-ನಾ ದಿವಾಕರ
ಅಮೆರಿಕದ ಅಧ್ಯಕ್ಷೀಯ ಚುನಾವಣೆಗಳು ಎಲ್ಲ ಕಾಲಘಟ್ಟಗಳಲ್ಲೂ ಭೌಗೋಳಿಕ ರಾಜಕಾರಣದ ಮೇಲೆ, ವಿಶ್ವ ಆರ್ಥಿಕತೆಯ ಮೇಲೆ ಹಾಗೂ ಮಧ್ಯಪ್ರಾಚ್ಯ ದೇಶಗಳ ಮೇಲೆ ಪ್ರಭಾವ ಬೀರುವುದು ಸಾಮಾನ್ಯ ಪ್ರಕ್ರಿಯೆ. ಈ ಬಾರಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ತಮ್ಮ ಎರಡನೆ ಅವಧಿಗೆ ಆಯ್ಕೆಯಾಗಿರುವುದು ಈ ಎಲ್ಲ ವಲಯಗಳಲ್ಲೂ ಸಂಚಲನ ಮೂಡಿಸಿದೆ. ಅಮೆರಿಕದ ಜನತೆ ನಿರ್ಣಾಯಕವಾಗಿ ಮತ ಚಲಾಯಿಸಿದ್ದಾರೆ. ಪ್ರಾಯಶಃ ಮೊಟ್ಟಮೊದಲ ಬಾರಿ ರಿಪಬ್ಲಿಕನ್ ಪಕ್ಷವು ಹಿಸ್ಪಾನಿಕ್-ಲ್ಯಾಟಿನೋ ಜನಸಂಖ್ಯೆಯ ಮತದಾರರನ್ನು ಆಕರ್ಷಿಸಿರುವುದು, ಬದಲಾಗುತ್ತಿರುವ ವಾತಾವರಣದ ಸಂಕೇತವಾಗಿ ಕಾಣುತ್ತದೆ. ಮೂಲತಃ ಜಾಗತಿಕ ಕಾರ್ಪೋರೇಟ್ ಜಗತ್ತಿನ ಬಂಡವಾಳದ ಪ್ರಭಾವಳಿಯಲ್ಲೇ ನಡೆಯುವ ಅಮೆರಿಕದ ಚುನಾವಣೆಗಳಲ್ಲಿ ಈ ಬಾರಿ ಟ್ರಂಪ್ ಗೆಲುವು ಸಾಧಿಸಿರುವುದು, ಎಲಾನ್ ಮಸ್ಕ್ ಅವರಂತಹ ಕಾರ್ಪೋರೇಟ್ ದಿಗ್ಗಜರ ಸಾಮ್ರಾಜ್ಯ ವಿಸ್ತರಣೆಗೆ ಅನುಕೂಲವಾಗಲಿದೆ.
ಕಳೆದ ನಾಲ್ಕು ವರ್ಷಗಳ ಬೈಡೆನ್ ಆಳ್ವಿಕೆಯಲ್ಲಿ ಅಮೆರಿಕದ ಸಾಮಾನ್ಯ ಜನತೆ ಎದುರಿಸಿದ ಜೀವನೋಪಾಯದ ಸಮಸ್ಯೆಗಳು ಡೆಮಾಕ್ರಟ್ ಪಕ್ಷದ ಸೋಲಿಗೆ ಕಾರಣವಾಗಿವೆ. ಮದ್ಯಪ್ರಾಚ್ಯದ ಯುದ್ಧದ ಕಾರ್ಮೋಡ ಮತ್ತು ಗಾಝಾ ಮೇಲೆ ಇಸ್ರೇಲ್ ನಡೆಸುತ್ತಿರುವ ಅಮಾನುಷ ದಾಳಿಗೆ ಪೂರ್ಣ ಬೆಂಬಲ, ಪ್ರೋತ್ಸಾಹ ನೀಡಿದ್ದೇ ಅಲ್ಲದೆ ಅಮೆರಿಕ ಅಕ್ಟೋಬರ್ 23ರಲ್ಲಿ ಕಲಹ ಆರಂಭವಾದ ನಂತರ ಇಸ್ರೇಲ್‌ಗೆ 17.9 ಬಿಲಿಯನ್ ಡಾಲರ್ ಮೌಲ್ಯದ ಸೇನಾ ನೆರವನ್ನು ಒದಗಿಸಿದೆ. ಕಳೆದ ಒಂದು ವರ್ಷದಲ್ಲಿ ಗಾಝಾ ಪಟ್ಟಿಯಲ್ಲಿ 40 ಸಾವಿರಕ್ಕೂ ಹೆಚ್ಚು ಸಾವು ಸಂಭವಿಸಿದೆ, ಲಕ್ಷಾಂತರ ಜನರು ಸ್ಥಳಾಂತರಗೊಂಡಿದ್ದಾರೆ. ಈಗ ಯುದ್ಧ ಭೀತಿ ಲೆಬನಾನ್‌ಗೂ ವಿಸ್ತರಿಸಿದೆ. ಈ ನರಮೇಧಕ್ಕೆ ಉತ್ತೇಜನ ನೀಡಿದ ಬೈಡನ್ ಆಡಳಿತ ನೀತಿ ಪಕ್ಷದ ಸೋಲಿಗೆ ಮುಖ್ಯ ಕಾರಣಗಳಲ್ಲೊಂದು ಎಂದು ಹೇಳಲಾಗುತ್ತದೆ.
ಹೊಸ ಆಳ್ವಿಕೆಯ ಆದ್ಯತೆಗಳು
ಆದರೆ ನೂತನ ಅಧ್ಯಕ್ಷ ಟ್ರಂಪ್ ಅಮೆರಿಕದ ಈ ತಂತ್ರಗಾರಿಕೆಯಿಂದ ಹಿಂದೆ ಸರಿಯುವುದಿಲ್ಲ. 2016-20ರ ತಮ್ಮ ಮೊದಲ ಅವಧಿಯಲ್ಲೇ ಟ್ರಂಪ್, ಇಸ್ರೇಲ್ ಪರ ನೀತಿಗಳಿಗೆ ಚಾಲನೆ ನೀಡಿದ್ದು, ಸಿರಿಯಾದ ಗೋಲನ್ ಹೈಟ್ಸ್ ಪ್ರದೇಶವನ್ನು ಇಸ್ರೇಲ್ ವಶಪಡಿಸಿಕೊಂಡಿದ್ದನ್ನೂ ಸಮರ್ಥಿಸಿತ್ತು. ಅಮೆರಿಕದ ಮತ್ತೊಂದು ಶತ್ರು ರಾಷ್ಟ್ರ ಇರಾನ್ ವಿರುದ್ಧ ಇಸ್ರೇಲ್ ಸಮರ ಸಾರಲು ಸಿದ್ಧವಾಗುತ್ತಿದ್ದು, ಟ್ರಂಪ್ ಅವರ ಮೊದಲ ಅವಧಿಯಲ್ಲೇ ಇರಾನ್‌ನೊಂದಿಗೆ ಏರ್ಪಟ್ಟಿದ್ದ ಪರಮಾಣು ಒಪ್ಪಂದವನ್ನು ಹಿಂಪಡೆಯಲಾಗಿತ್ತು. ತನ್ಮೂಲಕ ಟ್ರಂಪ್ ಅವರ ಮೊದಲ ಅವಧಿಯಲ್ಲೇ ಇರಾನ್ ವಿರುದ್ಧ ಪ್ರಬಲವಾದ ಮೈತ್ರಿಯನ್ನು ರೂಪಿಸುವ ನಿಟ್ಟಿನಲ್ಲಿ ಕಾರ್ಯತಂತ್ರಗಳು ಸಿದ್ಧವಾಗಿತ್ತು. ಇಸ್ರೇಲ್ ಮತ್ತು ಅರಬ್ ರಾಷ್ಟ್ರಗಳ ನಡುವೆ ಏರ್ಪಟ್ಟ ಅಬ್ರಾಹಂ ಒಪ್ಪಂದ ಈ ನಿಟ್ಟಿನಲ್ಲಿ ನಿರ್ಣಾಯಕವಾಗಿತ್ತು. ಬಹುಶಃ ಟ್ರಂಪ್ ತಮ್ಮ ಈ ಆಕ್ರಮಣಕಾರಿ ನೀತಿಗೆ ಮತ್ತಷ್ಟು ಪುಷ್ಠಿ ನೀಡುವ ಸಾಧ್ಯತೆಗಳಿವೆ.
ಇದನ್ನೂ ಓದಿ: ಬೆಂಗಳೂರು | ವುಡ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ : ಒಬ್ಬ ಕಾರ್ಮಿಕ ಸಾವು
2024ರ ಒಂದು ಭೌಗೋಳಿಕ ವೈಶಿಷ್ಟ್ಯ ಎಂದರೆ ಎಲ್ಲ ದೇಶಗಳಲ್ಲೂ ಬಲಪಂಥೀಯ ರಾಜಕಾರಣ ಬಲವಾಗುತ್ತಿರುವುದು ಮತ್ತು ನವ ಉದಾರವಾದ ಸೃಷ್ಟಿಸುತ್ತಿರುವ ಆರ್ಥಿಕ ಸಂಕಷ್ಟಗಳನ್ನು ಎದುರಿಸುವ ಜನತೆಯಲ್ಲಿ ʼ ಬಲಿಷ್ಠ ನಾಯಕ ʼರ ನೇತೃತ್ವದಲ್ಲಿನ ಪ್ರಜಾಸತ್ತಾತ್ಮಕ ಆಳ್ವಿಕೆಗಳು ಭರವಸೆ ಮೂಡಿಸಿರುವುದು. ನವ ಉದಾರವಾದ ಮತ್ತು ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಸಹ ದುಡಿಯುವ ಕೈಗಳನ್ನು ಸರಕುಗಳಂತೆ ಪರಿಗಣಿಸಲಾಗುತ್ತಿದೆ. ಈ ಸರಕೀಕರಣ ( Commodification) ಪ್ರಕ್ರಿಯೆಗೆ ಪೂರಕವಾಗಿ ಅಮೆರಿಕದಲ್ಲಿ ಉದ್ಭವಿಸಿದ್ದ ನಿರುದ್ಯೋಗ ಸಮಸ್ಯೆಯನ್ನು ಎದುರಿಸಲು ಟ್ರಂಪ್ ಆಡಳಿತ ಜಾಗತೀಕರಣವನ್ನು ಅಪಮೌಲ್ಯಗೊಳಿಸುವ ನೀತಿಗಳನ್ನು ಜಾರಿಗೊಳಿಸಲು ಸಜ್ಜಾಗಿದೆ. ಈ De globalisation ಪ್ರಕ್ರಿಯೆಯನ್ನು ಸಫಲಗೊಳಿಸಲು ಟ್ರಂಪ್ ತಮ್ಮ ʼ ಅಮೆರಿಕನ್ನರಿಗಾಗಿ ಅಮೆರಿಕ ʼ ಘೋಷಣೆಯನ್ನು ಸಾಕಾರಗೊಳಿಸಲಿದ್ದಾರೆ.
ಈ ನಿಟ್ಟಿನಲ್ಲಿ ಅಮೆರಿಕದ ವಲಸೆ ನೀತಿಗಳಲ್ಲಿ ಮಹತ್ತರವಾದ ಬದಲಾವಣೆಗಳನ್ನು ನಿರೀಕ್ಷಿಸಬಹುದು. ಅಮೆರಿಕದ ಕೆಳಸ್ತರದ ಸಮಾಜವನ್ನು ಹಾಗೂ ಮಧ್ಯಮ ವರ್ಗಗಳನ್ನು ಬಹಳವಾಗಿ ಕಾಡುತ್ತಿರುವ ನಿರುದ್ಯೋಗ ಮತ್ತು ಉದ್ಯೋಗ ಕೊರತೆಯ ಸಮಸ್ಯೆಗಳಿಗೆ ಅನ್ಯದೇಶಗಳಿಂದ ಆಮದಾಗುತ್ತಿರುವ ದುಡಿಯುವ ಕೈಗಳನ್ನೇ ದೂಷಿಸುವ ತಂತ್ರಗಾರಿಕೆಯನ್ನು ಟ್ರಂಪ್ ಬಳಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಭಾರತವನ್ನೂ ಒಳಗೊಂಡಂತೆ ವಿಶ್ವದ ಇತರ ದೇಶಗಳಿಂದ ಅಮೆರಿಕದಲ್ಲಿ ನೌಕರಿ ಅರಸಿ ಹೋಗುವ ನುರಿತ ಕೆಲಸಗಾರರಿಗೆ (Skilled workersಁ) ಪ್ರವೇಶ ನಿಷಿದ್ಧವಾಗುವ ಅಥವಾ ಸೀಮಿತವಾಗುವ ಸಾಧ್ಯತೆಗಳಿವೆ. ಅಮೆರಿಕದ ತಂತ್ರಜ್ಞಾನ ಕ್ಷೇತ್ರದಲ್ಲಿ ಬ್ಲೂಕಾಲರ್ ಉದ್ಯೋಗಗಳನ್ನು ಆಕ್ರಮಿಸಿರುವ ಹೊರದೇಶದ ಕಾರ್ಮಿಕರನ್ನು ಸಾರಾಸಗಟಾಗಿ ಹೊರದೂಡಿ, ಸ್ಥಳೀಯರಿಗೆ ಅವಕಾಶಗಳನ್ನು ಹೆಚ್ಚಿಸುವ ಸಾಧ್ಯತೆಗಳಿರುವುದನ್ನು ವಿಶ್ಲೇಷಕರು ಗುರುತಿಸುತ್ತಾರೆ.
ಜಾಗತಿಕ ಆರ್ಥಿಕತೆಯ ಪರಿಣಾಮಗಳು
ಇದು ಭಾರತದ ಸಾಫ್ಟ್‌ವೇರ್ ಔದ್ಯೋಗಿಕ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಇದರೊಂದಿಗೆ ಅಮೆರಿಕಕ್ಕೆ ಆಮದಾಗುವ ಎಲ್ಲ ಸರಕುಗಳ ಮೇಲೆ ಸುಂಕವನ್ನು ಹೆಚ್ಚಿಸುವುದಾಗಿ ಟ್ರಂಪ್ ಈಗಾಗಲೇ ಘೋಷಿಸಿದ್ದಾರೆ. ಅಮೆರಿಕ ಆಮದು ಮಾಡಿಕೊಳ್ಳುತ್ತಿರುವ ಮೂರು ಟ್ರಿಲಿಯನ್ ಡಾಲರ್ ಮೌಲ್ಯದ ಸರಕುಗಳ ಮೇಲೆ ಶೇಕಡಾ 10 ರಿಂದ 20ರಷ್ಟು ಸುಂಕ ವಿಧಿಸುವುದಾಗಿ ಘೋಷಿಸಿರುವ ಟ್ರಂಪ್ ಚೀನಾದಿಂದ ಆಮದಾಗುವ ವಸ್ತುಗಳ ಮೇಲೆ ಶೇಕಡಾ 60ರಷ್ಟು ಸುಂಕ ವಿಧಿಸಲು ನಿರ್ಧರಿಸಿದ್ದಾರೆ.
