ಆಗಸ್ಟ್‌ 5 ಇಡೀ ಜಮ್ಮು ಕಾಶ್ಮೀರದ ಪಾಲಿಗೆ ಕಪ್ಪು ದಿನ: ಮೆಹಬೂಬಾ ಮುಫ್ತಿ

ನವದೆಹಲಿ: ಆಗಸ್ಟ್‌ 5 ಇಡೀ ಜಮ್ಮು ಕಾಶ್ಮೀರದ ಪಾಲಿಗೆ ಕಪ್ಪು ದಿನ. 2019ರಲ್ಲಿ 370ನೇ ವಿಧಿಯನ್ನು ರದ್ದು ಮಾಡುವ ಮೂಲಕ ಇಬ್ಬಾಗವನ್ನು ಮಾಡಿದ ಕೇಂದ್ರ ಸರ್ಕಾರದ ವಿರುದ್ಧ ಪೀಪಲ್ಸ್‌ ಡೆಮಾಕ್ರಟಿಕ್‌ ಪಾರ್ಟಿ(ಪಿಡಿಪಿ) ಮುಖ್ಯಸ್ಥೆ ಹಾಗೂ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶ್ರೀನಗರದಲ್ಲಿ ಶುಕ್ರವಾರ(ಆಗಸ್ಟ್‌ 05) ಪಿಡಿಪಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಆಗಸ್ಟ್‌ 5 ರಾಜ್ಯದ ಪಾಲಿಗೆ ಕಪ್ಪು ದಿನವಾಗಿದೆ. 2019ರಲ್ಲಿ ಕೇಂದ್ರವು ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷಾಧಿಕಾರವನ್ನು ರದ್ದು ಮಾಡಿತು.

ಕಪ್ಪು ದಿನದ ಕಪ್ಪು ನಿರ್ಣಯ ನಡೆಯೋದಿಲ್ಲ. ಮೊದಲು ಕಾಶ್ಮೀರ ಸಮಸ್ಯೆ ಬಗೆಹರಿಸಿ ಎಂಬ ಬರಹವಿರುವ ಬ್ಯಾನರ್‌ ಹಿಡಿದುಕೊಂಡು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮೆಹಬೂಬಾ ಮುಫ್ತಿ ಮಾತನಾಡಿ, ಬಿಜೆಪಿ ದೇಶದ ತ್ರಿವರ್ಣ ಧ್ವಜವನ್ನು ಕೇಸರಿ ಧ್ವಜವನ್ನಾಗಿ ಮಾಡಲು ಪ್ರಯತ್ನಿಸುತ್ತಿದೆ. ಮುಂಬರುವ ದಿನಗಳಲ್ಲಿ ಬಿಜೆಪಿಯು ಭಾರತ ದೇಶವನ್ನು ನಿರ್ಮಿಸಿರುವ ಸಂವಿಧಾನದ ತಳಹದಿಯನ್ನು ಮತ್ತು ಅದರ ಜಾತ್ಯತೀತತೆಯನ್ನು ನಾಶಪಡಿಸಲಿದೆ. ಬಿಜೆಪಿ ಧಾರ್ಮಿಕ ದೇಶವನ್ನಾಗಿ ಮಾಡಲು ಬಯಸುತ್ತಿದೆ. ಜನರು ಇಂದು ಹೆಮ್ಮೆಯಿಂದ ಹಾರಿಸುತ್ತಿರುವ ತ್ರಿವರ್ಣ ಧ್ವಜವನ್ನು ಕೇಸರಿ ಧ್ವಜವನ್ನಾಗಿ ಪರಿವರ್ತಿಸಲು ಬಯಸುತ್ತಿದೆ ಎಂದು ಕಿಡಿಕಾರಿದರು.

ಮೂರು ವರ್ಷದ ಹಿಂದೆ ಮೋದಿ ಸರ್ಕಾರ ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದು ಮಾಡುವ ತೀರ್ಮಾನ ಮಾಡಿತ್ತು. ಅದರೊಂದಿಗೆ ಜಮ್ಮು ಮತ್ತು ಕಾಶ್ಮೀರವನ್ನು ಎರಡು ಭಾಗ ಮಾಡಿ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ ಎನ್ನುವ ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿತ್ತು. ಪ್ರಸ್ತುತ ಜಮ್ಮು ಕಾಶ್ಮೀರಕ್ಕೆ ಚುನಾವಣೆ ನಡೆಯದೆ ಅಧಿಕಾರದ ಸಂಪೂರ್ಣ ಹಿಡಿತ ಕೇಂದ್ರ ಸರ್ಕಾರ ಅಡಿಯಲ್ಲಿದೆ.

ಜಮ್ಮು ಮತ್ತು ಕಾಶ್ಮೀರದ ಸಂವಿಧಾನ ಮತ್ತು ಧ್ವಜವನ್ನು ಕಿತ್ತುಕೊಂಡಂತೆ ಅವರು (ಬಿಜೆಪಿ) ಈ ದೇಶದ ಧ್ವಜವನ್ನು ಬದಲಾಯಿಸುತ್ತಾರೆ ಎಂದು ಮೆಹಬೂಬಾ ಮುಫ್ತಿ ಹೇಳಿದ್ದಾರೆ. ಆದರೆ, ನಾವು ನಮ್ಮ ಧ್ವಜ ಮತ್ತು ಸಂವಿಧಾನವನ್ನು ಹಿಂಪಡೆಯುತ್ತೇವೆ ಎಂದು ಪ್ರಮಾಣ ಮಾಡಿದ್ದೇವೆ. ಲಕ್ಷಗಟ್ಟಲೆ ಜನರು ಪ್ರಾಣ ತ್ಯಾಗ ಮಾಡಿದ ಕಾಶ್ಮೀರದ ಸಮಸ್ಯೆಯನ್ನು ಪರಿಹರಿಸುವಂತೆ ನಾವು ಅವರನ್ನು ಒತ್ತಾಯಿಸುತ್ತೇವೆ ಎಂದಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *