ಬಿಜೆಪಿಗೆ ರಾಷ್ಟ್ರಧ್ವಜದ ಕುರಿತು ಗೌರವ ಸುಲಭವಲ್ಲ

ಬೃಂದಾ ಕಾರಟ್

ಕೊಲೆ, ಬೆಂಕಿ ಹಚ್ಚುವುದು ಮತ್ತು ಹಿಂಸೆಯಂತಹ ಪ್ರಮುಖ ಅಪರಾಧಗಳೊಂದಿಗೆ ನಾವು ಏಗುತ್ತಿರುವಾಗ, ಧ್ವಜವನ್ನು ಅಪವಿತ್ರಗೊಳಿಸುವುದಕ್ಕೆ ಸಂಬಂಧಿಸಿದ ಅಪರಾಧದ ಬಗ್ಗೆ ನಾವು ಏಕೆ ಕಾಳಜಿ ವಹಿಸಬೇಕು ಎಂದು ಹಲವರು ಕೇಳಬಹುದು. ಅಲ್ಪಸಂಖ್ಯಾತರನ್ನು ಗುರಿಯಾಗಿಸುವ ಕಾಯ್ದೆಗಳಲ್ಲಿ ಧ್ವಜದಂತಹ ರಾಷ್ಟ್ರೀಯ ಚಿಹ್ನೆಗಳ ಬಳಕೆಯನ್ನು ನಿಲ್ಲಿಸಬೇಕು; ಅಲ್ಪಸಂಖ್ಯಾತರ ವಿರುದ್ಧ ದ್ವೇಷ ತುಂಬಿದ ಜನಾಂದೋಲನದಲ್ಲಿ ರಾಷ್ಟ್ರಧ್ವಜವನ್ನು ಬಳಸುವುದು, ಅವರ ರಾಷ್ಟ್ರೀಯತೆಯ ನಿರೂಪಣೆಯ ವಿಕೃತ ಪ್ರಚಾರಕ್ಕೆ ಸಹಾಯ ಮಾಡುತ್ತದೆ ಮತ್ತು ಒಂದರ್ಥದಲ್ಲಿ ಹಿಂಸೆಯನ್ನು ಸಾಮಾನ್ಯಗೊಳಿಸುತ್ತದೆ.

ಇಂತಹ ಪ್ರತಿ ಅಪರಾಧದ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಈ ಹಿನ್ನೆಲೆಯಲ್ಲಿ, ರಾ಼ಷ್ಟ್ರೀಯ ಜಾತ್ಯತೀತ ಪ್ರತೀಕಗಳಿಗೆ ಬಿಜೆಪಿಯ ಅವಮಾನದ ಪ್ರತಿಯೊಂದು ಪ್ರಕರಣವನ್ನೂ ವಿರೋಧಿಸಬೇಕು.

