ನವದೆಹಲಿ: ‘ಕೇಂದ್ರ ಸಚಿವರ ಬೆಂಗಾವಲು ಪಡೆಯ ವಾಹನಗಳು ನುಗ್ಗಿಸಿದ್ದರಿಂದಾಗಿ ರೈತರು ಮೃತಪಟ್ಟ ಬಳಿಕ ಬಿಜೆಪಿ ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿದೆ. ಇದು ಕ್ರಿಯೆಗೆ ತಕ್ಕ ಪ್ರತಿಕ್ರಿಯೆಯಷ್ಟೆ. ಅವರನ್ನು ತಪ್ಪಿತಸ್ಥರು ಎಂದು ನಾನು ಪರಿಗಣಿಸುವುದಿಲ್ಲ’ ಎಂದು ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ಹೇಳಿದ್ದಾರೆ.
ಲಖಿಂಪುರ ಘಟನೆಗೆ ಸಂಬಂಧಿಸಿ ಕೇಂದ್ರ ಗೃಹ ಇಲಾಖೆಯ ರಾಜ್ಯ ಖಾತೆ ಸಚಿವ ಅಜಯ್ ಮಿಶ್ರಾ ಹಾಗೂ ಅವರ ಪುತ್ರ ಆಶಿಶ್ ಮಿಶ್ರಾ ಅವರನ್ನು ಬಂಧಿಸಬೇಕು ಎಂದು ರೈತರು ಸರ್ಕಾರವನ್ನು ಆಗ್ರಹಿಸಿದ್ದಾರೆ. ಅವರನ್ನು ಬಂಧಿಸಲು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ಒಂದು ವಾರದ ಗಡುವ ನೀಡಿದ್ದೇವೆ ಎಂದರು.
ಅಕ್ಟೋಬರ್ 03ರಂದು ಪ್ರತಿಭಟನಾಕಾರರ ಮೇಲೆ ಎಸ್‌ಯುವಿ ಚಲಾಯಿಸಲಾಗಿದೆ ಎನ್ನಲಾಗಿದ್ದು, ಕೆಲವರು ಮೃತಪಟ್ಟಿದ್ದರು. ಬಳಿಕ ನಡೆದ ಹಿಂಸಾಚಾರದಲ್ಲಿ ಕೆಲವರು ಸಾವಿಗೀಡಾಗಿದ್ದರು. ಘಟನೆಯಲ್ಲಿ ರೈತರು, ಪತ್ರಕರ್ತ ಹಾಗೂ ಬಿಜೆಪಿ ಕಾರ್ಯಕರ್ತರು ಸೇರಿದಂತೆ ಒಟ್ಟು 8 ಮಂದಿ ಮೃತಪಟ್ಟಿದ್ದಾರೆ.
ಸಂಯುಕ್ತ ಕಿಸಾನ್ ಮೋರ್ಚಾರದ ನಾಯಕ ಯೋಗೇಂದ್ರ ಯಾದವ್ ಮಾತನಾಡಿ ‘ಅದು ಬಿಜೆಪಿ ಕಾರ್ಯಕರ್ತರದ್ದೇ ಆಗಿರಲಿ, ರೈತರದ್ದೇ ಆಗಿರಲಿ, ಜೀವಹಾನಿಯಾಗಿರುವುದಕ್ಕೆ ನಮಗೆ ಬೇಸರವಾಗಿದೆ. ಅದೊಂದು ದುರದೃಷ್ಟಕರ ಘಟನೆ. ನ್ಯಾಯ ದೊರೆಯುವ ಭರವಸೆಯಲ್ಲಿ ನಾವಿದ್ದೇವೆ’ ಎಂದರು.
ಆರೋಪಿ ಆಶೀಶ್ ಮಿಶ್ರಾ ಮೇಲೆ ಸಿಆರ್‌ಪಿಸಿಯ ಸೆಕ್ಷನ್ 160ರ ಅಡಿಯಲ್ಲಿ (ಸಾಕ್ಷಿಯಾಗಿ) ಆತನನ್ನು ಸೆಕ್ಷನ್ 41 ರ ಅಡಿಯಲ್ಲಿ (ಆರೋಪಿಯಾಗಿ ಅಥವಾ ಶಂಕಿತನಾಗಿ) ಕೇಸು ದಾಖಲಾಗಿದೆ. ಘಟನೆಗೆ ಸಂಬಂಧಿಸಿದಂತೆ ನೆನ್ನೆ ಸುಪ್ರೀಂ ಕೋರ್ಟ್ ಸಹ ಸರ್ಕಾರದ ನಡೆಯ ಬಗ್ಗೆ ಪ್ರಶ್ನೆ ಮಾಡಿತ್ತು.