ಹೊಸ ಶಿಕ್ಷಣ ನೀತಿಯಲ್ಲಿ ಎಲ್ಲವೂ ಇದೆ, ಆದರೆ ಏನೂ ಇಲ್ಲ

– ಪ್ರೊ. ಎಂ.ಚಂದ್ರ ಪೂಜಾರಿ

ಒಟ್ಟಾರೆಯಾಗಿ ಹೇಳುವುದಾದರೆ ಹೊಸ ಶಿಕ್ಷಣ ನೀತಿಯಲ್ಲಿ ಎಲ್ಲವೂ ಇದೆ ಮತ್ತು ಏನೂ ಇಲ್ಲ ಎನ್ನುವ ಸ್ಥಿತಿ ಇದೆ. ವರ್ತಮಾನದ ಶಿಕ್ಷಣ ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಹೊಸ ಶಿಕ್ಷಣ ನೀತಿ ನೀಡುವ ಪರಿಹಾರಗಳು ಸಮಸ್ಯೆಯನ್ನು ಪರಿಹರಿಸುವ ಬದಲು ಇನ್ನೂ ಸಂಕೀರ್ಣಗೊಳಿಸಬಹುದು. ನಮ್ಮ ಅಭಿವೃದ್ಧಿ ರಾಜಕಾರಣ ಸಂಪೂರ್ಣ ಬಲಾಢ್ಯರ ಸ್ವಾಧೀನ ಇದೆ. ಇವರು ಜಾರಿಗೆತರುವ ಬಹುತೇಕ ಪಾಲಿಸಿಗಳು ಬಡತನವನ್ನು ಮತ್ತು ತಳಸ್ತರವನ್ನು ಸೃಷ್ಟಿಸುತ್ತಿವೆ. ಹೀಗಿರುವಾಗ ಶಿಕ್ಷಣ ನೀತಿ ಬಲಾಢ್ಯಪರ ಅಭಿವೃದ್ಧಿ ರಾಜಕಾರಣಕ್ಕೆ ವಿರುದ್ಧವಾಗಿರುತ್ತದೆ ಎಂದು ಗ್ರಹಿಸುವುದು ಅತಾರ್ಕಿಕವಾಗುತ್ತದೆ.

ಯುವ ಜನಾಂಗಕ್ಕೆ ಸ್ಕಿಲ್ ಮತ್ತು ಮೌಲ್ಯಗಳನ್ನು ದಾಟಿಸುವುದು ಶಿಕ್ಷಣದ ಪ್ರಮುಖ ಉದ್ದೇಶಗಳು. ಆದಾಯ ಗಳಿಸಲು ಸ್ಕಿಲ್ ಅಥವಾ ಪರಿಣಿತಿ ಸಹಕರಿಸಿದರೆ, ಸಮಷ್ಠಿ ಬದುಕಿಗೆ ಅವಶ್ಯವಿರುವ ಲೋಕದೃಷ್ಟಿ ರೂಪಿಸಲು ಮೌಲ್ಯ ಸಹಕರಿಸುತ್ತದೆ. ಒಂದು ದೇಶಕ್ಕೆ ಸೇರಿದ ನಾವೆಲ್ಲ ನೆಮ್ಮದಿಯಿಂದ ಬದುಕಲು ಅವಶ್ಯವಿರುವ ಮೌಲ್ಯಗಳನ್ನು ಸಂವಿಧಾನ ಸೂಚಿಸಿದೆ. ಸಂವಿಧಾನಿಕ ಮೌಲ್ಯಗಳನ್ನು ಶಿಕ್ಷಿತರಲ್ಲಿ ರೂಪಿಸುವುದರಿಂದ ನವ ಸಮಾಜ ನಿರ್ಮಾಣ ಸಾಧ್ಯ. ವರ್ತಮಾನದ ಶಿಕ್ಷಣ ಪದ್ಧತಿ ಈ ಎರಡೂ ಉದ್ದೇಶಗಳನ್ನು ಈಡೇರಿಸಲು ವಿಫಲವಾಗಿದೆ ಎಂದು ಹೊಸ ಶಿಕ್ಷಣ ನೀತಿ ಬಂದಿದೆ. ಹೊಸ ಶಿಕ್ಷಣ ನೀತಿ ಬಂದ ಮೇಲೆ ಚರ್ಚೆಗಳಾಗುತ್ತಿವೆ. ಆದರೆ ಈ ಚರ್ಚೆಗಳು ಶಿಕ್ಷಣ ನೀತಿಯ ತೊಗಟೆ ಮೇಲೆ ಹೆಚ್ಚು ಕೇಂದ್ರೀತವಾಗಿವೆ. ಅಂದರೆ ಶಿಕ್ಷಣದ ಮಾಧ್ಯಮದ ಬಗ್ಗೆ, ಹಿಂದಿನ 7+3+2 ಪದ್ಧತಿ ಬದಲು 5+3+3+4 ಪದ್ದತಿ ಬಗ್ಗೆ, ಓಕೇಶನಲ್ ಕೋರ್ಸ್‍ಸ್, 4 ವರ್ಷದ ಫ್ಲೆಕ್ಸಿಬಲ್ ಡಿಗ್ರಿ ಕೋರ್ಸ್, ಮಲ್ಟಿ ಡಿಸಿಪ್ಲಿನರಿ ಕೋರ್ಸ್ ಇತ್ಯಾದಿಗಳ ಬಗ್ಗೆ ಹೆಚ್ಚು ಚರ್ಚೆಗಳಾಗುತ್ತಿವೆ. ಆದರೆ ಹೊಸ ಶಿಕ್ಷಣ ನೀತಿಯ ತಿರುಳಿನ ಬಗ್ಗೆ ಹೆಚ್ಚು ಚರ್ಚೆಗಳಾಗುತ್ತಿಲ್ಲ. ಅಂದರೆ ಏಕೆ ಹೊಸ ಶಿಕ್ಷಣ ಬಂದಿದೆ? ಶಿಕ್ಷಣ ಕ್ಷೇತ್ರ ವರ್ತಮಾನದಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ಹೊಸ ಶಿಕ್ಷಣ ನೀತಿ ಪರಿಹರಿಸಬಹುದೇ? ಒಂದು ವೇಳೆ  ಪರಿಹರಿಸದಿದ್ದರೆ ಏಕೆ ಪರಿಹರಿಸುವುದಿಲ್ಲ? ಇತ್ಯಾದಿ ಪ್ರಶ್ನೆಗಳ ಸುತ್ತ ಚರ್ಚೆ ನಡೆಯುತ್ತಿಲ್ಲ. ನನ್ನ ಲೇಖನದ ಉದ್ದೇಶ ಈ ಮೂರು ಪ್ರಶ್ನೆಗಳನ್ನು ಚರ್ಚೆಗೆ ಎತ್ತಿಕೊಳ್ಳುವುದು.

ಏಕೆ ಹೊಸ ಶಿಕ್ಷಣ ನೀತಿ?

ಶಿಕ್ಷಣ ಕ್ಷೇತ್ರ ವರ್ತಮಾನದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಇವನ್ನು ಪರಿಹರಿಸಲು ಹೊಸ ಶಿಕ್ಷಣ ನೀತಿ ಬಂದಿದೆ. ಶಿಕ್ಷಣ ಕ್ಷೇತ್ರದ ವರ್ತಮಾನದ ಸಮಸ್ಯೆಗಳನ್ನು ಅರ್ಥಮಾಡಿಕೊಂಡರೆ ಹೊಸ ಶಿಕ್ಷಣ ನೀತಿಯಲ್ಲಿ ವರ್ತಮಾನದ ಸಮಸ್ಯೆಗಳಿಗೆ ಪರಿಹಾರ ಇದೆಯೇ ಎಂದು ತೀರ್ಮಾನಿಸಬಹುದು. ಒಂದು ವೇಳೆ ಪರಿಹಾರ ಇಲ್ಲದಿದ್ದರೆ ವರ್ತಮಾನದ ಸಮಸ್ಯೆಗಳು ಮುಂದುವರಿಯಬಹುದು.

ಮಾಧ್ಯಮದ ಸಮಸ್ಯೆ : ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡಬೇಕಾದ ಭಾಷೆಯ ಪ್ರಶ್ನೆಯನ್ನು ಮಾಧ್ಯಮದ ಚರ್ಚೆ ಒಳಗೊಂಡಿದೆ. ವರ್ತಮಾನದಲ್ಲಿ  ತ್ರಿಭಾಷಾ ಸೂತ್ರ ಮಾಧ್ಯಮದ ಪ್ರಶ್ನೆಯನ್ನು ಪರಿಹರಿಸುತ್ತಿದೆ. ಎಲ್ಲ ರಾಜ್ಯಗಳಲ್ಲೂ ಆಯಾ ರಾಜ್ಯದ ಭಾಷೆ, ರಾಷ್ಟ್ರ ಭಾಷೆ ಮತ್ತು ಅಂತರಾಷ್ಟ್ರೀಯ ಭಾಷೆಗಳಲ್ಲಿ ಶಿಕ್ಷಣ ಇದೆ. ಉದಾಹರಣೆಗೆ, ಕರ್ನಾಟಕದಲ್ಲಿ ಕನ್ನಡ ರಾಜ್ಯ ಭಾಷೆ, ಹಿಂದಿ ರಾಷ್ಟ್ರ ಭಾಷೆ ಮತ್ತು ಇಂಗ್ಲೀಷ್ ಅಂತರಾಷ್ಟ್ರೀಯ ಭಾಷೆಯಾಗಿ ಬಳಕೆಯಾಗುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಮಾಧ್ಯಮದ ಬಗ್ಗೆ ಹೊಸ ಬೆಳವಣಿಗೆಗಳು ಮುಂಚೂಣಿಗೆ ಬಂದಿವೆ. ಎಲ್ಲ ರಾಜ್ಯಗಳಲ್ಲೂ ರಾಜ್ಯ ಭಾಷೆಯ ಬದಲು ಇಂಗ್ಲೀಷ್ ಮಾಧ್ಯಮದಲ್ಲಿ ಶಿಕ್ಷಣ ನೀಡಬೇಕೆನ್ನುವ ಡಿಮ್ಯಾಂಡ್ ಹೆಚ್ಚಾಗಿದೆ. ದಲಿತ, ಬುಡಕಟ್ಟು, ಹಿಂದುಳಿದ ವರ್ಗಗಳು ತಮ್ಮ ಮಕ್ಕಳಿಗೂ ಇಂಗ್ಲೀಷ್ ಭಾಷೆಯಲ್ಲಿ ಶಿಕ್ಷಣ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಇವರ ವಾದ ಸರಳ ಇದೆ. ಅನುಕೂಲಸ್ಥರ ಮಕ್ಕಳು ಖಾಸಗಿ ಶಾಲೆಗಳ ಇಂಗ್ಲೀಷ್ ಮಾಧ್ಯಮದಲ್ಲಿ ಓದಿ ಮುಂದೆ ಹೋಗುತ್ತಿದ್ದಾರೆ. ನಮ್ಮ ಮಕ್ಕಳು ಸರಕಾರಿ ಶಾಲೆಗಳ ಕನ್ನಡ ಮಾಧ್ಯಮದಲ್ಲಿ ಓದಿ ಹಿಂದುಳಿದಿದ್ದಾರೆ. ನಮಗೆ ಖಾಸಗಿ ಇಂಗ್ಲೀಷ್ ಮಾಧ್ಯಮ ಶಾಲೆಗಳಲ್ಲಿ ಓದಿಸುವಷ್ಟು ಶಕ್ತಿಯಿಲ್ಲ. ಆದುದರಿಂದ ಸರಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಇಂಗ್ಲೀಷ್ ಮಾಧ್ಯಮದಲ್ಲಿ ಶಿಕ್ಷಣ ನೀಡಬೇಕೆನ್ನುವುದು ಇವರ ಒತ್ತಾಯ. ಜನರ ಒತ್ತಾಯವನ್ನು ಅರ್ಥಮಾಡಿಕೊಂಡು ಕರ್ನಾಟಕದಲ್ಲಿ ಕುಮಾರಸ್ವಾಮಿ ಸರಕಾರ ತರಗತಿ ಒಂದರಿಂದಲೇ ಇಂಗ್ಲೀಷ್ ಭಾಷೆಯನ್ನು ಕಲಿಸಲು ಆರಂಭಿಸಿದೆ. ಇದೇ ರೀತಿ ಪಂಜಾಬ್, ಪ.ಬಂಗಾಳ ಮತ್ತು ಇತರ ರಾಜ್ಯಗಳು ಇಂಗ್ಲೀಷ್ ಶಿಕ್ಷಣಕ್ಕೆ ಒತ್ತು ನೀಡುತ್ತಿವೆ. ಇಂತಹ ಸಂದರ್ಭದಲ್ಲಿ ಹೊಸ ಶಿಕ್ಷಣ ನೀತಿಯಲ್ಲಿ ಮಾತೃಭಾಷೆಯಲ್ಲಿ 1-5ನೇ ತರಗತಿ ತನಕ ಶಿಕ್ಷಣ ನೀಡಬೇಕೆನ್ನುವ ಆಶಯ ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ಬರಬಹುದೆನ್ನುವ ಸಂದೇಹ ಇದೆ.

ಶಿಕ್ಷಣದ ವಾಣಿಜ್ಯೀಕರಣ : ಲೋವರ್ ಶಿಕ್ಷಣದ ಶೇ.25-30 ಶಾಲೆಗಳು (ಶೇ.40ರಷ್ಟು ವಿದ್ಯಾರ್ಥಿಗಳು) ಖಾಸಗಿ ಒಡೆತನದಲ್ಲಿವೆ. ಸಾಮಾನ್ಯ ಉನ್ನತ ಶಿಕ್ಷಣದ ಶೇ.77ರಷ್ಟು ಸಂಸ್ಥೆಗಳು ಖಾಸಗಿಯವರು ನಡೆಸುತ್ತಿದ್ದಾರೆ. ಪ್ರೊಫೆಶನಲ್ ಕಾಲೇಜುಗಳ (ಮೆಡಿಕಲ್, ಎಂಜಿನೀಯರಿಂಗ್ ಕಾಲೇಜುಗಳ) ಶೇ.80ಕ್ಕಿಂತಲೂ ಹೆಚ್ಚಿನ ಸಂಸ್ಥೆಗಳು ಖಾಸಗಿ ಒಡೆತನದಲ್ಲಿವೆ. ಶೇ.54ರಷ್ಟು ವಿಶ್ವವಿದ್ಯಾಲಯಗಳನ್ನು ಖಾಸಗಿಯವರು ನಡೆಸುತ್ತಿದ್ದಾರೆ. ಹಿಂದೆ  ಖಾಸಗಿಯವರು ಸಮಾಜ ಸೇವೆ ಮಾಡುವ ಉದ್ದೇಶದಿಂದ ಶಿಕ್ಷಣ ಸಂಸ್ಥೆಗಳನ್ನು ತೆರೆಯುತ್ತಿದ್ದರು. ಆದರೆ ಇಂದು ಬಹುತೇಕ ಖಾಸಗಿ ಸಂಸ್ಥೆಗಳು ಶಿಕ್ಷಣದ ವ್ಯಾಪಾರ ಮಾಡುವ ಉದ್ದೇಶದಿಂದ ಶಿಕ್ಷಣ ಸಂಸ್ಥೆಗಳನ್ನು ತೆರೆಯುತ್ತಿದ್ದಾರೆ. ಸರಕಾರಿ ಸಂಸ್ಥೆಗಳಲ್ಲಿ ಕೆಲವು ಸಾವಿರ ರುಪಾಯಿಗಳಲ್ಲಿ ನಡೆಯುವ ಶಿಕ್ಷಣ ಖಾಸಗಿ ಸಂಸ್ಥೆಗಳಲ್ಲಿ ಕೆಲವು ಲಕ್ಷ ರುಪಾಯಿಗಳಲ್ಲೂ ಪೂರೈಸುವುದಿಲ್ಲ. ಇದನ್ನೇ ಇನ್ನೊಂದು ವಿಧದಲ್ಲಿ ಹೇಳುವುದಾದರೆ ಖಾಸಗಿ ಶಿಕ್ಷಣ ಸಂಸ್ಥೆಗಳು ಅನುಕೂಲಸ್ಥರ ಶೈಕ್ಷಣಿಕ ಅಗತ್ಯಗಳನ್ನು ಪೂರೈಸುತ್ತಿವೆ. ಇವು ಹೆಚ್ಚುತ್ತಾ ಹೋದಂತೆ ಬಡ ಮಕ್ಕಳು ಶಿಕ್ಷಣ ಪಡೆಯುವುದು ಕಷ್ಟವಾಗುತ್ತದೆ.

ಶಿಕ್ಷಣ ಮತ್ತು ಉದ್ಯೋಗದ ಸಮಸ್ಯೆ :  ಶಿಕ್ಷಣ ಮತ್ತು ಉದ್ಯೋಗ ಸಂಬಂಧದ ಮೇಲಿನ ಬಹುತೇಕ ಚರ್ಚೆಗಳಲ್ಲಿ ಶಿಕ್ಷಣ ಮತ್ತು ಉದ್ಯೋಗದ ಸಮಸ್ಯೆಯನ್ನು ಶಿಕ್ಷಣ ಪಡೆದವರ ಉದ್ಯೋಗಕ್ಕೆ ಸೀಮಿತಗೊಂಡಂತೆ ಚರ್ಚಿಸಲಾಗುತ್ತಿದೆ. ಆದರೆ ಇದು ಕೇವಲ ಶಿಕ್ಷಣ ಪಡೆದವರ ಸಮಸ್ಯೆಯಲ್ಲ; ಶಿಕ್ಷಣ ನೀಡುವವರ ಸಮಸ್ಯೆಯೂ ಆಗಿದೆ. ಆದುದರಿಂದ ಈ ಸಮಸ್ಯೆಗೆ ಎರಡು ಮುಖಗಳಿವೆ. ಒಂದು, ಶಿಕ್ಷಣ ಸಂಸ್ಥೆಯಲ್ಲಿ ದುಡಿಯುವವರ ಸಮಸ್ಯೆ ಮತ್ತು ಎರಡು ಶಿಕ್ಷಣ ಪಡೆದವರು ಉದ್ಯೋಗ ಪಡೆಯುವ ಸಮಸ್ಯೆ. ಬಹುತೇಕ ಶಿಕ್ಷಣ ಸಂಸ್ಥೆಗಳು ಖಾಸಗಿ ಒಡೆತನದಲ್ಲಿವೆ ಎನ್ನುವುದನ್ನು ಈಗಾಗಲೇ ನೋಡಿದ್ದೇವೆ. ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ, ಸಂಬಳ ಮತ್ತು ಸಾಮಾಜಿಕ ಭದ್ರತೆಗಳಿಲ್ಲ. ಇನ್ನು ಸರಕಾರಿ ಸಂಸ್ಥೆಗಳಲ್ಲಿ ಶೇ.50ರಷ್ಟು ಹುದ್ದೆಗಳು ಖಾಲಿ ಇವೆ. ಇವನ್ನು ಒಪ್ಪಂದ ಆಧಾರದಲ್ಲಿ ಅಥವಾ ಅರೆಕಾಲಿಕ ಅಥವಾ ಅತಿಥಿ ಉಪನ್ಯಾಸಕರು ನಿಭಾಯಿಸುತ್ತಿದ್ದಾರೆ. ಖಾಯಂ ಉದ್ಯೋಗಿಗಳು ಮತ್ತು ಅತಿಥಿ ಉಪನ್ಯಾಸಕರ ಸಂಬಳ ನಡುವೆ ಆಕಾಶ ಭೂಮಿ ಅಂತರವಿದೆ. ಶಿಕ್ಷಣ ನೀಡುವವರನ್ನು ಅರೆಹೊಟ್ಟೆಯಲ್ಲಿಟ್ಟು ಗುಣಮಟ್ಟದ ಶಿಕ್ಷಣ ನಿರೀಕ್ಷಿಸುವುದು ಉನ್ನತ ಶಿಕ್ಷಣದ ಲಕ್ಷಣವಲ್ಲ; ಉನ್ನತಮಟ್ಟದ ಶೋಷಣೆಯ ಲಕ್ಷಣ.  ಶಿಕ್ಷಣ ಪಡೆದವರ ಉದ್ಯೋಗದ ಸಮಸ್ಯೆಗೂ ಎರಡು ಮುಖಗಳಿವೆ. ಒಂದು, ಶಿಕ್ಷಣ ಸಂಸ್ಥೆಗಳು ನೀಡುವ ಶಿಕ್ಷಣ ಅವರನ್ನು ನೇಮಕ ಮಾಡುವ ಸಂಸ್ಥೆಗಳ ಅಗತ್ಯಕ್ಕೆ ಪೂರಕವಾಗಿಲ್ಲ ಎನ್ನುವುದು  ಮೊದಲ ಸಮಸ್ಯೆ. ಎರಡು, ಶಿಕ್ಷಣದ ಗುಣಮಟ್ಟ ತುಂಬಾ ಕಳಪೆಯಾಗಿದೆ ಎನ್ನುವುದು ಎರಡನೇ ಸಮಸ್ಯೆ.

ಹಣಕಾಸಿನ ಸಮಸ್ಯೆ : ಶಿಕ್ಷಣದ ಮೇಲೆ ಜಿಡಿಪಿಯ ಶೇ.6ರಷ್ಟು ವಿನಿಯೋಜಿಸಬೇಕೆಂದು 1968ರಲ್ಲಿ ಬಂದ ಮೊದಲನೇ ಶಿಕ್ಷಣ ನೀತಿ ಹೇಳಿದೆ. ನಂತರ 1986ರಲ್ಲಿ ಬಂದ ಎರಡನೇ ಶಿಕ್ಷಣ ನೀತಿ ಕೂಡ ಶೇ.6ರಷ್ಟು ವಿನಿಯೋಜಿಸಬೇಕೆಂದು ಹೇಳಿದೆ. ಆದರೆ ಇಲ್ಲಿ ವರೆಗೆ ಯಾವ ಸರಕಾರವೂ ಶಿಕ್ಷಣದ ಮೇಲೆ ಜಿಡಿಪಿಯ ಶೇ.6ರಷ್ಟು ವಿನಿಯೋಜಿಸಿಲ್ಲ. ಯುಪಿಎ-2 ಸರಕಾರದ (2009-2014)ರ ಅವಧಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಒಟ್ಟಾಗಿ ಶಿಕ್ಷಣದ ಮೇಲೆ ದೇಶದ ಜಿಡಿಪಿಯ ಶೇ.3.2 ರಷ್ಟು ಮಾತ್ರ ವಿನಿಯೋಜಿಸಿವೆ. ಎನ್.ಡಿ.ಎ-2 ಸರಕಾರ ಅವಧಿಯಲ್ಲಿ (2014-19) ಅದು ಇನ್ನಷ್ಟು ಕಡಿಮೆಯಾಗಿ ಜಿಡಿಪಿಯ ಶೇ.2.9 ರಷ್ಟು ಮಾತ್ರ ವಿನಿಯೋಜಿಸಲಾಗಿದೆ. (ಮೂಲ: ನಿಖಿಲ್ ಪಾಲ್, ಇಂಡಿಯಾ ಟುಡೆ ಜನವರಿ 31, 2020)

ಮೀಸಲಾತಿ ಸಮಸ್ಯೆ : ಮೀಸಲಾತಿಯನ್ನು ಸರಕಾರಗಳು ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಬಳಸಿದಷ್ಟು ಸಾಮಾಜಿಕ ನ್ಯಾಯ ಒದಗಿಸಲು ಬಳಸಿಲ್ಲ. ಸಾಮಾಜಿಕ ನ್ಯಾಯ ಒದಗಿಸುವುದು ಸರಕಾರದ ಉದ್ದೇಶವಾಗಿದ್ದರೆ ಎಲ್ಲರಿಗೂ ಸರಕಾರವೇ ಶಿಕ್ಷಣ ನೀಡಬೇಕಿತ್ತು. ಆದರೆ ಸರಕಾರವೇ ಎಲ್ಲರಿಗೂ ಶಿಕ್ಷಣ  ನೀಡುವ ಬದಲು ಖಾಸಗಿ ಸಂಸ್ಥೆಗಳಿಗೆ ಶಿಕ್ಷಣ ನೀಡಲು ಅವಕಾಶ ಕಲ್ಪಿಸಿದೆ. ಅಷ್ಟು ಮಾತ್ರವಲ್ಲ ಮೆಡಿಕಲ್, ಇಂಜಿನೀಯರಿಂಗ್ ಮುಂತಾದ ಪ್ರೊಫೆಶನಲ್ ಶಿಕ್ಷಣದ ಪೂರೈಕೆಯನ್ನು ಹತೋಟಿಯಲ್ಲಿಟ್ಟುಕೊಂಡು ಖಾಸಗಿ ಸಂಸ್ಥೆಗಳು ಶಿಕ್ಷಣದ ಹೆಸರಲ್ಲಿ ದರೋಡೆ ಮಾಡಲು ಅವಕಾಶ ಕಲ್ಪಿಸಲಾಯಿತು. ಪೂರೈಕೆ ಕಡಿಮೆ ಮಾಡಿ ಇರುವ ಅಲ್ಪ ಸ್ವಲ್ಪ ಸೀಟುಗಳನ್ನು ಮೀಸಲಾತಿ ಮೂಲಕ ಹಂಚಲಾಯಿತು. ಇದರಿಂದ ಮೇಲ್ಜಾತಿ ಮತ್ತು ತಳಜಾತಿಗಳ ನಡುವೆ ಜೀವನಪರ್ಯಂತ ಕೊನೆಗೊಳ್ಳದ ವೈಮನಸ್ಸು ಸೃಷ್ಟಿಯಾಯಿತು. ಈ ವೈಮನಸ್ಸನ್ನು ರಾಜಕೀಯ ಪಕ್ಷಗಳು ಜನರನ್ನು ಒಡೆದು ಆಳಲು ಬಳಸಿವೆ.  ಮಂಡಲ್ ವರ್ಸಸ್ ಕಮಂಡಲ್ ಅಥವಾ ಅದ್ವಾನಿ ರಥಯಾತ್ರೆ ಇದಕ್ಕೆ ಉತ್ತಮ ಉದಾಹರಣೆ. ಸಮಾಜದಲ್ಲಿರುವ ವಿವಿಧ ಗುಂಪುಗಳು ಜಾತಿ, ಧರ್ಮದ ಹೆಸರಲ್ಲಿ ಪರಸ್ಪರ ಕಚ್ಚಾಡಿದರೆ ಇವರೆಲ್ಲ ಒಟ್ಟು ಸೇರಿ ತಮಗೆ ಶಿಕ್ಷಣ ಕೊಡಿ, ಆರೋಗ್ಯ ಕೊಡಿಯೆಂದು ಕೇಳುವ ಸಂದರ್ಭವೇ ಸೃಷ್ಟಿಯಾಗುವುದಿಲ್ಲ. ಜೊತೆಗೆ ಖಾಸಗಿ ಬಂಡವಾಳ ಶಿಕ್ಷಣದ ವ್ಯಾಪಾರ ಮೂಲಕ ತಮ್ಮ ಲಾಭ ಹೆಚ್ಚಿಸಿಕೊಳ್ಳುವುದು ಸುಲಭವಾಯಿತು. ಶಿಕ್ಷಣದ ಪೂರೈಕೆಯನ್ನು ಹೆಚ್ಚಿಸುವುದು ಈ ಸಮಸ್ಯೆ ದೂರಗಾಮಿ ಪರಿಹಾರ. ಆದರೆ ಆ ದಿಶೆಯಲ್ಲಿ ಸರಕಾರಗಳು ಮಾಡಿದ ಪ್ರಯತ್ನ ಅತ್ಯಂತ ಕಡಿಮೆ.

ಶಿಕ್ಷಣದ ದಾಖಲಾತಿ : ಲೋವರ್ ಪ್ರಾಥಮಿಕ ದಾಖಲಾತಿ ಶೇ.93ರಷ್ಟಿದೆ, ಸೆಕೆಂಡರಿ ದಾಖಲಾತಿ ಶೇ.75ರಷ್ಟಿದೆ. ಆದರೆ ಉನ್ನತ ಶಿಕ್ಷಣದ ದಾಖಲಾತಿ ತುಂಬಾ ಕಡಿಮೆ ಇದೆ.  ಕಾಲೇಜು ಮತ್ತು ಅದಕ್ಕಿಂತ ಹೆಚ್ಚಿನ ಶಿಕ್ಷಣದ ದಾಖಲಾತಿ ಶೇ.25ರ ಆಸುಪಾಸಿನಲ್ಲಿದೆ. ಸಮಾಜದ ಎಲ್ಲ ವರ್ಗಗಳಿಂದಲೂ ಇದೇ ಪ್ರಮಾಣದ ಸರಾಸರಿ ದಾಖಲಾತಿ ಇಲ್ಲ. ದಲಿತ, ಬುಡಕಟ್ಟು, ಹಿಂದುಳಿದ ಜಾತಿಗಳ ದಾಖಲಾತಿ ಸರಾಸರಿ ದಾಖಲಾತಿಗಿಂತ ಕಡಿಮೆ ಇದೆ. ಸಮಾಜದ ಎಲ್ಲ ವರ್ಗಗಳ ದಾಖಲಾತಿಯನ್ನು ಹೆಚ್ಚಿಸುವ ಅಗತ್ಯವಿದೆ.

