ನವದೆಹಲಿ/ಬೆಂಗಳೂರು: ಸಿಂಗು ಗಡಿಯಲ್ಲಿ ರೈತರ ಮೇಲೆ ಬಿಜೆಪಿ ಸರ್ಕಾರ ನಡೆಸಿರುವ ದೌರ್ಜನ್ಯಕ್ಕೆ ಸಂಯುಕ್ತ ಕಿಸಾನ್ ಮೋರ್ಚಾ (SKM) ಮತ್ತು ಸಂಯುಕ್ತ ಹೋರಾಟ ಕರ್ನಾಟಕ ತೀವ್ರ ಖಂಡನೆ ವ್ಯಕ್ತಪಡಿಸಿದೆ. ದಾಳಿಯನ್ನು ಖಂಡಿಸಿ ಫೆಬ್ರವರಿ 16ರ ಶುಕ್ರವಾರ ಭಾರತದಾದ್ಯಂತ ತೀವ್ರವಾಗಿ ಪ್ರತಿಭಟಿಸಲು ಕರೆ ನೀಡಲಾಗಿದೆ. ರೈತರ ಮೇಲೆ ಪೈಶಾಚಿಕ ದೌರ್ಜನ್ಯ ಖಂಡಿಸಿ ಪೆಬ್ರವರಿ 16 ರಂದು ರಾಜ್ಯಾದ್ಯಂತ ಜಿಲ್ಲೆ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆ ನಡೆಸುವಂತೆ ಸಂಯುಕ್ತ ಹೋರಾಟ ಕರ್ನಾಟಕ ಹೇಳಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡುರುವ ಎಸ್ಕೆಎಂ, ಪ್ರಜಾಸತ್ತಾತ್ಮಕ ಹಕ್ಕುಗಳ ಮೇಲಿನ ಯಾವುದೇ ದಾಳಿಯನ್ನು ರೈತ ಆಂದೋಲನವು ಪ್ರತಿರೋಧಿಸಲಿದೆ ಎಂದು ಮೋದಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. “ರೈತ ಸಂಘಟನೆಗಳ ದೆಹಲಿ ಚಲೋ ಮೆರವಣಿಗೆಯನ್ನು ತಡೆಯಲು ಪ್ರಭುತ್ವ ಅಧಿಕಾರದ ವಿಪರೀತ ದುರ್ಬಳಕೆ ಮಾಡಿಕೊಂಡಿದೆ. ರೈತರ ಮೇಲೆ ಮೋದಿ ಸರ್ಕಾರ ನಡೆಸಿರುವ, ಲಾಠಿ ಪ್ರಹಾರ, ರಬ್ಬರ್ ಬುಲೆಟ್, ಅಶ್ರುವಾಯು ಸಿಡಿತ ಮತ್ತು ಸಾಮೂಹಿಕ ಬಂಧನ ಹಾಗೂ ಅವರ ಮೇಲೆ ಅಶ್ರುವಾಯು ಶೆಲ್ಗಳನ್ನು ಎಸೆಯಲು ಡ್ರೋನ್ಗಳನ್ನು ಬಳಸಿರುವುದು ಅತ್ಯಂತ ಅಘಾತಕಾರಿಯಾಗಿದೆ” ಎಂದು ಹೇಳಿದೆ.
ಇದನ್ನೂ ಓದಿ: ದೆಹಲಿ ರೈತ ಹೋರಾಟ | ಡ್ರೋನ್ ಮೂಲಕ ಅಶ್ರುವಾಯು ಸಿಡಿಸುತ್ತಿರುವ ಸರ್ಕಾರ
“ರೈತರ ಶಾಂತಿಯುತ ಹೋರಾಟದ ಮೇಲೆ ದಾಳಿ ಮಾಡಲು ಪೊಲೀಸರು ಮತ್ತು ಸಶಸ್ತ್ರ ಭದ್ರತಾ ಪಡೆಗಳನ್ನು ಛೂ ಬಿಟ್ಟಿರುವುದು ಮೋದಿ ಸರ್ಕಾರವು ಜನರ ವಿಶ್ವಾಸವನ್ನು ಕಳೆದುಕೊಂಡಿದೆ ಎಂಬುದನ್ನು ತೋರಿಸುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕು ಪ್ರತಿಯೊಬ್ಬ ಪ್ರಜೆಗೂ ಇದೆ. ಪ್ರತಿಯೊಂದು ವರ್ಗದ ಜನರ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವ ಮತ್ತು ಅವರ ಜೀವನೋಪಾಯವನ್ನು ರಕ್ಷಿಸುವ ನಿರ್ದಿಷ್ಟ ಬೇಡಿಕೆಗಳನ್ನು ಪರಿಹರಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ” ಎಂದು ಎಸ್ಕೆಎಂ ಹೇಳಿದೆ.
“ತಮ್ಮ ಜ್ವಲಂತ ಬೇಡಿಕೆಗಳ ಈಡೇರಿಕೆಗೆ ಪ್ರತಿಭಟಿಸಲೇಬೇಕಾದ ಅನಿವಾರ್ಯತೆಗೆ ಒಳಗಾದ ಜನರನ್ನು ಸರ್ಕಾರದ ಅಥವಾ ದೇಶದ ಶತ್ರುಗಳಂತೆ ಪರಿಗಣಿಸುವುದು ಸರಿಯಲ್ಲ. ರೈತರ ಪ್ರಮುಖ ಬೇಡಿಕೆಯಾದ ಉತ್ಪಾದನಾ ವೆಚ್ಚಕ್ಕೆ ಶೇಕಡಾ ಐವತ್ತರಷ್ಟು ಸೇರಿಸಿದ ಶಾಸನಬದ್ದ ಕನಿಷ್ಟ ಬೆಂಬಲ ಬೆಲೆ ಒದಗಿಸುವುದು, 2014 ರ ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ಮತ್ತು ಈಗಿನ ಪ್ರಧಾನಿ ನೀಡಿದ್ದ ಭರವಸೆಯಾಗಿತ್ತು. ಇದಾಗಿ 10 ವರ್ಷಗಳು ಕಳೆದರೂ ಈ ಭರವಸೆ ಜಾರಿಗೆ ಬಂದಿಲ್ಲ” ಎಂದು ರೈತ ಸಂಘಟನೆ ಹೇಳಿದೆ.
ಇದನ್ನೂ ಓದಿ: ‘ಇದು ಆರಂಭ ಮಾತ್ರ’ | ದೆಹಲಿ ರೈತ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲ
“ದೆಹಲಿ ಚಲೋ ಪ್ರತಿಭಟನೆಯನ್ನು ನಡೆಸುವ ರೈತರ ಹಕ್ಕುನ್ನು ರಕ್ಷಿಸಬೇಕು. ಕೂಡಲೇ ರೈತರ ಪ್ರತಿಭಟನೆ ಹತ್ತಿಕ್ಕಲು ಜಮೆ ಮಾಡಿರುವ ಎಲ್ಲಾ ಪಡೆಗಳನ್ನು ವಾಪಸ್ಸು ಕರೆಸಿಕೊಳ್ಳಬೇಕು. ರೈತರ ಹಾಗೂ ಕಾರ್ಮಿಕರ ಹೋರಾಟವನ್ನು ಮಾತುಕತೆಯ ಮೂಲಕ ಇತ್ಯರ್ಥಪಡಿಸಬೇಕು” ಎಂದು ಪ್ರಧಾನಿಗೆ ಪತ್ರದ ಮೂಲಕ ಕೂಡಾ ಸಂಯುಕ್ತ ಕಿಸಾನ್ ಮೋರ್ಚಾ ಆಗ್ರಹಿಸಿದೆ.
ರೈತರ ಮೇಲೆ ನಡೆಸಿದ ದಾಳಿಯನ್ನು ಸಂಯುಕ್ತ ಹೋರಾಟ ಕರ್ನಾಟಕ ವಿರೋಧಿಸಿದ್ದು, “ತಡೆಯಲ್ಪಟ್ಟ ಸ್ಥಳದಲ್ಲೇ ಠಿಕಾಣಿ ಹೂಡಿ ನಿದ್ರಿಸುತ್ತಿದ್ದ ಮಧ್ಯ ರಾತ್ರಿ ಸಮಯದಲ್ಲಿ ರೈತರ ಮೇಲೆ ಡ್ರೋನ್ ಬಳಸಿ ಅಶ್ರುವಾಯು ಶೆಲ್ ಗಳ ಸುರಿಮಳೆ ನಡೆಸಿರುವುದು ಅತ್ಯಂತ ಅಘಾತಕಾರಿಯಾದ ಘಟನೆಯಾಗಿದ್ದು, ದೇಶದ ಅನ್ನದಾತರನ್ನು ಸರ್ಕಾರದ ಅಥವಾ ದೇಶದ ಶತೃಗಳು ಎಂಬಂತೆ ನರೇಂದ್ರ ಮೋದಿ ಸರ್ಕಾರ ಪರಿಗಣಿಸಿ ನಡೆಸಿಕೊಂಡಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದೆ.
ತಮ್ಮ ಜ್ವಲಂತ ಬೇಡಿಕೆಗಳ ಈಡೇರಿಕೆಗೆ ಪ್ರತಿಭಟಿಸಲೇಬೇಕಾದ ಆನಿವಾರ್ಯತೆಗೆ ಒಳಗಾದ ರೈತರ ಹೋರಾಟವನ್ನು ಕ್ರೂರವಾಗಿ ದಮನಿಸುವುದು ಪ್ಯಾಸಿಸ್ಟ್ ಸರ್ವಾಧಿಕಾರವಾಗಿದೆ ಎಂದು ಸಂಯುಕ್ತ ಹೋರಾಟ ಕರ್ನಾಟಕ ಕಟುವಾಗಿ ಟೀಕಿಸಿದೆ.
ವಿಡಿಯೊ ನೋಡಿ: ರಾಮನಿಗೆ ಭವ್ಯ ಮಂದಿರ, ಶ್ರಮಿಕರಿಗೆ ಟೆಂಟ್ – ನಾಗೇಶ ಹೆಗಡೆ ವಿಶ್ಲೇಷಣೆ Janashakthi Media