ಮೈಸೂರು ಮಹಾನಗರ ಪಾಲಿಕೆ: ಬಿಜೆಪಿಗೆ ಒಲಿದ ಮೇಯರ್, ಉಪಮೇಯರ್‌ ಸ್ಥಾನ

ಮೈಸೂರು: ಹಲವು ದಿನಗಳಿಂದ ಕುತೂಹಲ ಕಾರಣವಾಗಿದ್ದ ಮೈಸೂರು ಮೇಯರ್ ಚುನಾವಣೆ ನಡೆದಿದ್ದು, ರಾಜಕೀಯ ಜಿದ್ದಾಜಿದ್ದಿನ ಬಳಿಕ ಇದೀಗ ಮೇಯರ್‌ ಪಟ್ಟ ಬಿಜೆಪಿ ಒಲಿದಿದೆ. ಪಾಲಿಕೆಯ ಮೇಯರ್ ಮತ್ತು ಉಪ ಮೇಯರ್ ಸ್ಥಾನಗಳಿಗೆ ಮೂರು ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್‌ ಜೆಡಿ(ಎಸ್‌) ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದವು.

ಮೈಸೂರು ಮಹಾನಗರ ಪಾಲಿಕೆಗೆ ಇಂದು ಬೆಳಗ್ಗೆ ಪಾಲಿಕೆಯಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು. ಬಿಜೆಪಿಗೆ ಮೇಯರ್‌ ಸ್ಥಾನ ಲಭಿಸಿದ್ದು, 20 ಮತಗಳ ಅಂತರದಿಂದ ಮೇಯರ್‌ ಆಗಿ 47 ನೇ ವಾರ್ಡ್ ಸದಸ್ಯ ಶಿವಕುಮಾರ್, ಉಪ ಮೇಯರ್ ಸ್ಥಾನ ಡಾ. ಜಿ.ರೂಪ ಯೋಗೀಶ್‌ ಅವರಿಗೆ ಒಲಿದಿದೆ. ಎರಡನೇ ಬಾರಿಯೂ ಬಿಜೆಪಿಯವರೇ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.

ಮೇಯರ್‌ ಸ್ಥಾನಕ್ಕೆ ಕಾಂಗ್ರೆಸ್​ನಿಂದ ಸಯ್ಯದ್ ಹಸ್ರತ್ ಉಲ್ಲಾ ಹಾಗೂ ಗೋಪಿ ಇಬ್ಬರೂ, ಜೆಡಿಎಸ್​ನಿಂದ ಕೆ.ವಿ.ಶ್ರೀಧರ್ ಹಾಗೂ ಬಿಜೆಪಿಯಿಂದ ಶಿವಕುಮಾರ್ ನಾಮಪತ್ರ ಸಲ್ಲಿಸಿದ್ದರು, ಉಪ ಮೇಯರ್ ಸ್ಥಾನಕ್ಕೆ ಕಾಂಗ್ರೆಸ್​ನಿಂದ ಶೋಭಾ ಸುನಿಲ್, ಜೆಡಿಎಸ್​ನಿಂದ ರೇಷ್ಮಾ ಭಾನು ಹಾಗೂ ಬಿಜೆಪಿಯಿಂದ ರೂಪ ನಾಮಪತ್ರ ಸಲ್ಲಿಸಿದ್ದು, ಅತಂತ್ರ ಪಾಲಿಕೆಯಲ್ಲಿ ಯಾರು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂಬ ಕುತೂಹಲಕ್ಕೆ ಕಡೆಗೂ ತೆರೆ ಬಿದ್ದಿದೆ.

ಜೆಡಿಎಸ್, ಚುನಾವಣೆಗೆ ಒಂದು ತಾಸು ಇರುವಂತೆ ಬಿಜೆಪಿಗೆ ಬೆಂಬಲ ನೀಡಲು ನಿರ್ಧರಿಸಿ ಮೇಯರ್ ಸ್ಥಾನ ಬಿಜೆಪಿಗೆ ಉಪ ಮೇಯರ್ ಸ್ಥಾನ ಜೆಡಿಎಸ್‌ಗೆ ಎಂಬ ಒಪ್ಪಂದ ಆಯ್ತು. ಇದು ಕಾಂಗ್ರೆಸ್‌ಗೆ ಆದ ದೊಡ್ಡ ಆಘಾತ ನೀಡಿತು. ಕೊನೆಯ ಕ್ಷಣದಲ್ಲಿ ಜೆಡಿಎಸ್ ಮೇಯರ್ ಸ್ಥಾನಕ್ಕೆ ಸಲ್ಲಿಸಿದ್ದ ನಾಮಪತ್ರ ವಾಪಾಸ್ ಪಡೆದು ಬಿಜೆಪಿಯ ಅಭ್ಯರ್ಥಿಗೆ ಮತ ಹಾಕಿತು. ಇದರಿಂದ ಬಿಜೆಪಿ ಅಭ್ಯರ್ಥಿ ಶಿವಕುಮಾರ್ ಗೆಲುವಿನ ಹಾದಿ ಸುಗಮವಾಯಿತು.

ಜೆಡಿ(ಎಸ್‌) ಸದಸ್ಯರು ಬಿಜೆಪಿಯ ಶಿವಕುಮಾರ್ ಪರ ಮತ ಚಲಾಯಿಸಿದ್ದಾರೆ. ಬಿಜೆಪಿ ಸದಸ್ಯ ಶಿವಕುಮಾರ್​ ಪರ 48 ಮತಗಳ ಚಲಾವಣೆಯಾಗಿದೆ. ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್‌ ಶಾಸಕ ಜಿ.ಟಿ.ದೇವೇಗೌಡ, ಪರಿಷತ್​ನ ಸದಸ್ಯ ಮರಿತಿಬ್ಬೇಗೌಡರಿಂದ ಬಿಜೆಪಿ ಅಭ್ಯರ್ಥಿಗೆ ಮತ ಹಾಕಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸೈಯದ್ ಹಸ್ರತ್ ಉಲ್ಲಾ ಪರ 28 ಮತ ಚಲಾವಣೆಯಾಗಿದೆ.

ಮೈಸೂರು ಪಾಲಿಕೆಯ ಅಧಿಕಾರದ ಚುಕ್ಕಾಣಿ ಹಿಡಿಯಲು ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಇಲ್ಲ. ಕಳೆದ ಬಾರಿಯೂ ಸಹ ಕಲಾಪದ ಹಾಜರಾತಿಯ ಅಧಾರದ ಮೇಲೆ ಬಿಜೆಪಿಗೆ ಮೇಯರ್ ಪಟ್ಟ ಸಿಕ್ಕಿತ್ತು. ಕಾಂಗ್ರೆಸ್ ಜೊತೆ ಕೈ ಜೋಡಿಸದೆ ಬಿಜೆಪಿಗೆ ಜೆಡಿಎಸ್ ಸಹಾಯ ಮಾಡಿತ್ತು. ಹೀಗಾಗಿ ಈ ಬಾರಿ ಬಿಜೆಪಿ ತಮ್ಮನ್ನು ಬೆಂಬಲಿಸುತ್ತೆ ಎಂಬ ಲೆಕ್ಕಾಚಾರದಲ್ಲಿ ಜೆಡಿಎಸ್ ಇತ್ತು. ಆದರೆ ಬಿಜೆಪಿ ಮೈತ್ರಿ ಸಾಧ್ಯವೇ ಇಲ್ಲ. ನಾವು ಏಕಾಂಗಿಯಾಗಿ ಸ್ಪರ್ಧೆಗೆ ಇಳಿಯುತ್ತೇವೆ ಎಂದು ಘೋಷಿಸಿ ಅದೇ ಪ್ರಕಾರ ನಾಮಪತ್ರ ಕೂಡ ಸಲ್ಲಿಸಿಕೆಯಾಗುದ್ದವು.