ಯು.ಎಸ್., ಯುಕೆ ಮತ್ತು ಕೆನಡಾ ಸೇರಿದಂತೆ ಪಶ್ಚಿಮದಲ್ಲಿ ಅನೇಕ ರಾಷ್ಟ್ರಗಳು ರಾಷ್ಟ್ರಧ್ವಜದ ಬಳಕೆಗೆ ಸಂಬಂಧಿಸಿದ ಯಾವುದೇ ನಿರ್ದಿಷ್ಟವಾದ ಸಂಹಿತೆಯನ್ನು ಹೊಂದಿಲ್ಲ. ವಿಯೆಟ್ನಾಂ ಯುದ್ಧದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಯು.ಎಸ್. ಧ್ವಜವನ್ನು ಆ ದೇಶದ ಅನೇಕ ವಿಶ್ವವಿದ್ಯಾಲಯದ ಕ್ಯಾಂಪಸುಗಳಲ್ಲಿ ಸುಟ್ಟುಹಾಕಿದ ಚಿತ್ರಗಳು ಆ ಕಾಲದ ಐತಿಹಾಸಿಕ ಅಲ್ಲೋಲಕಲ್ಲೋಲದ ಭಾಗವಾಗಿದೆ.  ಇದನ್ನು ಕಾನೂನುಬಾಹಿರ ಕೃತ್ಯವೆಂದು ಪರಿಗಣಿಸಲಾಗಲಿಲ್ಲ.  ಭಾರತದಲ್ಲಿ 1950 ರಿಂದ ಒಂದು ರಾಷ್ಟ್ರಧ್ವಜದ ಬಳಕೆಗೆ ಸಂಬಂಧಿಸಿದ ಸಂಹಿತೆ (ಫ್ಲಾಗ್ ಕೋಡ್) ಜಾರಿಯಲ್ಲಿದೆ. ಇದನ್ನು 2002ರಲ್ಲಿ ತಿದ್ದುಪಡಿ ಮಾಡಲಾಯಿತು. ಯಾವುದೇ ವಿರೋಧವಿಲ್ಲದೆ ಅತ್ಯಂತ ಕಠಿಣವಾದ ಈ ಸಂಹಿತೆಯನ್ನು ಅಳವಡಿಸಿಕೊಳ್ಳಲಾಗಿದೆ.

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ರಾಜಸ್ಥಾನದ ಮಾಜಿ ರಾಜ್ಯಪಾಲರಾಗಿದ್ದ ಕಲ್ಯಾಣ್ ಸಿಂಗ್‌ ಅವರ ನಿಧನದ ಸಂದರ್ಭದಲ್ಲಿ ಲಕ್ನೋದಲ್ಲಿ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಮಾರಂಭದಲ್ಲಿ ಇದನ್ನು ಕಣ್ಣಿಗೆ ರಾಚುವಂತೆ ಉಲ್ಲಂಘಿಸಿದ ಕಾರಣ ಈ ಧ್ವಜ ಸಂಹಿತೆಯು ಈಗ ಸುದ್ದಿಯಲ್ಲಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಸಂವಿಧಾನಾತ್ಮಕ ಹುದ್ದೆಗಳನ್ನು ಹೊಂದಿರುವ ಇತರ ಪ್ರಮುಖ ನಾಯಕರು ಈ ಶ್ರದ್ಧಾಂಜಲಿ ಸಮಾರಂಭದಲ್ಲಿ ಭಾಗವಹಿಸಿದ್ದರು.

ಶವಪೆಟ್ಟಿಗೆಯ ಮೇಲೆ ಇರಿಸಲಾದ ಬಿಜೆಪಿ ಧ್ವಜವು ರಾಷ್ಟ್ರಧ್ವಜದ ಅರ್ಧದಷ್ಟು ಭಾಗವನ್ನು ಮುಚ್ಚಿಹಾಕಿತ್ತು. ಬಿಜೆಪಿ ಅಧ್ಯಕ್ಷರಾದ ಜೆ.ಪಿ. ನಡ್ಡಾ ಅವರು ರಾಷ್ಟ್ರ ಧ್ವಜದ ಮೇಲೆ ಪಕ್ಷದ ಧ್ವಜವನ್ನು ಹಾಕಿದ್ದಾರೆ ಎಂದು ವರದಿ ಮಾಡಲಾಗಿದೆ.  ಛಾಯಾಚಿತ್ರಗಳಲ್ಲಿ ತೋರಿಸಿದಂತೆ ನಡ್ಡಾ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿಯವರು ಬಿಜೆಪಿ ಧ್ವಜದ ಕೆಳಗೆ ರಾಷ್ಟ್ರಧ್ವಜವನ್ನು ಇಟ್ಟು ಗೌರವ ಸೂಚಿಸುತ್ತಿದ್ದಾರೆ. ಇದು ಧ್ವಜ ಸಂಹಿತೆ 2002 ರ ಕಲಮು 2.2 (ಐ)ರ ಸ್ಪಷ್ಟ ಉಲ್ಲಂಘನೆಯಾಗಿದೆ, “ರಾಷ್ಟ್ರಧ್ವಜವನ್ನು ಪ್ರದರ್ಶಿಸಿದಾಗಲೆಲ್ಲ ಅದು ಗೌರವದ ಸ್ಥಾನವನ್ನು ಪಡೆದುಕೊಳ್ಳಬೇಕು ಮತ್ತು ಅದನ್ನು ಸ್ಪಷ್ಟವಾಗಿ ಕಾಣುವಂತೆ ಇಡಬೇಕು.” ಎಂದು  ಈ ಕಲಮು ಹೇಳುತ್ತದೆ.

ಅವರ ವಿರುದ್ಧ ಯಾವುದೇ ಪ್ರಕರಣಗಳನ್ನು ದಾಖಲಿಸಲಾಗಿದೆಯೇ? ಅಂತಹ ಯಾವುದೇ ಕ್ರಮ ತೆಗೆದುಕೊಂಡಿರುವುದು ಕಂಡುಬಂದಿಲ್ಲ. ಕೆಂಪು ಧ್ವಜ ಅಥವಾ ಬೇರೆ ಯಾವುದೇ ಪಕ್ಷದ ಧ್ವಜವನ್ನು ರಾಷ್ಟ್ರಧ್ವಜದ ಮೇಲೆ ಅರಿವಿಲ್ಲದೆಯೇ ಯಾವುದೇ ಪಕ್ಷ ಹಾಕಿದ್ದರೆ ಊಹಿಸಿ ಏನಾಗುತ್ತಿತ್ತೆಂದು. ಪಕ್ಷದ ನಾಯಕನ ದೇಹದ ಮೇಲೆ ಪಕ್ಷದ ಧ್ವಜವನ್ನು ಹಾಕುವುದು ಗೌರವ ನೀಡುವ ಸಾಮಾನ್ಯ ವಿಧಾನವಾಗಿದೆ. ಆದರೆ ಅದು ರಾಷ್ಟ್ರಧ್ವಜದ ಕೆಳಗೆ ಇರಬೇಕೆ ವಿನಃ ಅದರ ಮೇಲೆ ಅಲ್ಲ. ಒಂದು ಪಕ್ಷವು ತನ್ನ ಪಕ್ಷದ ಕಚೇರಿಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸುತ್ತದೆಯೋ  ಇಲ್ಲವೋ ಅದು ಅವರ ಆಯ್ಕೆಯಾಗಿದೆ, ಆದರೆ ಆಡಳಿತ ಪಕ್ಷವೊಂದು ತನ್ನ ಧ್ವಜವನ್ನು ರಾಷ್ಟ್ರಧ್ವಜದ ಮೇಲೆ ಇಡುವುದು ಕಾನೂನಿಗೆ ವಿರುದ್ಧವಾಗಿದೆ. ಆದರೆ ಬಿಜೆಪಿ ಮತ್ತು ಅದರ ನಾಯಕರು ಕಾನೂನಿಗಿಂತ ತಾವೇ ಮೇಲು ಎಂಬುದನ್ನು ಸ್ಪಷ್ಟವಾಗಿ ಹೇಳಲು ಹೊರಟಂತಿದೆ.

ಅವರಿಗೆ ಸಾರ್ವಜನಿಕ ಕ್ಷಮೆಯಾಚಿಸಲು ಕನಿಷ್ಠ ಸೌಜನ್ಯ ಇಲ್ಲ, ಏಕೆಂದರೆ ಅವರಿಗೆ ರಾಷ್ಟ್ರಧ್ವಜದ ಬಗ್ಗೆ  ಸುಲಭವಾಗಿ ಗೌರವ ಬರುವುದಿಲ್ಲ.

ವಾಸ್ತವವಾಗಿ ನೋಡುವುದಾದರೆ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್) ಎಂದಿಗೂ ತ್ರಿವರ್ಣವನ್ನು ರಾಷ್ಟ್ರಧ್ವಜವಾಗಿ ಸ್ವೀಕರಿಸಿಲ್ಲ. ಆರ್‌ಎಸ್‌ಎಸ್ ಮುಖವಾಣಿ ಆರ್ಗನೈಸರ್ ಪತ್ರಿಕೆಯ 17 ಜುಲೈ 1947 ರ ಸಂಚಿಕೆಯಲ್ಲಿ, ಕೇಸರಿ ಧ್ವಜವನ್ನು ರಾಷ್ಟ್ರಧ್ವಜವಾಗಿ ಅಳವಡಿಸಿಕೊಳ್ಳಬೇಕೆಂದು ಒತ್ತಾಯಿಸಿತ್ತು.

ಆಗಸ್ಟ್ 14, ಸ್ವಾತಂತ್ರ್ಯದ ಹಿಂದಿನ ದಿನದಂದು, “ಅದೃಷ್ಟವಶಾತ್ ಅಧಿಕಾರಕ್ಕೆ ಬಂದ ಜನರು ನಮ್ಮ ಕೈಯಲ್ಲಿ ತ್ರಿವರ್ಣವನ್ನು ನೀಡಬಹುದು. ಆದರೆ ಅದನ್ನು ಎಂದಿಗೂ ಹಿಂದೂಗಳ ಗೌರವಿಸುವುದಿಲ್ಲ ಮತ್ತು ಅದನ್ನು ಅಳವಡಿಸಿಕೊಳ್ಳುವುದಿಲ್ಲ. ಮೂರು ಎಂಬ ಪದವೇ ಅಪಶಕುನ ಮತ್ತು ಮೂರು ಬಣ್ಣಗಳನ್ನು ಹೊಂದಿರುವ ಧ್ವಜವು ಖಂಡಿತವಾಗಿಯೂ ಮಾನಸಿಕ ಪರಿಣಾಮವನ್ನು ಉಂಟುಮಾಡುತ್ತದೆ ಮತ್ತು ದೇಶಕ್ಕೆ ಹಾನಿಕಾರಕವಾಗಿದೆ” ಎಂದು ಆರ್‌ಎಸ್‌ಎಸ್ ತನ್ನ ಪ್ರಕಟಣೆಯಲ್ಲಿ ಹೇಳಿದೆ.

ಮಹಾತ್ಮಾ ಗಾಂಧಿಯವರ ಹತ್ಯೆಯ ನಂತರ ಆರ್‌ಎಸ್‌ಎಸ್ ಮೇಲೆ ಹೇರಲಾದ ನಿಷೇಧವನ್ನು ತೆಗೆದುಹಾಕುವ ಷರತ್ತಿನಂತೆ, ಸರ್ಕಾರವು ರಾಷ್ಟ್ರ ಧ್ವಜವನ್ನು ಸ್ವೀಕರಿಸಲು ಆ ಸಂಘಟನೆಯನ್ನು ಕೇಳಿತ್ತು. ಗೃಹ ಕಾರ್ಯದರ್ಶಿ ಎಚ್‌.ವಿ.ಆರ್ ಅಯ್ಯಂಗಾರ್ ಅವರು ಮೇ 1949 ರಲ್ಲಿ “ಪ್ರಭುತ್ವಕ್ಕೆ ನಿಷ್ಠೆಗೆ ಸಂಬಂಧಿಸಿದಂತೆ ಯಾವುದೇ ಹಿಂಜರಿಕೆಯಿಲ್ಲ ಎಂದು ದೇಶವನ್ನು ತೃಪ್ತಿಪಡಿಸಲು ರಾಷ್ಟ್ರಧ್ವಜವನ್ನು ಸ್ಪಷ್ಟವಾಗಿ ಒಪ್ಪಿಕೊಳ್ಳುವುದು ಅಗತ್ಯವಾಗಿರುತ್ತದೆ.” ಎಂದು ಎಂ.ಎಸ್ ಗೋಲ್ವಾಲ್ಕರ್‌ಗೆ ಪತ್ರ ಬರೆದಿದ್ದರು.

