ಭೀಮಾ ಕೋರೆಗಾಂವ್: ಸುಧಾ ಭಾರದ್ವಾಜ್‌ಗೆ ಜಾಮೀನು ನೀಡಿದ ಬಾಂಬೆ ಹೈಕೋರ್ಟ್

ಮುಂಬಯಿ: ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಬಂಧಿತರಾಗಿದ್ದ ವಕೀಲೆ, ಸಾಮಾಜಿಕ ಕಾರ್ಯಕರ್ತೆ ಸುಧಾ ಭಾರದ್ವಾಜ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಬಾಂಬೆ ಹೈಕೋರ್ಟ್ ಅಂಗೀಕರಿಸಿದೆ.‌

ನ್ಯಾಯಮೂರ್ತಿಗಳಾದ ಎಸ್‌ ಎಸ್ ಶಿಂಧೆ ಮತ್ತು ಎನ್‌ ಜೆ ಜಾಮ್‌ದಾರ್‌ ಅವರಿದ್ದ ಪೀಠ, ಸುಧಾ ಅವರಿಗೆ ಮಾತ್ರ ಜಾಮೀನು ಮಂಜೂರು ಮಾಡಿದೆ. ಆಗಸ್ಟ್ 2018ರಿಂದ ಸುಧಾ ಜೈಲಿನಲ್ಲಿದ್ದು ಅವರನ್ನು ದೆಹಲಿಯಲ್ಲಿ ಬಂಧಿಸಿ ಮುಂಬೈಗೆ ಕರೆದೊಯ್ಯಲಾಗಿತ್ತು.

ಸುಧಾ ಭಾರದ್ವಾಜ್ ಹಾಗೂ 8 ಮಂದಿ ಪುಣೆಯ ಸೆಷನ್ಸ್ ನ್ಯಾಯಾಲಯದ ಅಧಿಕಾರ ವ್ಯಾಪ್ತಿಯನ್ನು ಪ್ರಶ್ನಿಸಿದ್ದರು. ಅಲ್ಲದೆ, ಪ್ರಕರಣದಲ್ಲಿ ಆದೇಶಗಳನ್ನು ಹೊರಡಿಸಲು ಯಾವುದೇ ಅಧಿಕಾರ ಹೊಂದಿಲ್ಲ ಎಂಬ ಕಾರಣಕ್ಕಾಗಿ ಅಪರಾಧ ಪ್ರಕ್ರಿಯಾ ಸಂಹಿತೆಯಡಿಯಲ್ಲಿ ಸಲ್ಲಿಸಲಾದ ಅರ್ಜಿಯನ್ನು ಪುರಸ್ಕರಿಸಿದ ಬಾಂಬೆ ಹೈಕೋರ್ಟ್‌ ಜಾಮೀನು ನೀಡಿತು. ಆರೋಪಪಟ್ಟಿಯನ್ನು ಪರಿಗಣಿಸಿ ಸಿಆರ್‌ಪಿಸಿ ಸೆಕ್ಷನ್ 167 (2)ರ ಅಡಿ ಡಿಫಾಲ್ಟ್ ಜಾಮೀನು ಅರ್ಜಿ ಸಲ್ಲಿಸಲಾಗಿತ್ತು.

ಪುಣೆಯ ಸೆಷನ್ಸ್‌ ನ್ಯಾಯಾಧೀಶರಾದ ಕೆ ಡಿ ವದನೆ ಮತ್ತು ಆರ್ ಎಂ ಪಾಂಡೆ ಅವರು ಎನ್ಐಎ ವಿಶೇಷ ನ್ಯಾಯಾಧೀಶರಲ್ಲ. ಆದ್ದರಿಂದ ಯುಎಪಿಎ ಅಡಿ ತಮ್ಮ ಅರ್ಜಿ ಆಲಿಸಲು ಅವರು ಸಮರ್ಥರಲ್ಲ ಎಂದು ಉಲ್ಲೇಖಿಸಿದ್ದರು.

ಜಾಮೀನು ಷರತ್ತುಗಳಿಗಾಗಿ ಎನ್‌ಐಎ ವಿಶೇಷ ನ್ಯಾಯಾಲಯವನ್ನು ಸಂಪರ್ಕಿಸುವಂತೆ ಭಾರದ್ವಾಜ್ ಅವರಿಗೆ ಹೈಕೋರ್ಟ್‌ ಸೂಚಿಸಿದೆ. ಇದೇ ವೇಳೆ ಜಾಮೀನು ಅರ್ಜಿಯನ್ನು ಸಲ್ಲಿಸಿದ ಎಂಟು ಆರೋಪಿಗಳಾದ ಪಿ ವರವರ ರಾವ್, ಸುಧೀರ್ ಧವಳೆ, ರೋನಾ ವಿಲ್ಸನ್, ಸುರೇಂದ್ರ ಗಾಡ್ಲಿಂಗ್, ಶೋಮಾ ಸೇನ್, ಮಹೇಶ್ ರಾವುತ್, ವೆರ್ನನ್‌ ಗೊನ್ಸಾಲ್ವೆಸ್‌ ಮತ್ತು ಅರುಣ್ ಫೆರೇರಾ ಸಲ್ಲಿಸಿದ ಮನವಿಯನ್ನು ನ್ಯಾಯಮೂರ್ತಿಗಳಾದ ಎಸ್‌ ಎಸ್ ಶಿಂಧೆ ಮತ್ತು ಎನ್‌ ಜೆ ಜಾಮ್‌ದಾರ್‌ ಅವರಿದ್ದ ಪೀಠ ತಿರಸ್ಕರಿಸಿತು.

ಛತ್ತೀಸ್‌ಗಢದಲ್ಲಿ ಬುಡಕಟ್ಟು ಸಮುದಾಯ ಹಾಗೂ ಇತರರ ಹಕ್ಕುಗಳಿಗಾಗಿ ಕೆಲಸ ಮಾಡಿದ ಸುಧಾ ಭಾರದ್ವಾಜ್ ತಮ್ಮ ಬಂಧನ ನಡೆದಾಗ ದೆಹಲಿಯ ಪ್ರತಿಷ್ಠಿತ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದಲ್ಲಿ ಬೋಧಕರಾಗಿದ್ದರು.

ಸುಧಾ ಅವರ ಬಂಧನಕ್ಕೂ ಮುನ್ನ ಇದೇ ಪ್ರಕರಣದಲ್ಲಿ ಆಂಧ್ರದ ಕ್ರಾಂತಿಕಾರಿ ಕವಿ ವರವರ ರಾವ್, ಲೇಖಕ ಆನಂದ ತೆಲ್ತುಂಬ್ಡೆ, ಮಾನವ ಹಕ್ಕು ಕಾರ್ಯಕರ್ತ ಅರುಣ್, ಪತ್ರಕರ್ತ ಗೌತಮ್, ಮಾನವ ಹಕ್ಕುಗಳ ಕಾರ್ಯಕರ್ತೆ ಸುಸಾನ್ ಅಬ್ರಹಾಂ, ಸಾಮಾಜಿಕ ಹೋರಾಟಗಾರ ಗೊನ್ಸಾಲ್ವಿಸ್ ಅವರುಗಳನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದರು.

ಭೀಮಾ ಕೋರೆಗಾಂವ್ ಯುದ್ಧ ಯಾಕಾಗಿ ನಡೆಯಿತು : ಜನವರಿ 1, 1818 ಅದು ಮಹಾರಾಷ್ಟ್ರದಲ್ಲಿ ಪೇಶ್ವೆಗಳ ಆಡಳಿತದ ಕಾಲ. ಪೇಶ್ವೆಗಳ ಆಗಿನ ರಾಜಧಾನಿಯಾದ ಪೂನಾದಲ್ಲಿ ಅಸ್ಪೃಶ್ಯನೋರ್ವ ನಡೆದ ದಾರಿಯಲ್ಲಿ ಹಿಂದೂಗಳು ನಡೆದು ಸದರಿ ಹಿಂದೂ ಮಲಿನಗೊಳ್ಳುವುದನ್ನು ತಡೆಯಲು ಅಸ್ಪೃಶ್ಯನು ತನ್ನ ನಡುವಿಗೆ ಹಗ್ಗವೊಂದನ್ನು ಬಿಗಿದು ಅದಕ್ಕೆ ಕಸಪೊರಕೆಯೊಂದನ್ನು ಕಟ್ಟಿ ತಾನು ನಡೆದ ದಾರಿಯನ್ನು ತಾನೇ ಗುಡಿಸಬೇಕಾಗಿತ್ತು! ಅದಲ್ಲದೆ ಅದೇ ಪೂನಾ ನಗರದಲ್ಲಿ ಅಕಸ್ಮಾತ್ ಅಸ್ಪೃಶ್ಯನೊಬ್ಬ ದಾರಿಯಲ್ಲಿ ಉಗಿದರೆ ಮತ್ತು ಆ ಉಗುಳನ್ನು ಹಿಂದೂವೊಬ್ಬ ತುಳಿದು ಆತ ಮಲಿನವಾಗುವುದನ್ನು ತಪ್ಪಿಸಲು ಅಸ್ಪೃಶ್ಯ ತನ್ನ ಕೊರಳಿಗೆ ಮಣ್ಣಿನ ಮಡಕೆಯೊಂದನ್ನು ನೇತುಹಾಕಿಕೊಳ್ಳಬೇಕಾಗುತ್ತಿತ್ತು ಮತ್ತು ಉಗಿಯಬೇಕೆಂದಾಗ ಆತ ಆ ಮಡಕೆಯಲ್ಲಿ ಉಗಿಯಬೇಕಾಗಿತ್ತು”! ಪೇಶ್ವೆಗಳ ಕಾಲದ ಅಸ್ಪೃಶ್ಯರ ಸ್ಥಿತಿಗತಿಯನ್ನು ಅಂಬೇಡ್ಕರರು ಹೀಗೆ ವಿವರಿಸುತ್ತಾ ಹೋಗುತ್ತಾರೆ.

ಹೀಗಿರುವಾಗ ಇಂತಹ ವಿಚಿತ್ರ ಸಾಮಾಜಿಕ ದುಸ್ಥಿತಿಯ ಸಂದರ್ಭದಲ್ಲಿ ಮಾಹಾರಾಷ್ಟ್ರದ ಅಸ್ಪೃಶ್ಯರಾದ ಮಹಾರರಿಗೆ ದೌರ್ಜನ್ಯಕೋರ ಇಂತಹ ಪೇಶ್ವೆಗಳ, ಮತ್ತವರ ಸಾಮ್ರಾಜ್ಯದ ವಿರುದ್ಧ ಹೋರಾಡುವ ಅದ್ಭುತ ಅವಕಾಶವೊಂದು ಬರುತ್ತದೆ. ಹೌದು, ಅದೇ ಕೋರೇಗಾಂವ್ ಯುದ್ಧ.  ಮಹಾರ್ ಸೈನಿಕರು ಅತ್ಯಮೋಘ ಧೈರ್ಯದಿಂದ, ಎಲ್ಲಾ ದುರಾದೃಷ್ಟಗಳ ನಡುವೆ ಹೋರಾಡುತ್ತ ವೀರಾವೇಶದಿಂದ ಮುನ್ನುಗ್ಗುತ್ತಾರೆ. ಅಂದಹಾಗೆ ಮಹಾರ್ ಸೈನಿಕರ ಅಂತಹ ಮುನ್ನುಗ್ಗುವಿಕೆಯಲ್ಲಿ ಅದೆಂತಹ, ಅದೆಷ್ಟು ಶತಮಾನಗಳ ನೋವಿನ ಆಕ್ರೋಶವಿತ್ತು? ತತ್ಫಲವಾಗಿ ಬಹುಸಂಖ್ಯೆಯಲ್ಲಿದ್ದರೂ ಕೂಡ ಪೇಶ್ವೆಯ ಸೈನ್ಯ ಹಿಮ್ಮೆಟ್ಟಿ ಸೋತು ರಾತ್ರಿ 9 ಗಂಟೆಗೆ ಧಾಳಿಯನ್ನು ನಿಲ್ಲಿಸುತ್ತದೆ ಹಾಗೂ ವಿಧಿಯಿಲ್ಲದೆ ಕೋರೇಗಾಂವ್‍ನಿಂದ ರಾತ್ರೋರಾತ್ರಿ ಕಾಲ್ಕೀಳುತ್ತದೆ. ಒಟ್ಟಾರೆ ಅತ್ಯಮೋಘ ಧೈರ್ಯ ಮತ್ತು ಶಿಸ್ತುಬದ್ಧ ಶೌರ್ಯವನ್ನು ಪ್ರದರ್ಶಿಸಿದ ಮಹಾರ್ ಸೈನಿಕರು ಶೋಷಕ ಪೇಶ್ವೆಗಳ ವಿರುದ್ಧ ಅಭೂತಪೂರ್ವ ಜಯ ದಾಖಲಿಸುತ್ತಾರೆ.

2018ರ ಜನವರಿ 1ರಂದು 200 ವರ್ಷಗಳ ಆಚರಣೆಯ ಹಿನ್ನೆಲೆಯಲ್ಲಿ ‘ವಿಜಯ ದಿವಸ’ ಎಂಬ ಹೆಸರಿನಲ್ಲಿ ದಲಿತರು ಬೃಹತ್‌ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಆದರೆ ಆಚರಣೆಯ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಘರ್ಷಣೆ ಉಂಟಾಗಿ, ದಲಿತ ಯುವಕನೋರ್ವ ಮೃತಪಟ್ಟಿದ್ದ. ಇದರಿಂದ ಈ ಘರ್ಷಣೆ ಉಗ್ರರೂಪ ಪಡೆದು, ಸಾಕಷ್ಟು ಜನರಿಗೆ ಗಾಯವಾಗಿತ್ತು. ನಂತರ ಮಹಾರಾಷ್ಟ್ರ ಬಂದ್ ಸಹ ಆಚರಿಸಲಾಗಿತ್ತು.

Donate Janashakthi Media

Leave a Reply

Your email address will not be published. Required fields are marked *