ತ್ರಿಪುರಾ: ಬಿಜೆಪಿ ಮೈತ್ರಿಕೂಟಕ್ಕೆ ಸಿಕ್ಕಿರುವುದು ಸರಳ ಬಹುಮತ

ಎ. ಅನ್ವರ್ ಹುಸೇನ್

2021ರ ಅಂತ್ಯದಲ್ಲಿ ನಡೆದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿತ್ತು. ಅದು ಶೇ. 60ರಷ್ಟು ಮತಗಳನ್ನು ಪಡೆದಿತ್ತು. ಆದರೆ ವಿಧಾನಸಭೆ ಚುನಾವಣೆಯಲ್ಲಿ ಅದು ಶೇ.40ಕ್ಕೆ ಕುಸಿದಿದೆ. ಸ್ಥಳೀಯಾಡಳಿತದ ಚುನಾವಣೆಯಲ್ಲಿ ಅಕ್ರಮ, ಹಿಂಸಾಚಾರ ಎಗ್ಗಿಲ್ಲದೆ ನಡೆದಿದೆ ಎಂಬ ಆರೋಪ ಇದರಿಂದ ನಿಜವಾಗುತ್ತಿದೆ. ತೀಪ್ರಾ ಮೋಥಾ ಎಡಪಕ್ಷಗಳೊಂದಿಗೆ ನಿಂತಿದ್ದರೆ, ಬಿ.ಜೆ.ಪಿ ಆಡಳಿತವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.

ತ್ರಿಪುರಾದಲ್ಲಿ ಬಿ.ಜೆ.ಪಿ ತನ್ನ ಅಧಿಕಾರವನ್ನು ಉಳಿಸಿಕೊಂಡಿದೆ. ಆದರೆ, ಕ್ಷೇತ್ರ ಹಾಗೂ ಮತಗಳ ಸಂಖ್ಯೆಯಲ್ಲಿ ಅದು ಭಾರೀ ಕುಸಿತ ಕಂಡಿದೆ. ಮತಗಳ ವಿವರಗಳನ್ನು ವಿಶ್ಲೇಷಿಸುವಾಗ ಬುಡಕಟ್ಟು ಜನರ ಸಂಘಟನೆ ʻʻತೀಪ್ರಾ ಮೋಥಾʼʼ ವಿರೋಧ ಪಕ್ಷಗಳನ್ನು ಸೇರದೆ ಏಕಾಂಗಿಯಾಗಿ ಸ್ಪರ್ಧೆ ಮಾಡಿದ್ದು ಬಿಜೆಪಿಯ ಯಶಸ್ಸಿನ ಹಾದಿಯನ್ನು ಸುಗಮಗೊಳಿಸಿದೆ ಎಂಬುದು ಸ್ಪಷ್ಟವಾಗಿದೆ. ಬಿಜೆಪಿ ಅಜೇಯ ಶಕ್ತಿಯೇನಲ್ಲ. ಆದರೆ ಅದಕ್ಕೆ ವಿರೋಧ ಪಕ್ಷಗಳ ನಡುವೆ ಒಗ್ಗಟ್ಟು ಅತ್ಯಗತ್ಯ ಎಂದು ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷ ಒತ್ತಾಯಿಸುತ್ತಲೇ ಬಂದಿದೆ. ಪಕ್ಷದ ಈ ನಿರ್ಧಾರ ಎಷ್ಟು ಸರಿ ಎಂಬುದನ್ನು ತ್ರಿಪುರಾ ಚುನಾವಣಾ ಫಲಿತಾಂಶ ಮತ್ತೊಮ್ಮೆ ಸಾಬೀತು ಮಾಡಿದೆ.

ಇದನ್ನು ಓದಿ: ಚುನಾವಣಾ ವೇಳಾಪಟ್ಟಿ ಪ್ರಕಟವಾಗುತ್ತಿರುವಂತೆಯೇ ತ್ರಿಪುರಾದಲ್ಲಿ ತೀವ್ರಗೊಂಡ ಹಲ್ಲೆ

ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷವನ್ನು ನಾಶ ಮಾಡುವ ಯೋಜನೆ

2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದಿತ್ತು. ಆಗ ಒಂದು ವಿಷಯ ಸ್ಪಷ್ಟವಾಗಿತ್ತು. ಕಮ್ಯುನಿಸ್ಟರು ಅಧಿಕಾರಕ್ಕೆ ಬಂದರೆ ತಮಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದನ್ನು ಬಿಜೆಪಿ ಮತ್ತು ಆರ್ ಎಸ್ ಎಸ್ ಅರಿತುಕೊಂಡಿವೆ. ಈ ಐದು ವರ್ಷಗಳಲ್ಲಿ ಪಕ್ಷದ ಚಟುವಟಿಕೆಗಳಿಗೆ ಅಡ್ಡಿಪಡಿಸಲು ಮತ್ತು ಪಕ್ಷವನ್ನು ನಾಶಮಾಡಲು ಸಂಘಪರಿವಾರ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಿತು. ಅವರು ಸಿಪಿಐ(ಎಂ) ಮೇಲೆ ಭಾರೀ ದಾಳಿಗಳನ್ನು ನಡೆಸಿದರು. ಇದಕ್ಕೆ ಕೆಲವು ಉದಾಹರಣೆಗಳು ಇಲ್ಲಿವೆ:

ಈ ಐದು ವರ್ಷಗಳ ಅವಧಿಯಲ್ಲಿ 22 ಪಕ್ಷದ  ಕಾರ್ಯಕರ್ತರ ಹತ್ಯೆ ಮಾಡಲಾಗಿದೆ, ಪಕ್ಷದ 3254 ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿದೆ, ಪಕ್ಷ ಮತ್ತು ಸಾಮೂಹಿಕ ಸಂಘಟನೆಗಳ 866 ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ. ಪಕ್ಷದ ರಾಜ್ಯ ಸಮಿತಿ ಕಚೇರಿಗೆ ಬೆಂಕಿ ಹಚ್ಚಲಾಗಿತ್ತು. ಪಕ್ಷದ 3363 ಕಾರ್ಯಕರ್ತರ ಮನೆಗಳು ಮತ್ತು 659 ಅಂಗಡಿಗಳನ್ನು ನಾಶ ಮಾಡಲಾಗಿದೆ. ಪಕ್ಷದ ಕಾರ್ಯಕರ್ತರ ಕುಟುಂಬಗಳ ಮೀನು ಕೊಳಗಳು/ರಬ್ಬರ್ ತೋಟಗಳಂತಹ ಜೀವನೋಪಾಯಗಳನ್ನು ನಾಶ ಮಾಡಿದ್ದಾರೆ! ಸಂತ್ರಸ್ತ ಜನರನ್ನು ಭೇಟಿಯಾಗಲು ತೆರಳಿದ್ದ ಮಾಜಿ ಮುಖ್ಯಮಂತ್ರಿ ಕಾಮ್ರೇಡ್ ಮಾಣಿಕ್ ಸರ್ಕಾರ್ ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ.

ಇಷ್ಟೆಲ್ಲಾ ದಾಳಿ ದಬ್ಬಾಳಿಕೆಗಳ ನಡುವೆಯೂ 302 ಅಂತರ ಸಮಿತಿಗಳಲ್ಲಿ, 24 ಜಿಲ್ಲಾ ಸಮಿತಿಗಳಲ್ಲಿ, 124 ಶಾಖೆಗಳು ತಮ್ಮ ಪ್ರದೇಶವನ್ನು ಹೊರತುಪಡಿಸಿ ಇತರ ಪ್ರದೇಶಗಳಲ್ಲಿ ಸಮ್ಮೇಳನಗಳನ್ನು ನಡೆಸುವ ಅಗತ್ಯವನ್ನು ಒಪ್ಪಿಕೊಂಡು ಸಮ್ಮೇಳನ ನಡೆಸಿವೆ. (ಇಂತಹ ದಬ್ಬಾಳಿಕೆಯ ಪರಿಸ್ಥಿತಿಯಲ್ಲೂ ಜಿಲ್ಲಾ ಸಮ್ಮೇಳನಗಳಲ್ಲಿ ಶೇ.100 ರಷ್ಟು ಪ್ರತಿನಿಧಿಗಳು ಭಾಗವಹಿಸಿದ್ದು ಗಮನಾರ್ಹ.)