ಇದು ಅಮೆರಿಕದ ಆರ್ಥಿಕತೆಯನ್ನು ಮತ್ತೊಮ್ಮೆ ಒಳಕ್ಕೆ ಎಳೆದುಕೊಳ್ಳುವುದೇ ಅಲ್ಲದೆ, ವಿಶ್ವದ ಇತರ ದೇಶಗಳಿಂದ ಪ್ರತಿ ದಾಳಿಗೂ ಕಾರಣವಾಗುತ್ತದೆ. ಭಾರತದ ಮಟ್ಟಿಗೆ ಹೇಳುವುದಾರೆ ಜೆನೆರಿಕ್ ಔಷಧಿಗಳು ಮತ್ತು ಐಟಿ ಸೇವೆಗಳ ಮೇಲೆ ಇದರ ಪರಿಣಾಮ ಗಾಢವಾಗಿರುತ್ತದೆ. ಜಾಗತಿಕ ಮಟ್ಟದಲ್ಲಿ ಇದು ವ್ಯಾಪಾರ ಕಲಹಗಳಿಗೆ ಎಡೆಮಾಡಿಕೊಡುವುದೇ ಅಲ್ಲದೆ, ಬಹುಪಕ್ಷೀಯ ವ್ಯಾಪಾರ ಒಡಂಬಡಿಕೆಗಳಿಗೆ ಧಕ್ಕೆ ಉಂಟುಮಾಡುತ್ತದೆ. ಭಾರತವನ್ನೂ ಒಳಗೊಂಡಂತೆ ಅಮೆರಿಕದ ಮಾರುಕಟ್ಟೆಯನ್ನು ಅವಲಂಬಿಸಿರುವ ಅನೇಕ ದೇಶಗಳು ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಅಮೆರಿಕ ಉದ್ಯೋಗ ಮತ್ತು ಔದ್ಯೋಗಿಕ ಮಾರುಕಟ್ಟೆ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳಿಗೆ ಬೈಡನ್ ಆಡಳಿತದಲ್ಲಿ ವಲಸೆ ನೀತಿಯನ್ನು ಸಡಿಲಗೊಳಿಸಿರುವುದೇ ಕಾರಣ ಎನ್ನಲಾಗುತ್ತಿದೆ. ಹೊರದೇಶಗಳಿಂದ ತಂಡೋಪತಂಡವಾಗಿ ಬರಲಾರಂಭಿಸಿದ ನುರಿತ ಕೆಲಸಗಾರರು, ಸ್ಥಳೀಯ ದುಡಿಯುವ ವರ್ಗಗಳಿಂದ ಉದ್ಯೋಗಾವಕಾಶಗಳನ್ನು ಕಸಿದುಕೊಂಡಿದ್ದಾರೆ ಎಂಬ ಕೂಗು ಈ ಚುನಾವಣೆಯಲ್ಲಿ ಧ್ವನಿಸಿದೆ. ಹಾಗಾಗಿಯೇ ವಲಸೆ ನೀತಿಯನ್ನು ಪುನಃ ಬಿಗಿಗೊಳಿಸುವ ಮೂಲಕ ಟ್ರಂಪ್ ಆಡಳಿತವು ಆರ್ಥಿಕ ಸ್ವ-ರಕ್ಷಣಾ ಮಾದರಿಯನ್ನು ಅನುಸರಿಸಲಿದೆ.
ಇದನ್ನೂ ಓದಿ: ಜಾರ್ಖಂಡ್ ಸಿಎಂ ಆಪ್ತರ ನಿವಾಸದ ಮೇಲೆ ಐಟಿ ದಾಳಿ
ಇದು ಭಾರತ, ಮೆಕ್ಸಿಕೋ ಮುಂತಾದ ದೇಶಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಭಾರತದಿಂದ ಅಮೆರಿಕಕ್ಕೆ ಹೋಗುತ್ತಿರುವ ಲಕ್ಷಾಂತರ ಸಾಫ್ಟ್‌ವೇರ್ ತಂತ್ರಜ್ಞರು ಮತ್ತು ನುರಿತ ಕೆಲಸಗಾರರು ತಮ್ಮ ಅವಕಾಶಗಳನ್ನು ಕಳೆದುಕೊಳ್ಳಲಿದ್ದಾರೆ. ಉನ್ನತ ಕೌಶಲ ಇರುವ ಕಾರ್ಮಿಕರ ಮೇಲೆ ಎಚ್1ಬಿ ಮತ್ತು ಎಲ್1 ವೀಸಾಗಳ ಮೇಲೆ ನಿರ್ಬಂಧಗಳನ್ನು ವಿಧಿಸುವ ಸಾಧ್ಯತೆಗಳಿರುವುದರಿಂದ ಈಗಾಗಲೇ ಅಮೆರಿಕದಲ್ಲಿ ದುಡಿಯುತ್ತಿರುವ ಸಾಫ್ಟ್‌ವೇರ್ ಕೆಲಸಗಾರರ ಕುಟುಂಬದ ಸದಸ್ಯರಿಗೆ ಅಮೆರಿಕದ ಪ್ರವೇಶ ಕಠಿಣವಾಗಬಹುದಾಗಿದೆ. ಇದರಿಂದ ವಲಸೆ ಹೋದ ಕಾರ್ಮಿಕರು ತಮ್ಮ ಸಂಸಾರಗಳಿಂದ ದೂರ ಇರಬೇಕಾದ ಸನ್ನಿವೇಶ ಉದ್ಭವಿಸಬಹುದು.
ಆದರೆ ಭಾರತದ ದೃಷ್ಟಿಯಿಂದ ಟ್ರಂಪ್ ಆಡಳಿತ ಕೆಲವು ಕ್ಷೇತ್ರಗಳಲ್ಲಿ ಲಾಭದಾಯಕವಾಗುವ ಸಾಧ್ಯತೆಗಳೂ ಇವೆ ಎಂದು ವಿಶ್ಲೇಷಕರು ಹೇಳುತ್ತಾರೆ. ಭಾರತದೊಡನೆ ಉತ್ತಮ ಬಾಂಧವ್ಯವನ್ನು ಬೆಳೆಸುವ ಭರವಸೆ ನೀಡಿರುವ ಟ್ರಂಪ್ ವಾಣಿಜ್ಯ ಸಂಬಂಧಗಳನ್ನು ವೃದ್ಧಿಸುವ ನೀತಿಗಳನ್ನು ಅನುಸರಿಸಬಹುದು. ಭಾರತದ ಕಂಪನಿಗಳಿಗೆ ತಂತ್ರಜ್ಞಾನ ಕ್ಷೇತ್ರದಲ್ಲಿ ಮಾರುಕಟ್ಟೆಯನ್ನು ವಿಸ್ತರಿಸಬಹುದು. ಹಾಗೆಯೇ ಭಾರತದ ಸೇನೆಗೆ ಅಗತ್ಯವಾದ ಸೇನಾ ಹಾರ್ಡ್‌ವೇರ್ ಉಪಕರಣಗಳಿಗೆ ಅಮೆರಿಕದ ಮಾರುಕಟ್ಟೆಯನ್ನು ಮುಕ್ತಗೊಳಿಸಬಹುದು. ಉಭಯ ರಾಷ್ಟ್ರಗಳ ನಡುವೆ 2019-20ರಲ್ಲಿ ಏರ್ಪಟ್ಟಿದ್ದ ಆದರೆ ಬೈಡನ್ ಆಳ್ವಿಕೆಯಲ್ಲಿ ನಿರ್ಲಕ್ಷ್ಯಕ್ಕೊಳಗಾದ ಮುಕ್ತ ವ್ಯಾಪಾರ ಒಪ್ಪಂದ ( Free Trade Agreementಁ) ಮರಳಿ ಜೀವ ಪಡೆಯಬಹುದು. ಅಮೆರಿಕದಿಂದ ತೈಲ , ಎಲ್‌ಎನ್‌ಜಿ ಇಂಧನವನ್ನು ಖರೀದಿಸಲು ಭಾರತಕ್ಕೆ ಅವಕಾಶಗಳನ್ನು ತೆರೆಯುವ ಮೂಲಕ ಟ್ರಂಪ್ ಆಡಳಿತವು ಬಿಲಿಯಾಂತರ ಡಾಲರ್‌ಗಳ ಬಂಡವಾಳ ಹೂಡಿಕೆಯನ್ನು ಭಾರತಕ್ಕೆ ಮುಕ್ತಗೊಳಿಸುವ ಸಾಧ್ಯತೆಗಳಿವೆ.
ಅಸ್ಮಿತೆ ಮತ್ತು ಸ್ವರಕ್ಷಣೆಯ ನೀತಿಗಳು
ಅಮೆರಿಕದ ಪ್ರಸ್ತುತ ಚುನಾವಣೆಯಲ್ಲಿ ಗಮನಿಸಬಹುದಾದ ಮತ್ತೊಂದು ಲಕ್ಷಣವೆಂದರೆ ಅಸ್ಮಿತೆಯ ರಾಜಕಾರಣ. ಯಾವುದೇ ಕಾಲದಲ್ಲೂ ಮಹಿಳಾ ಅಭ್ಯರ್ಥಿಯನ್ನು ಅಧ್ಯಕ್ಷತೆಗೆ ಸೂಚಿಸದ ಸಾಂಪ್ರದಾಯಿಕ ರಿಪಬ್ಲಿಕನ್ ಪಕ್ಷವು ಈ ಬಾರಿಯೂ ತನ್ನ ಸಂಪ್ರದಾಯವನ್ನು ಕಾಪಾಡಿಕೊಂಡಿದೆ. ಮತ್ತೊಂದೆಡೆ ಡೆಮಾಕ್ರಟ್ಸ್ ಪಕ್ಷದ ಅಭ್ಯರ್ಥಿಯಾದ ಕಮಲಾ ಹ್ಯಾರಿಸ್ ಎಲ್ಲ ರಾಜ್ಯಗಳಲ್ಲೂ ಹಿನ್ನಡೆ ಅನುಭವಿಸಿರುವುದನ್ನು ಗಮನಿಸಿದರೆ, ಅಮೆರಿಕದಲ್ಲಿ ಮಹಿಳಾ ಅಧ್ಯಕ್ಷರನ್ನು ಒಪ್ಪಿಕೊಳ್ಳದ ಒಂದು ಪುರುಷಾಧಿಪತ್ಯದ ಸಮಾಜ ಮತ್ತು ರಾಜಕೀಯ ಸುಪ್ತವಾಗಿರುವುದು ಸ್ಪಷ್ಟವಾಗುತ್ತದೆ. ರಿಪಬ್ಲಿಕನ್ ಪಕ್ಷದ ಟ್ರಂಪ್ ಆಯ್ಕೆಯಾದ 2016 ಮತ್ತು 2020 ಎರಡೂ ಚುನಾವಣೆಗಳಲ್ಲಿ ಡೆಮಾಕ್ರಟ್ ಪಕ್ಷದ ಮಹಿಳಾ ಅಭ್ಯರ್ಥಿಗಳು ಸೋಲು ಅನುಭವಿಸಿದ್ದಾರೆ. ಇದು ಅಮೆರಿಕದ ಸಮಾಜದಲ್ಲಿ ಮತ್ತು ರಾಜಕಾರಣದಲ್ಲಿ ಆಳವಾಗಿ ಬೇರೂರಿರುವ ಪಿತೃಪ್ರಧಾನ ಧೋರಣೆ ಮತ್ತು ಸ್ತ್ರೀದ್ವೇಷದ ಮನಸ್ಥಿತಿಯನ್ನು ಮತ್ತೆ ಮತ್ತೆ ದೃಢೀಕರಿಸುತ್ತದೆ.
ಜಾಗತಿಕ ಭೌಗೋಳಿಕ ರಾಜಕಾರಣದಲ್ಲಿ (Global Geo Politics) ಅಮೆರಿಕದ ಮಧ್ಯಪ್ರಾಚ್ಯ ನೀತಿಯಲ್ಲಿ ಯಾವುದೇ ಬದಲಾವಣೆಗಳನ್ನು ನಿರೀಕ್ಷಿಸಲಾಗುವುದಿಲ್ಲ. ಇಸ್ರೇಲ್ ಮತ್ತು ಇರಾನ್ ನಡುವೆ ಸಂಘರ್ಷ ಹೆಚ್ಚಾಗುತ್ತಿರುವ ಸನ್ನಿವೇಶದಲ್ಲಿ ಅಮೆರಿಕದ ಯುದ್ಧ ಆರ್ಥಿಕತೆ (War Economy) ಮತ್ತು ಶಸ್ತ್ರಾಸ್ತ್ರ ತಯಾರಕ ಕಂಪನಿಗಳ ಬಹುದೊಡ್ಡ ಔದ್ಯಮಿಕ ಕ್ಷೇತ್ರವು ನಿರ್ಣಾಯಕ ಪಾತ್ರ ವಹಿಸುತ್ತದೆ. ಅಮೆರಿಕದ ಸ್ವ-ರಕ್ಷಣೆಗಾಗಿ ಯಾವ ಕ್ರಮ ಕೈಗೊಳ್ಳಲೂ ಸಿದ್ಧವಾಗಿರುವ ಡೊನಾಲ್ಡ್ ಟ್ರಂಪ್ ಆಡಳಿತವು, ಅಮೆರಿಕದ ಹಿತಾಸಕ್ತಿಗಳಿಗೆ ವಿರುದ್ಧವಾಗಿರುವ ದೇಶಗಳಲ್ಲಿ ಆಳ್ವಿಕೆಗಳನ್ನು ಅಸ್ಥಿರಗೊಳಿಸುವುದರೊಂದಿಗೇ, ತನ್ನ ಭೌಗೋಳಿಕ-ಆರ್ಥಿಕ ಭದ್ರಕೋಟೆಯ ರಕ್ಷಣೆಗಾಗಿ ಹಲವು ದೇಶಗಳಲ್ಲಿ ನಿರ್ಣಾಯಕ ಪಾತ್ರ ವಹಿಸುವುದನ್ನೂ ಅಲ್ಲಗಳೆಯಲಾಗುವುದಿಲ್ಲ. ಈಗಾಗಲೇ ಅಸ್ಥಿರತೆ ಎದುರಿಸುತ್ತಿರುವ ಬಾಂಗ್ಲಾದೇಶ, ಪಾಕಿಸ್ತಾನದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ.
ಇದನ್ನೂ ಓದಿ: ಸಾಮುದಾಯಿಕ ಹಿತಾಸಕ್ತಿಯೂ ಖಾಸಗಿ ಆಸ್ತಿ ರಕ್ಷಣೆಯೂ
ವಿಶ್ವ ಸಮುದಾಯದ ಪರಿಸರ ಕಾಳಜಿಯನ್ನು ಮತ್ತು ಹವಾಮಾನ ಬದಲಾವಣೆಯ ಆತಂಕಗಳನ್ನು ಕಿಂಚಿತ್ತೂ ಲೆಕ್ಕಿಸದ ಡೊನಾಲ್ಡ್ ಟ್ರಂಪ್ ತಮ್ಮ ಆಳ್ವಿಕೆಯಲ್ಲಿ ತೈಲ ಮತ್ತು ಜೈವಿಕ ಅನಿಲದ ಉತ್ಪಾದನೆಯನ್ನು ಹೆಚ್ಚಿಸುವ ಸಾಧ್ಯತೆಗಳಿವೆ. ಜಾಗತಿಕ ಪರಿಸರವಾದಿಗಳನ್ನು ನಿರಂತರ ಕಾಡುತ್ತಿರುವ ಇಂಗಾಲ ಹರಡುವಿಕೆ ಮತ್ತು ಓಜೋನ್ ಪದರದ ತೀವ್ರತೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಹವಾಮಾನ ತಜ್ಞರು ಹಾಗೂ ಪರಿಸರ ವಿಜ್ಞಾನಿಗಳು ಪ್ರತಿಪಾದಿಸುತ್ತಿರುವ ನಿಬಂಧನೆಗಳನ್ನು ಟ್ರಂಪ್ ಆಡಳಿತ ಧಿಕ್ಕರಿಸುವ ಸಾಧ್ಯತೆಗಳಿರುವುದನ್ನು ವಿಶ್ಲೇಷಕರು ಈಗಾಗಲೇ ಗುರುತಿಸಿದ್ದಾರೆ. ಈ ಆತಂಕಗಳ ಹೊರತಾಗಿಯೂ ಟ್ರಂಪ್ ಅಮೆರಿಕದ ಎಲ್ಲ ರಾಜ್ಯಗಳಲ್ಲೂ ಮುನ್ನಡೆ ಸಾಧಿಸಿರುವುದು ಬದಲಾಗುತ್ತಿರುವ ಜಗತ್ತಿನ ಹಾಗೂ ಹೊಸ ತಲೆಮಾರಿನ ಆಲೋಚನೆಗಳ ಸೂಚಕವಾಗಿ ಕಾಣುತ್ತದೆ.
ಬದಲಾದ ಪೀಳಿಗೆಯ ಛಾಯೆ
ಅತಿಹೆಚ್ಚಿನ ಸಂಖ್ಯೆಯ ಅಲ್ಪಸಂಖ್ಯಾತರನ್ನು ಹೊಂದಿರುವ ಅರಿಜೋನಾ ಮತ್ತು ನೆವಡಾ ಪ್ರಾಂತ್ಯಗಳಲ್ಲಿ ಹಿಸ್ಪಾನಿಕ್ ಜನಾಂಗದವರೇ ಪ್ರಮುಖ ಮತದಾರರಾಗಿದ್ದಾರೆ. ಜಾರ್ಜಿಯಾ ಮತ್ತು ನಾರ್ತ್ ಕರೋಲಿನಾ ಪ್ರಾಂತ್ಯಗಳಲ್ಲಿ ಹೆಚ್ಚಿನ ಸಂಖ್ಯೆಯ ಆಫ್ರಿಕನ್ ಅಮೆರಿಕನ್ನರಿದ್ದಾರೆ. ಈ ನಾಲ್ಕೂ ವಲಯಗಳಲ್ಲಿ ಕಮಲಾ ಹ್ಯಾರಿಸ್ ಮತ್ತು ಡೆಮಾಕ್ರಟ್ ಪಕ್ಷದ ಹೆಚ್ಚಿನ ಮತಗಳನ್ನು ಗಳಿಸಲು ಸಾಧ್ಯವಾಗಿಲ್ಲ. ಈ ಪ್ರದೇಶದ ದುಡಿಯುವ ವರ್ಗಗಳು ಬೈಡನ್ ಆಳ್ವಿಕೆಯನ್ನು ತಿರಸ್ಕರಿಸಿರುವುದಕ್ಕೆ ಕಾರಣ, ಈ ಕೆಳಸ್ತರದ ಸಮಾಜ ಎದುರಿಸುತ್ತಿದ್ದ ಬೆಲೆ ಏರಿಕೆ, ನಿರುದ್ಯೋಗ ಮತ್ತಿತರ ಜ್ವಲಂತ ಸಮಸ್ಯೆಗಳನ್ನು ನೀಗಿಸದೆ ಇರುವುದು.
ಈ ಪ್ರಾಂತ್ಯಗಳ ಮತದಾರರು ಟ್ರಂಪ್ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿದ್ದಾರೆ. ಅರಬ್ ಅಮೆರಿಕನ್ ಜನಸಂಖ್ಯೆ ಹೆಚ್ಚಾಗಿರುವ ಡೆರ್ಬನ್ ಪ್ರಾಂತ್ಯದಲ್ಲೂ ಸಹ ಶೇಕಡಾ 31 ರಿಂದ 46ರಷ್ಟು ಮತದಾರರು ಟ್ರಂಪ್‌ಗೆ ಬೆಂಬಲ ಸೂಚಿಸಿದ್ದಾರೆ. ಗಾಝಾ ಪಟ್ಟಿಯಲ್ಲಿ ಇಸ್ರೇಲ್ ನಡೆಸುತ್ತಿರುವ ಅಮಾನುಷ ದಾಳಿಗೆ ಬೈಡನ್ ಆಳ್ವಿಕೆಯ ಪ್ರೋತ್ಸಾಹ ಇದ್ದುದು ಈ ಮತದಾರರ ಆಕ್ರೋಶಕ್ಕೆ ಪ್ರಮುಖ ಕಾರಣವಾಗಿದೆ. ಟ್ರಂಪ್ ಆಡಳಿತದಲ್ಲೂ ಹೆಜ್ಬೊಲ್ಲಾ ವಿರುದ್ಧ ಸಮರದಲ್ಲಿ ಅಮೆರಿಕ ಇಸ್ರೇಲ್ ಬೆನ್ನುಲುಬಾಗಿ ನಿಲ್ಲಬಹುದಾದರೂ, ಈ ಆತಂಕದ ಹೊರತಾಗಿಯೂ ಮತದಾರರು ಟ್ರಂಪ್ ಬೆಂಬಲಿಸಿರುವುದು ಸೋಜಿಗದ ಸಂಗತಿಯಾಗಿದೆ.
ಅಮೆರಿಕದಲ್ಲಿ ಆಂತರಿಕವಾಗಿ ನಡೆಯುತ್ತಿರುವ ಬ್ಲ್ಯಾಕ್ ಲೈವ್ಸ್ ಮ್ಯಾಟರ್ಸ್ ಮುಂತಾದ ಕಪ್ಪು ಜನರ ಆಂದೋಲನಗಳು, ನಿರುದ್ಯೋಗ ಮತ್ತು ಅನಿಶ್ಚಿತತೆಯ ವಿರುದ್ಧ ನಿರಂತರ ಹೋರಾಡುತ್ತಿರುವ ವಿದ್ಯಾರ್ಥಿ ಯುವಸಮುದಾಯ, ಅಮೆರಿಕದ ಸಮಾಜದಲ್ಲಿ ವ್ಯಾಪಕವಾಗಿರುವ ಬಂದೂಕು ಸಂಸ್ಕೃತಿಯ ವಿರುದ್ಧ ಹೋರಾಡುತ್ತಿರುವ ಸಂಘಟನೆಗಳು ಟ್ರಂಪ್ ಆಳ್ವಿಕೆಯಲ್ಲಿ ದಮನಕಾರಿ ವಾತಾವರಣವನ್ನು ಎದುರಿಸಬೇಕಾಗಬಹುದು. ಆರ್ಥಿಕ ಅನಿಯಂತ್ರಣ (Economic Deregulation ) ತೆರಿಗೆ ಕಡಿತ, ಹೆಚ್ಚಿನ ಸುಂಕಗಳು, ನೆರೆ ರಾಷ್ಟ್ರಗಳನ್ನು ಬಡವಾಗಿಸುವ ವ್ಯಾಪಾರ ನೀತಿಗಳು ಮುಂದಿನ ದಿನಗಳಲ್ಲಿ ಅಮೆರಿಕದ ಆಳ್ವಿಕೆಯ ಪ್ರಮುಖ ನೀತಿಗಳಾಗಲಿವೆ. ಇದು ಎಷ್ಟರ ಮಟ್ಟಿಗೆ ಜಾಗತಿಕ ಪರಿಣಾಮ ಬೀರುತ್ತವೆ, ಅಮೆರಿಕದ ಆರ್ಥಿಕತೆಯನ್ನು ಹೇಗೆ ಸುಧಾರಿಸುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.
ಈ ಎಲ್ಲಾ ಸಾಧ್ಯಾಸಾಧ್ಯತೆಗಳ ನಡುವೆ ಅಮೆರಿಕದಲ್ಲಿ ಟ್ರಂಪ್ ಆಳ್ವಿಕೆಯ ಪುನರಾಗಮನವನ್ನು ಗಮನಿಸಬೇಕಿದೆ. ಜಾಗತಿಕ ಭಯೋತ್ಪಾದನೆಯನ್ನು ನಿಗ್ರಹಿಸುವ ಪ್ರಧಾನ ಕಾರ್ಯಸೂಚಿಯನ್ನು ಹೊಂದಿರುವ ಟ್ರಂಪ್ ಆಂತರಿಕವಾಗಿ ಅಲ್ಲಿನ ಪ್ರತಿರೋಧ ಮತ್ತು ಹೋರಾಟಗಳನ್ನು ಹೇಗೆ ನಿರ್ವಹಿಸುತ್ತಾರೆ ಎನ್ನುವುದನ್ನೂ, ಭಾರತಕ್ಕೆ ಸಂಬಂಧಿಸಿದಂತೆ ಸಾಫ್ಟ್‌ವೇರ್ ಉದ್ಯೋಗಿಗಳು ಮತ್ತು ತಂತ್ರಜ್ಞಾನ ಸಾಫ್ಟ್‌ವೇರ್ ರಫ್ತು ವಹಿವಾಟಿನ ಮೇಲೆ ಉಂಟಾಗಬಹುದಾದ ಪರಿಣಾಮಗಳನ್ನೂ ಗಂಭೀರವಾಗಿ ಗಮನಿಸಬೇಕಿದೆ. ಅಮೆರಿಕದಲ್ಲಿ ಆಳ್ವಿಕೆಯ ಪಕ್ಷ ಯಾವುದೇ ಆದರೂ ಅದರ ಸಾಮ್ರಾಜ್ಯಶಾಹಿ ಧೋರಣೆ, ಬಂಡವಾಳಶಾಹಿ ವಿಸ್ತರಣೆ ಮತ್ತು ಯುದ್ಧ ಆರ್ಥಿಕತೆಯ ನೀತಿಗಳು ಬದಲಾಗುವುದಿಲ್ಲ ಎಂಬ ಚಾರಿತ್ರಿಕ ಸತ್ಯವನ್ನು ಗಮನದಲ್ಲಿಟ್ಟುಕೊಂಡು, ಭವಿಷ್ಯದ ಜಾಗತಿಕ ಬೆಳವಣಿಗೆಗಳನ್ನು ಕಾದು ನೋಡಬೇಕಿದೆ.
ಇದನ್ನೂ ನೋಡಿ: ವಚನಾನುಭವ 19| ಜಂಗಮಕ್ಕೆರೆದರೆ ಸ್ಥಾವರ ನೆನೆಯಿತ್ತು | ಮೀನಾಕ್ಷಿ ಬಾಳಿ Janashakthi Media