ಜನಮತ2023 : ಕರ್ನಾಟಕದಲ್ಲಿ ಬಿಜೆಪಿ ಒಮ್ಮೆಯೂ ಗೆಲ್ಲದ 53 ಕ್ಷೇತ್ರಗಳು!

ಗುರುರಾಜ ದೇಸಾಯಿ

 

ಒಂದು ಅಚ್ಚರಿಯ ಸಂಗತಿ ಏನೆಂದರೆ ಬಿಜೆಪಿ ಇಲ್ಲಿಯವರೆಗೆ ನಡೆದ ಚುನಾವಣೆಗಳಲ್ಲಿ ಒಮ್ಮೆಯೂ ಗೆಲ್ಲದ 53 ಕ್ಷೇತ್ರಗಳಿವೆ. ಆ ಕ್ಷೇತ್ರಗಳಲ್ಲಿ ಬಿಜೆಪಿ ಎರಡನೇ, ಮೂರನೇ ಹಾಗೂ ನಾಲ್ಕನೇ ಸ್ಥಾನಕ್ಕೂ ತಳ್ಳಲ್ಪಟ್ಟಿದೆ.  ದಕ್ಷಿಣ ಕರ್ನಾಟಕ, ಹಳೇ ಮೈಸೂರು , ಕಲ್ಯಾಣ ಕರ್ನಾಟಕದ ಕೆಲ ಪ್ರದೇಶಗಳಲ್ಲಿ ಬಿಜೆಪಿಗೆ ವಿಶೇಷವಾಗಿ ವಿಧಾನಸಭಾ ಚುನಾವಣೆಯಲ್ಲಿ ಬಹಳ ಹಿಂದಿನಿಂದಲೂ ನೆಲೆ ಕಂಡುಕೊಳ್ಳಲು ಸಾಧ್ಯವಾಗಿಲ್ಲ.

ಈ ಬಾರಿಯ ಚುನಾವಣೆಯಲ್ಲಿ 130 ಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದು ಅಧಿಕಾರವನ್ನು ರಚಿಸಲಿದ್ದೇವೆ ಎಂದು ಬಿಜೆಪಿ ಬೀಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಬಹುತೇಕ ಮಾಧ್ಯಮಗಳು ಬಿಜೆಪಿಯ ಪರ ತುತ್ತೂರಿ ಊದುತ್ತಿವೆ. 2006 ರಲ್ಲಿ  ಆದ ರಾಜಕೀಯ ಬೆಳವಣಿಗೆಯ ಲಾಭ ಪಡೆದ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತಲೆ ಬಂದಿದೆ. (2013ರ ಚುನಾವಣೆ ಹೊರತು ಪಡಿಸಿ) ರಾಜ್ಯದಲ್ಲಿ ಬಿಜೆಪಿ ಇದುವರೆಗೂ ಬಹುಮತಕ್ಕೆ ಬೇಕಾದ 113 ಸ್ಥಾನಗಳ ಗುರಿಯನ್ನು ಎಂದಿಗೂ ಮುಟ್ಟಲ್ಲ. ಅಧಿಕಾರ ರಚಿಸಲು ಸ್ಪಷ್ಟ ಬಹುಮತ ಸಿಗದ ಕಾರಣ ಆಪರೇಶನ್‌ ಕಮಲದ ಮೂಲಕ  ಅಧಿಕಾರದ ರುಚಿ ಉಣ್ಣುತ್ತಲೆ ಬಂದಿದೆ.

1983ರಲ್ಲಿ 18 ಸೀಟು ಗೆದ್ದ ಬಿಜೆಪಿ ಜನತಾಪಕ್ಷಕ್ಕೆ ಬೆಂಬಲ ನೀಡಿತ್ತು. ಆದರೆ ಎರಡೇ ವರ್ಷಕ್ಕೆ (1985ರಲ್ಲಿ) ನಿಮ್ಮ ಸಹವಾಸ ಬೇಕಿಲ್ಲ ಎಂದ ಜನತಾ ಪಕ್ಷ ಸರ್ಕಾರ ವಿಸರ್ಜಿಸಿ ಮತ್ತೆ ಚುನಾವಣೆ ಎದುರಿಸಿ ಸ್ವತಂತ್ರವಾಗಿ ಅಧಿಕಾರ ಹಿಡಿದಿತ್ತು. ಆ ನಂತರ 2004ರಲ್ಲಿ 79 ಸ್ಥಾನ ಗೆದ್ದರೂ ಪ್ರತಿಪಕ್ಷದಲ್ಲಿ ಕೂರಬೇಕಾಗಿತ್ತು. 2006ರಲ್ಲಿ ಜೆಡಿಎಸ್ ಪಕ್ಷಕ್ಕೆ ಬೆಂಬಲ ಸೂಚಿಸುವ ಮೂಲಕ ಅಧಿಕಾರದಲ್ಲಿತ್ತು. ಆದರೆ ಬಿಜೆಪಿ ಹೈಕಮಾಂಡ್‌ ಕುತಂತ್ರದಿಂದಾಗಿ ಕುಮಾರಸ್ವಾಮಿ ಯಡಿಯೂರಪ್ಪರಿಗೆ ಅಧಿಕಾರ ಹಸ್ತಾಂತರಿಸದೇ ಸರ್ಕಾರ ವಿಸರ್ಜಿಸಬೇಕಾಯಿತು. ಇದರಿಂದ ಯಡಿಯೂರಪ್ಪನವರ ಮೇಲಿನ ಅನುಕಂಪದಿಂದ 2008ರಲ್ಲಿ ಬಿಜೆಪಿ 110 ಸ್ಥಾನ ಗೆದ್ದಿತ್ತು. ಆದರೂ ಬಹುಮತಕ್ಕೆ 03 ಸೀಟುಗಳ ಕೊರತೆಯಿತ್ತು. ಆಗ ಯಡಿಯೂರಪ್ಪನವರು ಆಪರೇಷನ್ ಕಮಲ ನಡೆಸಿ ಅಧಿಕಾರಕ್ಕೆ ಬಂದರು.

