ಪತ್ರಕಾರಿತೆಯನ್ನು ಅಪರಾಧೀಕರಿಸುವ ಹುನ್ನಾರ: ‘ಡಿಜಿಪಬ್’ ಖಂಡನೆ
ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ಸ್ವತಂತ್ರ ಡಿಜಿಟಲ್ ಸುದ್ದಿ ಸಂಸ್ಥೆ ‘ದಿ ವೈರ್’ ಈಗಾಗಲೇ ಹಿಂಪಡೆದಿರುವ ಸುದ್ದಿ ಮಾಲೆಯ ವಿರುದ್ಧ ದೂರು ದಾಖಲಿಸಿದ ಎರಡು ದಿನಗಳ ನಂತರ ದಿಲ್ಲಿ ಪೊಲೀಸರು ಅಕ್ಟೋಬರ್ 31ರಂದು ಈ ಸುದ್ದಿ ಮಾಧ್ಯಮದ ಸಂಸ್ಥಾಪಕ ಸಂಪಾದಕರಾದ ಸಿದ್ಧಾರ್ಥ್ ವರದರಾಜನ್, ಎಂಕೆ ವೇಣು ಮತ್ತು ಉಪಸಂಪಾದಕರಾದ ಜಾಹ್ನವಿ ಸೇನ್ ಅವರ ನಿವಾಸಗಳ ಮೇಲೆ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.
ದೆಹಲಿ ಪೊಲೀಸರು ದಾಖಲಿಸಿದ ಪ್ರಥಮ ಮಾಹಿತಿ ವರದಿಯ ನಂತರ ಮಾಳವಿಯಾ ಸಲ್ಲಿಸಿದ ದೂರಿನಲ್ಲಿ, ದಿ ವೈರ್ ಮೇಲೆ ವಂಚನೆ, ಫೋರ್ಜರಿ, ಮಾನನಷ್ಟ ಮತ್ತು ಕ್ರಿಮಿನಲ್ ಪಿತೂರಿಯ ಆರೋಪ ಹೊರಿಸಲಾಗಿದೆ.
ಕಥೆಗಳ ಸತ್ಯಾಸತ್ಯತೆಯನ್ನು ಮೆಟಾ ನಿರಾಕರಿಸಿದೆ, ಇದರಲ್ಲಿ ಬಳಸಿದ ದಾಖಲೆಗಳು ಮತ್ತು ಇಮೇಲ್‌ಗಳನ್ನು “ಸೃಷ್ಟಿಸಲಾಗಿದೆ” ಎಂದು ಆರೋಪಿಸಿದಾಗ, ಅಕ್ಟೋಬರ್ 23 ರಂದು ‘ದಿ ವೈರ್’ ಈ ಲೇಖನ ಮಾಲೆಯನ್ನು ಪ್ರಕಟಿಸುವ ಮೊದಲು ಸೂಕ್ತ ಪರಿಶೀಲನೆ ಮತ್ತು ಶ್ರಮವಹಿಸುವಲ್ಲಿ ಲೋಪಗಳಾಗಿವೆ ಎಂದು ಒಪ್ಪಿಕೊಳ್ಳುತ್ತ ಅದನ್ನು ಹಿಂತೆಗೆದುಕೊಂಡು ತನ್ನ ವಿಶಾಲ ಓದುಗ ಬಳಗದ ಕ್ಷಮೆ ಕೋರಿತ್ತು. ಅಲ್ಲದೆ, ಇದರಲ್ಲಿ ತಮ್ಮ ಪ್ರಮುಖ ತಂತ್ರಜ್ಞಾನ ತಜ್ಞ ದೇವೇಶ್ ಕುಮಾರ್ ತಮ್ಮನ್ನು “ವಂಚಿಸಿದ್ದಾರೆ” ಎಂದು ಆರೋಪಿಸಿ ಅವರ ವಿರುದ್ಧ ದೂರು ದಾಖಲಿಸಿತ್ತು. ಈ ವ್ಯಕ್ತಿ ಯಾರ ಕುಮ್ಮಕ್ಕಿನ ಮೇಲೆ ಈ ಎಳ್ ಸುದ್ದಿಗಳನ್ನು ತಮಗೆ ಒಗಗಿಸಿದರು ಎಂಬುದು ಮುಂದೆ ನ್ಯಾಯಾಂಕ ಪ್ರಕ್ರಿಯೆಗೆ ಒಳಪಡುತ್ತದೆ, ಆದರೆ ಇಲ್ಲಿ ವೈರ್ ನ ಹೆಸರುಗೆಡಿಸುವ ದುರುದ್ದೇಶ ಸ್ವಯಂವೇಧ್ಯ ಎಂದೂ ಅದು ಹೇಳಿದೆ.
ಗಮನಾರ್ಹ ಸಂಗತಿಯೆಂದರೆ ವರದರಾಜನ್, ವೇಣು ಮತ್ತು ಸೇನ್ ಮತ್ತು ಇನ್ನೊಬ್ಬ ಸಂಪಾದಕರಾದ ಸಿದ್ದಾರ್ಥ ಭಾಟಿಯ ಹೆಸರುಗಳನ್ನು ನಮೂದಿಸಲಾಗಿದೆ, ಆದರೆ ಈ ಸರಣಿಯ ಒಂದು ಲೇಖನದಲ್ಲಿ ದೇವೇಶ್ ಕುಮಾರ್ ಅವರ ಹೆಸರಿದ್ದರೂ ಎಫ್‍ಐಆರ್ ನಲ್ಲಿ ಅದನ್ನು ದಾಖಲಿಸಿಲ್ಲ ಎಂದೂ ಹೇಳಲಾಗಿದೆ.
ಈ ನಾಲ್ಕು ಪತ್ರಕರ್ತರ ಫೋನುಗಳು, ಕಂಪ್ಯೂಟರುಗಳು ಮತ್ತು ಐಪ್ಯಾಡುಗಳನ್ನು ಕಿತ್ತುಕೊಳ್ಳಲಾಗಿದ್ದು, ಅವುಗಳ ಹ್ಯಾಶ್ ವ್ಯಾಲ್ಯು ಮತ್ತು ಕ್ಲೋನ್ ಮಾಡಿದ ಪ್ರತಿಗಳನ್ನು ಕೊಡಬೇಕು ಮತ್ತು ಈ ಸಾಧನಗಳನ್ನು ತಟಸ್ಥ ಸ್ಥಳದಲ್ಲಿಡಬೇಕು ಎಂದು ಆಗ್ರಹಿಸಿರುವುದಾಗಿ ‘ದಿ ವೈರ್’ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಈ ನಾಲ್ಕು ಮಂದಿ ಪೊಲಿಸ್ ತನಿಖೆಯೊಂದಿಗೆ ಸಹಕರಿಸಿದರೂ, ವೈರ್ ಕಚೇರಿಯಲ್ಲೂ ಶೋಧನೆ ನಡೆಸಲಾಯಿತು, ಈ ವೇಳೆಯಲ್ಲಿ ಸಂಸ್ಥೆಯ ವಕೀಲರನ್ನು ತಳ್ಳಾಡಲಾಯಿತು, ಮತ್ತು ಕಚೇರಿಯಲ್ಲಿದ್ದ ಎರಡು ಕಂಪ್ಯೂಟರುಗಳ ಹಾರ್ಡ್ ಡಿಸ್ಕ್ ಗಳನ್ನು ಅವುಗಳನ್ನು ಕೆಡಿಸದಂತೆ ತಡೆಯಲು ಕೊಡಬೇಕಾಗಿದ್ದ ಹ್ಯಾಷ್ ನಂಬರುಗಳನ್ನಾಗಲೀ, ಕ್ಲೋನ್ ಪ್ರತಿಗಳನ್ನಾಗಲೀ ಕೊಡದೆ ದಿಲ್ಲಿ ಪೋಲೀಸರು ಕೊಂಡೊಯ್ದಿದ್ದಾರೆ ಎಂದೂ ವೈರ್ ಹೇಳಿದೆ.
ಪೋಲೀಸ್ ದಾಳಿಗಳಿಗೆ ಡಿಜಿಪಬ್ ಇಂಡಿಯಾ ಖಂಡನೆ
ದಿ ವೈರ್ ಪತ್ರಕರ್ತರ ಮನೆಗಳ ಮೇಲೆ ದಿಲ್ಲಿ ಪೊಲೀಸರು ದಾಳಿ ನಡೆಸಿರುವುದನ್ನು ಸ್ವತಂತ್ರ ಡಿಜಿಟಲ್ ಸುದ್ದಿ ಪೋರ್ಟಲ್‌ಗಳ ಸಮೂಹವಾದ ಡಿಜಿಪಬ್ ಇಂಡಿಯಾ ಸಾರಾಸಗಟಾಗಿ ಖಂಡಿಸಿದೆ.
“ಸುಳ್ಳು ವರದಿಯನ್ನು ಪ್ರಕಟಿಸುವ ಪತ್ರಕರ್ತ ಅಥವಾ ಮಾಧ್ಯಮ ಸಂಸ್ಥೆ ಸಹಪತ್ರಕರ್ತರು ಮತ್ತು ನಾಗರಿಕ ಸಮಾಜಕ್ಕೆ ಜವಾಬುದಾರರಾಗಿರಬೇಕು. ಆದರೆ ಪೊಲೀಸರು ಕೇವಲ ಆಡಳಿತ ಪಕ್ಷದ ಒಬ್ಬ ವಕ್ತಾರ ಸಲ್ಲಿಸಿದ ಮಾನನಷ್ಟದ ಖಾಸಗಿ ದೂರಿನ ಮೇಲಷ್ಟೇ ಸಂಪೂರ್ಣವಾಗಿ ಆಧರಿಸಿ ತಕ್ಷಣವೆ ಮತ್ತು ಲಂಗುಲಗಾಮಿಲ್ಲದೆ ಸಂಪಾದಕರ ಮನೆಗಳ ಶೋಧನೆಯನ್ನು ನಡೆಸುವುದರಲ್ಲಿ ದುರುದ್ದೇಶದ ವಾಸನೆ ಬರುತ್ತದೆ” ಎಂದು ಡಿಜಿಪಬ್ ಹೇಳಿದೆ.
ಈ ಪೋಲಿಸ್ ಶೋಧಗಳನ್ನು “ದಿ ವೈರ್ ಹೊಂದಿರುವ ಗೌಪ್ಯ ಮತ್ತು ಸೂಕ್ಷ್ಮ ಮಾಹಿತಿಯನ್ನು ವಶಪಡಿಸಿಕೊಳ್ಳಲು ಮತ್ತು ನಕಲು ಮಾಡಲು ನೆಪವಾಗಿ ಬಳಸುವ” ಅಪಾಯವಿದೆ ಎಂದೂ ಡಿಜಿಪಬ್ ಗಂಭೀರ ಕಳವಳವನ್ನು ವ್ಯಕ್ತಪಡಿಸಿದೆ. ಈ ಪೋಲಿಸ್ ತನಿಖೆಯು “ಭಾರತದಲ್ಲಿ ಈಗಾಗಲೇ ಅಪಾಯಕ್ಕೀಡು ಮಾಡಿರುವ ಪತ್ರಿಕೋದ್ಯಮ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುವ ಸಾಧನ” ಆಗಬಹುದು ಎಂದು ಅದು ಆತಂಕ ವ್ಯಕ್ತಪಡಿಸಿದೆ.
ತಮ್ಮ ಪ್ರಮುಖ ತಂತ್ರಜ್ಞಾನ ತಜ್ಞ ದೇವೇಶ್ ಕುಮಾರ್ ತಮ್ಮನ್ನು “ವಂಚಿಸಿದ್ದಾರೆ” ಎಂದಿರುವ ದಿ ವೈರ್, ಈ ಸರಣಿಯನ್ನು ಹಿಂತೆಗೆದುಕೊಳ್ಳುವುದರ ಜೊತೆಗೆ ತನ್ನ ಅಪಾರ ಓದುಗರ ಕ್ಷಮೆ ಯಾಚಿಸುವುದಲ್ಲದೆ, ಇಡೀ ವ್ಯವಹಾರದ ಬಗ್ಗೆ ಸರಿಯಾದ ಶ್ರದ್ಧೆಯಿಂದ ಆಂತರಿಕ ವಿಚಾರಣೆಯನ್ನು ನಡೆಸುವುದಾಗಿಯೂ ಹೇಳಿದೆ.
ಯಾವುದೇ ನ್ಯಾಯಪೂರ್ಣ ತನಿಖೆ ಕಾನೂನಿನ ನಿಯಮಗಳನ್ನು ಪಾಲಿಸಬೇಕು, ಅದನ್ನು ಪತ್ರಕಾರಿತೆಯನ್ನು ಅಪರಾಧೀಕರಿಸುವ ಉದ್ದೇಶಕ್ಕೆ ಬಳಿಸಿಕೊಳ್ಳಬಾರದು ಎಂದು ಡಿಜಿಪಬ್ ಹೇಳಿದೆ.