ನವದೆಹಲಿ : 2024ರ ಲೋಕಸಭಾ ಚುನಾವಣೆಗಾಗಿ ಬಿಜೆಪಿ ಪ್ರಣಾಳಿಕೆಯನ್ನು ಪ್ರಕಟಿಸಿದ್ದು, ಒಂದು ದೇಶ, ಒಂದು ಚುನಾವಣೆ, ಏಕರೂಪ ನಾಗರಿಕ ಸಂಹಿತೆಗೆ ಒತ್ತು ನೀಡುವುದಾಗಿ ಹಿಂದುತ್ವದ ಮತಗಳನ್ನು ತನ್ನತ್ತ ಸೆಳೆಯಲು ಕಣ್ಣಿಟ್ಟಿದೆ. ಬಿಜೆಪಿ
ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಸಚಿವ ರಾಜನಾಥ್ ಸಿಂಗ್ ಅವರು ಲೋಕಸಭಾ ಚುನಾವಣೆಯ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ ಪ್ರದರ್ಶಿಸಿದರು, “ಮೋದಿ ಕಿ ಗ್ಯಾರಂಟಿ” ಎಂಬ ಟ್ಯಾಗ್ ಲೈನ್‌ನೊಂದಿಗೆ ‘ಸಂಕಲ್ಪ ಪತ್ರ’ ಹೆಸರಿನಲ್ಲಿ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.
ಪ್ರಣಾಳಿಕೆ ಬಿಡುಗಡೆ ಬಳಿಕ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಇಡೀ ದೇಶ ಬಿಜೆಪಿಯ ಸಂಕಲ್ಪ ಪತ್ರಕ್ಕಾಗಿ ಕಾಯುತ್ತಿದೆ. ಪಕ್ಷವು 10 ವರ್ಷಗಳಲ್ಲಿ ತನ್ನ ಭರವಸೆಗಳನ್ನು ಕಾರ್ಯಗತಗೊಳಿಸಿದೆ. ಈ ಸಂಕಲ್ಪ ಪತ್ರವು ಅಭಿವೃದ್ಧಿ ಹೊಂದಿದ ಭಾರತದ ನಾಲ್ಕು ಬಲವಾದ ಸ್ತಂಭಗಳಾದ ಯುವಕರು, ಮಹಿಳೆಯರು, ಬಡವರು ಮತ್ತು ರೈತರನ್ನು ಸಬಲೀಕರಣಗೊಳಿಸಲಿದೆ” ಎಂದು ಹೇಳಿದರು.
ಇದನ್ನೂ ಓದಿ : ಸಂಘಪರಿವಾರದ ಚುನಾವಣಾ ತಂತ್ರಗಾರಿಕೆ ಬಿಚ್ಚಿಟ್ಟ ಬಿಜೆಪಿಯ ಅಭ್ಯರ್ಥಿ
ಸೂರ್ಯ ಘರ್ ಯೋಜನೆಯಡಿ ಉಚಿತ ವಿದ್ಯುತ್, ರೈತರಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ, ಈಶಾನ್ಯ ಮತ್ತು ದಕ್ಷಿಣ ರಾಜ್ಯಗಳಿಗೆ ಬುಲೆಟ್ ರೈಲು, ದೇಶಾದ್ಯಂತ ಐರ್ ಪೋರ್ಟ್ ರೈಲ್ವೆ ಸ್ಟೇಷನ್ ನಿರ್ಮಾಣ, 70 ವರ್ಷಗಳ ಮೇಲ್ಪಟ್ಟವರಿಗೆ ಉಚಿತ ಆರೋಗ್ಯ ಭಾಗ್ಯ ಯೋಜನೆ, ಮುದ್ರಾ ಸಾಲ ಯೋಜನೆ 20 ಲಕ್ಷ ರೂಗೆ ಹೆಚ್ಚಳ, 3 ಕೋಟಿ ಬಡವರಿಗೆ ಮನೆ ನಿರ್ಮಾಣ ಭರವಸೆಗಳನ್ನು ನೀಡಿದೆ.
ಕೇಂದ್ರ ಸರಕಾರದಿಂದ ಒದಗಿಸಲಾಗುತ್ತಿರುವ ಉಚಿತ ಪಡಿತರವನ್ನು ಇನ್ನೂ ಐದು ವರ್ಷಗಳ ಕಾಲ ಮುಂದುವರಿಸಲಾಗುವುದು ಎಂದು ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿದೆ. ಬೆಲೆಗಳನ್ನು ಸ್ಥಿರಗೊಳಿಸಲು ಹಾಗೂ ಬಡವರ ತಟ್ಟೆಗಳಿಗೆ ರಕ್ಷಣೆ ಒದಗಿಸಲು ಬೇಳೆಕಾಳುಗಳು, ಖಾದ್ಯ ತೈಲಗಳು ಹಾಗೂ ತರಕಾರಿಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಸರಕಾರ ಗಮನ ಹರಿಸಲಿದೆ ಎಂದು ಪ್ರಣಾಳಿಕೆಯಲ್ಲಿ ಹೇಳಲಾಗಿದೆ. ಆಯುಷ್ಮಾನ್ ಭಾರತ್ ಯೋಜನೆ ಹಾಗೂ ಪಿಎಂ ಆವಾಸ್ ಯೋಜನೆಗಳನ್ನು ವಿಸ್ತರಿಸಲಾಗುವುದು ಹಾಗೂ ಎಲ್ಲ ಮನೆಗಳಿಗೂ ಕುಡಿಯುವ ನೀರನ್ನು ಪೂರೈಸಲಾಗುವುದು ಎಂದೂ ಭರವಸೆ ನೀಡಲಾಗಿದೆ.
ಬಿಜೆಪಿ ಪ್ರಣಾಳಿಕೆಯ ಪ್ರಮುಖ ಅಂಶಗಳು
- ಒಂದು ದೇಶ ಒಂದು ಚುನಾವಣೆ
- ಏಕರೂಪ ನಾಗರಿಕ ಸಂಹಿತೆ ಜಾರಿ (ಸಿಎಎ)
- ಮುಂದಿನ 5 ವರ್ಷಗಳವರೆಗೆ ಉಚಿತ ಪಡಿತರ ಯೋಜನೆ ಮುಂದುವರಿಸುವುದು
- ಮುದ್ರಾ ಯೋಜನೆಯಡಿ 10 ಲಕ್ಷ ರೂ.ಗಳವರೆಗೆ ಸಾಲವನ್ನು ಒದಗಿಸಲಾಗುತ್ತಿದೆ. ಈಗ ಈ ಮಿತಿಯನ್ನು 20 ಲಕ್ಷ ರೂ.ಗೆ ಹೆಚ್ಚಿಸುವುದು
- 75 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬ ವ್ಯಕ್ತಿಯನ್ನು ಆಯುಷ್ಮಾನ್ ಭಾರತ್ ಯೋಜನೆಯ ವ್ಯಾಪ್ತಿಗೆ ತರುವುದು
- ತೃತೀಯ ಲಿಂಗಿ ಸಮುದಾಯವನ್ನು ಆಯುಷ್ಮಾನ್ ಭಾರತ್ ಯೋಜನೆಯ ವ್ಯಾಪ್ತಿಗೆ ತರುವುದು
- 1) ಸಾಮಾಜಿಕ ಮೂಲಸೌಕರ್ಯ, 2) ಡಿಜಿಟಲ್ ಮೂಲಸೌಕರ್ಯ, 3) ಭೌತಿಕ ಮೂಲಸೌಕರ್ಯ ಎಂಬ ಮೂರು ರೀತಿಯ ಮೂಲಸೌಕರ್ಯಗಳ ಮೂಲಕ 21 ನೇ ಶತಮಾನದ ಭಾರತದ ಅಡಿಪಾಯವನ್ನು ಬಲಪಡಿಸುವದು
- ಡಿಜಿಟಲ್ ಮೂಲಸೌಕರ್ಯದ ಅಡಿಯಲ್ಲಿ 5 ಜಿ ನೆಟ್‌ವರ್ಕ್ ವಿಸ್ತರಣೆ. 6 ಜಿ ಗಾಗಿ ಕೆಲಸ ಆರಂಭ, ಡಿಜಿಟಲ್ ಮೂಲಸೌಕರ್ಯ ನಿರ್ಮಾಣ
- ಜನೌಷಧಿ ಕೇಂದ್ರಗಳ ಮೂಲಕ ಶೇ 50 ರಿಯಾಯಿತಿಯೊಂದಿಗೆ ಔಷಧಿಗಳು ಲಭ್ಯವಾಗಲಿವೆ ಮಾತ್ರವಲ್ಲದೆ ಮತ್ತಷ್ಟು ಜನೌಷಧಿ ಕೇಂದ್ರಗಳನ್ನು ದೇಶಗಳಲ್ಲಿ ಸ್ಥಾಪಿಸಲಾಗುವುದು
- ಮೂರು ಕೋಟಿ ಮಹಿಳೆಯರಿಗೆ ಲಕ್‌ಪತಿ ದೀದಿ ಯೋಜನೆಯ ಗ್ಯಾರಂಟಿ * ರೈತರಿಗೆ ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಹಣ ವರ್ಗಾವಣೆ ಮುಂದುವರಿಕೆ
- ದೇಶಾದ್ಯಂತ ಡೇರಿ ಸಹಕಾರ ಸಂಘಗಳನ್ನು ಹೆಚ್ಚಿಸಲಾಗುವುದು
- ಕ್ರೀಡೆಯಲ್ಲಿ ಸ್ತ್ರೀಯರ ಪ್ರಾತಿನಿಧ್ಯ ಹೆಚ್ಚಿಸಲು ಹೊಸ ಯೋಜನೆ
- ತಮಿಳು ಭಾಷೆಯ ವೈಶಿಷ್ಟ್ಯ ಸಾರಲು ಆದ್ಯತೆ
- ದೇಶಾದ್ಯಂತ ಪ್ರವಾಸೋದ್ಯಮಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುವುದು
- ಸಂತ ತಿರುವಳ್ಳುವರ್ ಸಾಂಸ್ಕೃತಿಕ ಕೇಂದ್ರಗಳ ನಿರ್ಮಾಣ
- ಹೊಯ್ಸಳರು ಸೇರಿ ಪಾರಂಪರಿಕ ಸ್ಥಳಗಳನ್ನು ವಿಶ್ವದ ಟೂರಿಸಂ ಜತೆ ಜೋಡಣೆ
- ವಿಶೇಷ ಮೀನು ಸಾಕಣೆ, ಮುತ್ತು ಕೃಷಿಗೆ ವಿಶೇಷ ಆದ್ಯತೆ
- ಕೃಷಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು, ಮೀನುಗಾರರಿಗೆ ಯೋಜನೆ
- ಇ-ಶ್ರಮ್ ಮೂಲಕ ಕಲ್ಯಾಣ ಯೋಜನೆಯ ಪ್ರಯೋಜನ
- ಪ್ರತಿ ಕ್ಷೇತ್ರದಲ್ಲೂ ಒಬಿಸಿ-ಎಸ್‌ಸಿ-ಎಸ್‌ಟಿಗೆ ಗೌರವ, ಜಾಗತಿಕ ಉತ್ಪಾದನಾ ಕೇಂದ್ರ ರಚಿಸಲು ಸಿದ್ಧತೆ