ಗುಜರಾತ್‌ನಲ್ಲಿ ಸತತ 7ನೇ ಬಾರಿಗೆ ಅಧಿಕಾರಕ್ಕೇರಿದ ಬಿಜೆಪಿ

ಗುರುರಾಜ ದೇಸಾಯಿ

ದೇಶದಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಗುಜರಾತ್‌ ವಿಧಾನಸಭಾ ಚುನಾವಣೆ ಫಲಿತಾಂಶವು ಭಾರತೀಯ ಜನತಾ ಪಕ್ಷ ಸಿಹಿ ನೀಡಿದೆ. ಭಾರೀ ಬಹುಮತ ಗಳಿಸಿರುವ ಬಿಜೆಪಿ, ಸತತ ಏಳನೇ ಬಾರಿಗೆ ಅಧಿಕಾರದ ಗದ್ದುಗೆ ಏರುತ್ತಿದೆ. ಈ ಮೊದಲು ಪಶ್ಚಿಮ ಬಂಗಾಳದಲ್ಲಿ ಸಿಪಿಐಎಂ 7 ಬಾರಿ ಅಧಿಕಾರ ನಡೆಸಿತ್ತು. ಕಳೆದ ಬಾರಿ ಬಲಿಷ್ಠ ವಿಪಕ್ಷವಾಗಿ ಹೊರಹೊಮ್ಮಿದ್ದ ಕಾಂಗ್ರೆಸ್‌ ಹೀನಾಯ ಸೋಲು ಅನುಭವಿಸಿದೆ. ಆಮ್‌ ಆದ್ಮಿ ಪಕ್ಷವು ಖಾತೆ ತೆರೆಯುವ ಮೂಲಕ ಅಚ್ಚರಿ ಮೂಡಿಸಿದೆ.

2017 ರಲ್ಲಿ ಕೇವಲ 99 ಸೀಟುಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದ ಬಿಜೆಪಿ ಈ ಬಾರಿಯ ಚುನಾವಣೆಯಲ್ಲಿ 156 ರಲ್ಲಿ ಗೆಲುವು ಸಾಧಿಸಿದೆ. ಕಳೆದ ಚುನಾವಣೆಯಲ್ಲಿ 77 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಬಿಜೆಪಿಗೆ ಪ್ರಬಲ ಪೈಪೋಟಿ ನೀಡಿದ್ದ ಕಾಂಗ್ರೆಸ್ 2022ರ ಚುನಾವಣೆಯಲ್ಲಿ ಧೂಳೀಪಟವಾಗಿದೆ. ಕಾಂಗ್ರೆಸ್‌ 16 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.  ಬಿಜೆಪಿಗೆ ಪೈಪೋಟಿ ನೀಡಲು ಆಮ್ ಆದ್ಮಿ ಪಕ್ಷ ಕೂಡ ಗುಜರಾತ್ ಚುನಾವಣೆಯಲ್ಲಿ ಸ್ಪರ್ಧೆ ಮಾಡಿತ್ತು. ಪಂಜಾಬ್ ಗೆದ್ದಿದ್ದ ಆಪ್‌ ಗುಜರಾತ್‌ನಲ್ಲಿ ಬಿಜೆಪಿಗೆ ಪ್ರಬಲ ಪೈಪೋಟಿ ನೀಡುವ ವಿಶ್ವಾಸದಲ್ಲಿತ್ತು, ಆದರೆ, ಆಮ್ ಆದ್ಮಿ ಪಕ್ಷವನ್ನು ಗುಜರಾತಿನ ಮತದಾರ ಕೈ ಹಿಡಿಯದಿದ್ದರೂ ಮತ ಪ್ರಮಾಣದಲ್ಲಿ ಹೆಚ್ಚಳವನ್ನು ಕಂಡಿದೆ.

ಭಾರತೀಯ ಚುನಾವಣಾ ಆಯೋಗದ (ಇಸಿಐ) ಅಂಕಿಅಂಶಗಳ ಪ್ರಕಾರ 52.9 ಶೇಕಡಾ ಮತಗಳನ್ನು ಪಡೆದಿದೆ. ಭೂಪೇಂದ್ರ ಪಟೇಲ್ ಸೋಮವಾರ ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅತೀ ಹೆಚ್ಚಿನ ಸ್ಥಾನಗಳನ್ನು ನೀಡಲು ಕಾರಣರದ ಜನರಿಗೆ ಅಭೂತಪೂರ್ವ ಧನ್ಯವಾದ ಹೇಳಿದ್ದಾರೆ. ಆದರೆ ಬಿಜೆಪಿ ಮತಗಳನ್ನು ಕಳ್ಳತನ ಮಾಡಿದೆ, ಕೋಮು ಗಲಭೆ, ಈಡಿ ಮೂಲಕ ಜನರಲ್ಲಿ ಭಯವನ್ನು ಹುಟ್ಟಿಸಿ ಚುನಾವಣೆಯನ್ನು ಗೆದ್ದಿದೆ  ಎಂಬ ಆರೋಪಗಳು ಕೇಳಿ ಬರುತ್ತಿವೆ.

ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

7 ನೇ ಬಾರಿ ಅಧಿಕಾರಕ್ಕೆ : 6 ಬಾರಿ ಗುಜರಾತ್‌ನಲ್ಲಿ ಆಡಳಿತ ನಡೆಸಿರುವ ಬಿಜೆಪಿ 7ನೇ ಬಾರಿ ಗದ್ದುಗೆ ಏರಲು ಸಿದ್ಧತೆ ನಡೆಸಿದೆ. ಪಶ್ಚಿಮ ಬಂಗಾಳದಲ್ಲಿ ಸಿಪಿಎಂ ಪಕ್ಷವು ಸತತ 7 ಬಾರಿ ಗೆಲುವು ಸಾಧಿಸಿ, 1977 ರಿಂದ 2011ರವರಗೆ 34 ವರ್ಷಗಳ ಕಾಲ ಅಧಿಕಾರ ಸೂತ್ರ ಹಿಡಿದಿತ್ತು, ಬಿಜೆಪಿ 2022ರ ಚುನಾವಣೆಯನ್ನು ಗೆಲ್ಲುವ ಮೂಲಕ  ಈ ದಾಖಲೆಯನ್ನು ಸರಿಗಟ್ಟಿ ಅತೀ ಹೆಚ್ಚು ಅವಧಿಯವರಗೆ ರಾಜ್ಯವೊಂದರಲ್ಲಿ ಅಧಿಕಾರ ನಡೆಸಿದ 2ನೇ ರಾಜಕೀಯ ಪಕ್ಷವಾಗಿದೆ.   1985ರ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 149 ಸೀಟುಗಳಲ್ಲಿ ಗೆಲುವು ಸಾಧಿಸಿ ದಾಖಲೆ ಬರೆದಿತ್ತು. ಪ್ರಸ್ತುತ ಬಿಜೆಪಿ 156 ಸ್ಥಾನ ಗೆಲ್ಲುವ ಮೂಲಕ ಕಾಂಗ್ರೆಸ್‌ನ ದಾಖಲೆ ಮುರಿದಿದ್ದಾರೆ.

ಕಾಂಗ್ರೆಸ್‌ ಕಳಪೆ ಪ್ರದರ್ಶನ :  2017 ರಲ್ಲಿ, ಕಾಂಗ್ರೆಸ್ ಪಕ್ಷ 77 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಬಿಜೆಪಿಗೆ ಪ್ರಬಲ ಪೈಪೋಟಿ ನೀಡಿತ್ತು. ಆದರೆ, 2022ರಲ್ಲಿ ಕಾಂಗ್ರೆಸ್‌ ಗುಜರಾತ್‌ನಲ್ಲಿ ಸಂಪೂರ್ಣವಾಗಿ ನೆಲೆ ಕಳೆದುಕೊಂಡಿದೆ. ಬುಡಕಟ್ಟು ಜನರು ನೆಲೆಸಿರುವ ಕ್ಷೇತ್ರಗಳಲ್ಲಿ ಹೆಚ್ಚು ಪ್ರಭಾವಿಯಾಗಿದ್ದ ಕಾಂಗ್ರೆಸ್ ಈ ಬಾರಿ ಸೋಲುಕಂಡಿದೆ. ಬುಡಕಟ್ಟು ಕ್ಷೇತ್ರಗಳಲ್ಲಿ 27 ಸ್ಥಾನಗಳಲ್ಲಿ ಕಳೆದ ಬಾರಿ ಕಾಂಗ್ರೆಸ್ ಗೆದ್ದಿದ್ದರೆ, ಈ ಬಾರಿ ಬಿಜೆಪಿ ಮುನ್ನಡೆ ಸಾಧಿಸಿದೆ.  ಚುನಾವಣೆಗೆ ಬೇಕಾದ ಅಗತ್ಯ ತಯಾರಿಗಳನ್ನು ಕಾಂಗ್ರೆಸ್‌ ಮಾಡಿಕೊಂಡಿರಲಿಲ್ಲ, ಸೋಲುವುದು ಖಚಿತ ಎಂದು ಸಪ್ಪೆಯಾದ ಪ್ರಚಾರ ನಡೆಸಿದ್ದರು. ರಾಹುಲ್‌ ಗಾಂಧಿ ಎರಡು ಬಾರಿ ಮೆರವಣಿಗೆ ನಡೆಸಿದ್ದು ಬಿಟ್ಟರೆ ಪರೀಣಾಮ ಬೀರಬಹುದಾದ ಪ್ರಚಾರಕ್ಕೆ ಆಧ್ಯತೆ ನೀಡಲಿಲ್ಲ. ಟಿಕೆಟ್‌ ಹಂಚಿಕೆಯಲ್ಲಿನ ಕೊರತೆಯಿಂದಾಗಿ ಬಹಳಷ್ಟು ಜನ ಕಾಂಗ್ರೆಸ್‌ ತೊರೆದು ಬಿಜೆಪಿಗೆ ಹೋಗಿದ್ದರು. ಪ್ರಭಾವಿ ನಾಯಕರು ಬಿಜೆಪಿಯತ್ತ ಮುಖ ಮಾಡಿದ್ದು ಕಾಂಗ್ರೆಸ್‌ ಸೋಲಿಗೆ ಕಾರಣ ಎಂದು ಹೇಳಲಾಗುತ್ತಿದೆ.

ಎಎಪಿ, ಒವೈಸಿಯಿಂದ ಮುಸ್ಲಿಂ ಮತಗಳ ವಿಭಜನೆ : ಎಎಪಿ 5 ಸ್ಥಾನದಲ್ಲಿ ಗೆದ್ದು ಒಂದರಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಕಾಂಗ್ರೆಸ್‌ ಸೋಲಿಗೆ, ಬಿಜೆಪಿ ಗೆಲುವಿಗೆ ಎಎಪಿ ಮತ್ತು ಒವೈಸಿ ಪಕ್ಷಗಳು ಮುಸ್ಲೊಂ ಮತ ವಿಭಜನೆ ಮಾಡಿದ್ದಕ್ಕೆ ಸೋಲುಂಟಾಗಿದೆ ಎಂದು ಹೇಳಲಾಗುತ್ತಿದೆ. ಮುಸ್ಲಿಂ ಬಾಹುಳ್ಯದ ಪ್ರದೇಶಗಳಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಬಿಜೆಪಿಯಿಂದ ಯಾವುದೇ ಮುಸ್ಲಿಂ ಅಭ್ಯರ್ಥಿ ಕಣಕ್ಕಿಳಿಯದಿದ್ದರೂ ಸಹ ಬಿಜೆಪಿ ಪಕ್ಷಕ್ಕೆ ಜಯ ಸಿಕ್ಕಿದೆ.  ಹೆಚ್ಚಿನ ಮುಸ್ಲಿಂ ಜನಸಂಖ್ಯೆ ಇರುವ ಗುಜರಾತ್‌ನ 17 ಕ್ಷೇತ್ರಗಳ ಪೈಕಿ 12 ರಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಸಾಂಪ್ರದಾಯಿಕವಾಗಿ ಮತಗಳನ್ನು ವಿಭಜಿಸುವಲ್ಲಿ ಈ ಎರಡೂ ಪಕ್ಷಗಳು ದೊಡ್ಡ ಪಾತ್ರವನ್ನು ಹೊಂದಿವೆ ಎಂಬುದು ರಾಜಕೀಯ ತಜ್ಞರ ಅಭಿಪ್ರಾಯವಾಗಿದೆ.

ಒಟ್ಟನಲ್ಲಿ,  ಕಾಂಗ್ರೆಸ್‌ ತನ್ನ ಸೋಲಿಗೆ ಕಾರಣಗಳನ್ನು ಹುಡುಕುತ್ತಿದ್ದರೆ, ಬಿಜೆಪಿ ಮತ್ತೆ ಅಧಿಕಾರದ ರುಚಿ ಕಂಡಿದೆ. ಎಎಪಿ ಖಾತೆ ತೆಗೆಯುವ ಮೂಲಕ ಹಾಗೂ ಮತ ಪ್ರಮಾಣವನ್ನು ಹೆಚ್ಚಿಸಿಕೊಳ್ಳುವ ಮೂಲಕ ರಾಷ್ಟ್ರೀಯ ಪಕ್ಷದ ಸ್ಥಾನಮಾನದತ್ತ ದಾಪುಗಾಲು ಹಾಕಿದೆ.

Donate Janashakthi Media

Leave a Reply

Your email address will not be published. Required fields are marked *