್ತಿನ ಸಮಾನ ಹಂಚಿಕೆ ಕುರಿತು ಅವರಿಗೆ ಸಹಮತ ಇತ್ತು’ ಎಂದರು.

‘ಪೂನಾ ಒಪ್ಪಂದದ ಸಂದರ್ಭದಲ್ಲಿ ನಡೆದುಕೊಂಡ ರೀತಿ ಗಾಂಧಿಯವರು ಕ್ರಾಂತಿಕಾರಿಗಳ ವಿಷಯದಲ್ಲಿ ನಡೆದುಕೊಳ್ಳಲಿಲ್ಲ. ಇರ್ವಿನ್ ಜೊತೆ ಮಾತನಾಡಿ ಕ್ರಾಂತಿಕಾರಿಗಳ ಗಲ್ಲು ಶಿಕ್ಷೆ ರದ್ದು ಮಾಡಿಸುವಂತೆ ಮನವಿ ಮಾಡಲಾಗುತ್ತದೆ. ಆದರೆ ಗಾಂಧೀಜಿಯವರು ವಿಷಯ ಪ್ರಸ್ತಾಪ ಮಾಡುತ್ತಾರೆ. ಒತ್ತಾಯ ಮಾಡುವುದಿಲ್ಲ. ಗಲ್ಲು ಶಿಕ್ಷೆ ರದ್ದಾಗಿದ್ದರೆ ಕ್ರಾಂತಿಕಾರಿಗಳು ಹೀರೋಗಳಾಗುತ್ತಿದ್ದರು’ ಎಂದು ಹೇಳಿದರು. ‘ಅಂಬೇಡ್ಕರ್ ಅವರು ಇಂದಿನ ಅಪಾಯಗಳನ್ನು ಅಂದೇ ಅರಿತಿದ್ದರು. ಮೀಸಲು ಕ್ಷೇತ್ರಗಳಲ್ಲಿ ಪರಿಶಿಷ್ಟರ ಜನಸಂಖ್ಯೆ ಶೇ 40 ದಾಟುವುದಿಲ್ಲ. ಶೇ 60ರಷ್ಟು ಬೇರೆ ಜಾತಿಯವರಿದ್ದಾರೆ. ಅವರು ಮಾತು ಕೇಳುವ ದಲಿತರಿಗೆ ಮತ ನೀಡುತ್ತಾರೆ. ಪರಿಶಿಷ್ಟರಿಗೆ ಟಿಕೆಟ್‌ ಕೊಡುವವನೂ ಗೌಡನೇ ಆಗಿರುತ್ತಾನೆ. ಆದ್ದರಿಂದಲೇ ಬಾಬಾ ಸಾಹೇಬರು ದಲಿತರಿಗೆ ಪ್ರತ್ಯೇಕ ರಾಜಕೀಯ ಮೀಸಲಾತಿ ಕೇಳಿದರು’ ಎಂದರು.

ಇದನ್ನೂ ನೋಡಿ: ಇಂಗ್ಲೀಷ್‌ ಕಲಿಯೋಣ ಬನ್ನಿ | Have – Had – Has ಬಳಸುವುದು ಹೇಗೆ? | ತೇಜಸ್ವಿನಿ Janashakthi Media

Donate Janashakthi Media

Leave a Reply

Your email address will not be published. Required fields are marked *