ಕೇಂದ್ರದ ಬಿಜೆಪಿ ಸರ್ಕಾರ ಗುರುವಾರ ಬಹು ನಿರೀಕ್ಷಿತ ಮಹಿಳಾ ಮೀಸಲಾತಿ ಮಸೂದೆಯನ್ನು ಲೋಕಸಭೆಯಲ್ಲಿ ಅಂಗೀಕರಿಸಿದೆ. ದೇಶದ ಅರ್ಧದಷ್ಟಿರುವ ಮಹಿಳೆಯರು ತಮಗೆ ಮೀಸಲಾತಿ ನೀಡಬೇಕು ಎಂದು ಹಲವು ದಶಕಗಳಿ ಹೋರಾಟ ಮಾಡುತ್ತಿದ್ದಾರೆ. ಇದೀಗ ಲೋಕಸಭೆಯಲ್ಲಿ ಅಂಗೀಕಾರ ಸಿಕ್ಕರೂ 2024ರ ಲೋಕಸಭೆ ಚುನಾವಣೆಯಲ್ಲಿ ಈ ಕಾಯ್ದೆ ಜಾರಿಯಾಗುವ ಸಾಧ್ಯತೆ ಇಲ್ಲ ಎಂದು ವರದಿಯಾಗಿದೆ. 2026ರ ಡಿಲಿಮಿಟೇಶನ್ ಪ್ರಕ್ರಿಯೆಯು ಮುಗಿದ ನಂತರ, ಬಹುಶಃ 2029 ರಲ್ಲಿ ಇದನ್ನು ಜಾರಿಗೆ ತರಲಾಗುವುದು ಎಂದು ವರದಿಯಾಗಿದೆ.
ಮಸೂದೆಗೆ “ನಾರಿ ಶಕ್ತಿ ವಂದನಾ ಅಧಿನಿಯಮ” ಎಂದು ಹೆಸರಿಡಲಾಗಿದ್ದು, ಬಿಜೆಪಿ ಇದು ತನ್ನ ಬೃಹತ್ ಸಾಧನೆ ಎಂಬಂತೆ ಬಿಂಬಿಸಿಕೊಳ್ಳುತ್ತಿದೆ. ಆದರೆ ಬಿಜೆಪಿ ಸರ್ಕಾರವು ಮಹಿಳಾ ಮೀಸಲಾತಿಯ ಬಗ್ಗೆ ಗಂಭೀರವಾಗಿರುತ್ತಿದ್ದರೆ, 2014 ರಲ್ಲೇ ಅದನ್ನು ಅಂಗೀಕರಿಸಬಹುದಿತ್ತು ಎಂದು ರಾಷ್ಟ್ರೀಯ ಮಹಿಳಾ ಸಂಘಟನೆಗಳು ಇತ್ತೀಚೆಗೆ ನೀಡಿದ್ದ ಜಂಟಿ ಹೇಳಿಕೆಯಲ್ಲಿ ತಿಳಿಸಿವೆ. 108 ನೇ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮೀಸಲಿಡಲು 2010ರ ಮೇ ತಿಂಗಳಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎದ ಸರ್ಕಾರದ ಅವಧಿಯಲ್ಲಿ ರಾಜ್ಯಸಭೆಯಲ್ಲಿ ಪರಿಚಯಿಸಲಾಗಿತ್ತು. ಆದರೆ ಲೋಕಸಭೆಯು ಅದರ ಮೇಲೆ ಮತ ಚಲಾಯಿಸದ ನಂತರ ಅದು ರದ್ದಾಯಿತು.
ಇದನ್ನೂ ಓದಿ: ಸರ್ಕಾರ ಮಂಡಿಸಿದ ಮಹಿಳಾ ಮೀಸಲಾತಿ ಮಸೂದೆಯಲ್ಲಿ ಏನೇನಿದೆ? | ಇಲ್ಲಿ ಕ್ಲಿಕ್ ಮಾಡಿ
ಇದೀಗ ಬಿಜೆಪಿ ಸರ್ಕಾರ ಮಹಿಳಾ ಮೀಸಲಾತಿ ಮಸೂದೆಯನ್ನು ತಂದಿದ್ದರೂ, ಮನಮೋಹನ್ ಸರ್ಕಾರ ಈ ಮಸೂದೆಯನ್ನು ಮಂಡಿಸಿದಾಗ ಬಿಜೆಪಿಯ ಹಲವಾರು ಸಂಸದರು ಮತ್ತು ನಾಯಕರು ಇದನ್ನು ವಿರೋಧಿಸಿದ್ದರು. ಅಂದು ವಿಪಕ್ಷದಲ್ಲಿದ್ದ ಬಿಜೆಪಿಯ ಯಾವ ಯಾವ ನಾಯಕರು ಮಹಿಳಾ ಮೀಸಲಾತಿ ಮಸೂದೆಯನ್ನು ಯಾವ ಮಾದರಿಯಲ್ಲಿ ವಿರೋಧಿಸಿದರು ಎಂಬುದನ್ನು ಗಮನಿಸೋಣ ಬನ್ನಿ…!
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ 2010 ಎಪ್ರಿಲ್ ತಿಂಗಳಲ್ಲಿ ಮಹಿಳಾ ಮಸೂದೆಯನ್ನು ತೀವ್ರವಾಗಿ ವಿರೋಧಿಸಿದ್ದರು. ಆ ವೇಳೆ ಬಿಜೆಪಿ ಸಂಸದರಾಗಿದ್ದ ಅವರು, “ಈ ಮಸೂದೆ ಜಾರಿಯಾದರೆ ಭಾರತೀಯ ರಾಜಕೀಯ ವ್ಯವಸ್ಥೆ ಮುಳುಗುತ್ತದೆ. ಮಹಿಳಾ ಮೀಸಲಾತಿ ವಿಷಯದ ಬಗ್ಗೆ ಎಲ್ಲಾ ಸಂಸದರೊಂದಿಗೆ ಪಕ್ಷದಲ್ಲಿ ಚರ್ಚೆಗೆ ಒತ್ತಾಯಿಸುತ್ತೇವೆ. ಇದು ನಡೆಯಬೇಕು, ಇಲ್ಲವಾದರೆ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ದೆಹಲಿಯ ಹವಾನಿಯಂತ್ರಿತ ಕೊಠಡಿಯ ಜನರು ಸಾರ್ವಜನಿಕ ನೀತಿಯನ್ನು ನಿರ್ಧರಿಸಲು ಸಾಧ್ಯವಿಲ್ಲ” ಎಂದು ಅವರು ಹೇಳಿದ್ದರು.
Yogi Adityanath had opposed the Women's Reservation Bill in 2010
#WomenReservationBill pic.twitter.com/HJIxuFaqPs— Ductar Fakir 2.0 (@Chacha_huu) September 18, 2023
ಈ ಬಗ್ಗೆ ಹಿಂದೂಸ್ಥಾನ್ ಟೈಮ್ಸ್‌ಗೆ ಪತ್ರ ಬರೆದಿದ್ದ ಆದಿತ್ಯನಾಥ್, “ಪ್ರಸ್ತುತ ಸ್ಥಳೀಯ ಮಟ್ಟದಲ್ಲಿ ಮಹಿಳಾ ಮೀಸಲಾತಿ ಇದೆ. ಮಕ್ಕಳ ಆರೈಕೆಯಂತಹ ಅವರ ಮನೆಯ ಜವಾಬ್ದಾರಿಗಳ ಮೇಲೆ ಇದು ಹೇಗೆ ಪರಿಣಾಮ ಬೀರುತ್ತಿದೆ? ಮಹಿಳಾ ಮೀಸಲಾಗಿ ಈ ಪಾತ್ರಗಳ ಮೇಲೆ ಪರಿಣಾಮ ಬೀರುತ್ತಿದೆ ಎಂಬುದನ್ನು ನಿರ್ಣಯಿಸಬೇಕಿದೆ. ಪ್ರಸ್ತುತ ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ, ಆದರೂ ಅದನ್ನು ಪ್ರಯೋಗವಾಗಿ ಮುಂದುವರಿಸಬೇಕು. ಅದು ಯಶಸ್ವಿಯಾಗಿದೆ ಎಂದು ನಾವು ಕಂಡುಕೊಂಡರೆ, ಅದನ್ನು ಸಂಸತ್ತಿನಲ್ಲಿ ಕೋಟಾಕ್ಕೆ ವಿಸ್ತರಿಸಬೇಕಿದೆ. ಪುರುಷರು ಸ್ತ್ರೀ ಲಕ್ಷಣಗಳನ್ನು ಬೆಳೆಸಿಕೊಂಡರೆ, ಅವರು ದೇವರುಗಳಾಗುತ್ತಾರೆ, ಆದರೆ ಮಹಿಳೆಯರು ಪುರುಷ ಲಕ್ಷಣಗಳನ್ನು ಬೆಳೆಸಿಕೊಂಡರೆ ಅವರು ರಾಕ್ಷಸರಾಗುತ್ತಾರೆ…ಮಹಿಳಾ ವಿಮೋಚನೆಯ ಪಾಶ್ಚಿಮಾತ್ಯ ವಿಚಾರಗಳನ್ನು ಭಾರತೀಯ ಸಂದರ್ಭದಲ್ಲಿ ಸರಿಯಾಗಿ ವಿಶ್ಲೇಷಿಸಬೇಕಿದೆ” ಎಂದು ಹೇಳಿದ್ದರು.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದರಾಗಿರುವ ತೇಜಸ್ವಿ ಸೂರ್ಯ ಅವರು 2014 ಜೂನ್‌ನಲ್ಲಿ ಮಹಿಳಾ ಮೀಸಲಾತಿಯನ್ನು ವಿರೋಧಿಸಿ ಟ್ವೀಟ್ ಮಾಡಿದ್ದರು. ಈ ವೇಳೆ ಅವರು ಸಂಸದರಾಗಿ ಆಯ್ಕೆ ಆಗಿರಲಿಲ್ಲ, ಆದರೆ ಬಿಜೆಪಿ ಹಾಗೂ ಮೋದಿ ಪರವಾಗಿ ಅವರು ಚುನಾವಣಾ ಪ್ರಚಾರ ಮಾಡಿದ್ದರು.
2014ರ ಜೂನ್ 10ರಂದು ಟ್ವೀಟ್ ಮಾಡಿದ್ದ ತೇಜಸ್ವಿ ಸೂರ್ಯ, “ಸಂಸತ್ತಿನಲ್ಲಿ ಮಹಿಳಾ ಮೀಸಲಾತಿಯನ್ನು ಹೊರತುಪಡಿಸಿದರೆ ಮೋದಿ ಸರ್ಕಾರದ ಕಾರ್ಯಸೂಚಿಯು ಸ್ಫೂರ್ತಿದಾಯಕವಾಗಿದೆ. ಮಹಿಳಾ ಮೀಸಲಾತಿ ನಿಜವಾಗುವ ದಿನ ಭಯವಿದೆ” ಎಂದು ಟ್ವೀಟ್ ಮಾಡಿದ್ದರು. ಆದರೆ ಆ ಟ್ವೀಟ್ ಅನ್ನು ಅವರು ಇದೀಗ ಡಿಲೀಟ್ ಮಾಡಿದ್ದಾರೆ.
ಮಹಿಳಾ ಮೀಸಲಾತಿ ಮಸೂದೆಯನ್ನು ವಿರೋಧಿಸಿ ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥೆ ಅಮಿತ್ ಮಾಳವಿಯಾ ಅವರ ಕನಿಷ್ಠ ಒಂಬತ್ತು ಹಳೆಯ ಟ್ವೀಟ್‌ಗಳು (2010 ಮತ್ತು 2013 ರ ನಡುವೆ ಪೋಸ್ಟ್ ಮಾಡಲಾಗಿದೆ) ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.
ಇದನ್ನೂ ಓದಿ: ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಅಂಗೀಕಾರ
2010ರ ಮೇ 10ರಂದು ಟ್ವೀಟ್ ಮಾಡಿದ್ದ ಅಮಿತ್ ಮಾಳವಿಯ, “ಮಹಿಳಾ ಮೀಸಲಾತಿ ಮಸೂದೆಯನ್ನು ತರುವ ಮೂಲಕ, ಕಾಂಗ್ರೆಸ್ ತನಗಾಗಿ ಮತ್ತೊಂದು ಕ್ಷೇತ್ರವನ್ನು ಸೃಷ್ಟಿಸಿದೆ. ಇದು ಜಾತಿ ಮತ್ತು ಧರ್ಮವನ್ನು ಮೀರಿದೆ” ಎಂದು ಹೇಳಿದ್ದರು. 2013ರ ಎಪ್ರಿಲ್ 19ರಂದು ಅವರು, “ನಾವು ಎಲ್ಲಾ ರೀತಿಯ ಮೀಸಲಾತಿಯಿಂದ ದೂರ ಸರಿಯುತ್ತಿದ್ದೇವೆ, ಆದರೆ ಇದೀಗ ಮಹಿಳೆಯರಿಗೆ ಮೀಸಲಾತಿ ನೀಡಬೇಕು ಎಂದು ಬೇಡಿಕೆ ಬರುತ್ತಿದೆ” ಎಂದು ಟ್ವೀಟ್ ಮಾಡಿದ್ದರು.
Here are many: pic.twitter.com/AYUEOH3GXo
— Sourabh Joshi (@iSourabhJoshi) September 18, 2023
2014ರ ಜನವರಿ 12 ರಂದು ಟ್ವೀಟ್ ಮಾಡಿದ್ದ ಅಮಿತ್ ಮಾಳವಿಯ, “ಮಹಿಳೆಯರು ರಾಷ್ಟ್ರ ಕಟ್ಟಬೇಕು ಎಂದು ನಮೋ(ನರೇಂದ್ರ ಮೋದಿ) ಬಯಸುತ್ತಿದ್ದರೆ, ಪಪ್ಪು (ರಾಹುಲ್ ಗಾಂಧಿ) ಅವರಿಗೆ 12 ಗ್ಯಾಸ್ ಸಿಲಿಂಡರ್ ಮತ್ತು ಮೀಸಲಾತಿ ನೀಡಲು ಬಯಸುತ್ತಿದ್ದಾರೆ. ವ್ಯತ್ಯಾಸ ನೋಡಿ” ಎಂದು ಹೇಳಿದ್ದರು.
Just posting your past comments on women reservation bill . pic.twitter.com/nBZcOF25BE
— Tejinder (@Tejinde44628721) September 19, 2023
ಇದೀಗ ಬಿಜೆಪಿ ಸರ್ಕಾರವೆ ಮಹಿಳಾ ಮೀಸಲಾತಿ ಮಸೂದೆ ಅಂಗೀಕರಿಸಿದರೂ ಹಿರಿಯ ಬಿಜೆಪಿ ನಾಯಕಿ, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾ ಭಾರತಿ ಅವರು,”ಮಸೂದೆಯಲ್ಲಿ ಇತರ ಹಿಂದುಳಿದ ವರ್ಗಗಳ (ಒಬಿಸಿ) ಮಹಿಳೆಯರಿಗೆ ಕೋಟಾವನ್ನು ರೂಪಿಸದಿರುವುದು ನಿರಾಶೆಯಾಗಿದೆ” ಎಂದು ಮಂಗಳವಾರ ಹೇಳಿದ್ದಾರೆ.
“ಮಹಿಳಾ ಕೋಟಾದಲ್ಲಿ ಅರ್ಧದಷ್ಟು ಸೀಟುಗಳನ್ನು ಎಸ್‌ಸಿ/ಎಸ್‌ಟಿ ಮತ್ತು ಒಬಿಸಿಗಳಿಗೆ ಮೀಸಲಿಡಬೇಕು. ಜೊತೆಗೆ ಮುಸ್ಲಿಂ ಸಮುದಾಯದ ಹಿಂದುಳಿದ ವರ್ಗದ ಮಹಿಳೆಯರಿಗೂ ಇದರ ಲಾಭ ಸಿಗಬೇಕು” ಎಂದು ಉಮಾ ಭಾರತಿ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
ವಿಡಿಯೊ ನೋಡಿ: ಒಂದು ದೇಶ ಒಂದು ಚುನಾವಣೆ : ದೇಶದ ಭದ್ರತೆಯನ್ನು ನಾಶ ಮಾಡುವ ಪ್ರಸ್ತಾಪ – ಎ ನಾರಾಯಣ Janashakthi Media