ಉಪ ಮೇಯರ್ ಅಭ್ಯರ್ಥಿ ರೇಷ್ಮಾ ನಾಮಪತ್ರ ಅಸಿಂಧು

ಉಪ ಮೇಯರ್ ಚುನಾವಣೆ ಪ್ರಕ್ರಿಯೆಯ ಆರಂಭದಲ್ಲೇ ಜೆಡಿಎಸ್‌ಗೆ ದೊಡ್ಡ ಮರ್ಮಾಘಾತ ಉಂಟಾಯಿತು. ಜೆಡಿಎಸ್‌ನ ರೇಷ್ಮಾ ಬಾನು ಅನಾಯಸವಾಗಿ ಉಪ ಮೇಯರ್ ಆಗುತ್ತಾರೆ ಎನ್ನಲಾಗುತ್ತಿತ್ತು. ಆದರೆ ಬಿಸಿಎ ಮೀಸಲು ಸ್ಥಾನಕ್ಕೆ ಸ್ಪರ್ಧಿಸಿದ್ದ ರೇಷ್ಮಾ ಬಾನು ಬಿಸಿಎ ಜಾತಿ ಪ್ರಮಾಣ ಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಗಳು ರೇಷ್ಮಾ ಬಾನು ನಾಮಪತ್ರ ತಿರಸ್ಕರಿಸಿದರು. ಇದು ಜೆಡಿಎಸ್‌ಗೆ ಆಘಾತ ಉಂಟು ಮಾಡಿತು.

ಜೆಡಿಎಸ್‌ ಅಭ್ಯರ್ಥಿ ರೇಷ್ಮಾ ಬಾನು ಅವರ ನಾಮಪತ್ರ ಅಸಿಂಧು ಮಾಡಲಾಗಿದ್ದು, ಬಿಜೆಪಿ ಗೆಲುವು ಸಾಧಿಸುವುದಕ್ಕೆ ದಾರಿ ಸುಗಮವಾಯಿತು. ಬಿಜೆಪಿ ಅಭ್ಯರ್ಥಿ ಬಿಸಿಎ ಪ್ರಮಾಣ ಪತ್ರ ನೀಡಿತ್ತು. ಜೆಡಿಎಸ್ ಉಪ ಮೇಯರ್ ಅಭ್ಯರ್ಥಿ ನಾಮಪತ್ರ ತಿರಸ್ಕೃತವಾಯ್ತೋ ಬಿಜೆಪಿಯ ಹಾದಿ ಸುಗಮವಾಯಿತು. ಬಿಜೆಪಿ ಅಭ್ಯರ್ಥಿ ನೆಪ ಮಾತ್ರಕ್ಕೆ ನಾಮಪತ್ರ ಸಲ್ಲಿಸಿದ್ದ ಸದಸ್ಯೆ ರೂಪಾಗೆ ಅನಾಯಾಸವಾಗಿ ಸ್ಥಾನ ಒಲಿದು ಬಂತು.

ಕಾಂಗ್ರೆಸ್​ಗೆ ಕೊನೆ ಕ್ಷಣದಲ್ಲಿ ಭಾರಿ ನಿರಾಸೆ

ಮೈಸೂರು ಪಾಲಿಕೆಯಲ್ಲಿ ಕಾಂಗ್ರೆಸ್​ಗೆ ಕೊನೆಯ ಕ್ಷಣದಲ್ಲಿ ಜೆಡಿಎಸ್ ಆಘಾತ ನೀಡಿದೆ. ಜೆಡಿಎಸ್ ಜೊತೆ ಮೈತ್ರಿ ಇಲ್ಲ ಇಲ್ಲ ಎಂದು ಹೇಳುತ್ತಲೆ ಕಾಂಗ್ರೆಸ್​ಗೆ ಯಾಮಾರಿಸಿದ್ದ ಬಿಜೆಪಿಗೆ ಬೆಂಬಲ ನೀಡಿತು. ಬಿಜೆಪಿಯ ಒಳ ತಂತ್ರ ಅರಿಯದ ಕಾಂಗ್ರೆಸ್ ಮೇಯರ್ ಆಗುವ ಕನಸು ಕಂಡಿತ್ತು. ಕಾಂಗ್ರೆಸ್ ಗೆ ಕೊನೆ ಕ್ಷಣದಲ್ಲಿ ಭಾರಿ ನಿರಾಸೆಯಾಯಿತು. ಆದರೂ, ಜೆಡಿಎಸ್‌ ಪಕ್ಷಕ್ಕೆ ಬಿಜೆಪಿ ಜೊತೆ ಸೇರಿದರೂ ಉಪ ಮೇಯರ್ ಸ್ಥಾನ ಕೈತಪ್ಪಿದ ಕಾರಣ ಕಾಂಗ್ರೆಸ್ ಕಲಾಪದ ಒಳಗೆಯೆ ಸಂಭ್ರಮಿಸಿತು. ಜೆಡಿಎಸ್ ಅನ್ನು ಬಿಜೆಪಿ ಬಿ ಟೀಂ ಎನ್ನುತ್ತಾ ಘೋಷಣೆ ಕೂಗಿ ಹಂಗಿಸಿದರು.