ಇಂತಹ ಇತಿಹಾಸದೊಂದಿಗೆ, ಬಿಜೆಪಿ ನಾಯಕರು, ಆರ್‌ಎಸ್‌ಎಸ್ ನ ದ್ವೇಷ ಬಿತ್ತುವ ಶಾಖೆಗಳಲ್ಲಿ ತರಬೇತಿ ಪಡೆದವರಾದ್ದರಿಂದ ರಾಷ್ಟ್ರಧ್ವಜವನ್ನು ತಮ್ಮ ಪಕ್ಷದ ಧ್ವಜದಿಂದ ಮುಚ್ಚುವುದು ಆಶ್ಚರ್ಯವೇನಲ್ಲ.

ರಾಷ್ಟ್ರ ಧ್ವಜಕ್ಕೆ ಆಗಾಗ ಆಗುತ್ತಿರುವ ಅವಮಾನಕ್ಕೆ ಇನ್ನೊಂದು ಆಯಾಮವಿದೆ.

ಮುಸ್ಲಿಮರ ವಿರುದ್ಧದ ಗುಂಪು-ಹತ್ಯೆ ಮಾಡುವವರು, ಅಲ್ಪಸಂಖ್ಯಾತರ ಮನೆಗಳಿಗೆ ಬೆಂಕಿ ಹಚ್ಚುವ ದರೋಡೆಕೋರರು, ಅಲ್ಪಸಂಖ್ಯಾತರ ವಿರುದ್ಧ ದ್ವೇಷದ ಕೃತ್ಯಗಳನ್ನು ಎಸಗುವಾಗ ಅವು ರಾಷ್ಟ್ರೀಯತಾವಾದಿ ಕೃತ್ಯಗಳೆಂದು ಸಾರುತ್ತಾ ಸಾಮಾನ್ಯವಾಗಿ ರಾಷ್ಟ್ರಧ್ವಜವನ್ನು ಕೇಸರಿ ಧ್ವಜಗಳೊಂದಿಗೆ ಹಾರಿಸುತ್ತಾ ಓಡಾಡುತ್ತಾರೆ. ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆ 1971, ಕಲಮು 2, ಹೀಗೆ ಹೇಳುತ್ತದೆ: “ಭಾರತೀಯ ರಾಷ್ಟ್ರೀಯ ಧ್ವಜ ಮತ್ತು ಭಾರತದ ಸಂವಿಧಾನಕ್ಕೆ ಅವಮಾನ. – ಯಾರಾದರೂ ಸಾರ್ವಜನಿಕ ಸ್ಥಳದಲ್ಲಿ ಅಥವಾ ಸಾರ್ವಜನಿಕ ದೃಷ್ಟಿಯಲ್ಲಿನ ಯಾವುದೇ ಸ್ಥಳದಲ್ಲಿ ರಾಷ್ಟ್ರೀಯ ಧ್ಜಜಕ್ಕೆ ಅಥವಾ ಭಾರತದ ಸಂವಿಧಾನಕ್ಕೆ ಅಗೌರವ ತೋರಿಸಿದರೆ ಅಥವಾ ತಿರಸ್ಕಾರಕ್ಕೆ ಒಳಪಡಿಸಿದರೆ (ಮಾತನಾಡಿದ ಅಥವಾ ಲಿಖಿತ ಪದಗಳ ಮೂಲಕ, ಅಥವಾ ಕ್ರಿಯೆಗಳಿಂದ) ಅಂಥವರಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಲಾಗುತ್ತದೆ.”  ಕಾನೂನು ಮುಂದುವರೆದು ಹೀಗೆ ವಿವರಿಸುತ್ತದೆ “ಸಂವಿಧಾನದ ತಿದ್ದುಪಡಿ ಅಥವಾ ರಾಷ್ಟ್ರಧ್ವಜದಲ್ಲಿ ಬದಲಾವಣೆಯನ್ನು ಕಾನೂನುಬದ‍್ಧ ರೀತಿಯಲ್ಲಿ ತರುವ ಉದ್ದೇಶ ಹೊಂದಿರುವ, ಸಂವಿಧಾನದ ಅಥವಾ ರಾಷ್ಟ್ರಧ್ವಜದ ಅಥವಾ ಸರಕಾರದ ಯಾವುದೇ ಕ್ರಮಗಳ ಕುರಿತು ಬಲವಾದ ಅಸಮ್ಮತಿ ಅಥವಾ ಟೀಕೆ, ಈ ಕಲಮಿನ ಅಡಿಯಲ್ಲಿ ಅಪರಾಧವಾಗುವುದಿಲ್ಲ.”

ಭಾರತದ ಸಂವಿಧಾನದ ಜಾತ್ಯತೀತ ಸ್ವರೂಪವನ್ನು ಬುಡಮೇಲು ಮಾಡಲು ರಾಷ್ಟ್ರಧ್ವಜವನ್ನು ಹಿಡಿದು ಹೊರಟಿರುವ ಕೋಮುವಾದಿ ಶಕ್ತಿಗಳ ಕ್ರಮಗಳು ಕಾನೂನುಬದ್ಧವಲ್ಲ.

2020 ರ ದೆಹಲಿ ಹಿಂಸಾಚಾರದ ನಂತರದಲ್ಲಿ, ದ್ವೇಷದ ಭಾಷಣಗಳಿಂದ ಗಲಭೆಯನ್ನು ಪ್ರಚೋದಿಸಿದ ಬಿಜೆಪಿ ನಾಯಕರಲ್ಲಿ ಒಬ್ಬರಾದ ಕಪಿಲ್ ಮಿಶ್ರಾ ಅವರು ರಾಜಧಾನಿಯ ಹೃದಯಭಾಗದಲ್ಲಿ ಶಾಂತಿ ಸಭೆಯ ನಾಯಕತ್ವ ವಹಿಸಿದ್ದರು. ಅವರ ಬೆಂಬಲಿಗರು ರಾಷ್ಟ್ರ ಧ್ವಜವನ್ನು ಬೀಸುತ್ತ, “ಗೋಲಿ ಮಾರೋ ಸಾಲೋನ್ ಕೋ” ನಂತಹ ಪ್ರಚೋದನಕಾರಿ ಘೋಷಣೆಗಳನ್ನು ಕೂಗಿದ್ದರು. ಅವರ ಮೇಲೆ ಯಾವುದೇ ಪ್ರಕರಣಗಳನ್ನು ದಾಖಲಿಸಲಿಲ್ಲ.

ಸೆಪ್ಟೆಂಬರ್ 2015 ರಲ್ಲಿ, ಮೊಹಮ್ಮದ್ ಅಖ್ಲಾಕ್ ನ ಕ್ರೂರ ಹತ್ಯೆಯೊಂದಿಗೆ, ಗೋಹತ್ಯೆಯನ್ನು ಮಾಡಿದ ಆರೋಪಗಳ ಮೇಲೆ ಗುಂಪು-ಹತ್ಯೆಗಳು ಆರಂಭವಾದವು. ಪ್ರಕರಣದ ಪ್ರಮುಖ ಆರೋಪಿಯೊಬ್ಬ ಸಹಜ ಕಾರಣದಿಂದ ಸಾವನ್ನಪ್ಪಿದಾಗ, ಆತನ ಅಂತ್ಯಕ್ರಿಯೆಗೆ ಸಂಘ ಪರಿವಾರದ ಸದಸ್ಯರು ರಾಷ್ಟ್ರಧ್ವಜವನ್ನು ಆತನ ದೇಹದ ಮೇಲೆ ಹೊದಿಸಿ ಆತ ಹುತಾತ್ಮನಾದನೆಂದು ಘೋಷಿಸಿದರು. ಸಂಘ ಪರಿವಾರದ ನಾಯಕರು ಅಲ್ಲಿ ಹಾಜರಿದ್ದರು. ಇವು ಕೇವಲ ಕೆಲವೊಂದು ಉದಾಹರಣೆಗಳು ಮಾತ್ರ.

