ಸಂಸತ್ತಿನಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡಿದ ಸಂಸದನಿಗೆ ಪ್ರಮುಖ ಚುನಾವಣಾ ಜವಾಬ್ದಾರಿ ನೀಡಿದ ಬಿಜೆಪಿ!

ನವದಹಲಿ: ಇತ್ತೀಚೆಗಷ್ಟೇ ಸಂಸತ್ತಿನಲ್ಲಿ ಬಿಎಸ್‌ಪಿ ಸಂಸದ ಡ್ಯಾನಿಶ್ ಅಲಿ ವಿರುದ್ಧ ಮುಸ್ಲಿಂ ವಿರೋಧಿ ದ್ವೇಷ ಭಾಷಣ ಮಾಡಿದ ಬಿಜೆಪಿ ಸಂಸದ ರಮೇಶ್ ಬಿಧುರಿ ಅವರನ್ನು ರಾಜಸ್ಥಾನದ ಟೋಂಕ್ ಕ್ಷೇತ್ರದ ಚುನಾವಣಾ ಉಸ್ತುವಾರಿಯಾಗಿ ಪಕ್ಷವೂ ನೇಮಿಸಿದೆ ಎಂದು ಇಂಡಿಯ ಟುಡೆ ವರದಿ ಮಾಡಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಟೋಂಕ್ ಕ್ಷೇತ್ರದಿಂದ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಸ್ಪರ್ಧಿಸಲಿದ್ದಾರೆ ಎಂಬ ಊಹಾಪೋಹಗಳ ನಡುವೆಯೇ ಈ ನಿರ್ಧಾರ ಕೈಗೊಳ್ಳಲಾಗಿದೆ.

200 ಸದಸ್ಯ ಬಲವಿರುವ ರಾಜಸ್ಥಾನ ವಿಧಾನಸಭೆ ಚುನಾವಣೆಯು ಈ ವರ್ಷದ ನವೆಂಬರ್‌ನಲ್ಲಿ ಅಥವಾ ಅದಕ್ಕೂ ಮೊದಲು ನಡೆಯಲಿದೆ. ರಮೇಶ್ ಬಿಧುರಿ ಅವರನ್ನು ಉಸ್ತುವಾರಿಯನ್ನಾಗಿ ಮಾಡಿದ ಟೋಂಕ್‌ ಕ್ಷೇತ್ರವೂ ಸಚಿನ್ ಪೈಲಟ್‌ ಅವರ ಭದ್ರಕೋಟೆಯಾಗಿದೆ.

ಇದನ್ನೂ ಓದಿ: ರಾಮನಗರ : ಚುನಾವಣಾಧಿಕಾರಿ ಕಾರು ಅಡ್ಡಗಟ್ಟಿ ಬ್ಯಾಲೆಟ್ ಪೇಪರ್, ಲ್ಯಾಪ್‌ಟಾಪ್ ದೋಚಿದ ದುಷ್ಕರ್ಮಿಗಳು

ಲೋಕಸಭೆಯ ವಿಶೇ‍ಷ ಅಧಿವೇಶನದ ಚರ್ಚೆಯ ವೇಳೆ ಬಿಜೆಪಿ ಸಂಸದ ಬಿಧುರಿ ಅವರು ಡ್ಯಾನಿಶ್ ಅಲಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಮುಸ್ಲಿಂ ವಿರೋಧಿ ಹೇಳಿಕೆಗಳನ್ನು ನೀಡಿದ್ದ ಅವರು ಸಂಸತ್ತಿನಲ್ಲೆ ದ್ವೇಷ ಭಾಷಣ ಮಾಡಿದ್ದರು. ಇದರ ವಿರುದ್ಧ ದೇಶದಾದ್ಯಂತ ಭಾರೀ ವಿವಾದವು ಭುಗಿಲೆದ್ದಿತ್ತು.

ಬಿಧುರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರತಿಪಕ್ಷ ಕಾಂಗ್ರೆಸ್ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರನ್ನು ಒತ್ತಾಯಿಸಿತ್ತು. ಈ ವಿಷಯವನ್ನು ವಿಶೇಷಾಧಿಕಾರ ಸಮಿತಿಗೆ ಒಪ್ಪಿಸುವಂತೆ ಕನಿಷ್ಠ ನಾಲ್ಕು ವಿರೋಧ ಪಕ್ಷಗಳು ಸ್ಪೀಕರ್ ಅವರನ್ನು ಒತ್ತಾಯಿಸಿವೆ.

ದ್ವೇಷ ಭಾಷಣ ಮಾಡುತ್ತಿದ್ದಾಗ ಸ್ಪೀಕರ್ ಪೀಠದಲ್ಲಿದ್ದ ಸಂಸದ ಕೋಡಿಕುನ್ನಿಲ್ ಸುರೇಶ್ ಅವರು ಕೂಡಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದು, ಬಿಧುರಿ ಅವರನ್ನುವ ಕೂಡಲೇ ಅಮಾನತುಗೊಳಿಸುವಂತೆ ಕೇಳಿಕೊಂಡಿದ್ದರು.

ಇದನ್ನೂ ಓದಿ: ‘ಸಂಸತ್ತಿನಲ್ಲಿ ಪ್ರಧಾನಿಯ ಹಾಜರಾತಿ ಕೇವಲ 0.001% – ಸಿಪಿಐ(ಎಂ) ಸಂಸದ ಡಾ. ಜಾನ್ ಬ್ರಿಟ್ಟಾಸ್ ಆರೋಪ

ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಸ್ಪೀಕರ್‌ ಅವರಿಗೆ ಪತ್ರ ಬರೆದಿದ್ದು, ಸಂಸತ್ತಿನ ಇತಿಹಾಸದಲ್ಲೆ ಅಲ್ಪಸಂಖ್ಯಾತ ಸಮುದಾಯದ ಸದಸ್ಯರ ವಿರುದ್ಧ ಇಂತಹ ಪದಗಳನ್ನು ಬಳಸಲಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಳಿಕೊಂಡಿದ್ದರು.

ರಮೇಶ್ ಬಿಧುರಿ ಅವರಿಂದ ಅವಹೇಳಕ್ಕೀಡಾಗಿದ್ದ ಡ್ಯಾನಿಶ್ ಅಲಿ ಘಟನೆಯನ್ನು “ಸಂವಿಧಾನ ಮತ್ತು ಪ್ರಜಾಪ್ರಭುತ್ವದ ವಿರುದ್ಧದ ದಾಳಿ” ಎಂದು ಕರೆದಿದ್ದು, ಈ ವರೆಗೆ ಬೀದಿಯಲ್ಲಿದ್ದ ದ್ವೇಷವನ್ನು ಸಂಸತ್ತಿಗೆ ತರುವ ಪ್ರಯತ್ನ ಎಂದು ಹೇಳಿದ್ದರು.

ವಿವಾದದ ಬೆನ್ನಲ್ಲೇ ಬಿಧುರಿ ಹೇಳಿಕೆಗೆ ಬಿಜೆಪಿ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು. ಆದರೆ ಅವರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬುವುದು ವರದಿಯಾಗಿಲ್ಲ.

ವಿಡಿಯೊ ನೊಡಿ: ಕಟ್ಟಡ ಕಾರ್ಮಿಕರ ಮಕ್ಕಳ ಸ್ಕಾಲರ್ಶಿಪ್‌ಗೆ ಕೊಕ್ಕೆ! ಭುಗಿಲೆದ್ದ ಕಾರ್ಮಿಕರ ಆಕ್ರೋಶ Janashakthi Media

Donate Janashakthi Media

Leave a Reply

Your email address will not be published. Required fields are marked *