ಬೊಮ್ಮಾಯಿ ಅವರೇ! ‘ಕಮಲಾಭಿಮುಖಿ’ಯಾಗಬೇಡಿ, ‘ಅಭಿವೃದ್ಧಿಮುಖಿ’ಯಾಗಿ!

ಪ್ರೊ. ಟಿ.ಆರ್. ಚಂದ್ರಶೇಖರ

ಬೊಮ್ಮಾಯಿ ಅವರಾದರೂ (ಆಫರೇಶನ್) ‘ಕಮಲಾಭಿಮುಖಿ’ಗಳಾಗದ ‘ಅಭಿವೃದ್ಧಿಮುಖಿ’ಯಾಗುತ್ತಾರೆ ಎಂದು ಭಾವಿಸಲಾಗಿದೆ. ಕರ್ನಾಟಕದ ಅಭಿವೃದ್ಧಿಗೆ ಮಾದರಿಯಾಗಬೇಕಾದುದು ‘ಕೇರಳ’ವೇ ವಿನಾ ಉತ್ತರ ಪ್ರದೇಶ-ಗುಜರಾತ್‌ಗಳಲ್ಲ. ಜನಸಂಖ್ಯೆಯ ಬೆಳವಣಿಗೆಯನ್ನು ಕರ್ನಾಟಕವು ತಡೆದುದು ಮುಗಿದಿದೆ. ಆದರೂ ಪರಿವಾರದ ಬಾಯಿ ಚಪಲ ಚೆನ್ನಿಗರು ಎರಡು ಮಕ್ಕಳ ಜನಸಂಖ್ಯಾ ನೀತಿಯನ್ನು ಅನುಸರಿಸುವುದರ ಬಗ್ಗೆ ಅಬ್ಬರಿಸುತ್ತಿದ್ದಾರೆ. ಇವರ ಅಭಿವೃದ್ಧಿ ಬಗೆಗಿನ ಅಜ್ಞಾನಕ್ಕೆ ಏನನ್ನಬೇಕು? ಇಂತಹ ಪ್ರಹಸನಗಳನ್ನು ಇನ್ನಾದರೂ ಕೊನೆಗೊಳಿಸಿ. ಅನೇಕ ಅಭಿವೃದ್ಧಿ ಸೂಚಿಗಳಲ್ಲಿ ಕರ್ನಾಟಕವು ಹಿಂದಿ ಜಗತ್ತಿಗಿಂತ ಸಾಕಷ್ಟು ಮುಂದಿದೆ. ರಾಜ್ಯದಲ್ಲಿ 1970-80ರ ದಶಕಗಳಲ್ಲಿ ಮುಂಚೂಣಿಯಲ್ಲಿದ್ದ ಕರ್ನಾಟಕದ ಕೃಷಿಯು ಇಂದು ನಿತ್ರಾಣ ಸ್ಥಿತಿಯಲ್ಲಿದೆ. ಇದರ ಪುನಶ್ಚೇತನವು ಅಭಿವೃದ್ಧಿ ಪ್ರಣಾಳಿಕೆಯಲ್ಲಿ ಆದ್ಯತೆಯಾಗಬೇಕು. ಕೃಷಿ ಎಂದರೆ ಅಣೆಕಟ್ಟೆಗಳು, ರಾಸಾಯಿನಿಕ ಗೊಬ್ಬರ, ಕಬ್ಬು-ಬತ್ತ ಬೆಳೆಯುವುದು ಮಾತ್ರವಲ್ಲ. ಇಲ್ಲಿ ಹೈನುಗಾರಿಕೆಯಿದೆ, ಜಾನುವಾರು ಆರ್ಥಿಕತೆಯಿದೆ, ಕೃಷಿ ಅರಣ್ಯಗಾರಿಕೆಯಿದೆ, ಜಾನುವಾರು-ಕುರಿ-ಕೋಳಿ ಸಾಕಣಿಕೆಯಿದೆ, ಮೀನುಗಾರಿಕೆಯಿದೆ. ಇವುಗಳಿಗೆ ಹೋಲಿಸಿದರೆ ಪರಿಸರಕ್ಕೆ ವಿಷವುಣಿಸುವ, ಜನರ ಆರೋಗ್ಯಕ್ಕೆ ಕಡುಮಾರಕವಾದ ಗಣಿ-ಕಲ್ಲು ಗಣಿಗಾರಿಕೆಯ ಕೊಡುಗೆ ರೂ. 7827 ಕೋಟಿ(ಶೇ. 0.52). ಹಾಗಾದರೆ ಯಾವುದಕ್ಕೆ ಆದ್ಯತೆ ನೀಡಬೇಕು?

ಕೋಷ್ಟಕ-1 ಮಾನವ ಅಭಿವೃದ್ಧಿ ಸೂಚಕದಲ್ಲಿ ಕರ್ನಾಟಕ ಯು.ಪಿ. ಗುಜರಾತ್, ಉತ್ತರ ಭಾರತದ ಇತರ ರಾಜ್ಯಗಳಿಗಿಂತ ಮುಂದಿದೆ. ಅವುಗಳಿಂದ ಕಲಿಯುವುದು ಏನೂ ಇಲ್ಲ!

ಇಂದಿನ ಆಳುವ ವರ್ಗಕ್ಕೆ/ಪಕ್ಷಕ್ಕೆ ಅಭಿವೃದ್ಧಿ ಆದ್ಯತೆಯ ಸಂಗತಿಯಾಗಿಲ್ಲ. ಇವರ ವಕ್ತಾರರಾದ ಸಂಬಿತ್ ಪಾತ್ರ ಒಮ್ಮೆಯಾದರೂ ಅಭಿವೃದ್ಧಿಯ ಬಗ್ಗೆ, ಉದ್ಯೋಗದ ಬಗ್ಗೆ, ಆಹಾರ ಭದ್ರತೆಯ ಬಗ್ಗೆ ಟಿ.ವಿ. ಕಾರ್ಯಕ್ರಮಗಳಲ್ಲಿ ಅಬ್ಬರಿಸಿದ್ದು-ಚರ್ಚಿಸಿದ್ದು ಉಂಟ? ಕಾರ್ಮಿಕರ ದುಡಿಮೆಯಾಗಲಿ, ರೈತಾಪಿ ವರ್ಗದ ಕಷ್ಟಕಾರ್ಪಣ್ಯಗಳಾಗಲಿ, ಮಹಿಳೆಯರ ದುಸ್ಥಿತಿಯಾಗಲಿ, ದಲಿತರ ಜಾತಿ ಅಸಮಾನತೆಯಾಗಲಿ-ಶೋಷಣೆಯಾಗಲಿ, ಹಿಂದುಳಿದ ವರ್ಗಗಳ-ಬುಡಕಟ್ಟು ವರ್ಗದ ದುಮ್ಮಾನವಾಗಲಿ, ಮಕ್ಕಳ ಅಪೌಷ್ಟಿಕತೆಯಾಗಲಿ – ಇಂತಹ ಜನಮುಖಿಯಾದ ಸಮಸ್ಯೆಗಳು ಆಳುವ ಪಕ್ಷಕ್ಕೆ ಮುಖ್ಯವಾಗಿಲ್ಲ. ಈ ದೇಶದ ಬಡಕೂಲಿಕಾರರ ಉದ್ಯೋಗದ ಹಕ್ಕನ್ನು ಮಾನ್ಯ ಮಾಡಿದ ಮನರೇಗಾ(ಎಂ.ಜಿ.ಎನ್.ಆರ್.ಈ.ಜಿ.ಎ.) ಕಾರ್ಯಕ್ರಮದ ಬಗ್ಗೆ ಸಂಸತ್ತಿನಲ್ಲಿ ನಮ್ಮ ಪ್ರಧಾನಮಂತ್ರಿ ಏನು ಹೇಳಿದರು? ತಮ್ಮ ಪಕ್ಷದ ಹೊಟ್ಟೆ ತುಂಬಿದ ಎಂ.ಪಿ.ಗಳು ಮೇಜು ಕುಟ್ಟಿ ವ್ಯಕ್ತಪಡಿಸಿದ ಹರ್ಷೋದ್ಗಾರಗಳ ನಡುವೆ ‘ಇದೊಂದು ಮಾನ್ಯುಮೆಂಟಲ್ ವೈಫಲ್ಯ’ ಎಂದು ಘೋಷಿಸಿದರು. ಲಾಕ್‌ಡೌನ್ ಸಂದರ್ಭದಲ್ಲಿನ ಕಡುಬಡ ಕೂಲಿಕಾರರ/ವಲಸೆ ಕಾರ್ಮಿಕರ ಬದುಕನ್ನು ಕಾದಿದ್ದು ಇದೇ ಕಾರ್ಯಕ್ರಮ ಎಂಬುದನ್ನು ಮರೆಯುವ ಹಾಗಿಲ್ಲ. ಇದರ ಮಹತ್ವವನ್ನು ಅರಿತುಕೊಂಡು ‘ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ’ ಎಂಬಂತೆ ಇದೇ ಸರ್ಕಾರವು 2020-21ರಲ್ಲಿ ಸದರಿ ಕಾರ್ಯಕ್ರಮಕ್ಕೆ ಬಜೆಟ್ಟಿನಲ್ಲಿ ನೀಡಲಾಗಿದ್ದ ಅನುದಾನ ಸಾಕಾಗದಿದ್ದಾಗ ಹೆಚ್ಚುವರಿಯಾಗಿ ಅನುದಾನ ನೀಡಲಾಯಿತು(ಎಂಜಿಎನ್‌ಆರ್‌ಈಜಿಎ:2020-21ರ ಬಜೆಟ್ ಅನುದಾನ ರೂ.61500 ಕೋಟಿ. ಪರಿಷ್ಕೃತ ಅನುದಾನ: ರೂ. 1,11,500 ಕೋಟಿ). ‘ಹಕ್ಕುಗಳು’ ಭಾರತೀಯ ಪರಂಪರೆಯ ಭಾಗವಲ್ಲ ಎನ್ನುವ ಇಂದಿನ ಆಳುವ ಪಕ್ಷಕ್ಕೆ ಅಭಿವೃದ್ಧಿ ಎನ್ನುವುದು ವಾಮವಾದಿಗಳ ಕಾರ್ಯಕ್ರಮವಾಗಿ ಕಾಣುತ್ತದೆ. ಈ ಕಾರಣಕ್ಕೆ ಇಡೀ ವಿಶ್ವದಲ್ಲಿ ಅನುಕರಣೀಯ ಅಭಿವೃದ್ಧಿ ಮಾದರಿಯಾಗಿ ಹೆಸರುಗಳಿಸಿರುವ ಕೇರಳ ಮಾದರಿಯ ಬಗ್ಗೆ ಪ್ರಧಾನಮಂತ್ರಿ ಸೌಜನ್ಯಕ್ಕಾದರೂ ಕಳೆದ 7 ವರ್ಷಗಳಲ್ಲಿ ಒಂದೇ ಒಂದು ಮೆಚ್ಚುಗೆಯ ಮಾತನಾಡಿಲ್ಲ.

‘ಕಲ್ಯಾಣ ಕರ್ನಾಟಕ’ ಎಂದರೇನು?

ಕರ್ನಾಟಕದಲ್ಲಿ ಕಳೆದ ಎರಡು-ಮೂರು ವರ್ಷಗಳ ಕಾಲಾವಧಿಯಲ್ಲಿ ಸರ್ಕಾರವು ಅಭಿವೃದ್ಧಿಯನ್ನು ಮೂಲೆಗುಂಪಾಗಿಸಿರುವುದನ್ನು ಕಾಣಬಹುದು. ಈ ಸರ್ಕಾರದಲ್ಲಿ ಒಬ್ಬರು ಲೌ-ಜಿಹಾದ್ ನಿಷೇಧಿಸಬೇಕು ಎಂದರೆ ಮತ್ತೊಬ್ಬರು ಉತ್ತರ ಪ್ರದೇಶದಲ್ಲಿ ಜಾರಿಯಾಗಿರುವ ಎರಡು ಮಕ್ಕಳು ಜನಸಂಖ್ಯಾ ನೀತಿಯನ್ನು ಅನುಸರಿಸಬೇಕು ಎನ್ನುತ್ತಾರೆ. ಮಸೀದಿಗಳನ್ನು ಕೆಡವಿ ಗುಡಿ ಕಟ್ಟುವುದರ ಬಗ್ಗೆ ಕೆಲವರು ಮಾತನಾಡುತ್ತಾರೆ. ಜನರ ಭಾವನೆಗಳ ಜೊತೆ ಆಟವಾಡುವುದನ್ನು ಕರಗತ ಮಾಡಿಕೊಂಡಿರುವ ಈ ಸರ್ಕಾರವು 2019ರಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶವಕ್ಕೆ ‘ಕಲ್ಯಾಣ ಕರ್ನಾಟಕ’ ಎಂದು ನಾಮಕರಣ ಮಾಡಿತು. ಆದರೆ ಎಲ್ಲಿಯೂ ‘ಕಲ್ಯಾಣ ಕರ್ನಾಟಕ’ ಎಂದರೇನು ಎಂಬುದನ್ನು ಬಸವ ಸಂವಿಧಾನದ ಚೌಕಟ್ಟಿನಲ್ಲಿ ನಿರ್ವಚಿಸಲಿಲ್ಲ. ಉದಾ: ಎನ್‌ಎಚ್‌ಎಫ್‌ಎಸ್-5(2019-2020)ರ ವರದಿ ಪ್ರಕಾರ ರಾಯಚೂರು, ಕಲಬುರಗಿ, ಕೊಪ್ಪಳ, ಯಾದಗಿರಿ ಜಿಲ್ಲೆಗಳಲ್ಲಿನ 0-6 ವಯೋಮಾನದ ಒಟ್ಟು ಮಕ್ಕಳಲ್ಲಿ ಶೇಕಡ 70ಕ್ಕಿಂತ ಅಧಿಕ ಮಕ್ಕಳು (ಅನಿಮಿಯಾ) ರಕ್ತಹೀನತೆಯಿಂದ ನರಳುತ್ತಿದ್ದಾರೆ. ‘ಕಲ್ಯಾಣ’ದ ಬಗ್ಗೆ ಮಾತನಾಡುವ ಸರ್ಕಾರದ ಯಾರಾದರೂ ಒಬ್ಬ ಸಚಿವರು ಇಂತಹ ಸಮಸ್ಯೆಯ ಬಗ್ಗೆ ಮಾತನಾಡಿದ್ದು ಉಂಟೆ?. ಇದೇನಾ ನಿಮ್ಮ ‘ಕಲ್ಯಾಣ ಕರ್ನಾಟಕ’?. ಕಲ್ಯಾಣ ಕರ್ನಾಟಕದ ಜನರ ಬದುಕನ್ನು ಉತ್ತಮಪಡಿಸುವ ದಿಶೆಯಲ್ಲಿ ಸರ್ಕಾರ ಕಾರ್ಯೋನ್ಮುಖವಾಗಲಿಲ್ಲ. ಇಂದಿನ ಸರ್ಕಾರಗಳಿಗೆ (ಒಕ್ಕೂಟ ಮತ್ತು ರಾಜ್ಯ) ಊರು-ನಗರಗಳ, ಪ್ರಶಸ್ತಿ-ಪುರಸ್ಕಾರಗಳ ಹೆಸರು ಬದಲಾಯಿಸುವುದೇ ಅಭಿವೃದ್ಧಿ ಎನ್ನುವಂತಾಗಿದೆ. ಪ್ರಜಾವಾಣಿಯು ತನ್ನ ಆಗಸ್ಟ್ಟ್ 9, 2021ರ ಸಂಪಾದಕೀಯದಲ್ಲಿ ‘ಸರ್ಕಾರಿ ಕಾರ್ಯಕ್ರಮ ಅಥವಾ ಆಟದ ಮೈದಾನಗಳಿಗೆ ಹಿಂದಿನ ಸರ್ಕಾರಗಳು ಮಾಡಿದ ನಾಮಕರಣವನ್ನು ಅಧಿಕಾರದಲ್ಲಿರುವ ಪಕ್ಷ ಬದಲಾಯಿಸುವ ಕ್ಷುಲ್ಲಕ ರಾಜಕಾರಣದಿಂದ ಜನರಿಗೆ ಅಥವಾ ದೇಶದ ಅಭಿವೃದ್ಧಿಗೆ ಉಪಯೋಗವೇನೂ ಇಲ್ಲ’ ಎಂದು ಸರಿಯಾಗಿ ಹೇಳಿದೆ.

ಇದನ್ನು ಓದಿ: ಕಾರ್ಪೋರೇಟ್ ನಿಯಂತ್ರಿತ ರಾಜಕಾರಣದ ನಡುವೆ ಸಾರ್ವಭೌಮ ಪ್ರಜೆಯ ಗೊಂದಲಗಳು

ಬಲವಂತದ-ದಮನಕಾರಿ ಕ್ರಮಗಳನ್ನು ಅನುಸರಿಸದೆ ಕರ್ನಾಟಕಕವು ಈಗಾಗಲೇ ಜನಸಂಖ್ಯೆಯ ಬೆಳವಣಿಗೆಯನ್ನು ಸಮತೋಲನ ಬೆಳವಣಿಗೆಯ ಹಂತಕ್ಕೆ ತಂದಿರುವುದರ ಬಗ್ಗೆ ಪರಿಜ್ಞಾನವೇ ಇಲ್ಲದ ಶಾಸಕರು ಮತಾಂಧತೆಯಿಂದ ಉತ್ತೇಜಿತರಾಗಿ ಉತ್ತರ ಪ್ರದೇಶದಲ್ಲಿ ರೂಪಿಸಿರುವ ಎರಡು ಮಕ್ಕಳು ಜನಸಂಖ್ಯಾ ನೀತಿಯನ್ನು ನಾವು ಅಳವಡಿಸಿಕೊಳ್ಳಬೇಕು ಎಂದು ಹರಿಹಾಯುತ್ತಾರೆ. ಇದನ್ನು ಕೇಳಿ ನಗಬೇಕೋ-ಅಳಬೇಕೋ ನಮಗೆ ತಿಳಿಯದಾಗಿದೆ. ಏಕೆಂದರೆ ಕರ್ನಾಟಕದಲ್ಲಿ(ಇಡೀ ದಕ್ಷಿಣ ಭಾರತದ ರಾಜ್ಯಗಳಲ್ಲಿ) ಜನಸಂಖ್ಯೆಯ ಬೆಳವಣಿಗೆಯನ್ನು ಸಹಕಾರವಾದಿ ಕ್ರಮಗಳಿಂದ, ಉತ್ತೇಜನ-ನಿರುತ್ತೇಜನ ಕಾರ್ಯಸೂಚಿಯಿಲ್ಲದೆ ನಿಯಂತ್ರಿಸಲಾಗಿದೆ. ಇವರ ಪ್ರಕಾರ ಇಲ್ಲಿ ಈಗ ಇನ್ನೂ ಏನನ್ನು ನಿಯಂತ್ರಿಸಬೇಕು? ‘ಜನಸಂಖ್ಯೆ’ ನುಡಿಯಲ್ಲಿ ಮುಖ್ಯವಾಗಬೇಕಾದುದು ‘ಸಂಖ್ಯೆ’ಯಲ್ಲ. ಅಭಿವೃದ್ಧಿಯ ದೃಷ್ಟಿಯಿಂದ ಮುಖ್ಯವಾಗಬೇಕಾದುದು ‘ಜನ’, ಜನರ ಜೀವನೋಪಾಯ, ಅವರ ಶಿಕ್ಷಣ, ಆರೋಗ್ಯ, ಆಹಾರ ಭದ್ರತೆ. ಅಪ್ಪಿತಪ್ಪಿಯಾದರೂ ಸಮಾನತೆ ಮೌಲ್ಯದ ಬಗ್ಗೆ ಪ್ರಧಾನಮಂತ್ರಿಗಳು, ನಮ್ಮ ಮುಖ್ಯಮಂತ್ರಿಗಳು, ಲವ್ ಜಿಹಾದ್ ಬಗ್ಗೆ ವಿಷಕಾರುವವರು ಮಾತನಾಡಿದ್ದುಂಟ? ನಮ್ಮ ಸಂದರ್ಭದಲ್ಲಿ ಸಮಾನತೆಯು ಸಂವಿಧಾನಾತ್ಮಕ ಮೌಲ್ಯ(ಸಂವಿಧಾನದ ಭಾಗ 4, ಪರಿಚ್ಛೇದ 38 ಸೆಕ್ಷನ್ 2 ರಲ್ಲಿ ಸಂಪತ್ತಿನ ಕೇಂದ್ರೀಕರಣವನ್ನು, ವರಮಾನದಲ್ಲಿನ ಅಸಮಾನತೆಯನ್ನು ತಡೆಯುವುದು ಒಂದು ಮಹತ್ವದ ರಾಜ್ಯ ನಿರ್ದೇಶನ ತತ್ವವಾಗಿದೆ).

ಕೋಷ್ಟಕ-2: ಜನಸಂಖ್ಯಾ ನಿಯಂತ್ರಣದಲ್ಲಿ ಸಹ ಕರ್ನಾಟಕ ಯು.ಪಿ. ಗುಜರಾತ್, ಉತ್ತರ ಭಾರತದ ಇತರ ರಾಜ್ಯಗಳಿಗಿಂತ ಮುಂದಿದೆ. ಅವುಗಳಿಂದ ಕಲಿಯುವುದು ಏನೂ ಇಲ್ಲ!

ಬೊಮ್ಮಾಯಿ ‘ಕಮಲಾಭಿಮುಖಿ’ಗಳಾಗದೆ ‘ಅಭಿವೃದ್ಧಿಮುಖಿ’ಯಾಗಲಿ!

ಬೊಮ್ಮಾಯಿ ಅವರಾದರೂ (ಆಫರೇಶನ್) ‘ಕಮಲಾಭಿಮುಖಿ’ಗಳಾಗದೆ ‘ಅಭಿವೃದ್ಧಿಮುಖಿ’ಯಾಗುತ್ತಾರೆ ಎಂದು ಭಾವಿಸಲಾಗಿದೆ. ಕರ್ನಾಟಕದ ಅಭಿವೃದ್ಧಿಗೆ ಮಾದರಿಯಾಗಬೇಕಾದುದು ‘ಕೇರಳ’ವೇ ವಿನಾ ಉತ್ತರ ಪ್ರದೇಶ-ಗುಜರಾತ್‌ಗಳಲ್ಲ. ಜನಸಂಖ್ಯೆಯ ಬೆಳವಣಿಗೆಯನ್ನು ಕರ್ನಾಟಕವು ತಡೆದುದು ಮುಗಿದಿದೆ. ಆದರೂ ಪರಿವಾರದ ಬಾಯಿ ಚಪಲ ಚೆನ್ನಿಗರು ಎರಡು ಮಕ್ಕಳ ಜನಸಂಖ್ಯಾ ನೀತಿಯನ್ನು ಅನುಸರಿಸುವುದರ ಬಗ್ಗೆ ಅಬ್ಬರಿಸುತ್ತಿದ್ದಾರೆ. ಇವರ ಅಭಿವೃದ್ಧಿ ಬಗೆಗಿನ ಅಜ್ಞಾನಕ್ಕೆ ಏನನ್ನಬೇಕು? ಇಂತಹ ಪ್ರಹಸನಗಳನ್ನು ಇನ್ನಾದರೂ ಕೊನೆಗೊಳಿಸಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಆರ್ಥಿಕ-ಸಾಮಾಜಿಕ ಅಭಿವೃದ್ಧಿಯನ್ನು ಆದ್ಯತೆಯನ್ನಾಗಿ ಮಾಡಿಕೊಂಡು ಅಧಿಕಾರ ನಡೆಸುತ್ತಾರೆ ಎಂದು ಭಾವಿಸೋಣ.