ಇನ್ನು 2013ರಲ್ಲಿ ಬಿಜೆಪಿ 40 ಸ್ಥಾನಗಳಿಗೆ ಕುಸಿದಿತ್ತು. 2018ರಲ್ಲಿ 104 ಸ್ಥಾನ ಗೆದ್ದರೂ ಸರಳ ಬಹುಮತ ಸಿಗದೇ ವಿರೋಧ ಪಕ್ಷವಾಗಿತ್ತು. ಆದರೆ 2019ರಲ್ಲಿ ಮತ್ತೆ ಆಪರೇ‍ಷನ್ ಕಮಲ ನಡೆಸಿ ಕಾಂಗ್ರೆಸ್-ಜೆಡಿಎಸ್‌ ಸಮ್ಮಿಶ್ರ ಸರ್ಕಾರವನ್ನು ಕೆಡವಿ ಅಧಿಕಾರಕ್ಕೆ ಬಂದಿದೆ.

ಒಂದು ಅಚ್ಚರಿಯ ಸಂಗತಿ ಏನೆಂದರೆ ಬಿಜೆಪಿ ಇಲ್ಲಿಯವರೆಗೆ ನಡೆದ ಚುನಾವಣೆಗಳಲ್ಲಿ ಒಮ್ಮೆಯೂ ಗೆಲ್ಲದ 53 ಕ್ಷೇತ್ರಗಳಿವೆ. ಆ ಕ್ಷೇತ್ರಗಳಲ್ಲಿ ಬಿಜೆಪಿ ಎರಡನೇ, ಮೂರನೇ ಹಾಗೂ ನಾಲ್ಕನೇ ಸ್ಥಾನಕ್ಕೂ ತಳ್ಳಲ್ಪಟ್ಟಿದೆ.  ದಕ್ಷಿಣ ಕರ್ನಾಟಕ, ಹಳೇ ಮೈಸೂರು , ಕಲ್ಯಾಣ ಕರ್ನಾಟಕದ ಕೆಲ ಪ್ರದೇಶಗಳಲ್ಲಿ ಬಿಜೆಪಿಗೆ ವಿಶೇಷವಾಗಿ ವಿಧಾನಸಭಾ ಚುನಾವಣೆಯಲ್ಲಿ ಬಹಳ ಹಿಂದಿನಿಂದಲೂ ನೆಲೆ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಈ ಕ್ಷೇತ್ರಗಳಲ್ಲಿ ಗೆಲ್ಲಲು ನಾನಾ ತಂತ್ರಗಳನ್ನು ಅನುಸರಿಸುತ್ತಿದ್ದರೂ ಬಿಜೆಪಿ ಗೆಲ್ಲಲು ಸಾಧ್ಯವಾಗಿಲ್ಲ.  ಆ ಕ್ಷೇತ್ರಗಳು ಯಾವುವು ಎಂಬುದರ ಕಡೆ ಗಮನ ಹರಿಸೋಣ.

ಕಲ್ಯಾಣ ಕರ್ನಾಟಕ : ಕಲ್ಯಾಣ ಕರ್ನಾಟಕದ ಬಹಳಷ್ಟು ಕಡೆಗಳಲ್ಲಿ ಬಿಜೆಪಿ ಗೆಲ್ಲಲು ಸಾಧ್ಯವಾಗಿಲ್ಲ. ಆ ಕ್ಷೇತ್ರಗಳ ಕುರಿತಾದ ಮಾಹಿತಿ ಈ ಕೆಳಗಿನಂತಿದೆ. 

ಅಫಜಲಪುರ: ಕಲ್ಯಾಣ ಕರ್ನಾಟಕದ ಭಾಗದ ಅಫಜಲಪುರ ಕ್ಷೇತ್ರವು ಕಲಬುರಗಿ ಜಿಲ್ಲೆಯಲ್ಲಿದೆ. 1957ರಿಂದ ಕಾಂಗ್ರೆಸ್​ ಒಂಬತ್ತು ಬಾರಿ ಗೆದ್ದಿದೆ. ಬಿಜೆಪಿ 1994ರಿಂದ ಚುನಾವಣೆಗೆ ಸ್ಪರ್ಧಿಸಿದೆ. ಆದರೆ ಈ ಕ್ಷೇತ್ರದಲ್ಲಿ ಗೆಲ್ಲಲು ವಿಫಲವಾಗಿದೆ. 2008 ಮತ್ತು 2018 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಎರಡನೇ ಸ್ಥಾನವನ್ನು ಉಳಿಸಿಕೊಂಡಿದೆ. 2013ರಲ್ಲಿ ಬಿಜೆಪಿ 5ನೇ ಸ್ಥಾನಕ್ಕೆ ಕುಸಿದಿತ್ತು.

ಶಹಾಪುರ : ಕಲ್ಯಾಣ ಕರ್ನಾಟಕ ಪ್ರದೇಶದ ಯಾದಗಿರಿ ಜಿಲ್ಲೆಯ ಶಹಾಪುರ ವಿಧಾನಸಭಾ ಕ್ಷೇತ್ರವು ಭಾರತದ ಕರ್ನಾಟಕ ವಿಧಾನಸಭೆಯ ಸ್ಥಾನಗಳಲ್ಲಿ ಒಂದಾಗಿದೆ. ಇದು ರಾಯಚೂರು ಲೋಕಸಭಾ ಕ್ಷೇತ್ರದ ಒಂದು ಭಾಗವಾಗಿದೆ ಕಾಂಗ್ರೆಸ್‌ 8 ಬಾರಿ, ಜನತಾದಳ 2 ಬಾರಿ, ಸ್ವತಂತ್ರ ಅಭ್ಯರ್ಥಿಗಳು 2 ಬಾರಿ, ಕೆಜಿಪಿ 1 ಬಾರಿ ಗೆಲುವು ಸಾಧಿಸಿದೆ. 2013 ರ ಚುನಾವಣೆಯಲ್ಲಿ ಬಿಜೆಪಿ 7 ನೇ ಸ್ಥಾನಕ್ಕೆ ಕುಸಿದಿತ್ತು.  2018 ರಲ್ಲಿ 2ನೇ ಸ್ಥಾನದಲ್ಲಿತ್ತು.

ಗುರುಮಿಟ್ಕಲ್​​: ಕಲ್ಯಾಣ ಕರ್ನಾಟಕ ಪ್ರದೇಶದ ಯಾದಗಿರಿ ಜಿಲ್ಲೆಯ ಗುರುಮಿಟ್ಕಲ್​ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಪ್ರಬಲ ಹಿಡಿತವಾಗಿದೆ. ಇಲ್ಲಿ ಬಿಜೆಪಿ ಎಂದಿಗೂ ಬಹುಮತ ಪಡೆದಿಲ್ಲ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ 1972ರಿಂದ 2004 ರವರೆಗೆ ಇದೇ ಕ್ಷೇತ್ರದಿಂದ ಗೆದ್ದು ಪ್ರತಿನಿಧಿಸಿದ್ದರು.

ಮಾನ್ವಿ : ಕಲ್ಯಾಣ ಕರ್ನಾಟಕ ಪ್ರದೇಶದ ರಾಯಚೂರು ಜಿಲ್ಲೆಯ ಮಾನ್ವಿಯಲ್ಲಿ ಬಿಜೆಪಿ  ಒಂದು ಬಾರಿಯೂ ಗೆದ್ದಿಲ್ಲ. ಕಾಂಗ್ರೆಸ್‌ 10 ಬಾರಿ, ಜನತಾದಳ 1, ಸ್ವತಂತ್ರ ಅಭ್ಯರ್ಥಿ 1 ಬಾರಿ ಗೆಲುವು ಸಾಧಿಸಿದ್ದಾರೆ. 2013 ರಲ್ಲಿ ಬಿಜೆಪಿ 5 ಸ್ಥಾನದಲ್ಲಿ, 2018 ರಲ್ಲಿ 3 ನೇ ಸ್ಥಾನದಲ್ಲಿತ್ತು.

ಸಿಂಧನೂರು : ಕಲ್ಯಾಣ ಕರ್ನಾಟಕ ಪ್ರದೇಶದ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ, ಒಮ್ಮೆಯೂ ಬಿಜೆಪಿ ಗೆಲುವು ಸಾಧಿಸಿಲ್ಲ 6 ಬಾರಿ ಕಾಂಗ್ರೆಸ್‌, 4 ಬಾರಿ ಜೆಡಿಎಸ್‌, 2 ಬಾರಿ ಸ್ವತಂತ್ರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. 2013ರ ಚುನಾವಣೆಯಲ್ಲಿ ಬಿಜೆಪಿ 5 ನೇ ಹಾಗೂ 2018ರಲ್ಲಿ 3 ನೇ ಸ್ಥಾನ ಪಡೆದಿತ್ತು.

ಕೊಪ್ಪಳ: ಕಲ್ಯಾಣ ಕರ್ನಾಟಕ ಭಾಗದ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸುವಲ್ಲಿ ಸಾಧ್ಯವಾಗಿಲ್ಲ. ಕರಡಿ ಸಂಗಣ್ಣ 2008ರಲ್ಲಿ ಜೆಡಿಎಸ್‌ನಿಂದ ಗೆದ್ದಿದ್ದರು. ನಂತರ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದರು. 9 ಬಾರಿ ಕಾಂಗ್ರೆಸ್‌, ಜೆಡಿಎಸ್‌, ಜೆಡಿಯು 1 ಬಾರಿ, ಸ್ವತಂತ್ರ ಅಭ್ಯರ್ಥಿ ಗೆದ್ದಿದ್ದಾರೆ. 2013 ಹಾಗೂ 2018ರ ಚುನಾವಣೆಯಲ್ಲಿ ಬಿಜೆಪಿ 2 ನೇ ಸ್ಥಾನದಲ್ಲಿತ್ತು.

ಇದನ್ನೂ ಓದಿಬಿಜೆಪಿಯ ಮೇಲೆ ಹಗರಣದ ತೂಗುಕತ್ತಿ!

ಹಳೇ ಮೈಸೂರು ಪ್ರಾಂತ : ಹಳೇ ಮೈಸೂರು ಪ್ರಾಂತ್ಯದಲ್ಲಿನ ಬಹಳಷ್ಟು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿಲ್ಲ. ಕೆಲವೆಡೆ ಅಭ್ಯರ್ಥಿಗಳಿಗೆ ಪರದಾಡಿದ ಕಥೆಯೂ ಇದೆ. ಅಂತಹ ಕ್ಷೇತ್ರಗಳು ಯಾವವು ನೋಡೋಣ ಬನ್ನಿ.

ಬಾಗೇಪಲ್ಲಿ: ಈ ಕ್ಷೇತ್ರವು ಹಳೆ ಮೈಸೂರು ಪ್ರಾಂತ್ಯದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಸಿಪಿಐ(ಎಂ) ನಡುವಿನ ಕಾದಾಟಕ್ಕೆ ಸಾಕ್ಷಿಯಾಗಿರುವ ಏಕೈಕ ಕ್ಷೇತ್ರ ಇದಾಗಿದೆ. ಇಲ್ಲಿ ಬಿಜೆಪಿಗೆ ಗೆಲ್ಲುವುದು ಅಷ್ಟೇ ಅಲ್ಲ, ಎರಡನೇ ಸ್ಥಾನಕ್ಕೆ ಬರಲೂ ಸಾಧ್ಯವಾಗಿಲ್ಲ. 2018ರ ಚುನಾವಣೆಯಲ್ಲಿ ಬಿಜೆಪಿ ಶೇ.2.52 ಮತ ಗಳಿಸಿತ್ತು. 2008ರಲ್ಲಿ ಮಾತ್ರ ಶೇ.20.90 ಮತಗಳೊಂದಿಗೆ 4ನೇ ಸ್ಥಾನ ಪಡೆದು ಗಮನ ಸೆಳೆದಿತ್ತು, ಇಲ್ಲಿಯವರೆಗೆ 7 ಬಾರಿ ಕಾಂಗ್ರೆಸ್‌, ಸಿಪಿಐಎಂ 3 ಬಾರಿ, ಸ್ವತಂತ್ರ ಅಭ್ಯರ್ಥಿಗಳು 2 ಬಾರಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ 2013 ರಲ್ಲಿ 8, 2018 ರಲ್ಲಿ 4 ನೇ ಸ್ಥಾನದಲ್ಲಿತ್ತು.

ಚಿಂತಾಮಣಿ: ಚಿಕ್ಕಬಳ್ಳಾಪುರ ಜಿಲ್ಲೆಯ ಮತ್ತೊಂದು ಕ್ಷೇತ್ರವಾದ ಚಿಂತಾಮಣಿಯಲ್ಲೂ ಬಿಜೆಪಿ ಗೆಲುವು ಪಡೆಯಲು ಸಾಧ್ಯವಾಗಿಲ್ಲ. 2004ರ ವಿಧಾನಸಭಾ ಚುನಾವಣೆಯಲ್ಲಿ ಶೇ.44.81ರಷ್ಟು ಮತಗಳೊಂದಿಗೆ ಬಿಜೆಪಿಗೆ 2ನೇ ಸ್ಥಾನ ಪಡೆಯಲು ಸಫಲವಾಗಿತ್ತು. 8 ಬಾರಿ ಕಾಂಗ್ರೆಸ್‌, 3 ಬಾರಿ ಸ್ವತಂತ್ರ, ಜನತಾ ಪಕ್ಷ, ಜನತಾದಳ 1 ಬಾರಿ ಗೆಲುವು ಸಾಧಿಸಿದೆ. 2013 ರಲ್ಲಿ ಬಿಜೆಪಿ 4 ನೇ ಸ್ಥಾನ ಹಾಗೂ 2018 ರಲ್ಲಿ 2 ನೇ ಸ್ಥಾನದಲ್ಲಿತ್ತು.

ಸಿಡ್ಲಘಟ್ಟ : ಚಿಕ್ಕಬಳ್ಳಾಪುರ ಜಿಲ್ಲೆಯ ಮತ್ತೊಂದು ಕ್ಷೇತ್ರವಾದ ಸಿಡ್ಲಘಟ್ಟ ಬಿಜೆಪಿ ಗೆಲುವು ಪಡೆಯಲು ಸಾಧ್ಯವಾಗಿಲ್ಲ. 11 ಬಾರಿ ಕಾಂಗ್ರೆಸ್‌, ಜೆಡಿಎಸ್‌ 2 ಬಾರಿ, ಜನತಾ ಪಕ್ಷ 1 ಬಾರಿ ಗೆಲುವು ಸಾಧಿಸಿದೆ. 2013 ಹಾಗೂ 2018 ರಲ್ಲಿ ಬಿಜೆಪಿ 5 ನೇ ಸ್ಥಾನದಲ್ಲಿತ್ತು.

ಗೌರಿಬಿದನೂರು: ಚಿಕ್ಕಬಳಾಪುರ ಜಿಲ್ಲೆಯ ಗೌರಿಬಿದನೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಾಬಲ್ಯವಿದೆ. 1994ರಲ್ಲಿ ಬಿಜೆಪಿ ಕೇವಲ ಶೇ.5.44ರಷ್ಟು ಮತಗಳನ್ನು ಗಳಿಸಿತ್ತು. 2008ರಿಂದ ಪಕ್ಷದ ಬಲವಾಗಿತ್ತಿದೆ. ಆದರೆ, ಗೆಲ್ಲಲು ವಿಫಲವಾಗಿದೆ. 6 ಬಾರಿ ಕಾಂಗ್ರೆಸ್‌, ಜನತಾ ಪಕ್ಷ 2 ಬಾರಿ, ಸ್ವತಂತ್ರ ಅಭ್ಯರ್ಥಿಗಳು 5 ಬಾರಿ, ಜನತಾದಳ 1 ಬಾರಿ ಗೆಲುವು ಸಾಧಿಸಿದೆ. 2013 ಹಾಗೂ 2018 ರಲ್ಲಿ ಬಿಜೆಪಿ 3ನೇ ಸ್ಥಾನದಲ್ಲಿತ್ತು.

ಕೋಲಾರ: ಹಳೆಯ ಮೈಸೂರು ಪ್ರದೇಶದ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ 1987ರಿಂದ ಬಿಜೆಪಿ ಗೆಲುವು ಸಾಧಿಸುವಲ್ಲಿ ಸಾಧ್ಯವಾಗಿಲ್ಲ.  5 ಬಾರಿ ಕಾಂಗ್ರೆಸ್‌,  7 ಬಾರಿ ಸ್ವತಂತ್ರ ಅಭ್ಯರ್ಥಿಗಳು, 1 ಬಾರಿ ಜೆಡಿಯು ಗೆಲುವು ಸಾಧಿಸಿದೆ. 2013 ಹಾಗೂ 2018 ರಲ್ಲಿ ಬಿಜೆಪಿ 4 ನೇ ಸ್ಥಾನದಲ್ಲಿತ್ತು.

ಗುಬ್ಬಿ: ಹಳೇ ಮೈಸೂರು ಪ್ರದೇಶದ ತುಮಕೂರು ಜಿಲ್ಲೆಯ ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ 2008 ಮತ್ತು 2018ರ ಚುನಾವಣೆಯಲ್ಲಿ ಬಿಜೆಪಿ ಎರಡನೇ ಸ್ಥಾನ ಪಡೆದಿತ್ತು. 2018 ರಲ್ಲಿ ಬಿಜೆಪಿಯನ್ನು ಶೇ.5.86ರಷ್ಟು ಮತಗಳ ಕಡಿಮೆ ಅಂತರದಿಂದ ಕಾಂಗ್ರೆಸ್ ಸೋಲಿಸಿತ್ತು.  7 ಬಾರಿ ಕಾಂಗ್ರೆಸ್‌, 5 ಬಾರಿ ಜನತಾದಳ, 1 ಬಾರಿ ಜನತಾಪಕ್ಷ, 3 ಬಾರಿ ಸ್ವತಂತ್ರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಕೊರಟಗೆರೆ: ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ಬಿಜೆಪಿಗೆ ಎರಡನೇ ಸ್ಥಾನ ಪಡೆಯಲು ಕೂಡ ಇದುವರೆಗೆ ಆಗಿಲ್ಲ. 9 ಬಾರಿ ಕಾಂಗ್ರೆಸ್‌, ಜನತಾದಳ 4 ಬಾರಿ, ಜನತಾಪಕ್ಷ 2 ಬಾರಿ ಗೆಲುವು ಸಾಧಿಸಿದೆ. ಬಿಜೆಪಿ 2013 ರಲ್ಲಿ 4, 2018 ರಲ್ಲಿ 3 ನೇ ಸ್ಥಾನದಲ್ಲಿತ್ತು.

ಕುಣಿಗಲ್: ತುಮಕೂರು ಜಿಲ್ಲೆಯ ಕುಣಿಗಲ್​ ಕ್ಷೇತ್ರವು ಕಾಂಗ್ರೆಸ್​, ಜೆಡಿಎಸ್​ ಕಾದಾಟಕ್ಕೆ ಕಾರಣವಾಗಿದೆ. ಈಗ ಬಿಜೆಪಿ ಸಹ ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳುತ್ತಿದ್ದು, ತ್ರಿಕೋನ ಸ್ಪರ್ಧೆಯನ್ನು ಹೊಂದಿದೆ. 2008 ರಿಂದ ಬಿಜೆಪಿ ಈ ಕ್ಷೇತ್ರದಲ್ಲಿ ಎರಡನೇ ಸ್ಥಾನವನ್ನು ಕಾಯ್ದುಕೊಂಡಿದೆ. 9 ಬಾರಿ ಕಾಂಗ್ರೆಸ್‌, 2 ಬಾರಿ ಜನತಾದಳ, 2 ಬಾರಿ ಜನತಾ ಪಕ್ಷ ಗೆಲುವು ಸಾಧಿಸಿದೆ.

ಮಧುಗಿರಿ: ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ 1994 ರಿಂದ ಬಿಜೆಪಿ ಸ್ಪರ್ಧಿಸುತ್ತಿದ್ದು ಇಲ್ಲಿ ಎರಡನೇ ಸ್ಥಾನವನ್ನೂ ತಲುಪಲು ಸಹ ಸಾಧ್ಯವಾಗಿಲ್ಲ. ಕಾಂಗ್ರೆಸ್‌ 9 ಬಾರಿ, 4 ಬಾರಿ ಜನತಾದಳ, 2 ಬಾರಿ ಜನತಾ ಪಕ್ಷ ಗೆಲುವು ಸಾಧಿಸಿದೆ. 2013 ರಲ್ಲಿ 6, 2018 ರಲ್ಲಿ 3 ಸ್ಥಾನ ಪಡೆದಿತ್ತು.

ಕೃಷ್ಣರಾಜನಗರ: ಮೈಸೂರು ಜಿಲ್ಲೆಯ ಕೃಷ್ಣರಾಜನಗರ ಕ್ಷೇತ್ರವು ಜೆಡಿಎಸ್‌, ಕಾಂಗ್ರೆಸ್​ನ ಭದ್ರಕೋಟೆಯಾಗಿದೆ. 6 ಬಾರಿ ಕಾಂಗ್ರೆಸ್‌, 5 ಬಾರಿ ಜನತಾದಳ, 2 ಬಾರಿ ಜನತಾ ಪಕ್ಷ ಗೆಲುವು ಸಾಧಿಸಿದೆ.

ಹೆಚ್ಡಿ ಕೋಟೆ: ಮೈಸೂರು ಜಿಲ್ಲೆಯಲ್ಲಿ ಹೆಗ್ಗಡದೇವನಕೋಟೆ (ಹೆಚ್​ಡಿ ಕೋಟೆ) ಕ್ಷೇತ್ರದಲ್ಲಿ 1967ರಿಂದ ಇಲ್ಲಿಯವರೆಗೆ ಬಿಜೆಪಿ ಒಮ್ಮೆಯೂ ಗೆದ್ದಿಲ್ಲ. 2004 ಮತ್ತು 2008ರ ಚುನಾವಣೆಯಲ್ಲಿ ಮಾತ್ರ ಎರಡನೇ ಸ್ಥಾನ

ಚಾಮುಂಡೇಶ್ವರಿ: ಹಳೆ ಮೈಸೂರು ಪ್ರದೇಶದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್‌ನ ಜಿಟಿ ದೇವೇಗೌಡ ಹಿಡಿತ ಹೊಂದಿದ್ದಾರೆ. 2018 ರ ವಿಧಾನಸಭಾ ಚುನಾವಣೆಯಲ್ಲಿ ಸಿಎಂ ಆಗಿದ್ದ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಚಾಮುಂಡೇಶ್ವರಿಯಿಂದ ಸ್ಪರ್ಧಿಸಿದ್ದರು. ಆದರೆ, ಜಿಟಿ ದೇವೇಗೌಡ ವಿರುದ್ಧ 36,042 ಮತಗಳ ಅಂತರದಿಂದ ಸೋತಿದ್ದರು. ಬಿಜೆಪಿ ಇಲ್ಲಿ ಖಾತೆ ತೆರೆಯಲು ಸಾಧ್ಯವಾಗಿಲ್ಲ. 6 ಬಾರಿ ಕಾಂಗ್ರೆಸ್‌, ಜನತಾದಳ 3 ಬಾರಿ ಗೆಲುವು ಸಾಧಿಸಿದೆ.  2013 ರಲ್ಲಿ 4 ನೇ, 2018 ರಲ್ಲಿ 3 ನೇ ಸ್ಥಾನದಲ್ಲಿತ್ತು.

ಕೊಳ್ಳೇಗಾಲ: ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ಬಿಜೆಪಿ ಪ್ರತಿ ಚುನಾವಣೆಯಲ್ಲಿ ಬೇರೆ ಬೇರೆ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದರೂ ಖಾತೆ ತೆರೆಯುವಲ್ಲಿ ವಿಫಲವಾಗಿದೆ. 10 ಬಾರಿ ಕಾಂಗ್ರೆಸ್‌, ಜನತಾ ಪಕ್ಷ 2 ಬಾರಿ, ಜನತಾದಳ, ಬಿಎಸ್‌ಪಿ 1 ಬಾರಿ ಗೆಲುವು ಸಾಧಿಸಿದೆ.  2013 ರಲ್ಲಿ 4 ನೇ, 2018 ರಲ್ಲಿ 3ನೇ ಸ್ಥಾನದಲ್ಲಿತ್ತು. ಬಿಎಸ್‌ಪಿ ಯಿಂದ ಗೆದ್ದಿದ್ದ ಎನ್‌. ಮಹೇಶ್‌ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.

ಹನೂರು: ಹಳೆ ಮೈಸೂರು ಪ್ರಾಂತ್ಯದ ಚಾಮರಾಜನಗರ ಜಿಲ್ಲೆಯ ಹನೂರು. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಾಬಲ್ಯವಿದೆ. 2018ರ ಚುನಾವಣೆಯಲ್ಲಿ ಮಾತ್ರ ಬಿಜೆಪಿ ಶೇ.33.69 ರಷ್ಟು ಮತಗಳನ್ನು ಪಡೆಯುವ ಮೂಲಕ ಎರಡನೇ ಸ್ಥಾನ ಗಳಿಸಿತ್ತು.

ಹೆಚ್ಡಿ ಕೋಟೆ: ಮೈಸೂರು ಜಿಲ್ಲೆಯಲ್ಲಿ ಹೆಗ್ಗಡದೇವನಕೋಟೆ (ಹೆಚ್​ಡಿ ಕೋಟೆ) ಕ್ಷೇತ್ರದಲ್ಲಿ 1967ರಿಂದ ಇಲ್ಲಿಯವರೆಗೆ ಬಿಜೆಪಿ ಒಮ್ಮೆಯೂ ಗೆದ್ದಿಲ್ಲ. 2004 ಮತ್ತು 2008ರ ಚುನಾವಣೆಯಲ್ಲಿ ಮಾತ್ರ ಎರಡನೇ ಸ್ಥಾನ ಪಡೆದಿತ್ತು.

ಮದ್ದೂರು: ಮಂಡ್ಯ ಜಿಲ್ಲೆಯ ಮದ್ದೂರು ಕ್ಷೇತ್ರದಲ್ಲಿ ಬಿಜೆಪಿ ಮೊದಲಿನಿಂದಲೂ ತನ್ನ ಖಾತೆಯನ್ನು ತೆರೆದಿಲ್ಲ. 2018ರ ಚುನಾವಣೆಯಲ್ಲಿ ಬಿಜೆಪಿ ಠೇವಣಿ ಕಳೆದುಕೊಂಡಿತ್ತು. 7 ಬಾರಿ ಕಾಂಗ್ರೆಸ್‌, 2 ಬಾರಿ ಜನತಾಪಕ್ಷ, 4 ಬಾರಿ ಜನತಾದಳ ಗೆಲುವು ಸಾಧಿಸಿದೆ. 2013 ರಲ್ಲಿ ಬಿಜೆಪಿ 6 ನೇ ಸ್ಥಾನ, 2018 ರಲ್ಲಿ 3ನೇ ಸ್ಥಾನದಲ್ಲಿತ್ತು.

ಮಳವಳ್ಳಿ: ಹಳೇ ಮೈಸೂರು ಪ್ರದೇಶದ ಭಾಗವಾಗಿರುವ ಮಂಡ್ಯ ಜಿಲ್ಲೆಯ ಮಳವಳ್ಳಿ ಕ್ಷೇತ್ರದಲ್ಲೂ ಬಿಜೆಪಿ ಖಾತೆ ತೆರೆದಿಲ್ಲ. 6  ಬಾರಿ ಕಾಂಗ್ರೆಸ್‌, ಜನತಾ ಪಕ್ಷ 2 ಬಾರಿ, ಜನತಾದಳ 4 ಬಾರಿ ಗೆಲುವು ಸಾಧಿಸಿದೆ. 2013 ರಲ್ಲಿ ಬಿಜೆಪಿ 9ನೇ ಸ್ಥಾನದಲ್ಲಿತ್ತು. 2018 ರಲ್ಲಿ 3ನೇ ಸ್ಥಾನದಲ್ಲಿತ್ತು.

ಮಂಡ್ಯ: ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಖಾತೆ ತೆರೆಯಲು ಸಾಧ್ಯವಾಗಿಲ್ಲ. ಈಗ ಜಿಲ್ಲೆಯಲ್ಲಿ ನೆಲೆಯೂರಲು ಎಲ್ಲ ರೀತಿಯ ಪ್ರಯತ್ನಗಳನ್ನು ಬಿಜೆಪಿ ನಡೆಸುತ್ತಿದೆ. ಮಂಡ್ಯ ಸ್ವತಂತ್ರ ಸಂಸದೆ ಹಾಗೂ ದಿ.ಅಂಬರೀಶ್ ಅವರ ಪತ್ನಿ ಸುಮಲತಾ ಈ ಬಾರಿ ಬಿಜೆಪಿಗೆ ಬೆಂಬಲ ನೀಡಿದ್ದು, ಇಲ್ಲಿ ಸ್ಪರ್ಧೆ ಕುತೂಹಲ ಮೂಡಿಸಿದೆ. 2013 ಹಾಗೂ 2018 ರಲ್ಲಿ ಬಿಜೆಪಿ 3ನೇ ಸ್ಥಾನದಲ್ಲಿತ್ತು.

ರಾಮನಗರ: ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್​ ಹಿಡಿತ ಹೊಂದಿದೆ. ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ 2004, 2008, 20013, 2018ರ ಚುನಾವಣೆಯಲ್ಲಿ ವಿಜಯಶಾಲಿಯಾಗಿದ್ದಾರೆ. ಇಲ್ಲಿ ಬಿಜೆಪಿ 2013 ಹಾಗೂ 2018ರ ಚುನಾವಣೆಯಲ್ಲಿ 3ನೇ ಸ್ಥಾನದಲ್ಲಿತ್ತು.

ಹಳಿಯಾಳ: ಹಳಿಯಾಳ ವಿಧಾನಸಭೆಯು ಉತ್ತರ ಕನ್ನಡ ಜಿಲ್ಲೆಯ ವ್ಯಾಪ್ತಿಗೆ ಬರುತ್ತದೆ. ಇದು ಕಿತ್ತೂರು ಕರ್ನಾಟಕ ಪ್ರದೇಶದ ಒಂದು ಭಾಗವಾಗಿದ್ದು, ಈ ಕ್ಷೇತ್ರದಲ್ಲೂ ಬಿಜೆಪಿ ಗೆದ್ದಿಲ್ಲ. 2018ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸುನೀಲ್ ಹೆಗಡೆ ಅವರನ್ನು ಶೇ.3.91ರಷ್ಟು ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಆರ್ ​ವಿ ದೇಶಪಾಂಡೆ ಸೋಲಿಸಿದ್ದರು.

ಹೊಳೆನರಸೀಪುರ: ಹಾಸನ ಜಿಲ್ಲೆಯ ಹೊಳೆನರಸೀಪುರ ಕ್ಷೇತ್ರ ಜೆಡಿಎಸ್ ಭದ್ರಕೋಟೆಯಾಗಿದೆ. ಈ ಕ್ಷೇತ್ರವನ್ನು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಪ್ರತಿನಿಧಿಸುತ್ತಿದ್ದರು. ಈಗ ಅವರ ಪುತ್ರ ಎಚ್.ಡಿ. ರೇವಣ್ಣ ಪ್ರತಿನಿಧಿಸುತ್ತಿದ್ದಾರೆ.

ಕನಕಪುರ: ಹಳೆ ಮೈಸೂರು ಭಾಗದ ರಾಮನಗರ ಜಿಲ್ಲೆಯ ಕನಕಪುರ ಕಾಂಗ್ರೆಸ್‌ ಭದ್ರಕೋಟೆಯಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಈ ಬಾರಿ ಬಿಜೆಪಿ ಮುಖಂಡ, ಸಚಿವ ಆರ್.ಅಶೋಕ್​ ಕಣಕ್ಕಿಳಿದಿದ್ದಾರೆ.

ಇದೇ ರೀತಿ ಕೋಲಾರ ಜಿಲ್ಲೆಯ ಮುಳಬಾಗಿಲು, ಶ್ರೀನಿವಾಸಪುರ, ಮಂಡ್ಯ ಜಿಲ್ಲೆಯ ನಾಗಮಂಗಲ, ಶ್ರೀರಂಗಪಟ್ಟಣ, ತುಮಕೂರು ಜಿಲ್ಲೆಯ ಪಾವಗಡ, ಬಳ್ಳಾರಿ ಜಿಲ್ಲೆಯ ಸಂಡೂರು, ಹಾಸನ ಜಿಲ್ಲೆಯ ಶ್ರವಣಬೆಳಗೊಳ, ಬೀದರ್‌ ದಕ್ಷಿಣ, ಯಮಕನಮರಡಿ, ಬ್ಯಾಟರಾಯನಪುರ, ಗಾಂಧಿನಗರ, ಕ್ಷೇತ್ರದಲ್ಲಿ ಇಂದಿಗೂ ಬಿಜೆಪಿ ಗೆಲುವು ಕಂಡಿಲ್ಲ. ಎಂಬುದು ಗಮನಾರ್ಹ ಸಂಗತಿಯಾಗಿದೆ.

70 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಸುಲಭವಾಗಿ ಮೇಲುಗೈ ಸಾಧಿಸುತ್ತಿದೆ. ಜೆಡಿಎಸ್‌ 15 ಸ್ಥಾನಗಳಲ್ಲಿ ಸುಲಭವಾಗಿ ಗೆಲುವು ಸಾಧಿಸಲಿದೆ. 70+53+15 = 138 ಕ್ಷೇತ್ರಗಳಲ್ಲಿ ಬಿಜೆಪಿಗೆ ಹಿನ್ನಡೆಯಾಗಲಿದ್ದು. ಅಧಿಕಾರಕ್ಕೆ ಬರುವುದು ಸುಲಭದ ಮಾತಲ್ಲ ಎಂದು ರಾಜಕೀಯ ಲೆಕ್ಕಚಾರ ನಡೆಯುತ್ತಿದೆ. ಹಾಗೊಂದುವೇಳೆ ಬಿಜೆಪಿ ಅಧಿಕಾರಕ್ಕೆ ಬಂದರೆ ಆಪರೇಷನ್‌ ಕಮಲದ ಮೂಲಕ ಅಧಿಕಾರಕ್ಕೆ ಬರಬಹುದು ಎಂದು ವಿಧಾನಸೌಧದ ತುಂಬ ಚರ್ಚೆಗಳು ನಡೆಯುತ್ತಿವೆ.

 

 

Donate Janashakthi Media

Leave a Reply

Your email address will not be published. Required fields are marked *