ಶಿಕ್ಷಣ ಸಂಸ್ಥೆಗಳ ಆಡಳಿತ : ಶಿಕ್ಷಣದ ಆಡಳಿತ ಸಂಪೂರ್ಣ ಬ್ಯುರೋಕ್ರೆಸಿಮಯವಾಗಿದೆ. ಬುಡದಿಂದ ತುದಿ ತನಕ ನೌಕರಶಾಹಿಯೇ ತುಂಬಿದೆ. ಟೀಚರ್ಸ್, ಪೋಷಕರು, ವಿದ್ಯಾರ್ಥಿಗಳು ಎಲ್ಲೂ ಕಾಣುವುದಿಲ್ಲ ವೆಂದು ಹೊಸ ಶಿಕ್ಷಣ ನೀತಿಯ ಕರಡು ಪ್ರತಿಯಲ್ಲಿ ದಾಖಲಾಗಿತ್ತು. ಕೇವಲ ನೌಕರಶಾಹಿ ತುಂಬಿರುವುದು ಮಾತ್ರವಲ್ಲ ಶಿಕ್ಷಣದ ಆಡಳಿತ ಹೆಚ್ಚು ಹೆಚ್ಚು ಕೇಂದ್ರೀಕರಣಗೊಳ್ಳುತ್ತಿದೆ. ಪಾಲುದಾರರ ಭಾಗವಹಿಸುವಿಕೆಯನ್ನು ತೋರಿಸಲು ಲೋವರ್ ಶಿಕ್ಷಣದಲ್ಲಿ ಶಾಲಾ ಉಸ್ತುವಾರಿ ಸಮಿತಿ ಎನ್ನುವ  ನಾಮಕಾವಸ್ಥೆ ವ್ಯವಸ್ಥೆ ಇದೆ. ಇದು ಮಕ್ಕಳ ಡ್ರಾಪ್‍ಔಟ್, ಶಿಕ್ಷಕರ ಹಾಜರಾತಿ, ಸಣ್ಣಪುಟ್ಟ ಮೂಲಸೌಕರ್ಯಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ. ಪಠ್ಯ ರಚನೆ ಬಗ್ಗೆ ಅಥವಾ ಶಾಲೆ ಲೋಕೇಶನ್ ತೀರ್ಮಾನದ ಬಗ್ಗೆ ಅಥವಾ ಇತರ ದೊಡ್ಡ ತೀರ್ಮಾನದಲ್ಲಿ ಶಾಲಾ ಉಸ್ತುವಾರಿ ಸಮಿತಿ ಪಾತ್ರ ಇಲ್ಲ. ಇದೇ ರೀತಿಯಲ್ಲಿ ಉನ್ನತ ಶಿಕ್ಷಣದ ಆಡಳಿತ ಕೂಡ ಇದೆ. ಸೆನೆಟ್, ಸಿಂಡಿಕೇಟ್‍ಗಳಿಗೆ ಸರಕಾರ ನಡೆಸುವ ರಾಜಕೀಯ ಪಕ್ಷ ತನ್ನ ಕಾರ್ಯಕರ್ತರನ್ನು ನೇಮಿಸುತ್ತದೆ. ಕುಲಪತಿ, ಕುಲಸಚಿವರ ನೇಮಕಾತಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ಇದೆ ಎನ್ನುವ ಸುದ್ದಿ ಇದೆ. ಕರ್ನಾಟಕ ಸರಕಾರ ಕೆಲವು ವರ್ಷಗಳ ಹಿಂದೆ ಕರ್ನಾಟಕ ವಿಶ್ವವಿದ್ಯಾಲಯಗಳ ಕಾಯಿದೆಯನ್ನು ತಿದ್ದುಪಡಿ ಮಾಡಿ ನೇಮಕಾತಿ ಮತ್ತು ಒಂದು ಕೋಟಿಗಿಂತ ಹೆಚ್ಚಿನ ಮೊತ್ತದ ಖರೀದಿಯನ್ನು ಕೇಂದ್ರೀಕರಿಸಿದೆ. ಹಣಕಾಸಿನ ನಿರ್ಣಯ ಸಂಪೂರ್ಣ ಕೇಂದ್ರೀಕರಣಗೊಂಡಿದೆ. ಆರ್ಥಿಕ ಸ್ವಾಯತ್ತತೆ ಇಲ್ಲದೆ ಅಕಾಡೆಮಿಕ್  ಸ್ವಾಯತ್ತತೆಗೆ ವಿಶೇಷ ಮಹತ್ವ ಇರುವುದಿಲ್ಲ. ಈ ಕುರಿತು ಹೊಸ ಶಿಕ್ಷಣ ನೀತಿ ಏನು ಹೇಳುತ್ತದೆಯೆಂದು ನೋಡಬೇಕಾಗಿದೆ.

ಮೌಲ್ಯದ ಪ್ರಶ್ನೆ : ಶಿಕ್ಷಣದ ಉದ್ದೇಶ ಯುವ ಜನತೆಗೆ ಸ್ಕಿಲ್ ದಾಟಿಸುವುದು ಮಾತ್ರವಲ್ಲ ಮೌಲ್ಯ ರೂಪಿಸುವುದು ಕೂಡ ಶಿಕ್ಷಣದ ಉದ್ದೇಶವಾಗಿದೆ. ಮೌಲ್ಯರಹಿತ ಶಿಕ್ಷಣ ಮನುಷ್ಯತ್ವವೇ ಇಲ್ಲದ ಮೆಶಿನ್‍ಗಳನ್ನು ಅಥವಾ ರಾಕ್ಷಸರನ್ನು ಸೃಷ್ಟಿಸುತ್ತದೆ. ಮನುಷ್ಯತ್ವ ಇಲ್ಲದ ರಾಜಕೀಯ ನಾಯಕರನ್ನು, ಜಡ್ಜ್‍ಗಳನ್ನು, ಅಧಿಕಾರಿಗಳನ್ನು ಮಾಧ್ಯಮದವರನ್ನು ಮೌಲ್ಯರಹಿತ ಶಿಕ್ಷಣ ಸೃಷ್ಟಿಸುತ್ತದೆ. ಇತ್ತೀಚಿನ  ಕೊರೋನ ಸಂದರ್ಭದಲ್ಲಿ ಶಿಕ್ಷಣದ ಮೌಲ್ಯರಹಿತತೆ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಪ್ರಕಟವಾಗಿದೆ. ರೋಗಿಗಳು ಜೀವನ್ಮರಣದ ನಡುವೆ ಹೋರಾಟ ನಡೆಸುವಾಗ ಆಸ್ಪತ್ರೆಗೆ ಸೇರಿಸಿಕೊಳ್ಳಲು ನಿರಾಕರಿಸುವ ವೈದ್ಯರು, ಶೇ.70ರಷ್ಟಿರುವ ಬಡಜನರ ಆದಾಯ ಮೂಲದ ಬಗ್ಗೆ ಕಿಂಚಿತ್ ಯೋಚಿಸದೆ ಲಾಕ್‍ಡೌನ್ ಘೋಷಿಸುವ ನಾಯಕರು, ಇಂತಹ ನಾಯಕರನ್ನು ಹಾಡಿಹೊಗಳುವ ಮಾಧ್ಯಮಗಳು,  ಕೊರೋನ ಮೂಲಸೌಕರ್ಯಗಳ ಖರೀದಿಯಲ್ಲಿ ಕೋಟಿಗಟ್ಟಲೆ ಲಂಚ ಪಡೆಯುವ ರಾಜಕಾರಣಿಗಳು, ಇವೆಲ್ಲವನ್ನು ನೋಡಿಯೂ ನೋಡದಂತಿದ್ದ ಜಡ್ಜ್‍ಗಳು – ಇವೆಲ್ಲವೂ  ಮೌಲ್ಯರಹಿತ ಶಿಕ್ಷಣದ ಫಲಗಳು.

ವರ್ತಮಾನದ ಸಮಸ್ಯೆಗಳನ್ನು ಹೊಸ ಶಿಕ್ಷಣ ಪರಿಹರಿಸುತ್ತಿದೆಯೇ?

ಶಿಕ್ಷಣ ಕ್ಷೇತ್ರ ವರ್ತಮಾನದಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ಮೇಲಿನ ಪ್ಯಾರಾಗಳಲ್ಲಿ ನೋಡಿದ್ದೇವೆ. ಹೊಸ ಶಿಕ್ಷಣ ನೀತಿ ಮೇಲಿನ ಸಮಸ್ಯೆಗಳನ್ನು ಪರಿಹರಿಸುವಂತಿದೆಯೇ? ಎನ್ನುವುದು ನಮ್ಮ ಮುಂದಿರುವ ಪ್ರಶ್ನೆ.  ಮೇಲಿನ ಎಲ್ಲ ಸಮಸ್ಯೆಗಳನ್ನು ಹೊಸ ಶಿಕ್ಷಣ ನೀತಿ ಗುರುತಿಸಿದೆ ಎನ್ನುವುದು ಅದರ ಹೆಗ್ಗಳಿಕೆ ಮತ್ತು ಅದು ಅಷ್ಟಕ್ಕೇ ಅಂದರೆ ಗುರುತಿಸುವಿಕೆ ಸೀಮಿತವಾಗಿರುವುದು ಹೊಸ ನೀತಿಯ ಕೊರತೆ ಎನ್ನುವುದು ನನ್ನ ವಾದ.

ಮಾಧ್ಯಮದ ಸಮಸ್ಯೆ :  ಹೊಸ ಶಿಕ್ಷಣ ನೀತಿ ಹಿಂದಿನ ತ್ರಿಭಾಷಾ ಸೂತ್ರಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ 1-5ನೇ ಅಥವಾ 8ನೇ ತರಗತಿ ತನಕ ಮಾತೃಭಾಷೆಯಿಲ್ಲಿ ಶಿಕ್ಷಣ ಕೊಡಬೇಕಂದು ಹೇಳುತ್ತದೆ. ಆದರೆ ಇದೇ ಡಾಕ್ಯುಮೆಂಟಲ್ಲಿ ಒಂದು ಶರತ್ತು ಕೂಡ ಇದೆ. ಅದೇನೆಂದರೆ ಎಲ್ಲೆಲ್ಲಿ ಸಾಧ್ಯವಾಗುತ್ತದೋ ಅಲ್ಲೆಲ್ಲ ಸಾಧ್ಯವಾದಷ್ಟು ಮಟ್ಟಿಗೆ ಮಾತೃಭಾಷೆಯಲ್ಲಿ ಶಿಕ್ಷಣ ಕೊಡಬೇಕೆನ್ನುತ್ತದೆ ಹೊಸ ಶಿಕ್ಷಣ ನೀತಿ. ಒಂದು ಜಿಲ್ಲೆಯಲ್ಲಿ ಕನಿಷ್ಠ ಐದರಿಂದ ಆರು ಮಾತೃಭಾಷೆಗಳಿರುವ ಜನರಿದ್ದಾರೆ. ಇಡೀ ರಾಜ್ಯವನ್ನು ಪರಿಗಣಿಸಿದರೆ 25ರಿಂದ 30 ಮಾತೃಭಾಷೆಗಳನ್ನು ಮಾತಾಡುವ ಜನರ ದೊಡ್ಡ ಗುಂಪುಗಳನ್ನು ನೋಡಬಹುದು. ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಶಾಲೆಗಳನ್ನು ತೆರೆದು ಅಥವಾ ಮೇಸ್ಟ್ರುಗಳನ್ನು ನೇಮಕ ಮಾಡಿ ಶಿಕ್ಷಣ ಕೊಡುವವರು ಯಾರು? ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ನಂತರ ವಿದ್ಯಾರ್ಥಿಯ ಪಾಡೇನು? ಜನರ ಬೇಡಿಕೆ ಮಾತೃಭಾಷೆಯಲ್ಲಿ ಶಿಕ್ಷಣ ಅಲ್ಲ; ಇಂಗ್ಲೀಷ್ ಭಾಷೆಯಲ್ಲಿ ಶಿಕ್ಷಣವೆಂದು ಹಿಂದಿನ ಪುಟಗಳಲ್ಲಿ ನೋಡಿದ್ದೇವೆ. ಜನರ ಇಂಗ್ಲೀಷ್ ಮೋಹ ಹೋಗಬೇಕಾದರೆ ಇಲ್ಲಿ ಭಾರತೀಯ ಭಾಷೆಗಳು ಮಾತ್ರ ಕಾರುಬಾರು ಮಾಡಬೇಕು. ಅಂದರೆ ಇಂಗ್ಲೀಷ್ ಭಾಷೆಯ ಶಿಕ್ಷಣವನ್ನು ಸಂಪೂರ್ಣ ನಿಷೇಧಿಸಬೇಕು. ಇಂಗ್ಲೀಷ್ ಭಾಷೆಯನ್ನು ನಿಷೇಧಿಸುವುದೆಂದರೆ ಮಧ್ಯಮ ವರ್ಗವನ್ನು ಎದುರು ಹಾಕಿಕೊಳ್ಳುವುದು. ಅಷ್ಟೊಂದು ಧೈರ್ಯ ಈ ಸರಕಾರಕ್ಕೆ ಇದೆಯೇ?