ಕೋಷ್ಟಕ – 1 ಮಾನವ ಅಭಿವೃದ್ಧಿ ಸೂಚಕ ದಲ್ಲಿ ಕರ್ನಾಟಕ ಯು.ಪಿ. ಗುಜರಾತ್, ಉತ್ತರ ಭಾರತದ ಇತರ ರಾಜ್ಯಗಳಿಗಿಂತ ಮುಂದಿದೆ. ಅವುಗಳಿಂದ ಕಲಿಯುವುದು ಏನೂ ಇಲ್ಲ!

ಕೋಷ್ಟಕ – 2 ಜನಸಂಖ್ಯಾ ನಿಯಂತ್ರಣದಲ್ಲಿ ಸಹ ಕರ್ನಾಟಕ ಯು.ಪಿ. ಗುಜರಾತ್, ಉತ್ತರ ಭಾರತದ ಇತರ ರಾಜ್ಯಗಳಿಗಿಂತ ಮುಂದಿದೆ. ಅವುಗಳಿಂದ ಕಲಿಯುವುದು ಏನೂ ಇಲ್ಲ!

ಅನೇಕ ಅಭಿವೃದ್ಧಿ ಸೂಚಿಗಳಲ್ಲಿ ಕರ್ನಾಟಕವು ಹಿಂದಿ ಜಗತ್ತಿಗಿಂತ ಸಾಕಷ್ಟು ಮುಂದಿದೆ. ಆದರೆ ಕಳೆದ ಅನೇಕ ವರ್ಷಗಳಿಂದ ಅಧಿಕಾರವನ್ನು ಗಳಿಸಿಕೊಳ್ಳುವುದು ಹೇಗೆ ಮತ್ತು ಗಳಿಸಿಕೊಂಡ ಅಧಿಕಾರವನ್ನು ಉಳಿಸಿಕೊಳ್ಳುವುದು ಹೇಗೆ ಎಂಬುದರ ಕಾಯಕದಲ್ಲಿಯೇ ಕುಂಕುಮಧಾರಿ ಮುಖ್ಯಮಂತ್ರಿಯ ಆಳ್ವಿಕೆಯು ಮುಗಿದುಹೋಯಿತು. ಬೊಮ್ಮಾಯಿ ಅವರೇ, ಇದನ್ನು ಸುಮ್ಮನೆ ಪಕ್ಕಕ್ಕೆ ಬಿಸಾಕಿ ಬಿಡಿ. ರಾಜ್ಯದಲ್ಲಿ 1970-80ರ ದಶಕಗಳಲ್ಲಿ ಮುಂಚೂಣಿಯಲ್ಲಿದ್ದ ಕರ್ನಾಟಕದ ಕೃಷಿಯು ಇಂದು ನಿತ್ರಾಣ ಸ್ಥಿತಿಯಲ್ಲಿದೆ. ಇದರ ಪುನಶ್ಚೇತನವು ಅಭಿವೃದ್ಧಿ ಪ್ರಣಾಳಿಕೆಯಲ್ಲಿ ಆದ್ಯತೆಯಾಗಬೇಕು. ಕೃಷಿ ಎಂದರೆ ಅಣೆಕಟ್ಟೆಗಳು, ರಾಸಾಯಿನಿಕ ಗೊಬ್ಬರ, ಕಬ್ಬು-ಬತ್ತ ಬೆಳೆಯುವುದು ಮಾತ್ರವಲ್ಲ. ಇಲ್ಲಿ ಹೈನುಗಾರಿಕೆಯಿದೆ, ಜಾನುವಾರು ಆರ್ಥಿಕತೆಯಿದೆ, ಕೃಷಿ ಅರಣ್ಯಗಾರಿಕೆಯಿದೆ, ಜಾನುವಾರು-ಕುರಿ-ಕೋಳಿ ಸಾಕಣಿಕೆಯಿದೆ, ಮೀನುಗಾರಿಕೆಯಿದೆ(ಉದಾ: 2020-21ರ ಕರ್ನಾಟಕದ ಒಟ್ಟು ರಾಜ್ಯ ಆಂತರಿಕ ಉತ್ಪನ್ನದಲ್ಲಿ(ಜಿಎಸ್‌ಡಿಪಿ:ರೂ1494598 ಲಕ್ಷ ಕೋಟಿ) ಮೀನುಗಾರಿಕೆ ಕಾಣಿಕೆ ರೂ. 5827 ಕೋಟಿ(ಶೇ.0.39), ಅರಣ್ಯಗಾರಿಕೆ-ದಿಮ್ಮಿ ಆರ್ಥಿಕತೆ ಕೊಡುಗೆ ರೂ. 9929 ಕೋಟಿ(ಶೇ. 0.66). ಇವುಗಳಿಗೆ ಹೋಲಿಸಿದರೆ ಪರಿಸರಕ್ಕೆ ವಿಷವುಣಿಸುವ, ಜನರ ಆರೋಗ್ಯಕ್ಕೆ ಕಡುಮಾರಕವಾದ ಗಣಿ-ಕಲ್ಲು ಗಣಿಗಾರಿಕೆಯ ಕೊಡುಗೆ ರೂ. 7827 ಕೋಟಿ(ಶೇ. 0.52). ಹಾಗಾದರೆ ಯಾವುದಕ್ಕೆ ಆದ್ಯತೆ ನೀಡಬೇಕು? ಗಣಿಗಾರಿಕೆಯನ್ನು, ಅದರಲ್ಲೂ ಖಾಸಗಿ ಗಣಿಗರಿಕೆಯನ್ನು ನಿಲ್ಲಿಸಿದರೆ ಕರ್ನಾಟಕದ ಅಭಿವೃದ್ಧಿಗೆ ಯಾವ ಧಕ್ಕೆಯೂ ಉಂಟಾಗುವುದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಮೀನುಗಾರಿಕೆ, ಅರಣ್ಯಗಾರಿಕೆ, ಜಾನುವಾರು ಆರ್ಥಿಕತೆಗಳು ಉದ್ಯೋಗ-ಸಾಂದ್ರ, ಪರಿಸರ-ಸ್ನೇಹಿ, ಮಹಿಳಾಪರ ಚಟುವಟಿಕೆಗಳಾಗಿವೆ. ನಮ್ಮದು ಒಣ ಭೂಮಿ ಪ್ರಧಾನ ಕೃಷಿಯಾಗಿದೆ. ಇದನ್ನು ಅವಲಂಬಿಸಿರುವವರು ಅತಿಸಣ್ಣ-ಸಣ್ಣ ರೈತರಾಗಿದ್ದಾರೆ, ಇವರೆಲ್ಲರೂ ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದಾರೆ. ನೀರಾವರಿ, ಅಣೆಕಟ್ಟೆ, ನದಿಗಳ ಜೋಡಣೆ ಮುಂತಾದವು ಉಳ್ಳವರ ಹಿತಾಸಕ್ತಿಗಳನ್ನು ಕಾಪಿಡುವ ಬಂಡವಾಳ-ಸಾಂದ್ರ ಚಟುವಟಿಕೆಗಳಾಗಿವೆ. ನೀರಾವರಿಗೆ 2020-21ರ ಬಜೆಟ್ಟಿನಲ್ಲಿ ನೀಡಿರುವ ಅನುದಾನ ರೂ 16000 ಕೋಟಿಗಿಂತ ಅಧಿಕ. ಒಟ್ಟು ಬಜೆಟ್ಟಿನಲ್ಲಿ ಇದರ ಪ್ರಮಾಣ ಶೇ. 7. ಪ್ರಜ್ಞಾಪೂರ್ವಕವಾಗಿ ಒಣಭೂಮಿ ಕೃಷಿಗೆ ಹೆಚ್ಚಿನ ಬಂಡವಾಳ ವಿನಿಯೋಗಿಸುವ ಅಗತ್ಯವಿದೆ.

ಇದನ್ನು ಓದಿ: ಹೂಡಿಕೆಯ ಸಮಾಜೀಕರಣವಷ್ಟೇ ಸಾಕಾಗುತ್ತದೆಯೇ?

ಯು.ಎನ್.ಡಿ.ಪಿ.ಯು 1990 ರಿಂದ ಪ್ರಕಟಿಸುತ್ತಿರುವ ಮಾನವ ಅಭಿವೃದ್ಧಿ ವರದಿಗಳಲ್ಲಿ ‘ವರಮಾನವೇ ಜನರ ಬದುಕಿನ ಒಟ್ಟು ಮೊತ್ತವಲ್ಲ’ ಎಂಬುದನ್ನು ಸಾರುತ್ತಾ ಬರಲಾಗಿದೆ. ಅಭಿವೃದ್ಧಿಯಲ್ಲಿ ಆರೋಗ್ಯ, ಶಿಕ್ಷಣ, ಆಹಾರ ಭದ್ರತೆ, ಲಿಂಗ ಸಮಾನತೆ, ಉದ್ಯೋಗಗಳನ್ನು ‘ಹಕ್ಕಿ’ನ ಸಂಗತಿಯನ್ನಾಗಿ ನೋಡುವ ಅಗತ್ಯವಿದೆ. ಏಕೆಂದರೆ ಅಭಿವೃದ್ಧಿಯು ಹಂಗಿನ, ದತ್ತಿ-ದಾನದ ಸಂಗತಿಯಲ್ಲ. ಪರಿವಾರ ಅರ್ಥಶಾಸ್ತ್ರದಲ್ಲಿ ಅಭಿವೃದ್ಧಿಯನ್ನು ಸೈದ್ಧಾಂತಿಕವಾಗಿಯೇ ದಾನ-ದತ್ತಿಯನ್ನಾಗಿ ಪರಿಗಣಿಸಲಾಗಿದೆ. ಇಲ್ಲಿ ಚಾತುರ್ವರ್ಣ ಪ್ರಣಾಳಿಕೆಯನ್ನು ಪುನರ್ ಪ್ರತಿಷ್ಠಾಪಿಸುವ ಹುನ್ನಾರವಿದೆ. ಬೊಮ್ಮಾಯಿಯವರು ಇದನ್ನು ಮೀರಿ ನಿಲ್ಲಬೇಕಾಗಿದೆ. ಬಸವ-ಕನಕ-ನಾಲ್ವಡಿ-ಅಂಬೇಡ್ಕರ್ ಪ್ರಣೀತ ಅಭಿವೃದ್ಧಿ ಪ್ರಣಾಳಿಕೆಯನ್ನು ಅನುಸರಿಸುವುದರಿಂದ ಮಾತ್ರ ನಾಡಿನ ದಲಿತರಿಗೆ, ಆದಿವಾಸಿಗಳಿಗೆ, ಹಿಂದುಳಿದ ವರ್ಗಗಳಿಗೆ, ಮಹಿಳೆಯರಿಗೆ ಸಾಮಾಜಿಕ ನ್ಯಾಯ ದೊರೆಯುತ್ತದೆ. ಪರಿವಾರ ಅರ್ಥಶಾಸ್ತ್ರವು ಪ್ರತಿಪಾದಿಸುವ ‘ಅಖಂಡ’ ಆರ್ಥಿಕ ನೀತಿಯಿಂದ ಅನಾದಿ ಕಾಲದಿಂದ ಹರಿದುಕೊಂಡು ಬರುತ್ತಿರುವ ಚಾತುರ್ವರ್ಣ ಪ್ರಣೀತ ಅಸಮಾನತೆಯನ್ನು, ತಾರತಮ್ಯಗಳನ್ನು ತೊಡೆದು ಹಾಕುವುದು ಸಾಧ್ಯವಿಲ್ಲ. ಅಮರ್ತ್ಯ ಸೆನ್ ಮತ್ತೆ ಮತ್ತೆ ಹೇಳುತ್ತಿರುವಂತೆ ಅಭಿವೃದ್ಧಿ ಎನ್ನುವುದು ಜನರ ಬದುಕಿನ ಸಮೃದ್ಧಿಗೆ ಸಂಬಂಧಿಸಿದ ಪ್ರಕ್ರಿಯೆಯೇ ವಿನಾ ಅದು ಆರ್ಥಿಕತೆಯ ಸಮೃದ್ಧತೆಯ ಸಂಗತಿಯಲ್ಲ. ಶಿಕ್ಷಣ(ಪ್ರಾಥಮಿಕ), ಆರೋಗ್ಯ(ಪ್ರಾಥಮಿಕ), ಆಹಾರ ಭದ್ರತೆ(ಹಸಿವು ನಿವಾರಣೆ), ಮನರೇಗಾ(ಎಂ.ಜಿ.ಎನ್.ಅರ್.ಈ.ಜಿ,ಎ) ರೀತಿಯ ಉದ್ಯೋಗದ ಹಕ್ಕಿನ ಕಾರ್ಯಕ್ರಮಗಳನ್ನು ತಾವು ಬಲಪಡಿಸಬೇಕಾಗಿದೆ.

ವೆಲ್ಥ್ ಕ್ರಿಯೇಟರ‍್ಸ್‌ ಯಾರು?

ಚೌಕಿದಾರ್ ನಿರ್ದೇಶಿತ ಖಾಸಗೀಕರಣ-ಕಾರ್ಪೊರೇಟೀಕರಣ ಪ್ರಣೀತ ಆರ್ಥಿಕ ನೀತಿಯು ಮೂಲತಃ ಕಾರ್ಮಿಕ ವಿರೋಧಿ, ಉದ್ಯಮಪತಿ-ಸ್ನೇಹಿಯಾಗಿರುವುದರಿಂದ ಇದನ್ನು ತಾವು ಕಸದಬುಟ್ಟಿಗೆ ಎಸೆಯುವುದು ಅಭಿವೃದ್ಧಿಯ ದೃಷ್ಟಿಯಿಂದ ಬಹಳ ಒಳ್ಳೆಯದು. ‘ಸಮಾನತೆ-ಹಕ್ಕುಗಳು-ಸಾಮಾಜಿಕ ನ್ಯಾಯ’ ಮೌಲ್ಯಗಳನ್ನು ಒಳಗೊಂಡ ಅಭಿವೃದ್ದಿ ಪ್ರಣಾಳಿಕೆಯು ಇಂದು ಕರ್ನಾಟಕಕ್ಕೆ ಅಗತ್ಯವಾಗಿದೆ. ಚಾತುರ್ವರ್ಣ ಪ್ರಣೀತ ಆರ್ಥಿಕ ನೀತಿಯಲ್ಲಿ ಮಹಿಳೆಯರಿಗೆ ಅವಕಾಶವೇ ಇಲ್ಲ. ಪುನರಪಿ ಪುನರಪಿ ಆರ್‌ಎಸ್‌ಎಸ್ ಮುಖ್ಯಸ್ಥರು ಮಹಿಳೆಯರ ಕಾರ್ಯಕ್ಷೇತ್ರವೇನಿದ್ದರೂ ‘ಮನೆ-ಗಂಡ-ಮಕ್ಕಳು’ ಎಂದು ಬೋಧಿಸುತ್ತಿದ್ದಾರೆ. ಇದಕ್ಕೆ ತಾವು ಯಾವ ಕಾರಣಕ್ಕೂ ಮರುಳಾಗಬಾರದು. ಲಿಂಗ ಸಮಾನತೆಯು ಸ್ಮಾರ್ಟ್ ಎಕನಾಮಿಕ್ಸ್ ಎಂದು 2012ರಲ್ಲಿಯೇ ವಿಶ್ವಬ್ಯಾಂಕ್ ಘೋಷಿಸಿದೆ. ನಮ್ಮ ಆರ್ಥಿಕತೆಯಲ್ಲಿ ಕಾರ್ಮಿಕರು, ರೈತಾಪಿಗಳು, ದಲಿತರು, ಆದಿವಾಸಿಗಳು ಮತ್ತು ಮಹಿಳೆಯರು ಅಭಿವೃದ್ಧಿಯ, ವೆಲ್ಥ್ ಕ್ರಿಯೇಶನ್ನಿನ ಮೂಲ ದ್ರವ್ಯವಾಗಿದ್ದಾರೆ. ಒಕ್ಕೂಟ ಸರ್ಕಾರ ಹೇಳುತ್ತಿರುವಂತೆ ಬಿಲಿಯನ್ನರುಗಳು-ಮಿಲಿಯನ್ನರುಗಳು ವೆಲ್ಥ್ ಕ್ರಿಯೇಟರ‍್ಸ್‌ ಅಲ್ಲ. ಇಲ್ಲಿರುವ ‘ಕುಳಿತುಣ್ಣುವ ಸಂಸ್ಕೃತಿ ಮತ್ತು ದುಡಿದುಣ್ಣುವ ಸಂಸ್ಕೃತಿ’ಗಳ ನಡುವಿನ ಭಿನ್ನತೆಯನ್ನು ಅರ್ಥ ಮಾಡಿಕೊಳ್ಳಬೇಕು. ಅಭಿವೃದ್ಧಿಯು ಪೌರೋಹಿತ್ಯದ, ಯಜ್ಞ-ಯಾಗ, ಹೋಮ-ಹವನದ ಜಗತ್ತಿಗೆ ಸಂಬಂಧಿಸಿದ ಸಂಗತಿಯಲ್ಲ. ಅಭಿವೃದ್ಧಿಯ ಆರಾಧನೆ ಮಾಡಬೇಕಾದ ಪ್ರಧಾನಮಂತ್ರಿ ಯಜ್ಞ ಕುಂಡದ ಮುಂದೆ ಕೂತು ಅದಕ್ಕೆ ತುಪ್ಪ-ಅನ್ನ-ವಸ್ತ್ರ ಸುರಿಯುತ್ತಿದ್ದರೆ ಅಲ್ಲಿ ವೆಲ್ಥ್ ಕ್ರಿಯೇಶನ್ ನಡೆಯುವುದಿಲ್ಲ. ಅದೊಂದು ವೆಲ್ಥ್ ಡಿಸ್ಟ್ರಕ್ಷನ್ ಕಾರ್ಯವಾಗಿದೆ.

ಇದನ್ನು ಓದಿ: ಬಳ್ಳಾರಿ ಗಣಿಗಾರಿಕೆ: ಪರಿಸರ ವಿನಾಶ-ಅದರ ಪುನಶ್ಚೇತನ

ಒಟ್ಟಾರೆ ಇಂದು ತಮ್ಮ ನೇತೃತ್ವದಲ್ಲಿ ಕರ್ನಾಟಕ ಅಭಿವೃದ್ಧಿ ಪ್ರಣಾಳಿಕೆ ಎನ್ನುವುದು ರೂಪುಗೊಳ್ಳಲಿ. ರಾಘವೇಂದ್ರ ಮಠದ ಬೃಂದಾವನದ ಬಳಿ ಬಜೆಟ್ಟಿನ ಪ್ರತಿಯನ್ನಿಟ್ಟು ಪೂಜಿಸುವುದು, ಅಣ್ಣಮ್ಮನ ದೇವಾಲಯಕ್ಕೆ ಹೋಗಿ ಸರ್ಕಾರವನ್ನು ರಕ್ಷಿಸಲು ಪ್ರಾರ್ಥಿಸುವುದು ಮುಂತಾದವುಗಳನ್ನು ಅಪ್ಪಿತಪ್ಪಿಯೂ ಅನುಸರಿಸಬೇಡಿ. ಅವೆಲ್ಲ ಜನರ ವೈಯುಕ್ತಿಕ ಆಚರಣೆಗೆಯ ಸಂಗತಿಗಳು. ಕುಂಕುಮ ಧರಿಸಿಕೊಂಡು, ಸಿಲ್ಕಿನ ಶಾಲು ಹೊದ್ದುಕೊಂಡು ದೇಶದ ತುಂಬಾ ದೇವಾಲಯಗಳನ್ನು ಸುತ್ತುವುದು ತಾವು ಮಾಡಬೇಡಿ. ಬಸವ ಪ್ರಣೀತ ಕಾಯಕ ಸಂಸ್ಕೃತಿಯ ಪರಂಪರೆಗೆ ತಾವು ಸೇರಿದವರು. ‘ನೀರ ಕಂಡಲ್ಲಿ ಮುಳುಗುವ, ಮರನ ಕಂಡಲ್ಲಿ ಸುತ್ತುವ’ ಸಂಸ್ಕೃತಿಯನ್ನು ವಚನಕಾರರು ‘ಮೌಢ್ಯ’ ಎಂದು ಸಾರಿದ್ದಾರೆ. ರಾಜ್ಯದ ಮೂಲೆ ಮೂಲೆಗಳಲ್ಲಿನ ಗ್ರಾಮಗಳಿಗೆ ಭೇಟಿ ಕೊಡುವಂತೆ ತಮ್ಮ ಮಂತ್ರಿಮಂಡಲದ ಸಚಿವರಿಗೆ ಮನದಟ್ಟು ಮಾಡಿಕೊಡಿ. ‘ಬೆಂಗಳೂರೇ ಕರ್ನಾಟಕ’ ಎನ್ನುವಂತಾಗಿರುವುದನ್ನು ಸರಿಪಡಿಸಲು ಪ್ರಯತ್ನಿಸಿ. ಬೆಂಗಳೂರು ಮೂಲದ ಅನೇಕ ಮಂತ್ರಿಗಳಿಗೆ ನಮ್ಮ ರಾಜ್ಯದಲ್ಲಿ ಎಷ್ಟು ಹಳ್ಳಿಗಳಿವೆ, ನದಿಗಳಿವೆ, ತಾಲ್ಲೂಕುಗಳಿವೆ ಎಂಬುದು ತಿಳಿದಿದೆ ಎಂಬುದರ ಬಗ್ಗೆ ನಮಗೆ ನಮ್ಮದೇ ಆದ ಅನುಮಾನಗಳಿವೆ. ಬೆಂಗಳೂರಿನ ಆರಾಧನೆಯನ್ನು ತಾವು ಕೊನೆಗೊಳಿಸಿ. ಇದೂ ಕೂಡ ಅಭಿವೃದ್ಧಿ ಪ್ರಣಾಳಿಕೆಯ ಒಂದು ಸೂತ್ರವಾಗಲಿ.

Donate Janashakthi Media

Leave a Reply

Your email address will not be published. Required fields are marked *