ದಕ್ಷಿಣ ಕನ್ನಡ: ಒಕ್ಕಲಿಗರ ಕಾರ್ಯಕ್ರಮದಲ್ಲಿ ಒಕ್ಕಲಿಗರ ಪರವಾಗಿ ಆಡಿದ ಒಂದು ಮಾತಿನಿಂದ ನಾನು ಮುಖ್ಯಮಂತ್ರಿ ಸ್ಥಾನವನ್ನೆ ಕಳೆದುಕೊಂಡೆ ಎಂದು ಬಿಜೆಪಿ ಸಂಸದ ಡಿ.ವಿ. ಸದಾನಂದ ಗೌಡ ಅವರು ಹೇಳಿದ್ದಾರೆ ಎಂದು ವರದಿಯಾಗಿದೆ. ಅವರು ಜಿಲ್ಲೆಯ ಕಡಬದಲ್ಲಿ ಮಂಗಳವಾರ ನಡೆದ ಒಕ್ಕಲಿಗ ಸಮುದಾಯದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ತಮ್ಮನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದ ಬಿಜೆಪಿಯ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ನಾನು ಮುಖ್ಯಮಂತ್ರಿಯಾದ ಸಮಯದಲ್ಲಿ ನಡೆದ ಕಾರ್ಯಕ್ರಮದಲ್ಲಿ, ‘ಒಕ್ಕಲಿಗ ಸಮುದಾಯದಲ್ಲಿ ಹುಟ್ಟಿ, ಆದಿಚುಂಚನಗಿರಿ ಸ್ವಾಮೀಜಿ ಆಶೀರ್ವಾದ ಪಡೆದು ರಾಜ್ಯದ ಮುಖ್ಯಮಂತ್ರಿಯಾದೆ’ ಎಂದಿದ್ದೆ. ಆ ಮಾತೇ ನನಗೆ ಮುಳುವಾಯಿತು. ನನಗೆ ಮುಖ್ಯಮಂತ್ರಿ ಸ್ಥಾನದಿಂದ ಇಳಿಯಪ್ಪಾ ಎಂದು ಪಕ್ಷದ ಹಿರಿಯರು ಹೇಳಿದರು” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್‌ನಿಂದ ಮಣಿಪುರ to ಮುಂಬೈವರೆಗೆ 6 ಸಾವಿರ ಕಿ.ಮೀ. ‘ಭಾರತ್ ನ್ಯಾಯ್ ಯಾತ್ರೆ’!
“ಈಗ ಪ್ರಾಮಾಣಿಕ ರಾಜಕಾರಣಕ್ಕೆ ಬೆಲೆಯಿಲ್ಲ. ಹರಕು ನಾಲಿಗೆ, ಹಣ ಹಾಗೂ ಗುಂಪುಗಾರಿಕೆಯ ರಾಜಕೀಯ ನಡೆಯುತ್ತಿದೆ. ಮುಂದೆ ಯಾವುದೇ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ. ಪಕ್ಷದಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತೇನೆ” ಎಂದು ಮಾಜಿ ಮುಖ್ಯಮಂತ್ರಿಯು ಆಗಿರುವ ಸದಾನಂದ ಗೌಡ ಅವರು ತಿಳಿಸಿದ್ದಾರೆ.
ಅಲ್ಲದೆ, ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಸದಾನಂದ ಗೌಡ ಅವರು, ‘ಸರ್ವಾಧಿಕಾರಿ ಧೋರಣೆ’ಯಿಂದ ದೂರವಿರುವಂತೆ ರಾಜ್ಯದ ಬಿಜೆಪಿಗೆ ಸಲಹೆ ನೀಡಿದ್ದು, ಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಇತರರ ವಿರುದ್ಧ ಅಶಿಸ್ತಿನ ವಿರುದ್ಧ ತಕ್ಷಣ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ರಾಜ್ಯದ ಪಕ್ಷದ ನೂತನ ಘಟಕವು ‘ಬಲವಾಗಿಲ್ಲ’ ಎಂದು ಅವರು ಇತ್ತೀಚೆಗೆ ಹೇಳಿದ್ದರು.
ಇದನ್ನೂ ಓದಿ: ‘ಕೊರೊನಾ ಅಕ್ರಮಗಳ ದಾಖಲೆ ನೀಡಿ’ | ಯತ್ನಾಳ್‌ಗೆ ಸಚಿವ ಖರ್ಗೆ ಮನವಿ
“ಪಕ್ಷದೊಳಗೆ ಸರ್ವಾಧಿಕಾರಿ ಧೋರಣೆ ತಾಂಡವವಾಡುತ್ತಿದೆ. ಇಂದಿರಾ ಗಾಂಧಿಯಂತಹ ಸರ್ವಾಧಿಕಾರಿಗೆ ಏನಾಯಿತು ಮತ್ತು ಅದು ಕಾಂಗ್ರೆಸ್‌ನ ಅವನತಿಗೆ ಹೇಗೆ ಕಾರಣವಾಯಿತು ಎಂಬುದು ನಮಗೆ ತಿಳಿದಿದೆ. ಆದ್ದರಿಂದ ನಾವು ಈ ಸರ್ವಾಧಿಕಾರಿ ಧೋರಣೆಯಿಂದ ಹೊರಬಂದು ಎಲ್ಲರೊಂದಿಗೆ ಸಮಾಲೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಬಿಜೆಪಿಯ ಮುಂಬರುವ ಕೋರ್ ಕಮಿಟಿ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸುತ್ತೇನೆ” ಎಂದು ಡಿವಿಎಸ್ ಹೇಳಿದ್ದಾರೆ. ಪಕ್ಷದ ಹೈಕಮಾಂಡ್‌ನ ನಾಯಕರು ರಾಜ್ಯಕ್ಕೆ ಭೇಟಿ ನೀಡಬೇಕು ಮತ್ತು ಎಲ್ಲಾ ನಾಯಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ವೇದಿಕೆಯನ್ನು ಒದಗಿಸಬೇಕು ಎಂದು ಅವರು ಹೇಳಿದ್ದಾರೆ.
“ಯತ್ನಾಳ್ ಅವರಂತಹ ರಾಜ್ಯ ನಾಯಕರಲ್ಲಿ ಅಶಿಸ್ತಿಗೆ ಅವಕಾಶ ನೀಡುವುದರಿಂದ ಪಕ್ಷಕ್ಕೆ ಹಾನಿಯಾಗಲಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಮಾತ್ರ ಇಂತಹ ಅಶಿಸ್ತು ಬೆಳೆಯುತ್ತದೆ” ಎಂದು ಸದಾನಂದ ಗೌಡ ಹೇಳಿದ್ದಾರೆ.
ಯತ್ನಾಳ್ ಕಳೆದ ಹಲವು ತಿಂಗಳಿಂದ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಮಂಗಳವಾರ ಮಾತನಾಡಿದ್ದ ಅವರು ಬಿಜೆಪಿ ಆಡಳಿತದಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕಕ್ಕೆ ಸಂಬಂಧಿಸಿದ ಖರೀದಿಗಳಲ್ಲಿ 40,000 ಕೋಟಿ ರೂಪಾಯಿಗಳ ಅಕ್ರಮ ನಡೆದಿದೆ ಎಂದು ಅವರು ಆರೋಪಿಸಿದ್ದರು.
ವಿಡಿಯೊ ನೋಡಿ: ಘನತೆಯ ಬದುಕು, ಹೋರಾಟದ ಹಾದಿ, ಕಲೆಯ ದಾರಿ – ಕಲಾವಿದರು ಹೋರಾಟಗಾರರ ಮಾತುಕತೆ Janashakthi Media