ಕೊಲೆ, ಬೆಂಕಿ ಹಚ್ಚುವುದು ಮತ್ತು ಹಿಂಸೆಯಂತಹ ಪ್ರಮುಖ ಅಪರಾಧಗಳೊಂದಿಗೆ ನಾವು ಏಗುತ್ತಿರುವಾಗ ಧ್ವಜವನ್ನು ಅಪವಿತ್ರಗೊಳಿಸುವುದಕ್ಕೆ ಸಂಬಂಧಿಸಿದ ಅಪರಾಧದ ಬಗ್ಗೆ ನಾವು ಏಕೆ ಕಾಳಜಿ ವಹಿಸಬೇಕು ಎಂದು ಹಲವರು ಕೇಳಬಹುದು. ಸಂಘ ಪರಿವಾರ ಮತ್ತು ಹಿಂದುತ್ವ ಶಕ್ತಿಗಳ ಅಲ್ಪಸಂಖ್ಯಾತರ ವಿರೋಧಿ ಹತ್ಯಾಕಾಂಡಗಳು ನಕಲಿ ರಾಷ್ಟ್ರೀಯತೆಯ ಹೆಸರಿನಲ್ಲಿ ತಮ್ಮ ಹಿಂಸೆಯನ್ನು ಮರೆಮಾಚುತ್ತವೆ. “ನಕಲಿ” ಏಕೆಂದರೆ ಅವರ ದೃಷ್ಟಿಕೋನದಲ್ಲಿ ರಾಷ್ಟ್ರೀಯತೆಯನ್ನು ಹಿಂದೂ ಎಂದು ಸಮೀಕರಿಸಲಾಗಿದೆ. ಅಲ್ಪಸಂಖ್ಯಾತರ ವಿರುದ್ಧ ದ್ವೇಷ ತುಂಬಿದ ಜನಾಂದೋಲನದಲ್ಲಿ ರಾಷ್ಟ್ರಧ್ವಜವನ್ನು ಬಳಸುವುದು, ಅವರ ರಾಷ್ಟ್ರೀಯತೆಯ ನಿರೂಪಣೆಯ ವಿಕೃತ ಪ್ರಚಾರಕ್ಕೆ ಸಹಾಯ ಮಾಡುತ್ತದೆ ಮತ್ತು ಒಂದರ್ಥದಲ್ಲಿ ಹಿಂಸೆಯನ್ನು ಸಾಮಾನ್ಯಗೊಳಿಸುತ್ತದೆ.

ಅಲ್ಪಸಂಖ್ಯಾತರನ್ನು ಗುರಿಯಾಗಿಸುವ ಕಾಯ್ದೆಗಳಲ್ಲಿ ಧ್ವಜದಂತಹ ರಾಷ್ಟ್ರೀಯ ಚಿಹ್ನೆಗಳ ಬಳಕೆಯನ್ನು ನಿಲ್ಲಿಸಬೇಕು; ಇಂತಹ ಪ್ರತಿ ಅಪರಾಧದ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು.

ಈ ಹಿನ್ನೆಲೆಯಲ್ಲಿ, ರಾ಼ಷ್ಟ್ರೀಯ ಜಾತ್ಯತೀತ ಪ್ರತೀಕಗಳಿಗೆ ಬಿಜೆಪಿಯ ಅವಮಾನದ ಪ್ರತಿಯೊಂದು ಪ್ರಕರಣವನ್ನೂ ವಿರೋಧಿಸಬೇಕು.

(ಅನುವಾದ : ಲವಿತ್ರ ವಸ್ತ್ರದ)

Donate Janashakthi Media

Leave a Reply

Your email address will not be published. Required fields are marked *