ಸಿ. ಸಿದ್ದಯ್ಯ
ರಾಜ್ಯದ ವಿಧಾನಸಭಾ ಚುನಾವಣೆ ಇನ್ನೇನು ಘೋಷಣೆಯಾಗಲಿದೆ. ಇಂತಹ ಸಂದರ್ಭವನ್ನು ಹೆದ್ದಾರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಬಿಜೆಪಿ ಮತ್ತು ಸಂಘಪರಿವಾರ ಚೆನ್ನಾಗಿಯೇ ಬಳಸಿಕೊಂಡಿದೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ಸಾಧನೆಗಳನ್ನು ಹೊಗಳುವುದು, ವಿರೋಧ ಪಕ್ಷಗಳನ್ನು ಟೀಕಿಸುವುದು, ವಿವಿಧ ಯೋಜನೆಗಳ ಮೂಲಕ ಸರ್ಕಾರ ಜನರಿಗೆ ನೀಡಿದ, ನೀಡುತ್ತಿರುವ ಸೌಲಭ್ಯಗಳ ಕರಿತಾದ ಅಂಕಿ ಅಂಶಗಳನ್ನು ನೀಡುವುದು, ಮುಂದಿನ ದಿನಗಳಲ್ಲಿ ಏನೆಲ್ಲಾ ಮಾಡುತ್ತೇವೆ ಎಂದು ಭರವಸೆ ಕೊಡುವುದು ಯಾವುದೇ ಒಂದು ರಾಜಕೀಯ ಪಕ್ಷಕ್ಕೆ ತರವಲ್ಲ.
ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯನ್ನು ಮಾರ್ಚ್ 12ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದ್ದಾರೆ. ಪ್ರಧಾನಿ ಆದವರೊಬ್ಬರಿಂದ ರಾಷ್ಟ್ರೀಯ ಹೆದ್ದಾರಿ ಉದ್ಘಾಟನೆ ವಿಷೇಶವೇನಲ್ಲ ಬಿಡಿ. ಇಲ್ಲಿ ವಿಶೇಷ ಮತ್ತು ಆಕ್ಷೇಪಗಳಿಗೆ ಕಾರಣವಾಗಿರುವುದು, ಈ ಉದ್ಘಾಟನೆಯನ್ನು ಧಾರ್ಮಿಕ ಮೂಲಭೂತವಾದಿ ಸಂಘಟನೆಯೊಂದು ತನ್ನ ಬೆಳವಣಿಗೆಗಾಗಿ ಬಳಸಿಕೊಂಡ ಬಗೆ ಮತ್ತು ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ಬಿಜೆಪಿ ತನ್ನ ಚುನಾವಣಾ ಲಾಭಕ್ಕಾಗಿ ಬಳಸಿಕೊಂಡ ಬಗೆ.
ಸರ್ಕಾರಿ ಕಾರ್ಯಕ್ರಮ ಎಂದಾದರೆ ಅಲ್ಲಿ ತ್ರಿವರ್ಣ ದ್ವಜಗಳು, ತ್ರಿವರ್ಣಗಳ ಬಂಟಿಂಗ್ಸ್, ಬ್ಯಾನರ್, ಕಟೌಟ್ ಗಳು ಇರಬೇಕು. ಏಕೆಂದರೆ ಅದು ಸಾರ್ವಜನಿಕರ ತೆರಿಗೆ ಹಣದಲ್ಲಿ ನಡೆಯುವ ಸಾರ್ವಜನಿಕ ಕಾರ್ಯಕ್ರಮ. ಇಂತಹ ಕಾರ್ಯಕ್ರಮದಲ್ಲಿ ಪ್ರಧಾನಿ, ಮುಖ್ಯಮಂತ್ರಿ, ಸಚಿವರುಗಳು ಸಾರ್ವಜನಿಕರ ಸೇವಕರಾಗಿ ನಡೆದುಕೊಳ್ಳಬೇಕೇ ವಿನಃ, ಒಂದು ಪಕ್ಷದ ವಕ್ತಾರರಾಗಿ ಪಕ್ಷದ ಅಥವಾ ತಮ್ಮ ಮಾತೃ ಸಂಘಟನೆಯ ಪರವಾಗಿ ಮಾತನಾಡುವುದಲ್ಲ. ಇಲ್ಲಿ ಪಕ್ಷಾತೀತವಾಗಿ ಎಲ್ಲಾ ರಾಜಕೀಯ ಪಕ್ಷಗಳ ಜನಪ್ರತಿನಿಧಿಗಳು ಮತ್ತು ಜನರು ಭಾಗಿಯಾಗಿಬೇಕು. ಆದರಿಲ್ಲಿ ಬಿಜೆಪಿಯನ್ನು ಬೆಂಬಲಿಸುವ ಸುಮಲತಾ ಅವರನ್ನು ಬಿಟ್ಟರೆ, ಉಳಿದೆಲ್ಲರೂ ಬಿಜೆಪಿ ಮತ್ತು ಸಂಘಪರಿವಾರದವರೇ ಇದ್ದರು. ಕೇಸರಿ ಬಣ್ಣದ ಬ್ಯಾನರ್, ಬಂಟಿಂಗ್, ಕಟೌಟ್ ಗಳನ್ನು ಅಳವಡಿಸಲಾಗಿತ್ತು. ರಾಜಕೀಯ ಪಕ್ಷ ಬಿಜೆಪಿ ಬಾವುಟಗಳನ್ನು ಹಾಕಲಾಗಿತ್ತು. ತಾವು ಕರೆತಂದ ಮಹಿಳೆಯರು, ಮಕ್ಕಳು ಸೇರಿದಂತೆ ಹಲವರ ಹೆಗಲ ಮೇಲೆ ಕೇಸರಿ ಸಾಲು ಹಾಕಿದ್ದರು. ಒಂದು ಪಕ್ಷದ ಮತ್ತು ಹಿಂದುತ್ವವಾದಿ ಸಂಘಟನೆಯೊಂದರ ಕಾರ್ಯಕ್ರಮದಂತೆ ನಡೆಯಿತು.
ಇದನ್ನು ಓದಿ: ಬೆಂಗಳೂರು–ಮೈಸೂರು ದಶಪಥ ಹೆದ್ದಾರಿ ಉದ್ಘಾಟನೆಗೂ ಮೊದಲೇ ಸಂಚಾರಿ ಮೊತ್ತ ಸಂಗ್ರಹ!
ಚುನಾವಣಾ ಪ್ರಚಾರ ಸಭೆಯಂತಿತ್ತು
ರಾಜ್ಯದ ವಿಧಾನಸಭಾ ಚುನಾವಣೆ ಇನ್ನೇನು ಘೋಷಣೆಯಾಗಲಿದೆ. ಇಂತಹ ಸಂದರ್ಭವನ್ನು ಹೆದ್ದಾರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಬಿಜೆಪಿ ಮತ್ತು ಸಂಘಪರಿವಾರ ಚೆನ್ನಾಗಿಯೇ ಬಳಸಿಕೊಂಡಿದೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ಸಾಧನೆಗಳನ್ನು ಹೊಗಳುವುದು, ವಿರೋಧ ಪಕ್ಷಗಳನ್ನು ಟೀಕಿಸುವುದು, ವಿವಿಧ ಯೋಜನೆಗಳ ಮೂಲಕ ಸರ್ಕಾರ ಜನರಿಗೆ ನೀಡಿದ, ನೀಡುತ್ತಿರುವ ಸೌಲಭ್ಯಗಳ ಕರಿತಾದ ಅಂಕಿ ಅಂಶಗಳನ್ನು ನೀಡುವುದು, ಮುಂದಿನ ದಿನಗಳಲ್ಲಿ ಏನೆಲ್ಲಾ ಮಾಡುತ್ತೇವೆ ಎಂದು ಭರವಸೆ ಕೊಡುವುದು ಯಾವುದೇ ಒಂದು ರಾಜಕೀಯ ಪಕ್ಷಕ್ಕೆ ತರವಲ್ಲ.
ಇದನ್ನು ಓದಿ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿ ಹಗರಣ ಸಿಬಿಐ ತನಿಖೆಗೆ ಶಾಸಕ ಮಂಜುನಾಥ್ ಆಗ್ರಹ
ಇದು ಸರ್ಕಾರದ ಕಾರ್ಯಕ್ರಮವೇ ವಿನಃ, ಯಾವುದೇ ಒಂದು ರಾಜಕೀಯ ಪಕ್ಷದ ಅಥವಾ ಒಂದು ಧಾರ್ಮಿಕ ಸಂಘಟನೆಯ ಕಾರ್ಯಕ್ರಮವಲ್ಲ. ಉದ್ಘಾಟನಾ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಗಳ ಮೂಲಕವೇ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಸೇರಿದಂತೆ ಸರ್ಕಾರದ ಸ್ಕೀಮ್ ನೌಕರರು, ಶಾಲಾ ಕಾಲೇಜುಗಳ ಶಿಕ್ಷಕರು ಕಡ್ಡಾಯವಾಗಿ ಭಾಗವಹಿಸುವಂತೆ ಮಾಡಿದ್ದಾರೆ. ಮಹಿಳಾ ಸ್ವಯಂ ಸೇವಾ ಸಂಘಗಳ ಸದಸ್ಯೆಯರನ್ನು ಒತ್ತಾಯ ಪೂರ್ವಕವಾಗಿ ಕರೆತರಲಾದೆ. ಜನರನ್ನು ಕರೆತರಲು ಸಾವಿರಾರು ಬಸ್ಸುಗಳ ಏರ್ಪಾಡು ಮಾಡಲಾಗಿದೆ. ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಬ್ಯಾನರ್, ಬಂಟಿಂಗ್ಸ್, ಕಟೌಟ್ ಗಳನ್ನು ಅಳವಡಿಸಲಾಗಿದೆ. ಇವೆಲ್ಲದರ ವೆಚ್ಚ ಸರ್ಕಾರದ ಬೊಕ್ಕಸದಿಂದ ಆಗುತ್ತದೆ. ಅಂದರೆ ಈ ಹಣ ಸಾರ್ವಜನಿಕರ ಹಣ. ಸಾರ್ವಜನಿಕರ ಹಣ ವೆಚ್ಚ ಮಾಡಿ, ಒಂದು ರಾಜಕೀಯ ಪಕ್ಷ ಮತ್ತು ಒಂದು ಧಾರ್ಮಿಕ ಮೂಲಭೂತವಾದಿ ಸಂಘಟನೆಯ ಪರವಾದ ಪ್ರಚಾರ ಎಷ್ಟು ಸರಿ?
ಉರಿಗೌಡ ಮತ್ತು ದೊಡ್ಡ ನಂಜೇಗೌಡ ಮಹಾದ್ವಾರ; ಹಿಂದುತ್ವವಾಧಿಗಳ ಪ್ರಚಾರ ತಂತ್ರದ ಭಾಗ
ರಾಷ್ಟ್ರೀಯ ಹೆದ್ದಾರಿ ಉದ್ಘಾಟನೆಗೆ ಬರುವ ಮೋದಿ ಅವರಿಗೆ ಸ್ವಾಗತ ಕೋರುವ ಕಮಾನುಗಳಲ್ಲಿನ ಒಂದು ಕಮಾನಿನಲ್ಲಿ ಉರಿಗೌಡ ಮತ್ತು ದೊಡ್ಡ ನಂಜೇಗೌಡರ ಹೆಸರಿನಲ್ಲಿ ಮಹಾದ್ವಾರವೊಂದನ್ನು ಸಂಘಪರಿವಾರ ನಿರ್ಮಿಸಿತ್ತು. ಇದನ್ನು ಜನರ ವ್ಯಾಪಕ ಟೀಕೆಯ ನಂತರ ತೆಗೆಯಲಾಯಿತು. ಇದನ್ನು ಪ್ರಗತಿಪರರು ತಮ್ಮ ಗೆಲುವು ಅಂದುಕೊಂಡು ಖುಷಿಪಟ್ಟರು. ಆದರೆ, ಇದು ಹಿಂದುತ್ವವಾದಿಗಳ ಗೆಲುವು ಎಂಬುದೇ ಸತ್ಯ. ಒಕ್ಕಲಿಗ ಜನಾಂಗದ ಉರಿಗೌಡ ಮತ್ತು ನಂಜೇಗೌಡ ಟಿಪ್ಪು ಸುಲ್ತಾನ್ ನನ್ನು ಕೊಂದರು ಎಂಬ ಕಟ್ಟು ಕತೆಯನ್ನು ಹಿಂದುತ್ವವಾದಿಗಳು ಮೊದಲಿಗೆ ರಂಗಮಂದಿರದಲ್ಲಿ ನಾಟಕ ಪ್ರದರ್ಶನದ ಮೂಲಕ ಹೇಳಿದರು. ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಒಂದಷ್ಟು ಜನರು ವಿರೋಧಿಸಿದರು. ಆದರೆ, ಹಿಂದುತ್ವವಾಧಿಗಳು ತಾವು ಹೇಳಿದ್ದೇ ಸತ್ಯ, ಅದೇ ನಿಜವಾದ ಇತಿಹಾಸ ಎಂದು ಜನರನ್ನು ನಂಬಿಸುವ ಪ್ರಯತ್ನವನ್ನು ತಮ್ಮ ಗುರಿ ತಲುಪುವವರೆಗೂ ಬಿಡಲಾರರು. ನಾಟಕದ ಮುಂದುವರಿದ ಭಾಗವೇ ಉರಿಗೌಡ ಮತ್ತು ನಂಜೇಗೌಡರ ಹೆಸರನ್ನು ಹೆದ್ದಾರಿಗೆ ತಂದಿದ್ದು, ಸುದ್ದಿ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಯಾಗುವಂತೆ ನೋಡಿಕೊಂಡಿದ್ದು, ಬಿಜೆಪಿ ಸಚಿವರುಗಳು, ನಾಯಕರುಗಳು ಇದರ ಪರವಾಗಿ ವಾದಿಸಿದ್ದು. ಇದು ಇಲ್ಲಿಗೇ ನಿಲ್ಲುವುದಿಲ್ಲ. ರಾಮಾಯಣ, ಮಹಾಭಾರತದಂತಹ ಮಹಾ ಕಾವ್ಯಗಳನ್ನೇ ಇತಿಹಾಸ ಎಂದು ಜನರನ್ನು ನಂಬಿಸಿದ್ದೂ ಇದೇ ವಿಧಾನದಲ್ಲಿ ಎಂಬುದನ್ನು ಮರೆಯಬಾರದು.
ಇದನ್ನು ಓದಿ: ಕಪೋಲ ಕಲ್ಪಿತ ಪಾತ್ರಗಳಾದ ‘ಉರಿಗೌಡ-ನಂಜೇಗೌಡ’ ಮಹಾದ್ವಾರ ತೆರವು
ಸಾರ್ವಜನಿಕ, ಖಾಸಗಿ ಸಹಭಾಗಿತ್ವದಲ್ಲಿ
ಬೆಂಗಳೂರು-ಮೈಸೂರು ಹೆದ್ದಾರಿ ಅಭಿವೃದ್ಧಿ ಸಾರ್ವಜನಿಕ, ಖಾಸಗಿ ಸಹಭಾಗಿತ್ವದಲ್ಲಿ ಮಾಡಿದ ಅಭಿವೃದ್ಧಿ. ಇದು ಸಂಪೂರ್ಣವಾಗಿ ಹೊಸದಾಗಿ ನಿರ್ಮಾಣಗೊಂಡ ರಸ್ತೆಯೇನೂ ಅಲ್ಲ. ಈಗಾಗಲೇ ಇದ್ದ ರಸ್ತೆಯನ್ನು ಅಗಲೀಕರಿಸಿ, ಕೆಲವು ಪಟ್ಟಣಗಳ ಬಳಿ ಬೈಪಾಸ್ ರಸ್ತೆ ನಿರ್ಮಾಣ ಮಾಡಿ, ಕೆಲವೆಡೆ ಮೇಲ್ಸೇತುವೆ ನಿರ್ಮಾಣ ಮಾಡಿ ಅಭಿವೃದ್ಧಿ ಪಡಿಸಿದ್ದು. ಇದನ್ನು ಸಾರ್ವಜನಿಕರು ಉಚಿತವಾಗಿ ಬಳಸುವಂತೆಯೂ ಇಲ್ಲ. ಸುಂಕ ಕೊಟ್ಟು ರಸ್ತೆ ಬಳಕೆ ಮಾಡಬೇಕು. ಈ ರಸ್ತೆ ಅಭಿವೃದ್ದಿಯಲ್ಲಿ ಸಾರ್ವಜನಿಕರ ತೆರಿಗೆಯ ಪಾಲೂ ಇದೆ. ಸಾರ್ವಜನಿಕರು ಎಂದರೆ ಭಾರತದ ಎಲ್ಲಾ ಧರ್ಮ, ಜಾತಿ, ಭಾಷೆ, ಪ್ರದೇಶದ ಜನರೂ ಸೇರಿರುತ್ತಾರೆ. ಈ ರಸ್ತೆ ನಿರ್ಮಾಣಕ್ಕೆ ಅಗತ್ಯವಾದ ಭೂಮಿ ಕೊಟ್ಟವರಲ್ಲೂ ಈ ಎಲ್ಲರ ಪಾಲೂ ಇದೆ. ಖಾಸಗಿ ಬಂಡವಾಳಗಾರರು ಲಾಭಕ್ಕಾಗಿ ಬಂಡವಾಳ ಹೂಡಿಕೆ ಮಾಡುತ್ತಾರೆ ವಿನಃ, ಸಾರ್ವಜನಿಕರ ಮೇಲಿನ ಪ್ರೀತಿಯಿಂದಲ್ಲ. ಹೀಗೆ ಹೂಡಿಕೆ ಮಾಡುವಾಗಲೂ ಬಳಕೆದಾರರ (ವಾಹನಗಳ ಸಂಚಾರದ ಲೆಕ್ಕ) ಸಂಖ್ಯೆ, ಅದರಿಂದ ಬರುವ ಲಾಭದ ಲೆಕ್ಕಾಚಾರದ ಮೇಲೆ ರಸ್ತೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ತಾವು ಹೂಡಿಕೆ ಮಾಡಿದ ಹಣ ಮತ್ತು ದುಪ್ಪಟ್ಟು ಲಾಭವನ್ನು ಟೋಲ್ ಶುಲ್ಕಗಳ ಮೂಲಕ ರಸ್ತೆ ಬಳಕೆ ಮಾಡುವವರಿಂದ ಸಂಗ್ರಹಿಸುತ್ತಾರೆ.
ಇದನ್ನು ಓದಿ: ರಾಮನಗರ: ಭಾರೀ ಮಳೆಗೆ ಮುಳುಗಿದ ಬೆಂಗಳೂರು-ಮೈಸೂರು ಹೆದ್ದಾರಿ, ಜನಜೀವನ ಅಸ್ತವ್ಯಸ್ಥ
ಹೆದ್ದಾರಿ ನಡುವಿನ ನಗರ, ಪಟ್ಟಣಗಳ ಬಳಿ ಪ್ರವೇಶ ಮತ್ತು ನಿರ್ಗಮನಗಳಿಲ್ಲ!
ಹೆದ್ದಾರಿಗಳಲ್ಲಿ ಸಾಮಾನ್ಯವಾಗಿ 60 ಕಿಮೀ. ದೂರಕ್ಕೆ ಟೋಲ್ ಪ್ಲಾಜಾ ಇರುಬೇಕು ಎಂಬ ನಿಯಮವಿದೆ. ಆದರೆ, 118 ಕಿ.ಮೀ. ಉದ್ದವಿರುವ ಬೆಂಗಳೂರು-ಮೈಸೂರು ರಸ್ತೆಯಲ್ಲಿ ಪ್ರಾರಂಭ ಮತ್ತು ಅಂತ್ಯದಲ್ಲಿ ಮಾತ್ರ ಟೋಲ್ ಪ್ಲಾಜಾಗಳನ್ನು ನಿರ್ಮಿಸಲಾಗಿದೆ. ಸಾಮಾನ್ಯವಾಗಿ ಟೋಲ್ ಸಂಗ್ರಹಿಸುವ ರಾಷ್ಟ್ರೀಯ ಹೆದ್ದಾರಿಗಳ ಹಾದಿಯಲ್ಲಿ ಬರುವ ನಗರ ಪಟ್ಟಣಗಳಿಂದ ಹೆದ್ದಾರಿಗೆ ಸೇರಿಕೊಳ್ಳುವ ಮತ್ತು ಹೆದ್ದಾರಿಯಿಂದ ಹೊರಗೆ ಹೋಗುವ ಅವಕಾಶ ಇದ್ದೇ ಇರುತ್ತವೆ. ಎರಡು ಟೋಲ್ ಪ್ಲಾಜಾಗಳ ನಡುವೆ ಸಂಚರಿಸುವ ಪ್ರಯಾಣಿಕರು ಇಂತಹ ರಸ್ತೆಗಳನ್ನು ಉಚಿತವಾಗಿ ಬಳಕೆ ಮಾಡಿಕೊಳ್ಳಬಹುದು. ಕೆಲವು ರಸ್ತೆಗಳಲ್ಲಿ ಟೋಲ್ ಪ್ಲಾಜಾ ಸಮೀಪದ ಸ್ಥಳೀಯ ವಾಹನಗಳಿಗೆ ಟೋಲ್ ಸುಂಕದ ವಿನಾಯಿತಿಯೂ ಇದೆ. ಬೆಂಗಳೂರು-ಮೈಸೂರು ರಸ್ತೆಯಲ್ಲಿ ಇಂತಹ ಅವಕಾಶವೇ ಇಲ್ಲದಂತೆ ಮಾಡಲಾಗಿದೆ. ಹೆದ್ದಾರಿಯ ಒಂದು ತುದಿಯಲ್ಲಿ ಟೋಲ್ ಶುಲ್ಕ ಕಟ್ಟಿ ರಸ್ತೆ ಪ್ರವೇಶ ಮಾಡಿದರೆ, ಮತ್ತೊಂದು ತುದಿಯಲ್ಲಿ ಹೊರಗೆ ಬರಬೇಕು. ನಡುವಿನ ಯಾವ ಪ್ರಯಾಣಿಕರಿಗೂ ರಸ್ತೆ ಪ್ರವೇಶಿಸಲು ಅವಕಾಶವಿಲ್ಲ. ಬೆಂಗಳೂರು ಅಥವಾ ಮೈಸೂರಿನಿಂದ ಮಂಡ್ಯ, ಮದ್ದೂರು, ಚನ್ನಪಟ್ಟಣ, ರಾಮನಗರ ಈ ಊರುಗಳಿಗೆ ಹೋಗುವವರು ಹೆದ್ದಾರಿ ಬಳಕೆ ಮಾಡಲು ಅವಕಾಶವಿಲ್ಲ. ಹಳೆಯ ರಸ್ತೆ ವಿಸ್ತಾರಗೊಂಡು ಹೆದ್ದಾರಿಯಾಗಿ ಮಾರ್ಪಟ್ಟು ಕೆಲವು ಗ್ರಾಮಗಳ ನಡುವೆ ಹಾದುಹೋಗಿದೆ. ಇಂತಹ ಊರಿನ ಜನರು ಹೆದ್ದಾರಿಯ ಒಂದು ಬದಿಯಲ್ಲಿರುವವರು ಮತ್ತೊಂದು ಬದಿಯಲ್ಲಿರುವ ಊರಿಗೆ ಅಥವಾ ತಮ್ಮದೇ ಜಮೀನಿಗೆ ಹೋಗಲು ಕಿಮೀ ದೂರದಲ್ಲಿ ಇರುವ ಕೆಳಸೇತುವೆ ಮೂಲಕ ಸುತ್ತಿ ಬರಬೇಕು. ರಸ್ತೆಯ ಎರಡೂ ಬದಿಗಳಲ್ಲಿ ಎತ್ತರದ ಬೇಲಿ ಅಳವಡಿಸಲಾಗಿದೆ. ಅಂದರೆ, ಹೆದ್ದಾರಿ ನಿರ್ಮಾಣ ಸ್ಥಳೀಯ ಜನರ ಸೌಲಭ್ಯಕ್ಕಾಗಿ ಮಾಡಿದ್ದಲ್ಲ, ಬೆಂಗಳೂರು, ಮೈಸೂರು ನಡುವೆ ಸಂಚರಿಸುವ ವಾಹನಗಳಗೆ ಮಾತ್ರ ಅನುಕೂಲ ಕಲ್ಪಿಸಲು ನಿರ್ಮಿಸಲಾಗಿದೆ. ಶುಲ್ಕ ವಸೂಲಿ ಮಾಡಿ ಲಾಭ ಗಳಿಸಲು ಬಂಡವಾಳಗಾರರ ಲಾಭಕ್ಕಾಗಿ ಮಾಡಿದ್ದು ಎಂಬುದು ಸ್ಪಷ್ಟ. ಇದು ಸಿರಿವಂತರಿಗಾಗಿ ಮತ್ತು ಬಂಡವಾಳಗಾಗರರ ಲಾಭದ ದೃಷ್ಟಿಯಿಂದ ಅಭಿವೃದ್ಧಿ ಮಾಡಲಾಗಿದೆ.
ಇದನ್ನು ಓದಿ: ಹೆದ್ದಾರಿ ಕೆಳ ಸೇತುವೆ ನಿರ್ಮಿಸುವಂತೆ ದಶಪಥ ರಸ್ತೆ ತಡೆದು ಪ್ರತಿಭಟನೆ – ಪೊಲೀಸರಿಂದ ಲಾಠಿ ಪ್ರಹಾರ
ಸ್ಥಳೀಯ ವ್ಯಾಪಾರಿಗಳ ಬದುಕಿಗೆ ಕುತ್ತು
ಮತ್ತೊಂದೆಡೆ ಇದುವರೆಗೆ ಬದುಕು ಕಂಡುಕೊಂಡಿದ್ದ ರಸ್ತೆ ಅಕ್ಕಪಕ್ಕದ ಸ್ಥಳೀಯ ವ್ಯಾಪಾರಿಗಳ ಬದುಕುನ್ನು ಈ ಹೆದ್ದಾರಿ ಕಸಿಯುತ್ತದೆ. ಬೆಂಗಳೂರು- ಮೈಸೂರು ನಡುವಿನ ಹಳೆಯ ರಸ್ತೆ ನಗರ, ಪಟ್ಟಣ ಮತ್ತು ಗ್ರಾಮಗಳ ನಡುವೆ ಹಾದುಹೋಗುತ್ತದೆ. ಇಲ್ಲೆಲ್ಲಾ ವ್ಯಾಪಾರ ಮಾಡುವ ಮೂಲಕ ಸಹಸ್ರಾರು ಕುಟುಂಬಗಳು ಬದುಕು ಕಟ್ಟಿಕೊಂಡಿದ್ದವು. ಟೀ ಅಂಗಡಿ, ಹೋಟೆಲ್ ಗಳು, ಹಣ್ಣು ತರಕಾರಿ, ಎಳೆನೀರು, ಮದ್ದೂರು ವಡೆ, ಬಿಡದಿ ತಟ್ಟೆ ಇಡ್ಲಿ, ‘ಗೌಡರ ಮನೆ ಬಾಡೂಟ’ ಹೆಸರಿನ ಹೋಟೆಲ್ ಗಳು, ಚನ್ನಪಟ್ಟಣದ ಬೊಂಬೆಗಳು, ಸಿಗ್ನಲ್ ಬಳಿ ನಿಂತು ವಾಹನಗಳ ಬಳಿ ಓಡೋಡಿ ಬಂದು ಸೌತೆಕಾಯಿ, ಕಲ್ಲಂಗಡಿ, ಸೊಪ್ಪು ಮಾರುತ್ತಿದ್ದವರು, ಇವರೆಲ್ಲರ ವ್ಯವಹಾರ ಸಂಪೂರ್ಣವಾಗಿ ನಾಶವಾಗಿದೆ. ಬೆಂಗಳೂರು ಮೈಸೂರು ನಡುವೆ ಪ್ರಯಾಣಿಸುವ ಪ್ರಯಾಣಿಕರಿಗೆ ಈ ಜನರ ಸಂಪರ್ಕವೇ ಇಲ್ಲದಂತೆ ಮಾಡಲಾಗಿದೆ.
ಅಭಿವೃದ್ಧಿ ಬೇಕು; ಇದರಿಂದ ನಿರಾಶ್ರಿತರಾದವರ ಬದುಕಿಗೂ ದಾರಿ ತೋರಿಸಬೇಕು
ಹಾಗಾದರೆ, ರಸ್ತೆ ನಿರ್ಮಾಣದಂತಹ ಮೂಲಸೌಕರ್ಯಗಳ ಅಭಿವೃದ್ಧಿ ಬೇಡವೇ? ಇಂತಹ ಪ್ರಶ್ನೆ ಮೂಡುವುದು ಸಹಜ. ಅಭಿವೃದ್ಧಿ ಮಾಡುವಾಗ ಒಂದಷ್ಟು ಜನರಿಗೆ ನಷ್ಟ ಆಗುತ್ತದೆ, ಅದಕ್ಕೆ ಏನೂ ಮಾಡಲಾಗದು ಎಂಬ ಕೆಲವರ ವಾದವೂ ಇದೆ. ಅಭಿವೃದ್ಧಿ ಎಂದರೆ ಒಂದನ್ನು ನಾಶಮಾಡಿ ಮತ್ತೊಂದನ್ನು ಸೃಷ್ಟಿ ಮಾಡುವುದಲ್ಲ. ಹಲವರ ಬದುಕನ್ನು ಕಸಿದು ಕೆಲವರಿಗೆ ಅನುಕೂಲ ಮಾಡಿಕೊಡಲು ಅಭಿವೃದ್ಧಿ ಮಾಡುವುದಲ್ಲ. ಕೆಲವರ ಲಾಭಕ್ಕಾಗಿ ಹಲವರ ಬದುಕಿನ ಆಸರೆಯನ್ನು ಕಸಿಯುವುದಲ್ಲ. ಈ ರೀತಿ ಅಭಿವೃದ್ಧಿ ಮಾಡುವಾಗ ಭೂಮಿ ಕಳೆದುಕೊಳ್ಳುವ ರೈತರಿಗೆ ಇದಕ್ಕೆ ಪರ್ಯಾಯವಾಗಿ ಕೃಷಿ ಭೂಮಿಯನ್ನು ಬೇರೆಡೆ ಕೊಡಬೇಕೇ ವಿನಃ , ಒಂದಷ್ಟು ಹಣ ಕೊಟ್ಟು ಅವರನ್ನು ಕೃಷಿಯಿಂದ ಹೊರದಬ್ಬುವುದಲ್ಲ. ಹೆದ್ದಾರಿ ನಿರ್ಮಾಣದಿಂದ ಮನೆ ಕಳೆದುಕೊಂಡವರಿಗೆ ಬೇರೆಡೆ ಮನೆ ನಿರ್ಮಾಣ ಮಾಡಿಕೊಡಬೇಕೇ ವಿನಃ, ಒಂದಷ್ಟು ಹಣ ಕೊಟ್ಟು ಕೈತೊಳೆದುಕೊಳ್ಳುವುದಲ್ಲ. ಇಂತಹ ಅಭಿವೃದ್ಧಿಗಳಿಂದ ತಮ್ಮ ವ್ಯಾಪಾರ, ಕೆಲಸ ಕಳೆದುಕೊಳ್ಳುವವರಿಗೆ, ಪರ್ಯಾಯ ವ್ಯವಸ್ಥೆ ರೂಪಿಸಿಕೊಡಬೇಕೇ ವಿನಃ, ಇವರ ನಾಶವಾದ ಬದುಕಿಗೂ ಸರ್ಕಾರಕ್ಕೂ ಸಂಬಂಧವಿಲ್ಲ ಎಂಬಂತೆ ಇರುವುದು ತರವಲ್ಲ.
ಇದನ್ನು ಓದಿ: ಹೆದ್ದಾರಿ ಟೋಲ್ ಸಂಗ್ರಹ – ಗಡ್ಕರಿ ಸಾಹೇಬರ ಅಕೌಂಟಬಿಲಿಟಿ!
ಮೂಲಭೂತ ಸೌಕರ್ಯಗಳು ಸಾರ್ವಜನಿಕರಿಗೆ ಮುಕ್ತವಾಗಿರಬೇಕು
ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡುವ ರಸ್ತೆ ನಿರ್ಮಾಣದಂತಹ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಸರ್ಕಾರದ ಕರ್ತವ್ಯವಾಗಬೇಕು. ಅದು ಬಡವ, ಬಲ್ಲಿದರೆನ್ನದೆ ಎಲ್ಲರೂ ಉಚಿತವಾಗಿ ಬಳಕೆ ಮಾಡುವಂತಿರಬೇಕು. ಜನರಿಂದ ತೆರಿಗೆ ಸಂಗ್ರಹ ಮಾಡುವುದು, ಪ್ರಕೃತಿ ಸಂಪತ್ತಿನಿಂದ ಬರುವ ಆದಾಯ, ಸಾರ್ವಜನಿಕ ಉದ್ಯಮಗಳಿಂದ ಬರುವ ಆದಾಯ ಇವುಗಳನ್ನು ಬಳಸಿ ಇಂತಹ ಸೌಕರ್ಯಗಳನ್ನು ನಿರ್ಮಾಣ ಮಾಡಬೇಕು. ಆದರೆ, 1990ರ ದಶಕದಲ್ಲಿ ಭಾರತ ಮುಕ್ತ ಆರ್ಥಿಕ ನೀತಿಗಳನ್ನು ಒಪ್ಪಿಕೊಂಡ ನಂತರ ಇಂತಹ ಮೂಲಭೂತ ಸೌಕರ್ಯಗಳ ನಿರ್ಮಾಣ ಮತ್ತು ಅಭಿವೃದ್ಧಿ ಸರ್ಕಾರದ ಕೆಲಸವಲ್ಲ, ಇವುಗಳನ್ನು ಖಾಸಗಿಯವರೇ ಮಾಡುತ್ತಾರೆ ಎನ್ನುತ್ತಾ ಇವುಗಳನ್ನು ಖಾಸಗಿ ಬಂಡವಾಳಗಾರರಿಗೆ ಒಪ್ಪಿಸಲಾಗಿದೆ. ಎಲ್ಲಿ ಬಂಡವಾಳ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಸಿಗುತ್ತದೆಯೋ ಅಂತಹ ವಲಯಗಳಲ್ಲಿ ಬಂಡವಾಳಗಾರರು ಹೂಡಿಕೆ ಮಾಡಿ ಲಾಭ ಮಾಡಿಕೊಳ್ಳುತ್ತಾರೆ. ನಾವು ನೂರಾರು ವರ್ಷಗಳ ಕಾಲ ನಮ್ಮದೇ ಎಂದುಕೊಂಡ ರಸ್ತೆಗಳು, ನದಿಗಳು, ರೈಲು ಮಾರ್ಗ, ಪ್ರಕೃತಿ ಸಂಪತ್ತು, ವಿದ್ಯುತ್ ಎಲ್ಲವೂ ಖಾಸಗಿಯವರ ಪಾಲಾಗುತ್ತದೆ. ಮುಕ್ತ ಆರ್ಥಿಕ ನೀತಿಗಳು ಎಲ್ಲವನ್ನೂ ಉಳ್ಳವರಿಗೆ ಮುಕ್ತವಾಗಿ ತೆರೆದಿಡುತ್ತದೆ. ಆರ್ಥಿಕವಾಗಿ ಬಲಿಷ್ಟರಾಗಿರುವವರ ಅನುಕೂಲಕ್ಕೆ ತಕ್ಕಂತೆ ಅಭಿವೃದ್ಧಿಯಾಗುತ್ತದೆ. ಅವರ ಅನುಕೂಲಕ್ಕೆ ತಕ್ಕಂತೆ ಯೋಜನೆಗಳು, ಕಾನೂನು ಕಟ್ಟಳೆಗಳು ರೂಪುಗೊಳ್ಳುತ್ತವೆ. ಇಂತಹ ಅಭಿವೃದ್ಧಿಗಳು ಆರ್ಥಿಕವಾಗಿ ದುರ್ಬಲರಾಗಿರುವ ವರ್ಗಗಳ ಪಾಲಿಗೆ ಕೈಗುಟದ ಗಗನ ಕುಸುಮವಾಗಿ ಉಳಿಯುತ್ತವೆ. ಇವರ ಬದುಕು ಮತ್ತಷ್ಟು ನರಕವಾಗುತ್ತದೆ. ಜನತೆ ಇದರ ಬಗ್ಗೆ ಎಚ್ಚರಿಕೆಯಿಂದ ಇರಬೇಕಾಗಿದೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