ಬಡವರ ಅಕ್ಕಿ ಖಾಸಗಿಯವರಿಗೆ ಮಾರಾಟಕ್ಕಿಟ್ಟಿದ್ದು ನೋಡಿಯು ಬಿಜೆಪಿ ಸಂಸದರ ಮೌನ ಅಸಹ್ಯ: ಸಿಪಿಐಎಂ

ತಾರತಮ್ಯ ಹಾಗೂ ಕೀಳು ರಾಜಕೀಯದ ವಿರುದ್ದ ಬಹಿರಂಗ ಪ್ರತಿಭಟನಾ ಪತ್ರ ಬರೆಯಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಿಪಿಐಎಂ ಮನವಿ ಮಾಡಿದೆ.

ಬೆಂಗಳೂರು: ರಾಜ್ಯದ ಬಡವರಿಗೆ 34 ರೂ.ಗೆ ಅಕ್ಕಿ ನೀಡಲು ಸಿದ್ದರಿಲ್ಲದ ಒಕ್ಕೂಟ ಸರ್ಕಾರ ಖಾಸಗಿ ವ್ಯಾಪಾರಸ್ಥರಿಗೆ 31 ರೂ. ನಂತೆ ಮಾರಾಟಕ್ಕಿಟ್ಟಿರುದನ್ನು ನೋಡಿಯು ಬಿಜೆಪಿ ಸಂಸದರು ಮತ್ತು ನಾಯಕರು ಬಾಯಿ ಬಿಡದೆ ಮೌನವಾಗಿರುವುದು ಅಸಹ್ಯಕರವಾಗಿದೆ ಎಂದುಭಾರತ ಕಮ್ಯುನಿಸ್ಟ್ ಪಕ್ಷ ( ಮಾರ್ಕ್ಸವಾದಿ) – ಸಿಪಿಐಎಂ – ಗುರುವಾರ ಆಕ್ರೋಶ ವ್ಯಕ್ತಪಡಿಸಿದೆ.

ರಾಜ್ಯದ ಬಡವರಿಗೆ ಅಕ್ಕಿ ಒದಗಿಸದೆ, ಖಾಸಗಿ ವರ್ತಕರಿಗೆ ನೀಡುತ್ತಿರುವ ಒಕ್ಕೂಟ ಸರಕಾರದ ನಡೆ ಬಡವರ ವಿರೋದಿ ನಡೆಯಾಗಿದೆ ಎಂದು ಪಕ್ಷವು ಹೇಳಿದೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಿಪಿಐಎಂ ರಾಜ್ಯ ಕಾರ್ಯದರ್ಶಿ ಯು.ಬಸವರಾಜ, ”ಕರ್ನಾಟಕ ಸರಕಾರ ಬಡವರಿಗಾಗಿ ಅಕ್ಕಿಗೆ 34 ರೂ. ನೀಡಲು ಸಿದ್ಧವಿದ್ದರೂ ಒಕ್ಕೂಟ ಸರಕಾರ ಅಕ್ಕಿ ನೀಡಿರಲಿಲ್ಲ. ಆದರೆ ಈಗ ಖಾಸಗಿ ವ್ಯಾಪಾರಸ್ಥರಿಗಾಗಿ 31 ರೂ. ನಂತೆ ಮಾರಾಟಕ್ಕಿಟ್ಟಿದೆ. ಇದು ನರೇಂದ್ರ ಮೋದಿಯವರ ಒಕ್ಕೂಟ ಸರಕಾರ ಬಡವರ ವಿರೋಧಿ ಮತ್ತು ಖಾಸಗೀ ವ್ಯಾಪಾರಸ್ಥರ ಪರವಾಗಿರುದೆ ಎಂದು ಸ್ಪಷ್ಟವಾಗಿ ಎತ್ತಿ ತೋರಿಸುತ್ತದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ವಿದ್ಯುತ್ ಖಾಸಗೀಕರಣಗೊಂಡರೆ ಉಚಿತ ವಿದ್ಯುತ್ ಯೋಜನೆಗೆ ಉಳಿವಿಲ್ಲ: ಸಿಪಿಐಎಂ ನಾಯಕ ಕೆ.ಪ್ರಕಾಶ್ ಎಚ್ಚರಿಕೆ

ಒಕ್ಕೂಟ ಸರಕಾರದ ಬಡವರ ವಿರೋಧಿ ನೀತಿಯನ್ನು ಸಿಪಿಐಎಂ ತೀವ್ರ ಖಂಡಿಸಿದ್ದು, “ಜನ ವಿರೋಧಿ ಕೀಳು ರಾಜಕೀಯವನ್ನು ಬಿಟ್ಟು ಕರ್ನಾಟಕದ ಬಡವರಿಗೆ ಅಗತ್ಯದಷ್ಠು ಅಕ್ಕಿಯನ್ನು ಒದಗಿಸುವಂತೆ” ಒಕ್ಕೂಟ ಸರಕಾರವನ್ನು ಒತ್ತಾಯಿಸಿದೆ.

“ರಾಜ್ಯದ ವಿರೋಧ ಪಕ್ಷವಾದ ಬಿಜೆಪಿ ಹಾಗೂ ಅದರ ಮುಖಂಡರು, ಸಂಸದರು, ಶಾಸಕರು, ಮಾಜಿ ಮುಖ್ಯಮಂತ್ರಿಗಳು, ಒಕ್ಕೂಟ ಸರಕಾರದ ಮಂತ್ರಿಗಳು ಇಷ್ಟು ನಗ್ನ ರೀತಿಯಲ್ಲಿ ಒಕ್ಕೂಟ ಸರಕಾರ ರಾಜ್ಯದ ಬಡ ಜನತೆಗೆ ಅನ್ಯಾಯ ಮತ್ತು ಅಪಮಾನವನ್ನೆಸಗುತ್ತಿದ್ದರೂ ಬಾಯಿ ಬಿಡದೇ ಮೌನವಾಗಿರುವುದು ಅಸಹ್ಯಕರವಾಗಿದೆ” ಎಂದು ಸಿಪಿಐಎಂ ಹೇಳಿದೆ.

ರಾಜ್ಯದ ಬಿಜೆಪಿ ಮುಖಂಡತ್ವ, ಪಾರ್ಲಿಮೆಂಟ್ ಸದಸ್ಯರು ರಾಜ್ಯದ ಜನತೆಯ ಜೊತೆ ನಿಂತು ಒಕ್ಕೂಟ ಸರಕಾರದ ಮೇಲೆ ಒತ್ರಡ ಹೇರಬೇಕು ಎಂದು ಪಕ್ಷವೂ ಒತ್ತಾಯಿಸಿದ್ದು, “ರಾಜ್ಯ ಸರಕಾರ ಕೂಡಾ ಒಕ್ಕೂಟ ಸರಕಾರದ ಈ ತಾರತಮ್ಯ ಹಾಗೂ ಕೀಳು ರಾಜಕೀಯದ ವಿರುದ್ದ ಒಕ್ಕೂಟ ಸರಕಾರಕ್ಕೆ ಬಹಿರಂಗ ಪ್ರತಿಭಟನಾ ಪತ್ರವೊಂದನ್ನು ಬರೆಯಬೇಕು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದೆ.

ಇದನ್ನೂ ಓದಿ: ನಗದು ನೀಡಿಕೆ : ಅಕ್ಕಿ ಸಿಗುವವರೆಗೆ ಮಾತ್ರ – ಸಿಪಿಐಎಂ ಒತ್ತಾಯ

Donate Janashakthi Media

Leave a Reply

Your email address will not be published. Required fields are marked *