ಪ್ರಕಾಶ್ ಕಾರಟ್
ಯಾವುದೇ ವಿಷಯವನ್ನು ಚರ್ಚಿಸಲು ಹಾಗೂ ಪ್ರತಿಪಕ್ಷಗಳು ಎತ್ತುವ ಪ್ರಶ್ನೆಗಳಿಗೆ ಉತ್ತರಿಸಲು ಸರ್ಕಾರ ಸಿದ್ಧವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸಾರಿದ್ದಕ್ಕೆ ತದ್ವಿರುದ್ಧವಾಗಿ ಹೇಗೆ ತರಾತುರಿಯಲ್ಲಿ ಮೂರು ಕೃಷಿ ಕಾನೂನುಗಳನ್ನು ಅಂಗೀಕರಿಸುವಂತೆ ಮಾಡಿತ್ತೋ, ಅದೇ ರೀತಿಯಲ್ಲಿ ಕಾನೂನುಗಳನ್ನು ವಾಪಸ್ ಪಡೆಯುವ ಪ್ರಕ್ರಿಯೆಯನ್ನೂ ಕೆಲವೇ ನಿಮಿಷಗಳಲ್ಲಿ ಮುಗಿಸಿ ಬಿಟ್ಟಿದೆ. ಇಬ್ಬರೂ ಸಭಾಧ್ಯಕ್ಷರುಗಳು ಸಂಸದೀಯ ಶಿಷ್ಟಾಚಾರಗಳಿಗೆ ಒಂದಿಷ್ಟೂ ಗೌರವ ತೋರಲಿಲ್ಲ. ಸಂಸತ್ ಸದಸ್ಯರು ಮತ್ತು ಪ್ರತಿಪಕ್ಷದ ಹಕ್ಕುಗಳ ಮೇಲಿನ ಈ ದಾಳಿಗಳನ್ನು ಪ್ರತಿಪಕ್ಷಗಳು ಒಗ್ಗಟ್ಟಿನಿಂದ ಪ್ರತಿಭಟಿಸುತ್ತಿವೆ. ಸಂಸತ್ತಿನ ಒಳಗಡೆ ನಿರ್ದಿಷ್ಟ ಪ್ರಶ್ನೆಗಳ ಮೇಲೆ ಈ ಒಗ್ಗಟ್ಟಿನ ಕಾರ್ಯಾಚರಣೆ ಒಂದು ಸಂಯುಕ್ತ ಪ್ರತಿರೋಧವನ್ನು ಹೇಗೆ ಕಟ್ಟಬಹುದು ಎಂಬುದಕ್ಕೆ ಮಾದರಿಯಂತಿದೆ.
ಸಂಸತ್ತು ಹಾಗೂ ಅದರ ಪ್ರಜಾಸತ್ತಾತ್ಮಕ ಕಾರ್ಯನಿರ್ವಹಣೆ ಬಗ್ಗೆ ಸಾರಾಸಗಟು ತಿರಸ್ಕಾರ-ಇದು ಸಂಸತ್ತಿನ ಬಗ್ಗೆ ಮೋದಿ ಸರ್ಕಾರದ ಧೋರಣೆ ಎಂಬುದನ್ನು ಸಂಸತ್ತಿನ ಚಳಿಗಾಲದ ಅಧಿವೇಶನದ ಮೊದಲ ದಿನವೇ ಪ್ರಕಟಗೊಳಿಸಿದೆ.
ಯಾವುದೇ ವಿಷಯವನ್ನು ಚರ್ಚಿಸಲು ಹಾಗೂ ಪ್ರತಿಪಕ್ಷಗಳು ಎತ್ತುವ ಪ್ರಶ್ನೆಗಳಿಗೆ ಉತ್ತರಿಸಲು ಸರ್ಕಾರ ಸಿದ್ಧವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸಾರಿದ್ದರು. ಆದರೆ ತದ್ವಿರುದ್ಧವಾಗಿ, ಮೂರು ಕೃಷಿ ಕಾನೂನುಗಳನ್ನು ವಾಪಸ್ ಪಡೆಯುವ ಹಾಗೂ ಅದಕ್ಕೆ ಸಂಬಂಧಿಸಿದ ವಿಚಾರಗಳ ಚರ್ಚೆಗೆ ಆಳುವ ಪಕ್ಷ ಅವಕಾಶವನ್ನು ನಿರಾಕರಿಸಿದೆ.
2020ರ ಸೆಪ್ಟೆಂಬರ್ನಲ್ಲಿ ಹೇಗೆ ತರಾತುರಿಯಲ್ಲಿ ಯಾವುದೇ ಚರ್ಚೆಯಿಲ್ಲದೆ, ಹಾಗೂ ಸಂಬಂಧಪಟ್ಟ ಸಂಸದೀಯ ಸಮಿತಿಯ ಪರಿಶೀಲನೆಗೆ ಒಳಪಡಿಸದೆ ಮೂರು ಕೃಷಿ ಕಾನೂನುಗಳನ್ನು ಅಂಗೀಕರಿಸುವಂತೆ ಸರ್ಕಾರ ಮಾಡಿತ್ತೋ, ಅದೇ ರೀತಿಯಲ್ಲಿ ಕಾನೂನುಗಳನ್ನು ವಾಪಸ್ ಪಡೆಯುವ ಪ್ರಕ್ರಿಯೆಯನ್ನೂ ಕೆಲವೇ ನಿಮಿಷಗಳಲ್ಲಿ, ಯಾವುದೇ ಚರ್ಚೆಗೆ ಅವಕಾಶ ನಿರಾಕರಿಸುತ್ತಲೇ ಮುಗಿಸಿ ಬಿಟ್ಟಿದೆ. ಲೋಕಸಭಾಧ್ಯಕ್ಷರು ಮತ್ತು ರಾಜ್ಯಸಭೆಯ ಸಭಾಪತಿಗಳು ಸಂಸದೀಯ ಶಿಷ್ಟಾಚಾರಗಳಿಗೆ ಒಂದಿಷ್ಟೂ ಗೌರವ ತೋರಲಿಲ್ಲ.
ರಾಜ್ಯಸಭೆಯಲ್ಲಂತೂ ಸರ್ವಾಧಿಕಾರಶಾಹಿಯ ಅತ್ಯಂತ ಕೆಟ್ಟ ಪ್ರದರ್ಶನವಾಯಿತು. ರಾಜ್ಯಸಭೆಯಲ್ಲಿ ಎಲ್ಲ ಕಾನೂನುಗಳಿಗೆ ಬಹುಮತ ಪಡೆಯುವ ಬಗ್ಗೆ ಬಿಜೆಪಿಗೆ ಖಾತರಿಯಿಲ್ಲ. ಹಾಗಾಗಿ ಪ್ರತಿಪಕ್ಷದ ಧ್ವನಿಯನ್ನು ಅಡಗಿಸುವುದು ಸರ್ಕಾರ ಹಾಗೂ ಆಳುವ ಪಕ್ಷದ ಧೋರಣೆ ಎನ್ನುವುದು ಸುಸ್ಪಷ್ಟ. ಯಾವುದೇ ಪ್ರಮುಖ ಕಾನೂನನ್ನು ಜಂಟಿ ಆಯ್ಕೆ ಸಮಿತಿ ಪರಿಶೀಲನೆಗೆ ಒಪ್ಪಿಸಲು ನಿರಾಕರಣೆ, ಮಸೂದೆಗಳ ಮೇಲೆ ಸಮಗ್ರ ಚರ್ಚೆಗೆ ನಿರಾಕರಣೆ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಮತವಿಭಜನೆ ಮತ್ತು ಮತದಾನ ನಡೆಸಬೇಕೆಂದು ಕೇಳುವ ಸದಸ್ಯರ ಹಕ್ಕನ್ನು ನಿರಾಕರಿಸಿದ್ದು-ಇವೆಲ್ಲವೂ ಪ್ರತಿಪಕ್ಷದ ಧ್ವನಿ ಅಡಗಿಸುವ ಹುನ್ನಾರ.
ಅಧಿವೇಶನದ ಮೊದಲ ದಿನವೇ ರಾಜ್ಯಸಭೆಯಲ್ಲಿ 12 ಸಂಸದರನ್ನು ಇಡೀ ಅಧಿವೇಶನದಿಂದ ಅಮಾನತು ಮಾಡುವ ನಿರ್ಣಯವನ್ನು ಅಂಗೀಕರಿಸಲಾಯಿತು. ಈ 12 ಸದಸ್ಯರು ಸಂಸತ್ತಿನ ಹಿಂದಿನ ಅಧಿವೇಶನದ ವೇಳೆ ಆಗಸ್ಟ್ 11ರಂದು ಅಶಿಸ್ತಿನಿಂದ ಹಾಗೂ ಹಿಂಸಾತ್ಮಕವಾಗಿ ವರ್ತಿಸಿದರು ಎನ್ನುವುದು ಅವರ ವಿರುದ್ಧದ ಆರೋಪವಾಗಿದೆ. ಪ್ರತಿಪಕ್ಷಗಳು ಪ್ರತಿಕ್ರಿಯಿಸಿ ಪ್ರಚೋದನೆಗೆ ಒಳಗಾಗುವಂತೆ ಮಾಡುವುದು ಹಾಗೂ ಪ್ರತಿಪಕ್ಷದ ಹಾಜರಿಯಿಲ್ಲದೆ ಮಸೂದೆಗಳನ್ನು ಸರ್ಕಾರ ಅಂಗೀಕರಿಸಲು ಸಾಧ್ಯವಾಗುವ ಸನ್ನಿವೇಶ ನಿರ್ಮಿಸುವುದು ಈ ಪೂರ್ವನಿರ್ಧಾರಿತ ಪ್ರಚೋದನಾತ್ಮಕ ಕ್ರಮದ ಹಿಂದಿನ ಉದ್ದೇಶವಾಗಿತ್ತು.
ಸಾಮಾನ್ಯ ವಿಮೆಯನ್ನು (ಜನರಲ್ ಇನ್ಶೂರೆನ್ಸ್) ಖಾಸಗೀಕರಿಸುವ ಮಸೂದೆಯನ್ನು ಆಯ್ಕೆ ಸಮಿತಿಗೆ ಒಪ್ಪಿಸದೆ ಅಂಗೀಕರಿಸುವುದಕ್ಕೆ ಸರ್ಕಾರ ಮುಂದೊತ್ತಿದ ಸಂದರ್ಭದಲ್ಲಿ ಸದಸ್ಯರು ‘ಅಶಿಸ್ತಿನಿಂದ ವರ್ತಿಸಿದ’ ಈ ಪ್ರಕರಣ ನಡೆದಿತ್ತು. ಆ ವಿಚಾರದಲ್ಲಿ ಮತದಾನಕ್ಕೂ ಸರ್ಕಾರ ನಿರಾಕರಿಸಿತ್ತು.
ಹಿಂದಿನ ಅಧಿವೇಶನದ ಕೆಲವು ಘಟನೆಗಳಿಗಾಗಿ ಎಂಪಿಗಳನ್ನು ‘ಶಿಸ್ತಿಗೊಳಪಡಿಸುವುದು’ ಅಸಿಂಧುವಾಗಿದೆ. ಮಾತ್ರವಲ್ಲ ಆಗಸ್ಟ್ 11ರ ಘಟನೆಯಲ್ಲಿ ಹೆಸರಿಸಲಾದ 33 ಸದಸ್ಯರ ಪಟ್ಟಿಯಲ್ಲಿ ಇಲ್ಲದ, ಸದನದಲ್ಲಿ ಸಿಪಿಐ(ಎಂ) ಗುಂಪಿನ ನಾಯಕ ಎಳಮಾರಮ್ ಕರೀಂ ಮೇಲೆ ಗುರಿಯಿಟ್ಟಿರುವುದು ಮೇಲ್ಮನೆಯಲ್ಲಿ ಹೆಚ್ಚು ಬಲಿಷ್ಠವಾಗಿರುವ ಪ್ರತಿಪಕ್ಷದ ದನಿಯನ್ನು ಅಡಗಿಸುವ ಆಳುವ ಪಕ್ಷದ ಹುನ್ನಾರವನ್ನು ಜಗಜ್ಜಾಹೀರುಗೊಳಿಸುತ್ತದೆ.
ಸಂಸತ್ ಸದಸ್ಯರು ಮತ್ತು ಪ್ರತಿಪಕ್ಷದ ಹಕ್ಕುಗಳ ಮೇಲಿನ ಈ ದಾಳಿಗಳನ್ನು ಪ್ರತಿಪಕ್ಷಗಳು ಒಗ್ಗಟ್ಟಿನಿಂದ ಪ್ರತಿಭಟಿಸುತ್ತಿವೆ. ಸಂಸತ್ತಿನ ಒಳಗಡೆ ನಿರ್ದಿಷ್ಟ ಪ್ರಶ್ನೆಗಳ ಮೇಲೆ ಈ ಒಗ್ಗಟ್ಟಿನ ಕಾರ್ಯಾಚರಣೆ ಒಂದು ಸಂಯುಕ್ತ ಪ್ರತಿರೋಧವನ್ನು ಹೇಗೆ ಕಟ್ಟಬಹುದು ಎಂಬುದಕ್ಕೆ ಮಾದರಿಯಂತಿದೆ.
ಆದರೆ, ಸಂಸತ್ತಿನ ಹೊರಗಡೆ ಸಂಯುಕ್ತ ಪ್ರತಿಪಕ್ಷದ ನಾಯಕತ್ವ ಚಲಾಯಿಸುವ ಮಮತಾ ಬ್ಯಾನರ್ಜಿ ಮತ್ತು ಟಿಎಂಸಿ ಪ್ರಯತ್ನಗಳಿಗೆ ಫಲ ಸಿಗದು. ನಾಯಕತ್ವ ವಹಿಸಬೇಕೆಂಬ ಕಾಂಗ್ರೆಸ್ ಪಕ್ಷದ ಆಕಾಂಕ್ಷೆ ಕೂಡ ಹಾಗೆಯೇ ವಿಫಲವಾಗಿದೆ.
ನಿರಂತರವಾದ ಐಕ್ಯ ಹೋರಾಟವೊಂದು ಏನನ್ನು ಸಾಧಿಸಬಹುದು ಎನ್ನುವುದನ್ನು ರೈತರ ಚಳವಳಿ ತೋರಿಸಿಕೊಟ್ಟಿದೆ. ಪ್ರತಿಪಕ್ಷಗಳು ಅದರಿಂದ ಸೂಕ್ತ ಪಾಠ ಕಲಿಯಬೇಕು. ಅಖಿಲ ಭಾರತ ಮಟ್ಟದಲ್ಲಿ ಒಬ್ಬ ‘ನಾಯಕ’ರೊಂದಿಗೆ ಸರ್ವೋದ್ದೇಶಗಳ ಐಕ್ಯತೆ ಕೆಲಸ ಮಾಡದು. ದುಡಿಯುವ ಜನಗಳ ವಿವಿಧ ವಿಭಾಗಗಳ ಸಂಯುಕ್ತ ಕಾರ್ಯಾಚರಣೆಗಳಿಂದ ಮಾತ್ರವೇ ವಿಶಾಲ ಏಕತೆಯನ್ನು ಬೆಸೆಯಬಹುದಾಗಿದೆ. ಇದರೊಂದಿಗೇ ಹಿಂದುತ್ವ ಸರ್ವಾಧಿಕಾರಶಾಹೀ ಆಳ್ವಿಕೆಗೆ ಪರ್ಯಾಯ ನೀತಿಗಳು ಹಾಗೂ ರಾಜಕೀಯವನ್ನು ಮುಂದಿಡುವ ಮೂಲಕ, ಇದರ ಸುತ್ತ ಎಲ್ಲ ಪ್ರಜಾಪ್ರಭುತ್ವವಾದಿ ಮತ್ತು ಜಾತ್ಯತೀತ ಶಕ್ತಿಗಳನ್ನು ಅಣಿನೆರೆಯಿಸಲು ಸಾಧ್ಯವಾಗಬೇಕು.
ಅನು: ವಿಶ್ವ