ಬೆಂಗಳೂರು: 2017-21ರವರೆಗೆ ರಾಜ್ಯಾದ್ಯಂತ ಬಿಪಿಎಲ್ ಕಾರ್ಡ್ಗಾಗಿ 39,02,745 ಅರ್ಜಿ ಸಲ್ಲಿಕೆಯಾಗಿದ್ದು, 34,97,529 ಅರ್ಜಿ ವಿಲೇಯಾಗಿವೆ. 4,05,216 ಬಾಕಿ ಉಳಿದಿವೆ. ಅಕ್ರಮವಾಗಿ ಪಡೆದಿರುವ ಬಿಪಿಎಲ್ ಕಾರ್ಡ್ಗಳನ್ನು ಆರ್ಥಿಕ ಸಬಲರು ವಾಪಸ್ ಕೊಟ್ಟ ನಂತರವಷ್ಟೇ ಹೊಸ ಅರ್ಜಿದಾರರಿಗೆ ಕಾರ್ಡ್ ವಿತರಿಸಲು ಆಹಾರ ಇಲಾಖೆ ನಿರ್ಧರಿಸಿದೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್ಎಫ್ಎಸ್ಎ) ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ಶೇ.76.04, ನಗರ ಪ್ರದೇಶಗಳ ಶೇ.49.36 ಸೇರಿ ಒಟ್ಟು 3,71,78,287 ಕುಟುಂಬಗಳ ಸದಸ್ಯರಿಗೆ ಬಿಪಿಎಲ್ ಕಾರ್ಡ್ ನೀಡಬೇಕಿತ್ತು. ಆದರೆ, ರಾಜ್ಯದಲ್ಲಿ ಒಟ್ಟು 3,78,67,521ಕ್ಕೆ ಬಿಪಿಎಲ್ ಸದಸ್ಯರಿದ್ದಾರೆ. ಇದರಲ್ಲಿ 6,89,234 ಹೆಚ್ಚಿನ ಸದಸ್ಯರು ಅಂದರೆ 3.5 ಲಕ್ಷಕ್ಕೂ ಹೆಚ್ಚಿನ ಬಿಪಿಎಲ್ ಕಾರ್ಡ್ಗಳಿವೆ. ಹಾಗಾಗಿ, ಇಲಾಖೆ ‘ಅನರ್ಹರ ಪತ್ತೆ ಮೊದಲು; ಪಡಿತರ ಚೀಟಿ ವಿತರಣೆ ನಂತರ’ ಎಂಬ ನಿಲುವು ಅನುಸರಿಸುತ್ತಿದೆ.
ಪಡಿತರ ಚೀಟಿಗಾಗಿ ಹೊಸ ಅರ್ಜಿಗಳ ಸ್ವೀಕಾರ ಕಾರ್ಯವೂ ನಿರಂತರವಾಗಿ ನಡೆಯುತ್ತಿದೆ. ಮತ್ತೊಂದೆಡೆ, ಬಾಕಿ ಉಳಿದಿರುವ ಅರ್ಜಿಗಳ ಪರಿಶೀಲನೆ ಮತ್ತು ವಿಲೇವಾರಿ ನಿಧಾನಗತಿಯಲ್ಲಿ ಸಾಗುತ್ತಿದೆ. ಹೀಗಾಗಿ ಹೊಸ ಬಿಪಿಎಲ್ ಕಾರ್ಡ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಿರುವ ಕುಟುಂಬಗಳು ಅರ್ಜಿ ಸಲ್ಲಿಸಿ ತಿಂಗಳುಗಟ್ಟಲೆ ಕಾದರೂ ಕಾರ್ಡ್ ವಿತರಣೆಯಾಗಿಲ್ಲ, ಇವರು ಮತ್ತಷ್ಟು ದಿನಗಳು ಕಾಯಬೇಕಾದ ಪರಿಸ್ಥಿತಿಗೆ ಆಹಾರ ಇಲಾಖೆ ಮುಂದಾಗಿದೆ.
ಸಲ್ಲಿಕೆಯಾದ ಕೆಲವು ಅರ್ಜಿಗಳ ಪ್ರಾಥಮಿಕ ಪರಿಶೀಲನೆ ನಡೆದಿದೆ. ಮಾನದಂಡ ಆಧಾರದಲ್ಲಿಯೇ ಅರ್ಹರಿಗೆ ಪಡಿತರ ಚೀಟಿ ವಿತರಣೆಯಾಗಲಿದ್ದು, ಈಗಾಗಲೇ ಅಧಿಕ ಪ್ರಮಾಣದ ಕಾರ್ಡುಗಳನ್ನು ರದ್ದುಗೊಳಿಸಲಾಗಿದೆ. ಅರ್ಜಿದಾರರ ಸ್ಥಳ ಪರಿಶೀಲನೆಯನ್ನು ಸ್ಥಳೀಯ ಅಧಿಕಾರಿಗಳು ಕೈಗೊಂಡಿದ್ದಾರೆ.
ಇದರಿಂದಾಗಿ ಹೊಸ ಬಿಪಿಎಲ್ ಕಾರ್ಡ್ಗೆ ಅರ್ಜಿ ಸಲ್ಲಿಸಿರುವ ಕುಟುಂಬಗಳು ಇನ್ನಷ್ಟು ದಿನ ಕಾಯುವುದು ಅನಿವಾರ್ಯವಾಗಿದೆ.
ದಿನಕ್ಕೆ ಒಂದು ಸಾವಿರದಿಂದ ಎರಡು ಸಾವಿರ ಮಂದಿ ಹೊಸದಾಗಿ ಅರ್ಜಿ ಸಲ್ಲಿಸುತ್ತಿದ್ದಾರೆ. ಅರ್ಜಿಗಳ ವಿಲೇವಾರಿಗೆ ನಿಗದಿತ ಮಿತಿ ಹೇರಲಾಗುತ್ತಿದೆ. ಬಾಕಿ ಅರ್ಜಿಗಳ ಪರಿಶೀಲನೆ ತ್ವರಿತವಾಗಿ ಕೈಗೊಂಡು ವಿಲೇವಾರಿ ಮಾಡಬೇಕು ಎಂದು ಅರ್ಜಿ ಸಲ್ಲಿಸಿ ಪಡಿತರ ಚೀಟಿಗಾಗಿ ಕಾಯುತ್ತಿರುವ ಕುಟುಂಬಗಳ ಆಗ್ರಹವಾಗಿದೆ.
ಅನರ್ಹ ಅರ್ಜಿಗಳ ಸಂಖ್ಯೆಯೇ ಅಧಿಕ:
ಬಿಪಿಎಲ್ ಕಾರ್ಡಿಗಾಗಿ ಅರ್ಜಿ ಸಲ್ಲಿಸಿದವರಲ್ಲಿ, ಆರ್ಥಿಕ ಸಬಲರು ಸಲ್ಲಿಸಿದ 3,55,516 ಕಾರ್ಡ್ ಅನರ್ಹಗೊಳಿಸಲಾಗಿದೆ. 85,204 ಆದಾಯ ತೆರಿಗೆ ಪಾವತಿದಾರ ಕುಟುಂಬಗಳು, 2,127 ಸರ್ಕಾರಿ ನೌಕರರು, 3 ಹೆಕ್ಟೇರ್ಗಿಂತ ಹೆಚ್ಚು ಜಮೀನು ಹೊಂದಿರುವ 2,18,125 ಕುಟುಂಬಗಳು ಹಾಗೂ 1.20 ಲಕ್ಷ ರೂ.ಗಿಂತ ಹೆಚ್ಚು ವಾರ್ಷಿಕ ಆದಾಯ ಹೊಂದಿರುವ 50,060 ಕುಟುಂಬಗಳ ಕಾರ್ಡ್ ರದ್ದುಪಡಿಸಲಾಗಿದೆ. 27,527 ಅಂತ್ಯೋದಯ, 3,28,178 ಬಿಪಿಎಲ್ ಕಾರ್ಡ್ ರದ್ದಾಗಿವೆ. 7,413 ಅಂತ್ಯೋದಯದಿಂದ ಬಿಪಿಎಲ್ ಕಾರ್ಡ್ಗೆ ಹಾಗೂ 1,09,790 ಬಿಪಿಎಲ್ ಕಾರ್ಡ್ನಿಂದ ಎಪಿಎಲ್ ಕಾರ್ಡ್ಗೆ ಪರಿವರ್ತಿಸಲಾಗಿದೆ. 1,17,203 ಕುಟುಂಬಗಳನ್ನು ಬೇರೆ ಬೇರೆ ಆದ್ಯತೆ ಹಾಗೂ ಆದ್ಯತೆಯೇತರ ವಲಯಕ್ಕೆ ಪರಿವರ್ತಿಸಲಾಗಿದೆ.