ಬೆಂಗಳೂರು : ಬ್ರಾಹ್ಮಣ ಸಮುದಾಯದ ವ್ಯಕ್ತಿಗಳ ಒಡೆತನದಲ್ಲಿ ಇರುವ ಪತ್ರಿಕೆಗಳಿಗೆ ಪ್ರತಿ ತಿಂಗಳು ಜಾಹೀರಾತು ನೀಡುವ ಬಗ್ಗೆ ರಾಜ್ಯ ವಾರ್ತಾ ಇಲಾಖೆ ಸುತ್ತೋಲೆ ಹೊರಡಿಸಿದೆ. ಈ ಬಗ್ಗೆ ಸಾರ್ವಜನಿಕವಾಗಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಜನವರಿ 24 ರ ಮಂಗಳವಾರ ಹೊರಡಿಸಲಾಗಿರುವ ಸುತ್ತೋಲೆಯಲ್ಲಿ, “ವಾರ್ತಾ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಬ್ರಾಹ್ಮಣ ಸಮುದಾಯದ ಒಡೆತನದ ಪತ್ರಿಕೆಗಳಿಗೆ ಪ್ರತೀ ತಿಂಗಳು ಎರಡು ಪುಟಗಳ ಜಾಹೀರಾತು ಬಿಡುಗಡೆ ಮಾಡಲು ಸರ್ಕಾರದ ಮಂಜುರಾತಿ ಆದೇಶ ಹೊರಡಿಸಲಾಗಿದೆ” ಎಂದು ಹೇಳಿದೆ.
ಸುತ್ತೋಲೆಯಲ್ಲಿ ಏನಿದೆ : ಬ್ರಾಹ್ಮಣದ ಒಡೆತನೆ ಪತ್ರಿಕೆಗಳಿಗೆ ಜಾಹೀರಾತು ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರವು ವಾರ್ತಾ ಇಲಾಖೆಗೆ ಜನವರಿ 13ರ ಶುಕ್ರವಾರ ಆದೇಶ ನೀಡಿದೆ ಎಂದು ಸುತ್ತೋಲೆಯಲ್ಲಿ ವಾರ್ತಾ ಇಲಾಖೆ ಉಲ್ಲೇಖಿಸಿದೆ. ಈ ಬಗ್ಗೆ 2022-23ರ ಸಾಲಿನ ಬಜೆಟ್‌ನಲ್ಲಿ ಘೋಷಿಸಲಾಗಿದೆ ಎಂದು ಕೂಡಾ ಸುತ್ತೋಲೆಯು ವಿಷಯ ಸೂಚಿಯಲ್ಲಿ ತಿಳಿಸಿದೆ.
ಬ್ರಾಹ್ಮಣ ಸಮುದಾಯದ ಒಡೆತನದಲ್ಲಿ ಇರುವ ನಾಲ್ಕು ಪುಟಗಳಲ್ಲಿ ಪ್ರಕಟವಾಗುತ್ತಿರುವ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಸರ್ಕಾರದ ಆದೇಶದಲ್ಲಿ ತಿಳಿಸಿರುವ ಷರತ್ತಿಗೊಳಪಟ್ಟು ಜಾಹೀರಾತು ಬಿಡುಗಡೆ ಮಾಡಲು ಅರ್ಹ ಪತ್ರಿಕೆಗಳ ಮಾಹಿತಿ ನೀಡುವಂತೆ ಸುತ್ತೋಲೆಯು ವಾರ್ತಾ ಇಲಾಖೆಯು ಕೇಳಿದೆ. ಸುತ್ತೋಲೆಯು ಸರ್ಕಾರದ ಆದೇಶದಂತೆ ಹೊರಡಿಸಲಾಗಿದ್ದು, ವಾರ್ತಾ ಇಲಾಖೆಯ ಆಯುಕ್ತರ ಪರವಾಗಿ ಉಪನಿರ್ದೇಶಕರಾದ ಕೆ.ಪಿ. ಪುಟ್ಟಸ್ವಾಮಯ್ಯ ಅವರ ಸಹಿಯಿದೆ.
ಇದನ್ನೂ ಓದಿ : ಸಿಎಂ ತವರು ಜಿಲ್ಲೆಯಲ್ಲಿ ಗದ್ದೆಗಳಿಗೆ ಬೆಂಕಿ : ಸುಟ್ಟು ಕರಕಲಾದ ಬೆಳೆ – ಕಣ್ಣೀರಿನಲ್ಲಿ ಹಾವೇರಿ ರೈತರು
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ಮಾಜಿ ಸಚಿವ ಎಚ್ ಸಿ ಮಹದೇವಪ್ಪ ಈ ಕುರಿತು ಫೆಸ್ಬುಕ್‌ನಲ್ಲಿ ಬರೆದುಕೊಂಡಿದ್ದು, ಬ್ರಾಹ್ಮಣ ಸಮುದಾಯದ ಒಡೆತನದ ಪತ್ರಿಕೆಗಳಿಗೆ ಜಾಹೀರಾತು ನೀಡಬೇಕು ಎಂದು ಸರ್ಕಾರ ಆದೇಶ ಹೊರಡಿಸುತ್ತಿದ್ದರೆ ಇತ್ತ ಮನುವಾದಿಗಳು “ಈ ಕಾಲದಲ್ಲೂ ಜಾತಿ ಎಲ್ಲಿದೆ? ಮೀಸಲಾತಿ ಇನ್ನೂ ಏಕೆ ಬೇಕು? ನೀವು ಜಾತಿ ಆಧಾರಿತವಾಗಿ ಸಮಾಜವನ್ನು ಒಡೆಯಬೇಡಿ” ಎಂಬ ತಲೆ ಬುಡ ಇಲ್ಲದ ಮಾತುಗಳನ್ನು ಆಡುತ್ತಾರೆ.
ಮುಂದೆ ಹಿಂದೂ ನಾವೆಲ್ಲಾ ಒಂದು ಎಂಬ ಬೊಗಳೆ ಬಿಡುವುದು, ಹಿಂದುಗಡೆ ಇಂತಹ ಕೆಲಸ ಮಾಡುವುದು, ಈ ರೀತಿಯ ಡಬಲ್ ಸ್ಟ್ಯಾಡಂರ್ಡ್ ನಡವಳಿಕೆ ಮತ್ತು ಸಾಮಾಜಿಕ ವಂಚನೆಯನ್ನು ಅರಿತುಕೊಂಡೇ ಬಾಬಾ ಸಾಹೇಬರು ಅಂದೇ ಸಂವಿಧಾನದ ಮೂಲಕ ಎಲ್ಲರಿಗೂ ಸಮಾನತೆಯನ್ನು ಕಲ್ಪಿಸಿ ಸಾಮಾಜಿಕ ನ್ಯಾಯಕ್ಕೆ ಬೇಕಾದ ಮಾರ್ಗವನ್ನೂ ಹಾಕಿಕೊಟ್ಟಿದ್ದಾರೆ.
ಅಂದಹಾಗೆ ಜಾತಿ ಎಲ್ಲಿದೆ, ಮೀಸಲಾತಿ ಇನ್ನೂ ಎಷ್ಟು ದಿನ ಕೊಡುತ್ತೀರಾ ಎನ್ನುವ ಮಂದಿ ಇದಕ್ಕೇನು ಹೇಳುತ್ತಾರೆ? ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎನ್ನುವ ಬಿಜೆಪಿಗರಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು, ಲಿಂಗಾಯತರು, ಒಕ್ಕಲಿಗರು & ಹಿಂದುಳಿದ ವರ್ಗದವರು ಮತ್ತು ಅಲ್ಪಸಂಖ್ಯಾತ ಸಮುದಾಯಗಳು ಬೇಡವೇ? ಎಂದು ಪ್ರಶ್ನಿಸಿದ್ದಾರೆ.
ಪ್ರಶಾಂತ್ ನಾಯಕ ಎನ್ನುವವರು, ಬ್ರಾಹ್ಮಣ ಸಮುದಾಯದ ಒಡೆತನದ ಪತ್ರಿಕೆಗಳಿಗೆ ಜಾಹೀರಾತಂತೆ!? ಬಿಜೆಪಿ ಬೆಂಬಲಿಸಿದ ಅನ್ಯ ಜಾತಿಯ ಪತ್ರಕರ್ತರು ಮತ್ತೊಮ್ಮೆ ಬಿಜೆಪಿಗೆ ಜೈ ಅಂದು ಇನ್ನಷ್ಟು ಬ್ರಾಹ್ಮಣ ಸಮುದಾಯದ ಒಡೆತನದ ಪತ್ರಿಕೆಗಳಿಗೆ ಏಳಿಗೆಗೆ ಸಹಕರಿಸಿ!? ಎಂದು ಫೆಸ್ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
‘ಮುಖ್ಯಮಂತ್ರಿ ಬೊಮ್ಮಾಯಿ ಅವರು ನಾಗಪುರದ ಆದೇಶವನ್ನು ಚಾಚೂ ತಪ್ಪದೆ ಪಾಲಿಸುತ್ತಿರುವ ನಿಷ್ಠಾವಂತ ನೌಕರ’ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಬಿಜೆಪಿ ಸರ್ಕಾರ ಪತ್ರಿಕೆಗಳ ಜಾತಿ ಮೂಲ ಹುಡುಕಿ ಜಾಹಿರಾತು ನೀಡಲು ಹೊರಟಿದೆ. ಪ್ರತಿ ತಿಂಗಳು 2 ಪುಟಗಳ ಸರ್ಕಾರದ ಜಾಹೀರಾತು ಬ್ರಾಹ್ಮಣರ ಮಾಲೀಕತ್ವದ ಪತ್ರಿಕೆಗಳಿಗೆ ಮಾತ್ರವಂತೆ! ಉಳಿದ ಜಾತಿಯವರದ್ದು ಪತ್ರಿಕೆಗಳಲ್ಲವೇ ಮುಖ್ಯಮಂತ್ರಿ ಬೊಮ್ಮಾಯಿ ಅವರೇ? ಎಂದು ಕಿಡಿಕಾರಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