ಪಾಲಿಗೆ ಸದಸ್ಯ ಬಲ ಒಟ್ಟು 76

ಮೈಸೂರು ಮಹಾನಗರ ಪಾಲಿಕೆಯಲ್ಲಿ ಒಟ್ಟು 65 ಸದಸ್ಯರಿದ್ದು, ಸಂಸದರು, ಎಂಎಲ್​ಎ ಹಾಗೂ ಎಂಎಲ್​ಸಿ ಸೇರಿ ಒಟ್ಟು 76 ಮಂದಿ ಮತದಾರರಿದ್ದಾರೆ. ಬಿಜೆಪಿಯ 22 ಪಾಲಿಕೆ ಸದಸ್ಯರು ಹಾಗೂ ಸಂಸದ ಪ್ರತಾಪ್ ಸಿಂಹ, ಎಂಎಲ್​ಎ ರಾಮದಾಸ್ ಹಾಗೂ ನಾಗೇಂದ್ರ ಮತ್ತು ಎಂಎಲ್​ಸಿ ವಿಶ್ವನಾಥ್ ಸೇರಿ ಒಟ್ಟು 26 ಮಂದಿ ಬಿಜೆಪಿ ಸದಸ್ಯರು.  ಕಾಂಗ್ರೆಸ್​ನ 20 ಮಂದಿ ಪಾಲಿಕೆಯ ಸದಸ್ಯರು ಮತ್ತು ಎಂಎಲ್​ಎ ತನ್ವಿರ್ ಸೇಠ್ ಹಾಗೂ ಎಂಎಲ್​ಸಿಗಳಾದ ಡಾ.ಬಿ.ತಿಮ್ಮಯ್ಯ ಮಧು ಜಿ ಮದೇಗೌಡ ಹಾಗೂ ದಿನೇಶ್ ಗುಳಿಗೌಡ ಸೇರಿ ಒಟ್ಟು 24 ಮಂದಿ ಸದಸ್ಯರಿದ್ದಾರೆ.

ಜೆಡಿಎಸ್​ನ 17 ಜನ ಪಾಲಿಕೆ ಸದಸ್ಯರು ಹಾಗೂ ಶಾಸಕ ಜಿ.ಟಿ.ದೇವೇಗೌಡ, ಎಂಎಲ್‌ಸಿ ಮಂಜೇಗೌಡ ಮತ್ತು ಮರಿತಿಬ್ಬೇಗೌಡ ಸೇರಿ 20 ಮಂದಿ ಸದಸ್ಯರಿದ್ದರಿದ್ದಾರೆ. ಇದರ ಜೊತೆಗೆ ಬಿಎಸ್ಪಿಯ ಒಬ್ಬ ಸದಸ್ಯೆ ಸೇರಿದಂತೆ ಐವರು ಪಕ್ಷೇತರರು ಸೇರಿ ಒಟ್ಟು 76 ಸದಸ್ಯ ಬಲದ ಮೈಸೂರು ಪಾಲಿಕೆಗೆ ಈಗ ಮೇಯರ್‌ ಹಾಗೂ ಉಪಮೇಯರ್‌ ಆಯ್ಕೆಯಾಗಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *