ಚಂಡೀಗಢ: ರೈತರು ನಡೆಸುತ್ತಿರುವ ಹೋರಾಟಕ್ಕೆ ತುಸು ಮಂಡಿಯೂರಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ, ದ್ವಿದಳ ಧಾನ್ಯಗಳು, ಮೆಕ್ಕೆಜೋಳ ಮತ್ತು ಹತ್ತಿಯನ್ನು ಸರ್ಕಾರಿ ಸಂಸ್ಥೆಗಳು ಎಂಎಸ್‌ಪಿ ದರದಲ್ಲಿ ಖರೀದಿಸಲಿದೆ ಎಂದು ಹೇಳಿದೆ. ಆದರೆ ಕೇಂದ್ರದ ಈ ಪ್ರಸ್ತಾವನೆಯನ್ನು ರೈತರ ಜೊತೆಗೆ ಚರ್ಚಿಸಲಾಗುವುದು ಎಂದು ರೈತ ಮುಖಂಡ ಸರ್ವಾನ್ ಸಿಂಗ್ ಪಂಧೇರ್ ಸೋಮವಾರ ಹೇಳಿದ್ದಾರೆ. ಅದಾಗ್ಯೂ, ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವ ಕಾನೂನು ರಚನೆಗಾಗಿ ನಡೆಸುತ್ತಿರುವ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.
ಶಂಭು ಗಡಿ ಭಾಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸರ್ವಾನ್ ಸಿಂಗ್, ಕೇಂದ್ರ ಸರ್ಕಾರ ನೀಡಿರುವ ಪ್ರಸ್ತಾವನೆ ಕುರಿತು ರೈತರು ಚರ್ಚೆ ನಡೆಸಲಿದ್ದೇವೆ ಎಂದು ಹೇಳಿದ್ದಾರೆ. ಭಾನುವಾರ ರೈತ ಮುಖಂಡರು ಮತ್ತು ಮೂವರು ಕೇಂದ್ರ ಸಚಿವರ ಸಮಿತಿಯ ನಡುವಿನ ಸಭೆಯ ನಂತರ ಸರ್ವಾನ್ ಸಿಂಗ್ ಅವರು ಈ ಹೇಳಿಕೆ ನೀಡಿದ್ದಾರೆ. ಅವರ ನೇತೃತ್ವದಲ್ಲಿ ನಡೆಯುತ್ತಿರುವ ‘ದೆಹಲಿ ಚಲೋ’ ಮೆರವಣಿಗೆಯ ಭಾಗವಾಗಿ ಪಂಜಾಬ್-ಹರಿಯಾಣ ಗಡಿಯಲ್ಲಿ ಸಾವಿರಾರು ರೈತರು ಬೀಡುಬಿಟ್ಟಿದ್ದಾರೆ.
ಇದನ್ನೂ ಓದಿ:ಕೇರಳ | ಡಿಕೆ ಶಿವಕುಮಾರ್ ಮಾಲಕತ್ವದ ಕಾಂಗ್ರೆಸ್‌ನ ಮುಖವಾಣಿ ಟಿವಿಯ ಖಾತೆ ಫ್ರೀಜ್!
ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಖಾತರಿಪಡಿಸುವ ಕಾನೂನೊಂದರ ಬೇಡಿಕೆಯಿಂದ ರೈತರು ಹಿಂದೆ ಸರಿದಿಲ್ಲ. ಅದನ್ನು ರೈತರು ಎಂದಿಗೂ ಮಾಡುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸುತ್ತಾ ಹೇಳಿದ್ದಾರೆ. ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್, ಕೃಷಿ ಮತ್ತು ರೈತ ಕಲ್ಯಾಣ ಸಚಿವ ಅರ್ಜುನ್ ಮುಂಡಾ ಮತ್ತು ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಚಂಡೀಗಢದಲ್ಲಿ ರೈತ ಮುಖಂಡರೊಂದಿಗೆ ನಾಲ್ಕನೇ ಸುತ್ತಿನ ಮಾತುಕತೆ ಭಾನುವಾರ ನಡೆಸಿದ್ದಾರೆ.
ಎಂಎಸ್‌ಪಿಗೆ ಕಾನೂನು ಖಾತರಿಯ ಜೊತೆಗೆ, ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಅನುಷ್ಠಾನ, ರೈತರು ಮತ್ತು ರೈತ ಕಾರ್ಮಿಕರಿಗೆ ಪಿಂಚಣಿ, ಕೃಷಿ ಸಾಲ ಮನ್ನಾ, ವಿದ್ಯುತ್ ದರದಲ್ಲಿ ತಟಸ್ಥತೆ, ಪೊಲೀಸ್ ಪ್ರಕರಣಗಳನ್ನು ಹಿಂಪಡೆಯುವುದು ಮತ್ತು 2021 ರ ಹೋರಾಟದ ಸಂತ್ರಸ್ತರಿಗೆ “ನ್ಯಾಯ” ಕ್ಕಾಗಿ ರೈತರು ಒತ್ತಾಯಿಸುತ್ತಿದ್ದಾರೆ.
ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವ ಗೋಯಲ್, “ಎನ್‌ಸಿಸಿಎಫ್ (ನ್ಯಾಷನಲ್ ಕೋಆಪರೇಟಿವ್ ಕನ್ಸ್ಯೂಮರ್ಸ್ ಫೆಡರೇಶನ್) ಮತ್ತು ಎನ್‌ಎಎಫ್‌ಇಡಿ (ಭಾರತೀಯ ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ) ನಂತಹ ಸಹಕಾರಿ ಸಂಘಗಳು ಮುಂದಿನ ಐದು ವರ್ಷಗಳವರೆಗೆ ರೈತರ ಬೆಳೆಯನ್ನು ಎಂಎಸ್‌ಪಿಯಲ್ಲಿ ಖರೀದಿಸಲು ‘ತುರ್ ದಾಲ್’, ‘ಉರಾದ್ ದಾಲ್’, ‘ಮಸೂರ್ ದಾಲ್’ ಅಥವಾ ಮೆಕ್ಕೆಜೋಳವನ್ನು ಬೆಳೆಯುವ ರೈತರೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳುತ್ತದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಚಂಡೀಗಢ ಮೇಯರ್ ವಿವಾದ – ಪ್ರಕರಣ ವಿಚಾರಣೆಗೂ ಮುನ್ನ ರಾಜೀನಾಮೆ ನೀಡಿದ ಬಿಜೆಪಿ ಮೇಯರ್
“ಖರೀದಿ ಪ್ರಮಾಣಕ್ಕೆ ಯಾವುದೇ ಮಿತಿ ಇರುವುದಿಲ್ಲ. ಇದಕ್ಕಾಗಿ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಲಾಗುವುದು. ಕಾಟನ್ ಕಾರ್ಪೊರೇಷನ್ ಆಫ್ ಇಂಡಿಯಾ ರೈತರೊಂದಿಗೆ ಕಾನೂನು ಒಪ್ಪಂದ ಮಾಡಿಕೊಂಡ ನಂತರ ಐದು ವರ್ಷಗಳವರೆಗೆ ಎಂಎಸ್‌ಪಿ ದರದಲ್ಲಿ ರೈತರಿಂದ ಹತ್ತಿ ಖರೀದಿಸಲಿದೆ” ಎಂದು ಗೋಯಲ್ ಪ್ರಸ್ತಾಪಿಸಿದ್ದಾರೆ. ಸಭೆಯ ನಂತರ ರೈತ ಮುಖಂಡರು ಸೋಮವಾರ ಮತ್ತು ಮಂಗಳವಾರ ತಮ್ಮ ವೇದಿಕೆಗಳಲ್ಲಿ ಸರ್ಕಾರದ ಪ್ರಸ್ತಾವನೆಯನ್ನು ಚರ್ಚಿಸಿ ನಂತರ ಮುಂದಿನ ಕ್ರಮವನ್ನು ನಿರ್ಧರಿಸುವುದಾಗಿ ಹೇಳಿದ್ದಾರೆ.
ಸರ್ವಾನ್ ಸಿಂಗ್ ಅವರು ತಮ್ಮ ಇತರ ಬೇಡಿಕೆಗಳ ಪರಿಹಾರದ ಬಗ್ಗೆ ಭರವಸೆ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ‘ದೆಹಲಿ ಚಲೋ’ ಮೆರವಣಿಗೆಯನ್ನು ತಡೆಹಿಡಿಯಲಾಗಿದೆ. ಆದರೆ ಎಲ್ಲಾ ಸಮಸ್ಯೆಗಳನ್ನು ಪರಿಹರಿಸದಿದ್ದರೆ ಫೆಬ್ರವರಿ 21 ರಂದು ಬೆಳಿಗ್ಗೆ 11 ಗಂಟೆಗೆ ಪುನರಾರಂಭಿಸಲಾಗುವುದು ಎಂದು ಅವರು ಹೇಳಿದ್ದಾರೆ.
ವಿಡಿಯೊ ನೋಡಿ: ಹಿಟ್ ಅಂಡ್ ರನ್ ತಿದ್ದುಪಡಿ : ಕೇಂದ್ರದ ವಿರುದ್ಧ ಸಿಡಿದೆದ್ದ ಚಾಲಕರು Janashakthi Media