ವಿಧಾನಸಭೆ ಚುನಾವಣೆ: ಬಿಜೆಪಿ ಸರ್ಕಾರದ ಸಾಧನೆ ʻಕಳಪೆʼ – ಶೇ.50.5 ಮಂದಿ ಅಭಿಮತ

ಬೆಂಗಳೂರು: ಕರ್ನಾಟಕ ರಾಜ್ಯ ವಿಧಾನಸಭೆಗೆ ಚುನಾವಣಾ ವೇಳಾಪಟ್ಟಿ ಪ್ರಕಟಗೊಂಡಿದ್ದು, ಮೇ 10ರಂದು ಒಂದೇ ಹಂತದಲ್ಲಿ ಎಲ್ಲಾ ಕಡೆಗಳಲ್ಲಿ ಮತದಾನ ನಡೆಯಲಿದೆ. ಮೇ 13ರಂದು ಫಲಿತಾಂಶ ಹೊರಬೀಳಲಿದೆ. ಚುನಾವಣಾ ಪೂರ್ವ ಸಮೀಕ್ಷಾ ವರದಿ ಬಿಡುಗಡೆಯಾಗಿದೆ. ಎಬಿಪಿ ಸಿ-ವೋಟರ್‌ ಸಮೀಕ್ಷೆಯ ಪ್ರಕಾರ ಆಡಳಿತದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಪಕ್ಷದ ಕಾರ್ಯಕ್ಷಮತೆ ʻಕಳಪೆʼಯಾಗಿದೆ ಎಂದು 50.5 ಪ್ರತಿಶತದಷ್ಟು ಜನರು ಹೇಳಿದ್ದಾರೆ.

ಎಬಿಪಿ ಸಿ-ಸಿವೋಟರ್ ಸಮೀಕ್ಷೆಯ ಪ್ರಕಾರ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ವರದಿಗಳು ತಿಳಿಸಿವೆ. ಕಾಂಗ್ರೆಸ್‌ –115 – 127, ಬಿಜೆಪಿ– 68 – 80, ಜೆಡಿಎಸ್‌ –23 – 35 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆ ಮೂಲಕ ತಿಳಿದು ಬಂದಿದೆ. ಝೀ ನ್ಯೂಸ್ ಸಮೀಕ್ಷೆಯ ಪ್ರಕಾರ ಈ ಬಾರಿ ರಾಜ್ಯದಲ್ಲಿ ಯಾರಿಗೂ ಬಹುಮತವಿಲ್ಲ ಎಂದು ತಿಳಿದು ಬಂದಿದೆ. ಬಿಜೆಪಿ 96 -106 ಸ್ಥಾನಗಳು ಪಡೆದರೆ, ಕಾಂಗ್ರೆಸ್ 88-98, ಜೆಡಿಎಸ್ – 23-33 ಹಾಗೂ ಇತರೆ 02-07 ಸ್ಥಾನ ಪಡೆಯುವ ಸಾಧ್ಯತೆಯಿದೆ ಎಂದು ತಿಳಿಸಿದೆ.

ಇದನ್ನೂ ಓದಿ : ರ್ನಾಟಕ ವಿಧಾನಸಭೆ : ಮೇ 10 ಕ್ಕೆ ಚುನಾವಣೆ, 13 ಕ್ಕೆ ಫಲಿತಾಂಶ – ಚುರುಕುಗೊಂಡ ಪ್ರಕ್ರಿಯೆ

ಸಮೀಕ್ಷೆಯ ಭಾಗವಾದ ಜನರಲ್ಲಿ ಶೇಕಡಾ 57.1 ರಷ್ಟು ಜನರು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಮೇಲೆ ಅಸಮಾಧಾನ ಹೊಂದಿದ್ದು, ಕೇವಲ 27.7 ಪ್ರತಿಶತ ಜನರಷ್ಟೇ ಸರ್ಕಾರದ ಸಾಧನೆಯನ್ನು ಮೆಚ್ಚಿಕೊಂಡಿದ್ದಾರೆ ಎಂದು ಸಮೀಕ್ಷೆ ಹೇಳಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಾರ್ಯವೈಖರಿಗೆ ಶೇ 46.9ರಷ್ಟು ಜನರು ‘ಕಳಪೆ’ ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಕೇವಲ ಶೇ 26.8ರಷ್ಟು ಮಂದಿ ಮಾತ್ರ ಒಳ್ಳೆಯ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಲಿಂಗಾಯತರಿಗೆ ಅಲ್ಪಸಂಖ್ಯಾತ ಸ್ಥಾನಮಾನ ಮತ್ತು ಹಿಜಾಬ್ ವಿವಾದ ಸೇರಿದಂತೆ, ದಕ್ಷ ಆಡಳಿತಗಾರನಾಗಿ ಕಾರ್ಯನಿರ್ವಹಿಸದೇ ಇರುವುದೇ ಕಾರಣ ಎಂದು ಹೇಳಲಾಗಿದೆ. ಇದಲ್ಲದೆ, “ಧಾರ್ಮಿಕ ಧ್ರುವೀಕರಣ” ಕೂಡಾ ಮುಂಬರುವ ವಿಧಾನಸಭಾ ಚುನಾವಣೆ ಮೇಲೆ ಗಮನಾರ್ಹ ಪರಿಣಾಮ ಬೀರಲಿದೆ ಎಂದು 24.6 ಪ್ರತಿಶತದಷ್ಟು ಜನರು ನಂಬಿದ್ದಾರೆ.

ರಾಜ್ಯದಲ್ಲಿ ಮುಖ್ಯಮಂತ್ರಿ ಯಾರಾಗಬೇಕೆಂದು ಎಂಬ ಪ್ರಶ್ನೆ ಶೇ. 39.1 ಜನರು ಸಿದ್ದರಾಮಯ್ಯ ಆಗಬೇಕೆಂದು ಉತ್ತರಿಸಿದ್ದಾರೆ. ಶೇ.31.1 ಜನರು ಬಸವರಾಜ್‌ ಬೊಮ್ಮಾಯಿ ಮುಖ್ಯಮಂತ್ರಿ ಆಗಬೇಕೆಂದು, ಶೇ. 21.4 ಜನರು ಹೆಚ್‌ ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ ಒಳ್ಳೆಯದು ಎಂದಿದ್ದಾರೆ. ಕೇವಲ  ಶೇ. 3.2ರಷ್ಟು ಜನರಷ್ಟೇ ಡಿ ಕೆ ಶಿವಕುಮಾರ್‌ ಮುಖ್ಯಮಂತ್ರಿ ಆಗಬೇಕೆಂದು ಬಯಸಿದ್ದಾರೆ ಎಂದು ಸಮೀಕ್ಷೆ ಹೇಳಿದೆ.

ಇದನ್ನು ಓದಿ: ವಿಧಾನಸಭೆ ಚುನಾವಣೆ : ಇಂದಿನಿಂದಲೇ ನೀತಿ ಸಂಹಿತೆ ಜಾರಿ, ಪಾಲಿಸಬೇಕಾದ ನಿಯಮಗಳೇನು ?

ರಾಜ್ಯದಲ್ಲಿ ಐಪಿಎಸ್ಎಸ್ ತಂಡದ ಸಹಯೋಗದೊಂದಿಗೆ ಹೈದರಾಬಾದ್‌ನ ಎಸ್ಎಎಸ್ ಗುಂಪು ನವೆಂಬರ್ 20 ರಿಂದ ಜನವರಿ 15 ರವರೆಗೆ ನಡೆಸಿದ ಸಮೀಕ್ಷೆಯಲ್ಲಿ, ಕಾಂಗ್ರೆಸ್ ತನ್ನ ಮತಗಳನ್ನು ಹೆಚ್ಚಿಸಿಕೊಳ್ಳಬಹುದು ಎಂದು ತಿಳಿದುಬಂದಿದೆ. ಬಿಜೆಪಿಯು ತನ್ನ ಮತಗಳಿಕೆಯಲ್ಲಿ ಶೇ 2.35ರಷ್ಟು ಕುಸಿತವನ್ನು ಕಾಣಲಿದೆ. ಜೆಡಿಎಸ್ ಕೂಡ ಶೇ. 1.3ರಷ್ಟು ಇಳಿಕೆಯೊಂದಿಗೆ ಶೇ. 17ರಷ್ಟು  ಮತಗಳಿಕೆಯನ್ನು ಕಾಣಬಹುದು. ಸ್ವತಂತ್ರ ಅಭ್ಯರ್ಥಿಗಳು ಸೇರಿದಂತೆ ಇತರರು ಶೇ 6 ರಷ್ಟು ಮತ ಗಳಿಸಬಹುದು. ಸಣ್ಣ ಪಕ್ಷಗಳು ಮತ್ತು ಸ್ವತಂತ್ರರು ಏಳು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ ಎಂದು ಹೇಳಿದೆ.

ಬೆಂಗಳೂರು ನಗರದಲ್ಲಿ 13-14 ಮಂದಿ ಕಾಂಗ್ರೆಸ್ ಶಾಸಕರು ಹಾಗೂ ಬಿಜೆಪಿಯಿಂದ ಕೇವಲ 9-10 ಮಂದಿ ಶಾಸಕರಾಗಿ ಆಯ್ಕೆಯಾಗಬಹುದು. ಹಳೇ ಮೈಸೂರು ಭಾಗದಲ್ಲಿ ಬಿಜೆಪಿಗೆ ಕೇವಲ 10-14 ಸ್ಥಾನಗಳನ್ನು ಗೆಲ್ಲುವಲ್ಲಿ ಸಫಲವಾಗಬಹುದು. ಕಾಂಗ್ರೆಸ್ 24 ರಿಂದ 25 ಸ್ಥಾನಗಳನ್ನು ಗಳಿಸಬಹುದು. ಜೆಡಿಎಸ್ 21 ರಿಂದ 22 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ ಎಂದು ಸಮೀಕ್ಷೆ ತಿಳಿಸಿದೆ.

ಬೆಳಗಾವಿ ಅಥವಾ ಕಿತ್ತೂರು ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ 27-28 ಮತ್ತು ಬಿಜೆಪಿ 14 – 16 ಸ್ಥಾನಗಳನ್ನು ಪಡೆಯುವ ಬಹುದು ಎನ್ನಲಾಗಿದೆ. ಕರಾವಳಿ ಕರ್ನಾಟಕದಲ್ಲಿ ಬಿಜೆಪಿ ಪಕ್ಷ 12 ರಿಂದ 13 ಸ್ಥಾನಗಳಲ್ಲಿ ವಿಜಯ ಸಾಧಿಸಬಹುದು. ಆದರೆ ಕಾಂಗ್ರೆಸ್ ಏಳರಿಂದ ಎಂಟು ಸ್ಥಾನಗಳನ್ನು ಮಾತ್ರ ಗೆಲ್ಲಬಹುದು.

ಹೈದರಾಬಾದ್-ಕರ್ನಾಟಕದಲ್ಲಿ ಬಿಜೆಪಿಯ ಮಾಜಿ ನಾಯಕ ಜನಾರ್ದನ ರೆಡ್ಡಿ ಹೊಸ ಪಕ್ಷದ ಸ್ಪರ್ಧೆಯೂ ಕಷ್ಟವಾಗಿ ಪರಿಣಮಿಸಬಹುದು. ಇಲ್ಲಿ ಬಿಜೆಪಿ 12 ರಿಂದ 14 ಸ್ಥಾನಗಳನ್ನು ಪಡೆಯಬಹುದು ಮತ್ತು ಕಾಂಗ್ರೆಸ್ 21 – 22 ಸ್ಥಾನಗಳನ್ನು ಗೆಲ್ಲಬಹುದು. ಮಧ್ಯ ಕರ್ನಾಟಕದಲ್ಲಿ ಕಾಂಗ್ರೆಸ್ 16-17 ಸ್ಥಾನಗಳನ್ನು ಪಡೆಯಲಿದ್ದು, ಬಿಜೆಪಿ ಕೇವಲ 8 ರಿಂದ 9 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ.

ಕಾಂಗ್ರೆಸ್‌ ಪಕ್ಷಕ್ಕೆ ಹಿಂದುಳಿದ, ಎಸ್‌ಸಿ/ಎಸ್‌ಟಿ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಮತಗಳೇ ನಿರ್ಣಾಯಕವಾಗಲಿದೆ ಎನ್ನಲಾಗಿದೆ. ಒಕ್ಕಲಿಗರು ಯಾರನ್ನು ಬೆಂಬಲಿಸುತ್ತಾರೆ ಎಂಬುದರ ಕುರಿತು ಸಮೀಕ್ಷೆಯು ಶೇ 50 ರಷ್ಟು ಜೆಡಿಎಸ್, 38 ಪ್ರತಿಶತ ಕಾಂಗ್ರೆಸ್ ಮತ್ತು 10 ಪ್ರತಿಶತ ಬಿಜೆಪಿಯನ್ನು ಬೆಂಬಲಿಸುತ್ತಾರೆ ಎಂದು ಹೇಳಿದೆ.

ರಾಜಕೀಯ ಪಕ್ಷಗಳ ಗೆಲುವಿನ ಕಸರತ್ತಿಗಾಗಿ ವಿವಿಧ ರೀತಿಯ ಲೆಕ್ಕಾಚಾರ ಬಿರುಸಾಗಿದೆ. ಚುನಾವಣಾ ಪ್ರಚಾರ ಕಾವೇರಿದ್ದು, ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ನಿಕಟ ಪೈಪೋಟಿ ಏರ್ಪಟ್ಟಿದೆ.

ಮಾರ್ಚ್‌ 29ರಿಂದಲೇ ನೀತಿ ಸಂಹಿತೆ ಜಾರಿಯಾಗಿದ್ದು, ಏಪ್ರಿಲ್ 13ರಂದು ಚುನಾವಣೆಗೆ ಅಧಿಸೂಚನೆ ಹೊರಡಿಸಲಿದೆ. ಏಪ್ರಿಲ್ 20ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ, 21ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಏಪ್ರಿಲ್ 24 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.

ರಾಜ್ಯದಲ್ಲಿ 5.22 ಕೋಟಿ ಮತದಾರರರಿದ್ದು, 2,62,42,561 ಪುರುಷ ಮತದಾರರು, 2,59,26,319 ಮಹಿಳಾ ಮತದಾರರು ಇದ್ದಾರೆ. ಇದರಲ್ಲಿ 9,17,241 ಮಂದಿ ಇದೇ ಮೊದಲ ಬಾರಿಗೆ ಮತದಾನ ಮಾಡಲಿದ್ದಾರೆ.  80 ವರ್ಷ ಮೇಲ್ಪಟ್ಟ 12,15,763 ಮತದಾರರು, ಅಂಗವಿಕಲರು 5,55,073 ಮತದಾರರು, 4,699 ತೃತೀಯ ಲಿಂಗಿ ಮತದಾರರು ಇದ್ದಾರೆ. 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *