ಲೈಂಗಿಕ ಕಿರುಕುಳ ಆರೋಪಿ, ಬಿಜೆಪಿ ಸಂಸದ ಬ್ರಿಜ್‌ ಭೂಷಣ್‌ ಕಂಬಳ ಕಾರ್ಯಕ್ರಮದ ಅತಿಥಿ!

ಬೆಂಗಳೂರು : ನ.25 ,26 ರಂದು ಎರಡು ದಿನ ಬೆಂಗಳೂರು  ಅರಮನೆ ಮೈದಾನದಲ್ಲಿ ನಡೆಯಲಿರುವ ಕಂಬಳ ಕಾರ್ಯಕ್ರಮಕ್ಕೆ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಹೊತ್ತ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಅತಿಥಿಯಾಗಿ ಆಹ್ವಾನಿಸಲಾಗಿದೆ.  ಕಂಬಳ ಸಮಿತಿಯ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಕಂಬಳ ಕಾರ್ಯಕ್ರಮವು ಮೊದಲ ಬಾರಿಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ನಡೆಯಲಿದೆ. ನ.25 ರಂದು ಬೆಳಿಗ್ಗೆ 10.30 ಕ್ಕೆ ನಡೆಯಲಿರುವ ಮುಖ್ಯ ಉದ್ಘಾಟನಾ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ ಮತ್ತು ಡಿವಿ ಸದಾನಂದ ಗೌಡ ಅವರನ್ನು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಎರಡು ದಿನಗಳ ಕಾರ್ಯಕ್ರಮದ ಅಧಿಕೃತ ಆಹ್ವಾನ ಪಟ್ಟಿಯಲ್ಲಿ ಹಲವಾರು ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ಹೆಸರುಗಳಿವೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಸ್ಪೀಕರ್ ಯು.ಟಿ.ಖಾದರ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭಾಗವಹಿಸಲಿದ್ದಾರೆ. ಅದೇ ಕಾರ್ಯಕ್ರಮದಲ್ಲಿ ಕುಸ್ತಿಪಟುಗಳನ್ನು ಸನ್ಮಾನಿಸಲು ಬ್ರಿಜ್ ಭೂಷಣ್ ರನ್ನು ಆಹ್ವಾನಿಸಲಾಗಿದೆ.

ಬ್ರಿಜ್ ಭೂಷಣ್ ವಿರುದ್ಧದ ಆರೋಪಗಳಲ್ಲಿ ಲೈಂಗಿಕ ಕಿರುಕುಳ ಮಾತ್ರವಲ್ಲದೆ ದೈಹಿಕ ಕಿರುಕುಳ, ಸರ್ವಾಧಿಕಾರಿ ಕಾರ್ಯನಿರ್ವಹಣೆ ಮತ್ತು ಫೆಡರೇಷನ್ ನಿರ್ವಹಣೆಯಲ್ಲಿನ ಆರ್ಥಿಕ ಅಕ್ರಮಗಳು ಸೇರಿವೆ . ಭಾರತದ ಅಗ್ರ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್, ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಈ ವರ್ಷದ ಆರಂಭದಲ್ಲಿ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದ್ದರು. ಬ್ರಿಜ್ ಅವರನ್ನು WFI ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಬೇಕೆಂದು ಒತ್ತಾಯಿಸಿದ್ದರು.

ಇದನ್ನೂ ಓದಿ: ನೆಲಮಂಗಲ : ಗ್ರಾಪಂ ಕಚೇರಿಯಲ್ಲಿ ಕಳ್ಳತನ

ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ದಿಲ್ಲಿ ಪೊಲೀಸರು ನ್ಯಾಯಾಲಯಕ್ಕೆ ಈ ವರ್ಷ ಜೂ.13ಕ್ಕೆ ಸಲ್ಲಿಸಿರುವ ದೋಷಾರೋಪಣಾ ಪಟ್ಟಿಯಲ್ಲಿ ಆತ ಕುಸ್ತಿಪಟುಗಳಿಗೆ ಮತ್ತೆ ಮತ್ತೆ ಲೈಂಗಿಕ ಕಿರುಕುಳ ನೀಡಿದ್ದಾನೆ, ಬೆದರಿಕೆ ಹಾಕಿದ್ದಾನೆ ಹಾಗು ಹಿಂಬಾಲಿಸಿದ್ದಾನೆ. ಆತನನ್ನು ವಿಚಾರಣೆಗೆ ಕರೆಯಬೇಕು ಹಾಗು ಆತನ ಅಪರಾಧಗಳಿಗೆ ಶಿಕ್ಷೆಯಾಗಬೇಕು ಎಂದು ಹೇಳಿದ್ದಾರೆ. 15 ಮಂದಿ ಸಾಕ್ಷಿಗಳು ಬ್ರಿಜ್ ಭೂಷಣ್ ವಿರುದ್ಧ ಕುಸ್ತಿಪಟುಗಳು ಮಾಡಿರುವ ಲೈಂಗಿಕ ಕಿರುಕುಳದ ಆರೋಪಗಳನ್ನು ಪುಷ್ಟೀಕರಿಸಿದ್ದಾರೆ ಎಂದೂ ಪೊಲೀಸರು ಹೇಳಿದ್ದಾರೆ. ಬ್ರಿಜ್ ಭೂಷಣ್ ವಿರುದ್ಧ ಭಾರತೀಯ ದಂಡ ಸಂಹಿತೆಯ 506 (ಕ್ರಿಮಿನಲ್ ಬೆದರಿಕೆ ), 354 (ಮಹಿಳೆಯ ಜೊತೆ ಅಸಭ್ಯ ವರ್ತನೆ), 354 A (ಲೈಂಗಿಕ ಕಿರುಕುಳ ) ಹಾಗೂ 354 D (ಹಿಂಬಾಲಿಸುವ ) ಸೆಕ್ಷನ್ಗಳನ್ನು ಹಾಕಲಾಗಿದೆ. ಒಂದು ಪ್ರಕರಣದಲ್ಲಿ ಬ್ರಿಜ್ ಭೂಷಣ್ ಮತ್ತೆ ಮತ್ತೆ ನಿರಂತರ ಕಿರುಕುಳ ನೀಡಿದ್ದಾನೆ ಎಂಬ ಆರೋಪವು ಇವರ ಮೇಲಿದೆ. ಇಂತಹ ಅನೇಕ ಗಂಭೀರ ಅಪರಾಧ ಪ್ರಕರಣಗಳು ಬ್ರಿಜ್ ಭೂಷಣ್ ಮೇಲಿವೆ. ಅಂತಹ ವ್ಯಕ್ತಿಯನ್ನು ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಹ್ವಾನಿಸಿದ ಬೆಂಗಳೂರು ಕಂಬಳ ಸಮಿತಿಯ ನಡೆಯು ಚರ್ಚೆಗೆ ಗ್ರಾಸವಾಗಿದೆ.

ಕರ್ನಾಟಕ ಸರ್ಕಾರ ಕೂಡ ಈ ಕಂಬಳಕ್ಕಾಗಿ ಒಂದು ಕೋಟಿ ರೂ. ಘೋಷಣೆ ಮಾಡಿದೆ. ಕಂಬಳ ಸಮಿತಿಯ ಬೇಡಿಕೆಯನುಸಾರ ಬ್ರಿಜ್‌ ಭೂಷಣ್‌ ಅವರನ್ನು ಆಹ್ವಾನಿಸಲಾಗಿದೆ ಎಂದು ಕಂಬಳ ಸಮಿತಿ ಅಧ್ಯಕ್ಷ ಮತ್ತು ಶಾಸಕ ಅಶೋಕ್ ರೈ ತಿಳಿಸಿದ್ದು, ಗೋವಾದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪ್ರಶಸ್ತಿ ವಿಜೇತ ಕರ್ನಾಟಕದ ಕುಸ್ತಿಪಟುಗಳನ್ನು ಅಭಿನಂದಿಸುವ ಯೋಜನೆ ಹಾಕಿಕೊಂಡಿದ್ದೇವೆ. ಅವರಲ್ಲಿ ಸಿದ್ಧಿ ಜನಾಂಗದ ಕುಸ್ತಿ ಪಟುಗಳಿದ್ದಾರೆ. ಅವರು, ನಮ್ಮನ್ನು ಸನ್ಮಾನಿಸಲು ಬ್ರಿಜ್ ಭೂಷಣ್ ಬಂದರೆ ಉತ್ತಮ ಎನ್ನುವ ಬೇಡಿಕೆ ಇಟ್ಟಿದ್ದರು. ಆ ಕಾರಣಕ್ಕಾಗಿ ನಾವು ಬ್ರಿಜ್ ಅವರನ್ನು ಆಹ್ವಾನಿಸಿದ್ದೇವೆ ಎಂದು ತಿಳಿಸಿದ್ದಾರೆ.

ಆದರೆ, ಕರಾವಳಿಯ ಕಂಬಳಕ್ಕೂ, ಕರ್ನಾಟಕದ ಸಿದ್ಧಿ ಜನಾಂಗಕ್ಕೂ, ಸಂಸದ ಬ್ರಿಜ್‌ ಭೂಷಣ್‌ ಸಿಂಗ್‌ ಅವರಿಗೂ ಎತ್ತಣಿಂದೆತ್ತ ಸಂಬಂಧ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಲೈಂಗಿಕ ಕಿರುಕುಳ ಮತ್ತು ಇತರ ಪ್ರಕರಣದ ಆರೋಪಿಯನ್ನು ಕಾರ್ಕ್ರಮಕ್ಕೆ ಆಹ್ವಾನಿಸುವುದು ಸರಿಯೇ ಎಂದು ಸಾರ್ವಜನಿಕ ವಲಯದಿಂದ ಆಕ್ಷೇಪ ಕೇಳಿಬಂದಿದೆ.

 

ವಿಡಿಯೋ ನೋಡಿ: ಸಂವಿಧಾನ ಮಾರ್ಗವೇ ನಮಗೆ ಸರಿಯಾದ ದಾರಿ – ಜಸ್ಟೀಸ್‌ ಎಚ್ ಎನ್‌ ನಾಗಮೋಹನದಾಸ್ Janashakthi Media

Donate Janashakthi Media

Leave a Reply

Your email address will not be published. Required fields are marked *