ಇದನ್ನು ಓದಿ: ತ್ರಿಪುರಾಕ್ಕೆ ಶಾಂತಿ ಮತ್ತು ಪ್ರಜಾಪ್ರಭುತ್ವವನ್ನು ಮರಳಿ ತರುತ್ತೇವೆ; ಸಿಪಿಐ(ಎಂ) ಚುನಾವಣಾ ಪ್ರಣಾಳಿಕೆಯ ಆಶ್ವಾಸನೆ

ಹೀಗೆ ಅನೇಕ ಫ್ಯಾಸಿಸ್ಟ್ ದಾಳಿಗಳನ್ನು ಮಾಡಲಾಯಿತು. ಮಾಧ್ಯಮಗಳು ಕೂಡ ಈ ದಾಳಿಯಿಂದ ಪಾರಾಗಿಲ್ಲ. ಬಿಜೆಪಿ ಆಡಳಿತವನ್ನು ಟೀಕಿಸಿದ್ದಕ್ಕಾಗಿ 42 ಪತ್ರಕರ್ತರ ಮೇಲೆ ನೇರವಾಗಿ ದಾಳಿ ಮಾಡಲಾಯಿತು. ಹಲವಾರು ಮಾಧ್ಯಮಗಳ ಕಚೇರಿಗಳನ್ನು ಧ್ವಂಸಗೊಳಿಸಲಾಯಿತು. ಬಿಜೆಪಿ ಸರ್ಕಾರ ರಚನೆಯಾದ ನಂತರ 6 ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ನಡೆದವು. ಎಲ್ಲದರಲ್ಲೂ ಅಕ್ರಮಗಳಿದ್ದವು ಮಾತ್ರವಲ್ಲ, ಶೇ. 50 ಕ್ಕೂ ಹೆಚ್ಚು ಎಡರಂಗದ ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಸಲ್ಲಿಸಲು ಸಹ ಸಾಧ್ಯವಾಗಲಿಲ್ಲ. ಇತರ ವಿರೋಧ ಪಕ್ಷಗಳಲ್ಲೂ ಇದೇ ಪರಿಸ್ಥಿತಿ! ಹಲವು ಕಡೆಗಳಲ್ಲಿ ಮತಗಟ್ಟೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಮತಗಳು ಬಿಜೆಪಿ ಪಾಲಾಗಿವೆ. ಪುಂಡರು ಮತ ಹಾಕಿದರು.

ವಿಭಜಿಸುವ ತಂತ್ರಗಾರಿಕೆಗಳು

ಬಿಜೆಪಿ ತನ್ನ ಆಡಳಿತವನ್ನು ಉಳಿಸಿಕೊಳ್ಳಲು ತ್ರಿಪುರಾದಲ್ಲಿ ಜನರ ನಡುವೆ ಎರಡು ವಿಭಾಗಗಳನ್ನು ರಚಿಸಲು ಪ್ರಯತ್ನಿಸಿದರು. ಒಂದು ಕಡೆ ಗುಡ್ಡಗಾಡು ಜನರು ಮತ್ತು ಇತರರ ನಡುವೆ ಸಂಘರ್ಷ ಸೃಷ್ಟಿಯಾಯಿತು. ಮತ್ತೊಂದೆಡೆ, ಹಿಂದೂಗಳನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟಲು ಪ್ರಯತ್ನಿಸಿದರು. ಬಿಜೆಪಿಯ ಮಿತ್ರ ಪಕ್ಷ ಐಪಿಎಫ್‌ಟಿ ಜನರ ನಡುವೆ ತನ್ನ ಪ್ರಭಾವವನ್ನು ಕಳೆದುಕೊಂಡಿದೆ. ಆದ್ದರಿಂದ ತ್ರಿಪುರಾ ರಾಜಮನೆತನದಿಂದ ರಚಿಸಲ್ಪಟ್ಟ “ತೀಪ್ರಾ ಮೋಥಾ” ಸಂಘಟನೆಯೊಂದಿಗೆ ಸೇರಲು ಪ್ರಯತ್ನಗಳನ್ನು ಮಾಡಲಾಯಿತು. ಸುಮಾರು 35 ಲಕ್ಷ ಜನ ವಾಸಿಸುವ ತ್ರಿಪುರಾವನ್ನು ಇಬ್ಭಾಗ ಮಾಡಲು ಈ ಸಂಘಟನೆ ಪ್ರಯತ್ನಿಸುತ್ತಿದ್ದು, ಗುಡ್ಡಗಾಡು ಜನರಿಗಾಗಿ ಪ್ರತ್ಯೇಕ ರಾಜ್ಯ ಎಂಬ ಘೋಷಣೆ ಕೂಗುತ್ತಿದೆ. ಈ ಮೂಲಕ ಗುಡ್ಡಗಾಡು ಜನರು ಹಾಗೂ ಇತರರ ನಡುವೆ ವೈರುಧ್ಯಗಳನ್ನು ಸೃಷ್ಟಿಸಿ ತಮ್ಮ ಲಾಭಕ್ಕೆ ಬಳಸಿಕೊಳ್ಳಲು ಬಿಜೆಪಿ ಯತ್ನಿಸುತ್ತಿದೆ. ಮತ್ತೊಂದೆಡೆ, ಸಂಘಪರಿವಾರದ ಸಂಘಟನೆಗಳು ಮುಸ್ಲಿಮರ ಮೇಲೆ ದಾಳಿ ಮಾಡುವ ಮೂಲಕ ಮುಸ್ಲಿಮೇತರರ ಬೆಂಬಲವನ್ನು ಬಿಜೆಪಿ ಕಡೆಗೆ ತಿರುಗಿಸಲು ಪ್ರಯತ್ನಿಸಿದವು. ಕೆಲವೆಡೆ ಮಸೀದಿ, ಮುಸ್ಲಿಮರ ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ತ್ರಿಪುರಾದ ಇತಿಹಾಸದಲ್ಲಿ ಯಾವುದೇ ಧಾರ್ಮಿಕ ಗಲಭೆಗಳು ನಡೆದಿರಲಿಲ್ಲ. ಆದರೆ ಈ ಧಾರ್ಮಿಕ ವಿರೋಧಾಭಾಸಗಳು ಅಲ್ಪ ಲಾಭಕ್ಕಾಗಿ ತೀವ್ರವಾದವು. ಹಲವು ರೀತಿಯಲ್ಲಿ ಬಿ.ಜೆ.ಪಿ ಆಡಳಿತದ ದಬ್ಬಾಳಿಕೆಗಳು ಮತ್ತು ದುರುಪಯೋಗಗಳು ಜನರಲ್ಲಿ ಆಳವಾದ ಅಸಮಾಧಾನವನ್ನು ಸೃಷ್ಟಿಸಿದವು. ಬಿಜೆಪಿಯಲ್ಲೂ ಉಗ್ರ ಗುಂಪುಗಾರಿಕೆ ಹೆಚ್ಚುತ್ತಿದೆ. ಹಾಗಾಗಿಯೇ ಬಿಪ್ಲವ್ ದೀಪ್ ನೇತೃತ್ವದಲ್ಲಿ ಚುನಾವಣೆ ಗೆಲ್ಲುವುದು ಅಸಾಧ್ಯ ಎಂದು ಬಿಜೆಪಿ ಅಂದಾಜಿಸಿತು. ನಾಯಕತ್ವ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಮಾಣಿಕ್ ಸಹಾ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿತು.

ಇದನ್ನು ಓದಿ: ಬಿಜೆಪಿ ಆಂತರಿಕ ಕಲಹ: ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ದೇಬ್ ರಾಜೀನಾಮೆ

ಇದೇ ಸಂದರ್ಭದಲ್ಲಿ ಸಿಪಿಐ(ಎಂ) ಪಕ್ಷದ ವಿರುದ್ಧ ಮತ್ತೊಂದು ಅಪಪ್ರಚಾರ ನಡೆಸಲಾಯಿತು. ಸಿಪಿಐ(ಎಂ) ಪ್ರಮುಖ ವಿರೋಧ ಪಕ್ಷದ ಸ್ಥಾನಮಾನವನ್ನು ಕಳೆದುಕೊಂಡಿದೆ ಮತ್ತು ತೃಣಮೂಲ ಕಾಂಗ್ರೆಸ್ ಆ ಸ್ಥಾನವನ್ನು ಪಡೆದುಕೊಂಡಿದೆ ಎಂದು ಬಿಜೆಪಿ ಮತ್ತು ಕೆಲವು ಮಾಧ್ಯಮಗಳು ಬಿಂಬಿಸಲು ಪ್ರಯತ್ನಿಸಿದವು. ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸಿಪಿಐ(ಎಂ) ಶೇ. 19.47 ಮತಗಳನ್ನು ಪಡೆದಿದ್ದು, ತೃಣಮೂಲ ಶೇ. 16.77 ಮತಗಳನ್ನು ಪಡೆದಿದೆ. ಇದಾದ ಬಳಿಕ ಕಮ್ಯುನಿಸ್ಟ್ ಪಕ್ಷದ ವಿರುದ್ಧ ಹಿಂಸಾಚಾರ ನಡೆದಾಗ ನಾಮಪತ್ರ ಸಲ್ಲಿಸಲು ತೃಣಮೂಲ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಅಡ್ಡಿಯಾಗಲಿಲ್ಲ ಎಂಬ ಅಂಶವನ್ನು ಉದ್ದೇಶಪೂರ್ವಕವಾಗಿ ಮರೆಮಾಚಲಾಗಿದೆ. ಕಮ್ಯುನಿಸ್ಟ್ ಪಕ್ಷವು ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿಲ್ಲ ಎಂಬ ಭಾವನೆಯನ್ನು ಮೂಡಿಸುವುದು ಈ ಅಭಿಯಾನದ ಏಕೈಕ ಉದ್ದೇಶವಾಗಿದೆ! ಇಷ್ಟೆಲ್ಲ ಅಡೆತಡೆಗಳ ನಡುವೆಯೂ ಸಿಪಿಐ(ಎಂ) ಪಕ್ಷವು ನಿರಂತರವಾಗಿ ಜನರ ಸಮಸ್ಯೆಗಳ ಕುರಿತು ಪ್ರತಿಭಟನೆಗಳನ್ನು ನಡೆಸಿತು. ಸದಾ ಜನರ ಪರ ನಿಂತರು. ಜನರು ಮತ್ತು ತಮ್ಮ ನಡುವಿನ ಸಂಬಂಧವನ್ನು ಬಲಪಡಿಸಲು ಪಕ್ಷದ ಕಾರ್ಯಕರ್ತರು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಿದರು. ಈ ಅವಧಿಯಲ್ಲಿ ಬಿಜೆಪಿ ವಿರುದ್ಧ ಯಾವುದೇ ವಿರೋಧ ಪಕ್ಷಗಳು ಮುಂದೆ ಬರಲು ಸಾಧ್ಯವಾಗಲಿಲ್ಲ ಎಂಬುದು ಗಮನಿಸಬೇಕಾದ ಸಂಗತಿ.

ಇದನ್ನು ಓದಿ: ತ್ರಿಪುರಾದಲ್ಲಿ ಮೋಸದ ಚುನಾವಣೆಯ ಪ್ರಹಸನ

ಏಕತೆಯನ್ನು ತಿರಸ್ಕರಿಸಿದ ತೀಪ್ರಾ ಮೋಥಾ

ಈ ಹಿನ್ನೆಲೆಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಪ್ರಬಲ ಒಗ್ಗಟ್ಟಿನ ಅಗತ್ಯವಿದೆ ಎಂದು ಸಿಪಿಐ(ಎಂ) ಅಂದಾಜು ಮಾಡಿದೆ. ಅದರ ಆಧಾರದ ಮೇಲೆ ಕಾಂಗ್ರೆಸ್ ಜೊತೆ ಕ್ಷೇತ್ರ ಮೈತ್ರಿ ಮಾಡಿಕೊಳ್ಳಲಾಗಿದೆ. ತೀಪ್ರಾ ಮೋಥಾ ಕೂಡ ಈ ಮೈತ್ರಿಯನ್ನು ಸೇರಲು ಆಹ್ವಾನಿಸಲಾಯಿತು. ಆದರೆ ಅದು ಮೈತ್ರಿಯ ಕರೆಯನ್ನು ತಿರಸ್ಕರಿಸಿತು. ಹೀಗಾಗಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿತು. ಚುನಾವಣಾ ಫಲಿತಾಂಶ ಹೀಗಿತ್ತು: 2021ರ ಅಂತ್ಯದಲ್ಲಿ ನಡೆದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿತ್ತು. ಅದು ಶೇ. 60ರಷ್ಟು ಮತಗಳನ್ನು ಪಡೆದಿತ್ತು. ಆದರೆ ವಿಧಾನಸಭೆ ಚುನಾವಣೆಯಲ್ಲಿ ಅದು ಶೇ.40ಕ್ಕೆ ಕುಸಿದಿದೆ. ಸ್ಥಳೀಯಾಡಳಿತದ ಚುನಾವಣೆಯಲ್ಲಿ ಅಕ್ರಮ, ಹಿಂಸಾಚಾರ ಎಗ್ಗಿಲ್ಲದೆ ನಡೆದಿದೆ ಎಂಬ ಆರೋಪ ಇದರಿಂದ ನಿಜವಾಗುತ್ತಿದೆ. ತೀಪ್ರಾ ಮೋಥಾ ಎಡಪಕ್ಷಗಳೊಂದಿಗೆ ನಿಂತಿದ್ದರೆ, ಬಿ.ಜೆ.ಪಿ ಆಡಳಿತವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.

ತೀಪ್ರಾ ಮೋಥಾ ಅವರ ಮೂಲಭೂತ ಬೇಡಿಕೆಗಳು ಕಠಿಣವಾದವು. ತ್ರಿಪುರಾದ ಪರಂಬರ ಯಮ್ ಬುಡಕಟ್ಟು ಮತ್ತು ಬುಡಕಟ್ಟು ಅಲ್ಲದವರ ಏಕತೆ! ತ್ರಿಪುರಾದ ಜನಸಂಖ್ಯೆಯ ಮೂರನೇ ಒಂದು ಭಾಗ ಬುಡಕಟ್ಟು ಜನರಿದ್ದಾರೆ! ಆದರೆ ತೀಪ್ರಾ ಮೋಥಾ ಬುಡಕಟ್ಟು ಜನರ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸುತ್ತಿದ್ದಾರೆ. ಬಾಂಗ್ಲಾದೇಶದ ಕೆಲವು ಭಾಗಗಳನ್ನು ಆ ರಾಜ್ಯದಲ್ಲಿ ಸ್ವಾಧೀನಪಡಿಸಿಕೊಳ್ಳುವಂತೆಯೂ ಅದು ಕೇಳುತ್ತದೆ. ಬೇರೆ ದೇಶಕ್ಕೆ ಸೇರಿರುವ ಭಾಗಗಳನ್ನು ಹೇಗೆ ಪಡೆಯುವುದು? ಇಂತಹ ಪ್ರತ್ಯೇಕ ರಾಜ್ಯ ರಚನೆಯಾದರೆ ಬುಡಕಟ್ಟು ಜನಾಂಗದ ಯುವಕ-ಯುವತಿಯರೆಲ್ಲರಿಗೂ ತಕ್ಷಣವೇ ಸರ್ಕಾರಿ ನೌಕರಿ ದೊರೆಯುತ್ತದೆ ಮತ್ತು ರಾಜ್ಯವು ಭೂಲೋಕದ ಸ್ವರ್ಗವಾಗುತ್ತದೆ ಎಂದು ಅವರು ಸುಳ್ಳುಪ್ರಚಾರ ಮಾಡಿದರು. ಇದು ಎಷ್ಟು ಪ್ರಾಯೋಗಿಕ ಎಂಬುದು ದೊಡ್ಡ ಪ್ರಶ್ನಾರ್ಥಕ ಚಿಹ್ನೆ! ಆದಾಗ್ಯೂ, ಇದು ಬುಡಕಟ್ಟು ಜನರಲ್ಲಿ ಆಳವಾದ ಪ್ರಭಾವ ಬೀರಿದೆ ಎಂಬುದನ್ನು ಈ ಚುನಾವಣಾ ಫಲಿತಾಂಶಗಳು ತೋರಿಸುತ್ತವೆ. ಬಿಜೆಪಿ ಅಜೇಯ ಶಕ್ತಿಯೇನಲ್ಲ ಎಂಬುದನ್ನು ತ್ರಿಪುರಾ ಚುನಾವಣೆಯ ಫಲಿತಾಂಶ ಸ್ಪಷ್ಟವಾಗಿ ತೋರಿಸುತ್ತದೆ. ಆದರೆ, ಇದಕ್ಕೆ ವಿರೋಧ ಪಕ್ಷಗಳ ಪ್ರಬಲ ಒಗ್ಗಟ್ಟು ಬೇಕು. 2024 ರ ಚುನಾವಣೆಗಳು ಸಮೀಪಿಸುತ್ತಿರುವಾಗ ವಿರೋಧ ಪಕ್ಷಗಳ ಮುಂದೆ ಒಗ್ಗಟ್ಟಿನ ಈ ಕರ್ತವ್ಯವಿದೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *