ಮರಿಯಮ್ಮನಹಳ್ಳಿ: ಸೆಪ್ಟೆಂಬರ್ 28ರಂದು ಬಿಎಂಎಂ ಕಾರ್ಖಾನೆಯ ಇಂಟಿಗ್ರೇಟೆಡ್ ಸ್ಟೀಲ್ ಪ್ಲಾಂಟ್ 0.96 ಎಂ.ಟಿ.ಪಿ.ಎ ಯಿಂದ 2.1 ಎಂ.ಟಿ.ಪಿ.ಎ ಸಾಮರ್ಥ್ಯದ ಹಾಗೂ ಸಿಮೆಂಟ್ ಘಟಕ ವಿಸ್ತರಿಸಲು ವಿರೋಧಿಸಿ ಸುತ್ತಮುತ್ತಲಿನ ಗ್ರಾಮಗಳಾದ ಗುಂಡ, ಗರಗ, ಜಿ.ನಾಗಲಾಪುರ, ಬ್ಯಾಲಕುಂದಿ, ಗೊಲ್ಲರಹಳ್ಳಿ, ಡಣನಾಯಕನ ಕೆರೆ, ಗ್ರಾಮದ ಗ್ರಾಮಸ್ಥರು ಮತ್ತು ಮರಿಯಮ್ಮನಹಳ್ಳಿ ಪಟ್ಟಣದ ರೈತರು, ಸಾರ್ವಜನಿಕರು ಒಟ್ಟುಗೂಡಿ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಬುಧವಾರ ಪಾದಯಾತ್ರೆಯನ್ನು ನಡೆಸಿದರು.
ಈ ಪಾದಯಾತ್ರೆ ಗುಂಡ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಹೊರಟು ಮರಿಯಮ್ಮನಹಳ್ಳಿಯ ನಾರಾಯಣ ದೇವರ ಕೆರೆ ವೃತ್ತದಲ್ಲಿ ಜಮಾಯಿಸಿ, ಕಾರ್ಖಾನೆಯ ಲೋಪಗಳನ್ನು ತಿಳಿಸುತ್ತಾ ಬಿ.ಎಂ.ಎಂ ಕಾರ್ಖಾನೆಗೆ ಧಿಕ್ಕಾರದ ಘೋಷಣೆಗಳನ್ನು ಕೂಗಿ ವಿಜಯನಗರ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿದರು.
ಈಗಾಗಲೇ ಸುತ್ತಮುತ್ತಲು ಕಾರ್ಖಾನೆಗಳು ಹೆಚ್ಚಾಗಿರುವ ಕಾರಣ ಪರಿಸರ ಮಾಲಿನ್ಯ ಅಧಿಕವಾಗುತ್ತಿದೆ. ಆವರಿಸುತ್ತಿರುವ ಕರಿ ದೂಳು ಮತ್ತು ಕಲುಷಿತ ಗಾಳಿ ಸೇವನೆ ಇಂದಾಗಿ ಟಿಬಿ, ಆಸ್ತಮ, ಚರ್ಮರೋಗ, ಕ್ಷಯ ರೋಗ, ಹೃದಯ ಸಂಬಂಧಿ ಕಾಯಿಲೆ, ಹಾಗೂ ಇನ್ನೂ ಹಲವಾರು ಕಾಯಿಲೆಗಳಿಗೆ ಜನರು ತುತ್ತಾಗುತ್ತಿದ್ದಾರೆ. ತುಂಗಭದ್ರ ನದಿಯು ಈ ಕಾರ್ಖಾನೆಗಳಿಗೆ ಹತ್ತಿರವಿರುವುದರಿಂದ ಕಾರ್ಖಾನೆಯ ಕರಿ ದೂಳು ನದಿ ಮೇಲೆ ನೇರವಾಗಿ ಬೀಳುತ್ತಿರುವುದರಿಂದ ತುಂಗಭದ್ರ ನದಿ ನೀರು ಸಹ ಕಲುಷಿತಗೊಳ್ಳುತ್ತಿದೆ, ಬಿಎಂಎಂ ಕಾರ್ಖಾನೆಯ ಪಕ್ಕದಲ್ಲಿ ಡಣಾಯಕನಕೆರೆ, ನಾಗಲಾಪುರ ಕೆರೆ, ಇನ್ನೂ ಹಲವು ಕೆರೆಗಳು ಇದ್ದು ಅವುಗಳ ನೀರು ಸಹ ಕಲುಷಿತಗೊಳ್ಳುತ್ತಿವೆ. ಅಲ್ಲದೇ ರೈತರು ಬೆಳೆದಂತಹ ಬೆಳೆಗಳ ಮೇಲೂ ಪರಿಣಾಮ ಬೀರುತ್ತಿದೆ. ಕಾರ್ಖಾನೆಗಳು ನಿರ್ಮಿಸಲಿಕ್ಕೆ ವಿರೋಧವಿಲ್ಲ, ಆದರೆ ಕೃಷಿ ಭೂಮಿಗಳನ್ನು ಸರ್ವನಾಶ ಮಾಡಿ ಬಂಜರು ಭೂಮಿಗಳೆಂದು ಕನ್ವರ್ಶನ್ ಮಾಡಿ ಕಾರ್ಖಾನೆ ನಿರ್ಮಿಸುವುದಕ್ಕೆ ವಿರೋಧಿಸಲಾಗುತ್ತಿದೆ. ಆದರೆ ಅಧಿಕಾರಿಗಳು ಕೃಷಿ ಭೂಮಿಗಳಲ್ಲೇ ಕಾರ್ಖಾನೆ ನಿರ್ಮಿಸುತ್ತಿರುವುದಕ್ಕೆ ಅನುಮತಿ ಕೊಡುತ್ತಿರುವುದು ವಿಪರ್ಯಾಸದ ಸಂಗತಿ. ಸರ್ಕಾರಗಳು ಇದನ್ನು ಸೂಕ್ಷ್ಮವಾಗಿ ಗಮನಿಸಬೇಕು, ಅಧಿಕಾರಿಗಳು ಯಾವುದೇ ಕಾರಣಕ್ಕೆ ಬಿ.ಎಂ.ಎಂ ಕಾರ್ಖಾನೆಯ ಇಂಟಿಗ್ರೇಟೆಡ್ ಸ್ಟೀಲ್ ಪ್ಲಾಂಟ್ ಉನ್ನತಿಗೆ ಅನುಮತಿ ನೀಡಬಾರದು. ಕಾರ್ಖಾನೆಯವರು ಕಳೆದ 20 ವರ್ಷದಿಂದ ಖರೀದಿ ಮಾಡಿದ ಕೃಷಿ ಭೂಮಿಗಳನ್ನು ನಿಯಮಬಾಹಿರವಾಗಿ ಖರೀದಿ ಮಾಡಿದ್ದು, ಈ ಭೂಮಿಗಳು ಬಹುತೇಕವಾಗಿ ಎಸ್ಸಿಎಸ್ಟಿ ಸಮುದಾಯಕ್ಕೆ ಸೇರಿದ ಭೂಮಿ ಗಳಾಗಿವೆ. ಭೂಮಿಯನ್ನು ಕಳೆದುಕೊಂಡ ರೈತರಿಗೆ ಯಾವುದೇ ರೀತಿಯ ಉದ್ಯೋಗವನ್ನು ಸಹ ನೀಡಿತ್ತಿಲ್ಲ. ಕಾರ್ಖಾನೆಯವರು ನೂರಾರು ಎಕರೆ ಕೃಷಿ ಭೂಮಿಯನ್ನು ಖರೀದಿ ಮಾಡಿದ್ದಾರೆ. ಆದರೆ ಇದುವರೆಗೂ ಅವುಗಳನ್ನು ಉಪಯೋಗಿಸಿಲ್ಲದಿರುವುದರಿಂದ ಅಂತ ಭೂಮಿಗಳನ್ನು ಮರಳಿ ಅದೇ ಕುಟುಂಬಕ್ಕೆ ಅದೇ ಕೃಷಿಕರಿಗೆ ಮರಳಿಸಬೇಕೆಂದು ಸರದಾರ ಒತ್ತಾಯಿಸಿದರು.
ದಿನಾಂಕ 15.9.2022 ರಂದು ಡಣಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಿಎಂಎಂ ಕಾರ್ಖಾನೆಯ ವಲಯ ವ್ಯಾಪ್ತಿಯಲ್ಲಿ ಪರಿಸರ ಆಲಿಕೆ ಸಭೆಯನ್ನು ಆಯೋಜಿಸಲಾಗಿತ್ತು. ಆ ಸಭೆಯನ್ನು ಸಾರ್ವಜನಿಕರಿಗೆ ಡಂಗುರ ಮುಖಾಂತರ ಅಥವಾ ಯಾವುದೇ ರೀತಿಯ ಪ್ರಚಾರ ಮುಖಾಂತರ ತಿಳೀಸದೆ, ಈ ಸಭೆಯಲ್ಲಿ ಕಾರ್ಖಾನೆಯಲ್ಲಿನ ಗುತ್ತಿಗೆದಾರರು ಮತ್ತು ಕಂಪನಿ ಉದ್ಯೋಗಿಗಳದ್ದೇ ಸೇರಿದ್ದರು. ರೈತರಿಗೆ ಮತ್ತು ಸಾರ್ವಜನಿಕರಿಗೆ ಮುಕ್ತವಾಗಿ ಮಾತನಾಡಲು ಅವಕಾಶವನ್ನು ಕಲ್ಪಿಸಿರಲಿಲ್ಲ. ಸಾರ್ವಜನಿಕರನ್ನು ಮತ್ತು ರೈತರನ್ನು ವೇದಿಕೆಗೆ ಹೋಗಿ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಬಿಡದೆ ಪೊಲೀಸರು ಮತ್ತು ಕಾರ್ಖಾನೆಯ ಸೆಕ್ಯೂರಿಟಿ ಗಾರ್ಡ್ ಗಳಿಂದ ತಡೆದಿದ್ದರು. ಆ ಸಭೆಯಲ್ಲಿ ಅಭಿಪ್ರಾಯಗಳನ್ನು ಹೇಳುವಾಗ ಮೈಕ್ ಸುತ್ತ ಗುತ್ತಿಗೆದಾರರು ಮತ್ತು ಕಂಪನಿಯ ಉದ್ಯೋಗಿಗಳು ಸುತ್ತುವರೆದಿದ್ದು, ಕಾರ್ಖಾನೆ ಪರವಾಗಿ ಮಾತನಾಡುವವರಿಗೆ ತುಂಬಾ ಹೊತ್ತು ಅವಕಾಶ ಮಾಡಿಕೊಡುತ್ತಿದ್ದರು. ವಿರೋಧ ವ್ಯಕ್ತಪಡಿಸುವವರಿಗೆ ಕಡಿಮೆ ಕಾಲಾವಕಾಶ ಕೊಟ್ಟು ಅವರಿಂದ ಮೈಕನ್ನು ಕಿತ್ತುಕೊಳ್ಳಲಾಗುತ್ತಿತ್ತು.
ಅಂದಿನ ಸಭೆಯಲ್ಲಿ ಕೇವಲ 2000 ಆಸನಗಳಷ್ಟು ಮಾತ್ರ ವ್ಯವಸ್ಥೆ ಮಾಡಲಾಗಿತ್ತು. ಆದರೆ ಅರ್ಜಿಗಳು ಮಾತ್ರ 10.000 ಸಾವಿರಕ್ಕೂ ಮೇಲ್ಪಟ್ಟು ಬಂದಿದ್ದವು ಎಂದು ತಿಳಿದುಬಂದಿದೆ. ಗುತ್ತಿಗೆದಾರರು ಮತ್ತು ಕಂಪನಿಯ ಉದ್ಯೋಗಿಗಳು ಮನೆಯಲ್ಲೇ ಕುಳಿತು ಕಾರ್ಖಾನೆ ಉನ್ನತಿಕರಣಕ್ಕೆ ಸಹಮತ ಪತ್ರಗಳನ್ನು ಸೃಷ್ಟಿಸಿ ಪೋರ್ಜರಿ ಸಹಿ ಮಾಡಿಕೊಂಡು ಸಾರ್ವಜನಿಕರ ಸೋಗಿನಲ್ಲಿ ಬಂಡಲ್ ಗಟ್ಟಲೆ ತಂದು ಆಲಿಕೆ ಸಭೆ ಅಧಿಕಾರಿಗಳಿಗೆ ತಲುಪಿಸಿರುತ್ತಾರೆ ಇದು ಅಲಿಕೆ ಸಭೆ ನಡಾವಳಿಯ ಉಲ್ಲಂಘನೆಯಂತಾಗುತ್ತದೆ..
ಆ ಆಲಿಕೆ ಸಭೆಯು ಬಿ.ಎಂ.ಎಂ. ಕಂಪನಿಯ ಸಭೆಯಾಗಿತ್ತೇ ವಿನಃ ಸಾರ್ವಜನಿಕ ಆಲಿಕೆ ಸಭೆಯಾಗಿರಲಿಲ್ಲ ಆದ್ದರಿಂದ ಸಾರ್ವಜನಿಕರು ಅಂದೆ ಸಾರ್ವಜನಿಕವಾಗಿ ಪ್ರಭಲವಾಗಿ ಬಹಿಷ್ಕರಿಸಿದರು. ಆಲಿಕೆ ಸಭೆಗಳು ಆಯಾ ಗ್ರಾಮ ಮಟ್ಟದಲ್ಲಿ ನಡೆಯಬೇಕೆಂದು ರೈತರು ಒತ್ತಾಯಿಸಿದರು.
ಕಾರ್ಖಾನೆಯವರು ಬಂಡಿ ದಾರಿ, ಕಾಲುದಾರಿ, ಕೆರೆ, ಹಳ್ಳ ಕೊಳ್ಳ, ಸಾರ್ವಜನಿಕ ರುದ್ರಭೂಮಿ, ಇವುಗಳನ್ನು ನಾಶ ಮಾಡಿ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುತ್ತಾರೆ. ಕೃಷಿ ಭೂಮಿಗಳನ್ನು ಬಂಜರು ಭೂಮಿಗಳೆಂದು ಪರಿವರ್ತಿಸಿ ಕಾರ್ಖಾನೆಗೆ ನೀಡಿರುತ್ತಾರೆ ಇಷ್ಟೆಲ್ಲಾ ಅನಾಹುತಗಳು ನಡೆದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಕುರುಡರಂತೆ ವರ್ತಿಸುತ್ತಿದ್ದಾರೆ. ಈ ಅಧಿಕಾರಿಗಳ ವರ್ತನೆಯಿಂದ ಕಾರ್ಖಾನೆಯ ಪರವಾಗಿ ಕೆಲಸ ಮಾಡುತ್ತಿದ್ದಾರೆ ರೈತರ ಪರವಾಗಿಲ್ಲವೆಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಆರೋಪಿಸಿದರು.
ಬಿ.ಎಂ.ಎಂ ಕಾರ್ಖಾನೆ ಸ್ಥಾಪನೆಯಾಗಿ 20 ವರ್ಷ ಕಳೆದರೂ ಸ್ಥಳೀಯರಿಗೆ ಉದ್ಯೋಗವನ್ನು ನೀಡದೇ ಹೊರ ರಾಜ್ಯದವರಿಗೆ ಮಾನ್ಯತೆ ನೀಡಲಾಗುತ್ತಿದೆ. ಭೂಮಿ ಕೊಟ್ಟಿರುವಂತಹ ಕೃಷಿಕರಿಗೆ ಉದ್ಯೋಗ ಕೊಡದೆ ಇದುವರೆಗೂ ಅಲೆದಾಡಿಸುತ್ತಿದ್ದಾರೆ. ಕಾರ್ಖಾನೆಯವರು ಸಿಎಸ್ಆರ್ ಫಂಡ್ ನಲ್ಲಿ ಕಡಿಮೆ ಕೆಲಸಗಳನ್ನು ಮಾಡಿ ಹೆಚ್ಚಿನ ಕೆಲಸಗಳನ್ನು ಮಾಡಿದ್ದೇವೆ ಎಂದು ಬೀಗುತ್ತಿದ್ದಾರೆ, ಕಾರ್ಖಾನೆ ರೈತರಿಗೆ ಮತ್ತು ಸಾರ್ವಜನಿಕರಿಗೆ ದೊಡ್ಡ ಮೋಸ ಮಾಡುತ್ತಿದೆ. ಇದನ್ನು ನಾವು ಯಾವತ್ತೂ ಸಹಿಸುವುದಿಲ್ಲ ಕಾರ್ಖಾನೆ ಉನ್ನತಿಕರಣಕ್ಕೆ ಅನುಮತಿ ನೀಡಬಾರದೆಂದು, ಒಂದು ವೇಳೆ ಅನುಮತಿ ನೀಡಿದ್ದೆ ಆದಲ್ಲಿ ಈ ನಮ್ಮ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ ಮುಂದೆ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳುತ್ತೇವೆಂದು ಹೊರಾಟಗಾರರಾದ ಮಾರೇಶ್ ಹೇಳಿದರು.
ಈ ಪಾದಯಾತ್ರೆಗೆ ಪೊಲೀಸ್ ಇಲಾಖೆಯ ಹಗರಿಬೊಮ್ಮನಹಳ್ಳಿಯ ಸಿ.ಪಿ.ಐ ಮಂಜಣ್ಣ ಅವರ ನೇತೃತ್ವದಲ್ಲಿ ಮರಿಯಮ್ಮನಹಳ್ಳಿ ಠಾಣೆಯ ಆರಕ್ಷಕ ಉಪ ನಿರೀಕ್ಷಕರಾದ ಹನುಮಂತಪ್ಪ ತಳವಾರ್ ಮತ್ತು ತಂಬ್ರಳ್ಳಿ ಠಾಣೆಯ ಸಿಬ್ಬಂದಿಗಳೊಂದಿಗೆ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಈ ಸಂಧರ್ಭದಲ್ಲಿ ರೈತರು ಮತ್ತು ಹೋರಾಟಗಾರರದ ಮಾರೇಶ, ಎ.ಕೆ.ಹನುಮಂತ, ಪ್ರಭು, ಪರುಶುರಾಮ, ಸ್ವಾಮಿ, ಮೆಗ್ಯನಾಯ್ಕ್, ಚಿನ್ನಪ್ರ, ಹೆಚ್.ಅಂಜಿನಪ್ಪ, ಸರ್ದಾರ್, ಎಲ್. ಮಂಜುನಾಥ, ಯಾರಿಸ್ವಾಮಿ, ಗುರು, ಕುಮಾರ, ಪರಶುರಾಮ, ಬಾಬುಲ್, ಣಿವೆಪ್ಪ, ಸುರೇಶ, ಲಕ್ಷ್ಮಣ,ಸತೀಶ, ರೆಖ್ಯಾನಾಯ್ಕ್, ಕೋಮರೆಪ್ಪ, ಮರಿ ಕಾಶಪ್ಪ, ಹುಲುಗಪ್ಪ, ರಮೇಶ, ಈರಣ್ಣ, ಫಕೀರಪ್ಪ, ಹುಲೆಪ್ಪ, ಇನ್ನೂ ಅನೇಕ ಸಾರ್ವಜನಿಕರು ರೈತರು ಭಾಗವಹಿಸಿದ್ದರು.