ಶಿಕ್ಷಣದ ವಾಣೀಜ್ಯೀಕರಣ :  ಏಜುಕೇಶನ್ ಒಂದು ಸಾರ್ವಜನಿಕ ಸರಕು ಅಥವಾ ಸರಕಾರವೇ ಕೊಡಬೇಕಾದ ಸವಲತ್ತೆಂದು ಹೇಳುತ್ತಲೇ ಎಲ್ಲರಿಗೂ ಶಿಕ್ಷಣ ನೀಡಲು ಖಾಸಗಿಯವರು ಭಾಗವಹಿಸುವುದು ಅನಿವಾರ್ಯ ಎನ್ನುವುದನ್ನು ಹೊಸ ಶಿಕ್ಷಣ ನೀತಿ ಒಪ್ಪಿಕೊಳ್ಳುತ್ತದೆ. ದೇಶದೊಳಗಿನ ಬಂಡವಾಳ ಮಾತ್ರವಲ್ಲ ಪರದೇಶಿ ಬಂಡವಾಳ ಕೂಡ ಬೇಕೆಂದು ವಾದಿಸುತ್ತಿದೆ. ಶಿಕ್ಷಣ ಸಂಸ್ಥೆಗಳ ಒಡೆತನದ ಬಗ್ಗೆ ಶಿಕ್ಷಣ ನೀತಿ ತಲೆ ಕೆಡಿಸಿಕೊಳ್ಳುವುದಿಲ್ಲ. ಅವನ್ನು ರೆಗ್ಯುಲೇಟ್ ಮಾಡುವ ಮೂಲಕ ಖಾಸಗಿ ಸಂಸ್ಥೆಗಳನ್ನು ಕೂಡ ಸಾಮಾಜಿಕ ನ್ಯಾಯ ನೀಡಲು ಬಳಸಬಹುದೆನ್ನುವ ಹುಸಿ ಭರವಸೆಯನ್ನು ಹೊಸ ಶಿಕ್ಷಣ ನೀತಿ ವ್ಯಕ್ತ ಪಡಿಸುತ್ತಿದೆ.  All fees and charges set by private HEIs will be transparently and fully disclosed and there shall be no arbitrary increases in these fees/charges during the period of enrollment of any student. This fee determining mechanism will ensure reasonable recovery of cost while ensuring that HEIs discharge their social obligations. ಇವೆಲ್ಲ ಖಾಸಗಿ ಸಂಸ್ಥೆಗಳನ್ನು ರೆಗ್ಯುಲೇಟ್ ಮಾಡುತ್ತೇವೆ ಎಂದು ತೇಪೆ ಹಚ್ಚುವ ಭರವಸೆಗಳು. ಶಿಕ್ಷಣ ಮತ್ತು ಆರೋಗ್ಯ ಎರಡು ಕೂಡ ಕೋಟಿಗಟ್ಟಲೆ ಬಂಡವಾಳ ಹೂಡಿಕೆ ನಡೆದಿರುವ ಕ್ಷೇತ್ರಗಳು. ಹಲವು ಎಂಎಲ್‍ಎ, ಎಂಪಿಗಳು ಶಿಕ್ಷಣ, ಆರೋಗ್ಯ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ. ಇವರು ಚುನಾವಣೆಯಲ್ಲೂ ಹಣಕಾಸು ಹೂಡುತ್ತಾರೆ ಮತ್ತು ಚುನಾಯಿತರಾಗುತ್ತಿದ್ದಾರೆ. ಇವರೇ ಶಿಕ್ಷಣ, ಆರೊಗ್ಯ ಕ್ಷೇತ್ರದ ಕಾನೂನು ರೂಪಿಸುವವರು. ಇವರಿಂದ ಎಲ್ಲರಿಗೂ ಗುಣಮಟ್ಟದ ಉಚಿತ ಶಿಕ್ಷಣ ನಿರೀಕ್ಷಿಸುವುದು ಅಸಾಧ್ಯ.

ಶಿಕ್ಷಣ ಮತ್ತು ಉದ್ಯೋಗದ ಪ್ರಶ್ನೆ  ಶಿಕ್ಷಣ ಸಂಸ್ಥೆಗಳಲ್ಲಿ ನೇಮಕಾತಿ, ತರಬೇತಿ, ಗುಣಮಟ್ಟ ಸುಧಾರಣೆ ಇತ್ಯಾದಿಗಳ ಬಗ್ಗೆ ಹೊಸ ಶಿಕ್ಷಣ ನೀತಿಯಲ್ಲಿ  ಪ್ರಸ್ತಾವ ಇದೆ. HEI will have clearly defined, independent and transparent process and criteria for faculty recruitment. ವರ್ತಮಾನದ ಶಿಕ್ಷಣ ವ್ಯವಸ್ಥೆಯಲ್ಲೂ ಶಿಕ್ಷಕರನ್ನು ಆಯ್ಕೆ ಮಾಡುವ, ತರಬೇತು ನೀಡುವ ಸ್ವತಂತ್ರ ಸಂಸ್ಥೆಗಳಿವೆ. ವರ್ತಮಾನದಲ್ಲೂ ಶಿಕ್ಷಣಕರಿಗೆ ಉತ್ತಮ ಸಂಬಳ ಇದೆ. ಆದರೆ ಇವೆಲ್ಲ ಅನ್ವಯವಾಗುವುದು ಸರಕಾರಿ ಸಂಸ್ಥೆಗಳಲ್ಲಿ ದುಡಿಯುವ ಕೆಲವೇ ಕೆಲವು ಖಾಯಂ ಶಿಕ್ಷಕರಿಗೆ ಮಾತ್ರ.  ಖಾಸಗಿ ಮತ್ತು ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ದುಡಿಯುವ ಬಹುತೇಕರು ಸರಕಾರ ಹೇಳುವ ಯಾವುದೇ ಸವಲತ್ತನ್ನು ಪಡೆಯುತ್ತಿಲ್ಲ ಎನ್ನುವುದನ್ನು ಹಿಂದಿನ ಪುಟಗಳಲ್ಲಿ ನೋಡಿದ್ದೇವೆ. ಖಾಸಗಿ ಸಂಸ್ಥೆಗಳಲ್ಲಿ ದುಡಿಯುವವರಿಗೆ, ಸರಕಾರಿ ಸಂಸ್ಥೆಗಳಲ್ಲಿ ಒಪ್ಪಂದದ ಆಧಾರದಲ್ಲಿ ದುಡಿಯುವವರಿಗೆ ಇವೆಲ್ಲ ಅನ್ವಯವಾಗುವುದಿಲ್ಲ. ಹಾಗೆಂದು ಹೊಸ ಶಿಕ್ಷಣ ನೀತಿಯಲ್ಲಿ ಎಲ್ಲೂ ಈಗ ಇರುವ ಅತಿಥಿ ಉಪನ್ಯಾಸಕರು, ಒಪ್ಪಂದ ಆಧಾರದ ನೇಮಕಾತಿ, ಖಾಸಗಿ ಸಂಸ್ಥೆಗಳಲ್ಲಿ ಕಡಿಮೆ ಸಂಬಳಕ್ಕೆ ದುಡಿಸುವ ಕ್ರಮವನ್ನು ರದ್ದುಗೊಳಿಸಿ ಎಲ್ಲರಿಗೂ ಗೌರವಯುತ ಸಂಬಳ ನೀಡುವ  ಉದ್ಯೋಗ ವ್ಯವಸ್ಥೆಯನ್ನು ಖಾಸಗಿ ಮತ್ತು ಸಾರ್ವಜನಿಕ ಶಿಕ್ಷಣ ಸಂಸ್ಥೆಗಳಲ್ಲಿ ಜಾರಿಗೆ ತರಲಾಗುವುದು ಎನ್ನುವ ಹೇಳಿಕೆಗಳಿಲ್ಲ. ಇನ್ನು ಶಿಕ್ಷಣದ ಗುಣಮಟ್ಟ ಸುಧಾರಣೆ ಸಂಬಂದಿಸಿದಂತೆ – 1) a holistic and multi-disciplinary education will be given 2) 4 years undergraduate education will be given with the option of quitting out in the middle 3) HEI will focus on research and innovation 4) creative thinking will be encouraged

ಹಣಕಾಸಿನ ಪ್ರಶ್ನೆ : ಹಿಂದಿನ ಶಿಕ್ಷಣ ನೀತಿಗಳಂತೆ ಇದು ಕೂಡ ಜಿಡಿಪಿಯ ಶೇ.6ರನ್ನು ಶಿಕ್ಷಣದ ಮೇಲೆ ವಿನಿಯೋಜಸಬೇಕೆಂದು ಆಶಯ ವ್ಯಕ್ತ ಪಡಿಸಿದೆ. ಈ ಸರಕಾರ ಈಗಾಗಲೇ ಆರು ವರ್ಷಗಳ ಆಡಳಿತ ಪೂರೈಸಿದೆ. ಈ ಆರು ವರ್ಷಗಳಲ್ಲಿ ಶಿಕ್ಷಣದ ಮೇಲೆ ಹಿಂದಿನ ಸರಕಾರಗಳು ಮಾಡಿದ ಹೂಡಿಕೆಯಿಂದ ಹೆಚ್ಚು ಹೂಡಿಕೆ ಮಾಡಿದ ದಾಖಲೆಗಳಿಲ್ಲ. ಶಿಕ್ಷಣದ ಮೇಲೆ ಹೆಚ್ಚು ವಿನಿಯೋಜನೆ ಮಾಡುವ ರಾಜಕಿಯ ಮನಸ್ಸಿದ್ದರೆ ಹೊಸ ಶಿಕ್ಷಣ ನೀತಿ ಬರಲು ಕಾಯಬೇಕಾಗಿಲ್ಲ. ಇವರ ಆಡಳಿತದಲ್ಲಿ ನಡೆದ ಹಣಕಾಸಿನ ವಿನಿಯೋಜನೆಯನ್ನು ಗಮನಿಸಿದರೆ ಜಿಡಿಪಿಯ ಶೇ.6ರಷ್ಟು ವಿನಿಯೋಜನೆ ಕೇವಲ ಘೋಷಣೆಯಾಗಿ ಉಳಿಯುವ ಸಾಧ್ಯತೆ ಹೆಚ್ಚಿದೆ.

ಮೀಸಲಾತಿ ಪ್ರಶ್ನೆ : ಹಿಂದುಳಿದ ಸಮುದಾಯಗಳನ್ನು ಒಳಗೊಳ್ಳುವ ಕುರಿತು ದಲಿತ, ಬುಡಕಟ್ಟು, ಅಲ್ಪಂಖ್ಯಾತ, ಹಿಂದುಳಿದ ಜಾತಿ – ಪರಿಭಾಷೆಗಳ ಬದಲು ಹೊಸ ಶಿಕ್ಷಣ ನೀತಿಯಲ್ಲಿ ‘ಸೊಶಿಯಲಿ ಏಕನಾಮಿಕಲಿ ಡಿಸ್‍ಎಡ್ವೇಂಟೇಜ್ಡ್ ಗ್ರೂಪ್ಸ್’ (ಸಾಮಾಜಿಕವಾಗಿ ಆರ್ಥಿಕವಾಗಿ ಪ್ರತಿಕೂಲ ಪರಿಸ್ಥಿತಿ ಇರುವ ಗುಂಪುಗಳು) ಎನ್ನುವ ಪರಿಭಾಷೆ ಹೆಚ್ಚು ಬಳಕೆಯಾಗಿದೆ. ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ದಲಿತ, ಬುಡಕಟ್ಟು, ಅಲ್ಪಸಂಖ್ಯಾತ, ಹಿಂದುಳಿದ ಜಾತಿ ಇತ್ಯಾದಿ ಚಾರಿತ್ರಿಕವಾಗಿ ಹಿಂದುಳಿದವರನ್ನು ಗುರುತಿಸಲು ಕೂಡ ಈ ಡಾಕ್ಯುಮೆಂಟ್ ಹಿಂಜರಿಯುತ್ತಿದೆ. ಅದರ ಬದಲು ಎಲ್ಲರನ್ನು ಮೂಟೆ ಕಟ್ಟಿ ‘ಸೊಶಿಯಲಿ ಏಕನಾಮಿಕಲಿ ಡಿಸ್‍ಎಡ್ವಂಟೇಜ್ಡ್ ಗ್ರೂಪ್ಸ್’ ಎಂದು ಗುರುತಿಸಲು ಪ್ರಯತ್ನಿಸುತ್ತಿದೆ.

ದಾಖಲಾತಿ : ಉನ್ನತ ಶಿಕ್ಷಣದ ದಾಖಲಾತಿ ದರವನ್ನು ಇಂದಿನ ಶೇ.26ರಿಂದ 2035ರ ವೇಳೆಗೆ  ಶೇ.50ಕ್ಕೆ ಏರಿಸುವ ಉದ್ದೇಶವನ್ನು ಹೊಸ ಶಿಕ್ಷಣ ನೀತಿ ಹೊಂದಿದೆ.  ದಾಖಲಾತಿ ಏರಿಕೆ ಆಗಬೇಕಾದರೆ ಉನ್ನತ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಹೆಚ್ಚಾಗಬೇಕು. ಆದರೆ ಸಂಖ್ಯೆ ಹೆಚ್ಚಿಸುವ ಪ್ರಸ್ತಾವಗಳು ತುಂಬಾ ವಿರಳ. ಹೆಚ್ಚಿಸುವ ಬದಲು ಈಗ ಇರುವ ಸಣ್ಣಪುಟ್ಟ ಮತ್ತು ಏಕ ಶಿಸ್ತಿನ ವಿಶ್ವವಿದ್ಯಾಲಯಗಳನ್ನು ಕಡಿಮೆ ಮಾಡಿ ದೊಡ್ಡ ವಿಶ್ವವಿದ್ಯಾಲಯಗಳನ್ನು ಆರಂಬಿಸುವ ಇರಾದೆಯನ್ನು ಪಾಲಿಸಿ ವ್ಯಕ್ತ ಪಡಿಸುತ್ತಿದೆ. ಲೋವರ್ ಏಜುಕೇಶನ್‍ನಲ್ಲೂ ಇದೇ ಪ್ರವೃತ್ತಿಯನ್ನು ನೋಡಬಹುದು. ವರ್ತಮಾನದಲ್ಲಿ ಅಂಗನವಾಡಿ, ಏಕೋಪಧ್ಯಾಯ ಶಾಲೆಗಳನ್ನು ವಸತಿ ಪ್ರದೇಶದಲ್ಲಿ ಆರಂಭಿಸಿ ಲೋವರ್ ಏಜುಕೇಶನ್ ದಾಖಲಾತಿ ಹೆಚ್ಚಿಸಲಾಗಿದೆ. ಆದರೆ ಹೊಸ ಶಿಕ್ಷಣ ನೀತಿ ಪ್ರಕಾರ ವಸತಿ ಸಮೀಪ ಶಾಲೆಗಳು ಗುಣಮಟ್ಟ ಸುಧಾರಣೆ ದೃಷ್ಟಿಯಿಂದ ಸರಿಯಾದ ಕ್ರಮವಲ್ಲ. ಏಕೆಂದರೆ ಇಂತಹ ಸಣ್ಣಪುಟ್ಟ ಶಾಲೆಗಳ ಸುಧಾರಣೆಗೆ ವಿನಿಯೋಜನೆ ಹೆಚ್ಚಿಸಿದರೆ (ಉತ್ತಮ ಸವಲತ್ತು ಕೊಡುವುದು, ಹೆಚ್ಚು ಅಧ್ಯಾಪಕರನು ನೇಮಕ ಮಾಡುವುದು) ಹೆಚ್ಚಿನ ವಿದ್ಯಾರ್ಥಿಗಳಿಗೆ ಅನುಕೂಲವಾಗುವುದಿಲ್ಲ ಎನ್ನುವ ನಿಲುವನ್ನು ಹೊಸ ಶಿಕ್ಷಣ ನೀತಿ ತಾಳುತ್ತದೆ. ಇಂತಹ ವಸತಿ ಸಮೀಪ ಶಾಲೆಗಳ ಬದಲು ಊರಿಂದ 5-10 ಕಿಮೀ ದೂರದಲ್ಲಿ ಸುಸಜ್ಜಿತ ಶಾಲೆಗಳನ್ನು ಆರಂಭಿಸಿದರೆ ಲೋವರ್ ಏಜಕೇಶನ ಗುಣಮಟ್ಟ ಸುಧಾರಣೆ ಆಗಬಹುದೆನ್ನುವುದು ಹೊಸ ಶಿಕ್ಷಣ ನೀತಿಯ ನಿಲುವು. ಶಿಕ್ಷಣ ಸಂಸ್ಥೆಗಳ ಸಂಖ್ಯೆ ಕಡಿಮೆ ಮಾಡಿ ಗುಣಮಟ್ಟ ಹೆಚ್ಚಿಸಲು ಮಾಡುವ ಪ್ರಯತ್ನ ದಾಖಲಾತಿ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಅದರಲ್ಲೂ ಹೆಣ್ಣುಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಬಿರಬಹುದು.

ಶಿಕ್ಷಣದ ಆಡಳಿತದ ಪ್ರಶ್ನೆ : ಹೊಸ ಶಿಕ್ಷಣ ನೀತಿಯಲ್ಲಿ ಎಲ್ಲೂ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಶಿಕ್ಷಣ ಸಂಸ್ಥೆಗಳ ಆಡಳಿತದಲ್ಲಿ ಮುಖ್ಯ ಪಾಲುದಾರರನ್ನಾಗಿಸುವ ದಾಖಲೆಗಳಿಲ್ಲ. ಆಡಳಿತದಲ್ಲಿ ಬಿಡಿ ಹೊಸ ಶಿಕ್ಷಣ ನೀತಿಯನ್ನು ರೂಪಿಸುವಾಗ ಶಿಕ್ಷಣಕರ ಅಥವಾ ವಿದ್ಯಾರ್ಥಿಗಳ ಸಂಘಟನೆಗಳೊಂದಿಗೆ ಚರ್ಚಿಸಿದ ದಾಖಲೆಗಳಿಲ್ಲ.  ಉನ್ನತ ಶಿಕ್ಷಣದ ಆಡಳಿತವನ್ನು ಹಿಂದೆ ಹಲವು ಸಂಸ್ಥೆಗಳು ನೋಡಿಕೊಳ್ಳುತ್ತಿದ್ದವು. ಅವನ್ನು ರದ್ದುಗೊಳಿಸಿ ಒಂದೇ ಸಂಸ್ಥೆಯ ಕೆಳಗೆ ಹಿಂದಿನ ಹಲವು ಫಂಕ್ಷನ್‍ಗಳನ್ನು ತರಲು ಹೊಸ ಶಿಕ್ಷಣ ನೀತಿ ಬಯಸುತ್ತದೆ. Regulatory system of higher education will ensure that the distinct functions of regulation, accreditation, funding and academic standard setting will be performed by distinct, independent and empowered bodies. These four structures will be set up as four independent vertical within one umbrella institution – that is – Higher Education Commission of India. These bodies will function with less human interface and with more technology based. ಶಿಕ್ಷಣದ ಆಡಳಿತ ಹೆಚ್ಚು ಹೆಚ್ಚು ರಾಜಕೀಯಗೊಳ್ಳುವ ಮತ್ತು  ಕೇಂದ್ರೀಕರಣಗೊಳ್ಳುವ ಎಲ್ಲ ಸಾಧ್ಯತೆಗಳಿವೆ. ನಮ್ಮಂತಹ ಬಹುಸಂಸ್ಕøತಿಯುಳ್ಳ ದೇಶದಲ್ಲಿ ಏಕ ಪಠ್ಯಗಳು, ಏಕರೂಪಿ ಪ್ರವೇಶ ಪರೀಕ್ಷೆಗಳು, ಏಕರೂಪಿ ಆಡಳಿತ ಬಹುತೇಕರನ್ನು ಹೊರಗಿಡುವ ಎಲ್ಲ ಸಾಧ್ಯತೆಗಳಿವೆ.

ಮೌಲ್ಯದ ಪ್ರಶ್ನೆ :  ಹೊಸ ಶಿಕ್ಷಣ ನೀತಿ ಶಿಕ್ಷಣ ದಾಟಿಸಬೇಕಾದ ಮೌಲ್ಯಗಳ ಒಂದು ದೊಡ್ಡ ಪಟ್ಟಿಯನ್ನೇ ನೀಡಿದೆ – ethics and human constitutional values such as empathy, respect for others, cleanliness, courtesy, democratic spirit, spirit of service, respect for public property, scientific temper, liberty, responsibility, pluralism, equality and justice-  ಈ ಪಟ್ಟಿಯನ್ನು ನೋಡಿದರೆ ಸಣ್ಣಪುಟ್ಟ ಊರುಗಳ ಹೊಟೇಲುಗಳಲ್ಲಿ ನೇತಾಡುವ ಬೋರ್ಡ್‍ಗಳಲ್ಲಿರುವ ತಿಂಡಿಗಳ ಪಟ್ಟಿ ನೆನಪಿಗೆ ಬರುತ್ತದೆ. ಆ ಬೋರ್ಡ್‍ಲ್ಲಿ ಹತ್ತಿಪ್ಪತ್ತು ತಿಂಡಿಗಳ ಹೆಸರಿರುತ್ತದೆ. ಆದರೆ ಹೊಟೇಲ್‍ಲ್ಲಿ ಅವರಿಗೆ ಅನುಕೂಲವಾಗುವ ನಾಲ್ಕೈದೇ ತಿಂಡಿಗಳನ್ನೇ ತಯಾರು ಮಾಡುವುದು. ಅದೇ ರೀತಿಯಲ್ಲಿ ಹೊಸ ಶಿಕ್ಷಣ ನೀತಿ ಮೌಲ್ಯಗಳ ಪಟ್ಟಿಯಲ್ಲಿ ಪ್ರಜೆಗಳ ಜವಾಬ್ದಾರಿಗೆ ಕೊಟ್ಟ ಮಹತ್ವವನ್ನು ಪ್ರಜೆಗಳ ಹಕ್ಕಿಗೆ ನೀಡಿಲ್ಲ. ಸಂವಿಧಾನಿಕ ಮೌಲ್ಯವನ್ನು ದಾಟಿಸುವುದು ಶಿಕ್ಷಣದ ಮಹತ್ವದ ಜವಾಬ್ದಾರಿ ಆಗಬೇಕು. ಸಂವಿಧಾನಿಕ ಮೌಲ್ಯಗಳನ್ನು ದಾಟಿಸುವುದರ ಬಗ್ಗೆ ಸ್ಪಷ್ಟತೆ ಇಲ್ಲ. ಸಂವಿಧಾನಿಕ ಮೌಲ್ಯಗಳಲ್ಲಿ ಸಮಾನತೆಯ ಪ್ರಜ್ಞೆ ರೂಪಿಸುವುದು ಶಿಕ್ಷಣದ ಮಹತ್ವದ ಜವಾಬ್ದಾರಿ. ಇದು ಶಿಕ್ಷಣ ಸಂಸ್ಥೆಯ ಭೌತಿಕ ಸ್ವರೂಪ, ಸಾಂಸ್ಥಿಕ ಸ್ವರೂಪ ಹಾಗು ಪಠ್ಯಗಳ ಮೇಲೆ ಅವಲಂಬಿತವಾಗಿದೆ. ಆದರೆ ಹೊಸ ಶಿಕ್ಷಣ ನೀತಿಯಲ್ಲಿ ಎರಡು ಕಾರಣಗಳಿಗಾಗಿ ಸಂವಿಧಾನಿಕ ಮೌಲ್ಯಗಳನ್ನು ದಾಟಿಸುವುದು ಕಷ್ಟವಾಗಬಹುದು. ಒಂದು, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಗಾಗಲೇ ಇರುವ ಗ್ರೇಡೆಡ್ ಇನ್ವಿಕ್ವಾಲಿಟಿಗೆ ಸಾಂಸ್ಥಿಕ ಸ್ವರೂಪ ನೀಡಲು ಹೊಸ ಶಿಕ್ಷಣ ನೀತಿ ಬಯಸುತ್ತದೆ. ಅಂದರೆ ಅತ್ಯುತ್ತಮ, ಉತ್ತಮ ಹಾಗು ಸಾಮಾನ್ಯ ಶಿಕ್ಷಣ ಸಂಸ್ಥೆಗಳೆನ್ನುವ ವಿಂಗಡನೆ ಇದೆ. ಇವುಗಳ ಭೌತಿಕ ಹಾಗು ಸಾಂಸ್ಥಿಕ ಸ್ವರೂಪ ಮತ್ತು ಪಠ್ಯಗಳು ಖಂಡಿತವಾಗಿಯೂ ಭಿನ್ನವಾಗಿರುತ್ತದೆ. ಇಂತಹ ಗ್ರೇಡೆಡ್ ಇನ್ವಿಕ್ವಾಲಿಟಿಯನ್ನು ಪ್ರತಿಪಾದಿಸುವ ಸಂಸ್ಥೆಗಳು ಸಮಾನತೆಯ ಪ್ರಜ್ಞೆಗಿಂತ ಹೆಚ್ಚು ಅಸಮಾನತೆ ಪ್ರಜ್ಞೆಯನ್ನು ಖಾಯಂಗೊಳಿಸಬಹುದು. ಎರಡು, ಹೊಸ ಶಿಕ್ಷಣ ನೀತಿಯಲ್ಲಿ  ಔಪಚಾರಿಕ ಶಿಕ್ಷಣಕ್ಕಿಂತ ಅನೌಪಚಾರಿಕ ಶಿಕ್ಷಣಕ್ಕೆ ಮಹತ್ವ ಇದೆ. ಇದರಿಂದ ಶಿಕ್ಷಿತರು ತಮ್ಮ ಕುಟುಂಬ ಹಾಗು ಸಮುದಾಯಗಳ ಮೌಲ್ಯಗಳಿಂದ ಮುಕ್ತರಾಗಿ ಸಂವಿಧಾನಿಕ ಮೌಲ್ಯಗಳನ್ನು ರೂಪಿಸಿಕೊಳ್ಳುವುದು ಕಷ್ಟ.

ಏಕೆ ಪರಿಹರಿಸುವ ಸಾಧ್ಯತೆ ಇಲ್ಲ?

ವರ್ತಮಾನದಲ್ಲಿ ಶಿಕ್ಷಣ ಕ್ಷೇತ್ರ ಎದುರಿಸುತ್ತಿರುವ ಸಮಸ್ಯೆಗಳನ್ನು ಹೊಸ ಶಿಕ್ಷಣ ನೀತಿ ಪರಿಹರಿಸಲು ಸಾಧ್ಯವಿಲ್ಲವೆಂದು ಹಿಂದಿನ ಪುಟಗಳಲ್ಲಿ ನೋಡಿದ್ದೇವೆ. ಏಕೆ ಪರಿಹರಿಸಲು ಸಾಧ್ಯವಿಲ್ಲ ಎನ್ನುವುದಕ್ಕೆ ಕೆಲವು ಕಾರಣಗಳನ್ನು ನೀಡಿದ್ದೇನೆ.

ಆರ್ಥಿಕ ಅಸಾಮರ್ಥ್ಯ : ಹೊಸ ಶಿಕ್ಷಣ ನೀತಿ ಹೇಳಿರುವ ಹಲವು ಸುಧಾರಣೆಗಳನ್ನು ಅನುಷ್ಠಾನಕ್ಕೆ ತರಬೇಕಾದರೆ ದೊಡ್ಡ ಮೊತ್ತದ ಹಣ ವಿನಿಯೋಜಿಸಬೇಕು. ಇಷ್ಟೊಂದು ಮೊತ್ತವನ್ನು ಎಲ್ಲಿಂದ ತರುವುದು. ಡಿಮೊನಿಟೈಸೆಶನ್, ಜಿಎಸ್‍ಟಿಗಳು ಅರ್ಥಿಕ ಪ್ರಗತಿಯನ್ನು ಪಾತಾಳಕ್ಕೆ ತಳ್ಳಿವೆ. ಆರ್ಥಿಕ ಪ್ರಗತಿ ಇಳಿಮುಖವಾಗುತ್ತಿರುವ ಸಂದರ್ಭದಲ್ಲಿ ಕೊರೋನ ಆರಂಭವಾಗಿದೆ. ಕೊರೋನ ಹತೋಟಿಗೆ ಹಮ್ಮಿಕೊಂಡ ಲಾಕ್‍ಡೌನ್ ಅರ್ಥ ವ್ಯವಸ್ಥೆಯನ್ನು ಮೈನಸ್ ಗ್ರೋಥ್ ಕಡೆಗೆ ಒಯ್ಯಿದಿದೆ.  ಇನ್ನು 3-4 ವರ್ಷ ಅರ್ಥ ವ್ಯವಸ್ಥೆ ಸಾಮಾನ್ಯ ಸ್ಥಿತಿಗೆ ಬರುವುದು ಕಷ್ಟ. ಇಂತಹ ಸಂದರ್ಭದಲ್ಲಿ  ಶಿಕ್ಷಣದ ಮೇಲೆ ಜಿಡಿಪಿಯ ಶೇ.6 ಬಿಡಿ, ಈಗ ಮಾಡುತ್ತಿರುವ ಶೇ.3.5ನ್ನು ಮಾಡಿದರೂ ದೊಡ್ಡ ಸಾಧನೆಯೇ ಆಗುತ್ತದೆ.

ಅರ್ಬನ್ ಬಯಾಸ್ : (ನಗರಗಳತ್ತ ಪಕ್ಷಪಾತ) ಇದನ್ನು ಮಧ್ಯಮ ವರ್ಗ ಬಯಾಸ್ (ಪಕ್ಷಪಾತ) ಎಂದು ಕೂಡ ಹೇಳಬಹುದು. ನಮ್ಮಲ್ಲೊಂದು ಸಣ್ಣ ಮಧ್ಯಮ ವರ್ಗ ಇದೆ. ಇವರು ಸಂಖ್ಯೆಯಲ್ಲಿ ಕಡಿಮೆ ಇದ್ದರೂ ಅಭಿಪ್ರಾಯ ರೂಪಿಸುವುರಲ್ಲಿ ಮುಖ್ಯ ಭೂಮಿಕೆ ನಿಭಾಯಿಸುತ್ತಾರೆ. ಈ ವರ್ಗದಿಂದಲೇ ಬಂದವರು ಟಿವಿಗಳಲ್ಲಿ ಚರ್ಚಿಸುತ್ತಾರೆ, ಪತ್ರಿಕೆಗಳಲ್ಲಿ ಬರೆಯುತ್ತಾರೆ ಮತ್ತು ಸಿನೀಮಾ, ಟಿವಿ ಸೀರಿಯಲ್‍ಗಳನ್ನು ಉತ್ಪಾದಿಸುತ್ತಾರೆ. ದೇಶದ ಎಲ್ಲ ಸಮಸ್ಯೆಗಳನ್ನು ಇವರೇ ಪ್ರತಿನಿಧಿಸುತ್ತಾರೆ. ಇವರ ಸಮಸ್ಯೆಯನ್ನೇ ದೇಶದ ಸಮಸ್ಯೆ ಎಂದು ಮಂಡಿಸುತ್ತಾರೆ. ಇವರಿಗೂ ಅವರ ಮಕ್ಕಳು ಮತ್ತು ಸ್ಲಂಗಳಿಂದ ಅಥವಾ ಬಡ ಹಿನ್ನೆಲೆಯಿಂದ ಬರುವ ಮಕ್ಕಳು ಒಂದೇ ಶಾಲೆಯಲ್ಲಿ ಓದುವುದನ್ನು ಊಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಶ್ರೀಮಂತ ಮತ್ತು ಬಡ ಮಕ್ಕಳು ಒಂದೇ ಶಾಲೆಯಲ್ಲಿ ಓದದಿದ್ದರೆ ಶಿಕ್ಷಣದ ಗುಣಮಟ್ಟ ಸುಧಾರಿಸುವುದಿಲ್ಲ ಮತ್ತು ಸಮಾನತೆಯ ಪ್ರಜ್ಞೆ ಮೂಡುವುದಿಲ್ಲ. ಇದು ಸಾಧ್ಯವಾಗಬೇಕಾದರೆ ಸಮಾನ ಶಿಕ್ಷಣವನ್ನು ಸರಕಾರವೇ ಕೊಡಬೇಕು. ಆದರೆ ಸಮಾನ ಶಿಕ್ಷಣವನ್ನು ಸರಕಾರವೇ ಕೊಡಬೇಕೆನ್ನುವ ಸಾರ್ವಜನಿಕ ಅಭಿಪ್ರಾಯವನ್ನು ಈ ಮಧ್ಯಮ ವರ್ಗ ರೂಪಿಸುವುದೇ ಇಲ್ಲ. ಅದರ ಬದಲು ಅನುಕೂಲಸ್ಥರಿಗೆ ಖಾಸಗಿ ಶಾಲೆ ಬಡವರಿಗೆ ಸರಕಾರಿ ಶಾಲೆ ಎನ್ನುವ ವರ್ತಮಾನದ ಸಮಸ್ಯೆಯನ್ನು ಮುಂದುವರಿಸುವ ಹೊಸ ಶಿಕ್ಷಣ ನೀತಿಯನ್ನು ಇವರು ಹಾಡಿ ಹೊಗಳುತ್ತಾರೆ. ಇದರಿಂದ ವರ್ತಮಾನದ ಸಮಸ್ಯೆ ಪರಿಹಾರ ಆಗಲು ಸಾಧ್ಯವಿಲ್ಲ.

ಆಳುವ ವರ್ಗ : ನಮ್ಮಲ್ಲಿ ಚುನಾಯಿತರಾಗುವ ಪ್ರತಿನಿಧಿಗಳ ಆರ್ಥಿಕ ಹಿನ್ನೆಲೆಯನ್ನು ನೋಡಿದರೆ ನಮ್ಮಲ್ಲೊಂದು ಆಳುವ ವರ್ಗ ರೂಪಿತವಾಗಿರುವುದು ಸ್ಪಷ್ಟವಾಗಿದೆ. 2014ರಲ್ಲಿ ಆಯ್ಕೆಯಾದ ಎಂಪಿಗಳ ಸರಾಸರಿ ಆಸ್ತಿಪಾಸ್ತಿ ರೂ. 14.7 ಕೋಟಿ. 2013ರ ಎನ್‍ಎಸ್‍ಎಸ್‍ಓ ವರದಿ ಪ್ರಕಾರ ಗ್ರಾಮೀಣ ಪ್ರದೇಶ ಕುಟುಂಬದ ಸರಾಸರಿ ಆಸ್ತಿಪಾಸ್ತಿ ರೂ.10 ಲಕ್ಷ, ನಗರ ಪ್ರದೇಶ ಕುಟುಂಬವೊಂದರ ಸರಾಸರಿ ಆಸ್ತಿಪಾಸ್ತಿ ರೂ.23 ಲಕ್ಷ, ಗ್ರಾಮ ಮತ್ತು ನಗರ ಪ್ರದೇಶಗಳಲ್ಲಿ ಶೇ.10ರಷ್ಟು ಕುಟುಂಬಗಳ ಸರಾಸರಿ ಆಸ್ತಿ ರೂ.25 ಸಾವಿರದ ಆಸುಪಾಸಿನಲ್ಲಿದೆ.  ಮೇಲಿನ ಅಂಕಿಅಂಶಗಳನ್ನು ನೋಡಿದರೆ ಅತ್ಯಂತ ಶ್ರೀಮಂತ ವರ್ಗ ನಮ್ಮಲ್ಲಿ ಜನಪ್ರತಿನಿಧಿಗಳಾಗಿ ಚುನಾಯಿಸಲ್ಪಡುತ್ತಾರೆ ಎನ್ನುವುದು ಸ್ಪಷ್ಟವಾಗುತ್ತಿದೆ. ಇವರ ಆಸಕ್ತಿಗೂ ಇವರನ್ನು ಚುನಾಯಿಸಿದ ಜನರ ಆಸಕ್ತಿಗೂ ಆಕಾಶ ಭೂಮಿ ಅಂತರವಿದೆ. ಈ ಅಂತರ ಇವರು ಈಗಾಗಲೇ ಜಾರಿಗೆ ತಂದ ಪಾಲಿಸಿಗಳಲ್ಲಿ ಪ್ರಕಟವಾಗಿದೆ.  ಇವರು ಜಾರಿಗೆ ತರುವ ಬಹುತೇಕ ಪಾಲಿಸಿಗಳು ಅನುಕೂಲಸ್ಥರ ಪರ ಇದೆ; ಬಡವರ ಪರ ಇಲ್ಲ. ತೆರಿಗೆ ನೀತಿ, ಹಣಕಾಸು ನೀತಿ, ಕಾರ್ಮಿಕ ನೀತಿ, ಭೂನೀತಿ, ಆರೋಗ್ಯ ನೀತಿ ಇವೆಲ್ಲವೂ ಬಲಾಢ್ಯ ಪರ ಇವೆ. ಇವೆಲ್ಲವೂ ಅನುಕೂಲಸ್ಥರ ಪರ ಇರುವಾಗ ಶಿಕ್ಷಣ ನೀತಿ ಬಡವರ ಪರ ಇರುತ್ತದೆಯೆಂದು ನಂಬುವುದು ಮೂರ್ಖತನ.  ಇವರಿಗೆ ಅಧಿಕಾರಸ್ಥ ಪ್ರತಿನಿಧಿಗüಳ ಹಿನ್ನೆಲೆಯನ್ನು ಪ್ರಶ್ನಿಸದೆ ಅವರು ಹೇಳಿದನ್ನು ಚಾಚೂ ತಪ್ಪದೆ ವಿನಯದಿಂದ ತಲೆಬಾಗಿ ಮೂರು ಕಾಸಿಗೆ ದುಡಿಯುವ ಒಂದು ವರ್ಗ ಬೇಕಾಗಿದೆ. ಇಂಥಹ ವರ್ಗವನ್ನು ಸೃಷ್ಟಿಸುವ ಶಿಕ್ಷಣ ನೀತಿಯನ್ನು ಇವರು ಜಾರಿಗೆ ತರುತ್ತಾರೆ ಹೊರತು ಇವರ ಅಧಿಕಾರ ಮೂಲವನ್ನೇ ಪ್ರಶ್ನಿಸುವ ವಿದ್ಯಾರ್ಥಿಗಳನ್ನು ಸೃಷ್ಟಿಸುವ ಶಿಕ್ಷಣ ನೀತಿಯನ್ನು ಜಾರಿಗೆ ತರುವುದಿಲ್ಲ.

ಸಮರೋಪ

ಈ ಪಾಲಿಸಿ ಕಾನೂನು ರೂಪದಲ್ಲಿ ಬಂದಾಗ ಹೊಸ ಶಿಕ್ಷಣ ನೀತಿ ಯಾವ ದಿಶೆಯಲ್ಲಿ ಸಾಗಬಹುದೆನ್ನುವ ಖಚಿತ ಚಿತ್ರಣ ಸಿಗಬಹುದು. ಈಗಂತೂ ಈ ಪಾಲಿಸಿ ಬಗ್ಗೆ ಒಟ್ಟಾರೆಯಾಗಿ ಹೇಳುವುದಾದರೆ ಹೊಸ ಶಿಕ್ಷಣ ನೀತಿಯಲ್ಲಿ ಎಲ್ಲವೂ ಇದೆ ಮತ್ತು ಏನೂ ಇಲ್ಲ ಎನ್ನುವ ಸ್ಥಿತಿ ಇದೆ. ವರ್ತಮಾನದ ಶಿಕ್ಷಣ ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಹೊಸ ಶಿಕ್ಷಣ ನೀಡುವ ಪರಿಹಾರಗಳು ಸಮಸ್ಯೆಯನ್ನು ಪರಿಹರಿಸುವ ಬದಲು ಇನ್ನೂ ಸಂಕೀರ್ಣಗೊಳಿಸಬಹುದು. ನಮ್ಮ ಅಭಿವೃದ್ಧಿ ರಾಜಕಾರಣ ಸಂಪೂರ್ಣ ಬಲಾಢ್ಯರ ಸ್ವಾಧೀನ ಇದೆ. ಇವರು ಜಾರಿಗ ತರುವ ಬಹುತೇಕ ಪಾಲಿಸಿಗಳು ಬಡತನವನ್ನು ಮತ್ತು ತಳಸ್ತರವನ್ನು ಸೃಷ್ಟಿಸುತ್ತಿವೆ.  ಹೀಗಿರುವಾಗ ಶಿಕ್ಷಣ ನೀತಿ ಬಲಾಢ್ಯಪರ ಅಭಿವೃದ್ಧಿ ರಾಜಕಾರಣಕ್ಕೆ ವಿರುದ್ಧವಾಗಿರುತ್ತದೆ ಎಂದು ಗ್ರಹಿಸುವುದು ಅತಾರ್ಕಿಕವಾಗುತ್ತದೆ.

Donate Janashakthi Media

Leave a Reply

Your email address will not be published. Required fields are marked *