ಬಂಟ್ವಾಳ: ತಾಲೂಕಿನ ವಿಟ್ಲದ ಮುರುವ ಎಂಬಲ್ಲಿ ದಲಿತ ಅಪ್ರಾಪ್ತ ವಿದ್ಯಾರ್ಥಿನಿಯೊಬ್ಬಳಿಗೆ ಸ್ಥಳೀಯ ಬಿಜೆಪಿ ಮುಖಂಡ ಮಹೇಶ್ ಭಟ್ ಎಂಬವನು ನಿರಂತರ ಲೈಂಗಿಕ ಕಿರುಕುಳ ನೀಡುವ ಮೂಲಕ ಮಾನಸಿಕ ಹಿಂಸೆಯನ್ನು ಎಸಗಿರುತ್ತಾನೆ. ಈತನ ವರ್ತನೆ ಬಗ್ಗೆ ಸ್ಥಳೀಯರು ದಲಿತ ಹಕ್ಕುಗಳ ಸಮಿತಿಯ ಮುಖಂಡರ ಗಮನಕ್ಕೆ ತಂದ ಹಿನ್ನಲೆಯಲ್ಲಿ ಡಿಎಚ್ಎಸ್ ನ ಜಿಲ್ಲಾ ಮುಖಂಡರುಗಳಾದ ಈಶ್ವರಿ ಶಂಕರ್ ಪದ್ಮುಂಜ ಹಾಗೂ ಕೃಷ್ಣ ತಣ್ಣೀರುಬಾವಿ ಸಂತ್ರಸ್ತ ದಲಿತ ವಿದ್ಯಾರ್ಥಿಯ ಸಮಸ್ಯೆಗಳಿಗೆ ಸ್ಪಂದಿಸಿರುತ್ತಾರೆ.
ಈ ಪ್ರಕರಣಕ್ಕೆ ಸಂಬಂಧಪಟ್ಟು ವಿಟ್ಲ ಪೊಲೀಸ್ ಠಾಣೆಗೆ ಭೇಟಿ ನೀಡಿ ಹೆತ್ತವರ ಸಮ್ಮುಖದಲ್ಲಿ ಸಂತ್ರಸ್ತೆ ಬಾಲಕಿಯು ನೀಡಿದ ದೂರನ್ನು ಆದರಿಸಿ ಪ್ರಕರಣ ದಾಖಲಿಸಿರುತ್ತಾರೆ. ಈ ಬಗ್ಗೆ ತನಿಖೆ ನಡೆಸಿದ ಪೊಲೀಸ್ ಅಧಿಕಾರಿಗಳು ಸಂತ್ರಸ್ತ ಬಾಲಕಿಯ ವಿಚಾರಣೆ ನಡೆಸಿದಾಗ ಆರೋಪಿ ಮಹೇಶ್ ಭಟ್ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಬೆಂಗಳೂರು| ಗರ್ಭಕಂಠ ಕ್ಯಾನ್ಸರ್: 14 ವರ್ಷದ ಬಾಲಕಿಯರಿಗೆ ಉಚಿತ ಲಸಿಕೆ
ಆದರೆ ವಿಟ್ಲ ಪೊಲೀಸರು ಈ ಪ್ರಕರಣವನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷವಹಿಸುತ್ತಿರುವ ಕ್ರಮವನ್ನು ಪ್ರಶ್ನಿಸಿ ಡಿಎಚ್ಎಸ್ ಮುಖಂಡರಾದ ಈಶ್ವರಿ ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ಮೊಬೈಲ್ ಮೂಲಕ ಸಂಪರ್ಕಿಸಿ ಈ ಪ್ರಕರಣಕ್ಕೆ ಸಂಬಂಧಿಸಿ ಮಾತನಾಡಿದಾಗ ನೊಂದ ಬಾಲಕಿಯ ಹೇಳಿಕೆಯ ಮೇಲೆ ಕೇಸ್ ದಾಖಲಿಸುವಂತೆ ಸೂಚನೆಯನ್ನು ನೀಡಿರುತ್ತಾರೆ. ಇದೀಗ ಆರೋಪಿ ಮಹೇಶ್ ಮೇಲೆ ಪೋಕ್ಸೋ ಪ್ರಕರಣದಡಿ ಕೇಸು ದಾಖಲಾಗಿದೆ.
ಆದರೆ ಆರೋಪಿ ಮಹೇಶ್ ಭಟ್ ನನ್ನು ಈವರೆಗೂ ಬಂಧಿಸುವಲ್ಲಿ ಪೊಲೀಸ್ ಇಲಾಖೆ ಬೇಜಾವಾಬ್ದಾರಿ ವಹಿಸಿದೆ. ಆರೋಪಿ ಬಿಜೆಪಿ ಪಕ್ಷದ ಪ್ರಭಾವವನ್ನು ಬಳಸಿ ಪ್ರಕರಣದ ಧಿಕ್ಕು ತಪ್ಪಿಸುವ ಸಾಧ್ಯತೆಗಳು ಹೆಚ್ಚಾಗಿದ್ದು ಈ ಬಗ್ಗೆ ಜಿಲ್ಲಾ ವರಿಷ್ಟಾಧಿಕಾರಿಗಳು ಗಮನ ಹರಿಸಿ ಪ್ರಕರಣ ತನಿಖೆಯು ಹಾದಿ ತಪ್ಪದಂತೆ ಮುತ್ತುವರ್ಜಿ ವಹಿಸಬೇಕೆಂದು, ಹಾಗೂ ಆರೋಪಿ ಮಹೇಶ್ ಭಟ್ ನನ್ನು ಕೂಡಲೇ ಬಂಧಿಸಿ ಕಠಿಣ ಪ್ರಕರಣದಡಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಡಿಎಚ್ಎಸ್ ದ.ಕ ಜಿಲ್ಲಾ ಸಮಿತಿಯು ಒತ್ತಾಯಿಸುತ್ತದೆ ಎಂದು ಡಿಎಚ್ಎಸ್ ನ ಜಿಲ್ಲಾ ಮುಖಂಡರಾದ ಈಶ್ವರಿ ಪದ್ಮುಂಜ ಹಾಗೂ ಕೃಷ್ಣ ತಣ್ಣೀರುಬಾವಿ ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಇದನ್ನೂ ನೋಡಿ: ದುಡಿಯುವ ಜನರಿಗೆ ದುಡ್ಡಿಲ್ಲ! ಆದರೆ ಶಾಸಕರ ವೇತನ ದುಪ್ಪಟ್ಟಾಯ್ತು!! ಅಂಥಾ ಕಷ್ಟ ಅವರಿಗೇನಿತ್ತು? Janashakthi Media